Friday, 12th August 2022

ತವರು- ತಕರಾರುಗಳ ನಡುವಿನ ಭಾವ

ನಳಿನಿ. ಟಿ. ಭೀಮಪ್ಪ ಧಾರವಾಡ

ವಿವಾಹವಾದ ಪ್ರತಿ ಹೆಣ್ಣಿಗೂ ತಾನು ಬೆಳೆದ ತವರುಮನೆ, ಅಪ್ಪ- ಅಮ್ಮ, ಅಣ್ಣ- ತಮ್ಮಂದಿರ ಜತೆಗೆ ಮಾತನಾಡಬೇಕು, ಕಾಲ ಕಳೆಯಬೇಕು ಎನ್ನುವ ಆಸೆಗಳು ಇದ್ದೇ ಇರುತ್ತದೆ. ಕೆಲವೊಮ್ಮೆ ಈ ಸಂತೋಷಕ್ಕೆ ಗಂಡನ ಮನೆಯವರೇ ಮುಳ್ಳಾ ಗುವುದೂ ಇದೆ.

ಹೆಣ್ಣುಮಕ್ಕಳು ತವರುಮನೆಗೆ ಹೊರಟಾಗ ಗಂಡಸರಿಗೆ ಖುಷಿಯಾಗಿ ಕುಪ್ಪಳಿಸಿ ಕುಣಿದು, ಆದರೆ ಮೇಲೆ ದುಃಖವಾದಂತೆ ನಟಿ ಸುತ್ತಾ ಹೋಗಬೇಡವೆಂದು ಗೋಗರೆಯುವ ಬಗ್ಗೆ ಅದೆಷ್ಟು ಜೋಕುಗಳು ಚಾಲ್ತಿಯಲ್ಲಿವೆ. ಎಷ್ಟೋ ಸಿನೆಮಾಗಳಲ್ಲಿ, ಧಾರಾವಾಹಿಗಳಲ್ಲಿ, ಹಾಸ್ಯಲೇಖನಗಳಲ್ಲಿ ನಗುವಿಗೆ ಇದೇ ಹಳಸಲು ಸರಕು ಬೇಕು.

ಹೆಂಡತಿಗೆ ಸಿಟ್ಟು ತರಿಸಿಬಿಟ್ಟರೆ ತವರಿಗೆ ಗಂಟುಮೂಟೆ ಕಟ್ಟುವುದು ಗ್ಯಾರಂಟೀ ಎನ್ನುವ ಮಟ್ಟಿಗೆ ಬಿಂಬಿಸುವುದು ಬಾಲಿಶತನದ ಪರಮಾವಧಿ ಮೀರುತ್ತವೆ. ಕೇವಲ ಗಂಡಾ-ಗುಂಡಿ ಇರುವ, ಅತ್ತೆ ಮಾವ, ನಾದಿನಿ, ಮೈದುನರಿಲ್ಲದ ಮನೆಯಲ್ಲಿ ಇದು ಸ್ವಲ್ಪ ಮಟ್ಟಿಗೆ ನಡೆಯಬಹುದೇನೋ, ಆದರೆ ತುಂಬು ಕುಟುಂಬದಲ್ಲಿ ಅವಕಾಶಗಳು ತುಂಬಾ ಕಡಿಮೆ.

ನಿಜವಾಗಿಯೂ ಒಬ್ಬ ಹೆಣ್ಣುಮಗಳು ಅಷ್ಟು ಸುಲಭವಾಗಿ, ತನಗೆ ಬೇಕೆಂದಾಗ ತವರಿಗೆ ಹೋಗಲು ಸಾಧ್ಯವೇ? ಖಂಡಿತಾ ಸಾಧ್ಯ ವಿಲ್ಲ. ತವರಿನಲ್ಲಿ ಏನಾದರೂ ಕೆಲಸ ಕಾರ್ಯ ಗಳು ಇದ್ದಾಗ ಮಾತ್ರ ಅನುಮತಿ ಸಿಗಬಹುದು. ಅದೂ ಮನೆಯಲ್ಲಿರುವವರನ್ನೆಲ್ಲ ಅವಳ ತವರು ಮನೆಯವರು ನಾಲ್ಕು ದಿನ ಮಗಳನ್ನು ಕಳಿಸಿಕೊಡಿ ಎಂದು ಕೇಳಿಕೊಳ್ಳಬೇಕು. ಮನೆಯ ಹಿರಿಯರನ್ನು ಒಂದು ಮಾತು ಕೇಳುವುದರಲ್ಲಿ ತಪ್ಪೇನೂ ಇಲ್ಲ ಬಿಡಿ. ಆದರೆ ಕೇಳುತ್ತಿದ್ದಂತೆ ಅದೆಷ್ಟು ಮನೆಗಳಲ್ಲಿ ಒಪ್ಪಿಗೆ ಕೊಡುತ್ತಾರೆ.

