Sunday, 23rd February 2020

ಸಿದ್ದರಾಮಯ್ಯ ಆಯ್ಕೆಯಾದರೆ ಸೋತ ‘ಕೈ’ ಬಲ ಹೆಚ್ಚಿಸುವುದಿಲ್ಲವೇ?

ವೆಂಕಟೇಶ ಆರ್.ದಾಸ್
ದೇಶದ್ಯಾಾಂತ ಸೊರಗಿರುವ ಕಾಂಗ್ರೆಸ್ ಪಕ್ಷದ ನಾಯಕರಿಗೆ ಇನ್ನೂ ಬುದ್ಧಿ ಬಂದಿಲ್ಲ ಎಂಬುದು ಅವರು ಮಾಡಿಕೊಳ್ಳುತ್ತಿರುವ ಎಡವಟ್ಟುಗಳಿಂದಲೇ ಗೊತ್ತಾಗುತ್ತದೆ. ಸೋಲಿನ ಮೇಲೆ ಸೋಲುಂಡು, ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತದ ಅಲೆಯಲ್ಲಿ ಸಿಲುಕಿ ಬುಡವೇನು, ಬೇರುಗಳೆಲ್ಲ ಅಲುಗಾಡುತ್ತಿದ್ದರೂ ಕಾಂಗ್ರೆಸ್ ಮೂಕನಾಯಕರಿಗೆ ಮಾತ್ರ ಬುದ್ಧಿ ಬಂದಿಲ್ಲ.

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಲ್ಪಸ್ವಲ್ಪ ನೆಲೆಯಿದೆ ಎಂದರೆ ಅದಕ್ಕೆ ಕಾರಣ ಹಿಂದಿನ ಸರಕಾರದಲ್ಲಿ ಸಿದ್ದರಾಮಯ್ಯ ಅವರು ಕೊಟ್ಟ ಜನಪರ ಆಡಳಿತ. ಐದು ವರ್ಷಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಪಕ್ಷ ಮತ್ತು ಸರಕಾರವನ್ನು ಕೆಚ್ಚೆದೆಯಿಂದ ನಡೆಸಿಕೊಂಡು ಬಂದಿದ್ದರು ಎನ್ನಬಹುದು. ಆದರೆ, ಅನಂತರದ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿ ಬೇರುಗಳೆಲ್ಲ ಸತ್ವ ಕಳೆದುಕೊಂಡಿದ್ದರೂ ಅದೇ ಹಳೇ ಕಾಲದ ಅಪ್ಪ ಹಾಕಿದ ಆಲದ ಮರ ತತ್ತ್ವಕ್ಕೆ ಗಂಟು ಬಿದ್ದು, ಸಿದ್ದರಾಮಯ್ಯ ಮೂಲ ಕಾಂಗ್ರೆಸ್ಸಿಗರಲ್ಲ ಎಂಬ ಕಾರಣವೊಡ್ಡಿ ಅವರಿಗೆ ವಿಪಕ್ಷ ನಾಯಕನ ಸ್ಥಾನ ತಪ್ಪಿಸಲು ಒದ್ದಾಡುತ್ತಿರುವ ನಾಯಕರ ಮೂಲ ಉದ್ದೇಶ ಅದೇನಿದೆಯೋ?

