Monday, 3rd October 2022

ಈದ್ಗಾ ಮೈದಾನದಲ್ಲಿ ಮೊದಲ ಬಾರಿಗೆ ರಾಷ್ಟ್ರ ಧ್ವಜಾರೋಹಣ

ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಮೊದಲ ಬಾರಿಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು.

ಸಂಸದ ಪಿ.ಸಿ.ಮೋಹನ್ ಹಾಗೂ ಶಾಸಕ ಜಮೀರ್ ಆಹ್ಮದ್‍ಖಾನ್, ಮಾಜಿ ಶಾಸಕಿ ಪ್ರಮೀಳಾ ನೇಸರ್ಗಿ ಸಮ್ಮುಖದಲ್ಲಿ ಕಂದಾಯ ಇಲಾಖೆ ಉಪವಿಭಾಗಾಧಿಕಾರಿ ಶಿವಣ್ಣ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ರಾಷ್ಟ್ರಗೀತೆ, ರೈತ ಗೀತಾ ಗಾಯನದ ಜೊತೆಗೆ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡವು.

ಚಾಮರಾಜಪೇಟೆ ಬಾಲಕಿಯ ಪ್ರೌಢಶಾಲೆ ಮಕ್ಕಳು ಒನಕೆ ಓಬವ್ವ , ಕಿತ್ತೂರು ರಾಣಿ ಚನ್ನಮ್ಮ ಹಾಗೂ ಝಂಡಾ ಉಂಛೆ ರಹೇ ಹಮಾರಾ ಸಮೂಹಿಕ ಗೀತಾ ಗಾಯನ ನಡೆಯಿತು. ಬಿಬಿಎಂಪಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ವೀರ ಗಾಸೆ, ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಮಕ್ಕಳು ದೇಶ ಭಕ್ತಿಗೀತೆಯೊಂದಿಗೆ ನೃತ್ಯ ಪ್ರದರ್ಶನ ನೆರವೇರಿಸಿಕೊಟ್ಟರು.

ಧ್ವಜಾರೋಹಣ ನೆರವೇರಿದ ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಮೂವರು ಡಿಸಿಪಿಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಸ್ವತಃ ಭದ್ರತಾ ಉಸ್ತುವಾರಿ ವಹಿಸಿಕೊಂಡಿದ್ದರು.

ಇದೇ ಮೊದಲ ಬಾರಿಗೆ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸುತ್ತಿರುವ ಹಿನ್ನಲೆಯಲ್ಲಿ ಈದ್ಗಾ ಮೈದಾನದದ ಅಷ್ಟ ದಿಕ್ಕುಗಳಲ್ಲಿ 250 ಮಂದಿ ಆರ್‍ಎಎಫ್ ತುಕಡಿಗಳು ಅಲರ್ಟ್ ಆಗಿದ್ದವು. ಮೈದಾನದ ನಾಲ್ಕು ರಸ್ತೆಗಳನ್ನು ಬಂದ್ ಮಾಡಲಾ ಗಿತ್ತು. ಯಾವುದೇ ವಾಹನ ನಿಲ್ಲಿಸಲು ಹಾಗೂ ಜನ ಗುಂಪುಗೂಡಲು ಅವಕಾಶ ನಿರಾಕರಿಸಲಾಗಿತ್ತು.