Friday, 27th May 2022

ಜಪಾನ್‌ ಉಸುರಿದೆ ಶಾಂತಿ ಮಂತ್ರ

ಕುಸುಮ್‌ ಗೋಪಿನಾಥ್‌

ಮನುಕುಲದ ಮೇಲೆ ಮಾನವನೇ ನಡೆಸಿದ ಅತಿ ಕ್ರೂರ ಆಕ್ರಮಣ ಎನಿಸಿದ ಜಪಾನಿನ ಅಣುಬಾಂಬ್ ಸಿಡಿದ ಸ್ಥಳ ಗಳನ್ನುನೋಡುವಾಗ ಪ್ರವಾಸಿಯೊಬ್ಬನ ಮನ ತಲ್ಲಣಕ್ಕೊಳಗಾಗುತ್ತದೆ, ಕಲವಿಲಗೊಳ್ಳುತ್ತದೆ? ನಿಜವಾಗಲೂ ಮನುಷ್ಯ ಇಷ್ಟು ಕ್ರೂರಿಯಾಗಲು ಸಾಧ್ಯವೆ ಎನಿಸುತ್ತದೆ. ಹಿರೋಷಿಮಾ ಪ್ರವಾಸಾನುಭವದ ಎರಡನೆಯ ಮತ್ತು ಕೊನೆಯ ಭಾಗ.

ಹಿರೋಷಿಮಾ ನೋಡುವುದೆಂದರೆ, ಪ್ರವಾಸದಲ್ಲಿ ಮನಸ್ಸು ಮುದುಡುವ ಅನುಭವ. ಅಲ್ಲಿನ ಬಾಂಬ್ ದಾಳಿ ನಡೆದ ವಿವರ ಗಳನ್ನು ನೀಡುವ ಪೀಸ್ ಪಾರ್ಕ್‌ನಿಂದ ಹೊರಬಂದ ನಾವು ಉಳಿದ ಸ್ಮಾರಕಗಳನ್ನು ನೋಡುವುದಕ್ಕೂ ಮುಂಚೆ, ತಳಮಳ ಗೊಂಡ ಮನಸ್ಸನ್ನೊಂದಿಷ್ಟು ಸಮಾಧಾನಗೊಳಿಸಲು ಪ್ರಯತ್ನಿಸಿದೆವು. ಕೇವಲ 75 ವರ್ಷಗಳ ಹಿಂದೆ, ಪ್ರಪಂಚವೇ ಸಾಕ್ಷಿಯಾದ ಈ ಘಟನೆಯನ್ನು ಎಲ್ಲರೂ ಮರೆತೇ ಬಿಟ್ಟಿದ್ದಾರೆಯೆ? ಮತ್ತೆ ಮತ್ತೆ ಇಂಥದ್ದೊಂದು ಅಥವ ಇದಕ್ಕಿಂತ ಭಯಾನಕ ವಾದ ದುರ್ಘಟನೆಗಳಿಗೆ ನಾವು ಇಂಬುಕೊಡುತ್ತಲೇ ಇರಬೇಕೆ? ಎಂಬ ಪ್ರಶ್ನೆಗಳು ನಮ್ಮನ್ನು ಕಾಡತೊಡಗುತ್ತವೆ.

