Tuesday, 26th October 2021

ಬಾಹ್ಯಾಕಾಶದಲ್ಲಿ ಮಾನವನ ಸಾಹಸ

ಟೆಕ್ ಸೈನ್ಸ್

ಎಲ್‌.ಪಿ.ಕುಲಕರ್ಣಿ

ಈಗ ಬಾಹ್ಯಾಕಾಶದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ವಯಸ್ಸಾಗುತ್ತಿದ್ದು, ಮುಂದಿನ ನಾಲ್ಕಾರು ವರ್ಷಗಳಲ್ಲಿ ಅಂತಹದೇ ಹೊಸ ನಿಲ್ದಾಣ
ನಿರ್ಮಾಣ ಮಾಡಲು ಅಮೆರಿಕ ಮತ್ತು ಇತರ ದೇಶಗಳು ತಯಾರಿ ನಡೆಸಿವೆ.

ಕಳೆದ ವಾರದ ಲೇಖನದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಇತಿಹಾಸ, ನಿರ್ಮಾಣ, ಭೂಮಿಯಿಂದ ಹೇಗೆ ಗಗನ ಯಾತ್ರಿಗಳು ಅಲ್ಲಿಗೆ ಹೋಗಿ ವೈeನಿಕ ಸಂಶೋಧನೆಗಳನ್ನು ನಡೆಸುತ್ತಾರೆ ಎನ್ನುವುದನ್ನು ತಿಳಿದುಕೊಂಡಿದ್ದೆವು. ಹೇಗೆ ಮಾನವ ನಿರ್ಮಿತ ಎಲ್ಲಾ ವಸ್ತುಗಳಿಗೂ ಕೊನೆ ಎಂಬುದಿದೆಯೋ ಹಾಗೆಯೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಕೂಡ ನಿಧಾನವಾಗಿ ತನ್ನ ಕೊನೆಗಾಲದ ಸನಿಹಕ್ಕೆ ಬಂದು ನಿಂತಿದೆ.

ಸದ್ಯದ ಅಂದಾಜಿನ ಪ್ರಕಾರ ೨೦೨೪ ರ ವೇಳೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತನ್ನ ಕಾರ್ಯವನ್ನು ನಿಲ್ಲಿಸಲಿದ್ದು ಆ ಜಾಗವನ್ನು ಹೊಸ ಅಂತಾ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಈಗಿನ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಒಟ್ಟು ಮೌಲ್ಯ
150 ಬಿಲಿಯನ್ ಅಮೆರಿಕನ್ ಡಾಲರ್, ಪ್ರತಿ ವರ್ಷ ಅದರ ನಿರ್ವಹಣೆ ಮಾಡಲು ಸುಮಾರು 4 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚವಾಗುತ್ತಿದ್ದು, ಈ ಖರ್ಚಿನ ಬಹುಪಾಲು ಅಮೆರಿಕವೇ ನೋಡಿಕೊಳ್ಳುತ್ತಿದೆ.

ಅಮೆರಿಕದ ಖಾಸಗಿ ಸಂಸ್ಥೆಗಳಾದ ಸ್ಪೇಸ್ ಎಕ್ಸ್, ಬೋಯಿಂಗ್ ಇತ್ಯಾದಿ ಸಂಸ್ಥೆಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಗತ್ಯವಾದ ವಸ್ತುಗಳನ್ನು ಸಾಗಿಸಲು ನೆರವು ನೀಡುತ್ತಿದ್ದು, ಇದೇ ರೀತಿ ಖಾಸಗಿ ಪಾಲುದಾರಿಕೆಯಲ್ಲಿ ಹೊಸ ಬಾಹ್ಯಾಕಾಶ ನಿಲ್ದಾಣ ನಿರ್ಮಾಣದ ಬಗ್ಗೆ ನಾಸಾ ಚಿಂತಿಸುತ್ತಿದೆ.

ಏಕೆ ಬೇಕು ಹೊಸ ನಿಲ್ದಾಣ?

ನೂರಾರು ಕೋಟಿ ಖರ್ಚು ಮಾಡಿ ನಿರ್ಮಿಸಿದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಕೇವಲ 20 ವರ್ಷಗಳ ತನ್ನ ಆಯಸ್ಸು ಮುಗಿಸಲು ಕಾರಣವೇನು? ಎಂದು ನೀವು ಯೋಚಿಸುತ್ತಿರಬಹುದು. ಮುಖ್ಯವಾಗಿ ಅಂತರಿಕ್ಷದ ತೀವ್ರ ಹವಾಮಾನ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ವೇಗದ ಚಲನೆ ಅತಿ ಮುಖ್ಯ ಕಾರಣಗಳು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ 90 ನಿಮಿಷದಲ್ಲಿ ಭೂಮಿಯನ್ನು ಒಂದು ಸುತ್ತು ಹಾಕುತ್ತದೆ. ಭೂಮಿಯ ಗುರುತ್ವ ಬಲದಿಂದ ಹೆಚ್ಚು ಹೊರಗಡೆ ಇರದ ಕಾರಣ ವೇಗವಾಗಿ ಸುತ್ತುವುದು ಅನಿವಾರ್ಯ.

ಅಷ್ಟೇ ಅಲ್ಲದೆ ಅಂತರಿಕ್ಷದಲ್ಲಿರುವ ಚಿಕ್ಕ ಪುಟ್ಟ ಆಕಾಶಕಾಯಗಳೊಡನೆ ಡಿಕ್ಕಿಯಾಗುವುದು, ವಿಷಾನಿಲಗಳ ಪ್ರಭಾವದಿಂದ ಬಾಹ್ಯಾಕಾಶ ನಿಲ್ದಾಣಕ್ಕೆ ಸಾಕಷ್ಟು ಹಾನಿಯಾಗಿದೆ. ಈ ಕಾರಣಗಳಿಂದಾಗಿ ಈಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಮೇಲ್ಮೈನಲ್ಲಿ ಚಿಕ್ಕ ಪುಟ್ಟ ರಂದ್ರಗಳಾಗಿವೆ. ಹೊಸ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಅಮೆರಿಕದ ಕೆಲವು ಖಾಸಗಿ ಸಂಸ್ಥೆಗಳು ಉತ್ಸುಕವಾಗಿವೆ ಮತ್ತು ಅದಾಗಲೇ ಕೆಲವು ಬಿಡಿ ಭಾಗಗಳನ್ನು ಸಿದ್ಧಪಡಿಸಿವೆ. ಈ ಸಾಲಿನಲ್ಲಿ ಮುಂಚುಣಿಯಲ್ಲಿರುವ ಕೊಲರಾಡೊ ಮೂಲದ ಸಿಯೆರ ಸ್ಪೇಸ್, 30 ಅಡಿ ವ್ಯಾಸದ ಹಲವು ಬಿಡಿ ಭಾಗಗಳನ್ನು ಸಿದ್ಧಪಡಿಸಿವೆ. ಉತ್ಪಾದನಾ ವೆಚ್ಚವನ್ನು ಕಡಿಮೆ
ಮಾಡಲು ವಿಶೇಷ ಸಾಮಗ್ರಿಗಳನ್ನು ಬಳಸಲಾಗಿದ್ದು ಆಗಸಕ್ಕೆ ಹಾರುವ ಸಮಯದಲ್ಲಿ ಚಿಕ್ಕದಾದ ಆಕರವನ್ನು ಹೊಂದಿರುವ ನೌಕೆ ಆಗಸಕ್ಕೆ ಹಾರಿದ ನಂತರ ದೊಡ್ಡದಾಗಿ ತೆರೆದುಕೊಳ್ಳಲಿದೆ.

ಡ್ರೀಮ್ ಚೇಸರ್
ಬಾಹ್ಯಾಕಾಶ ನಿಲ್ದಾಣದ ನಿರ್ಮಾಣದಲ್ಲಿ ಹೆಚ್ಚು ವೆಚ್ಚದ ರಾಕೆಟ್‌ಅನ್ನು ಸಹ ಸಿಯೆರ ಸ್ಪೇಸ್ ತಯಾರಿಸುತ್ತಿದ್ದು, ಅದಕ್ಕೆ ಡ್ರೀಮ್ ಚೇಸರ್ ಎಂದು ಹೆಸರಿಟ್ಟಿದೆ. ಇನ್ನೊಂದು ಸಂಸ್ಥೆ ಹ್ಯುಸ್ಟನ್ ಮೂಲದ ಆಕ್ಷೀಯಮ್ ಸ್ಪೇಸ್ ನಾಲ್ಕು ಹಂತದಲ್ಲಿ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವ ಯೋಜನೆ ರೂಪಿಸಿದ್ದು ಮೊದಲ ಮತ್ತು ಎರಡನೆಯ ಬಿಡಿ ಭಾಗ ಇನೋ ಟೆನ್ ಮೆಂಟ್ ಮತ್ತು ದೈತ್ಯ ಕನ್ನಡಿಗಳನ್ನು ಹೊಂದಿರಲಿದ್ದು ಆಗಸದಿಂದ ಭೂಮಿಯನ್ನು ನೋಡಲು ಇದು ಸಹಕಾರಿಯಾಗಲಿದೆ. ಮೂರನೆಯ ಬಿಡಿ ಭಾಗ ಅನ್ವೇಷಣೆ ಮತ್ತು ಉತ್ಪಾದನೆಗೆ ಸಹಕಾರಿಯಾದ ಯಂತ್ರಗಳನ್ನು ಹೊಂದಿರಲಿದೆ.

ನಾಲ್ಕನೆಯ ಬಿಡಿಭಾಗ ಸೋಲಾರ್ ಪ್ಯಾನಲ್. ನ್ಯಾನೋ ರಾಕ್ಸ್, ಸ್ಪೇಸ್ ಎಕ್ಸ್, ಬೋಯಿಂಗ್ ಇನ್ನಿತರ ಸಂಸ್ಥೆಗಳು ಸಹ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಉತ್ಸಾಹ ತೋರಿವೆ. ಈ ಎಲ್ಲ ಸಂಸ್ಥೆಗಳ ಸಹ ಭಾಗಿತ್ವದಲ್ಲಿ ಅಮೆರಿಕದ ನಾಸಾ ಮುಂಬರುವ ಐದು ವರ್ಷಗಳಲ್ಲಿ ಹೊಸದೊಂದು ಬಾಹ್ಯಾಕಾಶ ನಿಲ್ದಾಣವನ್ನು
ಸಿದ್ಧಪಡಿಸುವುದು ಖಂಡಿತ, ಇತರ ದೇಶಗಳನ್ನು ಇದರಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳುತ್ತದೋ ಕಾದು ನೋಡಬೇಕು.

ಚೀನಾ, ರಷ್ಯಾ ದೇಶಗಳು ಕೂಡ ತಮ್ಮದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ತಯಾರಿಸುವ ಕಾರ್ಯಕ್ಕೆ ಮುಂದಾಗಿದ್ದು ಚೈನ 2030 ರ ಒಳಗೆ ಸ್ವತಂತ್ರ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಗುರಿ ಹೊಂದಿದೆ. ರಷ್ಯಾ 2025 ರ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಹೊಂದುವ ಆಸೆ ಇಟ್ಟುಕೊಂಡಿದೆ. ನಮ್ಮ ದೇಶವು ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಹೊಂದುವ ಯಾವುದೇ ಯೋಜನೆಯನ್ನು ಹೊಂದಿಲ್ಲ

Leave a Reply

Your email address will not be published. Required fields are marked *