Monday, 5th December 2022

ಮುಖ್ಯಮಂತ್ರಿಗಳೇ, ಬಹರೇನ್‌ ಕನ್ನಡಿಗರ ಕೆಲಸವನ್ನೊಮ್ಮೆ ನೋಡಿ !

ಇದೇ ಅಂತರಂಗ ಸುದ್ದಿ

vbhat@me.com

ಕನ್ನಡದ ಇತಿಹಾಸದಲ್ಲಿ ಬಹರೇನ್ ಕನ್ನಡ ಸಂಘ ಒಂದು ಅಪೂರ್ವ ಅಧ್ಯಾಯವನ್ನು ಬರೆಯುವ ಮೂಲಕ, ಚರಿತ್ರೆಯನ್ನು ಬರೆದಿದೆ. ನಮ್ಮ ದೇಶದ ಹೊರಗೆ, ವಿದೇಶಿ ನೆಲದಲ್ಲಿ ಸುಸಜ್ಜಿತ ಸ್ವಂತ ಕನ್ನಡ ಭವನವನ್ನು ನಿರ್ಮಿಸಿದ ಪ್ರಪ್ರಥಮ ಮತ್ತು ಏಕೈಕ ಕನ್ನಡ ಸಂಘ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ.

ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ದುಬೈ, ಅಬುಧಾಬಿ, ಕುವೈಟ್, ಕತಾರ್ ಸೇರಿದಂತೆ ಹಲವಾರು ದೇಶಗಳಲ್ಲಿ ಕನ್ನಡ ಸಂಘಗಳಿವೆ. ಅಮೆರಿಕದಂದೇ ಮೂವತ್ತಕ್ಕೂ ಹೆಚ್ಚು ಕನ್ನಡ ಸಂಘಗಳಿವೆ. ಆದರೆ ಅವುಗಳಿಗೆ ಸ್ವಂತ ಕಟ್ಟಡಗಳಿಲ್ಲ.

ಆದರೆ ನಲವತ್ತಾರು ವರ್ಷಗಳ ಹಿಂದೆ, ವಿದೇಶದಲ್ಲಿ ಸ್ಥಾಪಿತವಾದ ಮೊದಲ ಕನ್ನಡ ಸಂಘ ಎಂದು ಕರೆಯಿಸಿಕೊಂಡಿರುವ ಬಹರೇನ್ ಕನ್ನಡ ಸಂಘ, ಸ್ವಂತ ಕಟ್ಟಡವನ್ನು ಹೊಂದುವುದರ ಮೂಲಕ ಮತ್ತೊಂದು ಪ್ರಥಮವನ್ನು ಸ್ಥಾಪಿಸಿದ್ದು ಕನ್ನಡಿಗರೆಲ್ಲ ಹೆಮ್ಮೆ, ಅಭಿಮಾನಪಡುವ ಸಂಗತಿಯೇ.

ಬಹರೇನ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಚಟುವಟಿಕೆ ನಡೆಯುವುದರ ಮೂಲಕ ಮುಂದಿನ ಪೀಳಿಗೆಗಳೂ ಕನ್ನಡ ಕೈಂಕರ್ಯವನ್ನು ನಿರಂತರವಾಗಿ ನಡೆಸಿಕೊಂಡು ಹೋಗುವ ನಿರೀಕ್ಷೆ ಹಾಗೂ ಭರವಸೆ ಇದರಿಂದ ಮೂಡಿ ದಂತಾಗಿದೆ. ಬಹರೇನ್ ಕನ್ನಡಿಗರು ಕಟ್ಟಿದ ಈ ಕನ್ನಡ ಭವನದ ಲೋಕಾರ್ಪಣಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮತ್ತು ಚರಿತ್ರಾರ್ಹಕ್ಷಣ ಗಳಿಗೆ ಖುದ್ದಾಗಿ ಸಾಕ್ಷಿಯಾಗುವ ಅವಕಾಶ ನನಗೆ ಸಿಕ್ಕಿತ್ತು.

ಬಹರೇನ್ ಕನ್ನಡಿಗರು ಸಮಸ್ತ ಕನ್ನಡಿಗರಿಗೆ, ಅದರಲ್ಲೂ ವಿಶೇಷವಾಗಿ ಒಟ್ಟಾರೆ ಎಲ್ಲ ಅನಿವಾಸಿ ಕನ್ನಡಿಗರಿಗೆ ಮಾದರಿ ಯಾಗಿದ್ದಾರೆ, ಪ್ರೇರಣೆಯಾಗಿದ್ದಾರೆ. ಇಂಥ ಒಂದು ಆದರ್ಶ ಪರಂಪರೆಗೆ ನಾಂದಿ ಹಾಡಿದ ಬಹರೇನ್ ಕನ್ನಡ ಸಂಘದ ಅಧ್ಯಕ್ಷ ಪ್ರದೀಪ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಕಿರಣ್ ಉಪಾಧ್ಯಾಯ ಅವರನ್ನು ಅಭಿನಂದಿಸುವುದು ನಮ್ಮ ಕರ್ತವ್ಯ. ವಿದೇಶ ಗಳಿಗೆ ಹೋದವರು ಸಾಕಷ್ಟು ಹಣ ಮಾಡಿ, ಮನೆ, ಕಾರು ಖರೀದಿಸಿ ಐಷಾರಾಮಿ ಜೀವನ ನಡೆಸಲು ಬಯಸುವುದು ಸಾಮಾನ್ಯ.

