Tuesday, 18th January 2022

ಪೊರೆಯುವುದಕ್ಕಿಂತ ಮುಳುಗಿಸುವುದೇ ಹೆಚ್ಚು

ಕಾಳಜಿ

ಧನಂಜಯ ಜೀವಾಳ

ಕಟ್ಟುವ, ಬೆಳೆಸುವ ಕೆಲಸಕ್ಕಿಂತ ಕೆಡವುವ, ಕೀಳುವ, ಕತ್ತರಿಸುವ ಕೆಲಸವೇ ಹೆಚ್ಚು ಆಕರ್ಷಕವಾಗುತ್ತಿರುವಂತಿದೆ. ಹಾಗಾಗಿಯೇ ಚೈನ್ಸಾ, ಡೋಝರ್,
ಡ್ರಿಲ್ಲರ್, ಡೈನಾಮೈಟ, ಎಕ್ಸ್ಕಾವೇಟರ್‌ಗಳು ಬಿಡುವಿಲ್ಲದೇ ದುಡಿಯುತ್ತಿವೆ. ಕೀಳು ಸಂಸ್ಕ್ರತಿಯ ಮುಂದೆ ಕಾಯ್ವ ಕಾಯಕ ಮಂಡಿಯೂರಿದೆ.

ಇಡೀ ಜೀವಜಾಲಕ್ಕೆ ಸೇರಿದ ಸಂಪನ್ಮೂಲವನ್ನು ಯಾಕೆ ಮತ್ತು ಹೇಗೆ ನಿರ್ವಹಿಸಬೇಕೆಂಬ ಕನಿಷ್ಠ ತಿಳಿವಳಿಕೆಯೂ ಇಲ್ಲದವರ ಕೈಗೇ ಈ ಜಗತ್ತಿನ ಆಗುಹೋಗು ಗಳನ್ನು ನಿರ್ಧರಿಸುವ ಅವಕಾಶಗಳು ಹೋಗಿ ಸೇರುತ್ತಿವೆ.

ಸಹಜ ವಿವೇಕವೂ ಇಲ್ಲದ ಇಂತಹ ಸ್ವಹಿತಾಸಕ್ತಿಕೇಂದ್ರಿತ ಆಲೋಚನೆಯಿಂದ ಇಡೀ ಜಗತ್ತೇ ಅವನತಿಯತ್ತ ಸರಿಯುತ್ತಿದೆ. ಸಜ್ಜನರ ಮುಂದಾಲೋಚನೆ, ಅಭಿಪ್ರಾಯ ಹಾಗೂ ಮಾರ್ಗದರ್ಶನವು ಸ್ವಪ್ರತಿಷ್ಠೆಯ ಕಾರಣಕ್ಕೆ ಉದ್ದೇಶಪೂರ್ವಕ ಉಪೇಕ್ಷೆಗೆ ಒಳಗಾಗಿವೆ. ಸರಿಸುಮಾರು 5000 ಹೆಕ್ಟೇರ್ ಅರಣ್ಯ ಪ್ರದೇಶ ವನ್ನು, ಸಾವಿರಾರು ಎಕರೆ ಕೃಷಿ ಭೂಮಿ ಹಾಗೂ ಜನವಸತಿ ಪ್ರದೇಶವನ್ನು ಮುಳುಗಿಸುವ ಈ ಮೇಕೆದಾಟು ಅಣೆಕಟ್ಟು ಯೋಜನೆಯ ಅಗತ್ಯವೇನಿದೆ? ಈ ಭೂಮಿ ಮಿಲಿಯಾಂತರ ವರ್ಷಗಳಿಂದ ಸಹಜವಾಗಿ ಬೆಟ್ಟ-ಗುಡ್ಡ, ಮರುಭೂಮಿ, ಹಿಮ ಪ್ರದೇಶ, ಹುಲ್ಲುಗಾವಲು, ಕಣಿವೆ, ಬಂಜರು ಭೂಮಿ, ಸಮುದ್ರತೀರ, ದಟ್ಟಕಾಡು ಹೀಗೆ ತನ್ನದೇ ಆದ ಕ್ರಮದಲ್ಲಿ ತನ್ನ ಭೂಮೇಲ್ಮೈಯನ್ನು ವಿನ್ಯಾಸ ಮಾಡಿಕೊಂಡಿದೆ.

ನೀರಿನ ಸರೋವರ ಎಲ್ಲಿರಬೇಕು, ಹರಿಯುವ ತೊರೆ ಹೇಗಿರಬೇಕು, ನದಿಯ ಅಕ್ಕ-ಪಕ್ಕ ಏನೇನಿರಬೇಕು, ಯಾವ ಪ್ರದೇಶದಲ್ಲಿ ಯಾವ ಸಸ್ಯ ಬೆಳೆಯಬೇಕು, ನೀರೆಲ್ಲಿ ಶೇಖರವಾಗಬೇಕು, ಮನುಷ್ಯನೆಂಬ ಜೀವಿಯ ವ್ಯಾಪ್ತಿ ಏನು, ವನ್ಯಜೀವಿಗಳ ಆವಾಸದ ವಿಸ್ತಾರವೇನು, ಸಮಸ್ತ ಭೂಮಿಯ ಯಾವ-ಯಾವ ಘಟಕಗಳು ಯಾವ ಉದ್ದೇಶಕ್ಕೆ, ಹೇಗೆ, ಎಷ್ಟು ಮತ್ತು ಯಾಕೆ ಬಳಕೆಯಾಗಬೇಕೆಂದು ಸಹಜ-ಸ್ವಾಭಾವಿಕವಾಗಿ ನಿರ್ಧರಿಸ ಲ್ಪಟ್ಟಿದೆ. ಕೆಲಸ ಸೃಷ್ಟಿಗೆ, ಖಜಾನೆಯ ಹಣ ವಿಲೇ ವಾರಿಗೆ, ಭಾಷಾವಾರು ಭಾವನೆಗಳೊಂದಿಗೆ ಆಟವಾಡುವ ಮೂಲಕ ಅಧಿಕಾರ ರಾಜಕಾರಣಕ್ಕೆ ಮಾತ್ರ ಬಳಕೆ ಯಾಗುವ ಈ ಯೋಜನೆಯಿಂದ ಪರಿಸರಕ್ಕೆ ಎಂದೆಂದಿಗೂ ಸರಿಪಡಿಸಲಾಗದ ಹಾನಿಯಾಗಲಿದೆ.

ಪರ್ಯಾಯ ಅರಣ್ಯ ಬೆಳೆಸುವುದೆಂದರೆ ಯಾರೆಲ್ಲರ ಜೇಬು ತುಂಬಿಸುವ ಯೋಜನೆಯೆಂದು ಎಲ್ಲರಿಗೂ ತಿಳಿ ದಿರುವ ಸಂಗತಿಯೇ ಆಗಿದೆ. ಈ ನೀರಾವರಿ ಯೋಜನೆಯಿಂದ ಕೃಷಿಗೆ ಪೂರಕ ವಾತಾವರಣ ನಿರ್ಮಾಣವಾಗಬಹುದೆಂಬ ವಾದವಿದ್ದರೂ, ಈಗಿರುವ ಕೃಷಿ ಉತ್ಪಾದನೆಗೇ ನಾವು ನ್ಯಾಯಬೆಲೆಯನ್ನು ಒದಗಿಸಲು ಅಸಮರ್ಥರಾಗಿರುವಾಗ, ಇದೊಂದು ಮೇಕೆದಾಟು ಪ್ರಹಸನ ಜನರನ್ನು ಮಂಗಾ ಮಾಡಲು ಹಾಗೂ ಖಜಾನೆ ಕೊಳ್ಳೆ ಹೊಡೆಯುವ ಯೋಜನೆ ಯೆಂದು ಬಿಡಿಸಿ ಹೇಳಬೇಕಿಲ್ಲ.

