Friday, 19th August 2022

ಯುದ್ಧದ ನಂತರ ಜಪಾನ್ ಎದ್ದು ನಿಲ್ಲಲು ಕಾರಣ

ವಿದೇಶವಾಸಿ

dhyapaa@gmail.com

ಮಿಲಿಟರಿಗೆ ಖರ್ಚು ಮಾಡುವ ಹಣದಿಂದ ದೇಶದ ಆರ್ಥಿಕತೆಗೆ ಯಾವುದೇ ಆದಾಯ ಇಲ್ಲ. ಆದರೆ, ಒಬ್ಬ ವ್ಯಕ್ತಿ ಇಂಜನಿಯರಿಂಗ್ ಓದಿ ಕೆಲಸ ಆರಂಭಿಸಿದರೆ, ಆತ ತೆರಿಗೆ ಕಟ್ಟುತ್ತಾನೆ. ಅದರಿಂದ ಆರ್ಥಿಕತೆಗೆ ಬಲ ಬರುತ್ತದೆ ಎಂಬ ನಿಲುವಿಗೆ ಬಂದಿತ್ತು. ಬಹುಶಃ ಅದರಿಂದಾ ಗಿಯೇ ಜಪಾನ್ ತಂತ್ರಜ್ಞಾನದಲ್ಲಿ ಮುಂದುವರಿದಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಅಂದು ಅಗ 9, 1945. ಅಮೆರಿಕದ ಯುದ್ಧ ವಿಮಾನವೊಂದು ಹತ್ತು ಸಾವಿರ ಪೌಂಡ್ (ಸುಮಾರು ನಾಲ್ಕೂವರೆ ಸಾವಿರ ಕಿಲೋಗಿಂತಲೂ ಸ್ವಲ್ಪ ಹೆಚ್ಚು) ತೂಕದ ‘ಧಡೂತಿ ಮನುಷ್ಯ’ನನ್ನು ಜಪಾನ್ ದೇಶದ ನಾಗಸಾಕಿ ನಗರದ ಮೇಲೆ ಎಸೆದಿತ್ತು. ಅಷ್ಟೊಂದು ತೂಕದ ಮನುಷ್ಯನಾ ಎಂಬ ಗಾಬರಿ ಬೇಡ. ಅಸಲಿಗೆ ದಢೂತಿ ಮನುಷ್ಯ ಎಂದರೆ ’Fat-Man’ ಎಂಬ ಪ್ಲುಟೋನಿಯಂ ಅಣುಬಾಂಬಿಗೆ ಅಮೆರಿಕದ ಯುದ್ಧಪಡೆ ಇಟ್ಟು ಕೊಂಡ ಅಡ್ಡಹೆಸರು.ಜಪಾನ್‌

ಅದಕ್ಕೂ ಮೂರು ದಿನ ಮೊದಲಷ್ಟೇ ಜಪಾನಿನ ಇನ್ನೊಂದು ಪ್ರಮುಖ ನಗರ ಹಿರೋ ಶಿಮಾ ಮೇಲೆಯೂ ಇದೇ ರೀತಿಯ ಬಾಂಬ್ ದಾಳಿ ನಡೆದಿತ್ತು. ಎರಡನೆಯ ವಿಶ್ವ ಮಹಾಯುದ್ಧದಲ್ಲಿ ಜಪಾನ್ ಅಕ್ಷರಶಃ ನಡುಗಿತ್ತು, ನಲುಗಿತ್ತು, ನರಳಿತ್ತು. ಆ ಯುದ್ಧದಲ್ಲಿ ಸೈನಿಕರೂ ಸೇರಿ ದಂತೆ ಜಪಾನಿನ ಸುಮಾರು ಮೂವತ್ತು ಲಕ್ಷ ಜನ ಪ್ರಾಣ ಕಳೆದು ಕೊಂಡಿದ್ದರು. ಸುಮಾರು ಒಂದೂಕಾಲು ಕೋಟಿ ಜನ ನಿರುದ್ಯೋಗಿ ಗಳಾ ಗಿದ್ದರು.

