Monday, 3rd October 2022

ಜರ್ನಿ ಸಿನೆಮಾ ಆದ್ರಿಂದ ಇದು ’ಗಾಲಿ’ ಪಟ

ತುಂಟರಗಾಳಿ

ಸಿನಿಗನ್ನಡ 
ನಾವು ಯಾವುದಾದ್ರೂ ಟ್ರಿಪ್‌ಗೆ ಹೋಗುವಾಗ ನಮಗೆ ತುಂಬಾ ಎಕ್ಸೈಟ್‌ಮೆಂಟ್ ಇರುತ್ತೆ. ಆದ್ರೆ ಅದೇ ಟ್ರಿಪ್ ಮುಗಿಸಿಕೊಂಡು ವಾಪಸ್ ಬರುವಾಗ, ದಾರಿಯಲ್ಲಿ, ಅಯ್ಯೋ, ಟ್ರಿಪ್ ಮುಗಿದು ಹೋಯ್ತಲ್ಲ, ಮತ್ತೆ ನಾಳೆಯಿಂದ ಆಫೀಸಿಗೆ ಹೋಗಬೇಕಲ್ಲ
ಅನ್ನೋ ಬೇಸರ ಶುರುವಾಗುತ್ತೆ. ಯೋಗರಾಜಭಟ್ಟರ ಗಾಳಿಪಟ ೨ ಕೂಡ ಅಂಥದ್ದೇ ಫೀಲ್ ಕೊಡುವ ಸಿನಿಮಾ. ಮತ್ತೆ ಮತ್ತೆ ಓದಬೇಕು ಅನ್ನಿಸೋ ಕ್ವಾಲಿಟಿ ಇರೋ ಪುಸ್ತಕ ಸಿನಿಮಾ ಈ ಸಿನಿಮಾ.

ಪ್ರಮೋಷನಲ್ ಸಿನಿಮಾಗಳ ಮಧ್ಯೆ ಒಂದು ಅಪರೂಪದ ಎಮೋಷನಲ್ ಸಿನಿಮಾ ಗಾಳಿಪಟ ೨. ಯೋಗರಾಜ ಭಟ್ಟರು ಮುಂಗಾರು ಮಳೆ ಸಿನಿಮಾ ಮಾಡಿದಾಗ ಸುರಿದಿದ್ದು ಬರೀ ಮಳೆ ಮಾತ್ರ ಅಲ್ಲ. ಅದರ ಜೊತೆ ಕನ್ನಡ ಚಿತ್ರರಂಗದಲ್ಲಿ ಬದಲಾವಣೆಯ ಗಾಳಿ ಕೂಡಾ ಬೀಸಿತ್ತು. ಅದೇ ಗಾಳಿಯಲ್ಲಿ ಭಟ್ಟರು ಗಾಳಿಪಟವನ್ನ ಹಾರಿಸಿದ್ದರು. ಈಗ ಲವ್ ಈಸ್ ಇನ್ ದಿ ಏರ್ ಅಂತ ಮತ್ತೊಮ್ಮೆ ಹೇಳಿದ್ದಾರೆ.

ಬೇರೆ ನಿರ್ದೇಶಕರಾಗಿದ್ರೆ ಗಾಳಿಪಟ ಹಿಟ್ಟಾದಾಗ್ಲೇ ಅದರ ಸೀಕ್ವೆಲ್ ಮಾಡ್ತಾ ಇದ್ರು. ಆದರೆ ಇಷ್ಟು ವರ್ಷಗಳ ನಂತರ ಅದರ ಸೀಕ್ವೆಲ್ ಮಾಡಿರೋದ್ರಿಂದ ಭಟ್ಟರ ಮನೋಭಾವವನ್ನು ಗಾಳಿ ಬಂದ ಕಡೆ ತೂರಿಕೋ ಅಂತ ಅರ್ಥೈಸೋಕಾಗಲ್ಲ. ಅದೇ ಮೂರು ಜನ ಹೀರೋಗಳ ಕಥೆ ಆದ್ರೂ, ಮೂರು ಮತ್ತೊಂದು ಅನ್ನೋ ಥರದ ಸಿನಿಮಾ ಖಂಡಿತ ಅಲ್ಲ. ಈ ಚಿತ್ರದಲ್ಲಿ
ಪಾತ್ರ ಗಳು ಅರಳೋ ಜಾಗಗಳೇ ಒಂಥರಾ ವಿಭಿನ್ನ. ಈ ಚಿತ್ರದಲ್ಲೂ ನೀರುಕೋಟೆಯಲ್ಲಿ ಕನ್ನಡ ಕಲಿಕೆಯ ಮೂಲಕ ಸಿನಿಮಾ ತೆರೆದುಕೊಳ್ಳುತ್ತೆ. ಭಟ್ಟರ ಸಿನಿಮಾ ಅಂದ್ರೆನೇ ಅದೊಂಥರಾ ಆಧುನಿಕ ಕನ್ನಡ ಪಾಠಶಾಲೆ.