ಡಿಪಿಆರ್, ಸರ್ವೆಗಳನ್ನೆಲ್ಲ ಯೋಜನೆಯ ಪ್ರಮೋಟರ್‌ಗಳು ತಮಗೆ ಪೂರಕವಾಗಿರುವಂತೆಯೇ ಸಿದ್ಧಪಡಿಸಿಕೊಂಡಿರುತ್ತಾರೆ. ಭಾಷೆ, ರಾಜ್ಯಗಳ ನಡುವಿನ ಸಹಜ-ಸ್ವಾಭಾವಿಕ ತಿಕ್ಕಾಟ ಹಾಗೂ ರಾಜಕಾರಣದ ತಿಕ್ಕಾಟವನ್ನೇ ಈ ಪಾದಯಾತ್ರೆಗಳಿಗೆ ಇಂಧನ ಮಾಡಿಕೊಳ್ಳಲಿದ್ದಾರೆ ನಮ್ಮ ನಡುವಿನಲ್ಲಿರುವ ದಾರಿತಪ್ಪಿಸು ವವರು. ತಮಿಳುನಾಡಿನ ಬಗೆಗಿರುವ ನೆರೆಹೊರೆಯ ವೈಮನಸ್ಯ ಹಾಗೂ ಅಸಹನೆಯನ್ನೇ ಬಂಡವಾಳ ಮಾಡಿಕೊಂಡಿರುವ ರಾಜಕೀಯ ಪಕ್ಷಗಳು ಯಾರಿಗೂ
ಅಗತ್ಯವೇ ಇಲ್ಲದ ಯೋಜನೆಯನ್ನು ರಾಜ್ಯದ ಪ್ರತಿಷ್ಠೆಯೆಂದು ಪ್ರತಿಬಿಂಬಿಸಿ, ಇಡೀ ರಾಜ್ಯದ ಜನತೆಯನ್ನು ಹಾದಿ ತಪ್ಪಿಸುತ್ತಿದ್ದಾರೆ.

ಬೆಂಗಳೂರು ಮತ್ತಿತರ ಪ್ರದೇಶದ ನೆಲ-ಜಲ ಸವಾಲನ್ನು ಎದುರಿಸಲು ಇರುವ ಪರ್ಯಾಯ ಸಾಧ್ಯತೆಗಳತ್ತ ಪ್ರಯತ್ನವನ್ನೇ ಮಾಡದೇ, ಇಡೀ ಜೀವಜಗತ್ತಿಗೆ ಮಾರಕವಾಗಿರುವ ಕಟ್ಚೆ ಕಟ್ಟಿ, ಭೂಮಿ ಮುಳುಗಿಸಿ, ವನ್ಯಜೀವಿಗಳನ್ನು ಅತಂತ್ರವಾಗಿಸಿ, ಜನರನ್ನು ಬೀದಿಪಾಲು ಮಾಡುವ, ನಗರಗಳಿಗೆ ಗುಳೆ ಹಬ್ಬಿಸುವ, ಪಟ್ಟಣಗಳನ್ನು ಕೊಳಗೇರಿಗಳನ್ನಾಗಿ, ಹಳ್ಳಿಗಳನ್ನು ಹಾಳುಕೊಂಪೆಗಳನ್ನಾಗಿಸುವ ಕಾರ್ಯದಲ್ಲಿ ಮಗ್ನರಾಗಿ ಅಮಾಯಕ ಜನರ ಬದುಕಿನೊಂದಿಗೆ ಮತ್ತು ವನ್ಯ ಜೀವಿಗಳ ಭವಿಷ್ಯದೊಂದಿಗೆ ಆಟವಾಡುತಿದ್ದಾ.

ಕಾಲೇಜುಗಳು, ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳು, ನವೋದ್ಯಮಗಳು ಬೆಂಗಳೂರಿನಿಂದ ಸ್ಥಳಾಂತರಿಸುವ ಮೂಲಕ ಈ ನಗರದ ಕೊನೆ ಮೊದಲಿಲ್ಲದ ನೆಲ-ಜಲ ದಾಹಕ್ಕೆ ಪೂರ್ಣವಿರಾಮ ಇಡಬಹುದು. ಅಗತ್ಯ ಮೂಲಸೌಲಭ್ಯ ಇಲ್ಲವೆಂದು ರಾಜ್ಯದ ಇತರೆ ಸ್ಥಳಗಳಿಗೆ ಅವಕಾಶಗಳನ್ನು ತಿರಸ್ಕರಿಸುವ
ಮೂಲಕ ಮಾನವಹಕ್ಕನ್ನು ನಿರಾಕರಿಸಲಾಗುತ್ತಿದೆ. ಆದರೆ ಬೆಂಗಳೂರಿನ ಸುತ್ತಮುತ್ತ ಅದೇ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡುತ್ತಲೇ ಇದ್ದಾರೆ. ಈ ಮಲತಾಯಿ ಧೋರಣೆಯನ್ನು ಈಗಿಂದೀಗಲೇ ಕೈಬಿಟ್ಟು, ಆಡಳಿತ ರಾಜ್ಯದ ಸರ್ವತೋಮುಖ ಸುಸ್ಥಿರತೆಗೆ ತನ್ನ ಪ್ರಾಮಾಣಿಕ ಬದ್ಧತೆಯನ್ನು ಸಾಬೀತು ಪಡಿಸ ಬೇಕಿದೆ.

ಗುಲ್ಬರ್ಗ, ಬಳ್ಳಾರಿ, ದಾವಣಗೆರೆಯಂಥ ನೂರಾರು ಊರುಗಳ ಅವಕಾಶಗಳನ್ನು ಕಿತ್ತು, ಬೆಂಗಳೂರಿನ ಯಾರ ಅನುಕೂಲಕ್ಕೆ ಯೋಜನೆಗಳನ್ನು ರೂಪಿಸಲಾಗು ತ್ತಿದೆ? ನಮ್ಮ ಹತ್ತು ಹಲವು ಪರಿಸರ ಸಂಬಂಧಿತ ಮೂಲಭೂತ ಸಮಸ್ಯೆಗಳಿಗೆ ಈ ಬೆಂಗಳೂರು ಕೇಂದ್ರಿತ ಯೋಜನೆಗಳೇ ಕಾರಣ.ಭಾಷೆ, ಪ್ರಾಂತ್ಯ ಹಾಗೂ ಧರ್ಮದ ಅಮಲನ್ನು ಜನರಿಗೆ ಸುಲಭವಾಗಿ ವಿತರಿಸಬಹುದೆಂಬುದೇ ವಿಪರ್ಯಾಸ. ಈ ಯೋಜನೆ ಅಗತ್ಯವಿದೆಯೇ ಹಾಗೂ ಇದರಿಂದ ಜೀವಜಗತ್ತಿನ ಮೇಲಾಗುವ ದುಷ್ಪರಿಣಾಮದ ಕುರಿತು ಚರ್ಚಿಸುವುದನ್ನು ಬಿಟ್ಟು, ಈ ಮನೆಹಾಳು ಕೆಲಸವನ್ನು ಮಾಡಲು ತಾಮುಂದು ನಾಮುಂದು ಎಂದು ಮುಗಿಬೀಳುತ್ತಿರುವು ದನ್ನು ನೋಡಿದರೆ, ಈ ವ್ಯವಸ್ಥೆಯನ್ನು ಕಂತ್ರಾಟುದಾರರು, ಕಂತ್ರಾಟುದಾರರಿಗಾಗಿಯೇ ನಡೆಸುತಿದ್ದಾರೆಂಬುದು ಖಚಿತವಾಗುತ್ತಿದೆ. ನಾವು ಒಂದಷ್ಟು ಜನ ಅಣೆಕಟ್ಟು ಯೋಜನೆಯ ಸಾಧಕ-ಬಾಧಕಗಳನ್ನು ಅವಲೋಕಿಸಿ ಜಲಾಶಯ ಬೇಡ ಅನ್ನುತಿದ್ದೇವೆ. ಈ ಜನಗಳು ಈಗಾಗಲೇ ಬೀದಿಗಿಳಿದಿದ್ದಾರೆ.

ಯಾರು ತಪ್ಪು ಮಾಹಿತಿ ನೀಡಿದ್ದಾರೋ? ಯಾರ ಚಿತಾವಣೆಯೋ? ಯಾವ ಪ್ರಲೋಭನೆಯೋ? ಯಾವ ದೂರಾಲೋಚನೆಯೋ? ಅವರಿಗಿರುವ ತಿಳಿವಳಿಕೆಯ ಮಿತಿಯೋ? ಎಂತಹ ಆಮಿಷವೋ? ಸಿಗಲಿರುವ ಪರಿಹಾರದ ಆಮಿಷವೋ? ಸರಕಾರಗಳನ್ನೇ ನಿಯಂತ್ರಿಸುವ ಹರಿಯಲಿರುವ ಹಣವೋ? ನೆಲಕ್ಕುರುಳಲಿರುವ ಲಕ್ಷಾಂತರ ಮರಗಳ ಟಿಂಬರ್ ಮೌಲ್ಯವೋ? ದುರ್ಲಾಭದ ಎಣಿಕೆಯಲ್ಲಿರುವ ಪುಡಿ ರಾಜಕಾರಣವೋ? ಅಧಿಕಾರ ರಾಜಕಾರಣದ ಮುಂದೆ ಕೈಕಟ್ಟಿ ನಿಲ್ಲುವ ನೌಕರಶಾಹಿಯ ಅನಿವಾರ್ಯವೋ? ಉಂಡುಕೊಂಡು ಜಾಣರಾಗಲು ಕಾಯುತ್ತಿರುವ ಚಮಚಾ ವೃಂದವೋ? ಹೇಗಾದರಾಗಲೀ ನಮ್ಮದು ಅನಿರ್ಬಾಧಿತ ಎಂಬ
ಬೇಜವಾಬ್ದಾರಿತನವೋ? ..ಚ್ಚೇಲಿ ಮೀನು ಹಿಡಿಯುವ ಧಾವಂತವೋ? ಕಟ್ಟುವ, ಬೆಳೆಸುವ ಕೆಲಸಕ್ಕಿಂತ ಕೆಡವುವ, ಕೀಳುವ, ಕತ್ತರಿಸುವ ಕೆಲಸವೇ ಹೆಚ್ಚು ಆಕರ್ಷಕವಾಗುತ್ತಿರುವಂತಿದೆ.

