Monday, 3rd October 2022

ಆಫೀಸಿನಲ್ಲಾಗಲಿ, ಮನೆಯಲ್ಲಾಗಲಿ, ’ಫಾಲೋ ಅಪ್‌’ ಮಾಡದೇ ಕೆಲಸವಾಗದು !

ನೂರೆಂಟು ವಿಶ್ವ

vbhat@me.com

ಪತ್ರಿಕೋದ್ಯಮದಲ್ಲಿ ಫಾಲೋ ಅಪ್ ಅವಿಭಾಜ್ಯ ಅಂಗ. ಯಾರು ಸುದ್ದಿಯನ್ನು ಬೆಂಬೆತ್ತಿ ಹೋಗುತ್ತಾರೋ, ಫಾಲೋ ಮಾಡುತ್ತಾರೋ, ಅವರಿಗೆ ಯಾವತ್ತೂ ಒಳ್ಳೆಯ ಸ್ಟೋರಿಗಳು ಸಿಗುತ್ತವೆ. ಅಂಥವರು ಆಗಾಗ ಅಚ್ಚರಿಗಳನ್ನು ಕೊಡುತ್ತಾ ಹೋಗುತ್ತಾರೆ. ಸುದ್ದಿ ಬರೆದು ಸುಮ್ಮನಾಗುವುದು ಉತ್ತಮ ಪತ್ರಕರ್ತನ ಲಕ್ಷಣವಲ್ಲ. ಒಳ್ಳೆಯ ಪತ್ರಕರ್ತ ಸುದ್ದಿ ಬರೆದು ಕುಳಿತುಕೊಳ್ಳುವುದಿಲ್ಲ.

ಸುಮಾರು ಮೂವತ್ತೆರಡು ವರ್ಷಗಳ ಹಿಂದೆ, ಒಂದು ಬೆಳಗಿನ ಜಾವ ಬೆಂಗಳೂರಿನ ಕೆ.ಆರ್.ಮಾರ್ಕೆಟ್‌ಗೆ ಹೋಗಿದ್ದೆ. ಐದು ಗಂಟೆಯಾಗಿರಲಿಲ್ಲ, ಆಗಲೇ ಸುಮಾರು ಇಪ್ಪತ್ತಕ್ಕೂ ಹೆಚ್ಚು ಲಾರಿಗಳಲ್ಲಿ ಕನಕಾಂಬರ (ಅಬ್ಬಲಿಗೆ) ಹೂವುಗಳ ಮೂಟೆಗಳು ಬಂದು ಬಿದ್ದಿದ್ದವು. ಸುಮಾರು ಒಂದು ಗಂಟೆ ಅವಧಿಯಲ್ಲಿ ಆ ಎಲ್ಲಾ ಹೂವುಗಳು ಎಲ್ಲಿಗೆ ಹೋದವೋ ಏನೋ, ಒಟ್ಟಾರೆ ಖಾಲಿಯಾಗಿದ್ದವು. ಅದಾಗಿ ಒಂದು ತಿಂಗಳ ನಂತರ, ನಾನು ಬೆಳಗಿನ ಜಾವ ಎದ್ದು, ಎರಡನೇ ಬಾರಿಗೆ ಆ ಮಾರ್ಕೆಟ್‌ಗೆ ಹೋದಾ ಗಲೂ, ಅದೇ ದೃಶ್ಯ. ಪ್ರತಿದಿನ ಹತ್ತಿಪ್ಪತ್ತು ಲಾರಿಗಳಲ್ಲಿ ಕನಕಾಂಬರ ಹೂವುಗಳು ಮಾರ್ಕೆಟ್‌ಗೆ ಬಂದು ಬೀಳುವುದು ನನ್ನಲ್ಲಿ ಕುತೂಹಲ ಹುಟ್ಟಿಸಿದ್ದವು.

ಅಲ್ಲಿಯೇ ಇದ್ದ ಹೂವಿನ ವ್ಯಾಪಾರಿಯೊಬ್ಬರಿಗೆ, ‘ಈ ಪ್ರಮಾಣದ ಕನಕಾಂಬರ ಪ್ರತಿದಿನ ಇಲ್ಲಿಗೆ ಎಲ್ಲಿಂದ ಬರುತ್ತದೆ?’ ಎಂದು ಕೇಳಿದೆ. ಅದಕ್ಕೆ ಆತ, ‘ಇಲ್ಲಿಂದ ಸುಮಾರು ಮೂವತ್ತು ಕಿಮೀ ದೂರದಲ್ಲಿ ವರ್ತೂರು, ಪಣತ್ತೂರು, ತೊರಹುಣಸೆ ಎಂಬ ಊರುಗಳಿವೆ. ಅಲ್ಲಿಂದ ಈ ಹೂವುಗಳು ಬರುತ್ತವೆ’ ಎಂದು ಹೇಳಿದ. ಮರುದಿನವೇ ನಾನು ಕೆಮರಾ ಹೆಗಲಿಗೆ ಹಾಕಿಕೊಂಡು ಪಣತ್ತೂರಿನಲ್ಲಿದ್ದೆ.

