Monday, 3rd October 2022

ನೆರೆ ಸಂತ್ರಸ್ತರಿಗೆ ಕೇಂದ್ರ ಸರಕಾರ ಆಸರೆಯಾಗಲಿ

ಕಳೆದ ಒಂದು ವಾರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಾಜ್ಯಾದ್ಯಂತ 18280 ಹೆಕ್ಟೇರ್ ಕೃಷಿ ಬೆಳೆ, ೪,೫೬೫ ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ ಎಂದು ಸರಕಾರ ಮಾಹಿತಿ ನೀಡಿದೆ.

ಸಾಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆ ಮಳೆಗೆ ಆಹುತಿಯಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಈ ನಷ್ಟದಿಂದ ಹೊರಬರಲು ರೈತರು ವರ್ಷಗಳೇ ಕಾಯಬೇಕಾಗುತ್ತದೆ. ಆದ್ದರಿಂದ ಬೆಳೆನಷ್ಟ ಸಮೀಕ್ಷೆಯನ್ನು ತಕ್ಷಣ ಪೂರೈಸಿ, ಪರಿಹಾರ ವಿತರಿಸಲು ಸರಕಾರ ತುರ್ತು ಕ್ರಮ ಕೈಗೊಳ್ಳಬೇಕಿದೆ. ಮಳೆ-ಪ್ರವಾಹದಿಂದ ಹಾನಿ ಆಗುವುದು ಹೊಸತೇನೂ ಅಲ್ಲ.

ಸರಕಾರದ ಅಂದಾಜಿನಂತೆ, 2019 ರಿಂದ 2021ರವರೆಗೆ ಮೂರು ವರ್ಷಗಳಲ್ಲಿ ಮಳೆಯಿಂದ ಆಗಿರುವ ಒಟ್ಟಾರೆ ನಷ್ಟ ? 2 ಲಕ್ಷ ಕೋಟಿ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿ ಪ್ರಕಾರ ಸುಮಾರು ? ೫೫ ಸಾವಿರ ಕೋಟಿ ಯಷ್ಟು ನಷ್ಟವು ಬೆಳೆ ಹಾಗೂ ಮನೆಗಳ ಹಾನಿಯಿಂದ ಆಗಿದೆ. ಕೇಂದ್ರ ಸರಕಾರವು ಸುಮಾರು ? ೪,೨೦೦ ಕೋಟಿಯಷ್ಟು ಪರಿಹಾರ ವನ್ನು ರಾಜ್ಯಕ್ಕೆ ನೀಡಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಕಷ್ಟಕ್ಕೆ ಹೆಗಲುಕೊಟ್ಟು, ಆಸರೆಯಾಗಬೇಕಾದ ಕೇಂದ್ರ ಸರಕಾರವು ಇದರಿಂದ ನುಣುಚಿ ಕೊಳ್ಳುತ್ತಲೇ ಇದೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಡಬಲ್ ಎಂಜಿನ್ ಸರಕಾರದ ಬಗ್ಗೆ ಪದೇ ಪದೆ ಹೇಳುತ್ತಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ನೇತೃತ್ವದ ಸರಕಾರ ಇದ್ದರೆ ಆಗುವ ಪ್ರಯೋಜನ ಏನು ಎಂಬುದನ್ನು ಇಂತಹ ಕಷ್ಟದ ಸಂದರ್ಭದದರೂ ತೋರಿಸಬೇಕು.

ಬರೀ ಮಾತು, ಘೋಷಣೆಗಳಿಂದ ಜನರಿಗೆ ಪ್ರಯೋಜನ ಇಲ್ಲ. ಹೆಚ್ಚಿನ ನೆರವು ಪಡೆಯಲು ಮುಖ್ಯಮಂತ್ರಿಯವರು ಕೇಂದ್ರದ
ಮೇಲೆ ಒತ್ತಡ ಹೇರಬೇಕು. ರಾಜ್ಯಗಳಲ್ಲಿನ ಮಳೆಹಾನಿ ಪರಿಶೀಲಿಸಿ ಪರಿಹಾರ ಕೊಡಿಸುವ ಹೊಣೆ ಕೇಂದ್ರ ಗೃಹ ಸಚಿವ ರದ್ದಾಗಿದೆ. ಕರ್ನಾಟಕದಲ್ಲಿ ವಿಪರೀತ ಮಳೆಯಾಗುತ್ತಿದ್ದ ಸಂದರ್ಭದಲ್ಲಿ ಅಮಿತ್ ಶಾ ಅವರು ಕರ್ನಾಟಕಕ್ಕೆ ಬಂದಿದ್ದರೂ ಪ್ರವಾಹಪೀಡಿತ ಪ್ರದೇಶಗಳಿಗೂ ಭೇಟಿ ನೀಡದೇ ವಾಪಸ್ಸಾಗಿರುವುದು ಸಂತ್ರಸ್ತರಿಗೆ ಘಾಸಿಯಾಗಿದೆ. ಅದನ್ನು ಸರಿದೂಗಿಸಲು
ರಾಜ್ಯದ ಸಂತ್ರಸ್ತರಿಗೆ ಹೆಚ್ಚಿನ ನೆರವು ನೀಡುವ ಮೂಲಕ ಕೇಂದ್ರ ಸರಕಾರವು ಆಸರೆಯಾಗಿ ನಿಲ್ಲಬೇಕು.