ಬಿಡುವಿನ ಸಮಯದಲ್ಲಿ ಕನ್ನಡ ಸಂಘಗಳ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವುದು ಸಹ ಸಹಜವಾದದ್ದೇ. ಆದರೆ ಹತ್ತಾರು ಕೋಟಿ ರುಪಾಯಿ ಕನ್ನಡ ಭವನ ನಿರ್ಮಿಸಲು ಯಾರೂ ಮುಂದಾಗುವುದಿಲ್ಲ. ತಮ್ಮ ಮನೆಯನ್ನೇ ಕಟ್ಟಿಕೊಳ್ಳಲು ಪುರುಸೊ ತ್ತಿಲ್ಲದವರು, ಇನ್ನು ಕನ್ನಡಕ್ಕೆ ಭವನ ಕಟ್ಟಲು ಮುಂದಾಗುವುದುಂಟೆ? ಸಾಧ್ಯವೇ ಇಲ್ಲ. ವಿದೇಶದಲ್ಲಿ ಕನ್ನಡ ಚಟುವಟಿಕೆ ನಡೆಸಲು ಸಹಕಾರಿಯಾಗಲೆಂದು ಕನ್ನಡ ಭವನ ನಿರ್ಮಿಸಬೇಕೆಂದು ಯಾರೂಅಪೇಕ್ಷಿಸುವುದಿಲ್ಲ.

ಆದರೆ ಬಹರೇನ್ ಕನ್ನಡಿಗರು ತಾಯ್ನಾಡಿನಿಂದ ಸಾವಿರಾರು ಕಿಮಿ ದೂರದಲ್ಲಿದ್ದರೂ, ತಾವು ಉದ್ಯೋಗ ನಿಮಿತ್ತ ಬದುಕು ಕಟ್ಟಿಕೊಂಡಿರುವ ವಿದೇಶಿ ನೆಲದಲ್ಲಿ ಕನ್ನಡ ಮತ್ತು ಕನ್ನಡತನವನ್ನು ಉಳಿಸಿ, ಬೆಳೆಸಲು, ತಮ್ಮ ಮಕ್ಕಳೂ ಕನ್ನಡದ ಕಾಯಕ ದಲ್ಲಿ ಮುಂದೆಯೂ ಪಾಲ್ಗೊಳ್ಳಲು ಸಹಾಯಕವಾಗಲೆಂದು ಕನ್ನಡ ಭವನವನ್ನು ನಿರ್ಮಿಸಿದ್ದು ವಿಶೇಷವಾಗಿ ಕಾಣುತ್ತದೆ.
ಹಾಗೆಂದು ಬಹರೇನ್ ಕನ್ನಡ ಭವನ ದಿಢೀರ್ ಎದ್ದು ನಿಂತಿಲ್ಲ.

ಇದಕ್ಕಾಗಿ ಕನ್ನಡ ಸಂಘದ ಪದಾಧಿಕಾರಿಗಳು ಸತತ ಹದಿನಾಲ್ಕು ವರ್ಷಗಳ ಕಾಲ ಪ್ರಯತ್ನಪಟ್ಟಿದ್ದಾರೆ. ಸ್ವಂತ ಕೆಲಸವನ್ನು ಬಿಟ್ಟು, ಕರ್ನಾಟಕದಲ್ಲಿ ಭಿಕ್ಷಾಪಾತ್ರೆ ಹಿಡಿದು, ಕನ್ನಡ ಪ್ರೇಮಿಗಳು, ದಾನಿಗಳ ನೆರವಿನಿಂದ ಸುಮಾರು ಹತ್ತು ಕೋಟಿ
ರುಪಾಯಿ ಸಂಗ್ರಹಿಸಿ, ಆ ಹಣದಲ್ಲಿ ಈ ಭವನವನ್ನು ನಿರ್ಮಿಸಿದೆ. ಕರ್ನಾಟಕ ರಾಜ್ಯ ಸರಕಾರ, ಅದರಲ್ಲೂ ವಿಶೇಷವಾಗಿ ಬಿ.ಎಸ್ .ಯಡಿಯೂರಪ್ಪನವರು ಇದಕ್ಕಾಗಿ ಎರಡು ಕೋಟಿ ರುಪಾಯಿ ಮಂಜೂರು ಮಾಡಿಕೊಟ್ಟರು.

ಉಳಿದಿದ್ದನ್ನೆ ಪದಾಧಿಕಾರಿಗಳು ವಂತಿಗೆ ಎತ್ತಿಯೇ ಸಂಗ್ರಹಿಸಿದ್ದು ಗಮನಾರ್ಹ. ಆದರೆ ಕಟ್ಟಡ ನಿರ್ಮಾಣಕ್ಕೆ ತಗುಲಿದ್ದು ಸುಮಾರು ಹನ್ನೆರಡು ಕೋಟಿ ರುಪಾಯಿ. ಕನ್ನಡ ನಿರ್ಮಾಣವಾಗಿ ಉದ್ಘಾಟನೆಯಾದರೂ, ಅದನ್ನು ಕಟ್ಟಿದ ಕಂಟ್ರಾಕ್ಟು ದಾರರಿಗೆ ಕನ್ನಡ ಸಂಘ ಇನ್ನೂ ಎರಡೂವರೆ ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿದೆ. ಕನ್ನಡ ಸಂಘಕ್ಕೆ ಸಾಲ ಕೊಟ್ಟು ಭವನವನ್ನುನಿರ್ಮಿಸಿಕೊಟ್ಟವರು ಕನ್ನಡಿಗರಲ್ಲ. ಜೋಸೆ- ಕುರಿಯನ್ ಎಂಬ ಮಲಯಾಳಿ.

