Wednesday, 29th June 2022

ನಟ ಪುನೀತ್ ಅವರಿಗೆ ಶ್ರದ್ದಾಂಜಲಿ

ತುಮಕೂರು: ಹೃದಯಾಘಾತಕ್ಕೆ ಒಳಗಾಗಿ ನಿಧನರಾದ ಕನ್ನಡ ಚಿತ್ರರಂಗದ ಪವರ್ಸ್ಟಾರ್, ಯುವರತ್ನ ಪುನೀತ್ರಾಜ್ಕುಮಾರ್ ಅವರಿಗೆ ನಗರದ ಹೊರಪೇಟೆ ಯಲ್ಲಿ ಹರಳೂರು ಶಿವಕುಮಾರ್ ಹೋಟೆಲ್ ಮುಂಭಾಗ ಡಾ.ರಾಜ್ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಭಾವಪೂರ್ವ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಹೊರಪೇಟೆಯಲ್ಲಿರುವ ಶ್ರೀ ಜಗದ್ಗುರು ಚನ್ನಬಸವರಾಜೇಂದ್ರ ಸ್ವಾಮೀಜಿ, ಹರಳೂರು ಶಿವಕುಮಾರ್ ಹಾಗೂ ಶಾಸಕ ಜ್ಯೋತಿಗಣೇಶ್ ಅವರ ನೇತೃತ್ವದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪುನೀತ್ರಾ ಜ್ಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಾರ್ಥ ಒಂದು ನಿಮಿಷ ಮೌನ ಆಚರಿಸ ಲಾಯಿತು.

ಶಾಸಕ ಜ್ಯೋತಿಗಣೇಶ್ ಮಾತನಾಡಿ, ಪುನೀತ್ರಾಜ್ಕುಮಾರ್ ಅವರ ಅಕಾಲಿಕ ನಿಧನ ಇಡೀ ರಾಜ್ಯದ ಜನತೆಗೆ ತುಂಬಾ ದುಃಖ ತಂದಿದೆ. ಪುನೀತ್ರಾಜ್ಕುಮಾರ್ ಅವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ, ಕಲಾ ರಂಗಕ್ಕೆ, ಅಭಿಮಾನಿಗಳಿಗೆ ದೊಡ್ಡ ಆಘಾತ ತಂದಿದೆ ಎಂದರು.

ಡಾ. ರಾಜ್ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿರುವ ಹರಳೂರು ಶಿವಕುಮಾರ್ ಅವರು ತುಂಬಾ ದುಃಖಿತರಾಗಿದ್ದಾರೆ. ನಾಡಿನ ಜನತೆಗೆ ಹಾಗೂ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದರು.

ಪುನೀತ್ರಾಜ್ಕುಮಾರ್ ಅವರ ನಿಧನ ಎಲ್ಲರಿಗೂ ತುಂಬಾ ನೋವು ತಂದಿದೆ. ನಾಡಿನ ಜನತೆ ಹಾಗೂ ಅಭಿಮಾನಿಗಳು ಶಾಂತಿಯುತ ವರ್ತಿಸಬೇಕು ಎಂದು ಮನವಿ ಮಾಡಿದರು.

1975ರಲ್ಲಿ ಜನಿಸಿದ ಪುನೀತ್ರಾಜ್ಕುಮಾರ್ ಅವರು ಸಿನಿಮಾಗಳಲ್ಲಿ ಬಾಲ ಪ್ರತಿಭೆಯಾಗಿ ಗುರುತಿಸಿಕೊಂಡು ನಂತರ ಕನ್ನಡ ಚಿತ್ರರಂಗದ ದೊಡ್ಡ ನಟರಾಗಿ ಹೊರ ಹೊಮ್ಮಿದ್ದರು. ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸಿನಿಮಾಗಳನ್ನು ಮಾಡುವ ಮೂಲಕ ಮತ್ತಷ್ಟು ಉತ್ತುಂಗಕ್ಕೆ ಏರಬೇಕಾಗಿತ್ತು ಎಂದರು.

ಹರಳೂರು ಶಿವಕುಮಾರ್ ಮಾತನಾಡಿ, ಪುನೀತ್ರಾಜ್ಕುಮಾರ್ ಅವರು ಇಂದು ಕಣ್ಮರೆಯಾಗಿರುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಚಲನಚಿತ್ರಗಳಲ್ಲಿ ಅವರು ನೀಡುತ್ತಿದ್ದ ಸಂದೇಶ ನಮಗೆಲ್ಲ ಮಾರ್ಗದರ್ಶನವಾಗಿತ್ತು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನನ್ನನ್ನು ಸೇರಿದಂತೆ ಲಕ್ಷಾಂತರ ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಅವರ ನಿಧನದಿಂದ ಇಡೀ ನಾಡು, ದೇಶಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಅವರ ಕುಟುಂಬಕ್ಕೆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಟಿ.ಜಿ. ಬಸವರಾಜು, ರೇಣುಕಾ, ಮನೋಜ್, ಪ್ರಜ್ವಲ್, ಮೋಹನ್ ಮತ್ತಿತರರು ಪಾಲ್ಗೊಂಡಿದ್ದರು.