ಎಲ್ಲಿ ನೋಡಿದರೂ ಕನಕಾಂಬರ ಹೂವುಗಳ ಹಾಸು. ಹತ್ತಾರು ಸಾವಿರ ಎಕರೆ ಪ್ರದೇಶಗಳಲ್ಲಿ ಬರೀ ಕನಕಾಂಬರ ಹೂದೋಟ. ಸುತ್ತಮುತ್ತ ದೃಷ್ಟಿ ಹಾಯಿಸಿದೆಡೆಯೆಲ್ಲ ಕನಕಾಂಬರ ತೋಟಗಳು. ಸಾಯಂಕಾಲವಾಗುತ್ತಿದ್ದಂತೆ, ಊರಿನ ಜನ ತೋಟಕ್ಕೆ ಹೋಗಿ ಹೂವು ಕಿತ್ತುಕೊಂಡು ಬಂದು, ರಾತ್ರಿ ಮೂಟೆ ಕಟ್ಟಿ ಇಡುತ್ತಿದ್ದರು. ಹೂ ವ್ಯಾಪಾರಿಗಳು ಮಧ್ಯರಾತ್ರಿ ಎರಡು-ಮೂರು ಗಂಟೆ ಹೊತ್ತಿಗೆ ಲಾರಿಯಲ್ಲಿ ಬಂದು, ಆ ಮೂಟೆಗಳನ್ನು ಹೊತ್ತುಕೊಂಡು ಬೆಂಗಳೂರಿಗೆ ಹೋಗುತ್ತಿದ್ದರು.

ಕೆಲವರು ಬೆಳಗ್ಗೆ ಮತ್ತು ಸಾಯಂಕಾಲ ಕನಕಾಂಬರಿಗಳನ್ನು ಕುಯ್ದರೂ ಪೂರೈಸಲಾಗುತ್ತಿರಲಿಲ್ಲ. ಹಬ್ಬ-ಹರಿದಿನಗಳಲ್ಲಿ ಕನಕಾಂಬರಕ್ಕೆ ಭಾರಿ ಬೆಲೆ. ಬೇಡಿಕೆಯಿಲ್ಲದ ದಿನಗಳೇ ಇರಲಿಲ್ಲ. ವರ್ತೂರು ಸುತ್ತ- ಮುತ್ತ ವರ್ಷದಿಂದ ವರ್ಷಕ್ಕೆ ಕನಕಾಂಬರ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಕೆಲವರು ತಮ್ಮ ಹೊಲ- ಗದ್ದೆಗಳಲ್ಲಿ ಬೇರೆ ಬೆಳೆಗಳನ್ನು ನಿಲ್ಲಿಸಿ ಕನಕಾಂಬರ
ಬೆಳೆಯಲಾರಂಭಿಸಿದ್ದರು. ಹಾಗಿತ್ತು ಆ ಖದರು!

ನಾನು ಈ ವಿಷಯದ ಬಗ್ಗೆ ಒಂದು ಲೇಖನವನ್ನು ‘ಪ್ರಜಾವಾಣಿ’ ಪತ್ರಿಕೆಯ ಸಾಪ್ತಾಹಿಕ ಪುರವಣಿಗಾಗಿ ಬರೆದು ಕಳಿಸಿದ್ದೆ. ಅದು ಅದರ ಮುಖಪುಟದಲ್ಲಿ ಪ್ರಕಟವಾಗಿತ್ತು. ಆ ಲೇಖನ ಬರೆದು ಹದಿನೆಂಟು ವರ್ಷಗಳ ನಂತರ, ಅಂದರೆ ೨೦೦೮ ರಲ್ಲಿ, ನನಗೆ ಇದ್ದಕ್ಕಿದ್ದಂತೆ ಒಂದು ದಿನ, ಕನಕಾಂಬರ ಹೂವುಗಳ ನೆನಪಾಯಿತು. ಯಥಾ ಪ್ರಕಾರ, ಒಂದು ಮುಂಜಾನೆ ಐದು ಗಂಟೆಗೆ ಕೆ.ಆರ್. ಮಾರ್ಕೆಟ್‌ಗೆ ಹೋದೆ. ಇಡೀ ಮಾರ್ಕೆಟ್‌ನ್ನು ಸುತ್ತಾಡಿದರೂ, ಸ್ಯಾಂಪಲ್ಲಿಗೆ ಒಂದು ಕನಕಾಂಬರ ಕಣ್ಣಿಗೆ ಬೀಳಲಿಲ್ಲ.
ಅಲ್ಲಿನ ಪ್ರಮುಖ ಹೂ ವ್ಯಾಪಾರಿಗಳ ಬಳಿ ವಿಚಾರಿಸಿದಾಗ, ‘ಈಗ ಬೆಂಗಳೂರಿನಲ್ಲೂ ಕನಕಾಂಬರ ಬರುವುದಿಲ್ಲ.

ತಮಿಳುನಾಡಿನ ನಾಗಪಟ್ಟಣದಿಂದ ಬರುತ್ತದೆ. ಆದರೆ ಅದು ದುಬಾರಿಯಾಗಿರುವುದರಿಂದ ಆ ಹೂವುಗಳನ್ನು ತರಿಸುವುದನ್ನು ಬಿಟ್ಟಿದ್ದೇವೆ’ ಎಂದು ಹೇಳಿದರು. ನನಗೆ ಆಶ್ಚರ್ಯವಾಯಿತು. ಆ ದಿನಗಳಲ್ಲಿ ಪ್ರತಿದಿನ ಇಪ್ಪತ್ತು-ಮೂವತ್ತು ಲಾರಿಗಳಲ್ಲಿ ಕನಕಾಂಬರಗಳು ಬರುತ್ತಿದ್ದವಲ್ಲ… ಆ ಹೂವುಗಳನ್ನು ಬೆಳೆಯುತ್ತಿದ್ದ ತೋಟಗಳೆಲ್ಲ ಏನಾದವು? ಅವನ್ನು ಬೆಳೆಯುತ್ತಿದ್ದ ರೈತರೆ ಏನಾದರು? ಕನಕಾಂಬರ ಹೂವುಗಳೇಕೆ ಬೆಂಗಳೂರಿಗೆ ಬರುತ್ತಿಲ್ಲ? ಇಡೀ ನಗರದಲ್ಲೂ ಆ ಹೂವುಗಳೇಕೆ ಕಾಣುತ್ತಿಲ್ಲ? ಹೀಗೆ ಹತ್ತಾರು ಪ್ರಶ್ನೆಗಳು ತೂರಿ ಬಂದವು.

ಆಗ ನಾನು ‘ವಿಜಯ ಕರ್ನಾಟಕ’ ಪತ್ರಿಕೆಯಲ್ಲಿದ್ದೆ. ನಮ್ಮ ಫೋಟೋಗ್ರಾಫರನ ಜತೆಗೆ ನಾನು ಪಣತ್ತೂರು ಕಡೆಗೆ ಹೊರಟೆ. ನನಗೆ ಆಶ್ಚರ್ಯ ಕಾದಿತ್ತು. ನನಗೆ ಇದು ನಾನು ನೋಡಿದ ಪಣತ್ತೂರು ಎಂದು ನಂಬಲು ಕೆಲ ಸಮಯ ಹಿಡಿಯಿತು. ಕನಕಾಂಬರ ಬೆಳೆಯುತ್ತಿದ್ದ ತೋಟಗಳೆ ನಿವೇಶನಗಳಾಗಿ, ಕೈಗಾರಿಕಾ ಸೈಟುಗಳಾಗಿ ಬದಲಾಗಿದ್ದವು. 2000 ರ ಹೊತ್ತಿಗೆ ಪಣತ್ತೂರು ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಭೂಮಿಗೆ ವಿಪರೀತ ಬೆಲೆ ಬಂದು, ರೈತರೆ ತಾವು ಸಾಗುವಳಿ ಮಾಡುತ್ತಿದ್ದ ಬೆಳೆಗಳನ್ನು ಕೈಬಿಟ್ಟು, ತಮ್ಮ ತಮ್ಮ ಭೂಮಿಯನ್ನು ರಿಯಲ್ ಎಸ್ಟೇಟ್ ಕುಳಗಳಿಗೆ ಮಾರಾಟ ಮಾಡಿ, ತಮ್ಮ ಇಡೀ ಜೀವನದಲ್ಲಿ ದುಡಿದರೂ ಗಳಿಸಲಾರದಷ್ಟು ಹಣವನ್ನು ಒಂದೇ ಬಾರಿಗೆ ಕೈತುಂಬಾ ಗೋಚಿಕೊಂಡು, ಬೆಂಗಳೂರಿನ ಕಡೆಗೆ ಮುಖ ಮಾಡಿದ್ದರು.

ಹೀಗಾಗಿ ಕನಕಾಂಬರ ಬೆಳೆಯುತ್ತಿದ್ದ ತೋಟಗಳೆ ಬಡಾವಣೆಗಳಾಗಿ, ಕೈಗಾರಿಕಾ ನಿವೇಶನಗಳಾಗಿ ಬದಲಾಗಿದ್ದವು.
ಕನಕಾಂಬರ ಬೆಳೆಯುತ್ತಿದ್ದ ಗೌಡರೆಲ್ಲ, ಮನೆ, ಕಾರುಗಳನ್ನು ಖರೀದಿಸಿ, ಬೆಂಗಳೂರಿನ ‘ಗೌಡ’ರಾಗಿಬಿಟ್ಟಿದ್ದರು! ಕಳೆದ ಹದಿನೆಂಟು-ಇಪ್ಪತ್ತು ವರ್ಷಗಳದ ಈ ಬದಲಾವಣೆಯನ್ನು ‘ವಿಜಯ ಕರ್ನಾಟಕ’ದ ಮುಖಪುಟದಲ್ಲಿ ‘ಕನಕಾಂಬರ ಬಿಟ್ಟು ಅಂಬರ ಹುಡುಕಿ ಹೊರಟವರ ಕತೆ’ ಬರೆದಿದ್ದೆ!

ಇದಕ್ಕೆ ಪತ್ರಿಕೋದ್ಯಮದ ಪರಿಭಾಷೆಯಲ್ಲಿ ‘ಫಾಲೋ ಅಪ್ ಸ್ಟೋರಿ’ ಅಂತಾರೆ. ಯಾವುದೇ ಸುದ್ದಿಯೂ ಇಂದಷ್ಟೇ ಸುದ್ದಿಯಾಗಿ ಸತ್ತು ಹೋಗುವುದಿಲ್ಲ. ಇಂದು ಸುದ್ದಿಯಾದರೆ, ಅದು ಸುದ್ದಿಯಾಗಿ ಇಂದು ಜೀವ ತಾಳುತ್ತದೆ, ಇನ್ನು ಮುಂದೆಯೂ ಸುದ್ದಿ ಯಾಗುತ್ತಲೇ ಇರುತ್ತದೆ. ಆದರೆ ಪತ್ರಕರ್ತನಾದವನು ಅದರ ಹಿಂದೆ ಬೀಳಬೇಕಷ್ಟೆ. ಇಂದು ಸುದ್ದಿ ಬರೆದು ಸುಮ್ಮ ನಾಗುವು ದಲ್ಲ. ಅದರ ಜಾಡನ್ನು ಗ್ರಹಿಸುತ್ತಲೇ ಇರಬೇಕು. ಇಂದು ಬರೆದ ಸುದ್ದಿ, ನಾಳೆ ಪತ್ರಿಕೆಯಲ್ಲಿ ಪ್ರಕಟವಾಗಿ ರದ್ದಿಯಾಗಬಹುದು.

ಆದರೆ ಆ ಸುದ್ದಿಯ ನಾಯಕ ಇತಿಹಾಸದ ಕಸದ ಬುಟ್ಟಿ ಸೇರುವುದಿಲ್ಲ. ನಾಳೆಯಿಂದಲೇ ಬೆಳೆಯಲಾರಂಭಿಸುತ್ತಾನೆ. ಪತ್ರಕರ್ತನಾದವನು ಫಾಲೋ ಅಪ್ ಮಾಡಬೇಕು. ಸುದ್ದಿಯ ಕಳ್ಳ ಹೆಜ್ಜೆ ಹಿಂಬಾಲಿಸಿ ಹೋಗಬೇಕು. ಅದರ ವಾಸನೆ ಹಿಡಿದು ಹೊರಡಬೇಕು. ಒಂದು ವರ್ಷದ ಹಿಂದೆ ಬರೆದ ಸ್ಟೋರಿಗಳನ್ನು ಪುನಃ ತಡಕಾಡಿದರೆ, ಮತ್ತಷ್ಟು ಹೊಸ ವಿಷಯಗಳು ಸಿಗುತ್ತವೆ.
ಅಮಿತಾಬ್ ಬಚ್ಚನ್ ನಡೆಸುತ್ತಿದ್ದ ‘ಕೌನ್ ಬನೇಗಾ ಕರೋಡಪತಿ’ ಕಾರ್ಯಕ್ರಮದಲ್ಲಿ ಕಾನ್ಪುರದ ಯುವಕ ಮತ್ತು ಇಂದೋರಿನ ಮಹಿಳೆಯೊಬ್ಬರು ಒಂದು ಕೋಟಿ ಬಹುಮಾನ ಗಳಿಸಿದ್ದರು.

ಯುವಕ ಕೋಟಿ ಬಹುಮಾನ ಗಳಿಸಿದ ಒಂದು ತಿಂಗಳ ಬಳಿಕ ಮಹಿಳೆಯೂ ಪ್ರಶಸ್ತಿ ಗೆದ್ದಿದ್ದಳು. ಈ ಎರಡೂ ಸುದ್ದಿ ‘ದೈನಿಕ್ ಭಾಸ್ಕರ್’ ಹಿಂದಿ ಪತ್ರಿಕೆಯಲ್ಲಿ ಮುಖಪುಟದಲ್ಲಿ ಪ್ರಕಟವಾಗಿತ್ತು. ಅದಾಗಿ ಸುಮಾರು ಆರು ವರ್ಷಗಳ ಬಳಿಕ, ಅಂದರೆ ಇತ್ತೀಚೆಗೆ ಕೆಲವು ತಿಂಗಳುಗಳ ಹಿಂದೆ, ಆ ಪತ್ರಿಕೆ ಇವರಿಬ್ಬರನ್ನೂ ಸಂದರ್ಶಿಸಿತ್ತು. ಕೋಟಿ ಬಹುಮಾನ ಗೆದ್ದ ಯುವಕ
ಹೀನಾಯ ಜೀವನ ಸಾಗಿಸುತ್ತಿದ್ದ. ಆತ ಬಹುಮಾನದಲ್ಲಿ ಬಂದ ಹಣವನ್ನೆ ಕುಡಿದು, ತಿಂದು, ಶೋಕಿ ಮಾಡಿ ವ್ಯಸನಗಳ ದಾಸನಾಗಿದ್ದ. ಅದೇ ಮಹಿಳೆ ಗಂಡನನ್ನು ಕಳೆದುಕೊಂಡಳು. ಬಹುಮಾನದ ಹಣದಲ್ಲಿ ತನ್ನ ಇಬ್ಬರು ಹೆಣ್ಣುಮಕ್ಕಳ ಪೈಕಿ ಒಬ್ಬಳನ್ನು ಡಾಕ್ಟರ್ ಆಗಿ, ಇನ್ನೊಬ್ಬಳನ್ನು ಫ್ಯಾಶನ್ ಡಿಸೈನರ್ ಆಗಿ ಓದಿಸಿ, ಒಂದು ಫ್ಲ್ಯಾಟ್ ಖರೀದಿಸಿ, ಸಂತಸದ ಜೀವನದ ಸಾಗಿಸುತ್ತಿದ್ದಳು.

ಮಾನವಾಸಕ್ತಿಗೆ ಸಂಬಂಧಿಸಿದಂತೆ, ಮೊದಲ ಸಲ ಸುದ್ದಿಯಾಗಿದ್ದಕ್ಕಿಂತ ಎರಡನೇ ಸಲ ಆಗಿದ್ದೇ ಹೆಚ್ಚು ಮನಮುಟ್ಟು ವಂತಿತ್ತು. ಈ ಎರಡೂ ಸುದ್ದಿಯನ್ನು ಒಬ್ಬನೇ ಬರೆದಿದ್ದ ಎಂಬುದು ಗಮನಾರ್ಹ. ಇನ್ನು ಐದಾರು ವರ್ಷಗಳ ನಂತರವೂ ಈ ಸುದ್ದಿ ಬೇರೆ ಸ್ವರೂಪ ಪಡೆಯಬಹುದು. ಆಗ ಬರೆದರೂ, ಆಸಕ್ತಿಯಿಂದ ಓದುತ್ತಾರೆ. ಇದಾದ ಬಳಿಕ, ಅದೇ ಪತ್ರಿಕೆ, ‘ಕೌನ್ ಬನೇಗಾ ಕರೋಡ್ ಪತಿ’ ಸ್ಪರ್ಧೆಯಲ್ಲಿ ಕೋಟಿ ಬಹುಮಾನ ಗೆದ್ದವರೆಲ್ಲರ ಬಗ್ಗೆ ಬರೆದಿದ್ದು ಫಾಲೋ ಅಪ್ ಸ್ಟೋರಿಗೆ ಒಳ್ಳೆಯ ನಿದರ್ಶನವೇ. ‘ಎಸ್ಸೆಸ್ಸಿ ಪರೀಕ್ಷೆಯಲ್ಲಿ ಭಿಕ್ಷುಕಿ ಮಗಳಿಗೆ ಮೊದಲ ರ‍್ಯಾಂಕ್’ ಎಂಬ ಶೀರ್ಷಿಕೆ ಓದುತ್ತೇವೆ. ಆದರೆ ಹತ್ತು
ವರ್ಷಗಳ ಬಳಿಕ, ಅವಳೇನಾದಳು, ಏನು ಮಾಡುತ್ತಿದ್ದಾಳೆ, ಈಗ ಅವಳ ಭಿಕ್ಷುಕಿ ತಾಯಿ ಏನು ಮಾಡುತ್ತಿದ್ದಾಳೆ? ಎಂಬುದು ಅವಳು ರ‍್ಯಾಂಕ್ ಪಡೆದಿದ್ದಕ್ಕಿಂತ ಒಳ್ಳೆಯ ಸುದ್ದಿಯಾದೀತು.

