Wednesday, 1st February 2023

ಕನ್ನಡ ಆತಂಕದಲ್ಲಿದೆ, ಆದರೂ ಭಯಬೇಡ

ಹಿರಿಯ ಕನ್ನಡ ಹೋರಾಟಗಾರ ರಾ.ನಂ ಚಂದ್ರಶೇಖರ್ ಅಭಿಮತ

ವಿಶ್ವವಾಣಿ ಸಂದರ್ಶನ: ವೆಂಕಟೇಶ್ ಆರ್‌.ದಾಸ್

ಕನ್ನಡ ಆತಂಕದಲ್ಲಿರುವುದು ನಿಜ. ಆದರೆ, ಅದಕ್ಕೆ ಭಯಪಡುವ ಅಗತ್ಯವಿಲ್ಲ. ಕನ್ನಡದ ಮೇಲಿನ ದಬ್ಬಾಳಿಕೆಯನ್ನು ಮೆಟ್ಟಿ ನಿಲ್ಲುವ ಶಕ್ತಿ ಕನ್ನಡಿಗ ರಾದ ನಮಗೇ ಇದೆ. ಹಿಂದಿ ಸೇರಿದಂತೆ ಇತರೆ ಭಾಷೆಗಳ ಹೇರಿಕೆಯನ್ನು ಮೆಟ್ಟಿನಿಂತು ನಾವು ಕನ್ನಡವನ್ನು ಕಟ್ಟಿದಾಗ ನಮ್ಮ ಭಾಷೆ ನಿರಾಂತಕವಾಗಿ ಬೆಳೆಯುತ್ತದೆ. ನಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸುವ ಕೆಲಸವನ್ನು ನಾವು ಮೊದಲು ಮಾಡಬೇಕು.

ಕನ್ನಡ ಕಲಿಯುವುದು ಅನಿವಾರ್ಯ ಎಂಬ ಸ್ಥಿತಿಯನ್ನು ನಾವು ನಮ್ಮ ನಾಡಿನಲ್ಲಿ ಮಾಡಬೇಕು. ಆಗ ಮಾತ್ರ ನಮ್ಮವರೂ ಕನ್ನಡ ಕಲಿಯುತ್ತಾರೆ. ಹೊರಗಿನವರು ಕನ್ನಡ ಕಲಿಯುವ ಬಗ್ಗೆ ಮನಸು ಮಾಡುತ್ತಾರೆ ಎಂಬುದು ಹಿರಿಯ ಕನ್ನಡ ಹೋರಾಟ ಗಾರ ರಾ.ನಂ.ಚಂದ್ರಶೇಖರ್ ಅವರ ಅಭಿಪ್ರಾಯ. ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶ್ವವಾಣಿ ನಡೆಸಿದ ಸಂದರ್ಶನದಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡದ ಸ್ಥಿತಿ ಆತಂಕದಲ್ಲಿದೆ ಎಂಬ ಮಾತಿಗೆ ನಿಮ್ಮ ಸಹಮತ ಇದೆಯೇ?
ಕನ್ನಡ ಆತಂಕದಲ್ಲಿರುವುದು ನಿಜ. ಜತೆಗೆ ಇನ್ನು ಎಷ್ಟೇ ವರ್ಷಗಳಾದರೂ ಕನ್ನಡ ಉಳಿಯುತ್ತದೆ ಎಂಬುದು ನಿಜವೆ. ಆದರೆ, ಇತ್ತೀಚೆಗೆ ಕೇಂದ್ರದ ಪರೀಕ್ಷೆಗಳಲ್ಲಿ ಕನ್ನಡವಿಲ್ಲ, ಶಿಕ್ಷಣದಲ್ಲಿ ಕನ್ನಡಕ್ಕೆ ಸ್ಥಾನ ಸಿಗುತ್ತಿಲ್ಲ, ಸಮಗ್ರ ಕನ್ನಡದಲ್ಲಿ ಖಚಿತವಾದ ಯಾವುದೇ ಭರವಸೆಗಳಿಲ್ಲ. ಹೀಗಾಗಿ, ಕನ್ನಡಕ್ಕೆ ಈಗಲ್ಲದಿದ್ದರೂ, ಭವಿಷ್ಯದಲ್ಲಿ ಆತಂಕವಿದೆ. ಹಳೆಗನ್ನಡ ಸಾಹಿತ್ಯವನ್ನೇ ಪದವಿ ಪರೀಕ್ಷೆಗಳಲ್ಲಿ ಬೇಡ ಎನ್ನುತ್ತಿದ್ದಾರೆ. ಶಾಸ್ತ್ರೀಯ ಕನ್ನಡದಲ್ಲಿ ಇದೆಲ್ಲವೂ ಬೇಕು ಎಂದಿದೆ. ಕನ್ನಡ ಕಲಿತರೆ ನಮಗೆ ಸಿಗುವುದೇನು ಎಂಬ ಭಾವನೆ ಇದೆ. ಇದೆಲ್ಲವನ್ನು ಬಿಟ್ಟು ಕನ್ನಡ ಕಟ್ಟುವ ಕೆಲಸ ಮಾಡಿದಾಗ ಕನ್ನಡ ಖಂಡಿತ ಬೆಳಗಲಿದೆ.

