Friday, 19th August 2022

ಸಾಧನೆಯೇ ಬದುಕು; ಬದುಕೇ ಸಾರ್ಥಕ

ದಾಸ್ ಕ್ಯಾಪಿಟಲ್

dascapital1205@gmail.com

ಕರ್ನಾಟಕದ ಚಿಕ್ಕಮಗಳೂರಿನ ಬೆಳವಾಡಿ ಗ್ರಾಮದಲ್ಲಿ ಹುಟ್ಟಿ ಇಂದು ದೇಶಾದ್ಯಂತ ಹೆಸರು ಮಾಡಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರದ ಹಾನಿಮನ್ ಚಿನ್ನದ ಪದಕ, ಕುವೆಂಪು ವಿವಿಯಿಂದ ಗೌರವ ಡಾಕ್ಟರೇಟ, ಪುಸ್ತಕ ಪ್ರಾಧಿಕಾರದಿಂದ ಡಾ, ಅನುಪಮ ನಿರಂಜನ ವೈದ್ಯವಿಜ್ಞಾನ ಸಾಹಿತ್ಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯಿಂದ ಜೀವಮಾನದ ಸಾಧನೆಗಾಗಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ, ಮಧ್ಯಪ್ರದೇಶ ಸರಕಾರದ ಸಾಹಿತ್ಯಶ್ರೀ ಪ್ರಶಸ್ತಿ, ಕರ್ನಾಟಕ ಚೇತನ ಪುರಸ್ಕಾರ, ಭಾರತೀಯ ಹೋಮಿಯೋಪತಿ ವೈದ್ಯಕೀಯ ಸಂಘದಿಂದ ಎಕ್ಸ್ ಲೆನ್ಸಿ ಪ್ರಶಸ್ತಿ, ಬಸವೇಶ್ವರ ಸದ್ಭಾವನಾ ಪುರಸ್ಕಾರ, ಪ್ರಜ್ಞಾಪೀಠ ಪ್ರಶಸ್ತಿ, ಡಾ.ಪಿ.ಎಸ್.ಶಂಕರ್ ಪ್ರತಿಷ್ಥಾನದಿಂದ ಶ್ರೇಷ್ಠವೈದ್ಯ ಪ್ರಶಸ್ತಿ, ಬಾಲ್ಕಿ ಸಂಸ್ಥಾನದಿಂದ ಕಾಯಕಶ್ರೀ ಪ್ರಶಸ್ತಿ, ಚಿಕ್ಕಮಗಳೂರಿನ ಉದ್ಭವ ಪ್ರಕಾಶನದಿಂದ ಉದ್ಭವಶ್ರೀ ಪ್ರಶಸ್ತಿ, ಹಾಗೂ ಇತರ ಸಂಘ ಸಂಸ್ಥೆಗಳು, ಸೊಸೈಟಿಗಳು, ಟ್ರಸ್ಟ್‌ಗಳು,
ವೇದಿಕೆಗಳು, ಕಾಲೇಜುಗಳಿಂದ ಭರ್ತಿ ಇಪ್ಪತ್ತಾರು ಪುರಸ್ಕಾರ ಸಂಮಾನಗಳಿಗೆ ಭಾಜನ ರಾದ, ಒಂಬತ್ತು ಕೃತಿಗಳನ್ನು ಬರೆದ, ಅನ್ಯಾನ್ಯ ಕಾರ್ಯಕ್ಷೇತ್ರಗಳಲ್ಲಿ ವಿವಿಧ ಹುದ್ದೆಗಳ ಹೊಣಗಾರಿಕೆಯನ್ನು ಹೊತ್ತ, ಸಾಕ್ಷ್ಯಚಿತ್ರಗಳ ನಿರ್ದೇಶನ, ಲೇಖನಗಳು, ಅಂಕಣ ಗಳು, ಧ್ವನಿ ದೃಶ್ಯಮಾಧ್ಯಮಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡ, ರಾಷ್ಟ್ರೀಯ ಅಂತಾ ರಾಷ್ಟ್ರೀಯ ಕಾರ್ಯಾಗಾರ ಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರಬಂಧ ಮಂಡಿಸಿದ, ಇನ್ನಷ್ಟು ವಿಶೇಷ ಸಾಧನೆಗಳನ್ನು ವೃತ್ತಿ ಸಂಬಂಧಿತವಾಗಿ ಸಾಧಿಸಿದ, ಹಂಪಿ ವಿವಿಯಿಂದ ಪ್ರತಿಷ್ಟಿತ ನಾಡೋಜ ಪದವಿಯ ಗೌರವ ಹೊಂದ ಹೋಮಿಯೋಪಥಿ ವೈದ್ಯನೊಬ್ಬನ ಈವರೆಗಿನ ಬದುಕಿನ ಯಶೋಗಾಥೆಯೇ ಈ ಸಾಧನೆಯೇ ಬದುಕು.

ಸಾಮಾನ್ಯವಾಗಿ ಒಬ್ಬರ ಜೀವನ ಕಥನವನ್ನು ಹೀಗೆಯೇ ಅಂತ ತೀರ್ಮಾನಿಸುವುದು ಅಥವಾ ಪರಿಭಾವಿಸುವುದು ಓದುಗರಿಗೆ ಸಹಜ ಸ್ವಭಾವವಾಗಿ ಬಿಟ್ಟಿದೆ. ಆದರೆ ಈ ಜೀವನ ಕಥನ ವೈದ್ಯನೊಬ್ಬನ ಬದುಕಿನ ಸಾಧನೆಯಷ್ಟೇ ತಿಳಿಸುವ ಸೀಮಿತ ವ್ಯಾಪ್ತಿಯನ್ನು ಹೊಂದಿಲ್ಲ. ಹೆಚ್ಚುಗಾರಿಕೆಯೇನು ಎಂದು ಅರ್ಥವಾಗಬೇಕಾದರೆ ಗ್ರಂಥದ ಓದು ಮೊದಲು ಆಗಲೇಬೇಕು. ವೈದ್ಯನೊಬ್ಬನ ವೈಯಕ್ತಿಕ ಬದುಕಿನ ಸಾಧನೆ ಮತ್ತು ವೃತ್ತಿ ಬದುಕಿನ ಸಾಧನೆ ಒಂದು ಕಡೆಯಾದರೆ, ಆ ವೈದ್ಯನ ಗುಣಸ್ವಭಾವ ವನ್ನು ಬಿಂಬಿಸುವ, ಆ ಮೂಲಕ ಆ ಗುಣಸ್ವಭಾವಗಳು ಹೇಗೆ ಪರಮಾಪ್ತತೆಯನ್ನು ಸುತ್ತಲಿನ ಸಮುದಾಯದೊಂದಿಗೆ ಬೆಸೆದುಕೊಂಡಿದೆ ಎಂಬುದನ್ನು ಈ ಗ್ರಂಥ ನಿರ್ವಚಿಸುತ್ತದೆ. ಇವನ್ನೆಲ್ಲ ದಾಖಲಿಸುವುದರ ಗ್ರಂಥದ ರಚನೆಕಾರರ ಮಹತ್ತು ಇರುವುದು!

ಗ್ರಂಥ ರಚನೆಕಾರರು ವೈದ್ಯನೊಬ್ಬರ ಬದುಕನ್ನು ಕಟ್ಟಿಕೊಡುವುದರ ಜತೆಗೆ ಅವರಲ್ಲಿರುವ ಸಮೂಹವೊಂದು ಸ್ವೀಕರಿಸಬಹು
ದಾದ ಔದಾರ್ಯ, ಸಹನಶೀಲತೆ, ಸಜ್ಜನಿಕೆ, ಸಭ್ಯ ನಡೆ- ನುಡಿಯ ಜೊತೆಜೊತೆಗೆ ಈ ಬದುಕು ಹಂಬಲಿಸುವ ಕನ ವರಿಸುವ
ಆದರಿಸುವ ಅಪೇಕ್ಷಿಸುವ ವ್ಯಕ್ತಿತ್ವವೊಂದರ ಪ್ರತಿಮೆಯನ್ನು ಒಂದು ಕಡೆಯಿಂದ ಹಂತಹಂತವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಅಂದಹಾಗೆ ಆ ವೈದ್ಯರ ಹೆಸರು ಡಾ. ಬಿ.ಟಿ.ರುದ್ರೇಶ್ (ಬೆಳವಾಡಿ ತಿಪ್ಪೇಸ್ವಾಮಿ ರುದ್ರೇಶ್).

ಇತ್ತೀಚಿನ ಕೆಲವು ವರ್ಷಗಳಲ್ಲಿ ಹೆಚ್ಚು ಜನಪ್ರಸಿದ್ಧಿಗೆ ಬಂದ ವೈದ್ಯರಿವರು. ಹೋಮಿಯೋಪಥಿ ಚಿಕಿತ್ಸೆಯಲ್ಲಿ ಜನಪ್ರಿಯತೆ ಯನ್ನು ಪಡೆದ ಕನ್ನಡ ನೆಲದ ಒಬ್ಬೇ ಒಬ್ಬ ಜನಮಾನ್ಯ ವೈದ್ಯರೆಂದರೂ ಇವರೇ! ಕೇವಲ ವೈದ್ಯರಾಗಿ ಡಾ.ರುದ್ರೇಶ್ ಜನಮಾನಸ ದಲ್ಲಿ ಇರುವಂಥ ವ್ಯಕ್ತಿಯಲ್ಲ. ಇರಬಾರದು ಕೂಡ! Of course ಹಾಗೆ ಹೆಚ್ಚು ಕಾಲ ಇರುವುದಕ್ಕೆ ಸಾಧ್ಯವೂ ಇಲ್ಲ. ಯಾವ ವ್ಯಕ್ತಿ ತನ್ನ ಅಂತರಂಗದಲ್ಲಿ ನಿಜ ಅಸ್ಮಿತೆಯನ್ನು ಉಳಿಸಿಕೊಳ್ಳುತ್ತಾನೋ ಅವನು ಚಿರಸ್ಮರಣೀಯನಾಗುತ್ತಾನೆ ಎಂಬುದಕ್ಕೆ ಡಾ.
ರುದ್ರೇಶ್ ಜ್ವಲಂತವಾಗಿ ಕಾಣುತ್ತಾರೆ.

