Thursday, 28th January 2021

ವಿಕಲಾಂಗಲರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು

ತುಮಕೂರು: ಅಂಗವಿಕಲ ವ್ಯಕ್ತಿಗಳಲ್ಲಿರುವ ಧೈರ್ಯ, ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ, ಪುಟಿದೇಳುವ ಅವರ ಗುಣ ನಮಗೆ ಸದಾ ಸ್ಫೂರ್ತಿ ವಿಕಲಾಂಗಲರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದು ಜಿಲ್ಲಾ ಪಂಚಾ ಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ್ ಅವರು ತಿಳಿಸಿದರು.

ನಗರದ ಎಂ.ಜಿ.ರಸ್ತೆಯಲ್ಲಿರುವ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸರ್ಕಾರೇತರ ಶಾಲೆ, ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಅಂಗವಿಕಲರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು, ಅವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಅಂಗವಿಕಲರಿಗೆ ಸಮಾನ ಅವಕಾಶ ಒದಗಿಸಬೇಕು ಹಾಗೂ ಅವರಿಗೆ ಎಲ್ಲ ಸೌಲಭ್ಯಗಳು ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕು ಎಂದು ಹೇಳಿದರು.

ಕೋವಿಡ್-19 ಸಂದರ್ಭದಲ್ಲಿ ವಿಕಲಚೇತನರ ಪುನಃಶ್ಚೇತನಕ್ಕೆ ವಿಆರ್‌ಡಬ್ಲ್ಯೂ, ಎಂಆರ್ ಡಬ್ಲ್ಯೂಗಳು ಸಾಕಷ್ಟು ಶ್ರಮ ವಹಿಸಿ ಕೊರೋನ ವಾರಿಯರ್ಸ್‌ಗಳಾಗಿ ಕೆಲಸ ನಿರ್ವಹಿಸಿರುವ ಕಾರ್ಯ ಮೆಚ್ಚುವಂತಹದ್ದು ಎಂದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಮೇಶ್ ಮಾತನಾಡಿ, ನಾವು ಎಲ್ಲಾ ದಿನಾಚರಣೆಗಳನ್ನು ಆಚರಣೆ ಮಾಡುತ್ತೇವೆ. ಮಕ್ಕಳ ದಿನಾಚರಣೆ, ಮಹಿಳೆಯರ ದಿನಾಚರಣೆ, ಆರೋಗ್ಯದ ಬಗ್ಗೆ ದಿನಾಚರಣೆ ಮಾಡುತ್ತೇವೆ ಆದರೆ ವಿಕಲಚೇತನರ ದಿನಾ ಚರಣೆ ಮಾಡುವುದರಲ್ಲಿ ಬಹಳ ವಿಶೇಷತೆ ಇದೆ. ಏಕೆಂದರೆ ಎಲ್ಲೋ ಒಂದು ಕಡೆ ದೈಹಿಕವಾಗಿ ಅಥವಾ ಹುಟ್ಟಿನಿಂದಲೋ, ಆಕಸ್ಮಿಕವಾಗಿ ವ್ಯತ್ಯಾಸವಾದಂತಹ ಸಂದರ್ಭದಲ್ಲಿ ಮನೋ ಸ್ಥೈರ್ಯವನ್ನು ಕುಗ್ಗಿಸಿಕೊಳ್ಳದೆ ಆಗಿರುವಂತಹ ಅವಘಡ ಗಳನ್ನು ಎದುರಿಸಿ ಬದುಕನ್ನು ಸಾಗಿಸಬೇಕೆಂದರೆ ಆತ್ಮಬಲ ಬಹಳ ಮುಖ್ಯ ಎಂದರು.