ಎಸ್.ಎಂ.ಕೃಷ್ಣ ಅವರ ಮುಖ್ಯಮಂತ್ರಿ ಅಧಿಕಾರಾವಧಿ ಮುಗಿದ ನಂತರ ದಿಕ್ಕೆೆಟ್ಟಿದ್ದ ಕಾಂಗ್ರೆಸ್ ಪಕ್ಷಕ್ಕೆ ದಿಕ್ಕು ತೋರಿಸಿದ್ದು ಸಿದ್ದರಾಮಯ್ಯ. ಜೆಡಿಎಸ್ ಜತೆ ಕೈಜೋಡಿಸಿ ಕುಗ್ಗಿದ್ದ ಕಾಂಗ್ರೆಸ್ ಅನ್ನು ಮುಂದೆ ಅಧಿಕಾರಕ್ಕೆ ಬಂದ ಬಿಜೆಪಿ ಅರ್ಭಟದ ನಡುವೆಯೂ ಕಟ್ಟಿಬೆಳೆಸಿದ ರೀತಿ ಅದ್ಭುತ ಎಂಬುದನ್ನು ಕಾಂಗ್ರೆಸ್ ನಾಯಕರು ಮರೆತಂತಿದೆ. ಒಂದೇ ಅವಧಿಯಲ್ಲಿ ಮೂರು ಮುಖ್ಯಮಂತ್ರಿ ಕಂಡ ಬಿಜೆಪಿ ಸರಕಾರದ ವಿರುದ್ಧ ತೊಡೆತಟ್ಟಿದ್ದು, ಬಳ್ಳಾರಿವರೆಗೆ ಬರಿಗಾಲಲ್ಲಿ ನಡೆದು ರಿಪಬ್ಲಿಕ್ ಬಳ್ಳಾರಿ ಬೇಧಿಸಿ ಬಿಜೆಪಿಯನ್ನು ಬುಡಮೇಲು ಮಾಡಿ ಅಧಿಕಾರ ಹಿಡಿದಿದ್ದು ಕಡಿಮೆ ಸಾಧನೆಯೇನಲ್ಲ.

ಅಧಿಕಾರಕ್ಕೆ ಬಂದ ನಂತರವೂ ಸಿದ್ದರಾಮಯ್ಯ ಉಳಿದ ನಾಯಕರಂತೆ ಮೈಮರೆಯಲಿಲ್ಲ. ಐದು ವರ್ಷದ ಅವಧಿಯಲ್ಲಿ ಯಾವುದೇ ಭಿನ್ನಮತಗಳಿಗೆ ಅವಕಾಶ ನೀಡದೆ, ವಿಪಕ್ಷಗಳ ಕೈಗೆ ವಾಚೊಂದನ್ನು ಬಿಟ್ಟು ಉಳಿದ್ಯಾವ ಟೀಕಾಸ್ತ್ರ ನೀಡದೆ, ಬಡವರ ಪರ ಆಡಳಿತ ನಡೆಸಿ ಭಾಗ್ಯಗಳ ಕೊಟ್ಟ ಭಾಗ್ಯವಿಧಾತ ಎನಿಸಿಕೊಂಡು ಬಂದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಈಗ ಕಡೆಗಣಿಸುತ್ತಿದೆ. 2018ರ ಚುನಾವಣೆಯಲ್ಲಿಯೂ ದೇಶಾದ್ಯಂತ ರಾಷ್ಟ್ರೀಯತೆ ಮತ್ತು ಮೋದಿ ಅಲೆಯಲ್ಲಿ ನೆಲೆಯಿಲ್ಲದೆ ನಲುಗಿದ ಕಾಂಗ್ರೆಸ್‌ಗೆ ರಾಜ್ಯದಲ್ಲಿ 78 ಸ್ಥಾನ ಗೆಲ್ಲಿಸಿಕೊಟ್ಟಿದ್ದು ಇದೇ ಸಿದ್ದರಾಮಯ್ಯ ಸರಕಾರದ ಕಳಂಕರಹಿತ ಆಡಳಿತ ಎಂದರೆ ಅತಿಶಯೋಕ್ತಿಯಲ್ಲ.

ದಿಕ್ಕಿಲ್ಲದ ಕಾಂಗ್ರೆಸ್‌ಗೆ ತಮ್ಮ ಪರಮ ವೈರಿ ಜೆಡಿಎಸ್ ನಾಯಕರ ಜತೆ ಸೇರಿ ಸರಕಾರ ರಚಿಸುವ ಅನಿವಾರ್ಯತೆ ಬಂದರೂ ಬಿಂಕತೋರದೆ ಒಂದು ದಿಕ್ಕು ತೋರಿದವರು, ದೇಶದಲ್ಲೆೆಲ್ಲೂ ಅಧಿಕಾರವಿಲ್ಲದ ಹೊತ್ತಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮೈತ್ರಿ ಸರಕಾರವಿದೆ ಎಂಬ ಸಮಾಧಾನ ಇರುವಂತೆ ಮಾಡಿದ್ದು ಕೂಡ ಸಿದ್ದರಾಮಯ್ಯ. ಇಂದು ಮೂಲ ಕಾಂಗ್ರೆಸ್ ನಾಯಕರು ಎನಿಸಿಕೊಂಡವರ್ಯಾರು ಅಂದು ಜೆಡಿಎಸ್ ಜತೆಗಿನ ಮೈತ್ರಿಯಲ್ಲಿ ಮುಂದಾಳತ್ವ ವಹಿಸಲಿಲ್ಲ. ಪಕ್ಷಕ್ಕೆ ಸೆಡ್ಡು ಹೊಡೆಯಲೇಬೇಕು ಎಂಬ ಮನಸ್ಸಿದ್ದರೆ ಸಿದ್ದರಾಮಯ್ಯ ಅವರು ಅಂದೇ ಕಾಂಗ್ರೆಸ್‌ನ ಶವಪೆಟ್ಟಿಗೆಗೆ ಮೊಳೆ ಹೊಡೆಯಬಹುದಿತ್ತು. ಆದರೆ, ಅವರಿಗೆ ಸ್ವಪ್ರತಿಷ್ಠೆಗಿಂತ ಪಕ್ಷದ ಉಳಿವು ಮುಖ್ಯವಾಗಿತ್ತು. ಆದರೆ, ಕೆಲ ನಾಯಕರಿಗೆ ಅದು ಅರಿವಿಗೆ ಬರದಿರುವುದು ವಿಪರ್ಯಾಸ.

ದೇಶಾದ್ಯಂತ ಎಲ್ಲ ರಾಜ್ಯಗಳನ್ನು ಸೋತು, ಲೋಕಸಭೆಯಲ್ಲಿ ಆರು ಮೂರು ಸ್ಥಾನ ಗೆದ್ದರೂ, ತಿದ್ದಿಕೊಳ್ಳದೆ ಮೂರು ರಾಜ್ಯಗಳಲ್ಲಿ ಚುನಾವಣೆ ಹತ್ತಿರ ಮಾಡಿಕೊಂಡು ಕಾಂಗ್ರೆಸ್‌ನ ಮಹಾರಾಜ, ಯುವರಾಜ ಎನಿಸಿಕೊಳ್ಳುವ ರಾಹುಲ್ ಗಾಂಧಿ, ಬ್ಯಾಾಂಕಾಕ್ ಬೀಚ್ ಸೇರಿಕೊಂಡಿದ್ದಾರೆ. ಕುಟುಂಬದೊಳಗಿನ ವ್ಯಕ್ತಿಗಳಿಗೆ ತಾವು ತೆಗೆದುಕೊಂಡ ನಿರ್ಧಾರಗಳಲ್ಲಿ ಪರಸ್ಪರ ವಿರೋಧಭಾಸವಿದ್ದರೆ ಎಷ್ಟು ಅನಾಹುತ ಎಂಬುದನ್ನು ಕಾಂಗ್ರೆಸ್ ನೋಡಿ ಕಲಿಯಬೇಕು. ರಾಹುಲ್ ಗಾಂಧಿ ಅಧಿಕಾರಕ್ಕೆ ಬರುತ್ತಿದ್ದಂತೆ ಮೂಲೆ ಸೇರಿದ್ದ ಹಳೆಯ ಸರಕುಗಳೆಲ್ಲ ಸೋನಿಯಾ ಮರಳಿ ಅಧಿಕಾರ ಪಡೆಯುತ್ತಿದ್ದಂತೆ ಗರಿಬಿಚ್ಚಿಕೊಂಡಿವೆ.

ರಾಹುಲ್ ಗಾಂಧಿ, ಕರ್ನಾಟಕದ ವಿಚಾರದಲ್ಲಿ ಕೆ.ಸಿ. ವೇಣುಗೋಪಾಲ್ ಮತ್ತಿತರ ಮಾತು ಕೇಳುವುದನ್ನು ಬಿಟ್ಟರೆ ಉಳಿದ ನಾಯಕರಿಗೆ ಮಣೆ ಹಾಕುತ್ತಿರಲಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಕುಟುಕು ಜೀವ ನೀಡಿದ್ದ ನಾಯಕ ಎಂಬುದನ್ನು ಅವರು ಅರಿತಿದ್ದರು. ಆದರೆ, ರಾಹುಲ್ ಗಾಂಧಿ ಪಟ್ಟದಿಂದ ಪಕ್ಕಕ್ಕೆ ಸರಿಯುತ್ತಿದ್ದಂತೆ ಹಳೆಯ ಪಟಾಲಂ ಸೋನಿಯಾ ನಿವಾಸದ ಸುತ್ತ ಸುತ್ತಾಟ ಆರಂಭಿಸಿದೆ. ಸತತ ಸೋಲುಗಳಲ್ಲೇ ಮುಳುಗೇಳುವ ನಾಯಕರಿಂದ ಹಿಡಿದು, ಸೋಲಿಲ್ಲದ ಸರದಾರರಾಗಿದ್ದರೂ ಸಂಧ್ಯಾಕಾಲದಲ್ಲಿ ಸೋತ ನಾಯಕರೆಲ್ಲ ಸೋನಿಯಾ ಗಾಂಧಿ ಕಿವಿಗೆ ಮೂಲ ಕಾಂಗ್ರೆಸ್ಸಿನ ಪಾಠ ಆರಂಭಿಸಿದ್ದಾರೆ. ತೆರೆಮರೆಗೆ ಸರಿದದ್ದ ಬಿ.ಕೆ. ಹರಿಪ್ರಸಾದ್ ಗರಿಬಿಚ್ಚಿದರೆ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ, ಜಿ.ಸಿ. ಚಂದ್ರಶೇಖರ್ ಅವರಿಗೆಲ್ಲ ಹೈಕಮಾಂಡ್ ಬಾಗಿಲು ಹತ್ತಿರವಾಗಿದೆ.

ಸೊರಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಎಷ್ಟರಮಟ್ಟಿಗೆ ಚೈತನ್ಯ ನೀಡಿದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದೇ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಅವರನ್ನು ವಿಪಕ್ಷ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂಬ ವಾದ ಇರುವ ಅರ್ಧಕ್ಕಿಿಂತ ಹೆಚ್ಚು ನಾಯಕರಿಂದ ಕೇಳಿಬಂದಿದೆ. ಆದರೆ, ಮೂಲ ಕಾಂಗ್ರೆಸ್ಸಿಗರಲ್ಲ ಎಂಬ ಒಂದೇ ಪೊಳ್ಳು ವಾದದ ಮೂಲಕವೇ ಸಿದ್ದರಾಮಯ್ಯ ಅವರಿಗೆ ವಿಪಕ್ಷ ನಾಯಕನ ಸ್ಥಾನ ತಪ್ಪಿಸಿ ಎಚ್.ಕೆ. ಪಾಟೀಲ್ ಎಂಬ ಉತ್ಸವ ಮೂರ್ತಿ ಪ್ರತಿಷ್ಠಾಪನೆಗೆ ಸಜ್ಜಾಗಿರುವುದು ಎಷ್ಟು ಸರಿ? ಅಷ್ಟಕ್ಕೂ ಎಚ್.ಕೆ. ಪಾಟೀಲ್ ಅವರ ಪಕ್ಷ ಸಂಘಟನೆ ಚಾಕಚಕ್ಯತೆ ಮತ್ತು ಬಿಜೆಪಿ ಎದುರಿಸುವ ತೋಳ್ಬಲ ಸಿದ್ದರಾಮಯ್ಯ ಅವರಿಗಿಂತ ಎಷ್ಟು ಮೇಲು ಎಂಬುದು ಕಾಂಗ್ರೆಸ್‌ಗೆ ಏನು, ಇಡೀ ರಾಜ್ಯಕ್ಕೆ ಗೊತ್ತಿದೆ. ಮುಂದೆ ಕಾಂಗ್ರೆೆಸ್ ನೆಲೆ ಉಳಿಸಿಕೊಳ್ಳಬೇಕಾದರೆ ಸಿದ್ದರಾಮಯ್ಯನಂತಹ ದಿಟ್ಟತನದ ವ್ಯಕ್ತಿತ್ವದ ನಾಯಕನ ಅವಶ್ಯಕತೆ ಇದ್ದೇ ಇದೆ. ಇದನ್ನು ಅರ್ಥ ಮಾಡಿಕೊಂಡರೆ ಕಾಂಗ್ರೆೆಸ್‌ನ ಭವಿಷ್ಯಕ್ಕೆ ಒಳ್ಳೆಯದು. ಇಲ್ಲದಿದ್ದರೆ ಕಾಂಗ್ರೆೆಸ್ ಮುಕ್ತ ಭಾರತ ಅಭಿಯಾನಕ್ಕೆ ಕಾಂಗ್ರೆಸ್ಸಿಗರೇ ಧ್ವಜ ನೆಟ್ಟಂತೆ ಎಂಬುದರಲ್ಲಿ ಎರಡು ಮಾತಿಲ್ಲ.

ಬಿಜೆಪಿ ಎದುರಿಸಲು ಸಿದ್ದರಾಮಯ್ಯಗಿಂತ ಬೇರೆ ನಾಯಕ ಬೇಕೇ?
ಸದ್ಯದ ಮಟ್ಟಿಗೆ ಸಿದ್ದರಾಮಯ್ಯ ಹೊರತುಪಡಿಸಿ ಕಾಂಗ್ರೆೆಸ್‌ನಲ್ಲಿ ಕಣ್ಣಾಡಿಸಿದರೆ ಪಕ್ಷ ಕಟ್ಟಿ ಬೆಳೆಸಲು ಕಂಕಣತೊಟ್ಟು ದುಡಿಯುವ ಛಾತಿಯುಳ್ಳ ನಾಯಕರ ಸಂಖ್ಯೆ ಬಲುಕಡಿಮೆ ಇದೆ. ಸತತ ಪ್ರಯತ್ನ ನಡೆಸಿ ಮೈತ್ರಿ ಸರಕಾರ ಬೀಳಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಎದುರಿಸಲು ಸಿದ್ದರಾಮಯ್ಯನಂತಹ ಧಾಷ್ಟ್ಯತನದ ವ್ಯಕ್ತಿಯೇ ಬೇಕು ಎಂಬುದು ರಾಜ್ಯಕ್ಕೆ ಗೊತ್ತಿರುವ ರಾಜನೀತಿ. ಆದರೆ, ಕಾಂಗ್ರೆಸ್‌ನೊಳಗಿನ ಕುಹಕಿ ಕಿವಿಕೊಳವೆಗಳು ಸಿದ್ದರಾಮಯ್ಯ ವಿರುದ್ಧ ತುತ್ತೂರಿ ಊದಿ ಕಾಂಗ್ರೆೆಸ್ ಪಕ್ಷದ ಬೂದಿ ಸಂಗ್ರಹಣಕ್ಕೆ ತಿದಿ ಹೊತ್ತಿದ್ದಾರೆ. ಉಧೋ ಎನ್ನುವವರ ಮಾತಿನ ತಾಳಕ್ಕೆ ಹೈಕಮಾಂಡ್ ಕುಣಿದರೆ ಕೈಕಾಲು ಉಳುಕುವುದಿರಲಿ, ಕುತ್ತಿಗೆ ಹೂತು ಹೋಗುವುದರಲ್ಲೂ ಅನುಮಾನವಿಲ್ಲ.

Leave a Reply

Your email address will not be published. Required fields are marked *