Saturday, 16th October 2021

ಸ್ವರ್ಗಕ್ಕೂ, ನರಕಕ್ಕೂ ದಾರಿಯನ್ನು ತೋರುವ ಮನಸ್ಸು!

ಹಿಂತಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

nasomeshwara@gmail.com

ನಮ್ಮ ಪೂರ್ವಜರಿಗೆ ತಮ್ಮಲ್ಲಿ ‘ಮನಸ್ಸು’ ಎನ್ನುವುದು ಇದೆ ಎಂದು ಯಾವಾಗ ತಿಳಿಯಿತು? ಬಹುಶಃ ಈ ಪ್ರಶ್ನೆಗೆ ಖಚಿತ ಉತ್ತರವನ್ನು ತಿಳಿಯುವುದು ಅಸಾಧ್ಯ. ನಮ್ಮ ಪೂರ್ವಜರ ಜತೆಯಲ್ಲಿಯೇ ಹುಟ್ಟಿದ ಮನಸ್ಸು, ಪ್ರಾಕೃತಿಕ ವಿದ್ಯಮಾನಗಳ ವೈಚಿತ್ರವನ್ನು ಕಂಡು ಬೆದರಿ, ದೇವರನ್ನು, ದೆವ್ವವನ್ನು, ಪಿತೃಗಳನ್ನು ಹುಟ್ಟಿಹಾಕಿತು. ಪ್ರೋಟೋ- ಇಂಡೋ- ಯೂರೋಪಿಯನ್ ಭಾಷೆಯಲ್ಲಿ ಮನುಷ್ಯ ಎನ್ನಲು man-, mon- or men  ಧಾತುವನ್ನು
ಬಳಸುವುದುಂಟು.

ಇದು ಸಂಸ್ಕೃತ/ಅವೆಸ್ತದಲ್ಲಿ ಬರುವ ‘ಮನು’ ಶಬ್ದದಿಂದ ರೂಪುಗೊಂಡಿರಬೇಕು. ಮನಸ್ಸು ಇರುವವನು ‘ಮನು’ಷ್ಯ. Me-  ಎಂದರೆ ‘ಯೋಚಿಸು ವವನು’  ಎನ್ನುವ ಅರ್ಥವುಂಟು. ಇದುವರೆಗೂ ನಮಗೆ ದೊರೆತಿರುವ ದಾಖಲೆಗಳ ಅನ್ವಯ, ಪೌರ್ವಾತ್ಯ ಜಗತ್ತಿನಲ್ಲಿ ಮನಸ್ಸಿನ ಬಗ್ಗೆ ಮೊದಲು ಯೋಚಿಸಿದವರು ಸಿಂಧು-ಸರಸ್ವತಿ ನಾಗರಿಕತೆಯನ್ನು (ಕ್ರಿ.ಪೂ.3000) ಕಟ್ಟಿದ ನಮ್ಮ ಪೂರ್ವಜರು. ಪಾಶ್ಚಾತ್ಯ ಜಗತ್ತಿನಲ್ಲಿ ಮನಸ್ಸಿನ ಮೊದಲ ಬಾರಿಗೆ ಆಲೋಚಿಸಿ ದವರು ಪ್ರಾಚೀನ ಗ್ರೀಸ್ ದೇಶದವರು. ಸಿಂಧು-ಸರಸ್ವತಿ ಸಂಸ್ಕೃತಿಯಲ್ಲಿ ದೊರೆತ ಸ್ಟಿಯಾಟೈಟ್ ಎನ್ನುವ ಬಳಪದ ಕಲ್ಲಿನ ಅಪಾರ ಮುದ್ರೆ ಗಳಲ್ಲಿ ಪಶುಪತಿನಾಥನ ಮುದ್ರೆಯೂ ಒಂದು. ಯೋಗಭಂಗಿಯಲ್ಲಿ ಕುಳಿತಿರಬಹುದಾದ ಶಿವನು ಧ್ಯಾನ ನಿರತನಾಗಿದ್ದಾನೆ ಎಂದರೆ, ಅವನು ತನ್ನ ಚಂಚಲ ಮನಸ್ಸನ್ನು ಏಕತ್ರಗೊಳಿಸಲು ಯತ್ನಿಸುತ್ತಿದ್ದಾನೆ ಎಂದು ನಾವು ಭಾಸಬಹುದು.