ವಿಕಲಚೇತನರು ಸಮಾಜದ ಮುಖ್ಯವಾಹಿನಿಯಲ್ಲಿ ಕೆಲಸ ಮಾಡಲು ಉತ್ಸುಕರಾಗಬೇಕು, ಎಲ್ಲಾ ಇಲಾಖೆಗಳಲ್ಲಿ ವಿಕಲ ಚೇತನರಿಗೆ ಶೇ.2 ರಷ್ಟು ಮೀಸಲಾತಿ ಇದ್ದದ್ದು, ಸರ್ಕಾರ ಶೇ.5ಕ್ಕೆ ಏರಿಕೆ ಮಾಡಿ ಬಹಳ ವರ್ಷಗಳಾಗಿವೆ. ಸರ್ಕಾರದ ಆದೇಶದಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಿಕಲಚೇತನರ ಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಸಾಕಷ್ಟು ಶ್ರಮಿಸುತ್ತಿದ್ದು, ವಿಕಲಚೇತನರು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಟರಾಜು ಮಾತನಾಡಿ, ಅಂಗವಿಕಲರು ಕೂಡಾ ಮನುಷ್ಯರೇ. ಅವರಿಗೂ ಭಾವನೆಗಳಿವೆ, ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮರ್ಥ್ಯವಿದೆ. ಕೆಲವೆಡೆ ಅವರಿಗೆ ಇನ್ನಿಲ್ಲದ ಅನುಕಂಪ ತೋರುವುದು ಇದೆ. ಇದು ತಪ್ಪು. ಅಂಗವಿಕಲರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಅವರು ಸಮಾಜದ ಮುಖ್ಯವಾಹಿನಿಗಳಲ್ಲಿ ಗುರುತಿಸಿಕೊಳ್ಳಬಲ್ಲರು ಎಂದು ಹೇಳಿದರು.

ವಿಕಲಚೇತನರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಬಳಸಿ ಕೊಳ್ಳಲು ವಿಆರ್‌ಡಬ್ಲ್ಯೂ ಹಾಗೂ ಎಂಆರ್‌ಡಬ್ಲೂಗಳು ಸೂಕ್ತ ಮಾರ್ಘದರ್ಶನ ನೀಡಿ ಅರ್ಹರಿಗೆ ಸರ್ಕಾರದ ಯೋಜನೆಗಳು ತಲುಪಲು ಶ್ರಮಿಸಬೇಕು ಎಂದರು.

ತುಮಕೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ನೂತನ ಕಚೇರಿಯಲ್ಲಿ ವಿಕಲಚೇತನರ ಕಚೇರಿಯನ್ನು ಆರಂಭಿಸಲಾಗಿದ್ದು, ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಮಾತನಾಡಿ, ಅಂಗ ವಿಕಲರಿಗೂ ಸಮಾಜದ ಇತರ ವ್ಯಕ್ತಿಗಳಂತೆ ಸಮಾನವಾದ ಅವಕಾಶಗಳು ಸಿಗಬೇಕು, ಅವರಿಗೆ ಯೋಗ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಅಂಗವಿಕಲರ ಸರ್ಟೀಫಿಕೇಟ್‌ಗಾಗಿ ಹಲವಾರು ಮಂದಿ ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಅಂಗವಿಕಲರು ಏಜೆಂಟರುಗಳ ಮೂಲಕ ಹೋಗದೆ ನೇರವಾಗಿ ವೈಧ್ಯರನ್ನು ಭೇಟಿ ಮಾಡಿ ಸರ್ಟೀಫಿಕೇಟ್ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಜಿಲ್ಲಾಸ್ಪತ್ರೆ ಆವರಣದಲ್ಲಿರುವ ವಿಕಲಚೇತನರ ಪುನಃಶ್ಚೇತನ ಕೇಂದ್ರ ಸ್ಥಗಿತಗೊಂಡಿದ್ದು, ಅದನ್ನು ಮತ್ತೆ ಪುನಃಶ್ಚೇತನ ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಲ್ಲಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ವಿಕಲಚೇತನರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೆ.ಆರ್.ವೀರಭದ್ರಯ್ಯ, ಸಿ.ದರ್ಶನ್, ಎಂ.ನAದಿನಿ, ಬಸಪ್ಪ ಮಂಗಸುಳಿ, ಮೊಹಮ್ಮದ್ ಮುಜಾಹಿದ್, ಗೋಪಾಲಪ್ಪ, ನಾಗೇಶ್‌ಕುಮಾರ್ ಮತ್ತು ಸೀತಮ್ಮ ಅವರನ್ನು ಸನ್ಮಾನಿಸ ಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ಎಂ.ರಮೇಶ್, ಶಿರಾ ತಾಪಂ ವಿವಿಧೋದ್ಧೇಶ ಪುನರ್ವಸತಿ ಕಾರ್ಯಕರ್ತ ಚಿತ್ತಯ್ಯ, ಧನಂಜಯ್ಯ, ಶಿವಕುಮಾರ್, ಶಾರದಮ್ಮ, ಸುಧೀಂದ್ರ ಸೇರಿದಂತೆ ಸರ್ಕಾರೇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿಕಲಚೇತನರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *