Tuesday, 7th December 2021

ಕರುನಾಡ ನೆಲದಲ್ಲಿ ಖಾಸಗಿ ಕಾಡು ಕಟ್ಟಿ ನಿಲ್ಲಿಸಿದ್ದ ಮಲ್ಹೋತ್ರಾ ಮರೆ

ಸ್ಮರಣೆ

ಚೈತನ್ಯ ಕುಡಿನಲ್ಲಿ

ಕೈಯಲ್ಲಿ ಹಣ ಇದ್ರೆ ಮೆಟ್ರೋ ಸಿಟಿಲಿ ಅಂಗೈ ಅಗಲ ಸೈಟ್ ಮಾಡಿಕೊಳ್ಳುವವ ಈ ಜಮಾನದಲ್ಲಿ, ಹುವಾಯಿ ದ್ವೀಪ ದಲ್ಲಿದ್ದ ಭೂಮಿ ಮಾರಿ, ಕೊಡಗಿನಲ್ಲಿ ಕಾಫಿ ತೋಟವಾಗುತ್ತಿದ್ದ ಬರೊಬ್ಬರಿ 300 ಎಕರೆ ಜಾಗವನ್ನು ಕೊಂಡು, ಖಾಸಗಿ ಅಭಯಾರಣ್ಯ ಬೆಳೆಸಿದ್ದು ಮಲ್ಹೋತ್ರ ದಂಪತಿ

ಆತ ಮುಂಬೈ ಹುಡುಗ, ಈಕೆ ಅಮೆರಿಕ ಹುಡುಗಿ, ಇಬ್ಬರ ನಡುವೆ ಪರಿಚಯವಾಗುತ್ತೆ, ಪರಿಚಯ ಸ್ನೇಹವಾಗುತ್ತೆ, ಸ್ನೇಹ ಲವ್ ಆಗುತ್ತೆ. ಮುಂದೆ ಏನಾಗುತ್ತೆ ಗೊತ್ತೆ? ಬರೋ ಬ್ಬರಿ 300 ಎಕರೆ ಕಾಡು ನಿರ್ಮಾಣವಾಗುತ್ತೆ! ಇದು ಕನ್ನಡದ ಯಾವುದೋ ಸಿನಿಮಾ ಕಥೆಯಲ್ಲ.

ಧಾರಾವಾಹಿಯದ್ದೂ ಅಲ್ಲ. ಇಲ್ಲೆ ಕೊಡಗಿನಲ್ಲಿ 300 ಎಕರೆ ಖಾಸಗಿ ಅಭಯಾರಣ್ಯ ವನ್ನು ನಿರ್ಮಿಸಿದ್ದ ಮಲ್ಹೋತ್ರ ದಂಪತಿ ಯ ಯಶೋಗಾಥೆ. ಇಂಥ ಅತ್ಯಪೂರ್ವ ವ್ಯಕ್ತಿ ಡಾ. ಅನಿಲ್ ಕೆ. ಮಲ್ಹೋತ್ರಾ ಸೋಮವಾರ ಕೊನೆಯುಸಿರೆಳೆದಿದ್ದಾರೆ. ಇದು ಸುಮಾರು ಮೂರು ದಶಕಗಳ ಹಿಂದಿನ ಬ್ಲಾಕ್ ಅಂಡ್ ವೈಟ್ ಪ್ರೇಮಕಥೆ. ಆತನ ಹೆಸರು ಎ.ಕೆ.ಮಲ್ಹೋತ್ರ. ಊರು ಮುಂಬಯಿ. ಈಕೆ ಪಮೇಲಾ. ಊರು ದೂರದ ಅಮೆರಿಕ. ಕಾಲೇಜಲ್ಲಿರುವಾಗಲೇ ಇಬ್ಬರಿಗೂ ಪರಿಚಯವಾಗುತ್ತೆ. ಇಬ್ಬರಲ್ಲೂ ಸಮಾನ ವಾಗಿದ್ದ ಪರಿಸರ ಪ್ರೀತಿ ಮತ್ತು ಕಾಳಜಿ ಈ ಪರಿಚಯವನ್ನ ಪ್ರೀತಿಯನ್ನಾಗಿಸಿ ಹಸಮಣೆ ಏರಿಸುತ್ತೆ.

ನವ ದಂಪತಿ ಹನಿಮೂನ್‌ಗಾಗಿ ಆಯ್ಕೆ ಮಾಡಿಕೊಂಡಿದ್ದು ಹವಾಯಿ ದ್ವೀಪ. ಹೋಗಿದ್ದು ಹನಿಮೂನ್‌ಗೆ ಅಂತಾದರೂ ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನ ಸೋತು ಅಲ್ಲೆ ನೆಲೆ ನಿಲ್ಲುತ್ತಾರೆ. ಆದರೆ ವಿಧಿಯೇ ಮತ್ತೊಂದು ಪ್ಲ್ಯಾನ್ ಸಿದ್ಧಪಡಿಸಿರುತ್ತದೆ. 1998ರಲ್ಲಿ ಅನಿಲ್ ಮಲ್ಹೋತ್ರರ ತಂದೆ ನಿಧನರಾಗುತ್ತಾರೆ. ಅವರ ಶವ ಸಂಸ್ಕಾರ ಕ್ಕೆಂದು ಇಬ್ಬರೂ ಹರಿದ್ವಾರಕ್ಕೆ ಬರುತ್ತಾರೆ. ಈ ಪುಣ್ಯಕ್ಷೇತ್ರದಲ್ಲಿನ ಮಾಲಿನ್ಯ, ಎಗ್ಗಿಲ್ಲದೆ ನಡೆಯುತ್ತಿರುವ ಟಿಂಬರ್ ಲಾಬಿ, ಕಲುಷಿತಗೊಳ್ಳುತ್ತಿರುವ ನದಿಗಳು ಮಲ್ಹೋತ್ರ ದಂಪತಿಯಲ್ಲಿ ಒಂದು ಪ್ರಶ್ನೆಯನ್ನು ಮೂಡಿಸುತ್ತವೆ.

ಅಲ್ಲಿಂದ ನಾಗರಹೊಳೆಗೆ: ಹವಾಯಿ ದ್ವೀಪ ಹಚ್ಚಹಸುರಾಗಿದೆ ಸರಿ, ಆದರೆ ಭಾರತದ ಸ್ಥಿತಿ ಏನು? ಇಲ್ಲಿನ ಕಾಡು, ಜಲ ಮೂಲಗಳ ಭವಿಷ್ಯವೇನು? ಹರಿದ್ವಾರ ದಲ್ಲಿ ಹುಟ್ಟಿದ ಈ ಪ್ರಶ್ನೆ ಮಲ್ಹೋತ್ರ ದಂಪತಿಯನ್ನು ಬಹಳಷ್ಟು ಕಾಡುತ್ತದೆ. ಸರಿ, ಭಾರತವನ್ನು ಹಸುರಾಗಿಸಬೇಕೆಂದು ಪಣತೊಟ್ಟು ಇಬ್ಬರೂ ಸೀದಾ ಬಂದದ್ದು ನಮ್ಮ ನಾಗರಹೊಳೆಗೆ. 1995ರಲ್ಲಿ ನಾಗರಹೊಳೆ ಸಮೀಪ 55 ಎಕರೆ ಭೂಮಿ ಖರಿದಿಸುತ್ತಾರೆ. ಇದಕ್ಕಾಗಿ ಹವಾಯಿಯಲ್ಲಿದ್ದ ತಮ್ಮ ಕನಸಿನ ಭೂಮಿಯನ್ನೂ ಮುಲಾಜಿಲ್ಲದೆ ಮಾರುತ್ತಾರೆ. ಕಾಫಿತೋಟವಾಗುತ್ತಿದ್ದ ಇಲ್ಲಿನ ಕಾಡನ್ನುಸಂರಕ್ಷಿಸುವುದಕ್ಕಾಗಿಯೇ ‘ಸಾಯಿ (SAI – Save
Animal Initiative) ಸ್ಯಾಂಕ್ಚುರಿ’ ಎಂಬ ಟ್ರಸ್ಟ್ ಅನ್ನು ಹುಟ್ಟು ಹಾಕುತ್ತಾರೆ. ಮೊದಲಿಗೆ 55 ಎಕರೆಯಷ್ಟಿದ್ದ ಕಾಡು ಈಗ ಬರೊಬ್ಬರಿ 300 ಎಕರೆಯಷ್ಟು ವಿಸ್ತಾರಗೊಂಡಿದೆ.

