Friday, 9th December 2022

ಹಿಂದಿ ದಿವಸ ಆಚರಣೆ ಸ್ಥಗಿತಗೊಳಿಸಲು ಆಗ್ರಹಿಸಿ ಕರವೇ ಪ್ರತಿಭಟನೆ

ರಾಯಚೂರು : ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವ, ಭಾರತದ ಐಕ್ಯತೆಯನ್ನು ಒಡೆಯುತ್ತಿರುವ ಹಿಂದಿ ದಿವಸ ಆಚರಣೆ ಸ್ಥಗಿತಗೊಳಿಸಲು ಆಗ್ರಹಿಸಿ ಕರ್ನಾಟಕ ರಕ್ಷಣೆ ವೇದಿಕೆ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಭಾರತ ಒಕ್ಕೂಟ ಸರ್ಕಾರವು ಪ್ರತಿವರ್ಷ ಸೆಪ್ಟೆಂಬರ್ 14 ರಂದು ನಮ್ಮ ತೆರಿಗೆ ಹಣದಲ್ಲಿ ಹಿಂದಿ ದಿವಸ ಆಚರಣೆ ನಡೆಸುತ್ತ ಬಂದಿದೆ. ಕೇವಲ ಹಿಂದಿ ದಿವಸವೊಂದನ್ನು ಆಚರಿಸುವ ಮೂಲಕ ದೇಶದ ಎಲ್ಲ ಭಾಷೆಗಳನ್ನು ಕಡೆಗಣಿಸಿ, ಹಿಂದಿಯೊಂದನ್ನೇ ಪ್ರತಿವರ್ಷ ಮೆರೆಸು ತ್ತಿದೆ.

ಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಇದನ್ನು ಕಳೆದ ಎರಡು ದಶಕಗಳಿಂದ ತೀವ್ರವಾಗಿ ವಿರೋಧಿಸುತ್ತ ಬಂದಿದೆ. ಈ ವರ್ಷವೂ ಸಹ ಸೆ.14ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ ಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

1950ರಲ್ಲಿ ಜಾರಿಗೊಳಿಸಲಾದ ಸಂವಿಧಾನದ ಭಾಗ 17ರಲ್ಲಿ 343-351ನೆಯ ವಿಧಿಗಳಲ್ಲಿ ಭಾರತದ ಭಾಷಾ ನೀತಿಯನ್ನು ಬರೆಯ ಲಾಗಿದೆ. ಭಾರತ ಸರ್ಕಾರವು, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಮಾತ್ರವೇ ತನ್ನ ಆಡಳಿತ ಭಾಷೆಗಳನ್ನಾಗಿ ಮಾಡಿ ಕೊಂಡಿರುವುದು ಖಂಡನೀಯ ಎಂದರು.

ಭಾರತಕ್ಕೆ ಯಾವುದೇ ಒಂದು ರಾಷ್ಟ್ರಭಾಷೆ ಇರುವುದಿಲ್ಲ. ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳೂ ದೇಶದ ರಾಷ್ಟ್ರೀಯ ಭಾಷೆಗಳೇ ಆಗಿವೆ. ಈ ಭಾಷೆಗಳ ನಡುವೆ ತಾರತಮ್ಯ ಎಸಗಿದರೆ, ಅದು ಸಂವಿಧಾನವೇ ಹೇಳುವ ಸಮಾನತೆಯ ತತ್ವಗಳಿಗೆ ವಿರುದ್ಧವಾಗಿರುತ್ತದೆ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಎಂಟನೇ ಪರಿಚ್ಛೇದದಲ್ಲಿರುವ ಎಲ್ಲಾ ಇಪ್ಪತ್ತೆರಡು ಭಾಷೆಗಳನ್ನೂ ಆಡಳಿತ ಭಾಷೆಗಳನ್ನಾಗಿ ಮಾಡಬೇಕು. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಈ ಅವಕಾಶ ಈಗಾಗಲೇ ಇದ್ದು, ಅದನ್ನು ಎಲ್ಲಾ ಭಾಷೆಗಳಿಗೆ ವಿಸ್ತರಿಸಬೇಕು. ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಎಲ್ಲ ಭಾಷೆಗಳಿಗೂ ಸಮಾನ ಅವಕಾಶ, ಹಕ್ಕುಗಳು ಇರಬೇಕು.

ಹಿಂದಿ ದಿವಸ, ಹಿಂದಿ ಸಪ್ತಾಹ, ಹಿಂದಿ ಪಕ್ವಾಡಾದಂಥ ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು. ಪ್ರತಿವರ್ಷ ಸೆ.14ರ ಹಿಂದಿ ದಿನಾಚರಣೆ ಕೊನೆಯಾಗಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು.