Wednesday, 29th June 2022

ಸೋಂಕು ಕಡಿಮೆಯಾದರೆ ಲಾಕ್‌ಡೌನ್‌ ಸಡಿಲಿಕೆ: ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು : ಕೋವಿಡ್ – 19 ಸೋಂಕಿನ ಪ್ರಮಾಣ ಶೇಕಡ 10ಕ್ಕಿಂತ ಕಡಿಮೆ ಬರುವ ತನಕ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡುವುದಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಪ್ರಸ್ತುತ ರಾಜ್ಯದಲ್ಲಿ ಸೋಂಕಿನ ದರ ಶೇ 10 ಕ್ಕಿಂತಲೂ ಹೆಚ್ಚಾಗಿದೆ. ಇದು ಕಡಿಮೆ ಬರುವ ತನಕ ಲಾಕ್ ಸಡಿಲಿಕೆ ಇಲ್ಲ. ಕಠಿಣ ನಿಯಮಗಳೇ ಮುಂದುವರೆಯಲಿವೆ. ಜೂನ್ 7 ರ ವರೆಗೆ ಇರುವ ಲಾಕ್ ಡೌನ್ ನನ್ನು ನಾವು ಪೂರ್ಣಗೊಳಿಸಲಿದ್ದು ಸದ್ಯಕ್ಕೆ ‌ಲಾಕ್ ಡೌನ್ ನಲ್ಲಿ ಯಾವುದೇ ಬದಲಾವಣೆ ಇಲ್ಲ‌ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ಕೇಂದ್ರ ಗೃಹ ಇಲಾಖೆ ಜೂನ್ 30ರ ತನಕ ಕಠಿಣ ಕ್ರಮಕ್ಕೆ ಸೂಚನೆ ನೀಡಿದೆ. ಇದರ ಬಗ್ಗೆ ಸಭೆ ನಿರ್ಧಾರ ಮಾಡಲಿದೆ ಎಂದು ಹೇಳಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ‌ ಶೀಘ್ರವೇ ಸಚಿವರ ಜೊತೆ ಸಭೆ ನಡೆಸಿ, ತೀರ್ಮಾನ ಮಾಡ ಲಿದ್ದಾರೆ ಎಂದು ತಿಳಿಸಿದರು. ಸಭೆಯಲ್ಲಿ ಕರ್ನಾಟಕದ ಜಿಸ್ಟಿ ಪಾಲು ಕೊಡುವಂತೆ ಒತ್ತಾಯ ಮಾಡಲಾಗಿದೆ.11000 ಕೋಟಿ ಕೊಡುವಂತೆ ಒತ್ತಡ ಹೇರಲಾಗಿದೆ ಎಂದರು.

ಲಾಕ್ಡೌನ್ ನಷ್ಟಕ್ಕೆ ಪರಿಹಾರ ನೀಡಿ

ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾಗಿರುವ 11 ಸಾವಿರ ಕೋಟಿ ಜಿಎಸ್ಟಿ ಪರಿಹಾರವನ್ನು ನೀಡುವಂತೆ ಕೇಂದ್ರಕ್ಕೆ ಒತ್ತಾಯ ಮಾಡಲಾಗಿದೆ. ಈ ವರ್ಷ ಮತ್ತೆ ಕೋವಿಡ್ ಬಂದಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ರಾಜ್ಯದ ಆರ್ಥಿಕತೆ ಚೇತರಿಸಿಕೊಂಡಿತ್ತು. ಆದರೆ ಈಗ ಮತ್ತೆ ಲಾಕ್ ಡೌನ್ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ 2 – 3 ತಿಂಗಳು ಜಿಎಸ್ಟಿ ಸಂಗ್ರಹ ಕಡಿಮೆಯಾಗುತ್ತದೆ. ಹೀಗೆ ಲಾಕ್ಡೌನ್ ನಲ್ಲಿ ಕಡಿಮೆಯಾಗುವ ಜಿಎಸ್ಟಿ ಪರಿಹಾರವನ್ನು ತುಂಬಿಕೊಡುವಂತೆ ಎಲ್ಲ ರಾಜ್ಯಗಳು ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಒತ್ತಾಯ ಮಾಡಿದವು‌. ಕರ್ನಾಟಕದಿಂದ ನಾನು ಕೂಡ ಇದೇ ಒತ್ತಾಯ ಮಾಡಿದ್ದೇನೆ. ಅದಕ್ಕೆ ಅವರು ಒಪ್ಪಿಕೊಂಡಿ ದ್ದಾರೆ. ಜಿಎಸ್ಟಿ ಇಂದ ಎಷ್ಟು ಪರಿಹಾರ ಕೊಡಬೇಕು ? ಸಾಲ ಪಡೆಯಲು ಅನುಮತಿ ನೀಡಬೇಕಾ? ಇದನ್ನು ಹೊರತುಪಡಿಸಿ ಉಳಿದ ಪರಿಹಾರ ಹಣವನ್ನು ಯಾವ ರೂಪದಲ್ಲಿ ನೀಡಲು ಸಾಧ್ಯ ಎಂಬುದರ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

***

ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಒಂದೆರಡು ದಿನಗಳಲ್ಲಿ ಸತ್ಯ ಹೊರ ಬರಲಿದೆ. ಪ್ರಕರಣದ ಹಿನ್ನೆಲೆಗೆ ಸ್ಪಷ್ಟ ರೂಪ ಸಿಗಲಿದೆ.

ಬಸವರಾಜ್ ಬೊಮ್ಮಾಯಿ, 

ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರು