Sunday, 22nd May 2022

ಸಣ್ಣ ಹಠವ ಮಾಡಿದೆ ಹೃದಯ ಆ ದಿನ

ಚಂದ್ರಶೇಖರ ಹೆಗಡೆ

ಪುನೀತರ ಬದುಕು ಶಬ್ದಸೂತಕವಾಗದ ಮಹಾಕಾವ್ಯವಾಗಿತ್ತೆಂಬುದಕ್ಕೆ ಅವರ ನಿಸ್ಪೃಹ ಜೀವನದ ಲಯರಾಗಗಳೇ ನಿದರ್ಶನ ಗಳಾಗಿವೆ. ನಲವತ್ತಾರು ಅಧ್ಯಾಯಗಳ ಪುನೀತ ಮಹಾಕಾವ್ಯವೊಂದು ಕುರಿತೋದದೆಯೂ ನಾಡವರ ಆಂತರ್ಯದೊಳಗಿಳಿದಿದೆ ಎಂಬುದಕ್ಕೆ ಲಕ್ಷಾಂತರ ಅಭಿಮಾನಿಗಳ ಕಣ್ಣೀರು ಸಾಕ್ಷ್ಯ ನುಡಿಯುತ್ತದೆ. ತನ್ನ ವೈವಿಧ್ಯ ಮಯ ಚಲನಚಿತ್ರಗಳ ಮೂಲಕ ಶೃಂಗಾರ, ಹಾಸ್ಯ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ರಸಗಳ ಮಿಲನದ ಸವಿಯನ್ನುಣ ಬಡಿಸಿದ ಕಾವ್ಯವೊಂದು ಕೊನೆಗೆ ಶೋಕವನ್ನೂ ಇನ್ನಿಲ್ಲದ ಹೊಳೆಯಾಗಿ ಹರಿಸಿದ್ದು ಇನ್ನು ನೆನಪು ಮಾತ್ರ. ಸಾವೊಂದು ಈ ಬಗೆಯಲ್ಲಿ ಕಾಡಬಹುದೆಂದು ನಾನು ಊಹಿಸಿರಲಿಲ್ಲ. ಸತ್ಯವನ್ನೇ ನಡುಗಿಸಬಲ್ಲ ಅನಭಿಷಕ್ತತೆ ಯೊಂದು ಸಾವಿಗೆ ಹೀಗೆ ಪ್ರಾಪ್ತವಾಗುವುದೇ ವಿಸ್ಮಯವನ್ನುಂಟು ಮಾಡುತ್ತದೆ.

ಸಾವೊಂದು ಈ ಬಗೆಯಲ್ಲಿ ಕಾಡಬಹುದೆಂದು ನಾನು ಊಹಿಸಿರಲಿಲ್ಲ. ಸತ್ಯವನ್ನೇ ನಡುಗಿಸಬಲ್ಲ ಅನಭಿಷಕ್ತತೆಯೊಂದು ಸಾವಿಗೆ ಹೀಗೆ ಪ್ರಾಪ್ತವಾಗುವುದೇ ವಿಸ್ಮಯವನ್ನುಂಟು ಮಾಡುತ್ತದೆ. ‘ಮರಣವೇ ಮಹಾನವಮಿ’ ಎಂಬುದನ್ನು ಶರಣರು ಇಂತಹ ಅಕಾಲಿಕ ಸಾವನ್ನು ಕುರಿತು ಹೇಳಿರಲಿಕ್ಕಿಲ್ಲ. ‘ಜಾತಸ್ಯ ಮರಣಂ ಧ್ರುವಂ’ ಎಂಬುದು ಸತ್ಯವಾದರೂ ಹೊತ್ತಲ್ಲದ ಹೊತ್ತಿನಲ್ಲಿ ಧುತ್ತನೆ ಬಂದೆರಗಿದ ಈ ಸಾವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ನಾಡವರಿಗೆ.

ಸ್ವಾಮಿ ವಿವೇಕಾನಂದರು 1893 ರ ತಮ್ಮ ಚಿಕ್ಯಾಗೋದ ವಿಶ್ವಧರ್ಮ ಸಮ್ಮೇಳನದ ಭಾಷಣ ದಲ್ಲಿ ಹೇಳಿದ ಸಾವಿಗೆ ಸಂಬಂಽಸಿದ ಕಥೆಯೊಂದು ಹೀಗಿದೆ – ನಿಕೋಡಾಮಸ್ ಎನ್ನುವ ಶಿಷ್ಯನೊಬ್ಬ ತನ್ನ ಗುರುವನ್ನು ಕುರಿತು ‘ಗುರುಗಳೇ ಸಾವನ್ನು ಗೆಲ್ಲುವ ಬಗೆ ಹೇಗೆ?’ ಎಂದು ಕೇಳುತ್ತಾನೆ. ಸಮಾಧಾನದಿಂದಲೇ ಉತ್ತರಿಸಿದ ಆತನ ಧರ್ಮಗುರು ‘ಸಾವನ್ನು ಗೆಲ್ಲ ಬೇಕಾದರೆ ನೀನು ತಪಸ್ಸು ಮಾಡಬೇಕಿಲ್ಲ; ಅನ್ನಾಹಾರಗಳನ್ನು ತ್ಯಜಿಸಿ ಶಕ್ತಿಯನ್ನೊಲಿಸಿ ಕೊಳ್ಳಬೇಕಾಗಿಲ್ಲ; ನೀನು ಮಾಡಬೇಕಾಗಿರುವುದು ಇಷ್ಟೇ ‘ಬಿ ಬಾರ್ನ್ ಅಗೈನ್’ – ‘ಮತ್ತೊಮ್ಮೆ ಹುಟ್ಟಿಬಾ’.

‘ಅದು ಹೇಗೆ ಸಾಧ್ಯ ಗುರುಗಳೇ! ಹಾಗಾದರೆ ನಾನೀಗಲೇ ಈ ನದಿಯಲ್ಲಿ ಹಾರಿಬಿಡಲೇ’ ಎಂದ ಶಿಷ್ಯನ ಮಾತಿಗೆ ಮುಗುಳ್ನಕ್ಕ ಗುರು ಗಳು ‘ನಾನು ಹೇಳುತ್ತಿರುವುದು ಭೌತಿಕ ಮರಣದ ಕುರಿತಲ್ಲ; ಆಂತರಂಗದೊಳಗಿನ ಅಂತ್ಯವನ್ನು ಕುರಿತು’ ಎಂದರು. ಹೌದು. ಒಂದು ಮರೆಯ ಲಾಗದ ಭೌತಿಕ ಸಾವನ್ನು ಅರಗಿಸಿಕೊಳ್ಳಲಾಗದೆ ಅಂತರಂಗದಲ್ಲಿಯೇ ಕಳೆದುಹೋದವರ ಕನ್ನಡಿಗರ ಕರ್ಮ ಕಥೆಯನ್ನು ಏನೆಂದು ಬಣ್ಣಿಸುವುದು? ಒಲ್ಲದ ಮನಸಿನಿಂದಲೇ ಭೌತಿಕ ಮರಣವನ್ನು ಸ್ವೀಕರಿಸಿ, ಏಕಕಾಲಕ್ಕೆ ನಾಡವರ ಅಂತರಂಗದೊಳಗೆ ಪುನರ್ಜನ್ಮ ಪಡೆದು ಕೊಂಡ ತಾರೆಯಾಗಿ ಬೆಳಗುತ್ತಿರುವವರು ಡಾ. ರಾಜ ಕುಮಾರರವರ ಕುಟುಂಬದ ಚೈತನ್ಯದ ಕುಡಿ ಪುನೀತರೆಂಬುದನ್ನು ನಂಬಲಾಗುತ್ತಿಲ್ಲ.

‘ಅವರ ಅಭಿಮಾನಿಯೂ ಅಲ್ಲ; ಅವರ ಸಿನೇಮಾಗಳನ್ನೂ ನಾನು ನೋಡಿಲ್ಲ, ಆದರೂ ಇಂದೆನಗೆ ಸಹೋದರನನ್ನೇ ಕಳೆದು ಕೊಂಡ ದುಃಖ ಆವರಿಸಿಕೊಂಡಿದೆ’ ಎಂದ ಗೆಳೆಯರೊಬ್ಬರ ಮಾತು ಪುನೀತ್ ಹೇಗೆ ಕನ್ನಡಿಗರ ಅಂತರಂಗದೊಳಗೆ ಇಳಿದು ಹೋಗಿದ್ದರೆಂಬುದನ್ನು ತೋರಿಸಿಕೊಡುತ್ತದೆ.