ಹೀಗಾಗಿ ಪ್ರತಿ ಸುದ್ದಿಯೂ ಫಾಲೋ ಅಪ್ ಸುದ್ದಿಗೆ ಯೋಗ್ಯ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜಿಪಿ ಅಧಿಕಾರಕ್ಕೆ ಬಂದರೆ ನಾನು ವಿಷ ಕುಡಿಯುತ್ತೇನೆ, ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಯಾರಾದರೂ ಹೇಳಿದರೆ, ಚುನಾವಣಾ ಫಲಿತಾಂಶ ಬಂದಾಗ, ಈ ಬಗ್ಗೆಯೇ ಒಂದು ವರದಿ ಮಾಡಬಹುದು. ಶ್ರೀಗಂಧ ಬೆಳೆದು ಹತ್ತು ಕೋಟಿ ಗಳಿಸಿದ ರೈತನೊಬ್ಬನ ಬಗ್ಗೆ ಲೇಖನ ಬರೆದು ಸುಮ್ಮನಾಗುವುದಲ್ಲ. ಅವನನ್ನು ಅನುಸರಿಸಿದ ನೂರಾರು ಜನರ ಪಾಡು ಏನಾಯ್ತು,
ಅವರಲ್ಲಿ ಎಷ್ಟು ಜನ ಯಶಸ್ವಿಯಾದರು, ಹತ್ತು ಕೋಟಿ ಗಳಿಸಿದ ಆ ರೈತ ಈಗ ಹೇಗಿದ್ದಾನೆ ಮುಂತಾದ ವಿಷಯಗಳನ್ನು ಕಟ್ಟಿಕೊಟ್ಟರೆ, ಆಸಕ್ತದಾಯಕ ಸ್ಟೋರಿಯಾದೀತು.

ಪತ್ರಿಕೋದ್ಯಮದಲ್ಲಿ ಫಾಲೋ ಅಪ್ ಅವಿಭಾಜ್ಯ ಅಂಗ. ಯಾರು ಸುದ್ದಿಯನ್ನು ಬೆಂಬೆತ್ತಿ ಹೋಗುತ್ತಾರೋ, ಫಾಲೋ
ಮಾಡುತ್ತಾರೋ, ಅವರಿಗೆ ಯಾವತ್ತೂ ಒಳ್ಳೆಯ ಸ್ಟೋರಿಗಳು ಸಿಗುತ್ತವೆ. ಅಂಥವರು ಆಗಾಗ ಅಚ್ಚರಿಗಳನ್ನು ಕೊಡುತ್ತಾ
ಹೋಗುತ್ತಾರೆ. ಸುದ್ದಿ ಬರೆದು ಸುಮ್ಮನಾಗುವುದು ಉತ್ತಮ ಪತ್ರಕರ್ತನ ಲಕ್ಷಣವಲ್ಲ. ಒಳ್ಳೆಯ ಪತ್ರಕರ್ತ ಸುದ್ದಿ ಬರೆದು
ಕುಳಿತುಕೊಳ್ಳುವುದಿಲ್ಲ. ಫಾಲೋ ಅಪ್ ಮಾಡುತ್ತಾನೆ.

ತಾನು ಬರೆದ ನಂತರ ಏನೆ ಬದಲಾವಣೆಗಳಾದವು ಎಂಬುದನ್ನು ಮತ್ತೊಮ್ಮೆ ನೋಡುವ ಪ್ರಯತ್ನ ಮಾಡುತ್ತಾನೆ. ಸುದ್ದಿಯ ಮತ್ತೊಂದು ಮಗ್ಗುಲನ್ನು ನೋಡುವ, ಪೂರ್ವೋತ್ತರಗಳನ್ನು ತಿಳಿಸುವ ಆಶಯ ಹೊಂದಿರುತ್ತಾನೆ. ಬರೆದು ಸುಮ್ಮನಾಗುವುದು ಪತ್ರಕರ್ತನ ಕೆಲಸವಲ್ಲ. ಅದು ಕಾರಕೂನಿಕೆ. ಫಾಲೋ ಅಪ್ ನಿಜವಾದ ವರದಿಗಾರಿಕೆ. ಆಗಲೇ ಒಂದು ಸ್ಟೋರಿಗೆ ಅಥವಾ ವಿಷಯ-ವ್ಯಕ್ತಿಗೆ ನ್ಯಾಯವೊದಗಿಸಿದಂತೆ. ಒಂದು ಸುದ್ದಿ ಪ್ರಕಟವಾಗುತ್ತಿದ್ದಂತೆ, ಸಂಪಾದಕ ಮುಂದೆ ಹೇಳುವ ಮಾತೆಂದರೆ Follow it up!

