Sunday, 3rd July 2022

ಮೋದಿ, ರಾಜೀವ್‌ ವ್ಯತಿರಿಕ್ತ ನಾಯಕತ್ವ

ಎಸ್.ಎ.ಹೇಮಂತ್

ಮೂವತ್ತೈದು ವರ್ಷಗಳ ಹಿಂದೆ, ಅಂದರೆ, 1987ರ ಜುಲೈ 29ರಂದು ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಶ್ರೀಲಂಕಾದ ಅಧ್ಯಕ್ಷ ಜುನಿಯಸ್ ಜಯವರ್ಧನೆ ಅವರೊಂದಿಗೆ ಒಂದು ಒಪ್ಪಂದಕ್ಕೆ ಸಹಿ ಹಾಕಿದರು. ಇದನ್ನು ಭಾರತ-ಶ್ರೀಲಂಕಾ ಒಪ್ಪಂದ ಎಂದೇ ಕರೆಯಲಾಗುತ್ತಿತ್ತು. ಇದು ಸ್ಪಷ್ಟ ವಾಗಿ ದ್ವೀಪ ರಾಷ್ಟ್ರದ ಉತ್ತರ ಪ್ರಾಂತ್ಯವಾದ ಉದ್ವಿಗ್ನತೆಯಿಂದ ಕೂಡಿದ್ದ ಜಾಫ್ನಾದಲ್ಲಿ ಶಾಂತಿಯನ್ನು ಪುನರ್ ಸ್ಥಾಪಿಸುವುದಾಗಿತ್ತು. ಭಾರತ-ಶ್ರೀಲಂಕಾ ಒಪ್ಪಂದಕ್ಕೆ ಸಹಿ ಹಾಕುವ ರಾಜೀವ್ ಗಾಂಧಿಯವರ ದೂರದೃಷ್ಟಿಯ ನಿರ್ಧಾರವು ಅನೇಕ ವಿಧಗಳಲ್ಲಿ ವಿನಾಶಕಾರಿಯಾಗಿ ಪರಿಣಮಿಸಿತು. ಅದನ್ನು ನಂತರ ವಿಶ್ಲೇಷಿಸೋಣ.

ಮಾರ್ಚ್ ೨೦೨೨ರಲ್ಲಿ, ರಷ್ಯಾ ತನ್ನದೇ ಆದ ಕಾರಣಗಳಿಗಾಗಿ ಉಕ್ರೇನ್ ಮೇಲೆ ಯುದ್ಧ ಸಾರಿತು. ಈ ಮೂರು ತಿಂಗಳ ದೀರ್ಘ ಯುದ್ಧದ ಅಂತ್ಯ ಇನ್ನೂ ಅಸ್ಪಷ್ಟವಾಗಿದೆ. ಅಮೆರಿಕ ಮತ್ತು ಇತರ ನ್ಯಾಟೋ ದೇಶಗಳು ರಷ್ಯಾದ ವಿರುದ್ಧ ಮತ್ತು ಉಕ್ರೇನ್ ಪರವಾಗಿ ನಿಲುವು ಕೈಗೊಳ್ಳುವಂತೆ ಭಾರತದ ಮೇಲೆ ತೀವ್ರ ಒತ್ತಡ ಹೇರಿದವು. ಅಷ್ಟರಮಟ್ಟಿಗೆ, ಉಕ್ರೇನಿನಲ್ಲಿ ರಷ್ಯಾ ನಡೆಸಿದ ಯುದ್ಧಾಪರಾಧಗಳಲ್ಲಿ ಬಹುತೇಕ ಭಾರತವೂ ಒಂದು ಭಾಗ ವಾಗಿದೆ ಎಂದು ಆರೋಪಿಸಲಾಯಿತು. ಅದರಲ್ಲಿ ಭಾರತದ ಪಾತ್ರವೇನೂ ಇರಲಿಲ್ಲ.

ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದಿಂದ ಮೊದಲ್ಗೊಂಡು ಹೆಚ್ಚಿನ ಪಾಶ್ಚಿಮಾತ್ಯ ದೇಶಗಳ ಎಲ್ಲಾ ಟೀಕೆಗಳನ್ನು ಎದುರಿಸಿ ಕಾರ್ಯತಂತ್ರದಲ್ಲಿ ತಟಸ್ಥತೆಯನ್ನು ಕಾಯ್ದುಕೊಂಡಿದ್ದಾರೆ. ಯುದ್ಧದ ಸುಳಿಗೆ ಸಿಲುಕದಂತೆ ಭಾರತವನ್ನು ಅವರು ಯಶಸ್ವಿಯಾಗಿ ಮತ್ತು ಪರಿಣಾಮ ಕಾರಿಯಾಗಿ ತಡೆದಿದ್ದಾರೆ. ಶ್ರೀಲಂಕಾ ಮತ್ತು ಎಲ್ಟಿಟಿಇ ನಡುವಿನ ಯುದ್ಧವು ಮೂಲಭೂತವಾಗಿ ಸಮಾಜದ ಎರಡು ಗುಂಪುಗಳ ಆಂತರಿಕ ಸಂಘರ್ಷವಾಗಿತ್ತು.  ಶ್ರೀಲಂಕಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದು ಭಾರತದ ಕೆಲಸವಾಗಿರಲಿಲ್ಲ. ರಷ್ಯಾ ಮತ್ತು ಉಕ್ರೇನ್ ಯುದ್ಧ ದಲ್ಲಿ ಈಗ ತೆಗೆದುಕೊಂಡಂತೆ ಭಾರತವು ವ್ಯೂಹಾತ್ಮಕವಾಗಿ ತಟಸ್ಥ ನಿಲುವನ್ನು ಅಂದೂ ತೆಗೆದುಕೊಳ್ಳಬೇಕಾಗಿತ್ತು. ಶ್ರೀಲಂಕಾದಲ್ಲಿ ಭಾರತ ಅಂದು ಮಾಡಬಹು ದಾಗಿದ್ದ ಕೆಲಸವೆಂದರೆ ಎಲ್ಟಿಟಿಇ ಸಂಘರ್ಷದಿಂದ ಮುಗ್ಧ ತಮಿಳು ಜನಸಂಖ್ಯೆಯನ್ನು ಯಾವುದೇ ರೀತಿಯ ಸಂಕಷ್ಟಕ್ಕೆ ತಳ್ಳದಂತೆ ಮತ್ತು ಭಾರತವು ತಮಿಳು ನಾಗರಿಕ ಜನಸಂಖ್ಯೆಗೆ  ನೈತಿಕ ಬೆಂಬಲವನ್ನು ನೀಡುವುದಾಗಿತ್ತು.

ಆದರೆ ಎಲ್ಟಿಟಿಇಯನ್ನು ಮಿಲಿಟರಿ ಮೂಲಕ ನಿಭಾಯಿಸುವುದು ಶ್ರೀಲಂಕಾದ ಕೆಲಸವಾಗಿತ್ತು ಎಂದು ಹೇಳುವುದು. ಬದಲಾಗಿ, ರಾಜೀವ್ ಗಾಂಧಿ ಅವರು ಭಾರತೀಯ ಶಾಂತಿಪಾಲನಾ ಪಡೆ(ಐಪಿಕೆಎಫ್)ಯನ್ನು ನಿಯೋಜಿಸುವ ಮೂಲಕ ಜಾಫ್ನಾದಲ್ಲಿ ಶಾಂತಿಯನ್ನು ಸ್ಥಾಪಿಸುವ ಕೆಲಸವನ್ನು ಸ್ವತಃ ದೇಶದ ಹೆಗಲಿಗೆ ತೆಗೆದುಕೊಳ್ಳುವ ಮೂಲಕ ಭಾರತವನ್ನು ಶ್ರೀಲಂಕಾ-ಎಲ್‌ಟಿಟಿಇ ಸಂಘರ್ಷದಲ್ಲಿ ಒಂದು ಭಾಗವನ್ನಾಗಿ ಮಾಡಿದರು.