ನಿಗದಿತ ಸಮಯಕ್ಕೆ ಹಣ ಪಾವತಿಮಾಡಲು ಸಾಧ್ಯವಾಗದಿದ್ದರೂ ಅವರು ಕನ್ನಡ ಭವನದ ನಿರ್ಮಾಣಕ್ಕೆ ಹೆಗಲು ಕೊಟ್ಟಿದ್ದು
ವಿಶೇಷವೇ. ಈ ಕನ್ನಡ ಭವನ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಅವರನ್ನು ಕನ್ನಡ ಸಂಘ ಆಮಂತ್ರಿಸಿತ್ತು. ಆದರೆ ಮುಖ್ಯಮಂತ್ರಿಗಳಾಗಲಿ, ಸಂಬಂಧಪಟ್ಟ ಖಾತೆಸಚಿವ ರಾಗಲಿ, ಕಾರ್ಯಕ್ರಮಕ್ಕೆ ಬರಲಿಲ್ಲ.

ಮುಖ್ಯಮಂತ್ರಿಗಳಿಗಾಗಲಿ, ಸಚಿವರಿ ಗಾಗಲಿ ಕನ್ನಡಕ್ಕಿಂತ ಮಿಗಿಲಾದ ಯಾವ ಕಾರ್ಯ ಚಟು ವಟಿಕೆಯಿತ್ತೋ, ಗೊತ್ತಿಲ್ಲ. ಅಂತೂ ಅವರಿಬ್ಬರೂ ಬರಲಿಲ್ಲ. ಸರಕಾರದ ಪ್ರತಿನಿಧಿಯಾಗಿಯಾರಾದರೊಬ್ಬ ಜವಾಬ್ದಾರಿ ವ್ಯಕ್ತಿಯನ್ನು ಕಳಿಸುವ ಸೌಜನ್ಯವನ್ನೂ ಸರಕಾರ ತೋರಲಿಲ್ಲ. ಒಂದು ವೇಳೆ ಮಲಯಾಳಿಗಳೇನಾದರೂ ‘ಮಲಯಾಳಿ ಭವನ’ ನಿರ್ಮಿಸಿದ್ದೇ
ಆಗಿದ್ದರೆ, ಮುಖ್ಯಮಂತ್ರಿಯಾದಿಯಾಗಿ ಕೇರಳ ಸರಕಾರದ ಅರ್ಧ ಸಂಪುಟ ಹಾಜರಿರುತ್ತಿತ್ತು. ಅದನ್ನು ಸರಕಾರ ತನ್ನ ಕರ್ತವ್ಯ
ಎಂದು ಭಾವಿಸುತ್ತಿತ್ತು. ಆದರೆ ನಮ್ಮ ಸರಕಾರವನ್ನು ನಡೆಸುವವರಿಗೆ ಇವೆ ಸೂಕ್ಷ್ಮ, ಭಾವನಾತ್ಮಕ ಮತ್ತು ಮಹತ್ವದ ಸಂಗತಿ ಎಂದು ಅನಿಸುವುದೇ ಇಲ್ಲ.

ಮುಖ್ಯಮಂತ್ರಿಗಳಿಗೆ ಇದೂ ಸಹ ಅತ್ಯಂತ ಪ್ರಮುಖ ಸಂಗತಿಯಾಗಬೇಕಿತ್ತು. ಯಡಿಯೂರಪ್ಪನವರು ವಿಶೇಷ ಆಸ್ಥೆವಹಿಸಿದ್ದರಿಂದ ಸರಕಾರದಿಂದ ಎರಡು ಕೋಟಿ ರುಪಾಯಿಯಾದರೂ ಮಂಜೂರಾಯಿತು. ಆದರೆ ಮಂಜೂರಾದ ಆ ಎರಡು ಕೋಟಿ ರುಪಾಯಿಯನ್ನು ಪಡೆಯಲು ಬಹರೇನ್ ಕನ್ನಡ ಸಂಘದ ಪದಾಧಿಕಾರಿಗಳು ನಡೆಸಿದ ಹೋರಾಟದ ಕಥೆಯನ್ನು ಬರೆದರೆ, ತಲೆಗಿಂತ ಮುಂಡಾಸವೇ ದೊಡ್ಡದಾಯಿತು ಎಂಬಂತೆ ಅದೇ ದೊಡ್ಡಕಥೆಯಾದೀತು.