ಅಂಥದ್ರಲ್ಲಿ ಈ ಸಿನಿಮಾದಲ್ಲಿ ಕನ್ನಡ ಕಲಿಸಕ್ಕೆಂದೇ ಒಂದು ಪ್ರತ್ಯೇಕ ಶಾಲೆ ಇದೆ. ಮೂವರು ನಾಯಕರು, ಮೂವರು ನಾಯಕಿ
ಯರು ಇದ್ದರೂ ಯಾರಿಗೂ ಅವಕಾಶ ಇಷ್ಟೇ ಯಾಕಿದೆಯೋ ಅನ್ನುವಂತಿಲ್ಲ. ಎಲ್ಲರ ಪಾತ್ರಗಳಿಗೂ ತೂಕ ಇದೆ. ಆದರೂ ಅವು
ಗಾಳಿಪಟದಂತೆ ಹಾರಾಡುವಷ್ಟು ಹಗುರವಾಗಿನೂ ಇವೆ. ಕೆಲವು ದಿನಗಳ ಹಿಂದೆ, ನಾನು ಹಿಂದಿ ಪಂಡಿತ ಕೂಡಾ ಎಂದಾಗ ಯೋಗರಾಜ್ ಭಟ್ಟರ ಕನ್ನಡ ಪ್ರೇಮವನ್ನು ಟ್ರೋಲ್ ಮಾಡಿದವರೂ ಕೂಡ ಈ ಸಿನಿಮಾದಲ್ಲಿ ಅವರ ಕನ್ನಡತನ ನೋಡಿ, ನೋಡಿ ಮರುಳಾಗುತ್ತಾರೆ. ಒಟ್ಟಿನಲ್ಲಿ, ಮುಂಗಾರು ಮಳೆ, ಗಾಳಿಪಟ, ಮುಗುಳುನಗೆ ಚಿತ್ರಗಳನ್ನು ಇಷ್ಟಪಟ್ಟವರಿಗೆ ಗಾಳಿಪಟ ೨ ಇಷ್ಟಪಡದೇ ಇರೋಕೆ ಕಾರಣಗಳೇ ಇಲ್ಲ ಅಂತ ಹೇಳಬಹುದು.

ಲೂಸ್ ಟಾಕ್
ಯೋಗರಾಜ ಭಟ್ (ಕಾಲ್ಪನಿಕ ಸಂದರ್ಶನ)
ಏನ್ಸಾರ್, ಮತ್ತೆ ಗಾಳಿಪಟ ಹಾರಿಸ್ತಾ ಇದ್ದೀರಾ?
-ಏನ್ ಮಾಡೋದ್ರೀ, ಇಷ್ಟು ದಿನ ಕಾಗೆ ಹಾರಿಸಿದೋರೆಲ್ಲ, ಮನೆ ಮೇಲೆ ಬಾವುಟ ಹಾರಿಸೋದ್ರ ಬಗ್ಗೆ ಮಾತಾಡ್ತಾ ಇದ್ದಾರೆ, ಅದಕ್ಕೆ ನಾನು ಸುಮ್ನೆ ಗಾಳಿಪಟ ಹಾರಿಸ್ಕೊಂಡ್ ಕೂತ್ಕಂಡಿದ್ದೀನಿ

ಅದೂ ಒಳ್ಳೇದೇ ಬಿಡಿ, ಅಂದಹಾಗೆ, ಗಾಳಿ ಪಟ ಹೆಂಗೆ ಓಡ್ತಾ ಇದೆ, ಸಾರಿ, ಹೆಂಗೆ ಹಾರ್ತಾ ಇದೆ?
-ಹಾಡ್ತಾ ಹಾಡ್ತಾ ರಾಗ ಅಂತಾರೆ, ಹಂಗೇ ಯೋಗರಾಜ್ ಭಟ್ಟರ ಸಿನಿಮಾ ಅನ್ನೋ ಕಾರಣಕ್ಕೆ ಹಾರ್ತಾ ಹಾರ್ತಾ ಯೋಗ ಅಂತಿzರೆ ನಮ್ಮ ನಿರ್ಮಾಪಕರು.

