Wednesday, 29th June 2022

ಪ್ರೀತಿಗೆ ಇದೆ ಬೆಟ್ಟವನ್ನೇ ಪುಡಿ ಮಾಡುವ ಶಕ್ತಿ

ರಶ್ಮಿ ಹೆಗಡೆ ಮುಂಬೈ

ಪ್ರೀತಿಯೊಂದು ಸುಂದರ ಅನುಭೂತಿ. ಪ್ರೀತಿಸುವ ಹೃದಯ ಮನಸ್ಸು ಮಾಡಿದರೆ ಕಲ್ಲಿನ ಪರ್ವತವನ್ನೇ ಕಡಿದು ಪ್ರಿಯರೆದುರು ನಿಲ್ಲಿಸಲು ಸಾಧ್ಯ ಎಂಬುದಕ್ಕೆ ದಶರಥ್ ಹಾಗೂ ಫಲ್ಗುಣಿಯ ಜೀವನಗಾಥೆಯೇ ಸಾಕ್ಷಿ.

ವಿವಾಹವು ಕೇವಲ ಎರೆಡು ದಿನದ ಆಡಂಬರದ ಆಚರಣೆಯಲ್ಲ. ಜನುಮ ಜನುಮದ ಅನುಬಂಧವದು. ಎರಡು ಜೀವ, ಎರಡು ಆತ್ಮಗಳ ಪವಿತ್ರ ಬೆಸುಗೆ. ಬಡತನವೋ ಸಿರಿತನವೋ ಒಟ್ಟಾರೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ನಡೆದರೆ ಮಾತ್ರ ವೈವಾಹಿಕ ಬದುಕಿಗೊಂದು ಅರ್ಥ.

ಅಷ್ಟಕ್ಕೂ ಪರಸ್ಪರರ ಕೋರಿಕೆಗಳನ್ನು ಈಡೇರಿಸಿದರೆ ಮಾತ್ರ ಈರ್ವರಲ್ಲೂ ಪರಿಶುದ್ಧವಾದ ಪ್ರೀತಿಯಿದೆ ಎಂದಲ್ಲ. ಪತಿ ಪತ್ನಿಯ ನಡುವೆ ಎಂದು ಲೌಕಿಕ ಆಸೆ, ಆಕಾಂಕ್ಷೆಗಳೆಲ್ಲ ಗೌಣ ಎನಿಸತೊಡಗುತ್ತದೆಯೋ ಆಗ ಆ ಪ್ರೀತಿ ಸಂಪೂರ್ಣ ಎನಿಸಿಕೊಳ್ಳುತ್ತದೆ.
ರಾಜಕುಮಾರನೊಬ್ಬ ಏಳು ಸಮುದ್ರ ದಾಟಿ ತನ್ನ ರಾಣಿಗಾಗಿ ಆಕೆ ನೆಚ್ಚಿದ್ದ ಅಪರೂಪದ ಹೂವೊಂದನ್ನು ಭಯಂಕರವಾದ ಕಾಡಿನಿಂದ ಕಿತ್ತು ತಂದಿದ್ದನೆಂಬುದು ನಾವೆಲ್ಲ ಬಾಲ್ಯದಲ್ಲಿ ಕೇಳಿದ್ದ ಕತೆ.

ಪ್ರೀತಿಗಾಗಿ ಜನ ಪ್ರಾಣ ಬಿಡುವುದನ್ನು ಕೇಳಿದ್ದೇವೆ, ಸಾಧನೆ ಗೈದವರನ್ನು ನೋಡಿದ್ದೇವೆ, ಹಣದ ಮಳೆಯನ್ನೇ ಸುರಿಸಿ ಕೈಹಿಡಿ ದವಳ ಆಸೆ ಪೂರೈಸಿದಂತಹ ಅನೇಕ ಸುದ್ದಿಗಳನ್ನು ಓದಿದ್ದೇವೆ. ಸಂಗಾತಿಯ ಮರಣಾ ನಂತರ ಆಕೆಯ ಪುತ್ಥಳಿಯನ್ನೇ ಮನೆ ಯಲ್ಲಿ ಸ್ಥಾಪಿಸಿದ ಸುದ್ದಿಯನ್ನೂ ಸಹ ಕೇಳಿದ್ದೇವೆ. ಆದರೆ ಈ ವ್ಯಕ್ತಿಯ ಪ್ರೀತಿಯ ಕತೆ ಮಾತ್ರ ಅಸಾಮಾನ್ಯವಾದದ್ದು.