ಸಿಂಧು-ಸರಸ್ವತಿಯ ಸಂಸ್ಕೃತಿಯ ಬೆನ್ನಿನಲ್ಲಿ ವೇದಕಾಲದ ಸಂಸ್ಕೃತಿಯು ಹುಟ್ಟಿಕೊಂಡಿತು. ವೇದಕಾಲದ ಋಷಿಮುನಿಗಳು ಬಹುಪಾಲು ನಮ್ಮ ಸುತ್ತಮುತ್ತಲೂ ಇರುವ ಪ್ರಕೃತಿಯ ಬಗ್ಗೆ, ಪ್ರಾಕೃತಿಕ ಶಕ್ತಿಗಳ ಬಗ್ಗೆ ಆಲೋ ಚಿಸಿದರು. ಚಿಂತನ-ಮಂಥನಗಳನ್ನು ನಡೆಸಿದರು. ಆಗ ಮಂತ್ರಗಳು ಅವರಿಗೆ ಹೊಳೆದವು. ಅವರು ಮಂತ್ರದ್ರಷ್ಟಾ ರರಾದರು. ಋಗ್ವೇದದಲ್ಲಿ (ಕ್ರಿ.ಪೂ.1500-ಕ್ರಿ.ಪೂ.1200) ‘ಯುಂಜತೆ ಮನ ಉತಯುಂಜತೆ ಧಿಯೋ ಪ್ರಾ ಪ್ರಸ್ಯ ಬೃಹತೋ ಪಶ್ಚಿತಃ’ (ಋಗ್ವೇದ 5.81.1) ಎಂಬ ಮಂತ್ರವನ್ನು ಋಷಿ ಶ್ವಾವಶ್ವ ಆತ್ರೇಯರು ರಚಿಸಿದರು. ವೇದ ಗಳಲ್ಲಿ ಬಹುಶಃ ಯೋಗವನ್ನು ಕುರಿತಾಗಿ ಮೊದಲ ಮಂತ್ರವಿದು.‘ಮಹಾತ್ಮರು ತಮ್ಮ ಮನಸ್ಸನ್ನು ಪರಬ್ರಹ್ಮ ನೊಡನೆ ಸೇರಿಸಲು ಶಕ್ತರು…’ ಎನ್ನುವ ಅರ್ಥವನ್ನು ಹೊಮ್ಮಿಸುತ್ತದೆ.

ಅಥರ್ವಣ ವೇದದಲ್ಲಿ(ಕ್ರಿ.ಪೂ.900) ‘ಇಮಾನಿ ಯಾನಿ ಪಂಚೇಂದ್ರಿಯಾಣಿ ಮನಃ ಷಷ್ಠಾನಿ ಮೇ ಹ್ಯದಿ ಬ್ರಹ್ಮಣಾ ಸಂಶಿತಾನಿ…’ (ಅಥರ್ವಣ ವೇದ 19-9-5) ಎನ್ನುವ ಮಂತ್ರವು ‘ಪರಬ್ರಹ್ಮನು ನಮ್ಮ ಈ ಐದು ಇಂದ್ರಿಯಗಳು  ಹಾಗೂ ಆರನೆಯ ಇಂದ್ರಿಯವಾದ ಮನಸ್ಸನ್ನು ಸಕ್ರಿಯಗೊಳಿಸುತ್ತಾನೆ…’ ಎಂಬ ಸ್ಥೂಲ ಅರ್ಥವನ್ನು ಹೊಮ್ಮಿಸುತ್ತದೆ. ಮೊದಲ ಬಾರಿಗೆ ಮನಸ್ಸಿನ ಬಗ್ಗೆ ಗಂಭೀರವಾಗಿ ಆಲೋಚಿಸಿದವರು ನಮ್ಮ ಆಸ್ತಿಕ ದರ್ಶನಗಳನ್ನು ಮತ್ತು ನಾಸ್ತಿಕ ದರ್ಶನಗಳನ್ನು (ಕ್ರಿ.ಪೂ.1000-ಕ್ರಿ.ಪೂ.600) ಕಂಡ ನಮ್ಮ ಋಷಿಗಳು.

ಆಸ್ತಿಕ ದರ್ಶನಗಳು ಆರು. ಕಪಿಲ ಮಹರ್ಷಿಯ ಸಾಂಖ್ಯ ದರ್ಶನ, ಪತಂಜಲಿ ಮಹರ್ಷಿಯ ಯೋಗದರ್ಶನ, ಅಕ್ಷಪಾದ ಗೌತಮನ ನ್ಯಾಯದರ್ಶನ,  ಕಣಾದ ಮಹರ್ಷಿಯ ವೈಶೇಕ ದರ್ಶನ, ಜೈಮಿನಿಯ ಮೀಸಹಾಗೂ ಬಾದರಾಯಣರ ವೇದಾಂತ. ನಾಸ್ತಿಕದರ್ಶನಗಳಲ್ಲಿ ಚಾರ್ವಾಕ ದರ್ಶನ, ಬೌದ್ಧ ದರ್ಶನ ಮತ್ತು ಜೈನದರ್ಶನಗಳು ಮುಖ್ಯವಾದವು. ನಮ್ಮ ಸಂಸ್ಕೃತಿಯ ಈ ಒಂಬತ್ತು ದರ್ಶನಗಳಲ್ಲಿ ಬಹುಶಃ ಅತ್ಯಂತ ಪ್ರಾಚೀನವಾದದ್ದು ಯೋಗ ದರ್ಶನ. ಏಕೆಂದರೆ ಯೋಗದ ಬೀಜವನ್ನು ಸಿಂಧು-ಸರಸ್ವತಿ ಸಂಸ್ಕೃತಿಯ ಕಾಲದಲ್ಲಿಯೇ ಕಾಣಬಹುದು. ಅದು ಕಾಲಕ್ರಮೇಣ ಬೆಳೆದು ಬಂದಿತು. ಕೊನೆಗೆ ಕ್ರಿ.ಪೂ.200ರ ಹೊತ್ತಿಗೆ ಮಹರ್ಷಿ ಪತಂಜಲಿಗಳು ಅದುವರೆಗೂ ಲಭ್ಯವಿದ್ದ ಯೋಗಜ್ಞಾನವನ್ನು ಸಂಗ್ರಹಿಸಿ, ಅದನ್ನು 196 ಸೂತ್ರಗಳಲ್ಲಿ
ವ್ಯವಸ್ಥಿತವಾಗಿ ಅಣಿಗೊಳಿಸಿದರು.