ಮಿಲಿಟರಿ ಎಂಬುದು ಹೆಸರಿಗೆ ಮಾತ್ರ ಉಳಿದುಕೊಂಡಿತ್ತು. ಸೇನೆಗೆ ಶಸ್ತ್ರಾಸ್ತ್ರ  ಒದಗಿಸುವವರಿಂದ ಹಿಡಿದು, ಸೈನಿಕರಿಗೆ ಆಹಾರ ಧಾನ್ಯ ಸರಬರಾಜು ಮಾಡುತ್ತಿದ್ದ ಕಂಪನಿಗಳ ಬಾಗಿಲಿಗೆ ಬೀಗ ನೇತಾಡುತ್ತಿತ್ತು. ದೇಶದ ಜಿಡಿಪಿ ಯುದ್ಧದ ಮೊದಲಿಗಿಂತ ಐವತ್ತು ಪ್ರತಿಶತ ಕುಸಿದಿತ್ತು. ಕೈಗಾರಿಕಾ ಉತ್ಪನ್ನಗಳು ಶೇಕಡಾ ತೊಂಬತ್ತರಷ್ಟು ಕಡಿಮೆ ಯಾಗಿದ್ದವು. ಆ ದಿನಗಳಲ್ಲಿ ದೇಶದಲ್ಲಿ ಕೊರತೆ ಇಲ್ಲದೇ ಇದ್ದದ್ದು ಎಂದರೆ ಹಸಿವು ಮತ್ತು ನಿರ್ಗತಿಕತನ ಮಾತ್ರವಾಗಿತ್ತು.

ಒಂದೆಡೆ, ಪ್ರಕಂಪನಗೊಂಡ ಪಟ್ಟಣ ಪ್ರದೇಶದಲ್ಲಿ ಜನರು ಮುರಿದು ಬಿದ್ದ ಮನೆಯ ಮಣ್ಣು, ಕಲ್ಲು, ಕಸದ ರಾಶಿಯ ನಡುವೆ ವಾಸಿಸು ತ್ತಿದ್ದರು. ಬಹುತೇಕ ಪಟ್ಟಣಗಳು ಮಸಣವಾಗಿದ್ದವು. ಇನ್ನೊಂದೆಡೆ, ಗ್ರಾಮಗಳಲ್ಲಿ ಹೊಲ ಗದ್ದೆಗಳು ಬಳಲಿ, ಬಸವಳಿದು, ಬೆಂಡಾಗಿದ್ದವು. ಬೆಳೆಯಲ್ಲಿ ಶೇಕಡಾ ಐವತ್ತರಷ್ಟು ಕಡಿತವಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ಯುದ್ಧದಲ್ಲಿ ಸೋತ ಅವಮಾನ ಗಾಯದ ಮೇಲೆ ಬರೆ ಎಳೆ ದಂತಿತ್ತು. ಒಂದು ಕಡೆ ಜಪಾನಿನ ಜನರು ಆಹಾರ ಧಾನ್ಯದ ಕೊರತೆಯಿಂದ ಬಳಲುತ್ತಿದ್ದರೆ, ಇನ್ನೊಂದು ಕಡೆಯಿಂದ ಅಮೆರಿಕ,
ಜಪಾನ್ ದೇಶ ಬರೀ ಬೈಸಿಕಲ್ ಮತ್ತು ಆಟಿಕೆ ಸಾಮಾನುಗಳಿಗೆ ಮಾತ್ರ ಸೀಮಿತವಾಗಿರುವ ವಾತಾವರಣ ನಿರ್ಮಿಸಲು ಪ್ರಯತ್ನಿಸು ತ್ತಿತ್ತು.

ಆದರೆ, ಹೇಳಿ ಕೇಳಿ ಅದು ಜಪಾನ್. ಅದರ ಮನದಲ್ಲಿ ವಿಚಾರ ಬೇರೆಯೇ ಇತ್ತು. ಅದು ತನ್ನ ಎಲ್ಲ ಶಕ್ತಿಯನ್ನು ವಾಹನ ತಯಾರಿಕೆಗೆ, ಅದರಲ್ಲೂ ಕಾರಿನ ತಯಾರಿಕೆ, ಉಕ್ಕು ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳ ಉತ್ಪಾದನೆಗೆ ಬಳಸಲು ನಿರ್ಧರಿಸಿತ್ತು. ಎರಡನೆಯ ವಿಶ್ವಯುದ್ಧದ ನಂತರ, ಜಪಾನ್ ನಂಬಿಕೆಗೂ ಮೀರಿ ಎದ್ದು, ಬೆಳೆದು ನಿಂತದ್ದು ಎಲ್ಲರಿಗೂ ಗೊತ್ತು. ಯುದ್ಧದಲ್ಲಿ ಸಂಪೂರ್ಣ ಬರ್ಬಾದ್ ಆಗಿದ್ದ ಜಪಾನ್ ಕೇವಲ ಎರಡೂವರೆ ದಶಕದಲ್ಲಿ ಅಭಿವೃದ್ಧಿ ಹೊಂದಿದ ದೇಶವಾಗಿ ಮಿನುಗಿ, ಇಡೀ ವಿಶ್ವವೇ ತನ್ನೆಡೆಗೆ ನೋಡುವಂತೆ
ಮಾಡಿದ್ದು ಸೋಜಿಗವಾದರೂ ಸತ್ಯ. ಆದರೆ, ಕಸದ ರಾಶಿಯ ಮಧ್ಯದಿಂದ ಎದ್ದು ಬಂದು, ಕೆಲವೇ ವರ್ಷಗಳಲ್ಲಿ ಆರ್ಥಿಕವಾಗಿ ಸದೃಢ ವಾಗಿ, ಉಳಿದ ಅಭಿವೃದ್ಧಿ ಹೊಂದಿದ ಇಂಗ್ಲೆಂಡ್, -, ರಷ್ಯಾ, ಜರ್ಮನಿಯಂತಹ ದೇಶಗಳಿಗಿಂತ ಮುಂದೆ ಜಿಗಿದ ಜಪಾನ್, ಅಮೆರಿಕದ ನಂತರ ವಿಶ್ವದ ಎರಡನೆಯ ಸ್ಥಾನಕ್ಕೆ ಬಂದು ಕುಳಿತಿತ್ತು. ಆದರೆ, ಸಂಗರದ ನಂತರದ ಸಂಘರ್ಷ ಇದೆಯಲ್ಲ, ಅದು ಬಹಳಷ್ಟು
ಜನರಿಗೆ ತಿಳಿದಿರಲಿಕ್ಕಿಲ್ಲ.

ಒಮ್ಮೆ ಯೋಚಿಸಿ, ಸಣ್ಣ ದೇಶ. ಕೆಲಸ ಮಾಡಲು ಜನರ, ಅದರಲ್ಲೂ ಯುವಕರ ಕೊರತೆ ಒಂದು ಕಡೆ. ಇನ್ನೊಂದು ಕಡೆ, ದೇಶದಲ್ಲಿ
ಹೇಳಿಕೊಳ್ಳುವಂತಹ ನೈಸರ್ಗಿಕ ಸಂಪತ್ತೂ ಇಲ್ಲ. ಮತ್ತೊಂದು ಕಡೆ, ಅದುವರೆಗೆ ಇದ್ದ ರಸ್ತೆ, ವಿದ್ಯುತ್ತು, ನೀರಿನಂತಹ ಮೂಲ ಸೌಕರ್ಯಗಳು ಯುದ್ಧಕ್ಕೆ ಹವಿಸ್ಸಾಗಿದ್ದವು. ಸಾಲದು ಎಂಬಂತೆ, ಜಪಾನಿನ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಆರ್ಥಿಕ ಸಂಕಷ್ಟ. ಅಂತಹ ಪರಿಸ್ಥಿತಿಯಲ್ಲಿ ಒಂದು ದೇಶದ ಪುನರ್ ನಿರ್ಮಾಣವಾಗಬೇಕು ಎಂದರೆ ಪವಾಡವೇ ಆಗಬೇಕಿತ್ತು.

ದೇಶ ಕಟ್ಟುವ ಕಾರ್ಯದ ಮೊದಲ ಹೆಜ್ಜೆಯಾಗಿ ಜಪಾನ್ ಮಾಡಿದ ಮೊದಲ ಕಾರ್ಯವೆಂದರೆ ಸೈನ್ಯ ಕಟ್ಟುವುದನ್ನು ಬಿಟ್ಟದ್ದು. ನಿಜ, ಅಂದಿನ ದಿನಗಳಲ್ಲಿ ಜಪಾನ್ ತೆಗೆದುಕೊಂಡ ಅತ್ಯಂತ ಮಹತ್ವದ, ಧೈರ್ಯದ ನಿರ್ಣಯ ಅದಾಗಿತ್ತು. ಯುದ್ಧದಲ್ಲಿ ಆದ ಹಾನಿಯನ್ನು ಕಂಡು ಅನುಭವಿಸಿದ ಜಪಾನ್, ಮುಂದಿನ ಕೆಲವು ದಶಮಾನಗಳವರೆಗೆ ಇನ್ನೊಂದು ಯುದ್ಧವನ್ನು ಊಹಿಸುವ ಸ್ಥಿತಿಯಲ್ಲಿ ಇರಲಿಲ್ಲ. ಕೇವಲ ಆಂತರಿಕ ಸುರಕ್ಷತೆಗೆ ಬೇಕಾದಷ್ಟು ಸೇನೆ ಮತ್ತು ಶಸ್ತ್ರಾಸ್ತ್ರಗಳನ್ನಷ್ಟೇ ಉಳಿಸಿಕೊಳ್ಳಲು ನಿರ್ಧರಿಸಿತ್ತು ಜಪಾನ್.