ಯಡಿಯೂರಪ್ಪನವರು ತಲಾ ಒಂದು ಕೋಟಿಯಂತೆ ಮಂಜೂರು ಮಾಡಿದ ಆ ಹಣವನ್ನು ಪಡೆಯಲು ಬಹರೇನ್
ಕನ್ನಡ ಸಂಘಕ್ಕೆ ಸುಮಾರು ಐದು ವರ್ಷ ಹಿಡಿದಿರಬಹುದು.‘ದೇವರು ಕೊಟ್ಟರೂ ಪೂಜಾರಿ ಕೊಡಲೊಲ್ಲ’ ಎಂಬಂತೆ, ಮುಖ್ಯಮಂತ್ರಿಗಳು ಅನುದಾನವನ್ನು ಘೋಷಿಸಿದರೂ, ಅಧಿಕಾರಿಗಳು ಕಾಡಿಸಿ, ಪೀಡಿಸಿದ ರೀತಿ ಅಸಹ್ಯ ಹುಟ್ಟಿಸುವಂಥದ್ದು.
ಕನ್ನಡದ ಕೆಲಸಕ್ಕೆ ವಿಧಾನಸೌಧದಲ್ಲಿ ಅಂಥ ಅಸಡ್ಡೆ, ತಾತ್ಸರ, ಬೇಜವಾಬ್ದಾರಿ ಧೋರಣೆಯಿದೆ.

ಬಹರೇನ್ ಕನ್ನಡಿಗರುತಮ್ಮ ಸ್ವಂತ ಕೆಲಸ, ಮನೆ-ಮಡದಿ-ಮಕ್ಕಳನ್ನು ತಿಂಗಳುಗಟ್ಟಲೆ ಬಿಟ್ಟು, ಬೆಂಗಳೂರಿನಲ್ಲಿ ಬೀಡುಬಿಟ್ಟು, ಸರಕಾರ ಘೋಷಿಸಿದ ಎರಡು ಕೋಟಿ ರುಪಾಯಿ ಪಡೆಯಲು ನಡೆಸಿದ ಹರಸಾಹಸವನ್ನು ನೆನೆದರೆ, ಯಾರಿಗೇ ಆದರೂ ಕನ್ನಡದ ಕೆಲಸಕ್ಕೆ ಮುಂದಾಗಬಾರದು, ಇದೊಂದು ಮರ್ಯಾದೆ ಇಲ್ಲದ ಕೆಲಸ ಎಂದು ಅನಿಸದೇ ಇರದು. ಕಾರಣ ಅವರು ವಿಧಾನಸೌಧ ಮತ್ತು ಕನ್ನಡ-ಸಂಸ್ಕೃತಿ ಇಲಾಖೆಯ ಕಂಬ ಕಂಬಗಳನ್ನೆ ಪ್ರದಕ್ಷಿಣೆ ಹೊಡೆದು, ಸಂಬಂಧಪಟ್ಟ ಅಧಿಕಾರಿಗಳ ಮರ್ಜಿ ಕಾಯ್ದು, ಅವರಿಗೆ ಸಲಾಮು ಹೊಡೆದು, ಕೊನೆಗೂ ಎರಡು ಕೋಟಿ ರುಪಾಯಿ ಪಡೆಯುವ ಹೊತ್ತಿಗೆ ಭೂಮಿ-ಆಕಾಶ
ಒಂದಾಗಿತ್ತು.

ಕನ್ನಡ ಅಂದ್ರೆ ವಿಧಾನಸೌಧದಲ್ಲಿ, ಸರಕಾರ ನಡೆಸುವವರಿಗೆ ಅಂಥ ಅಸಡ್ಡಾಳತನವಿದೆ. ಆ ಎರಡು ಕೋಟಿ ಪಡೆಯಲು ಕನ್ನಡ ಸಂಘದ ಪ್ರದೀಪ ಶೆಟ್ಟಿ ಮತ್ತು ಕಿರಣ್ ಉಪಾಧ್ಯಾಯ ಅಕ್ಷರಶಃ ತಮ್ಮ ಸ್ವಂತ ಹಣ, ಸಮಯ, ಸಂಯಮಗಳನ್ನೆಲ್ಲ ಧಾರೆಯೆರೆದರು. ಅವರ ಜಾಗದಲ್ಲಿ ಬೇರೆ ಯಾರೇ ಇದ್ದರೂ ದೊಡ್ಡ ನಮಸ್ಕಾರ ಹೊಡೆದು, ಕನ್ನಡದ ಉಸಾಬರಿಯೇ ಸಾಕು ಎಂದು ಕೈ ಚೆಲ್ಲಿಬಿಡುತ್ತಿದ್ದರು. ಆದರೆ ಇವರಿಬ್ಬರೂ ಛಲ ಬಿಡದೇ, ಧೈರ್ಯಗುಂದದೇ, ಜಪ್ಪಯ್ಯ ಅಂದರೂ ಬಿಡದೇ,
ಅಂದುಕೊಂಡಿದ್ದನ್ನು ಸಾಽಸುವ ತನಕವಿರಮಿಸಲಿಲ್ಲ.

ಅವರು ಹೆಣಗುವುದನ್ನು ನೋಡಿ ನನಗೇ ಎಷ್ಟೋ ಸಲ ಅವರಿಬ್ಬರ ಬಗ್ಗೆ ಪಶ್ಚಾತ್ತಾಪ ಮೂಡುವಂತಾಗಿತ್ತು. ಅಷ್ಟು ಸಲ ಅವರು ಉಧೋ ಎಂದು ಬಹರೇನ್ ನಿಂದ ಬೆಂಗಳೂರಿಗೆ ಬಂದು-ಹೋದರು. ಅಧಿಕಾರಿಗಳು ನೀಡುತ್ತಿದ್ದ ಯಾವ ಭರವಸೆಯೂ ಈಡೇರುತ್ತಿರಲಿಲ್ಲ. ಇಷ್ಟೆ ಅಪಸವ್ಯಗಳ ನಡುವೆಯೂ ಅವರು ಹಿಡಿದ ಹಠ ಬಿಡಲಿಲ್ಲ. ಅಂದುಕೊಂಡಿದ್ದನ್ನು ಈಡೇರಿಸಿದರು. ಆದರೆ ಸಂಘದ ಮೇಲೆ ಇನ್ನೂ ಎರಡೂವರೆ ಕೋಟಿ ರುಪಾಯಿ ಋಣಭಾರವಿದೆ.

ಒಬ್ಬ ಮಲಯಾಳಿ ಗುತ್ತಿಗೆದಾರನ ಮರ್ಜಿಯ ಮೇಲೆ ಕನ್ನಡ ಭವನ ನಿಂತಿದೆ. ನಿಗದಿತ ಸಮಯದೊಳಗೆ ಗುತ್ತಿಗೆದಾರನಿಗೆ ಹಣ ಪಾವತಿ ಮಾಡದಿದ್ದರೆ, ಆತ ಕನ್ನಡ ಸಂಘದ ಪದಾಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಕೊಳ್ಳಬಹುದು. ಅರಬ್ ದೇಶಗಳಲ್ಲಿ ಇಂಥ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಕನ್ನಡ ಕೆಲಸಕ್ಕೆ ಮುಂದಾದರೆ ಎಂಥ
ಅಪಾಯಗಳನ್ನು ಎದುರಿಸಬೇಕಾಗುತ್ತದೆ ಎಂಬುದರ ರೂಪಕವಾಗಿಯೂ ಬಹರೇನ್ ಕನ್ನಡ ಭವನ ಕಾಣುತ್ತದೆ.

ಬೆಂಗಳೂರಿನಲ್ಲಿ ಪ್ರತಿವರ್ಷ ರಸ್ತೆ ನಿರ್ಮಾಣಕ್ಕೆಂದೇ ಐದು ಸಾವಿರಕ್ಕಿಂತ ಅಧಿಕ ಹಣವನ್ನು ವಿನಿಯೋಗಿಸಲಾಗುತ್ತದೆ. ಅಷ್ಟಾಗಿಯೂ ಯಾವ ರಸ್ತೆಯೂ ಸರಿಯಾಗಿಲ್ಲ. ಹೊಂಡ, ಉಬ್ಬು -ತಗ್ಗುಗಳಿಲ್ಲದ ಒಂದು ಕಿಮಿ ರಸ್ತೆಯೂ ಇಲ್ಲ. ಆದರೆ ಕನ್ನಡದ ಕೆಲಸಕ್ಕೆ ಒಂದೆರಡು ಕೋಟಿ ರುಪಾಯಿ ನೀಡಲು ಸರಕಾರದ ಬಳಿ ಹಣವಿಲ್ಲ. ವಿದೇಶಿ ನೆಲದಲ್ಲಿ ಕನ್ನಡ ಭವನ ನಿರ್ಮಿಸಲು ನೆರವಾಗುವುದು ಸರಕಾರದ ಆದ್ಯತೆಯಾಗಬೇಕು, ಆದ್ಯಕರ್ತವ್ಯವಾಗಬೇಕು.

ಕನ್ನಡದ ಕೆಲಸ ಕೇವಲ ಕರ್ನಾಟಕದಲ್ಲಿ ಮಾತ್ರ ಆಗುವಂಥದ್ದಲ್ಲ. ಕನ್ನಡಿಗರು ಎಲ್ಲಿನೆಲೆಸಿದ್ದಾರೋ, ಅ ಕನ್ನಡದ ಕೆಲಸಗಳನ್ನು ಪ್ರೋತ್ಸಾಹಿಸಬೇಕು. ಮಲಯಾಳಿಗಳಿಗೆ, ತಮಿಳರಿಗೆ, ತೆಲುಗರಿಗೆ ಸಾಧ್ಯವಾಗಿದ್ದು ನಮಗೇಕೆ ಸಾಧ್ಯವಾಗುವುದಿಲ್ಲ? ಬಹರೇನ್ ಕನ್ನಡಿಗರು ಸರಕಾರದ ಅನುದಾನ, ನೆರವಿನ ಮೇಲೆಯೇ ಸಂಪೂರ್ಣ ನಿಂತಿಲ್ಲ. ತಾವೂ ನಿಧಿ ಸಂಗ್ರಹಿಸಿದ್ದಾರೆ.
ಈಗ ಬಾಕಿ ಉಳಿದಿರುವ ಹಣವನ್ನು ನೀಡಲು ಮುಂದಾಗಬೇಕಿರುವುದು ಸರಕಾರ ಕರ್ತವ್ಯ. ಸ್ವಯಂ ಪ್ರೇರಣೆಯಿಂದ, ಸರಕಾರ ಮಾಡಬೇಕಾದ ಕೆಲಸವನ್ನು ಬಹರೇನ್ ಕನ್ನಡ ಸಂಘದವರು ಮಾಡಿ ತೋರಿಸಿದ್ದಾರೆ.

