Wednesday, 29th June 2022

30ನೇ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ

ಬೆಂಗಳೂರು : ಕಳೆದ ಮಂಗಳವಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನಿಯೋಜನೆಗೊಂಡಿದ್ದ ಬಸವರಾಜ ಬೊಮ್ಮಾಯಿಯವರು, ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ, 30ನೇ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ, ಕರ್ನಾಟಕ ನೂತನ ಮುಖ್ಯ ಮಂತ್ರಿಯಾಗಿ ಬಸವರಾಜ ಬೊಮ್ಮಾಯಿಯನ್ನು ಬಿಜೆಪಿ ಸಂಸದೀಯ ಮಂಡಳಿಯ ಸಭೆಯಲ್ಲಿ ಒಕ್ಕೊರಲಿನಿಂದ ಘೋಷಣೆ ಮಾಡಲಾಗಿತ್ತು.

ಜನವರಿ 28, 1960ರಲ್ಲಿ ಜನಿಸಿದ ಬಸವರಾಜ್ ಸೋಮಪ್ಪ ಬೊಮ್ಮಾಯಿಯವರು ಕರ್ನಾಟಕದ ಗೃಹ ವ್ಯವಹಾರಗಳು, ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸಕಾಂಗದ ಪ್ರಸ್ತುತ ರಾಜ್ಯ ಸಚಿವರಾ ಗಿದ್ದಾರೆ. ಹಾವೇರಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಈ ಹಿಂದೆ ಕರ್ನಾಟಕ ಸರ್ಕಾರದಲ್ಲಿ ಜಲಸಂಪನ್ಮೂಲ ಮತ್ತು ಸಹಕಾರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ ಮಗ. ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದ ಅವರು ಜನತಾ ದಳದಿಂದ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು.

ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ, ಎರಡು ಬಾರಿ (1998 ಮತ್ತು 2004ರಲ್ಲಿ) ಧಾರವಾಡ ಸ್ಥಳೀಯ ಪ್ರಾಧಿಕಾರಗಳ ಕ್ಷೇತ್ರದಿಂದ ಆಯ್ಕೆಯಾದರು. ಅವರು ಜನತಾದಳ (ಯುನೈಟೆಡ್) ತೊರೆದು ಫೆಬ್ರವರಿ, 2008ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದರು. 2008ರ ರಾಜ್ಯ ವಿಧಾನಸಭಾ ಚುನಾವಣೆ ಯಲ್ಲಿ, ಅವರು ಹಾವೇರಿ ಜಿಲ್ಲೆಯ ಶಿಗ್ಗಾಂವ್ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದರು.