Friday, 27th May 2022

ಮಳೆನಾಡಿನ ಚಿರಾಪುಂಜಿ

*ಡಾ|| ಕೆ.ಎಸ್. ಪವಿತ್ರ

ನಮ್ಮ ಮಲೆನಾಡಿನ ಹಸಿರು, ಹೂವು, ಹಣ್ಣುಗಳು, ಜಪಾತಗಳು ಇನ್ನೆಲ್ಲಿ ಸಿಗಲು ಸಾಧ್ಯ ಎಂದರೆ ಉತ್ತರ ಮೇಘಾಲಯ. ಮಳೆಗಾಲದಲ್ಲಿ ಮೇಘಾಲಯ ಪ್ರವಾಸ ಮಾಡಿದ ಲೇಖಕಿಯ ಅನುಭವ ಕಥನದ ಎರಡನೆಯ ಭಾಗ ಇಲ್ಲಿದೆ.

ಮೇಘಾಲಯದಲ್ಲಿರುವ ಶಿಲ್ಲಾಂಗ್ ಬೆಟ್ಟಗುಡ್ಡಗಳ ನಗರ. ಇಲ್ಲಿನ ಪೆÇೀಲೀಸ್ ಬಜಾರ್ ಎಂಬ ದೊಡ್ಡ ಬೀದಿ ಮಾರುಕಟ್ಟೆ ಪ್ರಮುಖ ಶಾಪಿಂಗ್ ಕೇಂದ್ರ. ಸುತ್ತಮುತ್ತಲ ರಾಜ್ಯಗಳ ಎಲ್ಲವೂ ಇಲ್ಲಿ ಲಭ್ಯ. ಬಟ್ಟೆ, ಪರ್ಸು, ಸೀರೆ, ಹಣ್ಣು, ಹೂವು, ಗಿಡ, ಬಿದಿರಿನ ವಿವಿಧ ಕರಕುಶಲ ವಸ್ತುಗಳ ಸರ, ಬಳೆ ಎಲ್ಲವೂ ಸಿಕ್ಕುತ್ತವೆ. ಆದರೆ ಚೌಕಾಸಿ ಮಾಡುವ ಕುಶಲತೆ ಬೇಕು. ಶಿಲ್ಲಾಂಗ್‍ನ ಮಹಿಳೆಯರು ಧರಿಸುವ ಸರಳ ಉಡುಗೆ `ಜೆನ್‍ಸೆಮ್’ ಒಳಗೆ ಪ್ಯಾಂಟು, ಚೂಡಿದಾರ್, ಸ್ಕರ್ಟು ಏನು ಹಾಕಿಯೂ, ಮೇಲೆ ಎರಡು ಬಟ್ಟೆ ತುಂಡುಗಳನ್ನು, ಬಲ-ಎಡ ಭುಜಗಳ ಮೇಲೆ ಪಿನ್ನು ಹಾಕಿದರೆ `ಜೆನ್‍ಸೆಮ್’ ಆಗಿಬಿಡುತ್ತದೆ. `ಜೆನ್‍ಸೆಮ್’ ನ ವಿವಿಧ ರೂಪಗಳು, ಪಕ್ಕದ ಅಸ್ಸಾಂನ `ಮೇಖಲಾ’ ಚದ್ದರ್ ಎಂಬ ಸೀರೆ ಇವು ಈ ಮಾರುಕಟ್ಟೆಯಲ್ಲಿ ಲಭ್ಯ.

ಬಡಾ ಬಜಾರ್ ಎಂಬ ತರಕಾರಿ-ಹಣ್ಣುಗಳ ಮಾರುಕಟ್ಟೆಯಲ್ಲಿ ಸುತ್ತಮುತ್ತಲ ಹಳ್ಳಿಗಳ ಆದಿವಾಸಿ ಮಹಿಳೆಯರು ತರಕಾರಿ-ಹಣ್ಣು-ಹಾಲಿನ ಉತ್ಪನ್ನಗಳು-ಮಾಂಸದ ತಿನಿಸುಗಳನ್ನು ಮಾರಾಟ ಮಾಡುತ್ತಾರೆ. ಬೆಳಿಗ್ಗೆ ಬೇಗ ಆರಂಭವಾಗುವ ಮಾರುಕಟ್ಟೆ ಇಲ್ಲಿನ ಸಾಂಸ್ಕøತಿಕ ವೈವಿಧ್ಯವನ್ನು ನಮ್ಮ ಮುಂದೆ ತೆರೆಯುತ್ತದೆ. ಶಿಲ್ಲಾಂಗ್‍ನಿಂದ ಸುಮಾರು 15 ಕಿ.ಮೀ. ದೂರದಲ್ಲಿ ಬರಾ ಪಾನಿ ಎಂಬ ದೊಡ್ಡ ಸರೋವರವಿದೆ. ಇಲ್ಲಿಯೂ ಬೋಟಿಂಗ್, ಜಲಸಾಹಸ ಕ್ರೀಡೆಗಳು ಲಭ್ಯ.

ಘೇಂಡಾ ಮೃಗಗಳು ಈ ಪ್ರದೇಶದಲ್ಲಿ ಹೆಚ್ಚೆಂದು ನಮಗೆ ಗೊತ್ತಿತ್ತು. ಹಾಗಾಗಿ `ರೈನೋ ಹೆರಿಟೇಜ್ ಮ್ಯೂಸಿಯಂ’ ಎಂಬುದು ಘೇಂಡಾಮೃಗಗಳಿಗೆ ಸಂಬಂಧಪಟ್ಟ ಮಾಹಿತಿ ಕೇಂದ್ರವೇ ಎಂಬುದು ನಮ್ಮ ಭಾವನೆ. ಅದಕ್ಕೆ ಸರಿಯಾಗಿ ಸಂಗ್ರಹಾಲಯದ ಮುಂದೆ ದೊಡ್ಡ ಘೇಂಡಾಮೃಗದ ಕಲಾಕೃತಿ ಬೇರೆ. ಹೊರಗೆ ನಿಂತಿದ್ದ ಮಿಲಿಟರಿ ಕಾವಲುಗಾರ ಬಾಗಿಲು ತೆಗೆದು ಒಳಗೆ ಬಿಟ್ಟ. ಅಲ್ಲಿ ಘೇಂಡಾ ಮೃಗದಷ್ಟೇ ಬಲಶಾಲಿ-ಧೈರ್ಯಶಾಲಿಗಳಾದ ನಮ್ಮ ಭಾರತೀಯ ಸೈನ್ಯದ ಈಶಾನ್ಯ ರೆಜಿಮೆಂಟುಗಳ ಇತಿಹಾಸವಿತ್ತು! ಯುದ್ಧ ಮಾಡುತ್ತಾ ವೀರ ಮರಣ ಹೊಂದಿದ ಸೈನಿಕರ ನಿಜಜೀವನ ಪ್ರಸಂಗಗಳನ್ನು ಓದುವುದೇ ಒಂದು ರೋಚಕ ಅನುಭವ. ಈ ಕಟ್ಟಡ 1928ರಲ್ಲಿ ಜಪಾನಿ ಸೆರೆಯಾಳುಗಳ ಬಂದೀಕಾನೆಯಾಗಿತ್ತು. ಶತ್ರುಗಳಿಂದ ವಶಪಡಿಸಿಕೊಂಡ ರೈಫಲ್ -ಗ್ಯಾಡ್ಜೆಚ್‍ಗಳನ್ನು ಇಲ್ಲಿ ನೋಡಿದೆವು.