ಎಲ್ಲದಕ್ಕೂ ಪರಿಪಿರಿ. ಅಯ್ಯೋ, ಧಾರಾಳವಾಗಿ ಕರೆದುಕೊಂಡು ಹೋಗಿ, ಆಕೆಗೂ ನಾಲ್ಕು ದಿನ ತವರು ಮನೆಯಲ್ಲಿರಬೇಕು ಅಂತಾ ಆಸೆ ಇರೋದಿಲ್ಲವೇ, ಇಲ್ಲಿ ಮಾಡೋದು ಇದ್ದಿದ್ದೇ ಅಂತಾ ಬೀಗರ ಮುಂದೆ ಒಪ್ಪಿದಂತೆ ನಟಿಸಿ ನಂತರ ಸೊಸೆಗೆ ತಗಲಾಕಿ ಕೊಳ್ಳುತ್ತಾರೆ. ಪದೇ ಪದೇ ತವರುಮನೆಗೆ ಹೋಗುವಂತಹ ಕೆಲಸ ಏನಿದೆ? ನಾಲ್ಕು ತಿಂಗಳ ಕೆಳಗೆ ತಾನೇ ಹೋಗಿ ಬಂದಿದ್ದಾಳೆ, ವಾರಗಟ್ಟಲೆ ಹೋಗಿ ಕೂತರೆ ಇಲ್ಲಿ ಗೇಯುವರ‍್ಯಾರು, ಕರೆಯುವವರಿಗಾದರೂ ಬುದ್ದಿ ಬೇಡವಾ ಅಂತಾ ಗಂಡ, ಮಗನ ಮುಂದೆ ಹರಿಹಾಯುತ್ತಿರುತ್ತಾರೆ.

ಸೊಸೆ ತವರಿನಿಂದ ಹಿಂದಿರುಗುವ ತನಕ ಎಲ್ಲ ಕೆಲಸಗಳೂ ತಮಗೇ ಕಟ್ಟಿಟ್ಟ ಬುತ್ತಿ ಎಂದು ಎಷ್ಟೋ ಜನ ಅತ್ತೆಯಂದಿರು, ಸೊಸೆ ಊರಿಗೆ ಹೋಗುವುದಕ್ಕೆ ಎರಡು ದಿನವಿರುವಾಗಲೇ ಹುಷಾರಿಲ್ಲದಂತೆ ಹೊದ್ದು ಮಲಗಿಬಿಡುವುದುಂಟು. ಮನೆಗೆಲಸಕ್ಕೆಂದು ಆಳುಗಳಿದ್ದರೂ ಈ ಗೋಳು ತಪ್ಪುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮಮ್ಮನನ್ನು ಬಿಟ್ಟು ತವರಿಗೆ ಹೋಗುತ್ತಿದ್ದಾಳೆ ಎನ್ನುವ ಪಾಪಪ್ರಜ್ಞೆ ಮಗನಲ್ಲಿ ಜಾಗೃತಗೊಳಿಸುವಲ್ಲಿ ಅತ್ತೆಯಂದಿರು ಯಶಸ್ವಿಯಾಗಿಬಿಡುತ್ತಾರೆ. ಅಲ್ಲಿಗೆ ಅವನೂ ಹೆಂಡತಿಯ ಮೇಲೆ ಸಿಡಿಮಿಡಿಗುಟ್ಟತೊಡಗುತ್ತಾನೆ. ಕೆಲವು ಗಂಡಸರೂ ಸಹ ಹೆಂಡತಿಯನ್ನು ತವರಿಗೆ ಕಳಿಸಲು ಮೀನಾ-ಮೇಷ ಎಣಿಸುತ್ತಲೇ
ಇರುತ್ತಾರೆ.

