Sunday, 27th November 2022

ಮಧುಚಂದ್ರಕ್ಕೊಂದು ಮುದ್ದಾದ ನಗರಿ…

ಅಲೆಮಾರಿಯ ಡೈರಿ

mehandale100@gmail.com

ಹೀಗೊಂದು ಹೆಸರು ಕೊಡಲು ಕಾರಣ, ಇಲ್ಲಿ ಜೋಡಿಗಳಾಗಿ ವಿಹರಿಸಲು ಮತ್ತು ಸುಖಾಸುಮ್ಮನೆ ಆಲಸಿಯಾಗಿ ಬಿದ್ದು ಕೊಂಡಿರಲು, ಬೇಡ ಎನ್ನಿಸಿದಾಗ ಎಲ್ಲೆಂದರಲ್ಲಿ ಬಗಲಿಗೆ ಕೈ ಹೊಡಿಕೊಂಡು ಸುತ್ತುಹೊಡೆಯಲು, ಅದೂ ಬೇಡವೆಂದರೆ ಅಲ್ಲಲ್ಲಿ ರಸ್ತೆ ಪಕ್ಕದ ಬೆಂಚುಗಳ ಮೇಲೆ ಕೂತಲ್ಲೇ ಯೂಟ್ಯೂಬ್ ನೋಡಿಕೊಳ್ಳುತ್ತ, ಹಗಲು ಹನ್ನೆರಡರ ಹೊತ್ತಿನಲ್ಲೂ ಚುಮುಚುಮು ಚಳಿಗೆ ಕಾಫಿ, ದಾಲ್ಚಿನ್ನಿ ಹಾಕಿದ ಮಸಾಲೆ ಟೀ ಜತೆ ಪಟ್ಟಾಂಗ ಹೊಡೆಯುತ್ತ, ಗುಂಡುಪ್ರಿಯರಿಗೆ ಟಿಬೆಟಿಯನ್ ಸ್ಕಾಚ್, ಚೈನೀಸ್ ವಿಸ್ಕಿ, ನಾನ್‌ವೆಜ್ ಮೌಮೌ, ಖಾಫ್ರಿ ಟೋಸ್ಟ್ ಹೀಗೆ ಎಲ್ಲೆಡೆ ಬಿಸಿಬಿಸಿ ಬಳಸಿಕೊಂಡು ಆಮೋದ ಅನುಭವಿಸುತ್ತ, ಕೊಂಚವೇ ತಡವಾದರೂ ಸಂಜೆ ಮೈ ಕೊರೆಯುವಂತೆ ಬೀಸುವ ಚಳಿಗೆ ತೆರೆದು ಕೊಳ್ಳುತ್ತ ‘ಅಹಾ ಚಳಿ’ ಎಂದು ನುಲಿಯುವ ಪ್ರೇಯಸಿಯನ್ನು ಬೆಚ್ಚಗಿಡುವ ಪ್ರಯತ್ನದಲ್ಲಿ ಶಾಲಿನೊಳಗೋ, ಜರ್ಕಿನ್ ಒಳಗೋ ಹುದುಗಿಸಿಕೊಳ್ಳುವ ಯೋಜನೆ ಮಾಡಿ ಕೊಂಡು ಅದರದ್ದೂ ಅಡ್ವಾಂಟೇಜ್ ತೆಗೆದುಕೊಳ್ಳುತ್ತ, ಚಳಿಗೆ ಬದುಕು ಅನುಭವಿಸಿ ಬಿಡಬಹುದಾದ, ಜನನಿಬಿಡವಲ್ಲದ, ಗೌಜಿ ಗದ್ದಲ ಇಲ್ಲದ, ಎಲ್ಲಿಗೆ ಹೋದರೂ ಅರಾಮಾಗಿ ಕೂತು ನಿಂತು ಬಳಸಿ ಕೊಂಡು, ಸೆಲ್ಫಿಗೇ ದಿಗಿಲಾಗುವಂತೆ ಚಿತ್ರ ಮಾಡಿ ಕೊಂಡು ಬರಬಹುದಾದ ಮಿಣ್ಣಗಿನ ಊರಿಗೆ ಭೇಟಿ ನೀಡುವುದಾದರೆ ಪೆಲ್ಲಿಂಗ್ ಎಂಬ, ಪರ್ವತದ ಮೇಲೆ ಬಂಡೆಯೊಂದನ್ನು ಬಿಸಾಡಿದಂತಹ ಕಣಿವೆ ಊರಿಗೆ ಬನ್ನಿ.