ಒಂದು ಸರಳ ಲೆಕ್ಕಾಚಾರದ ಪ್ರಕಾರ, ಒಬ್ಬ ಸೈನಿಕನ ತರಬೇತಿ, ಸಂಬಳ, ಊಟ, ವಸತಿ ಇತ್ಯಾದಿಗಳಿಗೆ ಪ್ರತಿ ತಿಂಗಳು ಒಂದು ಲಕ್ಷ
ರುಪಾಯಿ ಖರ್ಚಾಗುತ್ತದೆ ಎಂದಾದರೆ, ಅದೇ ಹಣವನ್ನು ಇಂಜನಿಯರಿಂಗ್ ಶಿಕ್ಷಣಕ್ಕೆ ಉಪಯೋಗಿಸಿದರೆ ಒಳಿತು ಎಂದು ಅಂದಿನ ಸರಕಾರ ನಿರ್ಧರಿಸಿತು. ಮಿಲಿಟರಿಗೆ ಖರ್ಚು ಮಾಡುವ ಹಣದಿಂದ ದೇಶದ ಆರ್ಥಿಕತೆಗೆ ಯಾವುದೇ ಆದಾಯ ಇಲ್ಲ. ಆದರೆ, ಒಬ್ಬ ವ್ಯಕ್ತಿ ಇಂಜನಿಯರಿಂಗ್ ಓದಿ ಕೆಲಸ ಆರಂಭಿಸಿದರೆ, ಆತ ತೆರಿಗೆ ಕಟ್ಟುತ್ತಾನೆ.

ಅದರಿಂದ ದೇಶದ ಆರ್ಥಿಕತೆಗೆ ಬಲ ಬರುತ್ತದೆ ಎಂಬ ನಿಲುವಿಗೆ ಬಂದಿತ್ತು. ಬಹುಶಃ ಅಂದು ತೆಗೆದುಕೊಂಡ ಆ ನಿಲುವಿನಿಂದಾಗಿಯೇ
ಇಂದು ಜಪಾನ್ ತಂತ್ರeನದಲ್ಲಿ ಮುಂದುವರಿದ ದೇಶವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದರ ಫಲವಾಗಿ, ವಿಶ್ವಯುದ್ಧದ ಸಮಯದಲ್ಲಿ
ದೇಶದ ಜಿಡಿಪಿಯ ಹದಿನೈದು ಪ್ರತಿಶತದಷ್ಟಿದ್ದ ಸೇನಾ ವೆಚ್ಚ ಕಳೆದ ಕೆಲವು ವರ್ಷಗಳಿಂದ ಕೇವಲ ಒಂದು ಪ್ರತಿಶತದಲ್ಲಿ ನಿಂತಿದೆ. ಹಾಗಿದ್ದೂ ಇಂದು ಜಪಾನ್ ವಿಶ್ವದ ಮೊದಲ ಹತ್ತು ಶಕ್ತಿಯುತ ಸೇನೆಯನ್ನು ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದರ ಅರ್ಥ ಒಂದು ದೇಶಕ್ಕೆ ಸೇನೆಯ ಅವಶ್ಯಕತೆಯೇ ಇಲ್ಲ ಎಂದಲ್ಲ.

ಅವಶ್ಯಕತೆಗಿಂತ ಹೆಚ್ಚಿನ ಅಗತ್ಯವಿಲ್ಲ ಎಂಬುದನ್ನು ಜಪಾನ್ ಅಂದೇ ವಿಶ್ವಕ್ಕೇ ತೋರಿಸಿಕೊಟ್ಟಿದೆ. ಅದರೊಂದಿಗೆ, ಯುದ್ಧಾನಂತರದ
ನಿರುದ್ಯೋಗ ಸಮಸ್ಯೆಗೆ ಜಪಾನ್ ಪರಿಹಾರ ಕಂಡುಕೊಂಡದ್ದು ಇನ್ನೊಂದು ಸಾಹಸ. ಆ ಸಾಹಸದ ಹೆಸರು ‘ಕೈರೆತ್ಸು ಮಾಡೆಲ’ ಅಥವಾ
‘ಸರಣಿ ಮಾದರಿ’. ಕಾರು ತಯಾರಿಸುವ ಟೊಯೋಟಾ, ಮಿತ್ಸುಬಿಷಿ ಕಂಪನಿ, ಉಕ್ಕು ತಯಾರಿಸುವ ನಿಪ್ರೋನ್‌ನಂತಹ ಸಂಸ್ಥೆಗಳು
ಅಂದು ಈ ಮಾದರಿಯನ್ನು ಅಳವಡಿಸಿಕೊಂಡವು. ಅದರಲ್ಲೂ ವಾಹನ ತಯಾರಿಸುವ ಸಂಸ್ಥೆಗಳು ದೇಶದ ದಿಕ್ಕು ಬದಲಾಯಿಸಿದ್ದಷ್ಟೇ ಅಲ್ಲದೆ, ಪ್ರಬಲ ಆರ್ಥಿಕತೆಯ ನಿಲ್ದಾಣವನ್ನು ವೇಗವಾಗಿ ತಲುಪಲು ಸಹಕರಿಸಿದವು.

‘ಕೈರೆತ್ಸು ಮಾಡೆಲ್’ ಕುರಿತು ಒಂದು ಉದಾಹರಣೆಯ ಮೂಲಕ ಹೇಳುವುದಾದರೆ, ಅಮೆರಿಕದ ಜನರಲ್ ಮೋಟರ್ಸ್ ಮತ್ತು ಜಪಾನಿನ ಟೊಯೋಟಾ. ಎರಡೂ ಕಾರು ತಯಾರಿಸುವ ಕಂಪನಿಗಳು. ಐವತ್ತು-ಅರವತ್ತರ ದಶಕದಲ್ಲಿ ಜಿಎಮ್ ಕಾರ್ ಕಂಪನಿಗೆ ಒಂದು ಕಿಟಕಿಯ ಗಾಜು ಕೂರಿಸಬೇಕೆಂದರೆ, ಗಾಜು, ಸ್ಕ್ರೂ ನಟ್-ಬೋಲ್ಟ್, ಸೆಮಿಕಂಡಕ್ಟರ್ ಹೀಗೆ ಬೇರೆ ಬೇರೆ ವಸ್ತುಗಳನ್ನು ಬೇರೆ ಬೇರೆ ಸಪ್ಲಾಯರ್‌ ಗಳಿಂದ ಖರೀದಿ ಮಾಡುತ್ತಿತ್ತು. ಪೂರೈಕೆದಾರರು ಅದನ್ನು ಉತ್ಪಾದಿಸುವ ಕಾರ್ಖಾನೆಯಿಂದ ಖರೀದಿಸಿ ಕಾರು ತಯಾರಿಸುವ ಕಂಪನಿಗೆ ಮಾರುತ್ತಿದ್ದರು. ಕಾರ್ಖಾನೆಯವರು ಕಚ್ಚಾ ಸಾಮಗ್ರಿಯನ್ನು ಬೇರೆಯವರಿಂದ ಖರೀದಿಸುತ್ತಿದ್ದರು.

ಹಾಗಾಗಿ ಕಾರು ತಯಾರಿಸುವ ಸಂಸ್ಥೆಗೆ ಕೆಲವೊಮ್ಮೆ ತನ್ನ ಬಿಡಿ ಭಾಗಗಳಿಗೆ ಕಚ್ಚಾ ವಸ್ತು ಪೂರೈಸುವವರು ಯಾರೆಂಬುದೂ ತಿಳಿಯುತ್ತಿ ರಲಿಲ್ಲ. ಅದರ ಅವಶ್ಯಕತೆಯೂ ಇರಲಿಲ್ಲ. ಏಕೆಂದರೆ, ಕಾರು ತಯಾರಿಸುವ ಸಂಸ್ಥೆ ತನಗೆ ಬಿಡಿಭಾಗ ಪೂರೈಸುವ ಸಂಸ್ಥೆಯೊಂದಿಗೆ
ಮೂರು ವರ್ಷ, ಐದು ವರ್ಷದ ಕಡಿಮೆ ಸಮಯದ ಒಪ್ಪಂದ ಮಾಡಿಕೊಳ್ಳುತ್ತಿತ್ತು. ಈ ನಡುವೆ ಯಾವುದೇ ಕಾರಣಗಳಿಂದ ಕಚ್ಚಾ ವಸ್ತು,
ತೈಲ, ವಿದ್ಯುತ್ತು ಇತ್ಯಾದಿಗಳ ಬೆಲೆ ಏರಿಕೆಯಾದರೆ ಪೂರೈಸುವ ಕಂಪನಿಯೇ ಭರಿಸಿಕೊಳ್ಳಬೇಕಾಗಿತ್ತು.