ಗೊತ್ತಿಲ್ಲದೇ ಹೃದಯದಲಿ ಇದೇನಿದು ನದಿಯೊಂದು ಓಡಿದೆ ಎಂಬಂತೆ ಗುಪ್ತಗಾಮಿನಿಯಾಗಿ ಅಭಿಮಾನಿ ದೇವರುಗಳ ಎದೆ ಯೊಳಗೆ ಇಳಿದುಹೋದ ಪುನೀತರು ನಿಜವಾದ ಅರ್ಥದಲ್ಲಿಯೂ ರಾಜ ಕುವರನೇ. ಈಗಲೂ ನಮಗೆ ಜನಪದ ಕಥೆಯಲ್ಲಿ ಯಂತೆ ಅವರು ದೂರದ ಯಾವುದೋ ಮಾಂತ್ರಿಕ ಲೋಕಕ್ಕೇ ಇನ್ಯಾವುದೋ ಸಾಧನೆಗಾಗಿ ತೆರಳಿರಬೇಕು ಎಂದೆನಿಸಿದರೆ ಅಚ್ವರಿಯೇ ನಿಲ್ಲ. ಇಲ್ಲಿ ಸಂದು ಅಲ್ಲಿಯೂ ಸಲ್ಲಬೇಕೆಂದು ಎದ್ದು ಹೊರಟ ಅವರ ಇಹ ಲೋಕದ ಯಾತ್ರೆಯನ್ನು ಅಬಾಲವೃದ್ಧರಾದಿಯಾಗಿ ಯಾರಿಗೂ ಒಪ್ಪಲಾಗು ತ್ತಿಲ್ಲ. ‘ಜೀವನ ಮತ್ತು ಸಾವು ಬೇರೆಯಲ್ಲ, ಅವೆರಡೂ ಒಂದೇ’ ಎಂಬ ಜಿಡ್ಡು ಕೃಷ್ಣಮೂರ್ತಿಯವರ ಚಿಂತನೆಯನ್ನು ವಾಸ್ತವಿಕವಾಗಿ ವ್ಯಾಖ್ಯಾನಿಸ ಲಾಗುತ್ತಿಲ್ಲದ ಸ್ಥಿತಿಗೆ ನಮ್ಮನ್ನು ತಂದೊಡ್ಡಿದೆ ಪುನೀತರ ಅಗಲಿಕೆ. ‘ಸಾವು ಒಂದು ಕಟು ವಾಸ್ತವ. ಅಪರಿಚಿತ ಎನಿಸಿದ ಅದರೊಂದಿಗೇ ನಾವು ಜೀವನ ಕಳೆಯಬೇಕು’ ಎಂದು ಕೃಷ್ಣ ಮೂರ್ತಿಯವರು ಸಾವನ್ನೆದುರಿಸುವ ತತ್ವಶಾಸೀಯವಾದ ವ್ಯಾಖ್ಯಾನವನ್ನೇನೋ ನೀಡಿದರೂ ವಾಸ್ತವದ ಸತ್ಯದೊಂದಿಗೆ ಮುಖಾಮುಖಿಯಾಗುವ ಧೈರ್ಯ ನಮಗಿನ್ನೂ ಬಂದೊದ ಗುತ್ತಿಲ್ಲ. ಶಬ್ದಸೂತಕಕ್ಕೂ ನಿಲುಕದ ಸಾವನ್ನು ಕುರಿತು ಮಾತ ನಾಡುವುದೆಂದರೆ ದುಸ್ಸಾಹಸವೇ ಸರಿ. ಗೊತ್ತಿಲ್ಲದುದರ ಗೋಜಿಗೆ ಹೋಗುವುದು ಬೇಡ. ಪುನೀತರೆಡೆಗೆ ಬರೋಣ.

ಪುನೀತರ ಬದುಕು ಶಬ್ದಸೂತಕವಾಗದ ಮಹಾಕಾವ್ಯವಾಗಿತ್ತೆಂಬುದಕ್ಕೆ ಅವರ ನಿಸ್ಪೃಹ ಜೀವನದ ಲಯರಾಗಗಳೇ ನಿದರ್ಶನ ಗಳಾಗಿವೆ. ನಲವತ್ತಾರು ಅಧ್ಯಾಯಗಳ ಪುನೀತ ಮಹಾಕಾವ್ಯವೊಂದು ಕುರಿತೋದದೆಯೂ ನಾಡವರ ಆಂತರ್ಯ ದೊಳಗಿಳಿದಿದೆ ಎಂಬುದಕ್ಕೆ ಲಕ್ಷಾಂತರ ಅಭಿಮಾನಿಗಳ ಕಣ್ಣೀರು ಸಾಕ್ಷ್ಯ ನುಡಿಯುತ್ತದೆ. ತನ್ನ ವೈವಿಧ್ಯಮಯ ಚಲನಚಿತ್ರಗಳ ಮೂಲಕ ಶೃಂಗಾರ, ಹಾಸ್ಯ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ರಸಗಳ ಮಿಲನದ ಸವಿಯನ್ನುಣಬಡಿಸಿದ ಕಾವ್ಯವೊಂದು ಕೊನೆಗೆ ಶೋಕವನ್ನೂ ಇನ್ನಿಲ್ಲದ ಹೊಳೆಯಾಗಿ ಹರಿಸಿದ್ದು ಇನ್ನು ನೆನಪು ಮಾತ್ರ.

ಅದಾವ ಸಿನೇಮಾವನ್ನೂ ತನ್ನಂತರಂಗದೊಳಗೆ ಅಷ್ಟು ಸಲೀಸಾಗಿ ಹರಿಸಿಕೊಳ್ಳದ ನನ್ನ ಭಾಮಿನಿಗೆ ಯುವರತ್ನ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಶಿವಮಂದಿರದಂತಿದ್ದ ನಾಡನ್ನಗಲಿ ಇದ್ದಕ್ಕಿದ್ದಂತೆ ಎದ್ದುಹೋದ ಪರಮಾತ್ಮನ ಸನ್ನಿಧಿಯನ್ನು ಮುಂದೆ ಅನುಭವಿಸುವುದೆಂತು ಎಂದು ಗೋಳಾಡಿದ ಆಕೆಯ ಸಮಾಧಾನಕ್ಕೆ ವಾರಗಟ್ಟಲೆ ಕಾಯಬೇಕಾಯಿತು.

ಪರವಶನಾದೆನು ಅರಿಯುವ ಮುನ್ನವೇ ಪರಿಚಿತನಾಗಲಿ ಹೇಗೆ ಎಂದು ಹಾಡಿದ ಹೃದಯವಿಂದು ಮರಳುವುದಿಲ್ಲವೆನ್ನುವುದೇ ಕಂಠವನ್ನು ಬಿಗಿಯುವಂತೆ ಮಾಡುತ್ತದೆ. ‘ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು’ ಎಂದು ರಾಜಣ್ಣನವರು ಆಡಿಸಿದ ಬೊಂಬೆಯಿಂದು ದಿಗ್ಗನೆ ಉರುಳಿ ಹೋದ ದೃಶ್ಯ ಎಂಥವರ ಕರುಳನ್ನೂ ಹಿಂಡಿಬಿಡುತ್ತದೆ. ಆಡಿಸುವಾತನ ಕೈಚಳಕ ದಲಿ ಎಲ್ಲವಡಗಿದ್ದರೂ, ಬೊಂಬೆಯನ್ನಾಡಿಸುವ ಕೈಗಳು ಕಾಲವಲ್ಲದ ಕಾಲದಲ್ಲಿ ಸೋತುಹೋಗಿರುವುದು ದಿಗ್ಭ್ರಮೆಯನ್ನುಂಟು ಮಾಡಿದೆ.

ತಾನೆ ಉರಿದು ಮನೆಗೆ ಬೆಳಕು ಕೊಡುವ ದೀಪವಿದು ನಂದಾ ದೀಪವೇ ಇದು ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು
ಸಮಯದ ಸೂತ್ರ ಅವನದು ಎಂದಿದ್ದರೂ, ಬೆಳಗುವ ನಂದಾದೀಪವೊಂದು ನಂದಿ ಹೋಗಿ ನಾಡಿನ ತುಂಬೆ ಕತ್ತಲಾವರಿಸಿದ ದೌರ್ಭಾಗ್ಯ ನಮ್ಮದು. ನಮ್ಮದೇ ಮನೆಯ ಮಗುವೆಂಬಂತೆ ಮುದ್ದಾಡಿ ಬೆಳೆಸಿದ ಕೂಸೊಂದು ಕಾಣದಂತೆ ಮಾಯವಾದಾಗ ಅನು
ಭವಿಸುವ ಸಂಕಟವನ್ನಂತೂ ಹೇಳತೀರದು ಎನ್ನುತ್ತಾಳೆ ಹೆತ್ತ ಸಾಕಿ.

೧೯೭೭ ರ ಸುಮಾರಿನಲ್ಲಿ ಮದ್ರಾಸಿನಲ್ಲಿದ್ದ ಡಾ.ರಾಜ ಕುಮಾರರ ಮನೆಗೆ ಹೋಗಿ ಪಾರ್ವತಮ್ಮನವರ ಕಂಕುಳಲ್ಲಿದ್ದ ಲೋಹಿತ ನನ್ನು ಎದೆಗಪ್ಪಿಕೊಂಡು ಬಂದ ನನ್ನ ಸಾಕಿಗಿಂದು ಹೃದಯವೇ ಒಡೆದು ಹೋದ ಭಾವ ಕಾಡುತ್ತಿರುವುದನ್ನು ನೋಡಲಾ ಗುತ್ತಿಲ್ಲ. ಆರೇಳು ತಿಂಗಳ ಹಸುಳೆಯಾಗಿದ್ದ ಸಮಯವಲ್ಲದ ಸಮಯದಲ್ಲಿ ಹಚ್ಚಿದ ಬಣ್ಣವಿನ್ನೂ ಮಾಸುವ ಮುನ್ನವೇ ಕಮರಿ ಹೋದಂತಾಗಿದೆ ಆಂಜನೀ ಪುತ್ರನ ಕನಸು. ಭಾರವಾಗಿದೆ ಕೋಟಿ ಕನ್ನಡಿಗರ ಮನಸು. ಅ ಇರುವ ಸಾವು ಮನೆಯ ಬಾಗಿಲೊಳಗೆ ಕಾಲಿಟ್ಟ ಅನುಭವ ದಂಗುಬಡಿಸಿದೆ. ಇಂತಹ ಸಾವಿನಿಂದ ಭೂಕಂಪನಕ್ಕೂ ಮಿಗಿಲಾದ ಅಂತರಂಗದ ಆಲಾಪನ ಮೇರೆ ಮೀರಿದೆ.

ದುರ್ವಿಧಿ ತನಗೆ ಪ್ರಿಯವಾದುದನ್ನು ಪಡೆದುಕೊಂಡು ತೇಗಿದೆಯಷ್ಟೆ. ಕನಸುಗಳ ಕದ್ದೊಯ್ದ ವಿರಾಟ ವಿಧಿಯೇ ಹೃದಯ ವನ್ನೇಕೆ ಒಡೆಯುವೆಯಿಂತು ಮಾಯೆ ನಿಂತು ಹೋಯಿತೇ ಕನ್ನಡಿಗರ ಆರ್ಭಟದ ಮಾತು ಬಾಳುವುದೆಂತು ತಾಯೆ ಹೀಗೆ ಭವಿಷ್ಯವ ಹೂತು ಎಂದು ಕನ್ನಡಮ್ಮನ ಸಂಕಟ ನೆನೆದು ನಾನು ವಿಧಿಯನ್ನು ಶಪಿಸಿದ ಬಗೆಯಿದು. ನಮಗೆ ಶಬ್ದಾರ್ಥಗಳಲ್ಲಿ ಮಾತ್ರ ಹೀಗೆ ನಿಲುಕಬಹುದಾದ ಮರಣದ ನಿಗೂಢ ರಹಸ್ಯವನ್ನರಿತವರಾರು? ನಾವೆಲ್ಲರೂ ಬದುಕುತ್ತಿರುವುದೇ ಸಾವಿ ನೊಂದಿಗಿನ ಅತ್ಯುತ್ತಮ ಗೆಳೆತನದಿಂದಾಗಿ; ಆ ಕಾರಣದಿಂದ ಮಾಡಿಕೊಂಡ ಅನಿಶ್ಚಿತ ಒಪ್ಪಂದದಿಂದಾಗಿ ಎಂಬ ಸತ್ಯವನ್ನು ಪುನೀತರ ಸಾವು ದರ್ಶಿಸುವಂತೆ ಮಾಡಿದೆ. ಹೆತ್ತ ತಾಯಿ ವಿಷ ಕೊಡುವಳೆ? ತಾ ಅಮ್ಮಾ ಕುಡಿಯುವೆ.. ಎನ್ನುತ್ತಲೆ ಅಂದು
ತಾಯಿ ಕಯಾದು ಕೊಟ್ಟ ವಿಷವನ್ನರಗಿಸಿಕೊಂಡ ಭಕ್ತಪ್ರಹ್ಲಾದನ ಆತ್ಮವಿಂದು ನಂಬಿದ ನಾರಾಯಣನೆಡೆಗೆ ತೆರಳಿರುವುದು
ಅಭಿಮಾನಿಗಳಲ್ಲಿ ಅನಾಥ ಪ್ರeಯನ್ನುಂಟು ಮಾಡಿದೆ.

ತಿಂಡಿ ಕೊಟ್ಟರೆ ಮರೆಯಬಹುದಾದ ಮಗುವಿನ ಹಠದಂತಲ್ಲ, ಸಾವು ತಂದ ಈ ದುಃಖ. ಹೀಗಾಗಿ ನೋವು ಜೀವ ಹಿಂಡುತ್ತದೆ. ಪುನೀತರೇ ಹಾಡುವಂತೆ, ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ ಇಂದು ಚೂರು ಅಂದು ಚೂರು
ಒಂದಾಗಬೇಕು ಬೇಗ ಎಂಬ ಗೀತೆಯಲ್ಲಿರುವ ಒಡೆದ ಚಂದ್ರನ ಚೂರುಗಳನ್ನು ಒಂದಾಗಿಸುವವರಾರು? ಇಂದು ಚೂರಿನಂತೆ
ಇಹದಲ್ಲಿದ್ದು ಬೆಳಗಿ, ಅಂದು ಚೂರು ಕೈಲಾಸದೊಳಗೆ ಮುಳುಗಿ ಬೆಳಕಾಗುತ್ತಿರುವ ಪರಿಯನ್ನೆಂತು ವರ್ಣಿಸುವುದು? ನಾಡವರ ಎದೆಯೊಳಗಿನ ಸುನಾಮಿ ಅಲೆಯೊಂದೇ ಉಳಿದು ಹೋದ ಕಹಿ ನೆನಪು. ತಾಳದೇ ಕೊಚ್ಚಿಕೊಂಡು ಹೋದವೆಷ್ಟು ಜೀವಗಳು ಮುಡಿಪು.

ಬೆಳಕು ಬೆಳಕನ್ನೇ ಸೇರಿದ ಹಾಗೆ ಭುವಿಯ ಮೇಲಿನ ತಾರೆಯಿಂದು ಕ್ಷೀರಪಥದ ಹಾದಿಯನ್ನು ಹಿಡಿದಿರುವುದು ವಿಷಾದ ವನ್ನುಂಟು ಮಾಡಿದೆ. ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳುವುದು ಏನೋ ಉಳಿದು ಹೋಗಿದೆ ಹೇಳಲಿ ಹೇಗೆ ತಿಳಿಯದಾಗಿದೆ ಕವಿ ಜಯಂತ್ ಕಾಯ್ಕಿಣಿಯವರು ಬರೆದ ಈ ಕವಿತೆಯ
ಸಾಲುಗಳು ನಾಡವರ ಸದ್ಯದ ಸ್ಥಿತಿಯನ್ನು ಅರ್ಥಪೂರ್ಣವಾಗಿ ಬಣ್ಣಿಸುವಂತಿವೆ. ಎಲ್ಲ ಮುಗಿದ ಮೇಲೆ ಉಳಿಯುವುದೊಂದೇ, ಅದು ಕಣ್ಣೀರು. ಪುನೀತರೊಂದಿಗಿನ ಮಾತುಗಳೆಲ್ಲವೂ ಮುಗಿದ ಮೇಲೆಯೂ ಉಳಿದು ಹೋಗಿದ್ದೊಂದೇ, ಇನ್ನೂ ಅಸಂಖ್ಯಾತ ಮಾತುಗಳನ್ನಡಗಿಸಿಕೊಂಡ ನೀರವ ಮೌನ. ಇದೇ ಸದ್ಯ ಭಾರವಾಗಿರುವ ನಿರ್ಭಾವ. ಒಂದವಕಾಶವನ್ನು ನೀಡಬಹುದಾಗಿದ್ದ ಪುನೀತರ ಹೃದಯದ ಧಾವಂತವನ್ನು ಅರಿಯುವುದು ಹೇಗೆ? ಅದೇ ಹಾಡಿನ ಸಾಲನ್ನು ಕೇಳಿ- ‘ಸಣ್ಣ ಹಠವ ಮಾಡಿದೆ ಹೃದಯ ಈ ದಿನ.’ ಹಾಡಿದ್ದು ಸಣ್ಣ ಹಠ. ಹೃದಯ ಮಾಡಿದ್ದು, ಮರಳಿ ಬಾರದೂರಿಗೆ ಪುನೀತರನ್ನು ಕರೆದುಕೊಂಡೇ ಹೋಗುವೆನೆಂಬ ದೊಡ್ಡ ಹಠ.

ಹೃದಯದ ಭಾಷಾ ಲೋಕವೇ ಬಲು ನಿಗೂಢವೆಂದೆನಿಸುವುದು ಇದೇ ಕಾರಣಕ್ಕಾಗಿ. ಬುದ್ಧಿಯನ್ನು ನಂಬದಿದ್ದರೂ ಹೃದಯ ವನ್ನು ನಂಬು ಎಂದೆನ್ನುವ ನಾಣ್ಣುಡಿಯೇಕೋ ಅಸಂಗತವೆನಿಸುತ್ತಿದೆ ಈಗ. ಈ ಜಗತ್ತಿನ ಅನಂತತೆಗೂ ಕೆಲವೊಮ್ಮೆ ಹೇಗೆ ಗರ ಬಡಿದುಬಿಡಬಲ್ಲದು ಎಂಬುದನ್ನು ಕೇಳಿ- ಸಾಗರದ ಅಲೆಗೂ ದಣಿವು ಪರ್ವತಕೂ ಬೀಳೋ ಭಯವು ಮಳೆಯ ಹನಿಗೂ ಬಂತು ನೋಡು ದಾಹ ಶಶಿಗೆ ಕಳಚಿ ಹೋಯ್ತು ಖುಷಿಯ ಸ್ನೇಹ ಹಾಗೆ ದಣಿವು, ಭಯ, ಸ್ನೇಹ, ದಾಹಗಳನ್ನು ಬಯಸದ ಅಮರತೆಯೂ ಕೆಲವೊಮ್ಮೆ ಬಾನಿಂದ ಜಾರಿ ಹೋಗಿಬಿಡಬಹುದಲ್ಲವೇ? ಎಂಬುದೇ ಹೇರಿಕೊಂಡ ಸಮಾಧಾನ.

ಇದೇ ಗೀತೆಯ ಕೆಳಗಿನ ಸಾಲುಗಳನ್ನು ಹಾಡಿಬಿಡಿ ಒಮ್ಮೆ- ಹಾರಾಡೋ ಮೋಡವಿಂದು ರೆಕ್ಕೆಗಳ ಮುರಿದುಕೊಂಡು ನಿಂತಿದೆ ಮಂಕಾಗಿ ಸುಮ್ಮನೆ ತಂಗಾಳಿ ಅಂಗಳವು ದಂಗಾಗಿ ಬೆವರಿರೊ ಸೂಚನೆ ಕಾವ್ಯವೊಂದು ಸಾವನ್ನು ವ್ಯಾಖ್ಯಾನಿಸುವ ಈ ಅದ್ಭುತವೇ ಪುನೀತರ ಸ್ಮರಣೆಯನ್ನು ಇನ್ನಿಲ್ಲದಂತೆ ಆರ್ದ್ರಗೊಳಿಸುತ್ತದೆ.

ಹಾರಾಡೋ ಮೋಡವಾಗಿ ಕಲಾಲೋಕದಲ್ಲಿ ಬಯಸಿದೆಡೆಗೆ ಹರಿದು ಹಬ್ಬುವ ಸಮಯದಲ್ಲಿಯೇ, ರೆಕ್ಕೆ ಕತ್ತರಿಸಿಕೊಂಡು ಸಮಾಧಿಯಾದ ಬಗೆಯೇ ಕರುಳಿರಿಯುತ್ತದೆ. ಕನ್ನಡಿಗರ ನಿಟ್ಟುಸಿರಿನಿಂದಾಗಿ ಅಂದು ತಂಗಾಳಿಯೂ ಬೆವರೊಡೆಯಿತು. ಷಡಕ್ಷರದೇವನ ‘ರಾಜಶೇಖರ ವಿಳಾಸ’ ಕಾವ್ಯದಲ್ಲಿನ ತಿರುಕೊಳವಿನಾಚಿಯ ಪ್ರಸಂಗದಲ್ಲಿ ಶೋಕವೇ ಕೊಳವಾಗಿ ಮಡುಗಟ್ಟಿದ ಅನುಭವವೇ ವರ್ತಮಾನದಲ್ಲಿ ಪುನೀತರ ಅಗಲಿಕೆಯಿಂದ ನಮ್ಮದಾಗಿರುವುದಕ್ಕೆ ಅತೀವ ಬೇಸರವಿದೆ. ಅಲ್ಲಿಯ ತಿರುಕೊಳ ವಿನಾಚಿಯ ಪ್ರತಿಮೆಯೇ ಇಲ್ಲಿಯ ಕನ್ನಡದೇವಿ. ಹೊಟ್ಟೆ ಹೊಸೆದುಕೊಂಡು ಕಂಬನಿ ಗರೆದ ಅಂದಿನ ತಿರುಕೊಳವಿನಾಚಿಯ ದುಃಖವೇ ಸದ್ಯ ಕನ್ನಡಮ್ಮನ ಕಣ್ಣೀರಾಗಿ ಹರಿದಿರುವುದೊಂದು ವಿಪರ್ಯಾಸ.

ಅಲ್ಲಿ ಮಂತ್ರಿಯ ಮಗ ಮಿತವಚನನ ಕುದುರೆಯ ಖುರ ಪುಟಕ್ಕೆ ಸಿಲುಕಿ ತೀರಿಹೋದ ಕಂದನ ಕಳೆಬರವನ್ನೆತ್ತಿಕೊಂಡು ‘ಸರಿವರೆಯದ ಮಕ್ಕಳ್ ಶಂಕರನೆಲ್ಲಿ’ ಎಂದರೆ ಏನೆನ್ನಲಿ? ನೀನಾಡಿದೆಡೆಗಳಂ ಸುತ ನೀನೊರಗಿದ ಪಾಸುವಂ, ನೀನುಂಡ ತಾಣವನ್ನು ಇನ್ನು ಹೇಗೆ ನೋಡಲಿ? ಎಂದು ಗೋಳಿಡುವ ಸರದಿ ವಿಽಯೆಂಬ ಅಶ್ವಮೇಧದ ಕುದುರೆಯ ಕಾಲಿಗೆರಗಿ ಬತ್ತಿ ಹೋದ ಹೃದಯದರಸ ಅಪ್ಪುವನ್ನು ಕಳೆದುಕೊಂಡ ಕನ್ನಡಮ್ಮನzಗಿದೆಯೆಂಬುದೇ ಎದೆಯೊಡೆ ಯುತ್ತದೆ. ಬಾನದಾರಿಯಲ್ಲಿ ಹೀಗೆ ಹೇಳದೇ ಜಾರಿ ಹೋದ ಸೂರ್ಯನನ್ನು ಅರಸುವ ಸರದಿ ನಮ್ಮದಾಗಿರುವುದು ದುರದೃಷ್ಟಕರ. ಬೆಳಗುತ್ತಿರುವ ಪುನೀತ ದ್ರುವ ತಾರೆಯ ಬೆಳಕಿನಲ್ಲಿಯೇ ಭಾರವಾದ ಹೃದಯದಿಂದಲೇ ಮುಂದಡಿಯಿಡಬೇಕಾಗಿರುವುದೇ ಮಂಜಾಗಿರುವ ನಮ್ಮ ಕಣ್ಣ
ಮುಂದಿರುವ ಹಾದಿ.