ಚಿರಾಪುಂಜಿಯಲ್ಲಿ ಬಿಳೀ ನೀರ ಧಾರೆ


`ಚೆರ್ರಾಪುಂಜಿ’ ಅಥವಾ ನಮ್ಮೆಲ್ಲರಿಗೂ ಕರೆದು ರೂಢಿಯಾಗಿರುವಂತೆ `ಚಿರಾಪುಂಜಿ’ ಭೂಮಿಯ ಮೇಲಿರುವ ಅತ್ಯಂತ ತೇವಾಂಶದ ಸ್ಥಳ. ಸ್ಥಳೀಯವಾಗಿ ಚಿರಾಪುಂಜಿಯನ್ನು ಜನರು ಕರೆಯುವುದು `ಸೊಹ್ಯಾ’ ಎಂದು. ಚೆರ್ರಾಪುಂಜಿಯ ಪಕ್ಕದಲ್ಲೇ ಇರುವ `ಮಾಸಿನ್ರಮ್’ ಈ ಚಿರ್ರಾಪುಂಜಿಗಿಂತ ಹೆಚ್ಚು ತೇವಾಂಶ ದಾಖಲಿಸಿದೆ. `ಕಿತ್ತಳೆಗಳ ನಾಡು’ ಎಂಬ ಅರ್ಥದಲ್ಲಿ ಈ ಹೆಸರು ಬಂತು ಎನ್ನುತ್ತಾರೆ. ಹಾಗೆಯೇ ಸ್ಥಳೀಯರು ಕರೆಯುತ್ತಿದ್ದ `ಸೊ-ಹ್ರಾ’ ಪದವನ್ನು ಬ್ರಿಟಿಷರು `ಚುರ್ರಾ’ ಎಂದು ಅದೇ ಕ್ರಮೇಣ ಚಿರಾಪುಂಜಿಯಾಗಿರಬೇಕು ಎಂದೂ ಹೇಳುತ್ತಾರೆ.

ಚಿರಾಪುಂಜಿಗೆ ಪಯಣಿಸುವ ರಸ್ತೆಯಲ್ಲಿಯೇ ಅಲ್ಲಲ್ಲಿ ವ್ಯೂಪಾಯಿಂಟ್‍ಗಳನ್ನು ಮಾಡಿಟ್ಟಿದ್ದಾರೆ. ಎತ್ತರೆತ್ತರಕ್ಕೆ ಏರಿದರೂ, ಬೆವರಿಳಿಯುವ ಸೆಕೆಯ ವಾತಾವರಣ, ಕೈಗೆ ಸಿಕ್ಕುವಂತೆ ಮೋಡಗಳ ರಾಶಿ. ಹಸಿರು ದಟ್ಟವಾಗಿದೆ. ಗುಟ್ಟ-ಬೆಟ್ಟಗಳ ಶ್ರೇಣಿಗಳಲ್ಲಿ ಲೆಕ್ಕವಿಲ್ಲದಷ್ಟು ಜಲಪಾತಗಳು. ಇದ್ದಕ್ಕಿದ್ದಂತೆ ಮೋಡ ಮುಸುಕಿ ಮಾಯವಾಗುವ ಜಲಪಾತಗಳು. `ಅಯ್ಯೋ ಕಾಣಿಸುವುದಿಲ್ಲ’ ಎಂದು ಬೇಸರಿಸಿ ಇನ್ನೇನು ಹೊರಡಬೇಕು, ಆಗ ಇದ್ದಕ್ಕಿದ್ದಂತೆ ಮೋಡ ಚೆದುರಿ ಪ್ರತ್ಯಕ್ಷವಾಗುವ ಬಿಳೀ ನೀರ ಧಾರೆ!

ಚೆರ್ರಾಪುಂಜಿಗೆ ಹೋಗುವ ದಾರಿಯಲ್ಲಿಯೇ `ಎಲಿಫೆಂಟಾ ಜಲಪಾತ’ ಸಿಕ್ಕುತ್ತದೆ. ಮೂರು ಹಂತಗಳಲ್ಲಿ ಜಲಧಾರೆ ಕಾಣಸಿಗುವ ವಿಶಿಷ್ಟ ಜಲಪಾತವಿದು. ಬ್ರಿಟಿಷರು ನೋಡಿದಾಗ ಜಲಪಾತದ ಒಂದು ಪಕ್ಕದಲ್ಲಿ ಆನೆಯ ಆಕಾರದ ಬಂಡೆಯಿತ್ತು. ಹಾಗಾಗಿ ಅವರು ಇಟ್ಟ ಹೆಸರು `ಎಲಿಫೆಂಟಾ ಜಲಪಾತ’. 1897ರಲ್ಲಿ ಆದ ಭೂಕಂಪ ಆ ಕಲ್ಲನ್ನು ಪುಡಿಪುಡಿ ಮಾಡಿತಂತೆ. ಅದಾದ ಮೇಲೆ ಖಾಸೀ ಭಾಷೆಯಲ್ಲಿ ಇಟ್ಟ ಹೆಸರು `ಕಾ ಕ್ಷ್ಯೆದ್ ಲೆಯ್ ಪಚೆಂಗ್ ಖೋಹ್ಸಿಯು’ ಎಂಬ ಹೆಸರನ್ನು ಸುಲಭವಾಗಿ ಹೇಳಲು ಸಾಧ್ಯವೇ ಇಲ್ಲ. ಹಾಗಾಗಿ `ಎಲಿಫೆಂಟಾ ಫಾಲ್ಸ್’ ಎಂಬ ಹೆಸರೇ ಉಳಿದುಕೊಂಡಿದೆ. ಮೂರೂ ಹಂತಗಳಿಗೂ ಇಳಿದು ಜಲಪಾತದ ಸೌಂದರ್ಯ ಸವಿಯಬಹುದು. ಜಲಪಾತಕ್ಕೆ ಇಳಿಯುವಲ್ಲಿ ಮೇಘಾಲಯದ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಧರಿಸಿ ಫೆÇೀಟೋ ತೆಗೆದುಕೊಳ್ಳಬಹುದು.