ಸಾಹಿತ್ಯ, ಸಮಾಜಸೇವೆ, ದೇಶಸೇವೆಯಲ್ಲಿ ತೊಡಗಿಕೊಂಡೇ ಬದುಕುವ ಇವರು ನಿತ್ಯಬದುಕಿನಲ್ಲೂ ಪಾದರಸದಂತೆ ಕ್ರಿಯಾ ಶೀಲರು. ಅರಳು ಹುರಿದಂತೆ ಮಾತಾಡುವ ಇವರು ಸಣ್ಣ ಜೀವದಲ್ಲಿ ದೊಡ್ಡ ಮನಸ್ಸನ್ನೂ ಆಕರ್ಷಣೀಯ ವ್ಯಕ್ತಿತ್ವವನ್ನೂ ಹೊಂದಿದವರು. ಈ ಗ್ರಂಥ ಭರಪೂರವಾಗಿ ಅವರ ಸಮಗ್ರ ವ್ಯಕ್ತಿ ಚಿತ್ರಣವನ್ನು ಒದಗಿಸುತ್ತದೆ. ಯಾವುದನ್ನೂ ಬಿಡದೆ ಹೇಳಬೇಕಾದುದೆಲ್ಲವನ್ನೂ ಯಾವ ಮುಚ್ಚುಮರೆಯಿಲ್ಲದೆ, ಎಲ್ಲಿಯೂ ಉತ್ಪ್ರೇಕ್ಷೆಯಿಲ್ಲದೆ ಬರೆದ ಈ ಗ್ರಂಥದಲ್ಲಿ ಶುಷ್ಕ ವೆನಿಸಬಹುದಾದ ಯಾವ ಸಂಗತಿಗಳೂ ಇಲ್ಲ.

ಯಾಕೆಂದರೆ, ಡಾ.ರುದ್ರೇಶ್ ಅವರು ಸಾರ್ವಜನಿಕ ವ್ಯಕ್ತಿ. ಅವರ ಬಗ್ಗೆ ಪೂರ್ತಿಯಾಗಿ ಅಲ್ಲದಿದ್ದರೂ ಸಾಮಾನ್ಯವಾದ ಅನೇಕ ಸಂಗತಿಗಳು ಜನರಿಗೆ ತಿಳಿದೇ ಇರುತ್ತದೆ. ಹಾಗಂತ ಇಂಥ ವ್ಯಕ್ತಿಗಳ ಬಗ್ಗೆ ಎಲ್ಲವೂ ಎಲ್ಲರಿಗೂ ಗೊತ್ತಿರಬೇಕೆಂದೇನೂ ಇಲ್ಲ. ಡಾ. ಬಿ.ಟಿ.ರುದ್ರೇಶ್ ರಂಥ ಒಬ್ಬ ವ್ಯಕ್ತಿಯ ಬಗ್ಗೆ ಬರೆಯುವಾಗ ಮೈಯೆ ಕಣ್ಣಾಗಿರಬೇಕು. ಯಾಕೆಂದರೆ, ವೈದ್ಯವೃತ್ತಿಯೇ ಸಾರ್ವಜನಿಕ ವಾದ ವ್ಯಾಪ್ತಿ ಮತ್ತು ವಿಸ್ತಾರವನ್ನು ಹೊಂದಿರುವಂಥದ್ದು. ಏನೇ ಬರೆದರೂ ಅದು ಪ್ರಶ್ನಾರ್ಹವಾಗಿ ಉಳಿದು ಬಿಡುವ ಸಾಧ್ಯತೆ ಯಿರುತ್ತದೆ ಎಂಬ ಎಚ್ಚರ ಕೃತಿಕಾರರಲ್ಲಿ ಇದ್ದೇ ಬರೆದ ಪರಿಪೂರ್ಣ ಕೃತಿಯಿದು.

ಕೇವಲ ವೈದ್ಯನಾಗೇ ರುದ್ರೇಶ್ ಅವರು ಬದುಕನ್ನು ಸಾಗಿಸಿದವರಲ್ಲ. ವೃತ್ತಿಯ ಜತೆಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ವೈದ್ಯ ವೃತ್ತಿಯನ್ನು ಸಾರ್ಥಕಗೊಳಿಸಿಕೊಳ್ಳುತ್ತಾ ಬಂದವರು. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ದವರು. ಪುರಸ್ಕಾರ, ಪ್ರಶಸ್ತಿ, ಸಂಮಾನಗಳಿಗೆ ಭಾಜನರಾದವರು. ಎಲ್ಲಕ್ಕಿಂತ ಮುಖ್ಯವಾಗಿ ಇವರು ಹಳ್ಳಿಯಿಂದ ಬಂದವರು ಎಂಬುದು.

ಹಳ್ಳಿಯ ಹಿನ್ನೆಲೆಯುಳ್ಳವರಲ್ಲಿ ಸಹಜವಾಗೇ ಮುಗ್ಧತೆಯಿರುತ್ತದೆ. ಆದ್ದರಿಂದ ಜನರ ಪ್ರೀತಿ, ವಿಶ್ವಾಸ ದಕ್ಕೇ ದಕ್ಕುತ್ತದೆ. ದಕ್ಕಬೇಕು. ಅದರಲ್ಲೂ ರುದ್ರೇಶ್ ಅವರಲ್ಲಿ ಇರುವ ಸ್ನೇಹಗುಣ ಅವರನ್ನು ಇನ್ನಷ್ಟು ಹತ್ತಿರವಾಗಿಸಿದೆ. ಈ ಗ್ರಂಥಕ್ಕೆ ಸಮರ್ಥ ಮುನ್ನುಡಿ ಯನ್ನು ಬರೆದವರು ಪ್ರೊ.ಮಪುರಂ ಜಿ. ವೆಂಕಟೇಶ ಮುನ್ನುಡಿ ಮತ್ತು ಗ್ರಂಥ ರಚನಕಾರರ ಮಾತು ಇಡಿಯ ಗ್ರಂಥವನ್ನು ಮೇಲ್ನೋಟಕ್ಕೆ ವಿಶ್ಲೇಷಿಸಿದರೂ ಓದಿನ ಓಘಕ್ಕೆ ವೇಗವನ್ನೂ ಸ್ಥಿರತೆಯನ್ನೂ ನೀಡುತ್ತ ಕೊನೆಯವರೆಗೂ ಕೊಂಡೊಯ್ಯುವಷ್ಟು ಸಶಕ್ತವಾಗಿದೆ.

ಪ್ರತಿ ಅಧ್ಯಾಯದ ಸ್ಥೂಲ ವಿಶ್ಲೇಷಣೆಯನ್ನು ಮುನ್ನುಡಿಕಾರರು ಮಾಡಿದ್ದಾರೆ. ಆ ಅಧ್ಯಾಯಗಳು ಹೀಗಿವೆ ನೋಡಿ: ಸಾಧನಾ ಪಥ, ಸಾಧನೆಯ ಹಿಂದಿನ ಹೆಜ್ಜೆಗಳು, ಸಾಧನಾ ನೈಪುಣ್ಯ, ಸಾಧನಾ ಸ್ವಾತಂತ್ರ್ಯ,ಸಾಧನಾ ಔದಾರ್ಯ, ಸಾಧನಾ ಮೂಲ, ಸಾಧನಾ ಮಾಧ್ಯಮ, ಸಾಧನಾ ಹವ್ಯಾಸ, ಸಾಧನಾ ಪುರಸ್ಕಾರ, ಸಾಧನಾ ಆಪ್ತತೆ, ಸಾಹಿತ್ಯ ಸಾಧನೆ. ಇವುಗಳ ಜೊತೆ ವ್ಯಕ್ತಿ ವಿವರ, ಪ್ರಶಸ್ತಿ ಪುರಸ್ಕಾರಗಳು, ಕೃತಿ ವಿವರ, ಸಂಕೀರ್ಣ ಎಂಬ ಅನುಬಂಧಗಳು ಸೇರಿವೆ.

