Monday, 5th December 2022

ಕುಣಿಗಲ್ ರಸ್ತೆಗೆ ಕಾಂಕ್ರೀಟ್ ಕಾಮಗಾರಿ: ಶಾಸಕ ಜ್ಯೋತಿಗಣೇಶ್

ತುಮಕೂರು: ಕೆಶಿಪ್ ಮತ್ತು ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ವಿಭಾಗದಿಂದ ಶಾಸಕರ ನಿಧಿಗೆ ಮುಖ್ಯಮಂತ್ರಿ ೧೨ ಕೋಟಿ ರು. ನೀಡಿದ್ದು, ಈ ಪೈಕಿ ಎರಡೂವರೆ ಕೋಟಿ ರು. ಹಣವನ್ನು ಕುಣಿಗಲ್ ರಸ್ತೆಯ ನಾಲ್ಕು ಜಂಕ್ಷನ್‌ಗಳಲ್ಲಿ ಕಾಂಕ್ರೀಟ್ ಹಾಕಲು ನೀಡಲಾಗಿದೆ ಎಂದು ಶಾಸಕ ಜ್ಯೋತಿಗಣೇಶ್  ಹೇಳಿದರು.
ನಗರದ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಮುಂಭಾಗ ಕುಣಿಗಲ್ ರಸ್ತೆಯ ದುರಸ್ಥಿ ಮತ್ತು ಅಭಿವೃದ್ಧಿ ಕಾರ್ಯಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ, ಶಾಸಕ ಕುಣಿಗಲ್ ರಸ್ತೆಯ ಎಸ್‌ಎಸ್‌ಐಟಿ ಕಾಲೇಜು ಮುಂಭಾಗ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಂಭಾಗ, ಕೃಷ್ಣ ಬೇಕರಿ ಮುಂಭಾಗ ಹಾಗೂ ಹೇಮಾವತಿ ಕಚೇರಿ ಮುಂಭಾಗದ ಜಂಕ್ಷನ್‌ಗಳು ರಸ್ತೆ ತುಂಬಾ ಹಾಳಾಗಿದೆ.
ಇದರಿಂದಾಗಿ ನಾಗರಿಕರು ಸುಗಮವಾಗಿ ಸಂಚರಿಸಲಾಗದೆ ತೀವ್ರ ಪ್ರಯಾಸಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆ ದುರಸ್ಥಿಗೊಳಿಸುವಂತೆ ಪ್ರತಿಭಟನೆಗಳು ಸಹ ನಡೆದಿವೆ. ಈ ಕುಣಿಗಲ್ ರಸ್ತೆ ಪ್ರಸ್ತುತ ಜನಸಂಚಾರ, ವಾಹನಗಳ ಸಂಚಾರಕ್ಕೆ ಅಡಚಣೆ ಯುಂಟು ಮಾಡುತ್ತಿದ್ದು, ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಇದನ್ನು ಮನಗಂಡು ಮೊದಲ ಹಂತವಾಗಿ ನನಗೆ ಬಂದಿರುವ ಅನುದಾನದ ಪೈಕಿ ಎರಡೂವರೆ ಕೋಟಿ ರೂ.ಗಳನ್ನು ಈ ಜಂಕ್ಷನ್‌ಗಳಲ್ಲಿ ಕಾಂಕ್ರೀಟ್ ಹಾಕಲು ನೀಡಿದ್ದೇನೆ ಎಂದರು.

ಈ ಕಾಮಗಾರಿಗಳು ಆರಂಭವಾಗಿ ಪೂರ್ಣಗೊಳ್ಳುವವರೆಗೂ ನಗರದ ಜನರು ತಾಳ್ಮೆಯಿಂದ ವರ್ತಿಸಬೇಕು. ಕಾಮಗಾರಿ ಮಾಡು ವವರೊಂದಿಗೆ ತಗಾದೆ ತೆಗೆಯದೆ ಸಹಕರಿಸುತ್ತಾ ಕಾಮಗಾರಿ ಗುಣಮಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿ, ಹದಗೆಟ್ಟಿರುವ ಕುಣಿಗಲ್ ರಸ್ತೆಯನ್ನು ಸರಿಪಡಿಸಿ ಪಾದಚಾರಿ, ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನ ಸೇರಿದಂತೆ ಸಾರ್ವಜನಿಕರು, ಪಾದಚಾರಿಗಳು ಸುರಕ್ಷತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ಮಹಾನಗರ ಪಾಲಿಕೆ ಸದಸ್ಯ ಧರಣೇಂದ್ರ ಕುಮಾರ್ ಮಾತನಾಡಿ, ಶಾಸಕರು ಕುಣಿಗಲ್ ರಸ್ತೆ ಹದಗೆಟ್ಟಿರುವ ಬಗ್ಗೆ ಅರಿತು ಸದ್ಯ ಎರಡೂವರೆ ಕೋಟಿ ಹಣ ನೀಡಿದ್ದಾರೆ. ಇನ್ನು ಹೆಚ್ಚಿನ ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಇದು ತುಂಬಾ ಸಂತೋಷಕರ ವಿಚಾರ ಎಂದರು. ಮಹಾನಗರ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಉಪಮೇಯರ್ ನರಸಿಂಹಮೂರ್ತಿ, ಮಾಜಿ ಮೇಯರ್ ಹಾಗೂ ಸದಸ್ಯರಾದ ಫರೀದಾಬೇಗಂ, ಮಂಜುನಾಥ್, ಧರಣೇಂದ್ರಕುಮಾರ್, ಶಕೀಲ್, ಆಯುಕ್ತೆ ರೇಣುಕಾ ಮತ್ತಿತರರಿದ್ದರು.