ಭಾರತದ ಸೈನಿಕರನ್ನು ಕಳುಹಿಸುವ ಅತಿ ದೊಡ್ಡ ಪ್ರಮಾದಕ್ಕೆ ಮಾತ್ರ ಸೀಮಿತವಾಗಿರದೆ, ಜಾಫ್ನಾ ಪ್ರಾಂತ್ಯಕ್ಕೆ ರಾಜಕೀಯ ಮತ್ತು ಆರ್ಥಿಕ ಅಧಿಕಾರ ವನ್ನು ಸ್ತಾಂತರಿಸುವುದನ್ನು ಖಚಿತಪಡಿಸಿಕೊಳ್ಳಲು ಭಾರತವು ಸರ್ವ ಪ್ರಯತ್ನ ಮಾಡುತ್ತದೆ ಎಂಬ ಭರವಸೆಯನ್ನು ಅವರು ಎಲ್‌ಟಿಟಿಇಗೆ ನೀಡಿದರು.
ಜಯವರ್ಧನೆ ಅವರು ಭಾರತದ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿ, ಅಧಿಕಾರ ಹಸ್ತಾಂತರ ನಮ್ಮ (ಶ್ರೀಲಂಕಾ) ಆಂತರಿಕ ವ್ಯವಹಾರವಾಗಿದೆ. ಶಾಂತಿಯನ್ನು ಕಾಪಾಡುವುದು ನಿಮ್ಮ ಕೆಲಸ ಎಂದುಕೊಂಡು, ಭಾರತೀಯ ಸೇನೆ ಮತ್ತು ಎಲ್ಟಿಟಿಇ ಪರಸ್ಪರರು ಹೋರಾಡುತ್ತಿರುವುದನ್ನು ನೋಡಿ ಆನಂದ ಪಡುತ್ತಿದ್ದರು.

ಐಪಿಕೆಎಫ್ ಮತ್ತು ಎಲ್ಟಿಟಿಇ ನಡುವಿನ ಅನಗತ್ಯ ಯುದ್ಧವು ಸಾವಿರಾರು ಭಾರತೀಯ ಸೇನಾ ಸಿಬ್ಬಂದಿ ಹುತಾತ್ಮರಾಗುವಂತೆ ಮಾಡಿತು. ಇದು ಭಾರತದ ಯುದ್ಧವಾಗಿರಲಿಲ್ಲ, ಆದರೂ ಎಲ್ಟಿಟಿಇ ವಿರುದ್ಧ ಹೋರಾಡುವಾಗ ನಮ್ಮ ಸೈನಿಕರು ಹುತಾತ್ಮರಾದರು. ಭಾರತವು ಶ್ರೀಲಂಕಾ ಸಂಘರ್ಷದ ಭಾಗ ವಾಗಿರಬೇಕೆಂಬ ರಾಜೀವ್ ಗಾಂಧಿಯವರ ಈ ದೂರದರ್ಶಿತ್ವವಿಲ್ಲದ ನಿರ್ಧಾರವು ಅಂತಿಮವಾಗಿ ಅವರ ಪ್ರಾಣಕ್ಕೇ ಸಂಚಕಾರ ತಂದಿತು. 1991ರ ಮೇ ೨೧ರಂದು ಚೆನ್ನೈ ಸಮೀಪದ ಶ್ರೀಪೆರಂಬುದೂರಿನಲ್ಲಿ ಎಲ್ಟಿಟಿಇ ಉಗ್ರರು ಅವರ ಮೇಲೆ ಬಾಂಬ್ ದಾಳಿ ನಡೆಸಿ ಹತ್ಯೆ ಮಾಡಿದ್ದರು.