ಕನ್ನಡ ಉಳಿಸುವುದಕ್ಕೆ ನಾವು ಮಾಡಬೇಕಿರುವುದೇನು?
ಕನ್ನಡದಲ್ಲೇ ವ್ಯವಹರಿಸಿ, ಕರ್ನಾಟಕದ ಉತ್ಪನ್ನವನ್ನೇ ಖರೀದಿಸಬೇಕು. ಸಿರಿಗನ್ನಡಂ ಗೆಲ್ಗೆ ಎಂಬ ಘೋಷಣೆಯಿಂದ ಕನ್ನಡ ಉಳಿಯುವುದಿಲ್ಲ. ಕನ್ನಡದಲ್ಲಿ ಬರೆಯುವುದು ತಪ್ಪಾದರೆ ಅದನ್ನು ವಿರೋಧಿಸಬೇಕು. ಬುಲ್ ಟೆಂಪಲ್ ರಸ್ತೆ ಎಂಬ ಬದಲಿಗೆ ಬಸವನಗುಡಿ ರಸ್ತೆ ಎಂದು ಬರೆಯುವಂತೆ ಪ್ರೇರೇಪಿಸಬೇಕು.

ಸಾಧ್ಯವಾದಷ್ಟು ಕನ್ನಡದಲ್ಲೇ ವ್ಯವಹರಿಸುವುದನ್ನು ನಾವೆಲ್ಲರೂ ರೂಢಿ ಮಾಡಿಕೊಳ್ಳಬೇಕು. ಅದನ್ನು ಇತರರಿಗೂ ಅನಿವಾರ್ಯವಾಗುವಂತೆ ನಾವು ಮಾಡಿದಾಗ ಮಾತ್ರ ಕನ್ನಡವನ್ನು ಉಳಿಸಿದಂತಾಗುತ್ತದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ.

ಒಂದು ರಾಷ್ಟ್ರ, ಒಂದು ಭಾಷೆ ಕನ್ನಡಕ್ಕೆ ಅಪಾಯವಲ್ಲವೇ?
ಖಂಡಿತ ನಮಗೆ ಇಂತಹ ನಡೆಯೇ ಅಪಾಯಕಾರಿ. ಪ್ರಧಾನಿ ಮೋದಿ ಅವರು ಪ್ರಾದೇಶಿಕ ಭಾಷೆಗಳಿಗೆ ಮಹತ್ವ ನೀಡಬೇಕು ಎನ್ನುತ್ತಾರೆ. ಆದರೆ, ಒಂದು ಭಾಷೆ, ಒಂದು ದೇಶ ಎಂಬ ಭಾವನೆ ಹೆಚ್ಚುತ್ತಿದೆ. ಇದು ಸಲ್ಲದು. ನಮಗೆ ಒಂದು ಎಂಬುದೇ ಇಲ್ಲ,
ವಿವಿಧತೆಯಲ್ಲಿ ಏಕತೆ ಎಂಬುದೇ ಭಾರತದ ಸರ್ವಶ್ರೇಷ್ಠತೆಯಲ್ಲಿ ಅಡಗಿದೆ. ಒಂದು ರಾಷ್ಟ್ರ, ಒಂದು ಭಾಷೆ ಎಂಬುದೆಲ್ಲ ಅಪಾಯಕಾರಿ ನಡವಳಿಕೆ. ಅಂಬೇಡ್ಕರ್ ಇಡೀ ದೇಶಕ್ಕೆ ಒಂದು ಭಾಷೆ ಬೇಕು ಎಂಬುದನ್ನು ಒಪ್ಪಿರಲಿಲ್ಲ, ಹೀಗಾಗಿಯೇ ದೇಶದ ಎಲ್ಲ ಭಾಷೆಗಳನ್ನು ಸಮಾನವಾಗಿ ಕಾಣುವಂತೆ ಸಂವಿಧಾನದಲ್ಲಿ ತಿಳಿಸಿದ್ದರು. ಹಿಂದಿ ರಾಷ್ಟ್ರಭಾಷೆಯಾದರೆ, ಕನ್ನಡವೂ ರಾಷ್ಟ್ರಭಾಷೆಯೇ. ಇದರಲ್ಲಿ ಎರಡು ಮಾತಿಲ್ಲ.

ಹಿಂದಿ ಹೇರಿಕೆ ಕುರಿತು ನಿಮ್ಮ ಅಭಿಪ್ರಾಯವೇನು?
ಹಿಂದಿ ಹೇರಿಕೆಯನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಸರಕಾರಗಳು ಮಾಡಿವೆ. ಮಾಡುತ್ತಲೇ ಬರುತ್ತಿವೆ. ಇದನ್ನು ವಿರೋಧಿಸುವ ಗುಣವನ್ನು ಕನ್ನಡಿಗರು ಬೆಳೆಸಿಕೊಳ್ಳಬೇಕು. ಜತೆಗೆ, ಉದ್ಯೋಗದಲ್ಲಿ ಕನ್ನಡಕ್ಕೆ ಸಂಬಂಧಿಸಿದಂತೆ ಮಹಿಷಿ ವರದಿ ಜಾರಿಗೆ ತರಲೇಬೇಕು. ಆದರೆ, ಯಾವ ಸರಕಾರಗಳು  ಇದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬುದೇ ದುರಂತ. ಕೆಲವೊಮ್ಮೆ, ಕೆಲವು ಇಲಾಖೆಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅನುಕೂಲವಿದ್ದರೂ, ಕನ್ನಡಿಗರೇ ಅದರಿಂದ ದೂರ ಸರಿಯುತ್ತಿದ್ದಾರೆ. ಕನ್ನಡಿಗರಿಗೆ ಕನ್ನಡದ ಮೇಲೆ ಅಸಡ್ಡೆ ಇದೆ ಎಂದಾದರೆ, ಇಂತಹ ಪರಿಸ್ಥಿತಿ ನಿರ್ಮಾಣವಾಗುವುದು ಸಹಜ. ಹೀಗಾಗಿ, ನಮ್ಮ ಮಕ್ಕಳಿಗೆ ಕನ್ನಡದ ಅನಿವಾರ್ಯತೆಯನ್ನು ಸಾರಬೇಕಿದೆ.

ಕನ್ನಡದ ಬೆಳವಣಿಗೆ ಹೇಗೆ? 
ಕರ್ನಾಟಕದಲ್ಲಿ ಕೆಲಸ ಮಾಡುವ ಯಾವುದೇ ಅಧಿಕಾರಿ ಸಿಬ್ಬಂದಿಗೆ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡಬೇಕು. ಆಡಳಿತದಲ್ಲಿ ಕನ್ನಡವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸರಕಾರಗಳು ಶ್ರಮಿಸಬೇಕು. ಕನ್ನಡ ಕಲಿಯದಿದ್ದರೆ ನಮಗೆ ಉಳಿಗಾಲ ವಿಲ್ಲ ಎಂಬ ಸ್ಥಿತಿ ನಿರ್ಮಾಣ ವಾಗಬೇಕು. ಜತೆಗೆ, ಸರಕಾರದ ತೀರ್ಮಾನ ಮತ್ತು ಆದೇಶದಿಂದಲೇ ಕನ್ನಡದ ಉಳಿವು ಸಾಧ್ಯವಿಲ್ಲ. ಆದರೆ, ಕನ್ನಡಿಗರಾದ ನಾವೆಲ್ಲರೂ ಕನ್ನಡದ ಬಗೆಗೆ ಪ್ರೀತಿ ಬೆಳೆಸಿಕೊಳ್ಳಬೇಕು. ನಮ್ಮ ಮಕ್ಕಳಲ್ಲಿ ಕನ್ನಡ ಮತ್ತು ಕನ್ನಡ ಭಾಷೆಯ ಬಗ್ಗೆ ಗೌರವ ಮೂಡುವಂತೆ ಮಾಡಬೇಕು.

ಒಂದು ಅಂಕದ ಪ್ರಶ್ನೆಗಳು
೧. ಕನ್ನಡದಲ್ಲಿ ನಿಮಗಿಷ್ಟವಾದ ಚಲನಚಿತ್ರ?
-ವೀರಸಂಕಲ್ಪ
೨. ಕನ್ನಡದಲ್ಲಿ ನಿಮಗಿಷ್ಟವಾದ ಗೀತೆ ಯಾವುದು?
ಅಪಾರ ಕೀರ್ತಿ ಗಳಿಸಿ ಮೆರೆದ ಭವ್ಯ ನಾಡಿದು
೩. ಕರ್ನಾಟಕ ಎಂಬ ಪದ ಕೇಳಿದೊಡನೆ ನಿಮ್ಮೊಳಗಿನ ಭಾವ.
-ಕರ್ನಾಟಕ ಎಂಬ ಹೆಸರೇ ರೋಮಾಂಚನ

೪. ರಾಜ್ಯದಲ್ಲಿ ನಿಮಗಿಷ್ಟವಾದ ಸ್ಥಳ?
– ಹಂಪೆ
೫. ಭಾಷೆಯ ವಿಚಾರದಲ್ಲಿ ಕನ್ನಡಿಗರು ನಿರಾಭಿಮಾನಿಗಳೇ?
ನಿರಾಭಿಮಾನಿಗಳಲ್ಲ, ಹೀಗೆ ಹೇಳುವುದೇ ಒಂದು ಪಿತೂರಿ.

error: Content is protected !!