Sunday, 17th October 2021

ಭಾರತದ ಆಭರಣಕ್ಕೆ ಬಂದೂಕಿನ ರಕ್ಷಣೆ

ಆಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehendale@gmail.com

ಈ ರಾಜ್ಯವನ್ನು ಭಾರತದ ಆಭರಣ ಎಂದು ಅದ್ಯಾಕೆ ವರ್ಣಿಸಿದರೋ ಗೊತ್ತಿಲ್ಲ, ಆದರೆ ಇವತ್ತಿಗೂ ಬಂದೂಕಿನ ಭಯವಿಲ್ಲದೆ ರಾಜ್ಯ ನೆಮ್ಮದಿಯ ನಿದ್ರೆ ಮಾಡಲಾ ರದು ಎನ್ನುವ ವಿಪರ್ಯಾಸವಿದೆ. ಮೊದಲಬಾರಿಗೆ ಹೋದ ಪ್ರವಾಸಿಗರಿಗೆ ಇದನ್ನು ಅರಗಿಸಿಕೊಳ್ಳಲು ನಿಜಕ್ಕೂ ಗಂಟಲಲ್ಲಿ ಕಡುಬು ತುರುಕಿಟ್ಟ ಅನುಭವ. ಯಾರನ್ನೂ ನಂಬದ ಪಡೆಗಳು ಇದ್ದುದರಲ್ಲಿ ಪ್ರವಾಸಿಗರ ಜತೆಗೆ ಸೌಹಾರ್ದಯುತವಾಗಿವೆ.

ಎಲ್ಲೆಲ್ಲೂ ವಿಶೇಷ ಪಡೆ ಕಾವಲಿಗೆ ಕೂತಿರುವ ಈ ಆಭರಣ ನಗರಿಗೆ ಕಾವಲು ಕಾಲುವೆಯಂತೆ ಎಲ್ಲೆಲ್ಲೂ ನದಿಗಳು, ಮೂರು ಕಡೆಯಿಂದ ಪೂರ್ತಿ ಮಣಿಪುರ ಸುತ್ತು ವರೆದಿವೆ. ಅದರಲ್ಲಿ ಅರ್ಧ ಮಣಿಪುರಕ್ಕೆ ನೀರು ಉಣಿಸುತ್ತಿರುವ ಜೀವ ನದಿ ನಂಬುಲಾ ರಿವರ್. ಇದು ಒಂದು ಜಿಲ್ಲೆಯಲ್ಲಿದ್ದರೆ, ಅದರ ಪಕ್ಕದಲ್ಲೇ ಕತ್ತು ಹೊರಳಿಸಿ ದರೆ ಹರಿಯುವ ಜೀವ ನದಿ ಇಂಫಾಲ. ಮಣಿಪುರಿಗಳ ಜೀವ ನದಿ.

ಈ ಜೀವ ನದಿಗೆ ಸ್ಪರ್ಧೆಗೆ ಬಿದ್ದವರಂತೆ ಸಮಾನಾಂತರವಾಗಿ ಇನ್ನೂ ಎರಡ್ಮೂರು ನದಿಗಳು ಈ ನಗರವನ್ನು ಬಳಸಿ ಹಿಡಿದಿರುವುದರಿಂದ ಕೆಲವೊಮ್ಮೆ ಇಂಫಾಲ ವನ್ನು ಸುತ್ತುವಾಗ ನಡುಗಡ್ಡೆಯಲ್ಲಿದ್ದೀವಾ ಎನ್ನಿಸುತ್ತದೆ. ಕಾರಣ ಸರಿಯಾಗಿ ಎಡಗಡೆಗೆ ಕಾಂಗ್ರಾ, ಅದರ ಪಕ್ಕದಲ್ಲೇ ಟ್ರೈಲ್ ನದಿ, ಮನೆಯಲ್ಲಿ ದೇವ್ರು ಎನ್ನುವಂತೆ ಊರ ಮಧ್ಯೆ ಹರಿಯುವ ನದಿ ಇಂಫಾಲ. ಹೀಗಾಗಿ ಮೂರ್ನಾಲ್ಕು ಕಡೆಯಲ್ಲಿ ನದಿಗಳು ಹರಿಯುತ್ತಿರುವುದರಿಂದ ನೀರಿನ ವಿಶೇಷ ಬರ ಕಾಣಿಸದಿದ್ದರೂ ಸ್ವಚ್ಛತೆಗೆ ಬರ ಬಂದಿರುವುದು ಸುಳ್ಳಲ್ಲ.

ಯಾವುದೇ ನದಿಗಳು ಕಾಣಬೇಕಿದ್ದರೆ ಅದು ಮಳೆಗಾಲದಲ್ಲಿ ಮಾತ್ರ ಸಾಧ್ಯ. ಉಳಿದಂತೆ ಮಳೆಗಾಲದ ನೀರು ಇಳಿಕೆಯಾಗುತ್ತಿದ್ದಂತೆ ಇವೆಲ್ಲಾ ದೊಡ್ಡ ಪ್ರಮಾಣದ ಮೋರಿಯಾಗಿ ಬದಲಾಗುತ್ತವೆ ಮತ್ತು ಒಂದು ತಿಂಗಳು ಕಳೆಯುವ ಹೊತ್ತಿಗೆ ಕೊಚ್ಚೆ ಮಡುಗಟ್ಟುತ್ತದೆ. ಆಮೇಲಿನದ್ದು ವಿವರಿಸುವ ಅಗತ್ಯವಿಲ್ಲ. ವರ್ಷವಿಡಿ ಕೊಳೆ ಸಂಗ್ರಹ ವಾಗಿ ಬದಲಾಗುತ್ತದೆ. ಇಡೀ ಇಂಫಾಲಕ್ಕೆ ದಿಮ್ಮೆನ್ನಿಸುವ ವಾಸನೆ ಹರಡುತ್ತಾ ನಿಲ್ಲುತ್ತವೆ. ಪ್ರವಾಸಿಗರಿಗೆ ಮೂಗಿಗೆ ಬಟ್ಟೆ ಕಟ್ಟಿಕೊಂಡು ಓಡಾಡುವ ಅನಿವಾರ್ಯ ಕರ್ಮ. ಆದರೂ ಅದರ ಪಕ್ಕದಲ್ಲೇ ಊಹೆಗೂ ದಕ್ಕದ ಜನಜೀವನ ಬೆಳೆದು ನಿಲ್ಲುತ್ತಿದೆ.

ಕಾಲ ಕಾಯುವುದಿಲ್ಲ ಮತ್ತು ಜನರು ಅದಕ್ಕೂ ಮೊದಲೇ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾರೆ ಎನ್ನುವುದಕ್ಕೆ ಮಿಥೀಸ್‌ಗಳ ಜೀವನ ಅಪ್ಪಟ ಉದಾಹರಣೆ. ಕಾರಣ ಟ್ರೈಲ್ ಮತ್ತು ಕಾಂಗ್ರಾಗಳಲ್ಲಿ ನೀರಿಗಿಂತ ಕೊಚ್ಚೆನೇ ಹೆಚ್ಚಾಗಿದ್ದುದು ಕಾಣಿಸುತ್ತಿತ್ತು. ಆದರೂ ನೀರಿನ ಹರಿವಿಗೆ ಅಗಾಧ ಕೊಡುಗೆಯನ್ನು ಈ ನದಿಗಳು ಜಿದ್ದಿಗೆ
ಬಿದ್ದಂತೆ ಪೂರೈಸುತ್ತಿವೆ ಎನ್ನುವುದು ಸುಳ್ಳಲ್ಲ. ಇಲ್ಲಿನ ಪ್ರಮುಖ ಆಹಾರವಾಗಿರುವ ಮೀನಿನ ಕೃಷಿ ಹ್ಯಾಚರಿ ಪದ್ಧತಿಗೆ, ಮನೆಯ ಪಕ್ಕದಲ್ಲಿ ಇದ್ದ ಹತ್ತು ಚದರ ಅಡಿ
ಹೊಂಡಗಳು ಇಲ್ಲಿನ ಕೊಚ್ಚೆಗುಂಡಿಗಳ ಕಿಂಗ್‌ಮೇಕರ್ ಗಳು.

ಎಲ್ಲೆಂದರಲ್ಲಿ ಮೀನಿನ ಕೃಷಿಗೆ ರಾಡಿ ಎಬ್ಬಿಸಿ ಕೂತಿರುವ ಮಣಿಪುರಿಗಳು ನೀರು ಬದಲಿಸಿ ಸ್ವಚ್ಛತೆ ಯನ್ನು ಕಾಯ್ದುಕೊಳ್ಳುವ ಗೋಜಿಗೂ ಹೋಗುವುದಿಲ್ಲ. ಮೀನು ದಷ್ಟ ಪುಷ್ಟವಾಗಲಿ ಎಂದು ಮನೆಯ ಮಾಂಸದ ಅಷ್ಟೂ ತ್ಯಾಜ್ಯವನ್ನು ಅದರಲ್ಲೇ ಹಾಕಿ ಕೊಳೆಸುತ್ತಾರೆ. ಮಣಿಪುರದ ಹೃದಯ ಭಾಗದ ಸುತ್ತಲೂ ಇದ್ದಬದ್ದ ಜಿಲ್ಲೆ ಗಳನ್ನು ಆರ್ಥಿಕ ಸ್ಥಿತಿಗತಿಗಿಂತ ಜಾತಿ, ಬುಡಕಟ್ಟು, ಪರ್ವತ, ಕಣಿವೆಯ ಪರಿಸರಕ್ಕನುಗುಣುವಾಗಿ ವಿಂಗಡಿಸಲಾಗಿದ್ದು ಈಗಲೂ ಸಬ್ ಡಿವಿಶನಲ್ ಅಧಿಕಾರ ವ್ಯಾಪ್ತಿಯೇ ದೊಡ್ಡದು. ಇಂತಹ ಡಿವಿಜಿನಲ್ಲುಗಳೇ ಜಿಲ್ಲೆಗಳಾಗಿ ಬದಲಾದವು. ಹಾಗೆ ಬದಲಾಗುವಾಗ ಯಾವ ಮಾನದಂಡವೂ ಇಲ್ಲದಿದ್ದುದರಿಂದಲೇ ಎರಡೇ ಕಿ.ಮೀ. ಗೂ ಒಂದೊಂದು ಜಿಲ್ಲೆ.

ನಾನಿದ್ದ ಕಿಟಕಿಯ ಆಚೆಗೆ ಒಂದು ಜಿಲ್ಲೆ, ಇದ್ದ ರೂಮು ಒಂದು ಜಿಲ್ಲೆ, ಅದರ ಹಿಂದೆ ಮತ್ತೆ ಮೊದಲಿನ ಜಿಲ್ಲೆ ಆರಂಭ. ಜಿಲ್ಲಾ ಸರಹದ್ದು ಮನೆ ಬೆಡ್‌ರೂಮು, ಕಿಚನ್
ಗಳನ್ನೆಲ್ಲ ಎಲ್ಲೆಲ್ಲಿ ಬೇರ್ಪಡಿಸುತ್ತದೆ ಅರ್ಥವಾಗಲು ಕ್ಲಿಷ್ಟ. ಕಿಟಕಿಯ ಸಣ್ಣಸಣ್ಣ ಸರಳುಗಳ ನಡುವೆಯಿಂದ ಇನ್ನೊಮ್ಮೆ ನಂಬುಲಾ ನೋಡುತ್ತಾ ರಸ್ತೆಗಿಳಿದಿದ್ದೆ. ಕಾರಣ ಪ್ರತಿ ಸಂಜೆಗಳು ಆಯಾ ಊರಿನ ಹೊಸ ಆಯಾಮವನ್ನು, ಹೊಸ ಪರಿಚಯ ಮಾಡಿಕೊಡುತ್ತದೆ. ಒಂದು ಹೊಸ ಜಾಗಕ್ಕೆ ಹೋಗುವಾಗ ಅಲ್ಲಿನ ಇತಿಹಾಸವನ್ನು
ಓದಿಕೊಳ್ಳುವುದು ಹೇಗೆ ಅಗತ್ಯವೋ, ಹಾಗೆ ಪ್ರತಿ ಊರಿನ ನಿಜ ಮುಖಗಳು ಅನಾವರಣಗೊಳ್ಳುವುದು ಸಂಜೆಯ ಮಬ್ಬುಗತ್ತಲಲ್ಲೆ.