ಆರು ಆಸ್ತಿಕ ದರ್ಶನಗಳಲ್ಲಿ ಮನಸ್ಸನ್ನೇ ಕೇಂದ್ರವನ್ನಾಗಿ ಉಳ್ಳ ದರ್ಶನವೆಂದರೆ ಅದು ಯೋಗದರ್ಶನ ಮಾತ್ರ. ಇಂದು ಆಧುನಿಕ ಮನಃಶಾಸ್ತ್ರದಲ್ಲಿ ಬರುವ ಎಲ್ಲ ಪ್ರಮುಖ ಮನಸ್ಸಿನ  ಆಯಾಮಗಳನ್ನು ಯೋಗದಲ್ಲಿ ನೋಡಬಹುದು. ಮಹರ್ಷಿ ಪತಂಜಲಿಯವರು ಮನಸ್ಸಿಗೆ ‘ಚಿತ್ತ’ ಎನ್ನುವ
ಪರ್ಯಾಯ ಶಬ್ದವನ್ನು ಬಳಸಿರುವರು. ಸಂಸ್ಕೃತ ಮತ್ತು ಪಾಲಿ ಭಾಷೆಯಲ್ಲಿ ಚಿತ್ತ ಎಂದರೆ ಮನಸ್ಸು! ಚಿತ್ತವು ‘ಪ್ರಕೃತಿ’ಯಿಂದ ಹುಟ್ಟುತ್ತದೆ. ಈ ಚಿತ್ತದೊಳಗೆ ಬುದ್ಧಿ, ಅಹಂಕಾರ ಮತ್ತು ಮನಸ್ಸುಗಳಿರುತ್ತವೆ. ‘ಚಿತ್ತವೃತ್ತಿ’ ಎಂದರೆ ಮನಸ್ಸಿನ ಕೆಲಸ ಕಾರ್ಯಗಳು. ‘ಚಿತ್ತಭೂಮಿ’ ಎಂದರೆ ಮನಸ್ಸಿನ ಕೆಲಸ ಕಾರ್ಯಗಳು ನಡೆಯುವ ಪಾತಳಿ. ‘ಪಂಚಕ್ಲೇಶ’ ಎಂದರೆ ಮನಸ್ಸಿನ ಐದು ಸ್ಥಿತಿಗಳು ಹಾಗೂ ಅವುಗಳಿಗೆ ಸಂಬಂಧಿಸಿದ ವಿವಿಧ ಮುಖಗಳು. ಮಹರ್ಷಿ ಪತಂಜಲಿ ಹಾಗೂ ಮಹರ್ಷಿ ಚರಕರು ಒಬ್ಬರೇ ಎನ್ನುವ ವಾದವಿದೆ.

ಯೋಗಸೂತ್ರದ ಅಭಿದೇಯವು ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದರೆ, ಚರಕ ಸಂಹಿತೆಯ ಅಭಿದೇಯವು ಶಾರೀರಿಕ ಆರೋಗ್ಯದ ಬಗ್ಗೆ ಮಾತ ನಾಡುತ್ತದೆ. ಮನಸ್ಸು ಚಂಚಲವಾದದ್ದು. ಇಂತಹ ಚಂಚಲ ಚಿತ್ತವನ್ನು ಬಣ್ಣ, ನಾದ, ಸುಗಂಧ, ರುಚಿ, ಸುಗಂಧ ಮತ್ತು ಸ್ಪರ್ಶ ಸಂವೇದನೆಗಳ ಮೂಲಕ ಏಕತ್ರಗೊಳಿಸಬಹುದು. ಚಿತ್ತವು ಸಾತ್ವಿಕತೆಯನ್ನು ಮೈಗೂಡಿಸಿಕೊಂಡಿರುವಂತಹದ್ದು. ಆದರೆ ಜನ್ಮದತ್ತ ಕ್ಲೇಶಗಳ ಕಾರಣ ಚಿತ್ತದ ಶುದ್ಧ ಸಾತ್ವಿಕ ಸ್ವರೂಪವು ಮಸುಕಾಗುತ್ತದೆ. ಪ್ರಾಣಾಯಾಮವು ಈ ಚಿತ್ತವೃತ್ತಿಗಳನ್ನು, ಅಂದರೆ ಮಾನಸಿಕ ಅನಾರೋಗ್ಯವನ್ನು ನಿಗ್ರಹಿಸಬಲ್ಲುದು ಎನ್ನುತ್ತದೆ. ಆಧುನಿಕ ಮನಃಶಾಸವನ್ನು ಓದಿದವರು ಒಮ್ಮೆ ಪತಂಜಲಿಯ ಯೋಗಸೂತ್ರಗಳನ್ನು ಅಧ್ಯಯನ ಮಾಡಿದರೆ, ಅವರಿಗೆ ಮನಸ್ಸಿನ ಸ್ವರೂಪದ ಬಗ್ಗೆ ಹೊಸ ಹೊಳಹುಗಳು ಹೊಳೆಯಬಲ್ಲವು.

ದರ್ಶನಗಳ ನಂತರ ಉಪನಿಷತ್ತುಗಳು (ಕ್ರಿ.ಪೂ.800-500) ಮನಸ್ಸಿನ ವಿರಾಡ್ರೂಪವನ್ನು ಅನಾವರಣ ಮಾಡುತ್ತವೆ. ವೇದಕಾಲದ ಋಷಿಗಳು ನಮ್ಮ
ಹೊರಜಗತ್ತಿನ ಅನ್ವೇಷಣೆಯನ್ನು ನಡೆಸಿದರೆ, ಉಪನಿಷತ್ ಕಾಲದ ಋಷಿಗಳು ನಮ್ಮ ಒಳಜಗತ್ತಿನ ಬಗ್ಗೆ ಹುಡುಕಾಡಿದರು. ಕಠೋಪನಿಷತ್ತು  (ಕ್ರಿ.ಪೂ. 800) ಮನಸ್ಸಿನ ಬಗ್ಗೆ ಹಾಗೂ ನಮ್ಮ ಬದುಕಿನಲ್ಲಿ ಮನಸ್ಸಿನ ಸ್ಥಾನದ ಬಗ್ಗೆ ನಿಖರವಾಗಿ ನುಡಿಯುತ್ತದೆ.

‘ಆತ್ಮಾನಂ ರಥಿನಂ ವಿದ್ಧಿ
ಶರೀರಂ ರಥಮೇವ ತು| ಬುದ್ಧಿಮ್ ತು ವಿದ್ಧಿ ಮನಃ
ಪ್ರಗಹಮೇವ ಚ|| ಇಂದ್ರಿಯಾಣಿ ಹಯಾನಾರ್ಹು
ಷಯಾಂಸ್ತೇಷು ಗೋಚರಾನ್| ಆತ್ಮೇಂದ್ರಿಯಮ
ನೋಯುಕ್ತಂ ಭೋಕ್ತೇತ್ಯಾ ಹುರ್ಮನೀಷೀಣಃ||’ ‘ಎಲೈ
ನಚಿಕೇತನೆ! ಈ ಶರೀರ ಎನ್ನುವುದು ರಥ.

ಈ ರಥಕ್ಕೆ ‘ಪಂಚೇಂದ್ರಿಯ’ಗಳೆಂಬ ಕುದುರೆಗಳನ್ನು ಕಟ್ಟಿದೆ. ‘ಬುದ್ಧಿ’ ಯು ಈ ರಥವನ್ನು ನಡೆಸುತ್ತಿರುವ ಸಾರಥಿ. ಬುದ್ಧಿಯು ‘ಮನಸ್ಸು’ ಎನ್ನುವ ಲಗಾಮುಗಳ ನೆರವಿನಿಂದ ಕುದುರೆಗಳನ್ನು ನಿಯಂತ್ರಿಸುತ್ತಿದೆ. ಈ ರಥದಲ್ಲಿ, ರಥದ ಯಜಮಾನನಾದ ಆತ್ಮನು ಪ್ರಯಾಣ ಮಾಡುತ್ತಿದ್ದಾನೆ’-
ಎನ್ನುವುದು ಇದರ ಸ್ಥೂಲ ಅರ್ಥ. ಮಹಾಭಾರತದಲ್ಲಿ (ಕ್ರಿ.ಪೂ.400) ಯಕ್ಷನು ‘ಯಾವುದು ಗಾಳಿಗಿಂತ ವೇಗವಾಗಿ ಚಲಿಸುತ್ತದೆ’ ಎಂದು ಪ್ರಶ್ನೆಯನ್ನು ಕೇಳಿದಾಗ ಯುಧಿಷ್ಠಿರನು ‘ಮನಸ್ಸು’ ಎನ್ನುತ್ತಾನೆ. ಅಮೃತಬಿಂದು ಉಪನಿಷತ್ತು ‘ಮನಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ’
ಎಂದಿದೆ. ಮನಸ್ಸು ಮನುಷ್ಯನನ್ನು ಪ್ರಾಪಂಚಿಕ ಬಂಧನಗಳಲ್ಲಿ ಸಿಲುಕಿಸುವ ಹಾಗೆ ಮೋಕ್ಷವನ್ನೂ ಕರುಣಿಸಬಲ್ಲದು.

ನಾಸ್ತಿಕ ದರ್ಶನಗಳಲ್ಲಿ ಮನಸ್ಸಿನ ಬಗ್ಗೆ ಗಂಭೀರವಾದ ಒಳನೋಟಗಳನ್ನು ಬೌದ್ಧ ಧರ್ಮವು ನೀಡಿದೆ. ಗೌತಮ ಬುದ್ಧನು (ಕ್ರಿ.ಪೂ.563-ಕ್ರಿ.ಪೂ.480) ಬೌದ್ಧ ಧರ್ಮದ ಸ್ಥಾಪಕ. ರಾಜಕುಮಾರ ಸಿದ್ಧಾರ್ಥನು ಮೊದಲ ಬಾರಿಗೆ ಮೂರು ದುಃಖಗಳನ್ನು (ರೋಗ, ವೃದ್ಧಾಪ್ಯ ಮತ್ತು ಸಾವು) ನೋಡಿದ. ತನ್ನ ಹತ್ತಿರವಿರುವ ಅಪಾರ ಸಂಪತ್ತು ಹಾಗೂ ಅಽಕಾರವು ಈ ಮೂರು ದುಃಖಗಳನ್ನು ತಡೆಗಟ್ಟಲಾರವು ಎಂದು ಸಿದ್ಧಾರ್ಥನಿಗೆ ಮನವರಿಕೆಯಾತು. 29 ವರ್ಷ ವಯಸ್ಸಿನ ಸಿದ್ಧಾರ್ಥನು ರಾಜ್ಯ, ಮಡದಿ ಮತ್ತು ಮಗನನ್ನು ಬಿಟ್ಟು ಸನ್ಯಾಸಿಯಾದ.

ಆರು ವರ್ಷಗಳ ಕಾಲ ಹಲವು ಗುರುಗಳನ್ನು ಆಶ್ರಯಿಸಿ, ಈ ಮೂರು ದುಃಖಗಳಿಂದ ಬಿಡುಗಡೆಯನ್ನು ದೊರಕಿಸುವ ಮಾರ್ಗವನ್ನು ತಿಳಿಯಲು
ಕಠಿಣಾತಿಕಠಿಣ ನಿಯಮಗಳನ್ನು ಪಾಲಿಸಿದ. ಸಿದ್ಧಾರ್ಥನಿಗೆ 36 ವರ್ಷಗಳು. ಒಂದು ಬೋಧಿ ವೃಕ್ಷದ ಕೆಳಗೆ ಕುಳಿತ. ಮೌನವಾಗಿ ಮನನವನ್ನು ನಡೆಸಿದ. ಆಗ ಅವನಿಗೆ ಜ್ಞಾನೋದಯವಾಯಿತು. ಅವನಿಗೆ ಮೂರು ವಿಷಯಗಳು ಮನದಟ್ಟಾದವು. ಮೊದಲನೆಯದು ಈ ಜಗತ್ತಿನಲ್ಲಿ ‘ಶಾಶ್ವತ’ ಎನ್ನುವುದಿಲ್ಲ. ಕಾಲಕ್ರಮೇಣ ಎಲ್ಲವೂ ಬದಲಾಗಲೇಬೇಕು.

ಎರಡನೆಯದು ಯಾರು ಚಿರಂಜೀವಿಗಳಲ್ಲ. ಇವತ್ತಲ್ಲ ನಾಳೆ ಸಾಯಲೇಬೇಕು ಹಾಗೂ ಮೂರನೆಯದು ದುಃಖ ನಮ್ಮ ಬದುಕಿನ ಅವಿಭಾಜ್ಯ ಅಂಗ.
ನಾವು ದುಃಖದಿಂದ ಪಾರಾಗಬೇಕಾದರೆ ನಾಲ್ಕು ಘನತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಮೊದಲನೆಯದು ಈ ಜಗತ್ತಿನಲ್ಲಿ ದುಃಖವು ಇದ್ದೇ ಇರುತ್ತದೆ. ಎರಡನೆಯದು ಆಸೆಯೇ ದುಃಖಕ್ಕೆ ಮೂಲ. ಮೂರನೆಯದು, ನಾವು ಆಸೆಯನ್ನು ತ್ಯಜಿಸಿದರೆ ದುಃ ಖದಿಂದ ಮುಕ್ತರಾಗುತ್ತೇವೆ. ನಾಲ್ಕನೆಯದು ಅಷ್ಠಪಥಗಳ ಪರಿಪಾಲನೆ. ಅಷ್ಠಪಥಗಳು ನಾವು ನಮ್ಮ ಬದುಕನ್ನು ನಡೆಸುವ ಬಗ್ಗೆ ಮಾರ್ಗದರ್ಶನವನ್ನು ನೀಡುವ ದಾರಿದೀಪಗಳು. ನಮ್ಮ ದೃಷ್ಟಿಯು ಸರಿಯಾಗಿರಬೇಕು, ನಮ್ಮ ಉದ್ದೇಶವು ಸರಿಯಾಗಿರಬೇಕು, ನಮ್ಮ ಮಾತು ಸರಿಯಾಗಿರಬೇಕು, ನಮ್ಮ ನಡತೆಯು ಸರಿಯಾಗಿರಬೇಕು, ನಮ್ಮ ಬಾಳುವೆಯು ಸರಿಯಾಗಿರಬೇಕು, ನಮ್ಮ ಪ್ರಯತ್ನವು ಸರಿಯಾಗಿರಬೇಕು, ನಾವು ಸರಿಯಾದ ಎಚ್ಚರಿಕೆಯಲ್ಲಿರಬೇಕು ಮತ್ತು ಸರಿಯಾದ (ಧ್ಯಾನದ ನಾಲ್ಕು ಸ್ಥಿತಿಗಳನ್ನು ಗಳಿಸಿ) ಸಮಾಧೊಯನ್ನು ಗಳಿಸಬೇಕು.

ನಾವು ನಮ್ಮ ಬದುಕಿನಲ್ಲಿ ಅತ್ಯಂತ ಕಠಿಣ ಮಾರ್ಗಗಳನ್ನು ಅಥವಾ ಅತ್ಯಂತ ಲಘು ಮಾರ್ಗಗಳನ್ನು ಅನುಸರಿಸದೆ, ಮಧ್ಯಮ ಮಾರ್ಗವನ್ನು ಪರಿ ಪಾಲಿಸುವುದು ಸೂಕ್ತ. ಇದು ಮಧ್ಯಮ ಮಾರ್ಗ. ಬುದ್ಧನ ಅಸಂಖ್ಯ ಶಿಷ್ಯರು, ಈ ಮಧ್ಯಮ ಮಾರ್ಗವನ್ನು ಕುರಿತು ಅಧ್ಯಯನ-ಸಂಶೋಧನ- ಅಧ್ಯಾಪನ ಗಳನ್ನು ಮಾಡುತ್ತ ಬಂದಿದ್ದಾರೆ. ಇವೆಲ್ಲವು ಮನಃಶಾಸಕ್ಕೆ ಸಂಬಂಧಿಸಿದ ಅತ್ಯುತ್ತಮ ಗ್ರಂಥಗಳು ಎನ್ನಬಹುದು.

ಭಾರತದ ಹೊರಗೆ, ಕ್ರಿ.ಪೂ.ನೆಯ ಶತಮಾನದ ಆಸುಪಾಸಿನಲ್ಲಿ, ಮನಸ್ಸಿನ ಸ್ವರೂಪದ ಬಗ್ಗೆ ಅಧ್ಯಯನ ಮಾಡಿದವರಲ್ಲಿ ಗ್ರೀಕರು ಹಾಗೂ ಚೀನೀಯರು ಪ್ರಮುಖರು.

Leave a Reply

Your email address will not be published. Required fields are marked *