ಈ ‘ಫಾಲೋ ಅಪ್’ ಎನ್ನುವುದು ಸುದ್ದಿಮನೆಗಷ್ಟೇ ಸೀಮಿತವಲ್ಲ. ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಫಾಲೋ ಅಪ್ ಮಾಡುವುದನ್ನು ಗಮನಿಸಿರಬಹುದು. ಎಲ್ಲಾ ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ಸಣ್ಣ-ಪುಟ್ಟ ಸಂಸ್ಥೆಗಳಲ್ಲೂ ಚೀಫ್ ಫೈನಾನ್ಸಿಯಲ್ ಆಫೀಸರ್ (CFO)ಇರುವುದು ಸಹಜ. ಇವರ ಸ್ಥಾನಮಾನಕ್ಕೆ ಸಮನಾದ Chief Follow-Up
Officer (CFO)ಎಂಬ ಹುದ್ದೆಯನ್ನು ಸೃಷ್ಟಿಸುತ್ತಿರುವುದು ಉತ್ತಮ ಬೆಳವಣಿಗೆ.

ಇದನ್ನು ‘ಕಸ್ಟಮರ್ ಕೇರ್’ ಎಂದು ಅನೇಕ ಸಂಸ್ಥೆಗಳು ಕರೆಯುತ್ತಿವೆ. ನೀವು ಯಾವುದೇ ಕಂಪನಿಯ ಒಂದು ಕಾರನ್ನೋ, ಟಿವಿಯನ್ನೋ ಖರೀದಿಸಿದ ಬಳಿಕ ಆ ಸಂಸ್ಥೆಯೊಂದಿಗೆ ಸಂಬಂಧ ಆರಂಭವಾದಂತೆ. ಖರೀದಿಸಿದ ಬಳಿಕ ಆ ಸಂಸ್ಥೆಯಿಂದ ವಾರಕ್ಕೆ, ಹದಿನೈದು ದಿನಗಳಿಗೊಮ್ಮೆ ಫೋನುಗಳು ಬರುತ್ತವೆ. ತಾವು ಖರೀದಿಸಿದ ಕಾರು, ಟಿವಿ ಬಗ್ಗೆ ಗ್ರಾಹಕರ ಸಂತೃಪ್ತಿಯ
ಮಟ್ಟ ಎಷ್ಟಿದೆ ಎಂಬುದನ್ನು ಕಾಲಕಾಲಕ್ಕೆ ಕೇಳಿ ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ತಮ್ಮ ಗ್ರಾಹಕರನ್ನು ಫಾಲೋ ಅಪ್ ಮಾಡುತ್ತಲೇ ಇರುತ್ತಾರೆ. ಒಂದು ಸಮಸ್ಯೆಯನ್ನು ಹೇಳಿದರೆ, ಅದಕ್ಕೆ ಪರಿಹಾರ ಸೂಚಿಸಿ, ಸಂಸ್ಥೆಯ ಜತೆಗೆ ಉತ್ತಮ ಸಂಬಂಧ ಏರ್ಪಡುವಂತೆ ಮಾಡುವುದು, ಪದೇ ಪದೆ ವಿಚಾರಿಸುತ್ತಾ ಕಾಳಜಿ ತೋರುವುದು ಫಾಲೋ-ಅಪ್ ವಿಭಾಗದ ಕೆಲಸ. ಅಂದರೆ ನಕ್ಷತ್ರಿಕನಂತೆ ಗ್ರಾಹಕರ ಬೆನ್ನು ಬೀಳುವುದು! ಹೋದ ಆತನನ್ನು ಹಿಂಬಾಲಿಸುವುದು!

ನಮ್ಮ ಜೀವನದಲ್ಲೂ ಫಾಲೋ ಅಪ್ ಬಹಳ ಮುಖ್ಯ. ಯಾವ ಕೆಲಸವೂ ಹೇಳಿದ ತಕ್ಷಣ ಆಗುವುದಿಲ್ಲ. ಒಂದು ಸಂಸ್ಥೆಯಲ್ಲಿ ಒಂದು ಕೆಲಸವನ್ನು ಹತ್ತಾರು ಜನರ ಸಹಯೋಗದಿಂದ ಮಾಡಿಸಬೇಕಾಗುತ್ತದೆ. ನಾವು ಹೇಳಿದ ಮಾತ್ರಕ್ಕೆ ಅವರು ನಮ್ಮ ಮಾತನ್ನು ನೆರವೇರಿಸಿರುವುದಿಲ್ಲ. ಅವರಿಗೂ ಇನ್ನಿತರ ಹತ್ತಾರು ಕೆಲಸಗಳಿರುತ್ತವೆ. ಹೀಗಾಗಿ ಫಾಲೋ ಅಪ್ ಮಾಡುತ್ತಲೇ
ಇರಬೇಕಾಗುತ್ತದೆ. ಒಬ್ಬ ಸಂಪಾದಕನಾಗಿ, ಪತ್ರಿಕಾ ಸಂಸ್ಥೆಯ ಮುಖ್ಯಸ್ಥನಾಗಿ ನಾನು ಪ್ರತಿದಿನ ಕನಿಷ್ಠ ಅರ್ಧ ಗಂಟೆ ಹಿಂದಿನ ತಿಂಗಳು, ಹಿಂದಿನ ವಾರ, ನಿನ್ನೆ ದಿನ ಹೇಳಿದ ಸೂಚನೆಗಳು ಈಡೇರಿವೆಯಾ, ಇಲ್ಲವಾ ಎಂದು ಫಾಲೋ ಅಪ್ ಮಾಡುತ್ತಲೇ ಇರುತ್ತೇನೆ. ಈ ಕೆಲಸವನ್ನು ಮಾಡದಿದ್ದರೆ ನಾಳೆ ಕೇಳುತ್ತಾರೆ ಎಂಬ ಭಯ, ಎಚ್ಚರ ಸಹೋದ್ಯೋಗಿಗಳಿಗೂ ಇರುತ್ತದೆ.