ಹಾಗಾಗಿಯೇ ಚೈನ್ಸಾ, ಡೋಝರ್, ಡ್ರಿಲ್ಲರ್, ಡೈನಾಮೈಟ, ಎಕ್ಸ್ಕಾವೇಟರ್‌ಗಳು ಬಿಡುವಿಲ್ಲದೇ ದುಡಿಯುತ್ತಿವೆ. ಕೀಳು ಸಂಸ್ಕ್ರತಿಯ ಮುಂದೆ ಕಾಯ್ವ ಕಾಯಕ
ಮಂಡಿಯೂರಿದೆ. ರಾಜ್ಯದಲ್ಲಿ ನೂರಾರು ಹಿರಿ-ಕಿರಿಯ ಜಲಾಶಯಗಳಿವೆ, ಸಾವಿರಾರು ಕೆರೆ-ಕುಂಟೆಗಳಿವೆ, ಲಕ್ಷ ಕಿಲೋಮೀಟರ್ ಮೀರಿದ ನೀರಾವರಿ ಕಾಲುವೆ ಗಳಿವೆ. ಅಲ್ಲಲ್ಲಿ ಸುಮಾರಾಗಿ ಮಳೆಯಾಗಿದೆ. ಜಲಾಶಯಗಳಲ್ಲಿ ಸಂಗ್ರಹವಾಗುತ್ತಿರುವ ನೀರನ್ನು ಸಂಪರ್ಕವಿರುವ ಕೆರೆ-ಕುಂಟೆಗಳಿಗೆ ತುಂಬಿಸಬೇಕಿದೆ. ಸಾಧ್ಯ ವಿದ್ದಲ್ಲಿ ಕಾಲುವೆಗಳನ್ನು ಸಹ ನೀರು ಸಂಗ್ರಹಕ್ಕೆ ಬಳಸಿಕೊಳ್ಳಬಹುದು.

ಲಭ್ಯವಿರುವ ನೀರನ್ನು ಸಮುದ್ರ ಸೇರಲು ಬಿಟ್ಟು, ಮಳೆಗಾಲದ ಕೊನೆಯ ದಿನಗಳವರೆಗೂ ಕಾಯ್ದು, ಅಂತಿಮ ಹಂತದಲ್ಲಿ ಕೆರೆಕುಂಟೆಗಳಿಗೆ ನೀರು ತುಂಬಿಸಲು ತಿಣುಕಾಡುವ ಪದ್ಧತಿಯನ್ನು ಕೈಬಿಡಬೇಕಿದೆ. ನಮ್ಮ ಅಗತ್ಯಕ್ಕೆ ಸಂಗ್ರಹಿಸಿಕೊಂಡ ನೀರನ್ನು ಜಲಾಶಯಗಳಿಂದ ಹೊರಹರಿಯಲು ಬಿಡುವ ಮುನ್ನ ನಮ್ಮೆ ಜಲಾವಾರಗಳನ್ನು ಅಗತ್ಯಕ್ಕೆ ತಕ್ಕಂತೆ ಪೂರಣಗೊಳಿಸಿಕೊಳ್ಳುವುದು ಪ್ರಬುದ್ಧ ನಡೆಯಾಗಬಹುದು.