ಚೆರ್ರಾಪುಂಜಿಯ ಮೋಡಗಳ ಒಳಕ್ಕೆ ಪಯಣಿಸುತ್ತಾ ಸಾಗುವ ಅನುಭವ ವಿಶಿಷ್ಟ. ಹಾಗೆ ತೇಲುತ್ತಾ ಸಾಗಿದಂತೆ ಸಿಕ್ಕುವ ಇನ್ನೊಂದು ಜಲಪಾತ `ಸೆವೆನ್ ಸಿಸ್ಟರ್ಸ್ ಫಾಲ್ಸ್’ – ಏಳು ಸೋದರಿಯರ ಜಲಪಾತ.

ಈಶಾನ್ಯದ ಏಳು ರಾಜ್ಯಗಳನ್ನು ಪ್ರತಿನಿಧಿಸಲೋ ಎಂಬಂತೆ ಪ್ರಕೃತಿಯೇ ನಿರ್ಮಿಸಿರುವ ಜಲಪಾತದ ಗೊಂಚಲು ಇದು. ಮಳೆಯಲ್ಲಿ ಮತ್ತೂ ಮೈದುಂಬಿ ಹರಿದರೂ, ಮೋಡಗಳಿಂದ ಆವೃತವಾಗಿರುವ ಸಾಧ್ಯತೆಯೂ ಹೆಚ್ಚು. ಆದರೂ ಸಹನೆಯಿಂದ ಕಾದು ಕುಳಿತರೆ ಪ್ರಕೃತಿಮಾತೆ ತನ್ನ ಮಕ್ಕಳ ದರ್ಶನ ಮಾಡಿಸದೆ ಬಿಡಳು! ಚೆರ್ರಾಪುಂಜಿಯ ಸುತ್ತಮುತ್ತ ಅಲ್ಲಲ್ಲಿ ಬಂಡೆಗಳು ಕೆಳಮಟ್ಟದ ನೀರಿನ ತಾಣಗಳು ಕುಳಿತುಕೊಳ್ಳಲು, ಮಕ್ಕಳು ಆಟವಾಡಲು ಸಾಧ್ಯವಾಗುವಂತೆ ಇವೆ. ಮೋದಿಯವರ ಸ್ವಚ್ಛತಾ ಅಭಿಯಾನದ ಫಲವಾಗಿ ಸ್ವಚ್ಚತೆ ಬಹುಮಟ್ಟಿಗೆ ಕಾಣುತ್ತದೆ. ಅಷ್ಟೇ ಅಲ್ಲ, ಎಲ್ಲೆಡೆ 5ರೂ. ಅಥವಾ 10ರೂ. ಕೊಟ್ಟರೆ ಸ್ವಚ್ಚವಾದ ಶೌಚಾಲಯಗಳು ಲಭ್ಯ.

ಮೇಘಾಲಯದ ಗುಹೆಗಳಲ್ಲಿ ….


ಮೇಘಾಲಯದ ಜೈನ್ಷಿಯಾ, ಖಾಸಿ ಮತ್ತು ಗ್ಯಾರೋ ಬೆಟ್ಟಗಳಲ್ಲಿ ನೂರಾರು ಗುಹೆಗಳಿವೆ. ಭಾರತದ ಅತಿ ಆಳವಾದ ಮತ್ತು ಉದ್ದವಾದ ಹತ್ತು ಗುಹೆಗಳಲ್ಲಿ ಮೊದಲ 9 ಇರುವುದು ಮೇಘಾಲಯದಲ್ಲಾದರೆ, ಉಳಿದ ಇನ್ನೊಂದು ಮಿಜೋರಾಂನಲ್ಲಿ ಇದೆ.
ಮೇಘಾಲಯದ ಅಡ್ವೆಂಚರ್ಸ್ ಅಸೋಸಿಯೇಷನ್ ಎಂಬ ಸಂಸ್ಥೆ ಗುಹೆಗಳ ಪ್ರವಾಸ-ಅಧ್ಯಯನವನ್ನು ಪೆÇ್ರೀತ್ಸಾಹಿಸುತ್ತದೆ. ಭೂಮಿಯ ಒಳಗೆ ಅಂತರ್ಗತವಾಗಿರುವ ಇನ್ನೂ ನೂರಾರು ಗುಹೆಗಳು ಮೇಘಾಲಯದಲ್ಲಿ ಇವೆಯಂತೆ. `ಮಾವ್‍ಸ್ಮೈ’ ಎಂಬ ಗುಹೆ ನಮ್ಮಂಥ `ಅರೆಸಾಹಸಿ’ ಪ್ರವಾಸಿಗರಿಗೆ ಸುಲಭ. ಶಿಲ್ಲಾಂಗ್‍ನಿಂದ 57 ಕಿ.ಮೀ. ದೂರದ ಸೊಹ್ರಾ (ಚಿರ್ರಾಪುಂಜಿ) ಯ ಹತ್ತಿರದ `ಮಾವ್‍ಸ್ಮೈ’ ಹಳ್ಳಿಯಲ್ಲಿ ಈ ಗುಹೆಯಿದೆ.

ಗುಹೆಯನ್ನು ಪ್ರವೇಶಿಸಲು 20 ರೂಪಾಯಿನ ಟಿಕೆಟ್ ಪಡೆದು ಹೋಗಬೇಕು. ಗುಹೆಯಲ್ಲಿ ಅಂತರ್ಜಲ ಜಿನುಗುತ್ತಲೇ ಇರುವುದರಿಂದ, ಪಾಚಿ, ನಿಂತ ನೀರು ಇವೆಲ್ಲದರಿಂದ ಕಾಲು ಜಾರಬಹುದು, ಹಾಗಾಗಿ `ಚಪ್ಪಲಿ ಇಲ್ಲೇ ಬಿಡಿ’ ಎಂದು ಕಾವಲುಗಾರ ನಮ್ಮನ್ನು ಎಚ್ಚರಿಸಿದ. ಗುಹೆಯ ಒಳಗೆ ದೀಪಗಳನ್ನು ಅಳವಡಿಸಿದ್ದಾರೆ. ಉಳಿದ ಗುಹೆಗಳಿಗೆ ಇರುವ ಕೊಂಡಿ ದಾರಿಗಳನ್ನು `ನಿಷೇಧ’ ಎಂದು ಗುರುತಿಸಿದ್ದಾರೆ. ಹಾಗಾಗಿ ಕಳೆದುಹೋಗುವ ಭಯವಿಲ್ಲ. ಗುಹೆಯ ಗೋಡೆಗಳ ಮೇಲೆ ಪ್ರಕೃತಿಯ ಕೈಚಳಕದಿಂದ ಹಲವು ಆಕೃತಿಗಳು -ಹಳೆಯ ಪಳೆಯುಳಿಕೆಗಳು ಕಂಡುಬರುತ್ತವೆ.

                                            ಬೇರುಗಳ ಸೇತುವೆ ಎಂಬ `ಲಿವಿಂಗ್ ರೂಟ್ ಬ್ರಿಡ್ಜ್’


ಮೇಘಾಲಯದ ಜನರು ನಿಜಾರ್ಥದಲ್ಲಿ `ಪ್ರಕೃತಿಯ ಶಿಶು’ಗಳು. ಇಲ್ಲಿರುವ ವಿಶಿಷ್ಟ `ಬೇರುಗಳು ಸೇತುವೆ’ ಅದಕ್ಕೊಂದು ಉತ್ತಮ ನಿದರ್ಶನ. `ಡಬ್ಬಲ್ ಡೆಕ್ಕರ್’ ಮತ್ತು `ಲಿವಿಂಗ್ ರೂಟ್ ಬ್ರಿಡ್ಜ್’ ಎಂಬ ಎರಡು ನೋಡಲೇಬೇಕಾದ ಸ್ಥಳಗಳಿವೆ. ಒಂದು ಜಾತಿಯ ಅಂಜೂರ/ ರಬ್ಬರ್ ಮರಗಳ ದೊಡ್ಡ, ಉದ್ದ, ಹರಿಡಿಕೊಳ್ಳುವ ಬೇರುಗಳನ್ನು ನದಿಯ ಒಂದು ಪಕ್ಕದಿಂದ, ಇನ್ನೊಂದು ಪಕ್ಕಕ್ಕೆ ಸೇತುವೆಯಂತೆ ಬೆಳೆಸುತ್ತಾರೆ.

 

ಮರ ಆರೋಗ್ಯವಾಗಿ, ಜೀವಂತವಿರುವವರೆಗೂ ಈ ಬೇರುಗಳೂ ಹರಡಿಕೊಳ್ಳುತ್ತಾ, ಗಟ್ಟಿಯಾಗುತ್ತವೆ. ಸೇತುವೆಯೂ ಭದ್ರವಾಗಿಯೇ ಇರುತ್ತದೆ. ಅಂದರೆ ಈ ಸೇತುವೆಗಳು ಕಟ್ಟಲ್ಪಡುವುದಿಲ್ಲ! ಅವುಗಳನ್ನು ಬೆಳೆಸಲಾಗುತ್ತದೆ! ಹೀಗೆ ಒಂದರ ಮೇಲೊಂದು ಸೇತುವೆ ಉಂಟಾಗಿರುವುದನ್ನೇ `ಉಮ್‍ಶಿಯಾಂಗ್ ಡಬ್ಬಲ್ ಡೆಕ್ಕರ್ ರೂಟ್ ಬ್ರಿಡ್ಜ್’ ನಲ್ಲಿ ನೋಡಬಹುದು. ಮಳೆಯ ನಾಡಿನಲ್ಲಿ ತೇವಾಂಶದಿಂದ ಮರದ – ಕಬ್ಬಿಣದ ಸೇತುವೆಗಳು ಹಾಳಾಗುವುದನ್ನು ತಡೆಯಲು ಇದು ಒಂದು ಉಪಾಯ.

ಚಿರಾಪುಂಜಿಯ ಸುತ್ತಮುತ್ತ ಸುಮಾರು 11 ಈ ರೀತಿಯ ಜೀವಂತ ಬೇರುಗಳ ಸೇತುವೆಗಳಿವೆ. ಕೆಲವು ಕಿಲೋಮೀಟರ್ ನಡೆಯಲು ಸಿದ್ಧವಿದ್ದರೆ ಪ್ರಕೃತಿಯನ್ನು ಇನ್ನಷ್ಟು ಸವಿಯಬಹುದು. ಚೆರ್ರಾಪುಂಜಿಯಿಂದ ಸ್ವಲ್ಪ ದೂರವಿರುವ ಮಾವ್‍ಲಿನ್‍ನಾಂಗ್ ಸೇತುವೆ ಸುಲಭವಾಗಿ ಎಲ್ಲರಿಗೂ ನಡೆಯಲು ಸಾಧ್ಯವಿರುವಂಥದ್ದು. ಸುಮಾರು 1 ಕಿ.ಮೀ. ನಡೆದು, ಮತ್ತೆ ಒಂದು ಕಿ.ಮೀ. ಕೆಳಗಿಳಿದರೆ `ರೂಟ್ ಬ್ರಿಡ್ಜ್’ನ ದರ್ಶನ ಲಭ್ಯ. ಇಲ್ಲಿಯೂ ಚಿಕ್ಕ ಚಿಕ್ಕ ತಿಳಿನೀರ ಕೊಳಗಳಿವೆ.