ಬಿಡಿ ಭಾಗ ತಯಾರಿಸುವ ಕಾರ್ಖಾನೆಗಳು ಪ್ರಕೃತಿ ವಿಕೋಪ, ಅಗ್ನಿ ಅವಘಡಕ್ಕೆ ಒಳಗಾದರೆ, ಯಾವುದೇ ಮುಲಾಜಿಲ್ಲದೇ ಬೇರೆಯವ ರಿಂದ ಬಿಡಿಭಾಗ ಖರೀದಿಸುತ್ತಿತ್ತು. ಒಪ್ಪಂದ ಮುಗಿದ ನಂತರ ಯಾರಾದರೂ ಒಂದು ಡಾಲರ್ ಕಡಿಮೆಗೆ ವಸ್ತುಗಳನ್ನು ಪೂರೈಸಲು ಮುಂದೆ ಬಂದರೂ  ವರೊಂದಿಗೆ ಹೊಸ ಒಪ್ಪಂದ ಮಾಡಿಕೊಳ್ಳುತ್ತಿತ್ತು. (ಬಹಳ ಕಡೆಗಳಲ್ಲಿ ಇಂದಿಗೂ ಈ ಪದ್ಧತಿ ಚಾಲ್ತಿಯಲ್ಲಿದೆ.)

ಟೊಯೋಟಾ, ನಿಸ್ಸಾನ್ ಅಥವಾ ಮಿತ್ಸುಬಿಷಿ ಅಳವಡಿಸಿಕೊಂಡ ಕೈರೆತ್ಸು ಮಾದರಿಯಲ್ಲಿ ಕಾರು ತಯಾರಿಸುವ ಸಂಸ್ಥೆಯವರೊಂದಿಗೆ, ಬಿಡಿಭಾಗ ಪೂರೈಸುವವರು, ಅದನ್ನು ತಯಾರಿಸುವ ಕಾರ್ಖಾನೆಯವರು, ಕಚ್ಚಾ ಸಾಮಗ್ರಿ ಪೂರೈಸುವವರು, ಎಲ್ಲರೂ ಎಲ್ಲದರಲ್ಲೂ ಭಾಗಿಯಾಗಿರುತ್ತಾರೆ. ಅಂದರೆ, ಬಿಡಿಭಾಗ ತಯಾರಿಸುವ ಸಂಸ್ಥೆಯಲ್ಲಿ, ಕಚ್ಚಾ ವಸ್ತುಗಳನ್ನು ಒದಗಿಸುವ ಸಂಸ್ಥೆಯಲ್ಲಿ ಶೇಕಡಾ ನಾಲ್ಕು-ಐದರಷ್ಟು ಟೊಯೋಟಾ ಪಾಲುದಾರರಾಗಿದ್ದರೆ, ಆ ಕಂಪನಿಗಳೂ ಟೊಯೋಟಾದಲ್ಲಿ ಶೇಕಡಾ ಒಂದು- ಒಂದೂವರೆಯಷ್ಟು ಪಾಲುದಾರ ರಾಗಿರುತ್ತಾರೆ.