ಅವಿವೇಕಿಗಳ ಎದುರು ಸೋಲಲೇಬೇಕಾದ ಯುದ್ಧದಲ್ಲಿ ನಾವು ತೊಡಗಿದ್ದೇವಾ ಎಂಬ ಗುಮಾನಿ ಕಾಡತೊಡಗಿದೆ. ಕೆಲವೇ ಜನರ ಮೋಜಿಗಾಗಿ, ಲಾಭಕ್ಕಾಗಿ ಮತ್ತು ಲಾಲಸೆಗಾಗಿ ನಮ್ಮ ಇಡೀ ನಾಗರೀಕತೆಯನ್ನು ಮತ್ತು ಸಮಸ್ತ ಜೀವ ಸಂಕುಲವನ್ನು ಬಲಿ ಕೊಡಲಾಗುತ್ತಿದೆ ಮತ್ತುನಮ್ಮಿಡೀ ಜೀವಜಾಲವನ್ನು ಲೂಟಿ ಮಾಡಲಾಗುತ್ತಿದೆ. ನಿಜವಾದ ಸಂಪತ್ತು ನಮ್ಮ ಕಾಡುಗಳು. ನಮ್ಮ ಕಾಡು ನಮ್ಮ ಹೆಮ್ಮೆ. ಅಲ್ಪಸ್ವಲ್ಪ ಉಳಿದಿರುವ ಈ ಜಗತ್ತಿನ ಶ್ವಾಸಕೋಶವಾಗಿರುವ ಕಾಡನ್ನು ಅಭಿವೃದ್ಧಿ ಹೆಸರಿನಲ್ಲಿ ನಿರ್ನಾಮ ಮಾಡುವುದಕ್ಕೆ ನಮ್ಮ ವಿರೋಧವಿದೆ. ಕಾಡು ನಮ್ಮ ಸೊತ್ತಲ್ಲ, ನಮ್ಮ ಮಕ್ಕಳಿಗೆ ಜಾಗರೂಕತೆಯಿಂದ ಹಾಗೂ ಸುಸ್ಥಿತಿಯಲ್ಲಿ ಹಿಂದಿರುಗಿಸಲೇಬೇಕಾದ ನಮ್ಮ ಪೂರ್ವಜರಿಂದ ಬಂದಿರುವ ಬಳುವಳಿ.

ಅವಿವೇಕಿಗಳ, ಭ್ರಷ್ಟರ, ಕೊಲೆಗಡುಕರ ನಿರ್ಧಾರಗಳಿಗೆ ಸಭ್ಯರೆಲ್ಲ ಕೋಲೆಬಸವರಂತೆ ತಲೆಯಾಡಿಸುತಿದ್ದರೆ ವಿವೇಕಿಗಳ ಮಾತು, ಚಿಂತನೆ, ಕಲಾಸೃಷ್ಟಿ,
ಪ್ರಶಸ್ತಿ ಮತ್ತು ಸನ್ಮಾನಗಳು ಅಸಂಗತವಾಗುತ್ತಾ ಹೋಗುತ್ತವೆ. ಇಡೀ ವಿಶ್ವದ ಆಸ್ತಿಯಾದ ಅರಣ್ಯ ತೆರೆದಿಟ್ಟ ಖಜಾನೆಯಂತಾಗಿರುವುದು ಮುಂದಿನ ದಿನಗಳ ಬಗ್ಗೆ ಕಳವಳಕ್ಕೆ ಕಾರಣವಾಗಿದೆ. ಜೈವಿಕ ಪರಿಸರದ ವಿಚಾರಕ್ಕೆ ಬಂದಾಗ ಇಡೀ ಜೀವಸಂಕುಲವೇ ಒಂದು ಕುಟುಂಬವಾಗಿ ವರ್ತಿಸುತ್ತದೆ. ಯಾರ ಮತ್ತು ಯಾವುದರ ನಡುವೆಯೂ ಗಡಿ ಅಥವಾ ಗೋಡೆ ಇರುವುದಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವುಗಳು ಒಂದು ತುರ್ತು ಕಾರಣಕ್ಕೆ ಸಂಘಟಿತರಾಗಲೇ ಬೇಕಿದೆ ಮತ್ತು ದನಿಗೂಡಿಸಲೇಬೇಕಿದೆ.

ವ್ಯವಸ್ಥೆಯನ್ನು ಪ್ರಶ್ನಿಸುವ ಹಂತಕ್ಕೆ ಬರುವ ಮೊದಲೇ ಆ ಚಳವಳಿಯನ್ನು ಷಡ್ಯಂತ್ರದಿಂದ ಹಿಮ್ಮೆಟ್ಟಿಸಲಾಗುತ್ತಿದೆ. ನಾವು ನಂಬಿರುವ ಆದರ್ಶಗಳ ಪರವಾಗಿ
ನಿಲ್ಲುವ ಅನುಭವ ಮತ್ತು ಆತ್ಮತೃಪ್ತಿಯದೇ ಒಂದು ತೂಕ. ಮುಂದಾಲೋಚನೆಯ ಮಿಂಚುಗಳು ಕೊಡುತ್ತಿರುವ ಮುನ್ನೆಚರಿಕೆಗಳನ್ನು ಗಂಭೀರವಾಗಿ ತೆಗೆದು ಕೊಳ್ಳುವ ಅಗತ್ಯವಿದೆ. ಈಗಿನ ವ್ಯವಸ್ಥೆಯಲ್ಲಿ ಪರಿಹಾರ ಕಂಡುಕೊಳ್ಳಲು ಆಗದಿದ್ದಲ್ಲಿ, ಈಗಿನ ವ್ಯವಸ್ಥೆಯನ್ನೇ ಆಮೂಲಾಗ್ರವಾಗಿ ಬದಲಿಸಬೇಕಾಗಿದೆ. ಒಮ್ಮನಸ್ಸಿ ನಿಂದ ನಾವೆಲ್ಲರೂ ಕೈ ಜೋಡಿಸಿದರೆ ಏನೇನನ್ನು ಮಾಡಲು ಸಾಧ್ಯವಿದೆ ಎಂಬುದನ್ನು ಆಲೋಚಿಸಿ.

ಅದನ್ನು ಕಾರ್ಯರೂಪಕ್ಕೆ ತರಲು ನಾವು ಖಡಕ್ಕಾಗಿ, ಖಚಿತವಾಗಿ ಮತ್ತು ಸ್ಪಷ್ಟವಾಗಿ ಮಾತನಾಡಬೇಕಿದೆ. ಅದು ಎಷ್ಟೇ ಕಠಿಣವಾಗಿದ್ದರೂ ಪರವಾಗಿಲ್ಲ. ಇದು ನಮಗಿರುವ ಕೊನೇ ಅವಕಾಶ. ಇಂದಿಲ್ಲದಿದ್ದರೆ, ಎಂದಿಗೂ ಇಲ್ಲ. ಪ್ರಕೃತಿ ಎನ್ನುವುದು ಅಪಾರ ವಿಸ್ಮಯಗಳ ಕಣಜ. ಅಧಿಕಾರದ ಸ್ಥಾನದಲ್ಲಿದ್ದು, ಅಲ್ಲಿನ ಗುರುತರ ಜವಾಬ್ದಾರಿಯಿಂದ ನುಣುಚಿಕೊಂಡು, ಆ ಹೊಣೆಗೂ ತಮಗೂ ಸಂಬಂಧವೇ ಇಲ್ಲವೇನೋ ಎಂಬಂತೆ ಸಂವೇದನಾರಹಿತರಾಗಿರುವ ಜಾಗತಿಕ ನಾಯಕರುಗಳಿಗೆ ಸಮಸ್ತ ಜೀವರಾಶಿಯ ಪರವಾಗಿ ಇದೊಂದು ಆಗ್ರಹ.

ಅಭಿವೃದ್ಧಿ ಮತ್ತು ಪರಿಸರದ ನಡುವೆ ದೊಡ್ಡ ಕಂದಕವೇ ನಿರ್ಮಾಣವಾಗಿದೆ. ನಮ್ಮ ಮಾತಿಗೆ ಅರ್ಥ ಬರುವುದು ನಮ್ಮ ನಡವಳಿಕೆಯಿಂದ. ಜೀವವೈವಿಧ್ಯವನ್ನು ಹಣದ ಮಾನದಂಡದಲ್ಲಿ ಅಳೆಯುವ ಕೆಲಸವನ್ನು ಯಾರೂ ಮಾಡಬಾರದು. ಇಡೀ ವಿಶ್ವದ ವಿದ್ಯಾಮಾನಗಳು ಒಂದಕ್ಕೊಂದು ಸೂಕ್ಷ್ಮವಾಗಿ ಅವಲಂಬಿಸಿರುವ ಬಲೆಯ ಎಳೆಗಳು. ಪರಿಸರದ ಈ ಭಯಾನಕತೆಯ ಕಡೆಗೆ ಸರಕಾರೀ ವ್ಯವಸ್ಥೆ ಅಗತ್ಯ ಗಮನ ಹರಿಸುತ್ತಿಲ್ಲ. ಸಭೆ- ಸಮಾರಂಭ, ಘೋಷಣೆ, ಫೋಟೋ ಮತ್ತು ಪತ್ರಿಕೆಯಲ್ಲಿ ಸುದ್ಧಿ ಇಷ್ಟಕ್ಕೇ ಆ ಬದ್ಧತೆಯು ಸೀಮಿತವಾಗಿದೆ.

ಒಂದು ದೃಷ್ಟಿಯಲ್ಲಿ ವಾಸ್ತವ ಅತ್ಯಂತ ಭೀಕರವಾಗಿದೆ ಮತ್ತು ನಿರಾಶಾದಾಯಕವಾಗಿದೆ. ಇಂದಿನ ಗಂಭೀರ ಪರಿಸ್ಥಿತಿಯ ಕುರಿತು ವಿಚಾರ ವಿನಿಮಯ ಮಾಡ ಬೇಕಿದೆ. ಎಲ್ಲ ಆಡಳಿತ ವ್ಯವಸ್ಥೆಯೂ ಭಾರತದಷ್ಟೇ ಅಲ್ಲದೆ ಸಮಸ್ತ ವಿಶ್ವ ಪರಿಸರದ ಗಂಭೀರ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೀತಿ, ನಿಯಮ, ಕಾನೂನು ಮತ್ತು ಯೋಜನೆಗಳನ್ನು ರೂಪಿಸಿಕೊಳ್ಳಬೇಕಿದೆ. ಮತ್ತು ಅದನ್ನು ತಮ್ಮ ಕಾರ್ಯನಿರ್ವಹಣೆಯ ಮೊದಲ ಆದ್ಯತೆಯ ವಿಷಯವಾಗಿ ಸೇರಿಸಿಕೊಳ್ಳಲು ಒತ್ತಾಯಿಸ ಬೇಕಿದೆ.

ಜೈವಿಕ ಪರಿಸರದ ಮೇಲಿನ ಒತ್ತಡವನ್ನು ನಿಯಂತ್ರಿಸಲು, ಜೈವಿಕ ಪರಿಸರವನ್ನು ಸುರಕ್ಷಿತವಾಗಿ ಇಡಲು ಮತ್ತು ಈ ಗಂಭೀರ ವಾಸ್ತವವನ್ನು ಸಾರ್ವಜನಿಕ
ಚರ್ಚೆಯಲ್ಲಿ ತರಲು, ನಮ್ಮ ಭೂಮಿ ನಮ್ಮ ಹೆಮ್ಮೆ ಎಂಬ ಧ್ಯೇಯವಾಕ್ಯದಡಿ ಮಾನವನಿರ್ಮಿತ ಹವಾಮಾನ ವೈಪರೀತ್ಯ ಕುರಿತು ಜಾಗೃತಿ ಮೂಡಿಸಲು
ಪುಟ್ಟ ಮಕ್ಕಳು, ವಿeನಿಗಳು, ವಿಚಾರವಂತರು, ಬುದ್ಧಿಜೀವಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪರಿಸರಾಸಕ್ತರು, ಜಲತಜ್ಞರು, ಕ್ರೀಡೆ, ಸಿನೆಮಾ ಹಾಗೂ ಸಾಹಿತ್ಯ ವಲಯದ ಉತ್ಸಾಹಿಗಳು ಜಾಗತಿಕ ಕಾರಣಕ್ಕೆ ತಮ್ಮ ಸಮಗ್ರತೆಯನ್ನು ಸೂಚಿಸಲು ಒಂದೆಡೆ ಸೇರಬೇಕಿದೆ.

ಸರಕಾರದ ನೀತಿ-ನಿರೂಪಣೆ ಮತ್ತು ಯೋಜನೆಗಳ ಕಾರ್ಯಗತ ಹಂತದಲ್ಲಿ ನಮ್ಮ ಜೀವವೈವಿಧ್ಯತೆಯ ಅಸ್ಮಿತೆಗೆ ಕೊಂಚವೂ ಧಕ್ಕೆಯಾಗದಂತೆ ಹಾಗೂ
ಈವರೆವಿಗೂ ಆಗಿರುವ ಜೈವಿಕ ಹಾನಿಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಬದ್ಧತೆಯನ್ನು ನಿರೂಪಿಸಲು ಸರಕಾರವನ್ನು ಆಗ್ರಹಿಸಬೇಕಿದೆ.