ಏಷಿಯಾದ ಅತಿ ಸ್ವಚ್ಛ ಹಳ್ಳಿ ………


`ಮಾವ್‍ಲಿನ್‍ನಾಂಗ್’ ಎಂಬ ಹಳ್ಳಿ ಏಷ್ಯಾದ ಅತಿ ಸ್ವಚ್ಛ ಹಳ್ಳಿ ಎಂದು ಹೆಸರಾಗಿದೆ. ನೀವು ಪ್ರವೇಶದ್ವಾರದ ಬಳಿ ಬರುತ್ತಿದ್ದಂತೆ ಮರದ ಮೇಲಿನ ಮನೆಯೊಂದು ಎದುರಾಗುತ್ತದೆ. ಮೇಲೆ ಹತ್ತಿದರೆ ಬಾಂಗ್ಲಾದೇಶದ ಗಡಿ ನಮಗೆ ಕಾಣುತ್ತದೆ. ಸುತ್ತಮುತ್ತಲ ದೃಶ್ಯ ರುದ್ರರಮಣೀಯ! ಈ ಹಳ್ಳಿಯಲ್ಲಿ ಹಾಕಿರುವ ದೊಡ್ಡ ಫಲಕ ಕಸ ಹಾಕುವುದರ, ಹೂ-ಗಿಡ ಕೀಳುವುದರ ವಿರುದ್ಧ ಕಠಿಣ ಎಚ್ಚರಿಕೆ ನೀಡುತ್ತದೆ. ಸಾಂಪ್ರದಾಯಿಕ ಖಾಸಿ ಮನೆಗಳ, ಉದ್ಯಾನಗಳು, ಬಣ್ಣಬಣ್ಣದ ಹೂವುಗಳು, ಪ್ರತಿ ಮನೆಯ ಹೊರಗೆ ಬೆತ್ತದ ಕಸದ ಬುಟ್ಟಿ, ಕೈತೊಳೆಯುವ ಬೇಸಿನ್‍ನಿಂದ ಹೊರ ಬಿದ್ದ ನೀರು ಹೋಗುವುದು ಗಿಡಗಳಿಗೆ!

ಡಾವ್‍ಕೀ ಎಂಬ ಚಿಕ್ಕ ಪಟ್ಟಣದಲ್ಲಿರುವ ಉಮ್‍ನ್‍ಗಾಟ್ ನದಿ ತೂಗು ಸೇತುವೆ ಹೊಂದಿದೆ. ವಿಶಾಲವಾದ ನದಿಯ ಪಾತ್ರದಲ್ಲಿ ದೋಣಿ ವಿಹಾರ ಮಾಡಬಹುದು. ಡಾವ್‍ಕೀಯಿಂದ ನಡೆಯುತ್ತಾ ದಾಟಿದರೆ ಬಾಂಗ್ಲಾ ದೇಶ! ಅಲ್ಲಿಂದ ನಿರಾಶ್ರಿತರು ಮತ್ತುವಲಸೆಗಾರರು ಹೇಗೆ ಒಳಗೆ ನುಸುಳಿ ಬಿಡುತ್ತಾರೆ ಎಂದ ನಮ್ಮ ಚಾಲಕ ವಿವರಿಸಿಯೇ ವಿವರಿಸಿದ!

ನಾಲ್ಕು ದಿನಗಳ ಮೇಘಾಲಯ ಪ್ರವಾಸ ಭಾರತದ ವಿಭಿನ್ನತೆಯನ್ನು ಪರಿಚಯಿಸಿತ್ತು. `ನಮ್ಮ ಮಲೆನಾಡಿನ ಹಸಿರು, ಅಲ್ಲಿ ಸಿಕ್ಕುವ ಹೇರಳ ಹಣ್ಣು-ಹೂವು ಇನ್ನೆಲ್ಲಿ ಸಿಕ್ಕೀತು’ ಎನ್ನುತ್ತಿದ್ದ ನಾವು, ಮೇಘಾಲಯದಲ್ಲಿ ಮಾತ್ರ `ಓ ಪರವಾಗಿಲ್ಲ, ಇದು ನಮ್ಮಲ್ಲಿಯಂತೆಯೇ ಇದೆ!’ ಎಂದು ಅಚ್ಚರಿ ಪಟ್ಟೆವು. ಚಿರಾಪುಂಜಿಯ ಮೋಡಗಳ ಮಧ್ಯೆ ಹೋಗುವ ಅನುಭವದ ವಿಶಿಷ್ಟತೆಯನ್ನು ನೆನಪಿನಲ್ಲಿ ತುಂಬಿಕೊಂಡು, `ಮಳೆನಾಡಿ’ನಿಂದ ಮಲೆನಾಡಿಗೆ ಮರಳಿದೆವು!