Wednesday, 21st October 2020

ಆತ್ಮೀಯತೆಯಲ್ಲಿ ಇರಲಿ ಸಭ್ಯತೆ

ಇದು ಸಾಮಾಜಿಕ ಜಾಲತಾಣಗಳ ಯುಗ. ಫೇಸ್‌ಬುಕ್‌ನಲ್ಲಿ ಗೆಳೆತನವೂ ಬೆಳೆಯಬಹುದು, ಗುಂಪುಗಾರಿಕೆಯೂ ಹುಟ್ಟುಕೊಳ್ಳ ಬಹುದು. ಇಲ್ಲಿ ಸ್ನೇಹಿತರು ದೊರೆಯಬಹುದು, ಪ್ರೀತಿಯೂ ಹುಟ್ಟಬಹುದು! ಅಂತಹ ಎಲ್ಲಾ ಸಂದರ್ಭ ಗಳಲ್ಲೂ ಬಳಸು ವವರು ಸಂಯಮ ತೋರಿದರೆ, ಮನಸು ಹಸನು, ಜೀವನ ಸುಗಮ.

ನಳಿನಿ. ಟಿ. ಭೀಮಪ್ಪ ಧಾರವಾಡ

ಸಿನೆಮಾವೊಂದರ ಸಂಭಾಷಣೆ ನೆನಪಾಗುತ್ತದೆ. ಇವನ್ನ ಕಂಡ್ರೆ ಅವಂಗೆ ಆಗಲ್ಲ, ಅವನ್ನ ಕಂಡ್ರೆ ಇವಂಗೆ ಆಗಲ್ಲ, ನಿಮ್ಮಲ್ಲಿ ಯಾರನ್ನ ಕಂಡ್ರೆ ಯಾರ್ಗೂ ಆಗಲ್ಲ, ಒಟ್ನಲ್ಲಿ ಈ ದೇಶ ಉದ್ದಾರ ಆಗಲ್ಲ. ಈ ಮಾತು ಬಹುತೇಕ ಎಲ್ಲ ಕಡೆ ಅನ್ವಯವಾಗುತ್ತದೆ, ಅದರಲ್ಲೂ ಒಮ್ಮೆಯೂ ಒಬ್ಬರನ್ನೊಬ್ಬರು ಫೇಸ್ ಟು ಫೇಸ್ ಭೇಟಿಯಾಗದೆಯೂ, ಗಾಢವಾದ ಗೆಳೆತನವನ್ನು ಬೆಸೆಯಬಹುದಾದ ಫೇಸ್‌ಬುಕ್‌ನಲ್ಲಿ, ಗುಂಪುಗಾರಿಕೆಯೂ ಹೆಚ್ಚಿ ಕೋಳಿ ಜಗಳಗಳು ಪ್ರತಿದಿನ ಸಾಮಾನ್ಯವಾಗಿಬಿಟ್ಟಿವೆ.

ಒಮ್ಮೊಮ್ಮೆ ಅವುಗಳು ತಾರಕಕ್ಕೇರುವುದೂ ಉಂಟು. ಕೆಲ ದಿನಗಳ ಹಿಂದೆ ಚಾ, ಕಾಫಿ ಪ್ರಿಯರ ನಡುವೆ ಬರಹಗಳ ಮೂಲಕ ಸಣ್ಣನೆಯ ಕಿಡಿ ಶುರುವಾಗಿತ್ತು. ಇವರು ಅವರಿಗೆ ಅವರು ಇವರಿಗೆ ತಮ್ಮ ಬರಹದ ಮೂಲಕವೇ ಚುಚ್ಚುವುದು ನಡೆದಿತ್ತು. ಚಾ ಅಥವಾ ಕಾಫಿಯ ಬಗ್ಗೆ ಅವರವರ ಪ್ರೀತಿ, ಹೊಗಳಿಕೊಳ್ಳಲಿ ತಪ್ಪಲ್ಲ, ಆದರೆ ಚಾ ಕುಡಿಯುವವರು ಕಾಫಿ ಪ್ರಿಯರನ್ನು, ಕಾಫಿ ಕುಡಿ
ಯುವವರು ಚಾ ಪ್ರಿಯರನ್ನು ಟೀಕೆ ಮಾಡುವುದ್ಯಾಕೆ? ಅದೇ ಅರ್ಥವಾಗದ ಸಂಗತಿ.

ಅಡುಗೆಯಲ್ಲೂ ಟೀಕೆ

ಇದೇ ರೀತಿ ಆಯಾ ಪ್ರಾದೇಶಿಕ, ಭೌಗೋಳಿಕ, ಸಾಂಪ್ರದಾಯಿಕ ಅಡುಗೆ ಪದ್ಧತಿಯನ್ನು ಕೂಡಾ ಒಬ್ಬರಿಗೊಬ್ಬರು ಟೀಕಿಸುವುದು ಕಂಡುಬರುತ್ತದೆ. ದಕ್ಷಿಣ ಕರ್ನಾಟಕ ಕಡೆಯವರ ಮುದ್ದೆೆ, ಉತ್ತರ ಕರ್ನಾಟಕದ ರೊಟ್ಟಿ, ಕರಾವಳಿಯವರ ಅಡುಗೆಗಳು ಎಲ್ಲವೂ ಸಹ ಈ ಪರಿಧಿಯಲ್ಲೇ ಬರುತ್ತವೆ. ಇನ್ನು ಸಸ್ಯಾಹಾರಿ, ಮಾಂಸಾಹಾರಿಗಳ ನಡುವೆಯಂತೂ ಆಗಾಗ ಕದನ ಗರಿಗೆದರುತ್ತಲೇ ಇರುತ್ತದೆ. ಹಾಗೆಯೇ ಅನ್ಯ ಭಾಷೆ, ಜಾತಿ, ಧರ್ಮದ ಬಗ್ಗೆ ಕೆರಳಿಸುವಂತಹ ಪೋಸ್ಟುಗಳು ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿ ಬಿಡುತ್ತವೆ. ಮೊದಲು ನಾನೊಬ್ಬ ಕನ್ನಡಿಗ/ಕನ್ನಡತಿ, ಭಾರತೀಯ ಎಂಬ ವಿವೇಚನೆ ಮೈಗೂಡಿಸಿಕೊಂಡರೆ ಒಳಿತು. ಯೋಚಿಸಿ ನೋಡಿ, ಒಬ್ಬ ವೈದ್ಯನನ್ನು, ಗುರುವನ್ನು ಹುಡುಕಿಕೊಂಡು ಹೋಗುವಾಗ ಆತನ ಬಗ್ಗೆ ಬೇರೇನೂ ಚಿಂತಿಸದೆ, ಉತ್ತಮ ಸೇವೆಯನ್ನು ಕೊಡಬಲ್ಲನೇ ಎಂದು ಯೋಚಿಸುತ್ತೇವೆಯೇ ಹೊರತು ಮತ್ತೇನೂ ಅಲ್ಲ.

ಇಲ್ಲೇ ಗೆಳೆತನವಾಗಿ, ಇಲ್ಲೇ ಮುರಿದು ಬಿದ್ದ ಎಷ್ಟೋ ಉದಾಹರಣೆಗಳು ದಕ್ಕುತ್ತವೆ. ಕೆಲವೊಮ್ಮೆೆ ಪ್ರೀತಿಗೂ ಇದೇ ಗತಿ. ಗೆಳೆತನ ಸಂಪಾದಿಸುವುದು ಸುಲಭ, ನಿಭಾಯಿಸುವುದು ಕಷ್ಟ ಎನ್ನುವುದು ನೆನಪಿಡಬೇಕು. ಹೀಗೆ ಕಾಲೆೆಯುವರಲ್ಲಿ ವಿದ್ಯಾವಂತರೇ ಹೆಚ್ಚು ತೊಡಗಿಕೊಂಡಿರುವುದು ಕಂಡು ಬರುತ್ತಿದೆ. ಜಾಲತಾಣಗಳ ಸಮರ್ಪಕ ಬಳಕೆಯಾದರೆ ಒಂದು ಉತ್ತಮ ಸಮಾಜ ನಿರ್ಮಿತವಾಗುವುದು ಖಂಡಿತ. ಜಾಲತಾಣಗಳ ಮೂಲಕ ಸದಭಿರುಚಿಯ ಗೆಳೆತನ, ಆತ್ಮೀಯತೆ ಬೆಳೆಸಿಕೊಳ್ಳುವುದು ಜಾಣತನ.

Leave a Reply

Your email address will not be published. Required fields are marked *