Thursday, 19th May 2022

ವಾರಕ್ಕೊಂದು ದಿನ ಲಾಕ್, ರಾತ್ರಿ ಕರ್ಫ್ಯೂ ಶಾಶ್ವತ !?

ಸುಪ್ತ ಸಾಗರ

ರಾಧಾಕೃಷ್ಣ ಎಸ್.ಭಡ್ತಿ

rkbhadti@gmail.com

ಒಂದಂತೂ ಸತ್ಯ. ಕರೋನಾ ಮುಕ್ತ ಜಗತ್ತು ಎಂಬುದು ಇನ್ನಿರಲು ಸಾಧ್ಯವೇ ಇಲ್ಲ. ಅಂದ ಮೇಲೆ ಅದರೊಂದಿಗೇ ಇದ್ದು ಬದುಕಲು ಕಲಿಯಬೇಕು. ಅದಕ್ಕಾಗಿ ನಮ್ಮ ಜೀವನದಲ್ಲಿ ಒಂದಷ್ಟು ಬದಲಾವಣೆಯಂತೂ ತೀರಾ ಅಗತ್ಯ. ಇಂಥ ಬದಲಾವಣೆಗಳನ್ನು ಸಕಾರಾತ್ಮಕವಾಗಿ, ಪರಿಸರ ಸ್ನೇಹಿಯಾಗಿ ಮಾಡಿಕೊಳ್ಳು ಮುಂದಾದರೆ ಎಷ್ಟು ಚೆಂದ?

ಪ್ರತಿ ಹದಿನಾರು ಗಂಟೆಗೊಮ್ಮೆ ಕನಿಷ್ಠ ಎಂಟು ಗಂಟೆ ನಿದ್ರೆ, ವಾರಕ್ಕೊಂದು ದಿನ ನಮಗೆಲ್ಲ ಸುದೀರ್ಘ ವಿರಾಮ ಬೇಕೇಬೇಕು ಅಂತಾದರೆ, ಇಡೀ ವಾರ ನಮಗಾಗಿ ಎಲ್ಲವನ್ನೂ ಕೊಡುವ ಈ ನಿಸರ್ಗಕ್ಕೆ ಪೂರ್ತಿ ಅಲ್ಲದಿದ್ದರೂ ಅಲ್ಪ ವಿಶ್ರಾಂತಿಯಾದರೂ ಬೇಡವೇ? ದೇಶದಲ್ಲಿ ಕರೋನಾದ ಎರಡು ಅಲೆಗಳು ಬಂದು ಹೋದ ನಂತರ, ಇದೀಗ ಮೂರನೇ ಅಲೆಯಲ್ಲಿ ‘ಲಾಕ್ ಡೌನ್’ನ ಶಸ್ತ್ರತ್ಯಾಗ ಮಾಡಿದ್ದೇವೆ.

ರಾಜ್ಯದಲ್ಲಿ ಶಾಸ್ತ್ರಕ್ಕೆ ಮಾತ್ರ ರಾತ್ರಿ ಕರ್ಫ್ಯೂ ಇಟ್ಟು ಬಹುತೇಕ ಸಹಜ ಓಡಾಟಕ್ಕೆ ಅನುವು ಮಾಡಿಕೊಡ ಲಾಗಿದೆ. ವಾರಾಂತ್ಯಕ್ಕೆ ಇದ್ದ 36 ಗಂಟೆಗಳ ಕರ್ಫ್ಯೂ ನಿರ್ಬಂಧವನ್ನೂ ತೆಗೆದು ಹಾಕಲಾಗಿದೆ. ಕರೋನಾಕ್ಕೆ ಹೆದರಿ, ಜೀವನವಿಡೀ ಮನೆಯ ಕುಳಿತುಕೊಳ್ಳಲಾಗುವುದಿಲ್ಲ ಎಂಬುದು ಸತ್ಯವೇ ಆಗಿದ್ದರೂ, ನಿಸರ್ಗದ ಹಿತ ದೃಷ್ಟಿಯಿಂದ ವಾರಕ್ಕೊಂದು ದಿನ ದೇಶದಲ್ಲಿ ಸಾರ್ವಜನಿಕ ಓಡಾಟಕ್ಕೆ ನಿರ್ಬಂಧವನ್ನು ಮುಂದುವರಿಸ ಬಾರದಿತ್ತೇ? ಲಾಕ್‌ಡೌನೋತ್ತರ ಭಾರತದಲ್ಲಿ ಇಂಥದ್ದೊಂದು ಪ್ರಶ್ನೆ ಚಾಲನೆ ಪಡೆದಿದೆ. ದೇಶದ ನಿಸರ್ಗದ ಆರೋಗ್ಯದ ದೃಷ್ಟಿಯಿಂದ ಸಂಜೆಯ ನಂತರದ ವಹಿವಾಟು, ವಾರಾಂತ್ಯದ ಮೋಜು-ಮಸ್ತಿಯನ್ನು ನಿರ್ಬಂಧಿಸುವುದರಲ್ಲಿ ಯಾವುದೇ ಹೇಳಿಕೊಳ್ಳುವ ನಷ್ಟವೇನಿರಲಿಲ್ಲ.

ಅಷ್ಟಕ್ಕೂ ಈ ಮೂರು ತಿಂಗಳ ಲಾಕ್ ಡೌನ್ ಅವಧಿಯಲ್ಲಿ ನಮಗೆ ಭೌತಿಕವಾಗಿ ಆದ ನಷ್ಟಕ್ಕಿಂತಲೂ ಪರಿಸರಕ್ಕೆ ಆದ ಲಾಭ ಗಣನೀಯವಾಗಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕರೋನಾ ನಿಯಂತ್ರಣದ ದೃಷ್ಟಿಯಿಂದ ಮಾತ್ರವಲ್ಲದೇ, ಸಾರ್ವಜನಿಕ ಆರೋಗ್ಯ, ಸಾಮುದಾಯಿಕ ಸ್ವಚ್ಛತೆ, ಪರಿಸರದ ನಿರ್ವಹಣೆಯ ಕಾರಣ ಕ್ಕಾಗಿ ದೇಶಾದ್ಯಂತ ಕೊನೆಪಕ್ಷ ವಾರಕ್ಕೊಂದು ದಿನ ನಮ್ಮ ಮಿತಿಯಿಲ್ಲದ ಓಟಕ್ಕೆ ಬ್ರೇಕ್ ಹಾಕಲೇಬೇಕೆಂಬ ಸಲಹೆ ಸ್ವೀಕಾರಾರ್ಹ.

ಹಾಗೆ ನೋಡಿದರೆ, ಆಗಸಕ್ಕೆ ಚಿಮ್ಮುವ ಭರದಲ್ಲಿರುವ, ಶರವೇಗದಲ್ಲಿ ಮುನ್ನುಗ್ಗುತ್ತಿದ್ದ ಮಾನವನ ಬದುಕಿಗೆ ಕರೋನಾ ಒಂದಷ್ಟು ಬ್ರೇಕ್ ಹಾಕಿದ್ದಂತೂ ಸತ್ಯ. ಹುರಿಗಟ್ಟಿದ ಕುದುರೆಯಂತೆ ನಾಗಾಲೋಟ ತೋರುತ್ತಿದ್ದ ಬದುಕೀಗ ಸುಮಾರು ಮೂರು ವರ್ಷಗಳಿಂದ ಕೊಂಚ ವೇಗ ತಗ್ಗಿಸಿಕೊಂಡಿದೆ. ಆಧುನಿಕ ಬದುಕಿನ ಅಭಿವೃದ್ಧಿಯ ಸಾಧನೆ ಎಂದು ಕರೆದುಕೊಳ್ಳುತ್ತಿದ್ದ ಒಂದಷ್ಟು ಭ್ರಮೆ ಕಳೆಚಿ ಬಿದ್ದಿದೆ. ಆರ್ಥಿಕ ಅಭಿವೃದ್ಧಿ, ತಲಾದಾಯ, ಸೂಚ್ಯಂಕ, ವ್ಯಾಪಾರ- ವಹಿವಾಟು ಇತ್ಯಾದಿ
ಒಂದಷ್ಟು ಪದ(ಅರ್ಥವಾಗದ)ಗಳು ಧಕ್ಕೆಗೆ ಒಳಗಾಗಿವೆ (ಅಂತೆ) ಎಂಬುದನ್ನು ಬಿಟ್ಟರೆ, ಬಹುಶಃ ಕರೋನಾದ ಲಾಕ್ ಡೌನ್ ನಿಂದ ಜಗತ್ತಿನಲ್ಲಿ ಯಾರೂ ಉಪವಾಸ ಬಿದ್ದು ಸತ್ತ ಬಗ್ಗೆ ವರದಿಯೇನೂ ಆಗಿಲ್ಲ.

ಹಾಗೆಂದು ಜನಸಾಮಾನ್ಯರಿಗೆ ಒಂದಷ್ಟು ತೊಂದರೆ ಆಗಿಲ್ಲ ಎಂದೇನೂ ಇಲ್ಲ. ಆರಂಭದಲ್ಲಿ ಹೊಸ ಸನ್ನಿವೇಶಕ್ಕೆ ಹೊಂದಿಕೊಳ್ಳಲು, ಭವಿಷ್ಯದ ಕಾಲ್ಪನಿಕ ಆತಂಕಕ್ಕೆ ಒಳಗಾಗಿ ಎಲ್ಲರೂ ಕಂಗಾಲಾಗಿದ್ದು ಸತ್ಯ. ಎಷ್ಟೊಂದು ಜನರ ಜೀವನವೇ ಮುಗಿದು ಹೋಗಬಹುದು ಎಂಬೆಲ್ಲ ರೀತಿಯ ಭಯಗ್ರಸ್ತ ವಾತಾವರಣ ನಿರ್ಮಾಣವಾದದ್ದೂ ಸುಳ್ಳಲ್ಲ. ಆದರೆ ಕೆಲವೇ ದಿನಗಳಲ್ಲಿ ಪರಿಸ್ಥಿತಿಗೆ ಹೊಂದಿಕೊಳ್ಳಲು ಆರಂಭಿಸಿದರು. ಯಾವಾಗ ಕರೋನಾ ವೈರಸ್ ಇನ್ನು ಎಂದಿಗೂ ಈ ಜಗತ್ತಿನಿಂದ ಕಾಲ್ತೆಗೆಯಲು ಸಾಧ್ಯವಿಲ್ಲ ಎಂಬುದು ಅರ್ಥವಾಗಿಯಿತೋ, ಸನ್ನಿವೇಶಕ್ಕೆ ಹೊಂದಿಕೊಳ್ಳುವುದು ಅನಿವಾರ್ಯ ಎಂಬಂತಾಯಿತೋ, ಜನರ
ಮನಃಸ್ಥಿತಿ ಪರಿಸ್ಥಿತಿಯನ್ನು ಎದುರಿಸಲು ಸಜಯಿತು.

ಹೊಸ ಕಟ್ಟು ಪಾಡುಗಳಿಗೆ ತಮ್ಮನ್ನು ತಾವು ಹೊಂದಿಸಿಕೊಂಡು ಮುನ್ನಡೆಯಲು ಸಿದ್ಧರಾದರು. ಕರೋನಾದ ಜಗತ್ತಿನ ಮುಂದಿನ ಭವಿಷ್ಯವನ್ನು ಕಟ್ಟಿಕೊಳ್ಳಲು
ನಿರ್ಧರಿಸಿ, ಒಂದಷ್ಟು ಬದಲಾವಣೆ, ಮಾರ್ಪಾಡುಗಳನ್ನು ಮಾಡಿಕೊಳ್ಳಲಾರಂಭಿಸಿದರು. ಪರಿಣಾಮ ಇಂದು ಆರಂಭಿಕ ಭಯ- ಆತಂಕಗಳು ಇಲ್ಲ. ಈಗೇನಿದ್ದರೂ ಮಾಧ್ಯಮಗಳಲ್ಲಿ ಮಾತ್ರವೇ ಉಳಿದಿದೆ ಕರೋನಾ ಭೀತಿ. ಆದರೆ ಗಮನಿಸಬೇಕಾದದ್ದು, ಜನರಲ್ಲಿ ಮೊದಲಿನ ಹುಚ್ಚು ಓಟ, ಇನ್ನಿಲ್ಲದ ಓಘ, ಅಬ್ಬರ-ಉಬ್ಬರಗಳು ಇಲ್ಲ.

ಲಾಕ್‌ಡೌನ್ ತೆರವಿನ ಬಳಿಕವೂ ಒಂದು ಸ್ತರದ ಶಿಸ್ತು, ಲಂಗುಲಗಾಮಿಲ್ಲದೇ ಸಾಗುತ್ತಿದ್ದ ಬದುಕಿನಲ್ಲಿ ತುಸು ಬ್ರೇಕ್ ಕಾಣಿಸಿದೆ. ಇದರಿಂದ ಬೇರೇನಾಗಿದೆಯೋ ಇಲ್ಲವೋ, ಆದರೆ ಕೊರೊನಾ ವೈರಸ್ ಕಾಣಿಸಿಕೊಂಡು ಪ್ರಕೃತಿಯ ಚಿತ್ರಣವನ್ನು ಬದಲಿಸಿದೆ. ಎಲ್ಲಿ, ಏನಾಗುತ್ತಿದೆ ಎಂಬುದನ್ನೂ ಅರಿಯದೇ ಗೊತ್ತು-ಗುರಿ ಯಿಲ್ಲದೇ ಸಾಗುತ್ತಿದ್ದ ದೇಶದ ನೂರಾರು ನಗರಗಳು-ಪಟ್ಟಣಗಳು ತೀರಾ ಅಗತ್ಯಕ್ಕೆ ಮಾತ್ರ ತನ್ನನ್ನು ತಾನು ತೆರೆದುಕೊಳ್ಳುತ್ತಿದೆ. ಕಾಂಕ್ರೀಟ್ ಕಾಡಾಗಿದ್ದ
ನಗರಗಳಲ್ಲಿ ನಿಸರ್ಗ ತನ್ನ ಆರಂಭಿಕ ವೈಭವವನ್ನು ನಿಧಾನಕ್ಕೆ ಮರಳಿಸಿಕೊಳ್ಳುತ್ತಿದೆ. ಅಗತ್ಯಕ್ಕೆ ಮಾತ್ರವೇ ಹೊರಕ್ಕೆ ಕಾಲಿಡುವುದನ್ನು ನಾವು ಕಲಿಯುತ್ತಿದ್ದೇವೆ ಎಂದರೆ, ಇಷ್ಟು ದಿನ ಅನಗತ್ಯವಾಗಿ ವಾಹನಗಳನ್ನು ರಸ್ತೆಗಿಳಿಸಿ, ಬೇಕೋ ಬೇಡವೋ ಸಿಕ್ಕಿದ್ದನ್ನೆಲ್ಲ ತಿಂದು ತೇಗಿ, ಬೇಕು-ಬೇಡದ್ದನ್ನೆಲ್ಲ ಕೊಂಡು ತಂದು ಬಿಸಾಡಿ, ನೀರು-ನದಿಗಳನ್ನು ಮಲಿನಗೊಳಿಸಿ, ಗಾಳಿ-ಬೆಳಕನ್ನು ಕಲುಷಿತಗೊಳಿಸಿ ಮಾಡಿದ್ದೆಲ್ಲವೂ ಉದ್ದೇಶಪೂರ್ವಕ ದೌರ್ಜನ್ಯವೇ ಅಲ್ಲವೇ? ಜೀವನದ ಸಂತಸ-ಮನರಂಜನೆ, ಮೋಜು ಎಲ್ಲವನ್ನೂ ಬಿಟ್ಟು ಇಡೀ ಜಗತ್ತು ಸಂನ್ಯಾಸ ಸ್ವೀಕರಿಸಿಬಿಡಬೇಕೆಂದೇನೂ ಅಲ್ಲ.

