Friday, 27th May 2022

ಪ್ರಕೃತಿ ಪರಮಾತ್ಮನ ಸಮ್ಮಿಲನ

ಶ್ರೀನಿವಾಸ ಜೋಕಟ್ಟೆ, ಮುಂಬೈ

ಮುಂಬಯಿ ಸಮೀಪದ ಹಳ್ಳಿಯೊಂದರಲ್ಲಿ ಇಸ್ಕಾನ್ ಸಂಸ್ಥೆಯು ನಿರ್ಮಿಸಿರುವ ಈ ಇಕೋ ವಿಲೇಜ್‌ನ ಪ್ರವಾಸವು
ಪ್ರಕೃತಿಯ ಸಾನ್ನಿಧ್ಯವನ್ನು ನೀಡಬಲ್ಲದು.

ಪ್ರಕೃತಿ ಮತ್ತು ಪರಮಾತ್ಮನ ಸಂಬಂಧವನ್ನು ನೀವು ಕಾಣಬೇಕೆಂದರೆ ಸಹ್ಯಾದ್ರಿ ಪರ್ವತದ ತಪ್ಪಲಲ್ಲಿ ಉತ್ತರ ಮುಂಬೈಯಿಂದ ಸುಮಾರು 108 ಕಿಲೋಮೀಟರ್ ದೂರದ ಪಾಲ್ಘರ್ ಜಿಲ್ಲೆಯ ವಾಡಾ ಎಂಬ ಲ್ಲಿನ ಗೋವರ್ಧನ ಇಕೋ ವಿಲೇಜ್ ಗೆ ಬರಬೇಕು. ವಾಡಾ ಆದಿವಾಸಿಗಳ ಊರು. ಧಾರ್ಮಿಕ ಮತ್ತು ಪ್ರಕೃತಿಯ ಸಂಗಮ ಸ್ಥಳವೆಂದು ಇದು ಪ್ರಸಿದ್ಧಿ ಪಡೆದಿದೆ.

ಇಲ್ಲಿನ ಮುಖ್ಯ ಆಕರ್ಷಣೆ ಎಂದರೆ ವೃಂದಾವನದಲ್ಲಿರುವ ಆರು ಮುಖ್ಯ ಮಂದಿರಗಳ ಪ್ರತಿಕೃತಿಯನ್ನು ಇಲ್ಲಿ ನಿರ್ಮಿಸಲಾಗಿರು ವುದು. ಮೂಲ ವೃಂದಾವನವನ್ನು ಇಲ್ಲಿ ಮರುಸೃಷ್ಟಿ ಮಾಡಿದ್ದಾರೆ. ಭಕ್ತರ ಭಕ್ತಿಪೂರ್ಣ ಭಾವನೆಗೆ ಸಮರ್ಪಿತ ಈ ಗೋವರ್ಧನ ಇಕೋ ವಿಲೇಜ್ ಸುಮಾರು ನೂರು ಎಕರೆಯಲ್ಲಿ ವ್ಯಾಪಿಸಿದೆ. ಪ್ರಕೃತಿಯನ್ನು ಪ್ರೀತಿಸುವವರಿಗೆ ಇಲ್ಲಿ ಸುತ್ತಾಡು ವುದು ಖುಷಿಯ ಸಂಗತಿ. ಪ್ರಕೃತಿಯ ಮತ್ತು ಪವಿತ್ರತೆಯ ಜೊತೆ ಸ ದ್ಭಾವನೆಯ ಪರಿಚಯವನ್ನು ಈ ಪರಿಸರ ನೀಡುತ್ತದೆ.

ಗೋವರ್ಧನ್ ಇಕೋ ವಿಲೇಜ್ ಗೆ ಹೋಗುವ ರಸ್ತೆ ಗ್ರಾಮಾಂತರ ಕ್ಷೇತ್ರ. ಗೌಜಿ ಗದ್ದಲಗಳಿಲ್ಲ. ದಾರಿಯುದ್ದಕ್ಕೂ ಹಸಿರು. ಒಂದೂವರೆ ಗಂಟೆಯ ಪ್ರಯಾಣದ ನಂತರ ಗೋವರ್ಧನ್ ಇಕೋ ವಿಲೇಜ್ ಇದರ ಗೇಟ್ ಒಳಗಡೆ ಬಂದೆವು. ಬೆಳಿಗ್ಗೆ 8 ರಿಂದ ಸಂಜೆ 7.30 ರ ತನಕ ಒಳಗಡೆ ವೀಕ್ಷಿಸಲು ಅವಕಾಶ.