ಅದರ ಅಂದ ಚೆಂದ, ವೈಯ್ಯಾರ, ನಗರದ ಬುದ್ಧಿವಂತಿಕೆ, ನಿಧಾನಗತಿಯಲ್ಲಿ ಗೊತ ಆಗದಂತೆ ಹೊತ್ತು ತೆವಳುವಿಕೆ, ಅರಿವೇ ಆಗದ ಗಮ್ಮತ್ತು, ಗೊತ್ತಾಗಿಯೂ
ಕೈಗೆಟುಕದ ನಗರ ವಿನ್ಯಾಸದ ಚಿತ್ರಣ, ಎಲ್ಲ ನೋಡಿದ ನಂತರವೂ ಎಲ್ಲಾ ತಿಳಿದೂ ಕೈಗೆ ಸಿಗದ ಹೆಣ್ಣಿನಂತೆ ಸಂಜೆಯ ಹೊತ್ತಿನ ನಗರ ಸ್ಥಿತಿಗತಿಗಳು ಅರಿವಿಗೆ ಬರುವುದು ಅರೆ ತಿಳಿಗತ್ತಲಲ್ಲಿ ರಸ್ತೆಗಳಿಗೆ ಕಾಲಿಟ್ಟಾಗಲೇ. ಆದರೆ ಇಲ್ಲಿ ಕತ್ತಲು ಎನ್ನುವುದಕ್ಕಿಂತಲೂ ಸಂಜೆಯ ನಾಲ್ಕೂವರೆಗೆ ಮಬ್ಬು ಅಡರಿ ಐದೂವರೆಗೆಲ್ಲಾ ಅಗಾಧ ರಾತ್ರಿ ನೀರವತೆಯೂ ಕತ್ತಲೂ ಆವರಿಸಿಕೊಂಡು ಜನ ಜೀವನ ಸ್ತಬ್ಧವಾಗುವ ಮೊದಲ ಹಂತದಲ್ಲಿರುತ್ತದೆ.