ಇಂಥ ಪ್ರಯತ್ನಗಳನ್ನು ಸರಕಾರ ಗುರುತಿಸಿ, ಅಂಥವರನ್ನು ಬೆಂಬಲಿಸಬೇಕು. ಬೇರೆಯವರಿಗೂ ಇದರಿಂದ ಪ್ರೇರಣೆ ಸಿಗುತ್ತದೆ. ಇಂಥ ಕೆಲಸಕ್ಕೆ ಮುಖ್ಯಮಂತ್ರಿಗಳೇ ಆಸ್ಥೆ ವಹಿಸಿ, ಮುಂದಾಗಲಿ.

ಅನಿವಾಸಿ ಕನ್ನಡಿಗರ ಬಗ್ಗೆ ಅನಾಸಕ್ತಿ
ಸುಮಾರು ಹದಿನೈದು ವರ್ಷಗಳ ಹಿಂದೆ, ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ಸಮಯ. ನಾನು ಆಗ ‘ವಿಜಯ ಕರ್ನಾಟಕ’ದಲ್ಲಿದೆ.

ಮುಖಪುಟದಲ್ಲಿ ಒಂದು ಸಂಪಾದಕೀಯ ಬರೆದಿದ್ದೆ. ವಿಷಯ ಇಷ್ಟೇ – ಕನ್ನಡಿಗರೆಂದರೆ ಕರ್ನಾಟಕದಲ್ಲಿ ಇರುವವವರಷ್ಟೇ ಅಲ್ಲ.
ಕರ್ನಾಟಕದ ಹೊರಗೆ, ಭಾರತದ ಹೊರಗೆ ಇರುವ ಕನ್ನಡಿಗರ ಹಿತರಕ್ಷಣೆಯೂ ಕರ್ನಾಟಕ ಸರಕಾರದ ಹೊಣೆ, ಅನಿವಾಸಿ
ಕನ್ನಡಿಗರನ್ನು ನಿರಂತರ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಬೇಕು, ಅವರ ಕಷ್ಟ-ಸುಖಕ್ಕೂ ಸರಕಾರ ಸ್ಪಂದಿಸಬೇಕು,
ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಜತೆ ಕಾಲಕಾಲಕ್ಕೆ ಸಂಪರ್ಕ ಬೆಳೆಸಿ, ಡೈಲಾಗ್ ಏರ್ಪಡಿಸಬೇಕು, ಅನಿವಾಸಿ ಕನ್ನಡಿ ಗರಿಗೆ ತಮಗೂ, ತಾಯ್ನಾಡಿಗೂ ಸಂಬಂಧವಿಲ್ಲ ಭಾವನೆ ಎಂದೂ ಬರಕೂಡದು, ಅದಕ್ಕಾಗಿ ಅವರ ಜತೆ ಸಂಪರ್ಕ ಕಲ್ಪಿಸುವ ಒಂದು ವ್ಯವಸ್ಥೆ ರಚನೆಯಾಗಬೇಕು.

ಈ ಸಂಪಾದಕೀಯವನ್ನು ಓದಿದ ಯಡಿಯೂರಪ್ಪನವರು, ಆ ದಿನ ಬೆಳಗ್ಗೆಯೇ ನನಗೆ ಫೋನ್ ಮಾಡಿ, ಭಟ್ಟರೇ, ನೀವು
ಬರೆದಿದ್ದನ್ನು ಓದಿದೆ. ನನಗೂ ನೀವು ಹೇಳಿದ ಯೋಚನೆ ಹಿಡಿಸಿತು. ನಾನು ಒಬ್ಬ ಹಿರಿಯ ಅಧಿಕಾರಿಯನ್ನು ನಿಮ್ಮ ಬಳಿ
ಕಳಿಸುತ್ತೇನೆ. ನೀವು ಅವರ ಜತೆ ಈ ವಿಚಾರವನ್ನು ವಿವರವಾಗಿ ಚರ್ಚಿಸಿ. ‘ನಂತರ ನಾವು ಮೂವರು ಭೇಟಿಯಾಗೋಣ’
ಅಂದರು. ಮುಖ್ಯಮಂತ್ರಿಗಳು ಹೇಳಿದಂತೆ ಮಾಡಿದರು. ಮರುದಿನ ಅವರ ಆಪ್ತವಲಯದ ಅಧಿಕಾರಿಯಾದ ವಿ.ಪಿ.ಬಳಿಗಾರ ನನ್ನನ್ನು ಭೇಟಿ ಮಾಡಿದರು. ನಾವಿಬ್ಬರೂ ಈ ಕುರಿತು ಸುಮಾರು ಎರಡು ಗಂಟೆ ಚರ್ಚಿಸಿದೆವು.

ಅದಾಗಿ ಒಂದು ವಾರದ ಬಳಿಕ ಯಡಿಯೂರಪ್ಪನವರು ನನಗೆ ಬರಹೇಳಿದರು. ಆ ಸಂದರ್ಭದಲ್ಲಿ ಅನಿವಾಸಿ ಕನ್ನಡಿಗರಿಗರನ್ನು ಕರ್ನಾಟಕ ಸರಕಾರದ ಜತೆ ಬೆಸೆಯುವ ಯೋಚನೆ ಒಂದುಸ್ಪಷ್ಟ ರೂಪ ಪಡೆದಿತ್ತು. ಅದರ ಫಲವೇ ಎನ್.ಆರ್.ಐ. ಫಾರಮ್ ಕರ್ನಾಟಕ! ಅರ್ಥಾತ್ ಅನಿವಾಸಿ ಕನ್ನಡಿಗರ ವೇದಿಕೆ. ಕೇವಲ ಹದಿನೈದು ದಿನಗಳಲ್ಲಿ ಎನ್.ಆರ್.ಐ. ಫಾರಮ್ ಕರ್ನಾಟಕ ರಚನೆಯ ಅಧಿಕೃತ ರಾಜ್ಯಪತ್ರಘೋಷಣೆ ಯಾಯಿತು. ಕೆಲವೇ ದಿನಗಳಲ್ಲಿ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಅವರು ಅದರ ಪ್ರಥಮ ಮುಖ್ಯಸ್ಥರಾಗಿ ನೇಮಕವಾದರು.

ಆನಂತರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಆಸ್ಟ್ರೇಲಿಯಾ ಪ್ರಕಾಶ ಮತ್ತು ಆರತಿ ಕೃಷ್ಣ ಅವರು
ಅದರ ಸಾರಥ್ಯವಹಿಸಿದರು. ಸಿದ್ದರಾಮಯ್ಯನವರ ಅಧಿಕಾರ ಅವಧಿ ಮುಗಿದು ನಾಲ್ಕೂವರೆ ವರ್ಷಗಳಾದವು. ಅಲ್ಲಿಂದ ಇಲ್ಲಿ ತನಕ ಮೂವರು (ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಈಗ ಬೊಮ್ಮಾಯಿ) ಮುಖ್ಯಮಂತ್ರಿಗಳಾದರು. ಆದರೆ ಎನ್.ಆರ್.ಐ. ಫಾರಮ್ ಕರ್ನಾಟಕಕ್ಕೆ ನಾಯಕನೂ ಇಲ್ಲ, ಚಟುವಟಿಕೆಯೂ ಇಲ್ಲ. ಇದಕ್ಕೊಬ್ಬ ಮುಖ್ಯಸ್ಥರನ್ನು ನೇಮಿಸಲು ಮುಖ್ಯಮಂತ್ರಿಗಳಿಗೆ ಸಮಯವೂ ಇಲ್ಲ.

ಅನಿವಾಸಿ ಕನ್ನಡಿಗರನ್ನು ಈ ರೀತಿ ಲಘುವಾಗಿ ಸರಕಾರ ಭಾವಿಸಬಾರದು. ಹೀಗೆಲ್ಲ ಅವಮಾನ ಮಾಡಬಾರದು. ಆದಷ್ಟು
ಬೇಗ ಮುಖ್ಯಮಂತ್ರಿಯವರು ಅದಕ್ಕೊಬ್ಬ ಮುಖ್ಯಸ್ಥರನ್ನು ನೇಮಿಸಬೇಕು.

ಹನಿ …ಡಿಯರ್
ಆಕೆ ತನ್ನ ಗಂಡನ ಜತೆ ಊಟಿಗೆ ಸನಿಹದಲ್ಲಿರುವ ಫಾರ್ಮ್ ಹೌಸ್‌ಗೆ ಕಾರಿನಲ್ಲಿ ಹೊರಟಿದ್ದರು. ಬಂಡೀಪುರದ ಕಾಡಿನಲ್ಲಿ
ಹೋಗುವಾಗ, ನಾಲ್ಕೈದು ಜಿಂಕೆಗಳು ರಸ್ತೆ ದಾಟಲು ಹಿಂದೆ-ಮುಂದೆ ನೋಡುತ್ತಿದ್ದವು. ತನ್ನ ಗಂಡ ವೇಗವಾಗಿ ಕಾರನ್ನು ಓಡಿಸುತ್ತಿದ್ದುದನ್ನು ಗಮನಿಸಿದ ಆಕೆ, ಮೆಲ್ಲಗೆ ‘Honey…deer’ ಎಂದು ಹೇಳಿದಳು.

ಆದರೆ ಗಂಡ ಕಾರಿನ ವೇಗವನ್ನು ಕುಗ್ಗಿಸಲಿಲ್ಲ. ಆಗ ಆಕೆ ಅವನ ಭುಜವನ್ನು ಮುಟ್ಟಿ, ‘Honey…deer’ ಎಂದು ಹೇಳಿದಳು.
ಆದರೂ ಸ್ಲೋ ಮಾಡಲಿಲ್ಲ. ಇನ್ನೇನು ಕಾರು ಆ ಜಿಂಕೆಗಳಿಗೆ ಬಡಿಯುತ್ತದೆ ಎನ್ನುವಷ್ಟರಲ್ಲಿ, ಆತ ರಪ್ಪನೆ ಬ್ರೇಕ್ ತುಳಿದ.
ಸಿನಿಮೀಯ ಎಂಬಂತೆ, ಆ ಜಿಂಕೆಗಳು ಬಚಾವ್ ಆದವು.

ಅಪಘಾತ ತಪ್ಪಿತು. ಆಗ ಆಕೆ ಗಂಡನಿಗೆ, ‘ಎಂಥಾ ಅವಾಂತರ ಆಗುತ್ತಿತ್ತು? ಕಾರನ್ನು ಸ್ಲೋ ಮಾಡು ಎಂದು ನಾನು ಪದೇ ಪದೆ ಹೇಳಿದರೂ, ನೀನೇಕೆ ಸ್ಲೋ ಮಾಡಲಿಲ್ಲ?’ ಎಂದು ಕೇಳಿದಳು. ಅದಕ್ಕೆ ಗಂಡ ಹೇಳಿದ – ‘ನೀನು ನನಗೆ ಪದೇ ಪದೆ ಕೊಟ್ಟಿದ್ದು
ವಾರ್ನಿಂಗಾ? ನಾನು ಅಂದುಕೊಂಡೆ ಇಂದು ಅಮ್ಮಾವರು ಯಾಕೋ ಬಹಳ ರೊಮ್ಯಾಂಟಿಕ್ ಆಗಿದ್ದಾರೆ ಅಂತ.’

