Wednesday, 16th October 2019

ಸರಕಾರೀ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಹಾಗೂ ಕೆಪಿಎಸ್‌ ಶಾಲೆಗಳಿಗೆ ಚಾಲನೆ

ರಾಜ್ಯದ ಸುಮಾರು 1000 ಸರಕಾರೀ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮದ ವಿಭಾಗ; 100 ಹೊಸ ಕರ್ನಾಟಕ ಪಬ್ಲಿಕ್‌ ಶಾಲೆಗಳು ಮತ್ತು ಪೂರ್ವ ಪ್ರಾಥಮಿಕ ಶಾಲೆಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಉದ್ಘಾಟಿಸಿದ್ದಾರೆ.

ವಿಧಾನಸೌಧದ ಬ್ಯಾಂಕ್ಟೆಟ್‌ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ವಿಧಾನ ಪರಿಷತ್ ಮಾಜಿ ಅಧ್ಯಕ್ಷ ಬಸವರಾಜ ಹೊರಟ್ಟಿ, ಶಾಸಕರಾದ ಆರ್.ರೋಷನ್ ಬೇಗ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ: ಪಿ.ಸಿ.ಜಾಫರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಕುರಿತು ಮಾತನಾಡಿದ ಪರಮೇಶ್ವರ, “ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭಿಸುತ್ತಿರುವ ಕಾರಣ ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಯಾರೂ ಭಾವಿಸಬಾರದು,” ಎಂದಿದ್ದಲ್ಲದೇ, “ಮಾತೃಭಾಷೆಯನ್ನು ರಕ್ಷಿಸುವ ಜತೆಗೆ ಸರಕಾರಿ ಶಾಲೆಯಲ್ಲೂ ಆಂಗ್ಲ ಮಾಧ್ಯಮ ತೆರೆಯಲಾಗಿದೆ. ಇಂದಿನ ಸ್ಮರ್ಧಾತ್ಮಕ ಯುಗದಲ್ಲಿ ಆಂಗ್ಲ ಮಾಧ್ಯಮ ಅತ್ಯವಶ್ಯಕ.‌ ಸರಕಾರಿ ಶಾಲೆ ಬಗ್ಗೆ ನಿರ್ಲಕ್ಷ್ಯ ಬೇಡ. ನಾವೆಲ್ಲರೂ ಸಹ ಸರಕಾರಿ ಶಾಲೆಯಲ್ಲಿಯೇ ಶಿಕ್ಷಣ ಪಡೆದಿದ್ದು. ಗೊಲ್ಲಹಳ್ಳಿ ಎಂಬ ಗ್ರಾಮದ ಸರಕಾರಿ ಶಾಲೆಯಲ್ಲಿ ಓದಿದ ನಾನು ಆಸ್ಟ್ರೇಲಿಯಾದಲ್ಲಿ ಡಾಕ್ಟರೇಟ್‌ ಮಾಡಿದ್ದೇನೆ,” ಎಂದರು.

“ಇಡೀ ದೇಶದಲ್ಲಿ ಕರ್ನಾಟಕ ಶಿಕ್ಷಣದಲ್ಲಿ ಮಾದರಿ ರಾಜ್ಯ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ 1200 ಕೋಟಿ ರೂ.ಗಳನ್ನು ಸರಕಾರಿ ಶಾಲೆಗಳ ಆಧುನೀಕರಣಕ್ಕೆ ಮೀಸಲಿಟ್ಟಿದೆ. ನಮ್ಮ‌ ಸರಕಾರದ ಮೊದಲ ಆದ್ಯತೆ ಶಿಕ್ಷಣ ಕ್ಷೇತ್ರ,” ಎಂದು ಪರಮೇಶ್ವರ ಸೇರಿಸಿದ್ದಾರೆ.

Leave a Reply

Your email address will not be published. Required fields are marked *