ಆದರೆ, ಒಂದಷ್ಟು ಸ್ವಯಂ ಶಿಸ್ತಿಗೆ ಒಳಪಡಿಸಿಕೊಂಡರೆ, ಈ ಭೂಮಿ ಪುನಃ ಆರೋಗ್ಯಕರವಾಗಿ ಮನುಕುಲದ ಸುಸ್ಥಿರ ಬದುಕಿಗೆ ಆಧಾರವಾದೀತಲ್ಲವೇ?
ಕರೋನಾ ಹುಟ್ಟಿದ ವುಹಾನ್, ಹೆಚ್ಚು ಕಡಿಮೆ ನಮ್ಮ ಬೆಂಗಳೂರಿನಷ್ಟೆ ದೊಡ್ಡದಿದೆ. ಮೊದಲ ವರ್ಷದಲ್ಲಿ ಅದು ಬರೋಬ್ಬರಿ ಎರಡು ತಿಂಗಳು ಲಾಕ್ ಆಗಿತ್ತು. ಅಲ್ಲಿಂದ ಆರಂಭವಾದ ಕಟ್ಟಿಹಾಕಿಕೊಳ್ಳವ ಪ್ರಕ್ರಿಯೆ ಕರೋನಾದ ಜತೆಜತೆಗೇ ದೇಶಗಳಿಗೆ ವಿಸ್ತರಿಸಿತು. ಜಗತ್ತಿನ ಬಹುತೇಕ ದೇಶಗಳು ಹೀಗೆ ತಮ್ಮನ್ನು ತಾವು ಕಟ್ಟಿ ಹಾಕಿಕೊಂಡವು.

ಅಂತಾರಾಷ್ಟ್ರೀಯ ವಿಮಾನಗಳು ಹಾರುವುದನ್ನು ನಿಲ್ಲಿಸಿದವು. ಅತಿ ಹೆಚ್ಚು ಮಾಲಿನ್ಯಕ್ಕೆ ಕಾರಣವಾಗುತ್ತಿದ್ದ ‘ಗುಣ ಮಟ್ಟದ ಇಂಧನ’ ಉಳಿಯಿತು. ಕಾರ್ಖಾನೆಗಳು ಹೊಗೆ ಉಗುಳುವುದನ್ನು, ನದಿಗಳಿಗೆ ಕೊಳೆ ಹರಿಸುವುದನ್ನು ನಿಲ್ಲಿಸಿದವು. ಪ್ರತಿದಿನ ರಸ್ತೆಗಳಲ್ಲಿ ಇರುವೆ ಸಾಲಿಗಳಂತೆ ಸಾಗುತ್ತಿದ್ದ ಕೋಟ್ಯಂತರ ವಾಹನಗಳು ಕಕ್ಕುತ್ತಿದ್ದ ಹೊಗೆ ನಿಂತಿತ್ತು. ಹೀಗಾಗಿ ತೈಲ ಕಂಟೈನರ್‌ಗಳು ಮಧ್ಯ ಪ್ರಾಚ್ಯ ದೇಶಗಳ ಉಳಿದವು. ಬಹುತೇಕ ದೇಶಗಳು ರಫ್ತು-ಆಮದು ನಿಲ್ಲಿಸಿದ್ದರಿಂದ ದೊಡ್ಡ ದೊಡ್ಡ ಕಂಟೈನರ್‌ಗಳು ಹಡಗುಗಳ ಹತಿ ಸಮುದ್ರದಲ್ಲಿ ತೇಲಲಿಲ್ಲ. ಇದರಿಂದ ಸಮುದ್ರದಲ್ಲಿ ಜಲಚರಗಳು ಪ್ರಶಾಂತವಾಗಿ ಈಜಿದವು.

ಕಿವಿಗಡಚಿಕ್ಕುವ ಶಬ್ದಗಳು, ನಮ್ಮ ಕಿರುಚಾಟಗಳಿಲ್ಲದೇ ಸುತ್ತಲಿನ ಪಕ್ಷಿ ಸಂಕುಲದ ಇಂಚರ ಮನ ತಣಿಸಿದವು. ಒಟ್ಟಾರೆ ಇದರಿಂದ ಕರೋನಾ ಮಾತ್ರವೇ ನಿಯಂತ್ರಣಕ್ಕೆ ಬರಲಿಲ್ಲ. ಜತೆಗೆ ಪರಿಸರ ಮಾಲಿನ್ಯವೂ ಗಣನೀಯ ನಿಯಂತ್ರಣಕ್ಕೆ ಬಂತು. ಕರೋನಾ ನಿಸರ್ಗದ ಮೇಲೆ ಮಾಡುತ್ತಿರುವ ಪರಿಣಾಮ ಮಾತ್ರ ಧನಾತ್ಮಕ ಎನ್ನಬಹುದು. ನಿಮಗೆ ಗೊತ್ತಾ? ನಿಸರ್ಗವನ್ನು ಮಾಲಿನ್ಯಗೊಳಿಸುತ್ತಿದ್ದ ಕಾರ್ಬನ್ ಮೊನಾಕ್ಸೈಡ್ ಪ್ರಮಾಣ ಗಾಳಿಯಲ್ಲಿ ಮೊದಲ ಲಾಕ್‌ಡೌನ್ ಸಂದರ್ಭದಲ್ಲಿ ಶೇ.50 ರಷ್ಟು ಇಳಿದಿತ್ತು ಎನ್ನುತ್ತದೆ ನ್ಯೂಯಾರ್ಕ್‌ನ ಅಧ್ಯಯನವೊಂದು. ಕಾರ್ಬನ್ ಡಯಾಕ್ಸೈಡ್ ಪ್ರಮಾಣ ಸಹ ಶೇ.10ರಷ್ಟು ಕಡಿಮೆಯಾಗಿದೆ
ಎನ್ನುತ್ತಾರೆ ಕೊಲಂಬಿಯಾ ಯೂನಿವರ್ಸಿಟಿಯ ತಜ್ಞರು.

ಚೀನಾ ಒಂದರ ತಿಂಗಳ ಸರಾಸರಿ ಪೆಟ್ರೊಲ್ ಬಳಕೆ ಪ್ರಮಾಣ ಶೇ.೨೫ ಇಳಿದಿದೆ. ಇದರಿಂದ ಈ ವರ್ಷ ಅಲ್ಲಿನ ಒಟ್ಟಾರೆ ಇಂಗಾಲದ ಹೊರಸೂಸುವಿಕೆ ಶೇ.1 ರಷ್ಟು ಕಡಿಮೆ ಆಗಲಿದೆಯಂತೆ. ಹಾಗೆಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ಬಿಡುಗಡೆ ಮಾಡಿರುವ ಚಿತ್ರಗಳೇ ಸಾಕ್ಷಿ ನುಡಿದಿವೆ. ಇಟಲಿಯ ವೆನಿಸ್‌ನ ನದಿಯ ದೋಣಿ ವಿಹಾರಕ್ಕೆ ವರ್ಷಕ್ಕೆ ಸರಿ ಸುಮಾರು ೨ ಕೋಟಿ ಜನ ಹೋಗುತ್ತಿದ್ದರು. ಮೂರು ವರ್ಷಗಳಿಂದ ಅದು ಸರಿಯಾಗಿ ಸಾಗೇ ಇಲ್ಲ. ಪರಿಣಾಮ ವೆನಿಸ್‌ನ ಕಾಲುವೆಗಳು ಕನ್ನಡಿಯಂತಾಗಿವೆ. ಅಷ್ಟೇಕೆ ನಮ್ಮ ಗಂಗೆ ಮತ್ತೆ ಪವಿತ್ರವಾಗಿರುವ ವರದಿಗಳು ಈಗಾಗಲೇ ಪ್ರಕಟಗೊಂಡಿವೆ. ದಶಕಗಳಿಂದ ಸರಕಾರಗಳು ನಿರಂತರ ಯೋಜನೆಗಳ ಮೂಲಕ ಸಾಧಿಸಲಾಗದ ಗಂಗಾ ಶುದ್ಧೀಕರಣವನ್ನು ಕೇವಲ ಮೂರು ತಿಂಗಳ ಮೊದಲ ಅಲೆಯಲ್ಲಿ ಕರೋನಾ ಸಾಧಿ ಸಿದೆ.

ಪಟ್ಟಿ ಮಾಡಲಾಗದ ನಿಸರ್ಗದಲ್ಲಿನ ಆದೆಷ್ಟೋ ಬದಲಾವಣೆಗಳು ಆಗಿವೆ; ಆಗುತ್ತಿವೆ. ಕರೋನಾ ಸೋಂಕಿನ ಅಬ್ಬರ ಇಷ್ಟಕ್ಕೇ ಕೊನೆಯಾಗುವಂಥದ್ದಂತೂ ಅಲ್ಲ, ಅಮೆರಿಕದ ದಿ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್ ಅಂಡ್ ಪಾಲಸಿ(ಸಿಡಿಡಿಇಪಿ) ವಿವಿಧ ಧೇಶಗಳ ಬಗೆಗೆ ನಡೆದಿ ಅಧ್ಯಯನದ ಪ್ರಕಾರ,
ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಜಗತಿಕ ಪ್ರೋಟೋಕಾಲ್‌ನಲ್ಲಿ ನಾವು ಇದೀಗ ಪುಟ್ಟ ಪುಟ್ಟ ಕಂಟೈನ್ ಮೆಂಟ್ ಹಂತ ತಲುಪಿದ್ದೇವೆ. ಇಷ್ಟಾದರೂ
ನಿಯಂತ್ರಣದ ಬಗ್ಗೆ ಯಾವುದೇ ಭರವಸೆ ಕಾಣುತ್ತಿಲ್ಲ. ಏಕೆಂದರೆ ಭಾರತದಂಥ ಬೃಹತ್ ಜನಸಂಖ್ಯೆಯ ದೇಶಗಳಲ್ಲಿ ನೈಜ ಸಂಖ್ಯೆಯ ಪ್ರಕರಣಗಳು ನಮಗೆ ಇನ್ನೂ ತಿಳಿದಿಲ್ಲ. ಈಗಂತೂ ಶೀತನೆಗಡಿ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆಯೇ ಭಾರತದಲ್ಲಿ ಬಹುತೇಕರು ಮನೆಯಲ್ಲಿ ಕಿಟ್‌ಗಳ ಮೂಲಕ ಪರೀಕ್ಷೆ ಮಾಡಿ ಕೊಂಡು ಸ್ವಯಂ ಚಿಕಿತ್ಸೆಗೆ ಒಳಪಡುತ್ತಿದ್ದಾರೆ.

ಮೈಕ್ರೋಬಯಾಲಜಿ ಮತ್ತು ವೈರಾಲಜಿಯಲ್ಲಿ 25 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿರುವ ಶಿಶುವೈದ್ಯ ಟಿ ಜಕೋಬ್ ಜನ್ ಅವರ ಪ್ರಕಾರ ಭಾರತದಂಥ ದೇಶದಲ್ಲಿ ಸದ್ಯಕ್ಕೆ ಕರೋನಾಪೂರ್ವ ಸಹಜ ಜೀವನಕ್ಕೆ ಮರಳಲು ಹಲವು ವರ್ಷಗಳೇ ಬೇಕು. ಒಂದು ಹಂತದ ಸ್ವಯಂ ನಿರ್ಬಂಧ, ಶಿಸ್ತು ನಿರಂತರ ಇನ್ನು
ಅಗತ್ಯ. ಸೊಳ್ಳೆ ಅಥವಾ ನೀರಿನಿಂದ ಹರಡುವ ಸೋಂಕಿಗಿಂತ ಭಿನ್ನವಾಗಿ ಇದು ಉಸಿರಾಟದ ಸೋಂಕಾಗಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹೋದರೆ ಹಿಂದೆಂದೂ ಕಾಣದಷ್ಟು ಪ್ರಮಾಣದ ಅವಘಡ ಮುಂದೆ ಎದುರಾಗಲಿದೆ.

ಇನ್ನು ಕರೋನಾ ಭಾರತದಂಥ ಸಮುದಾಯದ ರೋಗನಿರೋಧಕ ಶಕ್ತಿಯನ್ನೇ ಪ್ರಶ್ನಿಸಿ ನಿಲ್ಲುತ್ತಿದೆ. ಭಾರತದಲ್ಲಿ ಬಹುತೇಕ ಯುವಕರು ಪೌಷ್ಟಿಕಾಂಶ ಕೊರತೆ ಹಾಗೂ ರೋಗನಿರೋಧಕ ಶಕ್ತಿಯ ಕೊರತೆಯನ್ನು ಎದುರಿಸುತ್ತಿದ್ದಾರೆ. ಇದರರ್ಥ ಭಾರತದಂಥ ಜನಸಂಖ್ಯಾ ದೇಶಗಳು ಆಹಾರ ಹಾಗೂ ನೀರು-ಪರಿಸರದ ವಿಚಾರದಲ್ಲಿ ಮಾಲಿನ್ಯಮುಕ್ತವಾಗುವುದು ಅನಿವಾರ್ಯ ಎನ್ನುತ್ತಾರೆ ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯ ಡೀನ್ ಯಿಕ್-ಯಿಂಗ್. ವೈರಸ್‌ಗಳ ಒಳಗೆ ಜೆನೆಟಿಕ್ ಬದಲಾವಣೆಗಳು ಆಗಿ ಹೋಗುತ್ತಲೇ ಇರುತ್ತವೆ ಎಂಬುದೀಗ ರೂಪಾಂತರಿಗಳಾದ ಡೆಲ್ಟಾ, ಒಮೈಕ್ರಾನ್‌ನಿಂದ ದೃಢಪಟ್ಟಿದೆ. ಈ ಹಿಂದೆ ಚೀನಾ ದಲ್ಲಿಯೇ ಹುಟ್ಟಿದ ಸಾರಸ್ (sars – cov) ಹಾಗೂ ಮದ್ಯಪೂರ್ವ ಉಸಿರಾಟದ ಲಕ್ಷಣ (mers – cov) ಗಳ ಮುಂದುವರಿದ ತಳಿಯಾಗಿ ನೋವೆಲ್ ಕರೋನಾ ಉದ್ಭವಿಸಿರಲೂ ಸಾಕು. ಶ್ವಾಸಕೋಶದ ಮೇಲೆ ಈ ವೈರಸ್ ಹೆಚ್ಚಿನ ಒತ್ತಡ ಹೇರುವ ಗುಣವನ್ನು ಹೊಂದಿರುವುದರಿಂದ ಪರಿಶುದ್ಧ ಮಾಲಿನ್ಯ ರಹಿತ ಪರಿಸರ ಮುಖ್ಯವೆನಿಸುತ್ತದೆ.

ಅಲರ್ಜಿಕಾರಕ, ಇಂಗಾಲಯುಕ್ತ ಗಾಳಿಯ ಜತೆ ಗುದ್ದಾಡುವ ಸನ್ನಿವೇಶದಲ್ಲಿ ನಮ್ಮ ಶ್ವಾಸಕೋಶಗಳ ಮೇಲೆ ಸೋಂಕೂ ದಾಂಗುಡಿಯಿಟ್ಟರೆ?! ಶತಮಾನಗಳಿಂದ ಆಗುತ್ತಿರುವ ವೈರಸ್‌ಗಳ ಜೆನೆಟಿಕ್ ಬದಲಾವಣೆಗಳು ಈಗ ವೇಗವಾಗಿ ಹರಡುತ್ತಿದೆ. ಏಕೆಂದರೆ ಆಧುನಿಕ ಅಭಿವೃದ್ಧಿ ಜಗತ್ತನ್ನು ಮೊದಲಿಗಿಂದ ಬಹಳಷ್ಟು ಕಿರಿ ದಾಗಿಸಿಬಿಟ್ಟಿದೆ. ಜತೆಗೆ ಸರಾಸರಿ ಆಯುಸ್ಸು ಹೆಚ್ಚಿದ್ದರೂ ರೋಗ ನಿರೋಧಕ ಶಕ್ತಿ ಕುಸಿದಿದೆ. ಪ್ರತಿಯೊಂದಕ್ಕೂ ಆಂಟಿಬಯೋಟಿಕ್ ಅನ್ನೇ ಅವಲಂಬಿಸುವ ಸನ್ನಿವೇಶದಲ್ಲಿ ದೈಹಿಕ ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯ ಕುಸಿದು ರೋಗಾಣು ಜೀವಿಗೆ ಅನುಕೂಲವಾಗಿದೆ.

ಭಾರತದಲ್ಲಿ ಮೂಲಭೂತವಾಗಿ ನಮ್ಮ ದುರ್ಬಲ ದೈಹಿಕ ಆರೋಗ್ಯ ವ್ಯವಸ್ಥೆ, ಕಲುಷಿತ ಪಾರಿಸಾರಿಕ ವ್ಯವಸ್ಥೆ ಮುಂದುವರಿದ ದೇಶಗಳಿಗೆ ಹೋಲಿಸಿದರೆ ವೈರಸ್‌ ಗಳ ಸಂಖ್ಯಾಭಿವೃದ್ಧಿಗೆ ಹೆಚ್ಚು ಅನುಕೂಲಕಾರಿಯಾಗಿದೆ ಎನ್ನುತ್ತಾರೆ ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯ ವೈರಾಲಜಿ ತಜ್ಞರು. ಹೀಗಾಗಿ ಭೌಗೋಳಿಕ ಗಡಿಯಲ್ಲಷ್ಟೇ ನಮ್ಮ ರಕ್ಷಣಾ ವ್ಯವಸ್ಥೆ ಬಲಪಡಿಸಿದರೆ ಸಾಲದು, ದೈಹಿಕ ರಕ್ಷಣಾ ವ್ಯವಸ್ಥೆ ಸದೃಢಗೊಳಿಸಿಕೊಳ್ಳಲು ಸಂಘರ್ಷ ಮುಕ್ತ ತಿಳಿಯಾದ ವಾತಾವರಣ ಅಗತ್ಯ.

ಒಂದಂತೂ ಸತ್ಯ. ಕರೋನಾ ಮುಕ್ತ ಜಗತ್ತು ಎಂಬುದು ಇನ್ನಿರಲು ಸಾಧ್ಯವೇ ಇಲ್ಲ. ಅಂದ ಮೇಲೆ ಅದರೊಂದಿಗೇ ಇದ್ದು ಬದುಕಲು ಕಲಿಯಬೇಕು. ಹೀಗಾಗಿ ಕರೋನಾಕ್ಕೂ ಮೊದಲು ನಾವು ಬದುಕಿದ್ದಂತೆಯೇ ಈಗಲೂ ಬದುಕುತ್ತೇನೆಂಬುದು ಸಾಧ್ಯವೇ ಇಲ್ಲದ ಮಾತು. ಅದಕ್ಕಾಗಿ ನಮ್ಮ ಜೀವನದಲ್ಲಿ ಒಂದಷ್ಟು ಬದಲಾವಣೆಯಂತೂ ತೀರಾ ಅಗತ್ಯ. ಇಂಥ ಬದಲಾವಣೆಗಳನ್ನು ಸಕಾರಾತ್ಮಕವಾಗಿ, ಪರಿಸರ ಸ್ನೇಹಿಯಾಗಿ ಮಾಡಿಕೊಳ್ಳು ಮುಂದಾದರೆ ಎಷ್ಟು ಚೆಂದ? ಉದಾಹರಣೆಗೆ ಬಹುತೇಕ ಇನ್ನು ಆನ್ ಲೈನ್ ಬ್ಯಾಂಕಿಂಗ್ ಅನಿವಾರ್ಯ. ಬ್ಯಾಂಕ್, ಎಟಿಎಂ ಗೆ ಓಡಾಡುವ ಬದಲು ಕಾಷ್‌ಲೆಸ್ ವ್ಯವಹಾರ ರೂಢಿಸಿಕೊಳ್ಳಲೇ ಬೇಕು.

ಶಿಕ್ಷಣ ಅಮೆರಿಕದಲ್ಲಿಯಂತೆ ವರ್ಚುವಲ್ ರೀತಿಗೆ ಸ್ಥಳಾಂತರಗೊಳ್ಳುವುದರಲ್ಲಿ ತಪ್ಪೇನು? ದುಭಾರಿ ಶುಲ್ಕ ಪಾವತಿ ತಪ್ಪುವ ಜತೆಗೆ ಮಕ್ಕಳಿಗೆ ಪುಸ್ತಕಗಳ ಹೊರೆ, ಓಡಾಟದ ಬಳಲಿಕೆ ತಪ್ಪುತ್ತದೆ. ಕಾಗದ ಬಳಕೆ ಕಡಿಮೆಯಾಗಿ ಮರಗಳ ನಾಶವೂ ತಪ್ಪುತ್ತದೆ. ತಂತ್ರಜ್ಞಾನವನ್ನೇ ಅವಲಂಬಿಸಿ ಬದುಕಲೇಬೇಕಿದೆ. ಹೀಗಾಗಿ ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳು ಇನ್ನು ಮನೆಯಿಂದಲೇ ಕೆಲಸ ಮಾಡುವುದನ್ನು ಸರಕಾರವೇ ಕಡ್ಡಾಯಗೊಳಿಸಬೇಕು. ಇದರಿಂದ ನಗರಗಳು ಬಕಾಸುರನ
ಹೊಟ್ಟೆಯಂತೇ ಬೆಳೆಯುವುದು ತಪ್ಪುತ್ತದೆ. ಉದ್ಯೋಗಗಳು ಸಹ ನಗರ ಕೇಂದ್ರಿತವಾಗುವುದು ನಿಲ್ಲುವುದರಿಂದ ಜನರ ನಗರ ವಲಸೆ ನಿಲ್ಲುತ್ತದೆ. ಸಂಬಳದ ಉದ್ಯೋಗದಲ್ಲಿ ಭದ್ರತೆ ಇಲ್ಲದಿರುವುದರಿಂದ ಕೃಷಿ, ಸ್ವಯಂ ಉದ್ಯೋಗಕ್ಕೆ ಯುವಕರು ಮನ ಮಾಡುವುದು ಒಳಿತು. ಇದರಿಂದ ಯುವಕರಲ್ಲಿ ಆತ್ಮವಿಶ್ವಾಸವೂ ಮೂಡುವುದಲ್ಲದೇ, ಹಳ್ಳಿಗಳು ನಿರ್ಜನವಾಗುವುದು ತಪ್ಪುತ್ತದೆ. ಗ್ರಾಮಭಾರತದ ಪುನಶ್ಚೇತನಕ್ಕೆ ಇದು ಸಕಾಲ.