ಪ್ರತಿ ಅಧ್ಯಾಯದ ಶೀರ್ಷಿಕೆಯೇ ಇಡಿಯ ಪುಸ್ತಕದ ಒಟ್ಟೂ ವಿವರಗಳನ್ನು ನೀಡುತ್ತದೆ. ಅಂದರೆ, ವೈದ್ಯರಾದ ಡಾ.ಬಿ.ಟಿ.ರುದ್ರೇಶರ ಬದುಕಿನ ಸಮಗ್ರ ಚಿತ್ರಣವನ್ನು ಕಟ್ಟಿಕೊಡುತ್ತದೆ. ಇದು ಈ ಕೃತಿಯ ವಿಶೇಷತೆ. ನಾವು ಏನನ್ನು ಓದುತ್ತೇವೆ ಮತ್ತು ಹಾಗೆ ಓದಬೇಕಾದುದರ ಒಟ್ಟೂ ವ್ಯಾಪ್ತಿ ಮತ್ತು ವಿಸ್ತಾರವನ್ನು ಮೊದಲೇ ಹೇಳಿ ಮಾನಸಿಕ ಸಿದ್ಧತೆಯನ್ನು ಮಾಡಿ ಕೊಡುತ್ತದೆ.

ಧ್ಯೇಯ, ಗುರಿ, ಸಾಧಿಸುವ ಛಲ, ನಿಷ್ಠೆ, ಬದ್ಧತೆ, ಕ್ರಮನಿಯಮ, ಸ್ವಾಧ್ಯಾಯದ ಪರಿಶ್ರಮವಿದ್ದರೆ ಒಬ್ಬ ವ್ಯಕ್ತಿ ಎಂಥ ಸವಾಲು ಗಳನ್ನು ಎದುರಿಸಿ ತಾನು ಕಂಡುಕೊಂಡ ಮಾರ್ಗದಲ್ಲಿ ಯಶಸ್ಸನ್ನು ಶ್ರೇಯಸ್ಸನ್ನು ಮುಟ್ಟಿ ಅಸಾಮಾನ್ಯವಾದ ಸಾಧನೆಯನ್ನು ಮಾಡುವುದಕ್ಕೆ ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟ ಮಹನೀಯರ ಸಾಲಿಗೆ ಡಾ. ಬಿ.ಟಿ.ರುದ್ರೇಶ್ ಅವರು ನಿಲ್ಲುತ್ತಾರೆ, ಸಲ್ಲುತ್ತಾರೆ. ಆದ್ದರಿಂದ ಸಾಧನೆಯನ್ನೇ ಪ್ರತಿ ಅಧ್ಯಾಯದ ವಿನ್ಯಾಸದಲ್ಲೂ ಮಾಪನವಾಗಿ ಬಳಸಿದ ವಿಶೇಷತೆ ಈ ಕೃತಿಯದ್ದು.

ಸಾಧನೆಯ ಪಥದಿಂದಲೇ ಆರಂಭವಾಗುವ ಈ ಕೃತಿ ಮೂಲತಃ ವೈದ್ಯನೊಬ್ಬನ ಜೀವನದ ಏಳುಬೀಳುಗಳನ್ನು ಜೋಡಿಸುತ್ತ ಏರುವಿಕಾಸದ ಮಜಲುಗಳನ್ನು ದಾಖಲಿಸುತ್ತಾರೆ. ಈ ದಾಖಲಿಸುವಿಕೆಯೇ ಈ ಕೃತಿಯನ್ನು ವಿಭಿನ್ನವಾಗಿಯೂ ವಿಶಿಷ್ಟ ವಾಗಿಯೂ ಆಗುವಂತೆ ರಚಿತಗೊಂಡಿದೆ. ಹುಟ್ಟೂರಿನ ಮೂಲಕ ಆರಂಭವಾಗುವ ಈ ಜೀವನಗಾಥೆ ಹೇಗೆ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತ ನೋಡು ನೋಡುತ್ತಿದ್ದಂತೆಯೇ ಸೀಮೆಯಾಚೆಗೂ ಪಸರಿಸಿ ಪ್ರಸಿದ್ಧಿಯ ಉತ್ತುಂಗವನ್ನು ತನ್ನ ಕಾರ್ಯಕ್ಷೇತ್ರದ ಮುಖೇನವೇ ಮುಟ್ಟಿಬಿಡುವ ಆಕೃತಿಯೇ ಪರಮ ಸೋಜಿಗವನ್ನು ಹುಟ್ಟಿಸುವಂಥದ್ದು!

ಅಂಥ ನಿದರ್ಶನಗಳಲ್ಲಿ ಇಂಗ್ಲಿಷನ್ನು ಕಲಿತದ್ದೂ ಒಂದು: ಡಾ. ರುದ್ರೇಶ್ ಅವರು ಇಂಗ್ಲಿಷನ್ನು ಸ್ವಾಧ್ಯಾಯದಿಂದಲೇ ಕಲಿತದ್ದು
ಮಾತ್ರವಲ್ಲದೇ ವಿಶ್ವಮಾನ್ಯ ಲೇಖಕರ ಕೃತಿಗಳನ್ನು ಓದಿ ಪ್ರಭುತ್ವವನ್ನು ಹೊಂದಿ ಅದರ ಬರೆಯುವ ಮಟ್ಟಿಗೆ ಬೆಳೆದು ನಿಂತದ್ದು ಅನುಸರಣೀಯ, ಅನುಕರಣೀಯವಾಗಿ ಕಾಣುತ್ತದೆ. ಇಂಗ್ಲಿಷ್ ಪ್ರೇಮ ಅವರನ್ನೂ ತಟ್ಟಿದ್ದೂ ವೈದ್ಯಕೀಯವಾದ ಬದುಕಿನ ಅನಿವಾರ್ಯತೆಯನ್ನು ತುಂಬುವುದಕ್ಕಾಗಿ! ಓದಿನ ಹಸಿವನ್ನು ನೀಗಿಸಿಕೊಳ್ಳುವುದಕ್ಕಾಗಿ! ವೃತ್ತಿಗೆ ಬೇಕಾದ ಜ್ಞಾನವನ್ನು ಪಡೆದು ಅದರಲ್ಲಿ ಸಂಶೋಧನೆಯನ್ನು ಮಾಡಿ ಮತ್ತಷ್ಟು ಜ್ಞಾನವನ್ನು ಎರವು ಕೊಟ್ಟು ವೃತ್ತಿಯ ಸಾಧ್ಯತೆಗಳನ್ನು  ವಿಸ್ತರಿಸಿಕೊಳ್ಳುವು ದಕ್ಕಾಗಿ!

ವೃತ್ತಿಯನ್ನು ಬೆಳೆಸುತ್ತ ತಾನೂ ಅದೇ ವೃತ್ತಿಯಲ್ಲಿ ಬೆಳೆದು ಅನ್ನ ಮತ್ತು ಹೆಸರನ್ನು ಕೊಟ್ಟ ವೃತ್ತಿಯನ್ನು ಅಂತಸ್ಥವಾಗಿ ಪ್ರೀತಿಸುತ್ತ, ನಾಲ್ಕು ಜನಕ್ಕೆ ಅನುಕೂಲವಾಗುವಂತೆ ಬಾಳಿದ್ದೇನೆ. ಬದುಕು ಸಾರ್ಥಕ ಎನ್ನಿಸಿದೆ ಎಂಬ ದೊಡ್ಡ ಮನಸಿನ ಕೃತಕೃತ್ಯದ ಭಾವದಲ್ಲಿ ಬದುಕನ್ನು ಬಾಳುತ್ತಿರುವ ಡಾ.ರುದ್ರೇಶರು ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆವಂತೆ ವೃತ್ತಿಯನ್ನೂ ಬದುಕನ್ನೂ ಬೇರೆ ಬೇರೆಯಾಗಿ ನೋಡದೆ ನಮ್ಮ ನಡುವೆ ಆದರ್ಶ ಜೀವನದ ಜ್ವಲಂತ ಮಾದರಿಯಾಗಿ ಕಾಣುತ್ತಾರೆ.

ವೃತ್ತಿಯನ್ನು ಮಾಡುತ್ತ ಲಾಭವನ್ನೇ ಹೊಂದುತ್ತಾ ಬದುಕನ್ನು ಸಾಗಿಸುವವರ ಮಧ್ಯೆ ಡಾ.ರುದ್ರೇಶರು ವಿಭಿನ್ನವಾಗಿ ಅಭಿವ್ಯಕ್ತ ಗೊಂಡಿರುವುದನ್ನು ಲೇಖಕರು ಹಂತಹಂತವಾಗಿ ಚಿತ್ರಿಸಿಕೊಡುತ್ತಾರೆ. ಕೇವಲ ಅನ್ನ ಅಶನಕ್ಕಾಗಿ ಬದುಕಿ ಉಳಿದ ಜವಾಬ್ದಾರಿ ಗಳಿಂದ ಕಳಚಿಕೊಳ್ಳುವ ಸ್ವಾರ್ಥದ ಮನಸ್ಥಿತಿ ಡಾ. ರುದ್ರೇಶರನ್ನು ಅಂಟಿಕೊಳ್ಳಲಿಲ್ಲ. ಸಮಾಜದಿಂದ ಗಳಿಸಿದ ಎಲ್ಲವನ್ನೂ ಈ ಸಮಾಜಕ್ಕೇ ಅರ್ಪಿಸುವ ಓದಾರ್ಯ ಇವರಲ್ಲಿ ಅಂಟಿಕೊಂಡಿದೆ.

ಇವರಿಂದ ಉಪಕೃತರಾದವರು ಅದೆಷ್ಟೋ! ಹೊಸ ಬದುಕನ್ನು ಕಂಡವರು ಇನ್ನೆಷ್ಟೋ! ಮನುಷ್ಯ ಪ್ರೀತಿ, ವಿಶ್ವಾಸ, ದಯೆ, ನೊಂದವರಲ್ಲಿ ಅನುಕಂಪ, ನಿಷ್ಕಪಟ ಕಾಳಜಿ, ಕಡಿಮೆ ಫೀಸು, ವೃತ್ತಿ ಬದ್ಧತೆ, ವೃತ್ತಿ ಆದರ್ಶ, ಕರುಣೆ ಇವರ ಸ್ಥಾಯೀಭಾವ- ಇದು ಸಾರ್ವಕಾಲಿಕ ಜೀವನ ಮೌಲ್ಯವಾಗಿ ಎದ್ದು ಕಾಣುತ್ತದೆ. ಇಂಥವರು ಸದ್ಯಕ್ಕೂ ಶಾಶ್ವತಕ್ಕೂ ಸಲ್ಲುವಂಥವರು!

ಹೋಮಿಯೋಪತಿಯ ಬಗ್ಗೆ ಈ ಸರಿಹೊತ್ತಿನಲ್ಲೂ ಜನರಿಗೆ ಅಷ್ಟೊಂದು eನವಿಲ್ಲ ಎಂದೇ ನಾನು ಪರಿಭಾವಿಸಿದ್ದೇನೆ. ಈ ವೈದ್ಯಕೀಯ ಪದ್ಧತಿಯಲ್ಲಿ ಕುತೂಹಲಗಳಿವೆ. ಮನುಷ್ಯನನ್ನು ೩೬೦ ಡಿಗ್ರಿಯಲ್ಲಿ ನೋಡುವ ಸಾಧ್ಯತೆ ಇದರಲ್ಲಿದೆ. ಮತ್ತು ಹಾಗೆ ನೋಡಿದಾಗ ಪ್ರತಿ ಪ್ರಕರಣವೂ ಪ್ರತ್ಯೇಕವಾಗೇ ಇರುತ್ತದೆ. ಮನುಷ್ಯ ತನ್ನ ಕುಟುಂಬ, ಸಮಾಜ ಹಾಗೂ ಕಾರ್ಯಕ್ಷೇತ್ರಗಳ ಜತೆಗಿನ ಸಂಬಂಧವನ್ನು ಮಧುರವಾಗಿಟ್ಟು ಕೊಂಡಿರಬೇಕು. ಆ ಸಂಬಂಧಗಳಿಗೆ ಎಲ್ಲಾ ಊನಬಂದರೂ ವ್ಯಕ್ತಿ ವ್ಯಾಧಿಗ್ರಸ್ತ ನಾಗುತ್ತಾನೆ ಎಂಬ ಹೋಮಿಯೋಪತಿಯ ತತ್ವ್ತ ಇದರಲ್ಲಿದೆ.

ಅಂಥ ವೈದ್ಯಕೀಯ ಪದ್ಧತಿ, ಅದರ ರೀತಿನೀತಿ ಗಳು, ಚಿಕಿತ್ಸೆ ಬಗ್ಗೆ ಒಂದು ಜಾಗೃತಿಯನ್ನು ರಾಜ್ಯಾದ್ಯಂತ ಮೂಡಿಸಲು ಪ್ರಯತ್ನಿಸಿ ಯಶಸ್ಸನ್ನು ಪಡೆದು ಹೋಮಿಯೋ ಪತಿಯ ಚಿಕಿತ್ಸಾ ವಿಧಾನವನ್ನು ಪ್ರಸಿದ್ಧಿಗೊಳಿಸಿದ ಡಾ.ಬಿ.ಟಿ. ರುದ್ರೇಶರ ವೈದ್ಯಜೀವನ ಕಥನವನ್ನು ಕಟ್ಟಿಕೊಟ್ಟ ಆತ್ಮೀಯರಾದ ಡಾ. ಬೆಳವಾಡಿ ಮಂಜುನಾಥರು ಅಭಿನಂದನಾರ್ಹರು.

ಅವರ ಬರೆಹದ ಸೂಕ್ಷ್ಮತೆ ಮತ್ತು ಢಾಳ ಭಾವ ಇದರಲ್ಲಿ ಅಭಿವ್ಯಕ್ತವಾಗಿದೆ. ಯಾವುದೇ ಕೆಲಸವನ್ನು ಅತ್ಯಂತ ಪ್ರೀತಿ ಮತ್ತು ಜತನದಿಂದ ಮಾಡುವ ಅವರ ಮನೋಧರ್ಮ ಮತ್ತೊಮ್ಮೆ ಇಲ್ಲಿ ಗೋಚರವಾಗಿದೆ. ಇಂಥ ಒಂದು ಮಹತ್ತಾದ ಸತ್ಕಾರ್ಯ ಆಗಬೇಕಿತ್ತು. ಆಯಿತು ಎಂಬ ಆತ್ಮತೃಪ್ತಿ ಮತ್ತು ಸಮಾಧಾನ ಡಾ. ಬೆಳವಾಡಿ ಮಂಜುನಾಥರಲ್ಲಿದೆ.

ವೃತ್ತಿಯನ್ನು ಪ್ರೀತಿಸುವುದೆಂದರೆ ತನ್ನನ್ನೇ ನಂಬಿ ಬಂದ ರೋಗಿಗಳನ್ನು ಪ್ರೀತಿಸುವುದು. ಮತ್ತು ಜನರಲ್ಲಿ ಜಾಗೃತಿಯನ್ನು ಮೂಡಿಸುವುದು. ಹಲವು ಸಮಸ್ಯೆಗಳನ್ನು ಹೊತ್ತು ಬಂದ ರೋಗಿಗಳ ಪಾಲಿಗೆ ಇವರ ಅಶ್ವಿನೀ ಹೋಮಿಯೋ ಕ್ಲಿನಿಕ್ ಒಂದು ದೈವೀ ಸ್ವರೂಪವಾಗಿ ಬೆಳೆದಿದೆ. ವೃತ್ತಿಯನ್ನು ಗಂಭೀರವಾಗಿ ಸ್ವೀಕರಿಸಿದ ಮನಸ್ಸಿಗೆ ಮಾತ್ರ ಬದುಕು ಬೇರೆಯಲ್ಲ, ವೃತ್ತಿ ಬೇರೆ ಯಲ್ಲ ಎಂಬುದಕ್ಕೆ ಬದ್ಧರಾದವರು ಡಾ. ರುದ್ರೇಶ್ ಅವರು ವೃತ್ತಿಯ ಎಲ್ಲವನ್ನೂ ಅರಸುವವರು.

ಒಂದು ಧ್ಯೇಯಕ್ಕಾಗಿ, ಉದ್ದೇಶಕ್ಕಾಗಿ, ಗುರಿಯನ್ನು ತಲುಪುವುದಕ್ಕಾಗಿ ತನ್ನ ಬಾಳನ್ನು ಪೂರ್ತಿಯಾಗಿ ಮುಡಿಪಾಗಿಟ್ಟುಕೊಂಡು
ಇದಿರಾದ ಕಷ್ಟ-ಸಂಕಷ್ಟಗಳನ್ನು, ಅಂದುಕೊಂಡ ನಿರ್ದಿಷ್ಟ, ನಿಶ್ಚಯವಾದ ಗಮ್ಯವನ್ನು ತಲುಪುವುದಕ್ಕಾಗಿ ಬದುಕನ್ನು ಸಮಗ್ರವಾಗಿ, ಸಮರ್ಥವಾಗಿ, ದಿಟ್ಟವಾಗಿ ಕೊಂಡೊಯ್ದು ಇದಿರಾದ ಸವಾಲುಗಳನ್ನು ಒಂಟಿ ಸಲಗದಂತೆ ಧೈರ್ಯದಿಂದ
ಎದುರಿಸಿ ಯಶಸ್ಸನ್ನು ಕಂಡೆ ಎಂಬ ಭಾವ ಡಾ.ಬಿ.ಟಿ.ರುದ್ರೇಶರಲ್ಲಿದೆ. ತನ್ನವರಿಗೆ ತಾನೇ ಒಂದು ಮಾದರಿಯಾಗುತ್ತಾ ಸಮಾಜಕ್ಕೂ ಉತ್ಕಟ ಆದರ್ಶವಾಗುತ್ತಾ ತನ್ನ ಉದಾತ್ತ ಧ್ಯೇಯ ಮತ್ತು ಗುರಿಗಳಿಂದ ರಾಷ್ಟ್ರಕ್ಕೆ ಅರ್ಪಿಸಿಕೊಳ್ಳುವಲ್ಲಿ ಯಾವ ಪ್ರತಿ
ಫಲವನ್ನೂ ಬಯಸದ ಡಾ.ಬಿ.ಟಿ.ರುದ್ರೇಶ್ ನಮ್ಮ ಪಾಲಿಗೆ ಜೀವಂತ ಮಾದರಿಯಾಗಿಯೇ ಉಳಿಯುತ್ತಾರೆ. ಒಂದು ಜೀವ
ಇದಕ್ಕಿಂತ ದೊಡ್ಡ ಸಾಧನೆ ಮಾಡಲಾರದು ಎಂಬ ಭಾವ ನನ್ನದು.

ಸಾಧನೆಯ ಬದುಕು; ಬದುಕೇ ಸಾರ್ಥಕ ಎಂದುಕೊಂಡವನ ಜೀವನಗಾಥೆಯ ಹಂದರವನ್ನು ಪೂರ್ತಿಯಾಗಿಸಿಕೊಳ್ಳಲು ಈ ಕೃತಿಯನ್ನೊಮ್ಮೆ ಓದಲೇಬೇಕಾಗುತ್ತದೆ.