Friday, 19th August 2022

ಕಾಮನ್‌ವೆಲ್ತ್: ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ ಸೋಲು

ಬರ್ಮಿಂಗ್‌ಹ್ಯಾಂ: ಭಾರತ ತಂಡವು ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳಾ ಹಾಕಿ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 0-3 ಅಂತರದ ಸೋಲನುಭವಿಸಿದೆ.

ನಾಲ್ಕು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವು ಭಾರತದ ವಿರುದ್ಧ ದಿಟ್ಟತನದ ಆಟ ಪ್ರದರ್ಶಿಸಿತು. ಆರಂಭದಲ್ಲಿ ಆಕ್ರಮಣ ಕಾರಿಯಾಗಿ ಆಡಿದ ಭಾರತ ತಂಡಕ್ಕೆ ಎಂಟನೇ ನಿಮಿಷದಲ್ಲಿ ಗೋಲು ಬಾರಿಸುವ ಅವಕಾಶ ದೊರೆಯಿತಾದರೂ ಆಸ್ಟ್ರೇಲಿಯಾ ಆಟ ಗಾರ್ತಿಯರು ಅವಕಾಶ ನೀಡಲಿಲ್ಲ. ಬಳಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸುತ್ತಲೇ ಹೋಯಿತು.

ಕೆನಡಾವನ್ನು 3-2 ಅಂತರದಿಂದ ಮಣಿಸಿದ್ದ ಭಾರತದ ವನಿತೆಯರು ಸೆಮಿಫೈನಲ್ ಪ್ರವೇಶಿಸಿದ್ದರು.

ಈ ಮಧ್ಯೆ, ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 2-0 ಅಂತರದಿಂದ ಮಣಿಸಿರುವ ಇಂಗ್ಲೆಂಡ್ ಫೈನಲ್ ಪ್ರವೇಶಿಸಿದೆ. ಚಿನ್ನಕ್ಕಾಗಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಮಧ್ಯೆ ಪೈಪೋಟಿ ನಡೆಯಲಿದೆ.

ಭಾನುವಾರ ಕಂಚಿನ ಪದಕಕ್ಕಾಗಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿದೆ.