Friday, 27th May 2022

ಇಸ್ಕಾನ್ ದೇವಸ್ಥಾನ ಅಕ್ಟೋಬರ್ 5ರಂದು ಓಪನ್

ಬೆಂಗಳೂರು : ಭಕ್ತರ ದರ್ಶನಕ್ಕೆ ಮುಚ್ಚಿದ್ದ ಬೆಂಗಳೂರು ಮಹಾನಗರದ ಹೆಗ್ಗುರುತಾಗಿರುವ ಇಸ್ಕಾನ್ ದೇವಸ್ಥಾನ ಆರು ತಿಂಗಳ ಬಳಿಕ ಅಕ್ಟೋಬರ್ 5ರಂದು ಭಕ್ತರ ದರ್ಶನಕ್ಕೆ ತೆರೆಯಲಿದೆ. ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಲಾಕ್​ಡೌನ್​ನಿಂದಾಗಿ ಮುಚ್ಚಲಾಗಿತ್ತು.

ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಅನ್ ಲಾಕ್​ ಮಾರ್ಗಸೂಚಿಯ ಪ್ರಕಾರ ಧಾರ್ಮಿಕ ಕಾರ್ಯಕಲಾಪಗಳ ಮೇಲೆ ಕೇಂದ್ರ ಸರ್ಕಾರ ವಿಧಿಸಿದ್ದ ನಿರ್ಬಂಧಗಳನ್ನು ತೆರವು ಗೊಳಿಸಿದ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ವಾರದ ದಿನಗಳಲ್ಲಿ ಬೆಳಗ್ಗೆ 9:30ರಿಂದ ಮಧ್ಯಾಹ್ನ 12:30 ರವರೆಗೆ, ಸಂಜೆ 4ರಿಂದ 8ರವರೆಗೆ ಹಾಗೂ ವಾರಾಂತ್ಯಗಳಲ್ಲಿ ಬೆಳಗ್ಗೆ 9:30 ರಿಂದ ರಾತ್ರಿ 8ರವರೆಗೆ ಭಕ್ತರು ಕೃಷ್ಣನ ದರ್ಶನ ಪಡೆಯಲು ಅವಕಾಶವಿದೆ.

ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ. ಮುನ್ನೆಚ್ಚರಿಕಾ ಕ್ರಮವಾಗಿ 10 ವರ್ಷದೊಳ ಗಿನ ಮಕ್ಕಳು ಮತ್ತು 65 ವರ್ಷ ಕ್ಕಿಂತ ಮೇಲ್ಪಟ್ಟ ಹಿರಿಯರು ಮತ್ತು ಗರ್ಭಿಣಿಯರು ಸುರಕ್ಷತೆಯ ದೃಷ್ಟಿಯಿಂದ ದೇವಸ್ಥಾನಕ್ಕೆ ಭೇಟಿ ನೀಡದಿರಲು ಸಲಹೆ ಸೂಚಿಸಲಾಗಿದೆ.

ದೇವಸ್ಥಾನದ ಆವರಣದಲ್ಲಿ ಪ್ರತಿ ಸಂದರ್ಶಕರಿಗೂ ಕೈ-ಕಾಲುಗಳನ್ನು ತೊಳೆದು, ಸೋಂಕು ನಿವಾರಕ ದ್ರಾವಣಗಳನ್ನು ಸಿಂಪಡಣೆ, ಥರ್ಮಲ್ ಪರೀಕ್ಷೆಗೆ ವ್ಯವಸ್ಥೆಗೊಳಿಸಲಾಗಿದೆ. ಲಿಫ್ಟ್‌ಗಳು ಅವಶ್ಯಕತೆ ಇರುವ ಸೀಮಿತ ಜನರಿಗೆ ಮಾತ್ರ ಕಾರ್ಯ ನಿರ್ವಹಿಸಲಿವೆ. ಉಡುಗೊರೆಗಳು ಮತ್ತು ಪುಸ್ತಕ ಮಳಿಗೆಗಳು ತೆರೆದಿರುತ್ತವೆ. ದೇವಸ್ಥಾನದ ಕಲ್ಯಾಣ ಮಂಟಪ ಕೂಡ ಮುಂಗಡ ಕಾಯ್ದಿರಿಸಲು ಅವಕಾಶ ಇರಲಿದೆ ಎನ್ನಲಾಗಿದೆ.