ಇದೆಲ್ಲ ಮುಗಿಸಿಯೂ ತಿರುಗಾಡಲು ಮತ್ತು ನೆಮ್ಮದಿಯ ಸಮಯ ಕಳಚಿ ಹೇಗೆ ಬೇಕಾದರೂ ಇದ್ದುಬಿಡಲು ಇತ್ತ ನಗರವೂ ಅಲ್ಲ, ಹಳ್ಳಿಯಂತೂ ಆಗಿ ಉಳಿದಿಲ್ಲದ, ಪಟ್ಟಣದ ಪಟ್ಟವನ್ನೂ ಪಡೆಯದ ಈ ಏರಿಳಿತಗಳ ಮುದ್ದಾದ ನಾಡಿಗೆ ಬಂದುಬಿಡಿ.
ನಿಮ್ಮ ಮಧುಚಂದ್ರ ಇದೆಯೋ ಇಲ್ಲವೋ, ಆದರೆ ಇಲ್ಲೊಮ್ಮೆ ಲೆಕ್ಕತಪ್ಪಿದ ದಿನಗಳನ್ನು ಕಳೀಬೇಕಿತ್ತು ಎಂದೆನ್ನಿಸದೆ ಇರಲಾರದು ನಿಮಗೆ. ಚಕೋರಿ ಜೋಡಿ ಇದ್ದರೆ ನೀವು ಇಲ್ಲೇ ಹದತಪ್ಪಿದ ಮನ್ಮಥ, ಇಲ್ಲವಾದರೆ ಒಂದು ಚೆಂದದ ಹಳಹಳಿಕೆಯಂತೂ ನಿಮ್ಮದಾಗುಳಿಯಲಿದೆ.

ಕಾರಣ ಅದರ ಹೆಸರು ಪೆಲ್ಲಿಂಗ್. ಇದ್ದ ಗೆಸ್ಟ್ ಹೌಸಿನಿಂದ ಕತ್ತು ಹೊರಕ್ಕೆ ಚಾಚಿದರೆ ಎದುರಿಗೆ ಅಗಾಧವಾಗಿ ತಲೆಯೆತ್ತಿ ನಿಂತ ಕಾಂಚನಜುಂಗಾ, ಅದರೆತ್ತರಕ್ಕೆ ನಾವು ಸಮ ಇಲ್ಲ ಬಿಡು ಎನ್ನಿಸಿದರೆ ಬುಡಕ್ಕೆ ಚಳಿ ಹುಟ್ಟಿಸುವ ಕೆಚಪುರಿ ಲೇಕು, ಅದೂ ಬೇಡ ಒಂದಿಷ್ಟು ಹನಿಗೆ ಮುಖವೊಡ್ಡಿ ಜುಮ್ ಆಗಿಸಿಕೊಳ್ಳೋಣ ಎಂದರೆ ಅದೇ ಪರ್ವತದ ತಲೆಯಿಂದ ಬರುವ ನೀರಿನಿಂದಾಗಿ ಹುಟ್ಟಿರುವ ಕಾಂಚನಜುಂಗಾ ಫಾಲ್ಸ್, ಒಣಒಣ ಆದರೆ ಕಲಾತ್ಮಕ ತಿರುಗಾಟಕ್ಕೆ ರಾಕ್‌ಗಾರ್ಡನ್ ಎಂಬ ಮಾನವ ನಿರ್ಮಿತ ಕಲ್ಲು ಕಲಾಕೃತಿಗಳ ಕೃತಕ ನಿರ್ಮಾಣದ ಒಂದು ಮೈದಾನ ಹೀಗೆ ಅಗತ್ಯಕ್ಕೆ ಬೇಕೋ ಬೇಡವೋ, ಎಲ್ಲ ಇರುವ, ಇಲ್ಲದಿದ್ದರೂ
ನಡೆದೀತು ಎನ್ನುವ ನೆಲ ಈ ಪೆಲ್ಲಿಂಗ್, ಸುಪನಾತಿಯಂತ ಸಣ್ಣ ನಡುವಿನ ಸುಂದರಿಯಂತಹ ಮಾದಕ ಊರು.

ಹತ್ತಿರದ ವಿಮಾನ ನಿಲ್ದಾಣ ಬಾಗ್ದೊಗ್ರಾದಿಂದ ಎತ್ತಿಳಿಯುವ ಕಿತ್ತೋದ ರಸ್ತೆಗಳ ಕೇವಲ 120 ಕಿ.ಮೀ. ಪ್ರಯಾಣಕ್ಕೆ ಅನಾಮತ್ತು ೫-೬ ತಾಸು ಬೇಡುವ, ನಿಮ್ಮ ಸಹನೆ ಪರೀಕ್ಷಿಸುವ ರಸ್ತೆಯ ಈ ಪಯಣದ ಕರ್ಮ ಅನುಭವಿಸಲೇಬೇಕು. ಕಾರಣ ಎಲ್ಲ ಮೊದಲೇ ಸಿಂಗಲ್ ರಸ್ತೆಗಳು. ಕಣಿವೆ ನಗರಿ ನಾಡಿ ಸಿಕ್ಕಿಂ, ಯಾಕೆ ಅಗಲ ರಸ್ತೆಯಿಲ್ಲ ಎಂದು ಕ್ಯಾತೆ ತೆಗೆಯುವ ಮಾತೇ ಇಲ್ಲ. ಓಡಾಡಲು ಕಾಲು ಹರಿಸಲು ಅಷ್ಟು ಜಾಗ ಪರ್ವತದ ಸೆರಗಿನಲ್ಲಿ ಸಿಕ್ಕುವುದೆ ಪುಣ್ಯ, ಇನ್ನು ಡಬ್ಬಲ್ ರೋಡ್ ಎನ್ನುವುದು
ಕನಸೇ ಸರಿ ಆಗಲೂ ಈಗಲೂ. ಪ್ರತಿ ಪರ್ವತದ ಸೆರಗನ್ನು ಕೊರೆದು, ಅಚೀಚೆ ಕೊಂಚಮಾತ್ರದ ಜಾಗ ಸಿಕ್ಕರೂ ಅಲ್ಲೊಂದು ಬೈಕು ಇಳಿಸುವ ಕೊರಕಲು ಮಾಡಿಕೊಂಡು, ಅದರಾಚೆಗೆ ಎದುರಿನಿಂದ ಬರುವವನಿಗಾಗಿ ಅಲ್ಲಲ್ಲಿ ಅಗಲಗೊಳಿಸಿಕೊಂಡ ಏಕಮುಖ ಸಂಚಾರಿಯಂತಹ ಒಳಊರುಗಳ ರಸ್ತೆಯೇ ಕೆಲವೊಮ್ಮೆ ಪ್ರಮುಖ ರಸ್ತೆಗಳು ಕೂಡ.