ಈ ಭೂಮಿಯ ಮಾನವರು ಶಾಂತಿ ಸೌಹಾರ್ದತೆಯಿಂದ ಬದುಕುವುದು ಎಷ್ಟು ಮುಖ್ಯ ಎಂಬುದನ್ನು ಸಾರುವ ಈ ಹಿರೊಶಿಮಾ, ನಮ್ಮ ಮಕ್ಕಳು, ಮೊಮ್ಮಕ್ಕಳು ಓದುವ ಪುಸ್ತಕದ ಒಂದು ಮುಖ್ಯ ಪಾಠವೇಕಾಗಿಲ್ಲ? ನಮ್ಮ ನೆರೆಯವರ ಹಾಗೂ ಇತರರ ಒಳಿತನ್ನು ಬಯಸುವಲ್ಲಿಯೇ ನಮ್ಮ ಒಳಿತಿದೆ ಎಂಬ ಸತ್ಯವನ್ನು ಹಾಗೂ ಶಾಂತಿ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಅನ್ನುವ ತತ್ವವನ್ನು ಈ ಹಿರೋಷಿಮಾ ಜಗತ್ತಿಗೇ ಪ್ರಾತ್ಯಕ್ಷಿಕಗೊಳಿಸುತ್ತಿದೆ. ಬುದ್ಧನ ಶಾಂತಿ ಮಂತ್ರವನ್ನು ಜಪಾನಿನ ಬೌದ್ಧ ದೇವಾಲಯಗಳಿಗಿಂತ ಹೆಚ್ಚಿನದಾಗಿ ಈ ಪೀಸ್ ಪಾರ್ಕ್ ಸಾರುತ್ತದೆ.

ಸೆನೋಟ್ಯಾಫ್
ಬಾಂಬ್ ದಾಳಿಯಲ್ಲಿ ಹುತಾತ್ಮರಾದ ನಾಗರಿಕರ ನೆನಪಿಗಾಗಿ 1996ರಲ್ಲಿ ಜಪಾನಿನ ಪ್ರಸಿದ್ಧ ವಾಸ್ತುಶಿಲ್ಪಿ ಕೆಂಝೋ ಟಾಂಗೆ
ನಿರ್ಮಿಸಿದ ಕಮಾನಿನ ಆಕೃತಿಯ ಕಟ್ಟಡ ಇದು. ಮಧ್ಯದಲ್ಲಿರುವ ಗ್ರ್ಯಾನೈಟ್ ಹಲಗೆಯ ಮೇಲೆ ಬಾಂಬ್ ದಾಳಿಯ ಸ್ಥಳದಲ್ಲಿ ಹಾಗೂ ನಂತರದ ವಿಕಿರಣದ ದುಷ್ಪರಿಣಾಮದಲ್ಲಿ ಪ್ರಾಣತೆತ್ತ ಎರಡು ಲಕ್ಷ ಇಪ್ಪತ್ತು ಸಾವಿರ ಜನರ ಹೆಸರುಗಳು ಕೆತ್ತಲ್ಪಟ್ಟಿದೆ.

ಶಾಂತಿ ಜ್ಯೋತಿ
ಪ್ರಪಂಚದಲ್ಲಿ ಪರಮಾಣು ಬಾಂಬ್ ತಯಾರಿಸುವುದನ್ನು ನಿಲ್ಲಿಸುವವರೆಗೆ ಈ ಜ್ಯೋತಿ ಉರಿಯುತ್ತಿರಬೇಕೆಂಬ ಉದ್ದೇಶದಿಂದ 1994ರಲ್ಲಿ ಈ ದೀಪವನ್ನು ಹೊತ್ತಿಸಲಾಯಿತು. ನಮ್ಮ ಎರಡೂ ಕೈಯ ಮಣಿಕಟ್ಟನ್ನು ಜೋಡಿಸಿ ಕೊಂಡಂತೆ ಇರುವ ಆಕೃತಿ ಯಲ್ಲಿ ಮಧ್ಯ ದೀಪವನ್ನು ಹಿಡಿದಂತೆ ಇಲ್ಲಿನ ವಾಸ್ತುವಿನ್ಯಾಸ.