ಸ್ಥಳಿಯರಿಂದ ಗುಮಾನಿ: ‘ಅರೆ! ಗಂಡ-ಹೆಂಡ್ತಿ ಹೊರ ದೇಶದಿಂದ ಈ ಕಾಡಿನ ಕೊಂಪೆಗೆ ಬಂದು ಏನು ಮಾಡ್ತಿದ್ದಾರೆ?’ ಅನ್ನೋ ಗುಮಾನಿ ಸ್ಥಳೀಯರನ್ನ ಕಾಡಲಿಕ್ಕೆ ಶುರುವಾಯಿತು. ಆದರೆ ಕ್ರಮೇಣ ಮಲ್ಹೋತ್ರ ದಂಪತಿ ಇಲ್ಲಿನ ಜನರಿಗೆ ಹತ್ತಿರವಾಗುತ್ತ, ಕಾಡಿನ ಮಹತ್ವ ತಿಳಿಸಿದರು. ಅಲ್ಲದೆ ಗುಡ್ಡದ ಮೇಲೆ ಹುಲಿಗಳು ಓಡಾಡುವಲ್ಲಿದ್ದ ದೇವಸ್ಥಾನವನ್ನು ಸ್ಥಳಾಂತರಿಸಲು ಸಹಾಯ ಮಾಡಿದರು. ಇದಕ್ಕೆ ಪ್ರತಿಯಾಗಿ ಬೇಟೆಯನ್ನು ಸಂಪೂರ್ಣ ನಿಲ್ಲಿಸುವುದಾಗಿ ಅವರಿಂದ ವಾಗ್ದಾನವನ್ನೂ ಪಡೆದರು.

ಆನೆ ಘೀಳಿಡುವ ಸದ್ದು ಕೇಳಿ ಮಲ್ಹೋತ್ರಗೆ ಎಚ್ಚರವಾಯಿತು, ಇನ್ನೇನು ಪಕ್ಕದಲ್ಲಿರುವ ಕೆಲಸದವರನ್ನು ಕರೆಯಬೇಕೆಂದು ಸರಸರನೆ ಎದ್ದು ಮನೆಯ ಮುಂಭಾಗಕ್ಕೆ ಬಂದು, ಟಾರ್ಚ್ ಹಾಕಿದರೆ ಎದುರುಗಡೆ ಡಜನ್‌ಗಟ್ಟಲೆ ಆನೆಗಳ ಹಿಂಡು! ಆದರೆ, ಮಲ್ಹೋತ್ರ ಮುಖದಲ್ಲಿ ಕಿಂಚಿತ್ತೂ ಭಯವಿಲ್ಲ! ಬದಲಾಗಿ ಮಕ್ಕಳೇ ಮನೆಗೆ ಬಂದಷ್ಟು ಸಂಭ್ರಮ ಅವರದ್ದಾಗಿತ್ತು. ಹೌದು, ಸುಮಾರು 5-7 ಶತಮಾನಗಳನ್ನು ಕಂಡಿರುವ ಮರಗಳು, ಇವುಗಳನ್ನೆ ಆಶ್ರಯಿಸಿ ಬದುಕುತ್ತಿರುವ 300 ಬಗೆಯ ಹಕ್ಕಿಗಳು, ಹುಲಿ, ಚಿರತೆ, ಆನೆ, ಜಿಂಕೆ, ಸಾಂಬಾರ, ನೀರು ನಾಯಿ ಇವುಗಳಿಗೆ ನೀರುಣಿಸುತ್ತಿರುವ ಪೊದ್ದಾನಿ ನದಿ ಇವೆ ಮಲ್ಹೋತ್ರ ದಂಪತಿಯ ಮಕ್ಕಳು, ಆಸ್ತಿ-ಪಾಸ್ತಿ.

ಆಕ್ಸ್ಫರ್ಡ್‌ಗೂ ಇದೆ ನಂಟು: ಹಲವು ಜೀವಸಂಕುಲವನ್ನು ಹೊಂದಿರುವ ಈ ಖಾಸಗಿ ಅಭಯಾರಣ್ಯ ಪರಿಸರ ವಿಜ್ಞಾನಿಗಳ ಪ್ರಯೋಗ ಶಾಲೆ. ದೂರದ ಪ್ರತಿಷ್ಠಿತ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದಲೂ ವಿಜ್ಞಾನಿಗಳು ಇಲ್ಲಿಗೆ ಬಂದು ವಾಸ್ತವ್ಯ ಹೂಡು ತ್ತಾರೆ. ಅಲ್ಲದೆ ಈ ಅಭಯಾರಣ್ಯಕ್ಕೆ ನೋಹ್ಸ್ ಹಾರ್ಕ್‌ಎಂದು ನಾಮಕರಣವನ್ನೂ ಅವರು ಮಾಡಿದ್ದಾರೆ. ನೀವೂ ಸಾಯಿ ವನ್ಯ ಧಾಮಕ್ಕೆ ಹೋಗಬಹುದು. ಆದರೆ ಈಗಲ್ಲ. ಮಳೆಗಾಲ (ಜೂನ್-ಅಕ್ಟೊಬರ್/ಸೆಪ್ಟೆಂಬರ್) ಹೊರತುಪಡಿಸಿ ಉಳಿದ ಸಮಯದಲ್ಲಿ ಭೇಟಿ ನೀಡಬಹುದು. ವಿರಾಜಪೇಟೆ ತಾಲೂಕಿನ ಬ್ರಹ್ಮಗಿರಿ ಮತ್ತು ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ತೆರಾಲು ಗ್ರಾಮದಲ್ಲಿ ಈ ವನ್ಯಧಾಮವಿದೆ.

ಅಲ್ಲೆ ಮಲ್ಹೋತ್ರ ಅವರ ಮನೆಯ ಪಕ್ಕದಲ್ಲೆ ಪರಿಸರ ಸ್ನೇಹಿ ಕಾಟೇಜ್ ವ್ಯವಸ್ಥೆಯೂ ಇದೆ. ಇದರಿಂದ ಬಂದ ಆದಾಯವೂ ಕಾಡಿನ ಪಾಲನೆಗೆ ವಿನಿಯೋಗವಾಗುತ್ತೆ.

ಬ್ರಿಟನ್ ಗುರುತಿಸಿದೆ: ಮಲ್ಹೋತ್ರ ದಂಪತಿಯ ಈ ಕಾರ್ಯಕ್ಕೆ ಬ್ರಿಟನ್‌ನ ಹುಲಿ ಸಂರಕ್ಷಣಾ ಸಂಸ್ಥೆ 2014ರಲ್ಲಿ ಸಾಯಿ ವನ್ಯ ಧಾಮಕ್ಕೆ ಸೆಂಚುರಿ ಏಷ್ಯಾ ಪರಿಸರ ಸ್ನೇಹಿ ವನ್ಯಧಾಮ ಪ್ರಶಸ್ತಿ ನೀಡಿದೆ ಎಂದರೆ ಅದು ಸಣ್ಣ ವಿಷಯವಲ್ಲ. ಅಲ್ಲದೆ ಕಳೆದ ವರ್ಷ ಭಾರತ ಸರಕಾರ ಪಮೇಲ್ ಮಲ್ಹೋತ್ರ ಅವರಿಗೆ ಪ್ರತಿಷ್ಠಿತ ನಾರಿ ಪರಸ್ಕಾರ ನೀಡಿದೆ.

ಕಾಡು ಬೆಳೆಸುವುದು ಮಲ್ಹೋತ್ರ ದಂಪತಿಗೆ ಸಲುಭದ ಮಾತಾಗಿರಲಿಲ್ಲ. ಮೊದಲಿಗೆ ಉತ್ತರ ಭಾರತದತ್ತ ಹೋದರೂ ಅಲ್ಲಿ ಕಾನೂನಿನ ತೊಡಕಿನಿಂದಾಗಿ ಭೂಮಿ ದೊರೆಯಲಿಲ್ಲ. ನಂತರ ಶುದ್ಧ ಜಲಮೂಲವನ್ನರಸುತ್ತಾ ನಾಗರಹೊಳೆಗೆ ಬಂದು, ಭೂಮಿ ಖರೀದಿಸಿದರು. ಇನ್ನು ತಮ್ಮ ಕಾಡಿನ ಸುತ್ತವಿದ್ದ ತೋಟಗಳಿಗೆ ಔಷಧ ಹೊಡೆದು ಭೂಮಿ ಹಾಳು ಮಾಡುವುದನ್ನು ಇವರಿಗೆ ಸಹಿಸಲಾಗಲಿಲ್ಲ. ಅದಕ್ಕಾಗಿ ಮಾಲೀಕರ ಮನವೊಲಿಸಿ ಜಮೀನನ್ನು ಕೊಂಡು, ಕಾಡು ಬೆಳೆಸಿದರು. ಇನ್ನು ಸ್ಥಳೀಯ ರಿಂದ ಕಳ್ಳಬೇಟೆಯ ಕಾಟವನ್ನೂ ತಡೆಯಬೇಕಾದ ಅನಿವಾರ್ಯತೆ ಉಂಟಾಯಿತು. ಇದಕ್ಕಾಗಿ ಅರಣ್ಯ ಇಲಾಖೆ ಯೊಂದಿಗೆ
ಸೇರಿ ಕಾಡಿಗೆ ಸಿಸಿಟಿವಿ ಕಣ್ಗಾವಲನ್ನು ಅಳವಡಿಸಿದ್ದಾರೆ.

ಇಂಥದ್ದೊಂದು ಅಪರೂಪದ ಕನಸು ಈಗ ಬಡವಾಗಿದೆ. ಮಲ್ಹೋತ್ರಾ ಹಾಕಿಕೊಟ್ಟ ಮಾರ್ಗದಲ್ಲಿ ಕೆಲವರಾದರೂ ನಡೆಯಲು ಮುಂದಾದರೆ ಕರುನಾಡಿನ ಕಾಡು ಬೆಳೆದೀತು.