ಐಪಿಕೆಎಫ್ ಕಳುಹಿಸಿದ್ದಕ್ಕಾಗಿ ಎಲ್‌ಟಿಟಿಇ ರಾಜೀವ್ ಗಾಂಧಿ ವಿರುದ್ಧ ಸೇಡು ತೀರಿಸಿಕೊಂಡಿತ್ತು. ಆದರೆ 2022ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು
ಪಾಶ್ಚಿಮಾತ್ಯ ಶಕ್ತಿಗಳ ಒತ್ತಡವನ್ನು ಮತ್ತು ರಷ್ಯಾದೊಂದಿಗಿನ ಭಾರತದ ಐತಿಹಾಸಿಕವಾಗಿ ಮಹತ್ವದ ವ್ಯೂಹಾತ್ಮಕ ಸಂಬಂಧಗಳನ್ನು ಸಮರ್ಥವಾಗಿ ಸಮತೋಲನವಾಗಿ ನಿಭಾಯಿಸಿದರು. ಒಂದು ಕಡೆ ಅಮೆರಿಕವು ಅವಿಚ್ಛಿನ್ನ ಮಿತ್ರ ರಾಷ್ಟ್ರವಾಗಿದೆ ಮತ್ತು ಮತ್ತೊಂದೆಡೆ ಭಾರತವು ರಷ್ಯಾವನ್ನು ದ್ವೇಷಿ ಸಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿತ್ತು. ಏಕೆಂದರೆ ಪೆಟ್ರೋಲಿಯಂ ಉತ್ಪನ್ನಗಳು, ಖನಿಜ ಮತ್ತು ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾ ಗಿರುವ ಮಧ್ಯ ಏಷ್ಯಾದ ಬಹುತೇಕ ಗಣರಾಜ್ಯಗಳೊಂದಿಗೆ (ಕಾನೆಡರೇಶನ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್) ಸೌಹಾರ್ದಯುತ ಸಂಬಂಧ ವನ್ನು ಸ್ಥಾಪಿಸು ವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ.

ನಿಸ್ಸಂದೇಹವಾಗಿ, ಈ ದೇಶಗಳು ರಷ್ಯಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿವೆ. ಭಾರತವು ರಷ್ಯಾ ವಿರೋಧಿ ನಿಲುವು ತಳೆದಿದ್ದರೆ, ವ್ಲಾದಿಮಿರ್ ಪುಟಿನ್ ಅವರು ಈ ಮಧ್ಯ ಏಷ್ಯಾದ ಗಣರಾಜ್ಯಗಳನ್ನು ಭಾರತಕ್ಕೆ ನೈಸರ್ಗಿಕ ಸಂಪನ್ಮೂಲಗಳ ದುರುಪಯೋಗವನ್ನು ನಿಲ್ಲಿಸುವಂತೆ ಕೇಳುತ್ತಿದ್ದರು.
ಯುದ್ಧದ ಒಳಿತು ಕೆಡುಕುಗಳ ಬಗ್ಗೆ ಟೀಕೆಗಳನ್ನು ಮಾಡುವ ಬದಲು ಹಾಗೂ ಯಾರು ಸರಿ ಮತ್ತು ಯಾರು ತಪ್ಪು ಎಂದು ವಿಶ್ಲೇಷಿಸುವ ಬದಲು, ಮೋದಿ ತಮ್ಮ ರಾಜತಾಂತ್ರಿಕ ಕೌಶಲಗಳನ್ನು ಬಳಸಿಕೊಂಡು ಸಾವಿರಾರು ಭಾರತೀಯರನ್ನು, ಹೆಚ್ಚಾಗಿ ಯುದ್ಧಪೀಡಿತ ಉಕ್ರೇನ್ ನಿಂದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದೇಶಕ್ಕೆ ಮರಳಿ ಕರೆತರಲು ಬಳಸಿದರು.