ಸರಿ, ಸಿನಿಮಾದ ನಿರೂಪಣೆಯಲ್ಲಿ ಬರೀ ಪ್ರಯಾಣ ಜಾಸ್ತಿ ಇದೆಯಂತೆ?
-ಹೌದ್ರೀ, ಸಿನಿಮಾ ಹೆಸರು ಗಾಳಿಪಟ. ಆದ್ರೆ ಇದು ಜರ್ನಿ ಸಿನಿಮಾ. ಹಾಗಾಗಿ ಸಿನಿಮಾದ ಪ್ರಯಾಣ ಗಾಳಿಗಿಂತ, ಗಾಲಿಗಳ ಮೇಲೇ ಜಾಸ್ತಿ.

ಗಾಳಿಪಟದಂಥ ಸಿನಿಮಾ ನಿರ್ದೇಶನ ಮಾಡೋದು ಕಷ್ಟ ಆಯ್ತಾ?
-ಆಗದೇ ಇನ್ನೇನು. ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಿರ್ದೇಶಕನೇ ಸೂತ್ರಧಾರ. ಆದರೆ, ಇದು ಗಾಳಿಪಟ ಆದ್ರಿಂದ, ಇಲ್ಲಿ ಸೂತ್ರ ಮತ್ತು ದಾರದ ಕಡೆನೂ ಗಮನ ಕೊಡ್ಬೇಕು.

ತುಂಬಾ ಜನಕ್ಕೆ ನಿಮ್ಮ ಸಿನಿಮಾ ಇಷ್ಟ ಆಗಿದೆ, ಆದ್ರೂ ಕೆಲವರು ಕೊಂಕು ತೆಗೀತಾ ಇದ್ದಾರಲ್ಲ?
-ಪ್ರಯಾಣ ಮಾಡುವಾಗ ವಿಂಡೋ ಸೀಟ್ ಬೇಕು ಅನ್ನೋರಲ್ಲಿ ಎರಡು ಕೆಟಗರಿ. ಒಂದು ವಾಂತಿ ಬರುತ್ತೆ ಅನ್ನೋರು, ಪ್ರಕೃತಿ ಸೌಂದರ್ಯ ಅನುಭವಿಸೋರು. ಗಾಳಿಪಟ ನೋಡಿದ ಮೇಲೆ, ನಿಮಗೆ ಸಿನಿಮಾ ಇಷ್ಟ ಆಯ್ತೋ ಇಲ್ವೋ ಅನ್ನೋದು, ನೀವು ಯಾವ ಕೆಟಗರಿಯ ಜನ ಅನ್ನೋದನ್ನ ನಿರ್ಧಾರ ಮಾಡುತ್ತೆ.

ನೆಟ್ ಪಿಕ್ಸ್ 
ಖೇಮು ಜಟಕಾ ಗಾಡಿ ಓಡಿಸ್ತಾ ಜೀವನ ಮಾಡ್ತಾ ಇದ್ದ. ಒಂದಿನ ಅವನು ಹೈ ವೇನಲ್ಲಿ ಹೋಗುವಾಗ ಅವನ ಗಾಡಿಗೆ ಕಾರೊಂದು ಬಂದು ಗುದ್ದಿ, ಖೇಮು ಗಂಭೀರವಾಗಿ ಗಾಯಗೊಂಡ, ಅವನ ಜಟಕಾದ ಕುದುರೆ ಸತ್ತು ಹೋಯಿತು. ಖೇಮುಗೆ ಇದರಿಂದ ತುಂಬಾ ಲಾಸ್ ಆಯ್ತು. ಅದಕ್ಕೆ ಅವನು ಆಸ್ಪತ್ರೆ ಸೇರಿ, ಹುಷಾರಾದ ಮೇಲೆ ಕೋರ್ಟ್‌ಗೆ ಮೊರೆ ಹೋದ. ನನ್ನ ಗಾಡಿಗೆ ಗುದ್ದಿ ಈ ಕಾರಿನವನು ನಂಗೆ ಲಾಸ್ ಮಾಡಿದ್ದಾನೆ, ನನ್ನ ಆಸ್ಪತ್ರೆ ಬಿಲ್ ಕೂಡ ಸಿಕ್ಕಾಪಟ್ಟೆ ಆಗಿದೆ, ಹಾಗಾಗಿ ನಂಗೆ ಪರಿಹಾರ ಕೊಡಿಸಿ ಅಂತ. ಕೋರ್ಟ್‌ನಲ್ಲಿ ವಿಚಾರಣೆ ಶುರುವಾಯ್ತು.