ಪ್ರೀತಿ ಅಂತಲ್ಲ, ಮನೆಯಲ್ಲೊಬ್ಬಳು ಅನ್ನುವುದನ್ನೆಲ್ಲಾ ಅನ್ನಿಸಿಕೊಂಡು ಬಿಟ್ಟಿ ಚಾಕರಿ ಮಾಡಿಕೊಂಡು ಬಿದ್ದಿರಬೇಕು ಎನ್ನುವ ಮನೋಭಾವ ಅಷ್ಟೇ. ಬಸ್ಸಿಗೋ, ರೈಲಿಗೋ ಹತ್ತಿಸಿ ಬರುವ ತನಕವೂ ಮುಖದ ಗಂಟು ಸಡಿಲಗೊಳಿಸುವುದಿಲ್ಲ. ಎಷ್ಟೋ ಸೋ
ಕಾಲ್ಡ್ ವಿದ್ಯಾವಂತರೂ ಸಹ ಬಸ್ ಸ್ಟ್ಯಾಂಡ್ ಅಥವಾ ರೈಲ್ವೇ ಸ್ಟೇಷನ್ನಿನ ಮುಂಭಾಗದಲ್ಲಿ ಹೆಂಡತಿ ಮಕ್ಕಳನ್ನು ಇಳಿಸಿ, ಹೇಗಾ ದರೂ ಹತ್ತಿಕೊಂಡು ಹೋಗಿ ಎಂದು ಮುಖತಿರುಗಿಸಿಕೊಂಡು ಹೋಗುವುದುಂಟು.

ಪಾಪ ಲಗೇಜುಗಳನ್ನು ಹಿಡಿದುಕೊಂಡು, ಪುಟ್ಟಮಕ್ಕಳನ್ನು ಸಂಭಾಳಿಸುತ್ತಾ, ಜೋಲುಮುಖ ಹೊತ್ತುಕೊಂಡೇ ತವರಿನ ಗಾಡಿ ಹತ್ತುವ ಹೆಣ್ಣುಮಕ್ಕಳು ಎಷ್ಟು ಜನ ಬೇಕು ಹೇಳಿ? ಅಲ್ಲಿಗೆ ತವರಿಗೆ ಹೋಗುವ ಹುಮ್ಮಸ್ಸೆಲ್ಲಾ ಟುಸ್ ಎಂದುಬಿಡುತ್ತದೆ.

ಹಾಗೆ ಹೋದ ಹೆಣ್ಣುಮಗು ತವರಿನಲ್ಲಿ ಸಂತೋಷವಾಗಿರುವುದಕ್ಕಾದರೂ ಸಾಧ್ಯವಾ? ಮನಸ್ಸು ಗಂಡನ ಮನೆಯ ಕಡೆಯೇ ಎಳೆಯುತ್ತಿರುತ್ತದೆ. ಮೊಬೈಲ್ ಕರೆ ಎತ್ತದ, ಎತ್ತಿದರೂ ಅಸಡ್ಡೆ ಅಥವಾ ಕೊಂಕು ನುಡಿಯುವ ಗಂಡನ ಮಾತು ಕೇಳುವಾಗ ಯಾಕಾದರೂ ತವರಿಗೆ ಬಂದಿದ್ದೇನಪ್ಪಾ ಎನಿಸಿಬಿಡುವುದುಂಟು. ವಾಪಾಸು ಹೋಗಲು ತವರಿನವರಿಗೆ ನೂರೆಂಟು ನೆಪಗಳು ಆಗಲೇ ಮನಸ್ಸಿನಲ್ಲಿ ಸಿದ್ಧಗೊಳ್ಳುವುದು. ಹತ್ತು ದಿನಕ್ಕೆಂದು ಹೋದವಳು, ನಾಲ್ಕೇ ದಿನಕ್ಕೆ, ಗಂಡನ ಮನೆಯಲ್ಲಿ ಮುಖ್ಯವಾದ ಕೆಲಸಗಳಿವೆ, ತಾನಿಲ್ಲ ದಿದ್ದರೆ ನಡೆಯುವುದಿಲ್ಲ ಎಂಬಂತೆ ತವರಿನವರನ್ನು ಒಪ್ಪಿಸಿ, ಗಂಡನಿಗೆ ಫೋನ್ ಮಾಡಿ ಕರೆಸಿಕೊಂಡು ಹೊರಟೇಬಿಡುತ್ತಾಳೆ. ಇತ್ತ ಆಕೆಯ ತಾಯಿಯೂ ಇಂತಹ ಅದೆಷ್ಟೋ ಘಟನೆಗಳನ್ನು ದಾಟಿಯೇ ಬಂದಿರುವ ಹೆಣ್ಣಲ್ಲವೇ,
ಮಗಳ ಪರಿಸ್ಥಿತಿಯನ್ನು ಅಂದಾಜಿಸಿ, ಹೇಗೋ ಗಂಡನ ಮನೆಯಲ್ಲಿ ಸುಖವಾಗಿದ್ದರೆ ಸಾಕು ಎಂದುಕೊಂಡು, ಗಂಡನನ್ನೂ ಒಪ್ಪಿಸಿ ಕಳಿಸಿಬಿಡುತ್ತಾಳೆ.

ತಾನು ಹುಟ್ಟಿ ಬೆಳೆದ ತವರನ್ನು ಹೆಣ್ಣು ಮದುವೆಯಾದ ಮೇಲೆ ಮರೆತೇಬಿಡಬೇಕು, ಗಂಡನ ಮನೆಗೇ ಮೀಸಲಾಗಿರಬೇಕು ಎನ್ನುವುದು ಯಾವ ನ್ಯಾಯ? ಆಕೆಗೂ ತನ್ನ ತಂದೆ-ತಾಯಿಯರ ಜತೆ, ಒಡಹುಟ್ಟಿದವರ ಜತೆ ಸ್ವಲ್ಪ ಸಮಯ ಕಳೆಯಬೇಕೆಂಬ ಆಸೆ ಇದ್ದೇ ಇರುತ್ತದೆ. ಪುಟ್ಟ ಹುಡುಗಿಯಾಗಿ ತವರಿನಲ್ಲಿ ನಲಿದಾಡಬೇಕೆಂಬ ಹಂಬಲವಿರುತ್ತದೆ. ತನ್ನ ಕಡೆಯ ನೆರೆಹೊರೆ, ಬಂಧು-ಬಾಂಧವರ, ಸ್ನೇಹಿತರ ಒಡನಾಟದಲ್ಲಿ ಸ್ವಲ್ಪಮಟ್ಟಿಗಾದರೂ ಕಾಲಕಳೆಯಬೇಕೆಂಬ ಆಸೆ ಆಕೆಗೂ ಇರುತ್ತದೆ ಎಂಬು ದನ್ನು ಅರ್ಥೈಸಿಕೊಳ್ಳಬೇಕು.

ಕಾಲದ ಸರಿದಂತೆಲ್ಲ ಇಂಚಿಂಚಾಗಿ ತವರು ದೂರ ಸರಿಯುವುದು ಸಹಜ. ಹಾಗಾಗಿ ಆಕೆಗೆ ಹೋಗುವ ಅವಕಾಶ, ಆಸೆ, ತವರಿ ನವರು ಕರೆಯುವ ಸ್ಥಿತಿಯಲ್ಲಿದ್ದಾಗ, ಖುಷಿಯಿಂದ ಕಳಿಸುವ ಮನಸ್ಸು ಗಂಡ, ಗಂಡನ ಮನೆಯವರಿಗೆ ಬಂದರೆ ಅದಕ್ಕಿಂತ ಬೇರೆ ಸಂತೋಷವೇನಿದೆ. ಹಾಗಾದಾಗ ಆ ಹೆಣ್ಣುಮಗುವೂ ಸಹ ಮತ್ತಷ್ಟು ಖುಷಿಯಿಂದ ತನ್ನನ್ನು ಗಂಡನ ಕುಟುಂಬಕ್ಕೆ ಅರ್ಪಿಸಿ ಕೊಳ್ಳುವುದರಲ್ಲಿ ಸಂಶಯವಿಲ್ಲ.