ಇವರೊಂದಿಗೆ ಬ್ಯಾಂಕ್ ಕೂಡ ಭಾಗಿಯಾಗಿರುತ್ತದೆ. ಅಂದರೆ ಪ್ರತಿಯೊಬ್ಬರಿಗೂ ಎಲ್ಲ ಕಂಪನಿಯಲ್ಲೂ ಒಂದು ಪಾಲು ಇರುತ್ತದೆ.
ಅಮೆರಿಕದ ಕಂಪನಿಗಳು ಕಡಿಮೆ ಸಮಯದ ಒಪ್ಪಂದ ಮಾಡಿಕೊಳ್ಳುತ್ತವೆ ಎಂದಿzನಲ್ಲ, ಇಲ್ಲಿ ಅದಕ್ಕೆ ವಿರುದ್ಧವೆಂಬಂತೆ, ಕಾರು ತಯಾರಿ ಸುವ ಕಂಪನಿಗಳು ಇತರ ಸಂಸ್ಥೆಗಳೊಂದಿಗೆ ಇಪ್ಪತ್ತು, ಇಪ್ಪತ್ತೈದು ವರ್ಷಗಳ ದೀರ್ಘ ಕಾಲದ ಒಪ್ಪಂದ ಮಾಡಿಕೊಳ್ಳುತ್ತವೆ. ಇದರಿಂದಾಗಿ ಪ್ರತಿಯೊಬ್ಬರ ನಡುವೆಯೂ ಸಂಬಂಧ ಗಟ್ಟಿಯಾಗಿರುತ್ತದೆ ಎಂಬ ಸಿದ್ಧಾಂತ. ಹಾಗಾದಾಗ, ಒಂದು ವೇಳೆ, ಯಾವುದೋ ಸಂಸ್ಥೆಗೆ ಕಷ್ಟ ಒದಗಿಬಂದರೆ, ಉಳಿ ದವು ತಮ್ಮ ಕೈಲಾದ ಸಹಾಯಕ್ಕೆ ನಿಲ್ಲುತ್ತವೆ.

ಆರ್ಥಿಕ ಸಂಕಷ್ಟ ಎದುರಾದರೆ, ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿ ಸಹಾಯಕ್ಕೆ ನಿಲ್ಲುತ್ತವೆ. ಸಂಕ್ಷಿಪ್ತವಾಗಿ, ಇದು ಕೈರೆತ್ಸು ಮಾದರಿ. ಈ ಮಾದರಿಯಲ್ಲಿ ಬಹುತೇಕ ಎಲ್ಲರೂ ಲಾಭಗಳಿಸುವುದರಿಂದ ದೇಶದ ಆರ್ಥಿಕತೆಗೆ ಬಲ ಸಿಗುತ್ತದೆ ಎಂಬ ಸಿದ್ಧಾಂತ.
ಇದರೊಂದಿಗೆ ಇನ್ನೊಂದು ವಿಷಯವೆಂದರೆ, ಅಮೆರಿಕದ ಸಂಸ್ಥೆಗಳು ಬೇರೆ ಬೇರೆ ಬಣ್ಣದ ಒಂದಷ್ಟು ಕಾರುಗಳನ್ನು ಉತ್ಪಾದಿಸಿ ಇಡುತ್ತಿದ್ದವು. ಕೆಲವು ಬಣ್ಣದ ಕಾರುಗಳು ಬೇಗನೆ ಮಾರಾಟವಾದರೆ, ಕೆಲವು ಬಣ್ಣದ ಕಾರುಗಳು ಮಾರಾಟವಾಗದೇ ಉಳಿಯುತ್ತಿದ್ದವು. ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗುತ್ತಿತ್ತು, ಅದರಿಂದ ಲಾಭವೂ ಕಡಿಮೆಯಾಗುತ್ತಿತ್ತು. ಆ ಸಂದರ್ಭದಲ್ಲಿ ಟೊಯೋಟಾ ‘ಜ ಇನ್ ಟೈಮ್’ ಪದ್ಧತಿಯನ್ನು ಅಳವಡಿಸಿಕೊಂಡಿತು.

ಮೊದಲು ಬೇರೆ ಬೇರೆ ಬಣ್ಣದ ಕೆಲವೇ ಕಾರುಗಳನ್ನು ತಯಾರಿಸುವುದು, ನಂತರ ಯಾವ ಬಣ್ಣದ ಕಾರಿಗೆ ಹೆಚ್ಚು ಬೇಡಿಕೆ ಇದೆಯೋ ಅದನ್ನು ಮಾತ್ರ ತಯಾರಿಸಿ, ಗ್ರಾಹಕರಿಗೆ ನೀಡುವುದು. ಇದರಿಂದ ಸಂಸ್ಥೆಗೆ ಕಾರ್ಮಿಕರು, ವಿದ್ಯುತ್ತು, ಬಿಡಿಭಾಗ, ಎಲ್ಲದರಲ್ಲೂ
ಉಳಿತಾಯವಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಸಾವಿರಾರು ಕಾರುಗಳನ್ನು ತಯಾರಿಸಿ ಒಂದು ಕಡೆ ನಿಲ್ಲಿಸಿ ಇಡುವ ಜಾಗದ ಸಮಸ್ಯೆಯಿಂದ ಮುಕ್ತವಾಯಿತು. ಇದರಿಂದ ಕಾರಿನ ಬೆಲೆ ಇಳಿಸಲೂ ಅನುಕೂಲವಾದುದ್ದರ ಜತೆಗೆ, ಕಂಪನಿಗೆ ಲಾಭವೂ ಹೆಚ್ಚಿತು. ಜಪಾನ್ ಕಾರುಗಳು ಅಮೆರಿಕದ ಕಾರುಗಳಿಗಿಂತ ಕಡಿಮೆ ಬೆಲೆಯಲ್ಲಿ ಕೈಗೆಟುಕಲು ಇವೆಲ್ಲ ಪ್ರಮುಖ ಕಾರಣವಾದವು.

ಪರಿಣಾಮ, 1955 ರಲ್ಲಿ ಇಪ್ಪತ್ತೆರಡು ಸಾವಿರ ಕಾರು ತಯಾರಿಸುತ್ತಿದ್ದ ಟೊಯೋಟಾ, ಹತ್ತು ವರ್ಷಗಳಲ್ಲಿ, ಅಂದರೆ, 1965 ರ ವೇಳೆಗೆ ಸುಮಾರು ಐದು ಲಕ್ಷ ಕಾರುಗಳನ್ನು ಮಾರಾಟಮಾಡಿತು. ಇದು ಒಂದು ಉದಾಹರಣೆ ಮಾತ್ರ. ಕೈರೆತ್ಸು ಮಾದರಿ ಅಳವಡಿಸಿ ಕೊಂಡ ಟೊಯೋಟಾ, ನಿಸ್ಸಾನ್, ನಿಪ್ಪೊನ್, ಸೋನಿ, ನಿಂಟೆಂಡೊ ಮುಂತಾದ ಸಂಸ್ಥೆಗಳು ಇಂದು ವಿಶ್ವದಾದ್ಯಂತ ಹೆಸರು ಮಾಡಿವೆ. ಜಪಾನ್ ದೇಶದಲ್ಲಷ್ಟೇ ಅಲ್ಲದೆ, ವಿಶ್ವದಾದ್ಯಂತ ಕೋಟ್ಯಾಂತರ ಜನರಿಗೆ ಉದ್ಯೋಗ ಒದಗಿಸಿಕೊಟ್ಟಿವೆ.

ಇದರೊಂದಿಗೆ, ಜಪಾನಿಯರು ಶ್ರಮಜೀವಿಗಳು ಎಂಬುದನ್ನು ಮರೆಯುವಂತಿಲ್ಲ. ತಮ್ಮ ಕೆಲಸದಲ್ಲಿ ಮೈಗಳ್ಳತನ ಮಾಡಲಿಲ್ಲ, ಸರಕಾರಿ ಕೆಲಸದಲ್ಲಿ ದ್ದವರೂ ಕೂಡ. ತಿಂಗಳ ಕೊನೆಗೆ ಸಂಬಳ ಎಣಿಸುವುದಕ್ಕಾಗಿ ನೌಕರಿಗೆ ಸೇರಿಕೊಂಡವರಲ್ಲ. ಸ್ವಾರ್ಥ ಕ್ಕಾಗಿ, ಸಂಕುಚಿತ ಬುದ್ಧಿಯಿಂದ ಕೆಲಸ ಮಾಡಿದವರಲ್ಲ. ಏನೇ ಮಾಡಿದರೂ ಅದರಲ್ಲಿ ಪರಿಪೂರ್ಣತೆ ಇರಬೇಕು, ತಾವು ಮಾಡುವ ಕೆಲಸದಲ್ಲಿ ನೂರಕ್ಕೆ ನೂರರಷ್ಟು ಶಕ್ತಿ ತೊಡಗಿಸಬೇಕು ಎಂಬ ಮನೋಭಾವ ಇಟ್ಟುಕೊಂಡದ್ದರಿಂದ ಇಂದು ಅವರಿಗೆ ಸುಂದರ ದೇಶ ಕಟ್ಟಲು ಸಾಧ್ಯವಾಯಿತು. ಅದರಿಂದಾಗಿ ಜಪಾನ್ ಇಂದು ಗೌರವಾನ್ವಿತ ದೇಶವಾಗಿ ನಿಲ್ಲುವಂತಾಯಿತು. ಬದ್ಧತೆ ಇದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವುದಕ್ಕೆ ಜಪಾನ್ ಉದಾಹರಣೆ.