ಎಲ್ಲಿಯೇ ಹೋಗಿ ಅಲ್ಲಿನ ಪರಿಚಯ ಆರಂಭವಾಗುವುದೇ ಸ್ಥಳೀಯ ಚಹದ ಪುಟ್ಟಪುಟ್ಟ ಅಂಗಡಿ ಗಳಿಂದ. ಈ ಜಾಗಗಳು ವಿವರವನ್ನು ಅನಾವರಣಗೊಳಿಸುವ ಪರಿ ಅನೂಹ್ಯವಾದುದು. ದುರದೃಷ್ಟ ಎಂದರೆ ಇಂಫಾಲದಲ್ಲಿ ಅಲ್ಲೊಂದು ಇಲ್ಲೊಂದು ಚಹದಂಗಡಿಗಳು ಕಣ್ಣಿಗೆ ಬೀಳುತ್ತವಾದರೂ ಅದು ನಾವು ಊಹಿಸಿಕೊಂಡಂತಿಲ್ಲ. ಇಲ್ಲಿ ಹಿಂದಿ ಅಥವಾ ಇಂಗ್ಲೀಷು ಅಪೂಟು ತ್ಯಾಜ್ಯದಂತೆ ನಿರ್ವಹಿಸ ಲ್ಪಡುತ್ತಿವೆ. ಆದರೂ ಸಂವಹನಕ್ಕೆ ಸಾಧ್ಯ. ಅದರಾಚೆಗೆ ಮಣಿಪುರಿಗಳ ‘ಮಿಥೇಲೇಯಿನ್’ ಕಿವಿಗೆ ಕಣ್ಣಿಗೆ ರಾಚುತ್ತದೆ ಸುಂದರ ಮಣಿಪುರಿ ಪ್ರಮಿಳೇಯರಂತೆ. ರಸ್ತೆಯಲ್ಲಿ ಇಳಿದು ಎದುರಿಗಿದ್ದ ಚೌಕ ಹಾಯ್ದು ಕಣ್ಣಳತೆಯಲ್ಲಿ ದೂರವನ್ನು ಅಂದಾಜಿಸುತ್ತಾ ಸಾಗಿದರೆ ಇಂಫಾಲದ ತಣ್ಣನೆಯ ಒಗರು ಮಿಶ್ರತ ಮೀನು ವಾಸನೆಯ ಜೊತೆಗೆ ಸ್ಥಳೀಯ ಮದ್ಯದ ಕಹಿ ದ್ರವದ ಘಾಟು ಮೂಗಿಗಡರುತ್ತದೆ.

ಮೊದಲ ಹದಿನೈದು ನಿಮಿಷದಲ್ಲೇ ಶುದ್ಧ ಗಾಳಿಗಾಗಿ ನನ್ನ ಪುಪ್ಪುಸ ಚಡಪಡಿಸಿದ್ದು ಸ್ಪಷ್ಟ. ಅಲ್ಲಲ್ಲಿ ನಿರುಕಿಸುತ್ತಾ ಮಾರುಕಟ್ಟೆ ಕ್ಷೇತ್ರಕ್ಕೆ ಕಾಲಿಟ್ಟರೆ ಮೊದಲ ಬಾರಿಗೆ ಈ ಮಣಿಪುರವನ್ನು ‘ಭಾರತ ಆಭರಣ’ ಎಂದು ಬಣ್ಣಿಸಿದವರ ಮೇಲೆ ಅನುಮಾನ ಬಂದಿತ್ತು. ಆತ ಇದನ್ನು ಕೂತಲ್ಲಿಂದ ಊಹಿಸಿ ಹೇಳಿದ್ದನಾ ಅಥವಾ ಯಾರಾ ದರೂ ಆ ಮಹಾಶಯನನ್ನು ತಪ್ಪು ದಾರಿಗೆಳೆದಿದ್ದರಾ ಗೊತ್ತಿಲ್ಲ. ಕಾರಣ ರಾಜಧಾನಿಯಿಂದಲೇ ಸ್ವಚ್ಛತೆಯ ಪಾಠ ಆರಂಭವಾಗಬೇಕಿದೆ ಇಲ್ಲಿ. ಶುದ್ಧತೆ ಮತ್ತು ಶಿಸ್ತು ಎನ್ನುವ ಪದಗಳಿಗೆ ಮಣಿಪುರಿಗಳು ಬದ್ಧ ವೈರಿಗಳು ಎನ್ನುವುದುಹೆಜ್ಜೆ ಹೆಜ್ಜೆಗೂ ಸಾಬೀತಾಗುತ್ತದೆ. ನಾನು ಮಣಿಪುರದ ರಾಜಧಾನಿಯ ಬೀದಿಯಲ್ಲಿ ಶುದ್ಧ ಕಬೋಜಿಯಂತೆ ಅಲೆಯುವುದರ ಹಿಂದೆ ಇದ್ದುದು ಶುದ್ಧ ಬರಹಗಾರನೊಬ್ಬನ ಚಡಪಡಿಕೆ ಅಷ್ಟೇ.