ರೊಮೇನಿಯಾ, ಹಂಗೇರಿ ಮತ್ತು  ಪೋಲೆಂಡ್ ವಿಮಾನ ನಿಲ್ದಾಣಗಳನ್ನು ಬಳಸಿಕೊಳ್ಳುವ ಮೂಲಕ ಕೊನೆಯ ಭಾರತೀಯನನ್ನು ಸಹ ಉಕ್ರೇನ್
ನಿಂದ ಹೊರತರಲು ದೆಹಲಿ ಮತ್ತು ಕೀವ್‌ನಲ್ಲಿದ್ದ ಎಂಇಎ ಅಧಿಕಾರಿಗಳು ವೇಗವಾಗಿ ಕೆಲಸ ಮಾಡುವಂತೆ ಮಾಡಿದರು. ಕೇಂದ್ರ ಸಚಿವರುಗಳನ್ನೇ ಈ ಕಾರ್ಯಕ್ಕೆ ನಿಯುಕ್ತಿಗೊಳಿಸಿದರು. ಈ ಸುರಕ್ಷಿತವಾಗಿ ಕರೆತರುವ ಕಾರ್ಯಾಚರಣೆಯಲ್ಲಿ ಭಾರತದ ಪರಾಕ್ರಮವನ್ನು ಜಗತ್ತು ಅಚ್ಚರಿಯಿಂದ ನೋಡಿತು.
ದೂರದೃಷ್ಟಿ, ದೃಢತೆ ಮತ್ತು ದೃಢ ನಿಶ್ಚಯದಿಂದ ಮೋದಿ ಅವರು ಭಾರತವು ತನ್ನ ವ್ಯೂಹಾತ್ಮಕ ತಟಸ್ಥತೆಯ ವಿವೇಕಯುತ ನೀತಿಯಲ್ಲಿ ಸ್ಥಿರವಾಗಿ
ಉಳಿಯುವಂತೆ ನೋಡಿಕೊಂಡಿದ್ದರು. ಅಮೆರಿಕ ಮತ್ತು ಬ್ರಿಟನ್‌ನಂತಹ ಭಾರತದ ತಟಸ್ಥ ನಿಲುವನ್ನು ಖಂಡಿಸಿದ್ದವರು ಸೇರಿದಂತೆ ವಿಶ್ವ ನಾಯಕರು,
ಸಾಮಾನ್ಯವಾಗಿ ಭಾರತವನ್ನು ಮತ್ತು ವಿಶೇಷವಾಗಿ ಮೋದಿಯವರನ್ನು ಅವರ ತಟಸ್ಥ ನಿಲುವಿಗಾಗಿ ಶ್ಲಾಘಿಸಿದರು.

ಭಾರತದ ಘನತೆ ಮತ್ತು ಮೋದಿಯ ಖ್ಯಾತಿ ದಿನೇ ದಿನೇ ಹೆಚ್ಚುತ್ತಾ ಹೋಯಿತು. ಮೋದಿ ಮತ್ತೊಮ್ಮೆ ವಿಶ್ವ ನಾಯಕ ಎಂದು ಕರೆಸಿಕೊಳ್ಳುವಲ್ಲಿ ಕೆಲವು ಪಟ್ಟು ಉತ್ತುಂಗ ಸ್ಥಿತಿ ತಲುಪಿದ್ದಾರೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ತಮ್ಮ ದೂರದರ್ಶಿತ್ವದ ಕೊರತೆಯೊಂದಿಗೆ, ವಿಶ್ವ ನಾಯಕನ ಪಾತ್ರವನ್ನು
ನಿರ್ವಹಿಸಲು ಉತ್ಸುಕರಾಗಿ ಮತ್ತು ಸ್ವದೇಶದಲ್ಲಿ ಯಾವುದೇ ಸರಿಯಾದ ಸಿದ್ಧತೆಯಿಲ್ಲದೆ, ರಾಜೀವ್ ಗಾಂಧಿ ಭಾರತದ ಪಡೆಗಳನ್ನು ಎಲ್‌ಟಿಟಿಇ ವಿರುದ್ಧ ಅನಗತ್ಯವಾಗಿ ಯುದ್ಧಕ್ಕೆ ತಳ್ಳಿದರು. ಇದರಿಂದಾಗಿ ಸಾವಿರಾರು ಭಾರತೀಯ ಸೇನಾ ಸಿಬ್ಬಂದಿ ಹುತಾತ್ಮರಾದರು ಮತ್ತು ಸ್ವತಃ ರಾಜೀವ್ ಗಾಂಧಿ ಅವರೇ ಈ ತಪ್ಪಿಗೆ ಬಲಿಪಶುವಾದರು.

ಅದು ನರೇಂದ್ರ ಮೋದಿ ಮತ್ತು ರಾಜೀವ್ ಗಾಂಧಿಯವರ ರಾಜತಾಂತ್ರಿಕತೆ ಮತ್ತು ವಿದೇಶಾಂಗ ನೀತಿಯಲ್ಲಿನ ವ್ಯತಿರಿಕ್ತ ನಾಯಕತ್ವ. ಯಾವುದು ಸರಿ ಮತ್ತು ಯಾವುದು ತಪ್ಪು ನೀವೇ ನಿರ್ಧರಿಸಿ.