ಹಾಗಾಗಿ ಎಲ್ಲಿಂದ ಹೊರಟರೂ ಗಂಟೆಗೆ 25 ಕಿ.ಮೀ. ಕ್ರಮಿಸಬಲ್ಲ ರಸ್ತೆಗೆ ಮತ್ತು ನಿಮ್ಮ ಸಹನೆ ಪರೀಕ್ಷಿಸುವಂತೆ ಅಲ್ಲಲ್ಲಿ ಅರ್ಧ ಮುಕ್ಕಾಲು ಗಂಟೆ ಟ್ರಾಫಿಕ್ಕು ನಿಂತಿರುತ್ತದೆ. ಕಾರಣ ಬೆಳ್‌ಬೆಳಗ್ಗೆ ನೋಡುವಷ್ಟರಲ್ಲಿ ಸಣ್ಣದಾದ ಬಂಡೆಯೋ ಎರಡು ಲೋಡ್‌ ನಷ್ಟು ಪರ್ವತದ ಮಣ್ಣೋ ಉದುರಿರುತ್ತದಲ್ಲ. ತೆಗೆಯುವರಾರು? ಅದರ ಕಾರ್ಯ ಆಗಬೇಕು, ಬುಲ್ಡೋಜರ್ ಬರಬೇಕು, ಅದನ್ನು ಆಚೆಗೆ ತಳ್ಳಬೇಕು. ಖಾಸಗಿಯಾಗಿ ಮಾಡಬೇಕೆಂದರೆ ಯಾರ ತಲೆಗೆ ಖರ್ಚು ಕಟ್ಟೋದು. ಹೀಗಾಗಿ ಅಲ್ಲಲ್ಲೆ ಗಾಡಿಗಳು ನಿಲ್ಲುತ್ತವೆ. ಇಂಥ ಕಿರಿಕ್ಕುಗಳು, ಮಣ್ಣು-ಮಸಿ ಅಡ್ಡ ಬೀಳೊದು ಎಲ್ಲ ಕಾಮನ್.

ಅದಕ್ಕಾಗಿ ಸಹಜವಾಗೇ ಹತ್ತಿರದಲ್ಲೆ ಅಲ್ಲಲ್ಲಿ ನಿಲ್ಲಿಸಿರುವ ಸ್ಥಳೀಯ ಆಡಳಿತದ ಜವಾಬ್ದಾರಿ ಪೂರೈಸುವಾಗ ಏನಿಲ್ಲ ಎಂದರೆ ನಿಮ್ಮ ೧ ಗಂಟೆ ತಿಂದು, ಮಧುಚಂದ್ರ ಇದ್ದಿದ್ದೇ ಆದರೆ ಅಷ್ಟರ ಮಟ್ಟಿಗೆ ಮುಂದಕ್ಕೆ ತಳ್ಳಿರುತ್ತದೆ. ಅಷ್ಟಾಗಿಯೂ ನೀವು 6-7 ಗಂಟೆ ಕ್ರಮಿಸಿ ಪೆಲ್ಲಿಂಗ್ ತಲುಪಿದಾಗ ಹೇಗೆ ಮಾಡಿದರೂ ಸಂಜೆಯ ೪ ಕಳೆದಿರುತ್ತದೆ. ರಸ್ತೆಯ ಏರಿಳಿತದ ಅಬ್ಬರಕ್ಕೆ ಎಂಥವನೂ ಅರ್ಧ ಹೈರಾಣಾಗುತ್ತಾನೆ. ಇದೆಲ್ಲಿ ಬಂದು ತಲುಪಿದೆವು ಎನ್ನುವಂತೆ. ಆದರೆ ಪಟ್ಟಣಕ್ಕೆ ಆಗಲೇ ಅಪರರಾತ್ರಿಯ ರಂಗು ಬಂದಿರುತ್ತದೆ.

ಕಾರಣ ಇಲ್ಲೆಲ್ಲ ಕತ್ತಲು ಅಡರಲು ಆರಂಭವಾಗುವುದೇ, ಸಂಜೆ ಆಗುವುದೇ ತೀರಾ 3-4ರ ಮಧ್ಯದಲ್ಲಿ. ಹೀಗಾಗಿ, 5 ಎಂದರೆ ರಾತ್ರಿಯ ಮೊದಲ ಜಾವ ಕಾಲಿಟ್ಟಾಗಿರುತ್ತದೆ. ಚಳಿ, ಬಿಸಿ ಸೂಪು, ಮೌಮೌ ನಿಮ್ಮ ಆಯಾಸ ಪರಿಹರಿಸುವಲ್ಲಿ ಶ್ರಮಿಸುತ್ತವೆ. ಅಂದ ಹಾಗೆ ನೀವು ರಾಜಧಾನಿ ಗ್ಯಾಂಗ್ಟಾಕ್‌ನಿಂದ ಬನ್ನಿ, ಹತ್ತಿರದ ರೈಲು ನಿಲ್ದಾಣ ಸಿಲಿಗುರಿಯಿಂದಲೇ ಬನ್ನಿ, ಇಲ್ಲ ಮಹಾರಾಜರಂತೆ ಬಾಗ್ದೊಗ್ರಾ ವಿಮಾನದಲ್ಲೇ ಬನ್ನಿ, ನಿಮ್ಮ ಬುಡ ಬೆಚ್ಚುವಂತೆ ಎತ್ತಾಕುವ ದೊಗರು ಬಿದ್ದ ರಸ್ತೆಯಲ್ಲಿ ಮಿಣ್ಣಗೆ ಬೈದುಕೊಳ್ಳುತ್ತ ಬರುವ ಅನಿವಾರ್ಯತೆಯಿಂದ ಪಾರಾಗಲಾರಿರಿ.

ಆದರೆ ಒಮ್ಮೆ ಪೆಲ್ಲಿಂಗ್ ಒಳಹೊಕ್ಕು ಬಿಸಿಬಿಸಿ ಕೋಣೆ ಸೇರಿಕೊಂಡು ಮರುದಿನವೇ ಟೈಗರ್ ಹಿಲ್‌ಗೆ ಹೋಗಬೇಕೋ ಅಥವಾ ಇನ್ನೆಲ್ಲೋ ದೂರದಲ್ಲಿದ್ದರೂ ನೆತ್ತಿ ತುದಿಗೆ ಬಂಗಾರದ ಕೀರಿಟ ಇರಿಸಿಕೊಂಡಂತೆ ಬೆಳಗಿನ ಗೋಲ್ಡನ್ ಲೈಟ್‌ಗೆ ಹೊಳೆಯುವ ಕಾಂಚನ್‌ಜುಂಗಾ ಪರ್ವತದ ನೆತ್ತಿ ನೋಡಬೇಕೋ ಎನ್ನುವ ಯೋಜನೆಯ ರಸಭಾವಕ್ಕೆ ಪಕ್ಕಾಗುತ್ತಿದ್ದರೆ ಕಿತ್ತೋದ ರಸ್ತೆಯ ಮೂಡ್ ಆಫ್ ದಿವಿನಾಗತೊಡಗುತ್ತದೆ. ಕಾಂಚನ್‌ಜುಂಗಾ ಇತ್ತಲಿನ ಪರ್ವತ ಶ್ರೇಣಿಯ ಅಗಾಧ ಎತ್ತರದ ಮತ್ತು ಹೆಚ್ಚಿನ ಎಲ್ಲ
ಕಣಿವೆ ರಾಜ್ಯಗಳ ನೆತ್ತಿಗೆ ಎದ್ದು ಕಾಣಿಸುವ ಪರ್ವತ. ಪ್ರತಿ ಊರಿನಲ್ಲೂ ಏನಿಲ್ಲವೆಂದರೂ ಮುಕ್ಕಾಲು ಭಾಗ ಹೋಟೆಲು, ಬಾರು, ಅಂಗಡಿ ಕೊನೆಗೆ ಸಣ್ಣ ಟೀ ಶಾಪ್ ಗಳೂ ನಡೆಯುವುದು ಕಾಂಚನಜುಂಗಾ ಹೆಸರಿನಲ್ಲೇ.

ಹಾಗಾಗಿ ಯಾವ ಕಡೆಯಿಂದ ಹಾಯ್ದರೂ ಅಲ್ಲೊಂದು ಬೋರ್ಡು ಈ ಪರ್ವತದ ಹೆಸರಿನಲ್ಲಿರೋದು ಈ 7 ಸೋದರಿಯರ ಕಣಿವೆ ರಾಜ್ಯದಲ್ಲಿ ಕಾಮನ್. ಇದೇ ಹೆಸರಿನ ರಸ್ತೆ ಪಕ್ಕದಲ್ಲೆ ಬೀಳುವ ಜಲಪಾತವೊಂದು ಪ್ರವಾಸಿ ಲಿಸ್ಟ್‌ನಲ್ಲಿದೆ. ಬಿಡಿ ನಮ್ಮ ಉತ್ತರಕನ್ನಡ ಜಿಲ್ಲೆಯಲ್ಲಿ ಅಂಥ ಜಲಧಾರೆಗಳಿಗೆ ಲೆಕ್ಕವೇ ಸಿಕ್ಕಿಲ್ಲ ಇನ್ನಾ. ಹಾಗಾಗಿ ಈ ಮಲೆನಾಡ ನೆಲದಲ್ಲಿ ಬೆಳೆದು ಹಸಿರು,
ಉಸಿರು, ಕಣಿವೆ, ಪರ್ವತ, ಮೋಡ, ನೆರಳು, ನೀರು ಎಂದೆಲ್ಲ ಏನೇ ತೋರಿಸಲಿ ನಮಗೆ ಇದು ಇಷ್ಟೆನಾ ಎನ್ನಿಸಿ  ಬಿಡುತ್ತದೆ. ಕಾರಣ ಇಲ್ಲಿನ ನೇಟಿವಿಟಿಯು ನಮ್ಮ ಬದುಕಿನ ಭಾಗವಾಗಿ ಪ್ರಕೃತಿಯಲ್ಲಿ ಪ್ರಾಸಕ್ಕಿಂತ ಚೆಂದದ ನಿಸರ್ಗದ ಜತೆಗೆ ಬದುಕು ಕಳೆದಿರುತ್ತೇವಲ್ಲ, ಹಾಗಾಗಿ ಇವೆಲ್ಲ ಲಿಸ್ಟ್ ಮಾಡಿ ಹೆಸರಿಸಿ ನಿಮ್ಮನ್ನು ಕರೆದೊಯ್ಯುವ ಪ್ರವಾಸಿ ತಾಣಗಳು, ಉಹೂಂ ಅಂಥಾ ಮಜ ಕೊಡುವುದಿಲ್ಲ.

ಆದರೆ ಬಯಲುಸೀಮೆ ಪಟ್ಟಣಿಗರಿಗೆ ಯಾವತ್ತೋ ಅಪರೂಪಕ್ಕೆ ಕಾಲುಹರಿಸಿ ಏರಿಳಿತದ ದಾರಿ ಕ್ರಮಿಸಿ, ಚಳಿಯಲ್ಲಿ ಸುಮ್ಮನೆ ಕೋಣೆ ಪಡೆದು ಹಾಯಾಗಿರುವವರಿಗೆ ಇದೆಲ್ಲ ಹೇಳಿ ಮಾಡಿಸಿದ ಜಾಗ ಬಿಡಿ. ಇದರ ವಿಶೇಷತೆ ಮತ್ತು ವರ್ಷವಿಡೀ ಚುಮು ಚುಮು ಚಳಿಗೆ ಕಾರಣ ಅನಾಮತ್ತು ಏಳೂವರೆ ಸಾವಿರ ಅಡಿ ಎತ್ತರದಲ್ಲಿ ಕಾಂಚನಜುಂಗಾ ಎದುರಿಗೆ ಪುಟ್ಟ ಪರ್ವತದ
ನೆತ್ತಿಯಲ್ಲಿ ಬೀಡುಬಿಸಾಗಿ ಬಿದ್ದಿರುವಂಥದ್ದು. ಅಕ್ಕಪಕ್ಕದಲ್ಲೆ ಜೋಂಗಥಾಂಗ್, ಪ್ರಸಿದ್ಧ ನಾಮಚಿ ಮತ್ತು ಕಾಲಿಂಗ್ ಪಾಂಗ್ ಎಂಬೆಲ್ಲ ನೆರೆಹೊರೆ ಊರುಗಳು ಈ ಪ್ರವಾಸಕ್ಕೆ ಸಹಯಾನ ಇದ್ದಂತೆ. ಯಾವ ಕಡೆಯಲ್ಲಿಂದ ಇಳಿದೂ ಚಾರಣಕ್ಕೆ ಹೊರಡಲು ಸಜ್ಜಾಗಲು ಇದು ಹೇಳಿ ಮಾಡಿಸಿದ ತುದಿ.

ಬೌದ್ಧಿಸಂ ಬೀಡುಬಿಟ್ಟಿರುವ ನೆಲದಲ್ಲಿ ಹಿಂದಿ, ಇಂಗ್ಲಿಷು ಸರಾಗ. ಇಲ್ಲಿನ ಬುಡಕಟ್ಟು ಭಾಷೆಯಲ್ಲಿ ಒಂದೇ ಒಂದು ಶಬ್ದ ಬಿಡಿ, ಅರ್ಧ ಅಕ್ಷರ ಕೂಡ ಅಪ್ಪನಾಣೆಗೂ ಅರ್ಥವಾಗಲ್ಲ. ಹೋಗಲಿ ಬಾಯಿ ಆಡಿಸುತ್ತಿದ್ದಾನಾ ಉಗುಳುತ್ತಿದ್ದಾನಾ ಗೊತ್ತಾಗದ ಭಾಷೆಯ ಸುದ್ದಿಗೆ ಹೋಗದಿರುವುದೇ ಕ್ಷೇಮ. ಗೂರ್ಖಾ ಸೈನ್ಯದ ದಾಳಿಗೆ ಸಿಕ್ಕು ನಾಶವಾದ ಅರಮನೆಯ ಅವಶೇಷ ಒಂದು ಭೇಟಿಗೆ ಸೂಕ್ತ. ಪಳೆಯುಳಿಕೆಯಂತಿರುವ ಸಿನಿಮಾ ಸೆಟ್ ಹಾಗಿರುವ ಸಿಂಗ್ ಶೋರ್ ಕಬ್ಬಿಣದ ರೋಪ್ ಸೇತುವೆ ಆಕರ್ಷಕ ಜಾಗ, ಫೋಟೊಶೂಟ್‌ಗೆ ಹೇಳಿಮಾಡಿಸಿದ ತಾಣ. 240 ಮೀ. ಉದ್ದ 100 ಚಿಲ್ರೆ ಮೀ. ಎತ್ತರದಲ್ಲಿರುವ ಇದು ಏಷ್ಯಾದ ೨ನೇ ಅತಿ ಎತ್ತರದ ಸೇತುವೆಯೂ ಹೌದು. ಇದೊಂದು ಮತ್ತು ರಿಂಗ್ಬಿ ಬುಡಕಟ್ಟುಗಳ ಹಿಡಿತದಲ್ಲಿರುವ ಕೆಂಪುಬಣ್ಣದಲ್ಲಿ ಮುಳುಗೇಳಿಸಿದಂತೆ ಇರುವ ಸಮುದಾಯ ದೇವಸ್ಥಾನದ ವಿಚಿತ್ರ ವಿನ್ಯಾಸ ನೋಡಬೇಕಾದದ್ದೇ.

ಎತ್ತಲಿಂದ ತಿರುಗಿದರೂ ಧುತ್ತನೆ ಎದುರಾಗುವ ಕಾಂಚನಜುಂಗಾ, ರಿಂಬಿ ಫಾಲ್ಸ್, ಲಾಮಾ ಲಾಟ್ಸೆನ್ ಚಾಂಪೊ ನಿರ್ಮಿಸಿದ ಪುರಾತನ ಮಠ (1705) ಹೀಗೆ ಒಂದಷ್ಟು ಇತಿಹಾಸ ಹಿನ್ನೆಲೆ, ಸಂಪರ್ಕ ಎರಡೂ ಹೊಂದಿರುವ ಪೆಲ್ಲಿಂಗ್ ಒಂಥರಾ ತೆರೆದೂ ತೆರೆದುಕೊಂಡಿರದ ಊರು. ಖಾಸಗಿ ಮಜಕ್ಕೂ, ಮುದಕ್ಕೂ, ತಿರುಗಾಟಕ್ಕೂ ಎಲ್ಲದಕ್ಕೂ ಸೈ. ಅಲೆಮಾರಿಯೊಬ್ಬನ ಅಪರೂಪದ ಕ್ಷಣಕ್ಕೂ ಪಕ್ಕಾಗಬಲ್ಲ ಪೆಲ್ಲಿಂಗ್ ಅನ್ನು ಮತ್ತೊಮ್ಮೆ ನೋಡಿ ಬರಬೇಕು.