ಹಾಗಾಗೇ ರಾತ್ರಿ ಏಳಕ್ಕೆಲ್ಲಾ ಮಧ್ಯರಾತ್ರಿಯ ಗತ್ತನ್ನು ಪಡೆಯುವ ಅಪರಿಚಿತ ನಗರದ ನಿರ್ಮಾನುಷ ಬೀದಿಗಳಲ್ಲಿ ಕಿವಿಗಪ್ಪಳಿಸುವುದು ಕೇವಲ ಮಿಲಿಟರಿ ಬೂಟು ಗಳ ಶಬ್ದದ ಜೊತೆಗೆ ವಿಶಿಲ್‌ಗಳ ಧ್ವನಿಯಲ್ಲದೇ ಇನ್ನೇನಲ್ಲ. ಹಿಂದಿ ಅಥವಾ ಇನ್ನಾವುದೇ ಭಾಷೆಯ ಚಿತ್ರಗಳಾಗಲಿ ಇನ್ನಾವುದೇ ಮನರಂಜನೆಯ ವಿಷಯವಾಗಲಿ ನಡೆಯುವುದೇ ಇಲ್ಲ. ಇಲ್ಲಿ ಕೇವಲ ಶುದ್ಧ ಮತ್ತು ಅಪ್ಪಟ ಮೀಥಿಲೇಯನ್ ಭಾಷೆ ರಾಜ್ಯವಾಳುತ್ತಿದೆ. ಅದನ್ನು ಬಿಟ್ಟರೆ ಒಳಭಾಗಗಳಲ್ಲಿ ಅವರ ವರದ್ದೇ ಸಂಪ್ರದಾ ಯದ ಭಾಷೆಗಳು ಕಾಲೂರಿ ನಿಂತಿವೆ. ಇದ್ದುದರಲ್ಲಿ ಇಂಫಾಲ ನಗರ ಮತ್ರ ನಗರೀಕರಣಕ್ಕೆ ಈಡಾಗುತ್ತಿದ್ದರೆ ಉಳಿದ ಜಿಲ್ಲಾ ಕೇಂದ್ರಗಳೂ ಸಹಿತ ಇವತ್ತಿಗೂ ಇಟ್ಟಿಗೆ ಗೂಡು ಮತ್ತು ಕಲ್ಲಿದ್ದಲು ಸರಕು ಮಾರುವ ಅಪ್ಪಟ ಅಂಗಡಿಗಳು.

ಅಷ್ಟರ ಮಟ್ಟಿಗೆ ಇತರ ಸ್ಥಳಗಳು ಇನ್ನೂ ಮುಖ್ಯವಾಹಿನಿಯಿಂದ ದೂರ ಇದ್ದರೂ ಮೊಬೈಲು ಮತ್ತು ಟಿ.ವಿ. ಜೊತೆಗೆ ಕೂಲ್ ಡ್ರಿಂಕ್ಸ್, ಕುರ್‌ಕುರೆ, ಲೇಸ್ ಹಾಗೂ
ಕೋಕಾ ಕೋಲಾ ಯಾವ ಮೂಲೆಗೂ ತಲುಪಿರುವುದು ಬದುಕಿನ ಹಾಗೂ ನಮ್ಮ ಸಾಮಾಜಿಕ ವ್ಯವಸ್ಥೆಯ ಗಮನೀಯ ವಿಪರ್ಯಾಸ. ಕುಡಿಯುವ ನೀರಿನ
ವ್ಯವಸ್ಥೆಯೇ ಇರದ ಜಾಗದಲ್ಲೂ ಧಾರಾಳವಾಗಿ ಈ ತಂಪು ಪಾನೀಯಗಳು ಬಿಕರಿಯಾಗುತ್ತವೆ. ಹಾಗಾಗೇ ಈ ನೆಲದಲ್ಲಿ ಹರಿದಾಡುವ ಮೊದಲು ಒಂದಿಷ್ಟು ಇಲ್ಲಿನ ಇತಿಹಾಸ ನಮ್ಮ ನೆನಪಿಗಿದ್ದರೆ ಮುಂದಿನ ತಿರುವುಗಳು, ನಡೆಗಳು ಸುಲಭವಾಗುತ್ತವೆ.