ಇಲ್ಲಿ ಒಂದು ದಿನ ಸುತ್ತಾಡಿ ಬರಬಹುದು ಅಥವಾ ರಾತ್ರಿ ಉಳಕೊಳ್ಳಲೂ ಇರಬಹುದು. ಮೂಲ ವೃಂದಾವನವನ್ನು ಮರು ರೂಪಿಸಿದ ಗೋವರ್ಧನ ಇಕೋ ವಿಲೇಜ್ ನ ರೂವಾರಿ ಇಸ್ಕಾನ್ ನ ಸ್ವಾಮಿನಾಥ- ಪ್ರಭು ಪಾದ ಅವರು. ವಿಶ್ವದಲ್ಲಿ ಇಂದು 40ಕ್ಕೂ ಅಧಿಕ ಇಸ್ಕಾನ್ ಇಕೋ ವಿಲೇಜ್ ಮತ್ತು ಫಾರ್ಮ್ ಕಮ್ಯುನಿಟಿ ನಿರ್ಮಿಸಿದ್ದು ಇದು ಶುಭಾರಂಭವಾಗಿದೆ.

ಒಳಹೋಗಲು ಪ್ರವೇಶ ಶುಲ್ಕ ಇಲ್ಲ. ಒಂದು ಸಲಕ್ಕೆ ಹತ್ತಿಪ್ಪತು ಜನ ಒಟ್ಟಾದಾಗ ಗೇಟ್ ತೆರೆಯುತ್ತಾರೆ. ಅವರದೇ ಆದ ಒಬ್ಬರು ಗೈಡ್ ನಮ್ಮ ಜೊತೆಗೆ ಇರುತ್ತಾರೆ. ಅವರಿಗೂ ಫೀಸ್ ನೀಡಬೇಕಿಲ್ಲ. ಹೀಗೆ ದಿನಕ್ಕೆ ಅನೇಕ ಟ್ರಿಪ್ ಒಳಗಡೆ ಕರೆದೊಯ್ಯುತ್ತಾರೆ.

ಒಳಗಡೆ ವೃಂದಾವನ ಧಾಮ್‌ನಲ್ಲಿ ಕೃಷ್ಣನ ಬಾಲ ಲೀಲೆಗಳ ದೃಶ್ಯ, ಯಮುನಾ ನದಿ, ಕೃಷ್ಣ ಗೋಪಿಕೆಯರ ಓಡಾಟ, ಕಾಳಿಂಗ ಮರ್ಧನ, ಕಂಸ ಕಳುಹಿಸಿದ ರಾಕ್ಷಸರ ಹತ್ಯೆ, ಯಮುನಾ ನದಿಯ ಉಗಮಸ್ಥಳ, ಗೋವರ್ಧನ ಪರ್ವತ ಪೂಜೆ… ಹೀಗೆ ಕೃಷ್ಣನ ಜೀವನಕ್ಕೆ ಸಂಬಂಧಿಸಿದ ಬಾಲಲೀಲೆಗಳ ಹಲವಾರು ದೃಶ್ಯಗಳನ್ನು ವೀಕ್ಷಿಸಬಹುದು. ಮೂಲ ವೃಂದಾವನದ ಗೋವರ್ಧನ್
ಪರಿಕ್ರಮ ಇಲ್ಲಿ ನಿರ್ಮಿಸಲಾಗಿದೆ. ಮೂಲ ವೃಂದಾವನದಲ್ಲಿ ನಮಗೆ 06-07 ಗಂಟೆಗಳ ಕಾಲ ತಿರುಗಾಡುವುದಿದ್ದರೆ ಇಲ್ಲಿ ಒಂದು- ಒಂದೂವರೆ ಗಂಟೆಯಲ್ಲಿ ಎಲ್ಲವನ್ನೂ ವೀಕ್ಷಿಸಬಹುದು.

ಅ ಬೃಂದಾವನದ ಮರುನಿರ್ಮಾಣ ವೃಂದಾವನ ಧಾಮ್ ನ ಒಳಗಡೆ ಹೋದಾಗ ಇದನ್ನು ಗೋವರ್ಧನ ಪರಿಕ್ರಮ ರೀತಿಯಲ್ಲೇ ನಿರ್ಮಿಸಿದ್ದಾರೆ. ದಾರಿಯಲ್ಲಿ ಯಮುನಾ ನದಿ, ಕುಸುಮ್ ಸರೋವರ, ಮಾನಸಿ ಗಂಗಾ… ಎಲ್ಲವೂ ಇದೆ. ಇಲ್ಲಿ ವಿಶೇಷ ಬಣ್ಣದ
ಮೀನುಗಳನ್ನು ಕಾಣಬಹುದು. ಮೂಲ ವೃಂದಾವನದಲ್ಲಿ ಯಾವ ರೀತಿಯ ನದಿ ತೀರದಲ್ಲಿ ವ್ಯವಸ್ಥೆಯಿದೆಯೋ, ದೃಶ್ಯ ಗಳಿವೆಯೋ ಅಂತಹ ದೃಶ್ಯವನ್ನು ಇಲ್ಲಿಯೂ ರೂಪಿಸಲಾಗಿದೆ.

ಒಳಗಡೆ ಶಾಮ ಕುಂಡ- ರಾಧಾ ಕುಂಡ ಬಳಿ ಗೋವರ್ಧನ ಪರಿಕ್ರಮ ಸಮಾಪ್ತಿಯಾಗುತ್ತದೆ. ಇಲ್ಲಿ ಯಮುನಾ ತೀರದಲ್ಲಿ ಸಂಜೆಗೆ
ಯಮುನಾ ಆರತಿ ನಡೆಯುತ್ತದೆ. ಗೋವರ್ಧನ್ ಇಕೋ ವಿಲೇಜ್ ಇದರ ಒಳಗಡೆ ಸತ್ಸಂಗ ಭವನವಿದೆ. ಇಲ್ಲಿ ಯೋಗವನ್ನು ಕಲಿಸಲಾಗುತ್ತದೆ. ನಾಲ್ಕು ದಿನಗಳ ಅಥವಾ ಒಂದು ತಿಂಗಳು….. ಹೀಗೆ ಯೋಗ ತರಬೇತಿ ಕೋರ್ಸುಗಳಿಗೆ ವ್ಯವಸ್ಥೆಯಿದೆ.
ಹಲವು ಕಾಟೇಜುಗಳಿವೆ. ಆಯುರ್ವೇದ ಭವನ ಇದೆ.

ಗೋಶಾಲೆ ಇದೆ. ಇಲ್ಲೆಲ್ಲಾ 40 ಶೇಕಡ ಸೋಲಾರ್ ತಂತ್ರಜ್ಞಾನ ಬಳಸುತ್ತಾರೆ. ವಾಡಾ ಆದಿವಾಸಗಳ ಊರು. ಇಸ್ಕಾನ್ ಇಲ್ಲಿನ
ಸ್ಥಳೀಯ ವಾಸಿಗಳಿಗೆ ಶಿಕ್ಷಣ, ಆರೋಗ್ಯ, ಕೃಷಿ ಎಲ್ಲದಕ್ಕೂ ನೆರವು ನೀಡುತ್ತಾ ಬಂದಿದೆ. ಮುಂಬಯಿ ನಗರದಿಂದ ಹೆಚ್ಚು ದೂರ ಇಲ್ಲದ ಗೋವರ್ಧನ ಇಕೋ ವಿಲೇಜ್ ನೆಮ್ಮದಿ ಕೊಡುವ ಪ್ರಕೃತಿ ತಾಣವೂ ಹೌದು.

ಅಹಮದಾಬಾದ್ ಎಕ್ಸ್ ಪ್ರೆಸ್ ೪೮ ಎಚ್ ಹೈವೇ ಯಿಂದ ಮನೋರ್ ನಲ್ಲಿ ತಿರುಗಿ ವಾಡಾ ಕಡೆ ಹೋಗಬೇಕು. ಹತ್ತಿರದ
ರೈಲ್ವೇ ಸ್ಟೇಷನ್ ಬೊಯ್ಸರ್.