ಮದುವೆ, ಮುಂಜಿ, ಸಭೆ-ಸಮಾರಂಭಗಳ ಹೆಸರಿನಲ್ಲಿ ಲಕ್ಷಾಂತರ ಸುರಿಯುವ ಮನೋಭಾವ ಬದಲಿಸಿಕೊಳ್ಳೋಣ. ಇದರಿಂದ ರಾಷ್ಟ್ರೀಯ ಪೋಲು ತಪ್ಪುತ್ತದೆ. ಭ್ರಷ್ಟಾಚಾರ ಕಡಿಮೆಯಾಗುತ್ತದೆ. ಸಾಲದ ಸುಳಿಯಿಂದ ಬಡ-ಮಧ್ಯಮ ವರ್ಗ ಪಾರಾಗುತ್ತದೆ. ಸರಳ ಸ್ವಾವಲಂಬಿ ಬದುಕಿಗೆ ಪ್ರೇರಣೆ ಒದಗುತ್ತದೆ. ಸಮಾ ರಂಭಗಳ ಹೆಸರಿನಲ್ಲಿ ಪ್ರತಿಷ್ಠೆ ಪ್ರದರ್ಶನ ಕೊನೆಗೊಂಡು ದುಂದು ನಿಲ್ಲುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ರಾತ್ರಿಯನ್ನು ಕಡ್ಡಾಯ ವಿಶ್ರಾಂತಿ ಸಮಯವೆಂದು ಘೋಷಿಸಿ, ಈಗಿನಂತೆ ಅಲ್ಲದಿದ್ದರೂ ಕೊನೆಪಕ್ಷ ರಾತ್ರಿ ೧೧ರಿಂದ ಬೆಳಗ್ಗೆ ೫ ರವರೆಗೆ ನಿರ್ಬಂಧ ಶಾಶ್ವತವಾಗಿ ಮುಂದುವರಿಸಲು ಮನಸ್ಸು ಮಾಡೋಣ. ಕಚೇರಿ ಗಳಲ್ಲಿ ರಾತ್ರಿ ಪಾಳಿ ಬೇಡ. ದೂರದ ಪ್ರಯಾಣಬಿಟ್ಟು, ವಾಹನಗಳು ರಾತ್ರಿ ಒಡಾಡದಿರಲಿ.

ನಗರಗಳು 10ಕ್ಕೆ ವಹಿವಾಟು ನಿಲ್ಲಿಸಲಿ. ಲಾರಿಗಳಂಥ ಭಾರೀ ವಾಹನಗಳು ಸಂಚರಿಸದಿರಲಿ. ಚಿತ್ರಮಂದಿರ ಸೇರಿದಂತೆ ಮನರಂಜನೆಗೂ ರಾತ್ರಿ ಬ್ರೇಕ್ ಬೀಳಲಿ. ಇದರಿಂದ ಕಳೆದುಕೊಳ್ಳುವುದು ಏನೂ ಇಲ್ಲ. ಇದ್ದರೂ ಪಡೆದುಕೊಳ್ಳುವುದಕ್ಕೆ ಹೋಲಿಸಿದರೆ ಅದು ತೀರಾ ನಗಣ್ಯ. ರಾತ್ರಿಯ (ವಾಯು- ಶಬ್ದ-ಬೆಳಕು) ಮಾಲಿನ್ಯ ತಪ್ಪುತ್ತದೆ. ವಿದ್ಯುತ್ ಸೇರಿದಂತೆ ಇಂಧನ ಉಳಿತಾಯವಾಗುತ್ತದೆ. ಅಹಿತಕರ ಘಟನೆಗಳು, ಸಮಾಜ ಘಾತಕತನ ನಿಲ್ಲುತ್ತದೆ. ಅಪರಾಧಗಳೂ
ನಿಯಂತ್ರಣಕ್ಕೆ ಬರುತ್ತದೆ.

ಮಾತ್ರವಲ್ಲ, ಭಾನುವಾರದ ವಾರಾಂತ್ಯದ ಚಟುವಟಿಕೆಗಳನ್ನೂ ಈಗಿನಂತೆ ನಿರ್ಬಂಧಿಸಿಕೊಳ್ಳೋಣ. ಭೂಮಿಯ ಮೇಲಿನ ಒತ್ತಡ ಅಷ್ಟರಮಟ್ಟಿಗೆ ಕಡಿಮೆ ಯಾಗುತ್ತದೆ. ವಾರವಿಡೀ ಪ್ರಕೃತಿಯ ಮೇಲೆ ನಡೆಸಿದ ಶೋಷಣೆಗೆ ಒಂದು ದಿನ ಬ್ರೇಕ್ ಬಿದ್ದು ಅದು ಕೊನೇಪಕ್ಷ ತನ್ನನ್ನು ತಾನು ದುರಸ್ತಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಜನರ ಕುಟುಂಬ ಮನೋಭಾವಕ್ಕೆ ಮತ್ತೆ ಚಾಲನೆ ಸಿಲುಕಿ ಮನಸ್ಸುಗಳು ಬೆಸೆಯುತ್ತವೆ. ವಿಘಟಿತ ಮನೋಭಾವ ಕೊನೆಗೊಂಡು
ಸಂಬಂಧಗಳು ದೃಢಗೊಳ್ಳುತ್ತವೆ. ಜನರಿಗೆ ಉತ್ತಮ ವಿಶ್ರಾಂತಿ ದೊರಕಿ ಸಮುದಾಯದ ಸದಸ್ಯರ ಮಾನಸಿಕ-ದೈಹಿಕ ಆರೋಗ್ಯವೂ ಸುಧಾರಿಸುತ್ತದೆ.