ಕೈಯಲ್ಲಿ ಹಣವಿಲ್ಲದಿದ್ದರೂ, ವಿದ್ಯೆ ಉದ್ಯೋಗಗಳಿಲ್ಲವಾದರೂ, ದಾಂಪತ್ಯ ವಿದ್ಯೆಯನ್ನರಿತು, ಪತ್ನಿಯ ಬಗ್ಗೆ ಅದಮ್ಯ ಪ್ರೀತಿ ಇರಿಸಿದ್ದ ದಶರಥ್ ಮಾಂಝಿಯ ಕತೆ ಎಷ್ಟು ರೋಚಕವೋ ಅಷ್ಟೇ ಸ್ಪೂರ್ತಿದಾಯಕ. ಉqಛ್ಟಿqsಠಿeಜ್ಞಿಜ ಜಿo Zಜ್ಟಿ ಜ್ಞಿ ಔಟqಛಿ Zb ಡಿZ ಎನ್ನುವುದು ಅದೆಷ್ಟು ಸತ್ಯ ಎಂಬುದಕ್ಕೆ ಇವರೀರ್ವರ ಜೀವನಗಾಥೆಯೇ ಸಾಕ್ಷಿ.

ಕುಗ್ರಾಮಕ್ಕೆ ಅಡ್ಡವಾದ ಗುಡ್ಡ
ಈ ಪ್ರೇಮ ಕತೆ ೧೯೫೮ರ ಸಮಯದ್ದು. ಆತನ ಹೆಸರು ದಶರಥ ಮಾಂಝಿ. ಬಿಹಾರದ ಗಯಾ ಸಮೀಪದ ಗಹರ್ಲೌ ಗ್ರಾಮದ ಹಿಂದುಳಿದ ಆದಿವಾಸಿ ಜನಾಂಗಕ್ಕೆ ಸೇರಿದ್ದ ಬಡ ಕಾರ್ಮಿಕ. ಪತ್ನಿಯ ಹೆಸರು ಫಲ್ಗುಣಿ ದೇವಿ. ಗಹಲೌರ್ ಕಲ್ಲಿನ ಪರ್ವತದ ಕೆಳಗಿದ್ದ ಆ ಹಳ್ಳಿಯಲ್ಲಿ ನೀರು, ವಿದ್ಯುತ್, ಆಸ್ಪತ್ರೆ, ವಾಹನ ಹಾಗೂ ಶಾಲೆಯಂತಹ ಮೂಲ ಸೌಕರ್ಯವೂ ಇರಲಿಲ್ಲ. ಪೇಟೆಗೆ ಹೋಗಬೇಕೆಂದರೆ ಗುಡ್ಡದಾಟಿ ೫೫ ಕಿ.ಮೀ. ಕ್ರಮಿಸಬೇಕಿತ್ತು.

ಆ ಹಳ್ಳಿಗೆ ಅದೊಂದು ಗುಡ್ಡ ಅಡ್ಡಲಾಗಿ ತಲೆ ಎತ್ತಿತ್ತು. ಆ ಗುಡ್ಡ ಇರದಿದ್ದರೆ ಪೇಟೆ ಕೇವಲ ೧೩ ಕಿ.ಲೋ. ಮೀಟರ್ ದೂರವಷ್ಟೇ. ಪರ್ವತದಾಚೆ ಬೇರೆಯವರ ಹೊಲದಲ್ಲಿ ಕೂಲಿ ಮಾಡುತ್ತಿದ್ದವನಿಗೆ ಪ್ರತಿದಿನ ಮಧ್ಯಾಹ್ನ ಉರಿ ಬಿಸಿಲಿನಲ್ಲಿ, ಕಲ್ಲು ದಾರಿಯಲ್ಲಿ ಎತ್ತರದ ಗುಡ್ಡ ಹತ್ತಿ ಪತ್ನಿ ಫಲ್ಗುಣಿ ಊಟದ ಗಂಟನ್ನು ಹೊತ್ತು ತರುತ್ತಿದ್ದಳು. ಒಂದು ದಿನ ಆಕೆ ಊಟ ತರುವಾಗ ಗುಡ್ಡದಿಂದ ಜಾರಿಬಿದ್ದು ತೀವ್ರವಾಗಿ ಗಾಯಗೊಂಡಳು. ಊಟದ ಗಂಟಿನ ಜೊತೆ ದಂಪತಿಯ ಕನಸೂ ಸಹ ಛಿದ್ರಗೊಂಡಿತ್ತು.

ಮಕ್ಕಳು ತಾಯಿಯಿಲ್ಲದ ತಬ್ಬಲಿಯಾದರು. ಆಸ್ಪತ್ರೆಗೆ ಸಾಗಿಸಲು ಬರೋಬ್ಬರಿ ೫೫ ಕಿ.ಮೀ. ಕ್ರಮಿಸಬೇಕಾದ್ದರಿಂದ ಆಕೆಗೆ ಸರಿಯಾದ ಸಮಯಕ್ಕೆ ಚಿಕಿತ್ಸ ದೊರಕದೆ ೧೯೫೯ ರಲ್ಲಿ ಮರಣಹೊಂದಿದಳು. ಪತ್ನಿಯನ್ನು ಈ ರೀತಿಯಲ್ಲಿ ಕಳೆದುಕೊಂಡ ನೋವು, ಹತಾಶೆ ಆತನನ್ನು ಕಾಡಲಾರಂಭಿಸಿತು. ಈ ನೋವು, ಹತಾಶೆ ದಶರಥನಲ್ಲಿ ಒಂದು ಹೊಸ ಕಿಚ್ಚನ್ನು ಹೊತ್ತಿಸಿತ್ತು. ಒಬ್ಬ ಗಂಡನಾಗಿ ಪತ್ನಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆಯನ್ನೂ ಕೊಡಿಸಲಾಗ ದಂಥ ತನ್ನ ಪರಿಸ್ಥಿತಿ ಇನ್ನು ಈ ಹಳ್ಳಿಯಲ್ಲಿ ಇನ್ಯಾರಿಗೂ ಬರಬಾರದೆಂಬ ಪಣತೊಟ್ಟ.

ಪ್ರೀತಿಯ ಶಕ್ತಿ
ಕೇವಲ ಒಂದು ಉಳಿ ಹಾಗೂ ಸುತ್ತಿಗೆ ಹಿಡಿದು ೩೬೦ ಅಡಿಯ ಎತ್ತರದ ಕಲ್ಲಿನ ಪರ್ವತವನ್ನು ತಾನೊಬ್ಬನೇ ಕಡಿದು, ಅದರ
ನಡುವೆ ಒಂದು ಪುಟ್ಟ ರಸ್ತೆ ಮಾಡಲು ಪ್ರಾರಂಭಿಸಿದ. ಮೊದಮೊದಲು ಜನರು ಆತನನ್ನು ಹುಚ್ಚನೆಂದು ಗೇಲಿ ಮಾಡಿದರು.
ಆ ನಿಂದನೆಗಳನ್ನೆಲ್ಲ ಸ್ಪೂರ್ತಿದಾಯಕವಾಗಿ ಸ್ವೀಕರಿಸಿದ ಆತನ ತಲ್ಲೀನತೆ, ಪರಿಶ್ರಮ, ಜಿದ್ದನ್ನು ಅರಿತ ಅದೇ ಜನ ನಂತರ
ಹೊಗಳಿ ಕೊಂಡಾಡಿದರು. ತನ್ನ ಪ್ರೀತಿಯ ಪತ್ನಿಯನ್ನು ದೂರ ಮಾಡಿದ ಗುಡ್ಡವನ್ನು ಒಡೆದೇ ತೀರುವೆನೆಂದು ಪ್ರತಿಜ್ಞೆ ಮಾಡಿ ದವನಿಗೆ ರಾತ್ರಿ, ಹಗಲು, ಹಸಿವು, ಮಳೆ ಗಾಳಿಯ ಪರಿವೆಯೇ ಇರುತ್ತಿರಲಿಲ್ಲ.

ವರ್ಷ ೧೯೬೦ ರಿಂದ ೧೯೮೨ ರವರೆಗೆ ಸತತವಾಗಿ ಕಾರ್ಯಮಗ್ನನಾದ ಈತ ಒಬ್ಬನೇ ಆ ಬೃಹತ್ ಪರ್ವತವನ್ನು ಕಡಿದು ದಾರಿ ಮಾಡುವಲ್ಲಿ ಯಶಸ್ವಿಯಾದ. ೩೬೦ ಅಡಿ ಎತ್ತರ, ಇಪ್ಪತ್ತೈದುದು ಅಡಿ ಆಳ ಹಾಗೂ ೩೦ ಅಡಿ ಅಗಲದ ರಸ್ತೆಯನ್ನು ಒಬ್ಬಂಟಿ ಯಾಗಿ ಕಡಿದು ಮುಗಿಸಿದ ದಶರಥ್ ಮಾಂಝಿಯಿಂದ ಊರಿಗೆ ರಸ್ತೆ ಸೌಲಭ್ಯ ದೊರಕಿತು.

ಪರ್ವತದ ಇನ್ನೊಂದು ಮುಖದಲ್ಲಿದ್ದ ಗಯಾ ಪಟ್ಟಣ ಈಗ ೫೫ ಕಿಲೋಮೀಟರ್ ನಿಂದ ಒಮ್ಮೆಗೇ ೧೩ ಕಿ.ಮೀ. ನಷ್ಟು ಹತ್ತಿ ರದಲ್ಲಿ ಕೈಗೆಟುಕಿತು. ಜನರು ಹಾಗೂ ವಾಹನ ಸಂಚಾರ ಸುಲಭವಾಯಿತು. ತನ್ನ ಪತ್ನಿಗೆ ಈ ರೀತಿಯದರೂ ಪ್ರೀತಿಯ ಋಣ ತೀರಿಸಿದ ಸಮಾಧಾನ ಆತನಲ್ಲಿತ್ತು. ಇನ್ನು ತನ್ನ ಹಳ್ಳಿಯ ಯಾವ ವ್ಯಕ್ತಿಯೂ ಮೂಲಭೂತ ಸೌಲಭ್ಯಗಳಿಂದ ವಂಚಿತನಾಗ ಲಾರನೆಂಬ ಸಂತೋಷ ಆತನ ಶ್ರಮಕ್ಕೆ ಪ್ರತಿಫಲ ನೀಡಿತ್ತು. ವರ್ಷ ೨೦೦೭ ರಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ದಶರಥ್ ಮಾಂಝಿ ತನ್ನ ೭೩ ನೇ ವಯಸ್ಸಿಗೆ ಇಹಲೋಕ ತ್ಯಜಿಸಿ, ತನ್ನ ಪತ್ನಿಯನ್ನು ಸೇರಿಕೊಂಡ.

ಕಲ್ಲುದಾರಿಯ ಸಾಕ್ಷ್ಯಚಿತ್ರ

ಆತನ ಜೀವನ ಚರಿತ್ರೆಯನ್ನು ಹಲವು ಭಾಷೆಯಲ್ಲಿ ಸಿನಿಮಾ ಹಾಗೂ ಡಾಕ್ಯುಮೆಂಟರಿ ಮಾಡಲಾಯಿತು. ಅಂದಿನ ರಾಜ್ಯ
ಸರಕಾರ ಆತನನ್ನು ಪುರಸ್ಕಾರಗಳಿಂದ ಗೌರವಿಸಿತು. ಭಾರತೀಯ ಅಂಚೆ ಆತನ ಭಾವಚಿತ್ರವುಳ್ಳ ಅಂಚೆಚೀಟಿಯನ್ನು ಬಿಡುಗಡೆ ಮಾಡಿತ್ತು. ದೇಶದೆಡೆ ಮೌಂಟೇನ್ ಮ್ಯಾನ್ ಆಫ್ ಇಂಡಿಯಾ ಎಂದು ಜನಪ್ರಿಯನಾದ. ಪ್ರೀತಿಯೊಂದು ಸುಂದರ ಅನುಭೂತಿ. ಪ್ರೀತಿಸುವ ಹೃದಯ ಮನಸ್ಸು ಮಾಡಿದರೆ ಕಲ್ಲಿನ ಪರ್ವತವನ್ನೇ ಕಡಿದು ಪ್ರಿಯರೆದುರು ನಿಲ್ಲಿಸಲು ಸಾಧ್ಯ ಎಂಬುದಕ್ಕೆ ದಶರಥ್
ಹಾಗೂ ಫಲ್ಗುಣಿಯ ಜೀವನಗಾಥೆಯೇ ಸಾಕ್ಷಿ.

ಸೌಂದರ್ಯ, ಹಣ, ಆಸ್ತಿ ಮೊದಲಾದವುಗಳನ್ನು ಮೀರಿ, ಅಸಾಧ್ಯವಾದುದನ್ನೋ ಸಾಧಿಸಿ ತೋರಿಸುವ ಶಕ್ತಿ ಪ್ರೀತಿಗಿದೆ. ಕೇವಲ ಹಣ, ಅಧಿಕಾರ, ಸೌಂದರ್ಯ, ಲೌಕಿಕ ಸುಖಕ್ಕಷ್ಟೇ ಬೆಲೆ ಕೊಡದೆ ಮನಸ್ಸಿನಲ್ಲಿರುವ ಆಳವಾದ ಪ್ರೀತಿಯನ್ನು ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ನಡೆದಾಗ ಆ ಪ್ರೀತಿಯು ಹೊಸ ಕ್ರಾಂತಿಯನ್ನಷ್ಟೇ ಅಲ್ಲದೆ, ಹೊಸ ಇತಿಹಾಸವನ್ನೂ ಸೃಷ್ಟಿಸಬಲ್ಲದು. ದಾಂಪತ್ಯವೆಂಬ ಪರಿಶುದ್ಧ ಸಂಬಂಧಕ್ಕೆ ಪ್ರೀತಿ, ತ್ಯಾಗವೆಂಬ ಬಣ್ಣ ತೋಕಿದಾಗ, ಬದುಕೆಂಬ ಚಿತ್ರ ಸುಂದರವಾಗಿ ಮೂಡ ಬಲ್ಲದು.