ಇದು ನನ್ನ ಅನುಭವ ಕೂಡಾ. ಅದಕ್ಕೂ ಮೊದಲು ಒಂದಷ್ಟು ಮಣಿಪುರದ ಚಿತ್ರವಿಚಿತ್ರ ಹೆಸರುಗಳ ಇತಿಹಾಸವನ್ನು ಒಮ್ಮೆ ತಿರುವಿ ಹಾಕಲೇಬೇಕು. ಅನಾಮ ತ್ತಾಗಿ 108 ರಾಜರನ್ನು ಅವರ ಚಿತ್ರ ವಿಚಿತ್ರ ತಿಕ್ಕಲುತನಗಳನ್ನು, ಪ್ರತಿ ರಾಜನೂ ಒಂದೊಂದು ಆಟವನ್ನು, ಹಬ್ಬವನ್ನು ಪೋಷಿಸಿದ ಅದ್ಭುತ ಇತಿಹಾಸ ಇದರದ್ದು. ಇಂತಹವರನ್ನೆಲ್ಲಾ ಸಹಿಸಿಕೊಂಡು, ಹಲವು ಬಾರಿ ಮಣ್ಣು ಮಣ್ಣಾಗಿ, ಮತ್ತೆ ಮತ್ತೆ ಮೈ ಕೊಡವಿ ಎದ್ದು ನಿಂತು ಈಗ ಭರ್ತಿ ಯೌವನೆಯಂತೆ ಬೆಳೆದ ನಾಡು ಮಣಿಪುರ.

ಅಂದ ಹಾಗೆ ಇದೀಗ ಮಣಿಪುರ ಅದಕ್ಕೂ ಮೊದಲು ಶತಮಾನಕ್ಕೊಮ್ಮೆ ಹೆಸರು ಸೇರಿದಂತೆ ಪ್ರಾಕೃತಿಕವಾಗೂ ತನ್ನ ಓರೆ ಕೋರೆಗಳನ್ನು ಬದಲಿಸಿಕೊಳ್ಳುತ್ತಾ ಬಂದ ನಾಡು ಇದು. ಇಂಥಾ ನಾಡಿಗೆ ಕ್ರಿ.ಪೂ. 33 ರಲ್ಲಿ ಶ್ರೀಕಾರ ಹಾಕಿದವನು ಆಗಿನ ಪಾಳೇಯಗಾರ ನೋಂಗ್ಡಾ ಲೈರೇನ್ ಪಾಕಾಂಗ್ಬಾ. ಕಂಗ್ಲಾ ನಾಡಿನ ಕಥಾನಕದಲ್ಲಿ ಬರುವ ಽಮಂತ ನಾಯಕ. ಒಂದು ರೀತಿಯಲ್ಲಿ ಹೆಚ್ಚಿನ ಬುಡಕಟ್ಟುಗಳಿಗೆ ಈಗಲೂ ದೇವರು ಈತ. ಈ ಪಕಾಂಗ್ಬಾ ಈಗ ಪ್ರಮುಖ ಪ್ರವಾಸಿ ಸ್ಥಳದಲ್ಲಿ ‘ಗರ್ಭ ಗುಡಿಯಲ್ಲಿ’ ನೆಲೆಸಿದ್ದಾನೆ. ಅವನೆಲ್ಲ ಕತೆ ಇನ್ನೊಂದು ವಾರಕ್ಕಿರಲಿ.

Leave a Reply

Your email address will not be published. Required fields are marked *