ನಾನು ಇನ್ನೇನು ಸಾಯ್ತೀನಾ?

ಆಕೆ ಸುಮಾರು ಹತ್ತು ವರ್ಷದವಳಿರಬಹುದು. ಆಕೆ ಬದುಕುಳಿಯುವ ಸಾಧ್ಯತೆ ತೀರಾ ಕಮ್ಮಿಯಿತ್ತು. ಅವಳ ಎಂಟು ವರ್ಷದ ತಮ್ಮನ ರಕ್ತವನ್ನು (blood transfusion) ವರ್ಗಾಯಿಸಿದರೆ, ಬದುಕುಳಿಯಬಹುದು ಎಂದು ವೈದ್ಯರು ಹೇಳಿದರು.

ಈ ಸಂಗತಿಯನ್ನು ವೈದ್ಯರು ಆಕೆಯ ಪಾಲಕರ ಜತೆ ಚರ್ಚಿಸಿದರು. ಆರು ವರ್ಷದ ಬಾಲಕನ ರಕ್ತವನ್ನು ವರ್ಗಾಯಿಸುವಬಗ್ಗೆ ಪಾಲಕರಿಗೆ ಸಮ್ಮತಿಯಿರಲಿಲ್ಲ. ಅವಳನ್ನು  ಬದುಕಿಸುವ ಧಾವಂತದಲ್ಲಿ ಮಗನಿಗೂ ಏನಾದರೂ ಆದರೆ ಗತಿಯೇನು ಎಂದು ಅವರು ಗಾಬರಿಯಾದರು. ಆದರೆ ವೈದ್ಯರು ಅವರಿಗೆ ಧೈರ್ಯ ತುಂಬಿದರು.

ಆನಂತರ ವೈದ್ಯರು ಆ ಬಾಲಕನನ್ನು ಕರೆದು, ‘ನೀನು ನಿನ್ನ ಅಕ್ಕಳಿಗೆ ರಕ್ತ ಕೊಡಲು ಸಿದ್ಧನಿದ್ದೀಯಾ ?’ ಎಂದುಕೇಳಿದರು. ಆ
ಪುಟ್ಟ ಬಾಲಕ, ಹಿಂದೆ-ಮುಂದೆ ನೋಡದೇ, ನನ್ನ ಅಕ್ಕನಿಗಾದರೆ ಕೊಡ್ತೇನೆ. ಅವಳು ಮೊದಲಿನಂತೆ ನನ್ನಜತೆ ಆಟವಾಡು ವಂತಾದರೆ ಸಾಕು’ ಎಂದ. ಆ ಬಾಲಕ ಮತ್ತು ಅವನ ಅಕ್ಕನನ್ನು ಅಕ್ಕ-ಪಕ್ಕದ ಬೆಡ್ ಮೇಲೆ ಮಲಗಿಸಲಾಗಿತ್ತು. ಇಬ್ಬರೂ ಪರಸ್ಪರರನ್ನು ನೋಡುತ್ತಾ ಖುಷಿ-ಖುಷಿಯಿಂದ ಇದ್ದರು. ಆ ಬಾಲಕನ ದೇಹದಿಂದ ತೆಗೆದ ರಕ್ತವನ್ನು ಆಕೆಗೆ ವರ್ಗಾಯಿಸು ತ್ತಿದ್ದಂತೆ, ಇಬ್ಬರೂ ಪರಸ್ಪರರ ಮುಖ ನೋಡುತ್ತಿದ್ದರು.

ಇದ್ದಕ್ಕಿದ್ದಂತೆ, ಬಾಲಕನ ಮುಖ ಕಳಾಹೀನವಾಯಿತು. ಆತ ತೊದಲು ದನಿಯಲ್ಲಿ, ‘ಡಾಕ್ಟರ್, ನಾನು ಇನ್ನೇನುಸಾಯ್ತೀನಾ?’
ಎಂದು ಕೇಳಿದ. ಅದಕ್ಕೆ ವೈದ್ಯರು, ‘ಇಲ್ಲ ಮಗು, ನಿನಗೆ ಏನೂ ಆಗೊಲ್ಲ, ನೀನು ಸಾಯುವುದಿಲ್ಲ’ ಎಂದು ಹೇಳಿದರು.
‘ನನ್ನ ದೇಹದಲ್ಲಿರುವ ರಕ್ತವನ್ನೆ ತೆಗೆದು ಅವಳಿಗೆ ಕೊಡ್ತೀರೇನೋ ಅಂತ ಅಂದುಕೊಂಡಿದ್ದೆ. ಅದಕ್ಕೆ ನಾನು ಸಿದ್ಧನಾಗಿದ್ದೆ’ ಎಂದ ಆ ಬಾಲಕ. ವೈದ್ಯರು ಕಣ್ಣೊರೆಸಿಕೊಳ್ಳುತ್ತಿದ್ದರು!