ಕೇಸಿನಲ್ಲಿ ಇನ್‌ವಾಲ್ವ ಆಗಿದ್ದ ಪೊಲೀಸ್ ಇಪೆಕ್ಟರ್ ಕೋರ್ಟಿನಲ್ಲಿ ಬಂದು, ಖೇಮು ಸುಳ್ಳು ಹೇಳ್ತಾ ಇದ್ದಾನೆ. ಆಕ್ಸಿಟೆಂಟ್ ಆಗಿ ಬಿದ್ದಿದ್ದಾಗ ನಾನೇ ಅವನನ್ನು ಹೋಗಿ ಆರ್ ಯೂ ಓಕೆ? ಅಂತ ಕೇಳಿದೆ. ಆಗ ಅವನು ಐ ಆಮ್ ಫೋನ್ ಅಂತ ಹೇಳಿದ್ದ. ಈಗ ಮಾತ್ರ ಹಣಕ್ಕಾಗಿ ಅವನು ಸುಳ್ಳು ಹೇಳ್ತಾ ಇದ್ದಾನೆ ಅಂತ ವಾದಿಸಿದ. ಅದಕ್ಕೆ ಖೇಮು, ಅ ಸಾರ್ ನನ್ನ ಕುದುರೆ… ಅಂತ ಹೇಳೋಕೆ ಹೊರಟ ತಕ್ಷಣ ಆಪೋಸಿಟ್ ಲಾಯರ್ ಅಥವಾ ಇನ್ಸ್‌ಪೆಕ್ಟರ್ ಬಾಯ್ ಮುಚ್ಚು ಅಂತ ಬೈತಾ ಇದ್ರು. ಹಾಗಾಗಿ ಖೇಮು ಎಷ್ಟೇ ಕಷ್ಟಪಟ್ಟರೂ ಹೇಳಬೇಕಾದ್ದನ್ನು ಹೇಳೋಕಾಗಲಿಲ್ಲ. ಆಗ ಅವನ ಪಾಡು ನೋಡಿದ ಜಸ್ಟ್ ಅವನೇನೋ ಹೇಳ್ತಾ ಇzನೆ ಹೇಳೋಕ್ ಬಿಡಿ ಅಂದ್ರು. ಆಗ ಖೇಮು ಹೇಳೋಕ್ ಶುರು ಮಾಡಿದ. ಮಹಾಸ್ವಾಮಿ, ನಾನು ಆಕ್ಸಿಡೆಂಟ್ ಆಗಿ ಬಿದ್ದಿದ್ದೆ.

ನಾನು ಬದುಕ್ತೀನಿ ಅನ್ನೋ ನಂಬಿಕೆನೂ ನನಗಿರಲಿಲ್ಲ. ಆಗಲೋ ಈಗಲೋ ಸಾಯೋ ಥರ ಇದ್ದೆ. ಆ ಸಮಯದಲ್ಲಿ ಈ ಇಪೆಕ್ಟರ್ ಅಲ್ಲಿಗೆ ಬಂದ್ರು. ಮೊದಲು ನನ್ನ ಕುದುರೆ ಹತ್ರ ಹೋಗಿ, ಅದನ್ನ ಆರ್ ಯೂ ಓಕೆ? ಅಂತ ಮಾತಾಡಿಸಿದ್ರು. ಅದು ಅಡಲಿಲ್ಲ. ಆದ್ರೆ ಅದು ಉಸಿರಾಡುತ್ತಿತ್ತು. ಮೈ ತುಂಬಾ ಗಾಯ ಆಗಿದ್ವು. ತುಂಬಾ ನರಳಾಡ್ತಾ ಇತ್ತು. ಅದನ್ನು ನೋಡಿದ ಈ ಇಪೆಕ್ಟರ್, ನೀನು ಬದುಕಿದ್ದು ಕಷ್ಟ ಪಡೋಕ್ಕಿಂತ ಸಾಯೋದೇ ಮೇಲು ಅಂತ ಅದಕ್ಕೆ ಗುಂಡು ಹಾರಿಸಿ ಕೊಂದರು. ಆ ನಂತರ ನನ್ನತ್ರ ಬಂದು ಆರ್ ಯೂ ಓಕೆ? ಅಂತ ಕೇಳಿದ್ರು. ನೀವೇ ಹೇಳಿ ಮಹಾಸ್ವಾಮಿ ಆ ಸಮಯದಲ್ಲಿ ನನಗೆ ಐ ಆಮ್ ಓಕೆ ಅಂತ
ಹೇಳದೆ ಬೇರೆ ದಾರಿ ಇತ್ತಾ ?