ಹೀಗಾಗಿ ಫಾಲೋ ಅಪ್ ಮಾಡುತ್ತಲೇ ಇರಬೇಕು. ಒಂದು ಸಲ ಹೇಳಿದ ಮಾತ್ರಕ್ಕೆ ತಾಯಿಯೂ ತನ್ನ ಮಗುವಿಗೆ ಹಾಲುಣಿಸುವುದಿಲ್ಲ. ಮಗು ಕಿರುಚಿದಾಗಲೇ ಹಾಲು. ಈ ಕಿರುಚುವುದು ಕೂಡ ಫಾಲೋ ಅಪ್ ಕ್ರಿಯೆಯೇ. ನೀವು ಅತ್ಯುತ್ತಮ ಬಾಸ್ ಆಗುವುದು ನೀವೆಷ್ಟು ಪರಿಣಾಮಕಾರಿಯಾಗಿ ಫಾಲೋ ಅಪ್ ಮಾಡುತ್ತೀರಿ ಎಂಬುದನ್ನು ಅವಲಂಬಿಸಿದೆ.

ನಾನು ನೋಡಿದಂತೆ, ‘ವಿಜಯವಾಣಿ’ ಪತ್ರಿಕೆಯ ಮುಖ್ಯಸ್ಥರಾದ ವಿಜಯ ಸಂಕೇಶ್ವರ ಅವರ ಪುತ್ರ ಆನಂದ ಸಂಕೇಶ್ವರ ಫಾಲೋ ಅಪ್ ಮಾಡುವುದರಲ್ಲಿ ಎತ್ತಿದ ಕೈ. ಅವರು ನಿಮಗೆ ಒಂದು ಕೆಲಸವನ್ನು ವಹಿಸಿದರೆ, ಅದು ಈಡೇರುವ ತನಕ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಿಮಗೂ ಸುಮ್ಮನಿರಲು ಬಿಡುವುದಿಲ್ಲ. ಭಕ್ತಿಯಿಂದ ಹತ್ತಾರು ಸಲ ಫಾಲೋ ಅಪ್ ಮಾಡುತ್ತಾರೆ. ಆ ಕೆಲಸ ಮುಗಿದಾಗಲೇ ಅವರು ಸುಮ್ಮನಾಗುವುದು. ಇದು ಒಳ್ಳೆಯ ಅಭ್ಯಾಸ.

ನೀವು ಹೇಳಿದ್ದನ್ನು ತಕ್ಷಣ ಮಾಡುವುದು ಮಷೀನು ಮಾತ್ರ. ಮನುಷ್ಯರಿಗೆ ಆಗಾಗ ಹೇಳುತ್ತಿರಬೇಕಾಗುತ್ತದೆ, ನೆನಪಿಸು ತ್ತಿರಬೇಕಾಗುತ್ತದೆ. ಫಾಲೋ ಅಪ್ ಮಾಡುತ್ತಿರಬೇಕಾಗುತ್ತದೆ. ಇದು ಆಫೀಸಿನಲ್ಲಿ ಮಾತ್ರ ಅಲ್ಲ, ಮನೆಯಲ್ಲೂ. ಹೆಂಡತಿ ಯನ್ನೂ ಫಾಲೋ ಅಪ್ ಮಾಡಬೇಕಾಗುತ್ತದೆ. ಒಂದು ಸಲ ಹೇಳಿದ ಮಾತ್ರಕ್ಕೆ ನೀವು ಹೇಳಿದ ಕೆಲಸ ಆಗಿರುತ್ತದೆ ಎಂದು ಎಂದೂ ಭಾವಿಸಬಾರದು.

ಫಾಲೋ ಇಟ್ ಅಪ್!