ಪುರಾತನ ಶಿಂಥೋ
ಮಿಯಾ ಜೀಮಾ ಗೂಚಿ ದ್ವೀಪ ಹಿರೋಶಿಮಾದಿಂದ ಜೆ ಆರ್ ಸ್ಯಾನ್ಯೊ ಲೈನ್ ನಲ್ಲಿ 20 ನಿಮಿಷ ಪ್ರಯಾಣಿಸಿ, ಮಿಯಾ ಜೀಮಾ ಗೂಚಿ ಸ್ಟೇಷನ್‌ನಲ್ಲಿ ಇಳಿದು , ಜೆ ಆರ್ ಫೆರಿಯಲ್ಲಿ 10 ನಿಮಿಷ ಜಲಯಾನ ಮಾಡಿದರೆ ಸಿಗುವುದು ಮೀಯಾ ಜೀಮಾ ದ್ವೀಪ. ಸುತ್ತಮುತ್ತ ಹಸಿರು ತುಂಬಿದ ಬೆಟ್ಟಗುಡ್ಡಗಳು. ಇಲ್ಲಿರುವುದು ಪುರಾತನ ಶಿಂಥೋ ಧರ್ಮಕ್ಕೆ ಸೇರಿದ ಕ್ರಿ. ಶ.554 ರಿಂದ 628 ರವರೆಗೆ ಆಳಿದ ಸಾಮ್ರಾಟ ಸ್ಯೂಕೋ ನಿಂದ ನಿರ್ಮಿಸಲ್ಪಟ್ಟ ಇಟ್ಸುಕುಶಿಮಾ ದೇವಾಲಯಗಳ ಸಮುಚ್ಛಯ.

ನಂತರ ಅದು ಟಾಯ್ರಾನೊ ಕಿಯೊಮೊರಿ (1118-1181) ಕಾಲದಲ್ಲಿ ಜೀರ್ಣೋ ದ್ಧಾರಗೊಂಡಿತು. ಈ ದೇಗುಲಗಳ ವಿಶೇಷವೇ ನೆಂದರೆ ಸ್ಟೇಷನ್ನನಿಂದ ಬರುವ ದಾರಿಯೊಂದನ್ನು ಬಿಟ್ಟರೆ ಉಳಿದ ಮೂರೂ ಕಡೆ ಜಲಾವೃತ. ದೂರದಿಂದ ನೋಡುವಾಗ ಇಟ್ಸುಕುಶಿಮಾ ಸಮುಚ್ಛಯ ನೀರಿನಲ್ಲಿ ತೇಲುತ್ತಿದೆಯೋ ಎಂಬಂತೆ ಭಾಸವಾಗುತ್ತದೆ. ಅಲ್ಲಲ್ಲಿ ಬೌಧ್ಧಧರ್ಮದ ಕುರುಹುಗಳು ಗೋಚರಿಸಿ ದರೂ ಇಲ್ಲಿನ ಮೂಲ ಶಿಲ್ಪಗಳು ಬೌದ್ಧ ಧರ್ಮಕ್ಕಿಂತ ಪುರಾತನ ಎನಿಸಿದ ಸಮುದ್ರ ದೇವತೆಗಳದು. ಈ ಸಮುಚ್ಛಯ ಅಚ್ಚ ಕೇಸರಿ ಬಣ್ಣದಿಂದ ನಳನಳಿಸುತ್ತಿದ್ದು, ಬೌಧ್ಧಧರ್ಮದ ಪ್ರವೇಶಕ್ಕಿಂತ ಮುಂಚಿನದು.

ಭರತ ಇಳಿತಗಳ ಮ್ಯಾಜಿಕ್
ದೇವಾಲಯಗಳ ಎದುರು ಭವ್ಯವಾಗಿ ನಿಂತಿರುವ ಕೇಸರೀ ಬಣ್ಣದ ಟೋರಿ ಗೇಟ್‌ಗಳು ನಾವು ದ್ವೀಪವನ್ನು ಪ್ರವೇಶಿಸುವಾಗ ಸಂಪೂರ್ಣ ಗೋಚರಿಸುತ್ತಿದ್ದು, ನಂತರ ವಾಪಸ್ಸು ಹೊರಡುವಾಗ ಅರ್ಧಕ್ಕಿಂತ ಹೆಚ್ಚು ಭಾಗ ನೀರಿನಲ್ಲಿ ಮುಳುಗಿದ್ದವು! ನಮಗೆ ಇದು ನಿಜಕ್ಕೂ ಅಚ್ಚರಿ! ಕಾರಣ ಹುಡುಕಿದಾಗ, ದ್ವೀಪದ ಸುತ್ತಲಿನ ನೀರಿನ ಪ್ರವಾಹ ಪ್ರತಿ ಆರು ಗಂಟೆಗಳಿಗೊಮ್ಮೆ ಏರಿಳಿಯು ತ್ತದೆಯೆಂದು ಗೊತ್ತಾಯಿತು.