ಲೈನ್ ಮ್ಯಾನ್
ಮೋದಿ ವಿರೋಧಿಯ ಮಾತು
ಬಹಳ ವರ್ಷ ಆದ್ಮೇಲೆ ಪ್ರೈಮರಿ ಸ್ಕೂಲ್ ಗೆಳೆಯ ಸಿಕ್ಕಿದ್ದ. ತುಂಬಾ ಖುಷಿಯಾಗಿ ಮಾತಾಡ್ಸೋಣ ಅಂತ ಹೋದೆ.
ನೋಡಿದ್ರೆ, ಮೋದಿ ಭಕ್ತ ಆಗ್ಬಿಟ್ಟಿದ್ದಾನೆ.. ‘ದೋಸ್ತಿ ಬನೀ ರಹೇ’ ಅಂತ ಹೇಳಿ ಎದ್ದು ಬಂದೆ.

ಈ ವಾರದ ಸ್ಯಾಂಡಲ್ ವುಡ್ ಡೌಟು
-ರವಿ ಬೋಪಣ್ಣ ರಿಲೀಸ್ ಅಯ್ತಂತೆ ಹೌದಾ? ಮೋಸ್ಟ್‌ಲೀ ಸಸ್ಪೆ ಸಿನಿಮಾ ಇರ್ಬೇಕು. ಆದ್ರೂ, ರಿಲೀಸ್ ಆಗಿದ್ದೂ, ಯಾರಿಗೂ ಗೊತ್ತಾಗಬಾರದು ಅನ್ನೋ ಲೆವೆಲ್ಲಿಗಾ?

ಯಾರನ್ನಾದ್ರೂ ಪರೀಕ್ಷೆ ಮಾಡಬೇಕು ಅಂತ ಅವರಿಗೆ ಸಚಿವ ಸ್ಥಾನ ಕೊಟ್ರೆ ಅದು
-ಸಂಪುಟಕ್ಕಿಟ್ಟ ಚಿನ್ನ

ಹೋಮ್ ಮಿನಿಸ್ಟರ್‌ನ ಕನ್ನಡದಲ್ಲಿ ಗೃಹ ಮಂತ್ರಿ ಅಂತಾರೆ.

-ಆಕ್ಚುವಲಿ, ಅದು ವಸತಿ ಸಚಿವ ಆಗಬೇಕಲ್ವಾ?
ಮಿರರ್ ಮಾರುವವನಿಗೆ ಒಂದು ಹೆಸರು

-‘ಕನ್ನಡಿ’ಗ
ಗೆಳೆಯರ ಕಾರುಬಾರು
‘ನೀನಿಷ್ಟೊತ್ತಿಗೆ ಒಂದ್ ಕಾರ್ ತಗೊಂಡಿರಬೇಕಿತ್ತು ಕಣೋ’ ‘ಏನ್ ಕಿಂಡಲ್ ಮಾಡ್ತಾ ಇದ್ದಿಯಾ?’ ‘ಒಳ್ಳೇದ್ ಹೇಳಿದ್ರೆ ಹಿಂಗಂತೀಯ ನೋಡು, ಹೇಳೋದನ್ನ ಸ್ಪೋರ್ಟಿವ್ ಆಗಿ ತಗೋಳ್ಳೋ’ ‘ಸ್ಪೋರ್ಟಿವ್ ಆಗಿ ತಗೊಳ್ಳೋಕೋದ್ರೆ ಸ್ಪೋರ್ಟ್ಸ್ ಕಾರೇ ತಗೋಬೇಕಾಗುತ್ತೆ, ಬ್ಯಾಡ ಬಿಡು ’

ನಳಿನ್ ಕಟೀಲ್ ಭಾರತದ ಬಾವುಟನ ಉಲ್ಟಾ ಹಾಕ್ಕೊಂಡಿದ್ರಂತೆ
-ಬಾವುಟನೇ ಉಲ್ಟಾ ಹಾಕ್ಕೊಂಡವರು ದೇಶನ ನೆಟ್ಟಗೆ ನಡೆಸ್ತಾರಾ?

ಮಿತಿಮೀರಿದ ಆಭಾಸ
-ನಿದ್ದೆ ಮಾಡುವಾಗ ಕನಸಲ್ಲೂ ನಿದ್ದೆ ಮಾಡೋ ಥರ ಕನಸು ಬೀಳೋದು.