ಸಮುದ್ರದ ಭರತ ಇಳಿತದ ಮ್ಯಾಜಿಕ್! ಇಲ್ಲಿ ಪರ್ವತ ಕಣಿವೆಗಳಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿದ್ದು ಅವುಗಳನ್ನು ತಲುಪಲು ರೋಪ್ ವೇ ಗಳನ್ನು ನಿರ್ಮಿಸಿzರೆ. ನಮ್ಮ ವೇಳಾಪಟ್ಟಿ ಪ್ರಕಾರ ಅಂದೇ ಸಾಯಂಕಾಲದ ಬುಲೆಟ್ ರೈಲಿನಲ್ಲಿ ಮುಂದಿನ ಗುರಿಯಾದ -ಕೋಕಾ ನಗರಕ್ಕೆ ಮುಂಚಿತವಾಗಿ ಬುಕ್ ಆಗಿದ್ದರಿಂದ ತಡಮಾಡದೇ ಫೆರಿಯಲ್ಲಿ ಕುಳಿತು ವಾಪಸಾದೆವು.

ಕಡ್ಡಿ ಹಿಡಿದು ಊಟ ಸಾಧ್ಯವೆ!
ಜಪಾನಿನ ಕ್ಯೂಶಿ ದ್ವೀಪದ -ಕ್ವೋಕಾ ನಗರದಲ್ಲಿ ನಮ್ಮ ಜಪಾನಿನ ಪ್ರವಾಸ ಕೊನೆಗೊಂಡಿತು. ಪ್ರಮುಖ ಅಂತರಾಷ್ಟ್ರೀಯ ಬಂದರುಗಳಂದಾದ -ಕ್ವೋಕಾದಲ್ಲಿ, ಜಪಾನಿನ ಕ್ಯಾನ್ಸರ್ ಸಂಸ್ಥೆಯ 57 ನೇ ವಾರ್ಷಿಕ ಸಮ್ಮೇಲನದಲ್ಲಿ ನನ್ನ ಪತಿ ಆಹ್ವಾನಿತ ರಾಗಿದ್ದು, ನಮ್ಮ ಹಾಜರಿ ಅಲ್ಲಿ ಅನಿವಾರ್ಯವಾಗಿದ್ದರಿಂದ, ಈ ನಗರದ ಕೆಲವು ಪ್ರವಾಸಿ ತಾಣಗನ್ನು ಪೂರ್ತಿಯಾಗಿ ನೋಡಲು ಆಗಲಿಲ್ಲ. ಆದರೆ, ಅಲ್ಲಿ ಅನಾಯಾಸವಾಗಿ ಜಪಾನಿಯರ ಶಿಷ್ಟಾಚಾರ, ಊಟದ ಪದ್ಧತಿ, ನಡೆ ನುಡಿಗಳ ಪರಿಚಯವಾಯಿತು. ಬಹುತೇಕ ಜನರಿಗೆ ಇಂಗ್ಲೀಷ್ ಬರದ ಕಾರಣ ನಾವೇನಾದರೂ ಕೇಳಿದಾಗ ಅದು ಅವರ ಮೊಬೈಲ್ ಫೋನಿನಲ್ಲಿ ಜಪಾನ್ ಭಾಷೆಗೆ ತರ್ಜುಮೆ ಗೊಂಡು, ಅರ್ಥಮಾಡಿಕೊಂಡು, ನಮಗೆ ಸರಿಯಾದ ಉತ್ತರವನ್ನು ಅವರು ನೀಡುತ್ತಿದ್ದ ರೀತಿ, ಅವರ ಸಹನೆ ಹಾಗೂ ವಿನಯವನ್ನು ಗಮನಿಸಿದೆವು.

ನಾವು ಅವರಿಂದ ಕಲಿಯುವುದು ಕೇವಲ ಅವರ ತಾಂತ್ರಿಕ ಅನ್ವೇಷಣೆಗಳೊಂದೇ ಅಲ್ಲ, ಜತೆಯಲ್ಲೆ ಅವರ ತಾಳ್ಮೆಯನ್ನೂ ಸಹ ಎಂದು ಮನವರಿಕೆಯಾಯಿತು. ಭಾರತೀಯರಂತೆ ಊಟ, ಉಡುಗೆಗಳಲ್ಲಿ ಅವರು ಕೂಡ ತುಂಬ ಸಂಪ್ರದಾಯಗಳನ್ನು ಪಾಲಿಸುತ್ತಾರೆ. ನಾವು ಅತಿಥಿಗಳಾಗಿ ಹೋದಾಗ ಭೋಜನಕ್ಕೂ ಮುನ್ನ, ಚಪ್ಪಲಿ ಶೂಗಳನ್ನು ಬಿಚ್ಚಿಟ್ಟು, ಕೈ ಕಾಲು ತೊಳೆದು ಕುಳಿತು ಕೊಳ್ಳಬೇಕು.

ಎರಡು ಚಾಪ್ ಸ್ಟಿಕ್ (ತೆಳ್ಳನೆಯ ಬಿದಿರು ಕಡ್ಡಿ)ಗಳನ್ನು ಬಳಸಿ ಅವರು ಊಟಮಾಡುವುದನ್ನು ನೋಡಿ, ನಾವೂ ಹಾಗೆ ಕಡ್ಡಿ ಗಳನ್ನು ಹಿಡಿದು ಅನ್ನ ಹಾಗೂ ತರಕಾರಿ ಸಲಾಡ್ ತಿನ್ನುವುದಕ್ಕೆ ಎಷ್ಟೇ ಪ್ರಯತ್ನಸಿದರೂ ಸಾಧ್ಯವಾಗಲೇ ಇಲ್ಲ! ಸಂಪ್ರದಾಯ, ಪರಂಪರೆಗಳನ್ನು ತನ್ನಲ್ಲಿ ಕಾಪಿಟ್ಟುಕೊಂಡು, ಆಧುನಿಕ ತಂತ್ರಜ್ಞಾನದ ಉತ್ತುಂಗಕ್ಕೇರಿದ ಜಪಾನ್, ನನ್ನ ನೆನಪಿನ ಬುತ್ತಿಯಲ್ಲಿ ಬೆಚ್ಚಗಿನ ಜಾಗವನ್ನಾಕ್ರಮಿಸಿಕೊಂಡಿದೆ!

ಪುರಾತನ ಬ್ರಿಜ್
ಒಸಾಕಾ ಜಲಯಾನದ ಉದ್ದಕ್ಕೂ ಸಿಗುವ ಪುರಾತನ ಹಾಗೂ ಆಧುನಿಕ ವಾಸ್ತುಶಿಲ್ಪವುಳ್ಳ ಬ್ರಿಜ್‌ಗಳ ಕೆಳಗೆ ನುಸುಳುವುದೇ
ಒಂದು ಅವಿಸ್ಮರಣೀಯ ಅನುಭವ. ಕೆಲವು ಹೆಚ್ಚು ಎತ್ತರವಿಲ್ಲದ ಪುರಾತನ ಸೇತುವೆಯ ಕೆಳಗೆ ಪ್ರಯಾಣಿಸಬೇಕಾದರೆ, ಬೋಟಿನ ಸೀಲಿಂಗ್ 30 ಸೆಂಟಿಮೀಟರ್‌ನಷ್ಟು ಕುಸಿಯುತ್ತದೆ. ಬ್ರಿಜ್ ದಾಟಿದಮೇಲೆ ಮಾಮೂಲು ಎತ್ತರವನ್ನು ಪುನಹ ಪಡೆದುಕೊಳ್ಳು ತ್ತದೆ. ಜಪಾನಿಗರ ಈ ತಾಂತ್ರಿಕ ಕೌಶಲ್ಯಕ್ಕೆ ಮೂಗಿನ ಮೇಲೆ ಬೆರಳಿಡುವಂತಾಯಿತು.

ನದಿಯಲ್ಲೇ ನಗರ ಪ್ರದಕ್ಷಿಣೆ

ಜಪಾನಿನ ಪ್ರಮುಖವಾದ ವಾಣಿಜ್ಯ ಕೇಂದ್ರಗಳಲ್ಲಿ ಒಂದಾದ ಒಸಾಕಾ ಮುಂಬಯಿಂತೆ ಅತಿ ಜನದಟ್ಟಣೆಯ ನಗರ. ಹೊನಷು ದ್ವೀಪದಲ್ಲಿರುವ ಮುಖ್ಯವಾದ ಅಂತಾರಾಷ್ಟ್ರೀಯ ಬಂದರು ಇದು. ಇಲ್ಲಿನ ವಿಶೇಷವೇನೆಂದರೆ, ಎಡೊ, ಒಕಾವಾ, ಒಗಾವಾ, ಸಕುರಾ ಮತ್ತು ಯಾಮಾಟೊವೊ ಮುಂತಾದ ನಾಲ್ಕೈದು ನದಿಗಳು ಈ ನಗರದ ಒಳಗೂ ಹೊರಗೂ ಸುತ್ತುವರೆದಿರುವುದು.
ಅವೆಲ್ಲದರಲ್ಲೂ ಅತ್ಯಾಧುನಿಕ ನಾವೆಗಳಲ್ಲಿ ಪ್ರಯಾಣಿಸಿ ಒಸಾಕಾ ನಗರದ ಅಂದ ಚೆಂದವನ್ನು ಸವಿಯುವುದು. ನಾವು ಒಗಾವ ಆಕ್ವಾ ಲೈನರ್ ನಲ್ಲಿ ಬುಕ್ ಮಾಡಿದ್ದರಿಂದ ಅದರಲ್ಲಿ ಕುಳಿತು ಒಂದು ಗಂಟೆ ಕಾಲ ಒಸಾಕಾದ ಬಹುತೇಕ ಐಕಾನಿಕ್ ಇಮಾರತುಗಳ ದೂರದ ನೋಟವನ್ನು ಆನಂದಿಸಿದೆವು. ಅವುಗಳಲ್ಲಿ ಮುಖ್ಯವಾಗಿ ಒಸಾಕಾ ಕ್ಯಾಸಲ, ಮಿಂಟ್ ಬ್ಯೂರೊ, ಸೆಂಟ್ರಲ್ ಪಬ್ಲಿಕ್ ಹಾಲ್ ಮುಂತಾದವುಗಳು.

ಒಸಾಕಾ ಕ್ಯಾಸಲ್

ತುಂಬ ಚೆಂದದ ಕಲಾತ್ಮಕ ಕೋಟೆ ಇದು. ಹದಿನಾರನೇ ಶತಮಾನದಲ್ಲಿ ಹಿದೆಯೋಶಿ ಟೊಯೊಟೊಮಿ ಕಟ್ಟಿದ ಐದು ಅಂತಸ್ತಿನ ಕೋಟೆ, ಎರಡನೇ ಮಾಹಾಯುದ್ಧದಲ್ಲಿ ಸಾಕಷ್ಟು ಹಾನಿಗೊಳಗಾಗಿದ್ದು, ನಂತರ 1950ರಲ್ಲಿ ಪುನರುಜ್ಜೀವನಗೊಂಡಿದೆ. ಈಗ ಜಪಾನಿನ ಇತಿಹಾಸ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ವಸ್ತು ಸಂಗ್ರಹಾಲಯವಾಗಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಐದನೇ ಮಹಡಿಯಲ್ಲಿರುವ ವೀಕ್ಷಕ ಗ್ಯಾಲರಿಯಿಂದ ಒಸಾಕಾ ನಗರ ಹಾಗೂ ಸುತ್ತಲಿನ ನದಿಗಳ ಸುಂದರ ನೋಟ ಮನಸೆಳೆಯುತ್ತದೆ. ಕ್ಯಾಸಲ್‌ನ ಸುತ್ತ ಇರುವ ವಿಶಾಲವಾದ ಉದ್ಯಾನವನ ಅನೇಕ ಜಾತಿಯ ಹೂ ಅರಳಿನಿಂತ ವೃಕ್ಷಗಳಿಂದ ಕಣ್ಮನ ಸೆಳೆಯುತ್ತದೆ.

ಕೊಕ್ಕರೆಯನ್ನು ಹಿಡಿದ ಮಗು
9 ಅಡಿ ಎತ್ತರದ ಡೋಮ್ ತರದ ವಾಸ್ತುಶಿಲ್ಪವುಳ್ಳ ಒಂದು ಕಟ್ಟಡ ಪಾಕಿನ ಇನ್ನೊಂದು ಭಾಗದಲ್ಲಿದೆ. ಅದು ಬಾಂಬ್ ದಾಳಿಗೆ ಆಹುತಿಯಾದ ಬಾಲೆಯ ಸ್ಮಾರಕ. ಹುತಾತ್ಮಳಾದ ಸದಾಕೊ ಸಸಾಕಿ ಎಂಬ ಹೆಸರಿನ ಬಾಲೆ, ಅವಳಷ್ಟೇ ದೊಡ್ಡದಾದ ಕೊಕ್ಕರೆಯನ್ನುಎತ್ತಿ ಹಿಡಿದುಕೊಂಡಿರುವ ಕಂಚಿನ ಪ್ರತಿಮೆಯನ್ನು ಈ ಡೋಮ್ ನ ಮೇಲೆ ನಿಲ್ಲಿಸಿದ್ದಾರೆ. ಈ ಬಾಲೆ ಬಾಂಬ್ ದಾಳಿಯ ಸಮಯದಲ್ಲಿ 1.7 ಕಿ.ಮಿ. ದೂರವಿರುವ ತನ್ನ ಮನೆಯ ಆಡುತ್ತಿದ್ದ ಎರಡು ವರ್ಷದ ಮಗು.

ಹತ್ತು ವರ್ಷಗಳ ಬಳಿಕ, 12 ವರ್ಷದವಳಿರುವಾಗ ಪರಮಾಣು ಬಾಂಬ್‌ನ ವಿಕಿರಣದ ಪರಿಣಾಮವಾಗಿ ಉಂಟಾದ ಲ್ಯುಕೇಮಿ ಯಾ ದಿಂದ ಸುಮಾರು 8 ತಿಂಗಳು ನರಳಿ ಮರಣ ಹೊಂದಿದಳು. ಆ ಸಮಯದಲ್ಲಿ ಆಸ್ಪತ್ರೆಯಲ್ಲಿ, ಪೇಪರ್ ಕೊಕ್ಕರೆಗಳನ್ನು ಮಾಡುತ್ತ ತನ್ನ ನರಳಾಟದ ದಿನಗಳನ್ನು ಕಳೆದಳು. ಅವಳ ನೆನಪಿಗೋಸ್ಕರ ಇಲ್ಲಿ ಮಕ್ಕಳು ಮತ್ತು ದೊಡ್ಡವರು ಲಕ್ಷಾಂತರ ಕಾಗದದ ಕೊಕ್ಕರೆಗಳನ್ನು ಮಾಡಿ ಅಂಟಿಸುತ್ತಾರೆ. ಹಿರೋಶಿಮಾದ ಹಲವು ಆಧುನಿಕ ಕಟ್ಟಡಗಳ ಮೇಲೂ ಕೂಡ ಕಾಂಕ್ರೀಟ್‌ ನಲ್ಲಿ ಮತ್ತು ಗಾಜಿನಲ್ಲಿ ನಿರ್ಮಿಸಿದ ಪೇಪರ್ ಕ್ರೇನ್‌ಗಳನ್ನು ನೋಡಬಹುದು.