Saturday, 10th April 2021

ಮಹಾ ಸರಕಾರಕ್ಕೆ ಮತ್ತೆ ಸಿಬಿಐ ಕಂಟಕ

ಮುಂಬೈ ಡೈರಿ

ಶ್ರೀನಿವಾಸ ಜೋಕಟ್ಟೆ, ಮುಂಬೈ

ರಾಷ್ಟ್ರೀಯ ತನಿಖಾ ಏಜನ್ಸಿ (ಎನ್‌ಐಎ) ಸಿಬಿಐ, ಎನ್‌ಸಿಬಿ(ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ) ಇಡಿ..ಎಲ್ಲ ಪ್ರಮುಖ ತನಿಖಾ ಏಜೆನ್ಸಿಗಳೆಲ್ಲ ಮುಂಬೈಯಲ್ಲಿ ತಮ್ಮ ತನಿಖಾ ಕಾರ್ಯಗಳಲ್ಲಿ ಬ್ಯುಸಿ ಇವೆ. ಕಳೆದ ವರ್ಷ ಬಾಲಿವುಡ್‌ನಲ್ಲಿ ಸುಶಾಂತ್ ಸಿಂಗ್ ರಾಜಪುತ್ ಸಾವಿನ ನಂತರ ಅದರ ತನಿಖೆಯನ್ನು ಬಿಹಾರ ಪೊಲೀಸ್, ಮುಂಬೈ ಪೊಲೀಸ್ ಆರಂಭದಲ್ಲಿ ಮಾಡಲು ಹೊರಟರೆ ಅವರೊಳಗೆ ವಿವಾದ ಸೃಷ್ಟಿಯಾಗಿ ಮುಂದಿನ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಯಿತು.

ಆದರೆ ಒಂಭತ್ತು ತಿಂಗಳು ಕಳೆದರೂ ಸುಶಾಂತ್ ಸಿಂಗ್ ’ಸಾವು’ ಕೊಲೆಯೋ ಆತ್ಮಹತ್ಯೆಯೋ ಎಂದು ಇನ್ನೂ ತೀರ್ಪು ಬರಲಿಲ್ಲ. ಈ ತನಿಖೆ ದಿಕ್ಕು ಅನಂತರ ’ಬಾಲಿವುಡ್‌ನಲ್ಲಿ ಡ್ರಗ್ಸ್’ ಎಂಬತ್ತ ತಿರುಗಿ ‘ಎನ್‌ಸಿಬಿ’ಯಿಂದ ಡ್ರಗ್ಸ್ ಸುದ್ದಿಯೇ ವಿಜೃಂಭಿಸಿದ್ದು, ಸುಶಾಂತ್ ಸಾವಿನ ತನಿಖಾ ಪ್ರಕರಣ ಸದ್ಯ ತಣ್ಣಗಾಗಿ ಬಿಟ್ಟಿದೆ.

ಸುಶಾಂತ್ ಪ್ರಕರಣದಲ್ಲಿ ಸಿಬಿಐ ಇನ್ನೂ ತನ್ನ ತನಿಖೆಯ ಫಲಿತಾಂಶ ಹೇಳದಿದ್ದರೂ ಇದೀಗ ಮಹಾರಾಷ್ಟ್ರದ ಮಾಜಿ ಗೃಹಮಂತ್ರಿ ಅನಿಲ್ ದೇಶ್ ಮುಖ್ ಮತ್ತು ಪೊಲೀಸ್ ಇಲಾಖೆಯ 100 ಕೋಟಿ ರೂಪಾಯಿ ’ವಸೂಲಿ’ ಪ್ರಕರಣದ ತನಿಖೆ ಯನ್ನು ಹೈಕೋರ್ಟ್ ಸಿಬಿಐಗೆ ಒಪ್ಪಿಸಿದ್ದರಿಂದ ಮತ್ತೆ 15 ದಿನಗಳ ಕಾಲ ಸಿಬಿಐ ಮುಂಬಯಿಯಲ್ಲಿ ಬ್ಯುಸಿ ಇರಲಿದೆ. ಸಿಬಿಐ ಎಲ್ಲರಿಗಿಂತ ಮೊದಲು ಮಾಜಿ ಪೊಲೀಸ್ ಕಮಿಶನರ್ ಪರಮ್ ಬೀರ್ ಸಿಂಗ್ ಅವರಿಗೆ ಪ್ರಮುಖ ಹತ್ತು ಪ್ರಶ್ನೆ ಕೇಳುವ ಮೂಲಕ ತನಿಖೆ ಆರಂಭಿ ಸಲು ಮುಂದಾಗಿದೆ.

ಇನ್ನೊಂದೆಡೆ ಮಾಜಿ ಗೃಹಮಂತ್ರಿ ಅನಿಲ್ ದೇಶ್ ಮುಖ್ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಮಹಾರಾಷ್ಟ್ರ
ಸರಕಾರವು ಸುಪ್ರೀಂ ಕೋರ್ಟ್‌ಗೆ ಹೋಗಿದೆ. ವಿಶೇಷ ಅಂದ್ರೆ ಮಹಾವಿಕಾಸ ಆಘಾಡಿಯಲ್ಲಿ ಈ ಮೊದಲು ಗೃಹಮಂತ್ರಿ ಆಗಲು ಒಪ್ಪದಿದ್ದ ದಿಲೀಪ್ ವಲ್ಸೆ ಪಾಟೀಲ್ ಅವರೇ ಈಗ ರಾಜ್ಯದ ಹೊಸ ಗೃಹಮಂತ್ರಿ ಆಗಿದ್ದಾರೆ ! ದೇಶ್‌ಮುಖ್ ರಾಜೀನಾಮೆ
ನೀಡಿದ ನಂತರ ಮಹಾವಿಕಾಸ ಆಘಾಡಿ ಸರಕಾರದಲ್ಲಿ ಹೊಂದಾಣಿಕೆ ಅಭಾವ ಕಾಣುತ್ತಿದೆ.

ಶಿವಸೇನೆ ದೇಶ್ ಮುಖ್ ರಾಜೀನಾಮೆಯನ್ನು ಬಹಳ ಹಿಂದೆಯೇ ಇಚ್ಛಿಸಿತ್ತು. ಆದರೆ ಎನ್‌ಸಿಪಿ ಒತ್ತಡದ ಕಾರಣ ಉದ್ಧವ್ ಠಾಕ್ರೆ ಕಠೋರ ಕ್ರಮ ಕೈಗೊಳ್ಳಲು ಹೋಗಿರಲಿಲ್ಲ. ಅತ್ತ ಕಾಂಗ್ರೆಸ್ ಮಹಾವಿಕಾಸ ಆಘಾಡಿಯಲ್ಲಿದ್ದೂ ಅದಕ್ಕೆ ಯಾವ ಪ್ರಯೋಜನವೂ ಇಲ್ಲದಂತಾಗಿದೆ. ಮಹಾರಾಷ್ಟ್ರ ಕಳೆದ ವರ್ಷದಂತೆ ಈ ವರ್ಷವೂ ಕರೊನಾ ಹಾಟ್‌ಸ್ಪಾಟ್ ಆಗಿದ್ದು ಸರಕಾರ ಈಗಾಗಲೇ ಟೆನ್ಷನ್ ‌ನಲ್ಲಿದ್ದರೆ ಈಗ ಗೃಹ ಇಲಾಖೆ ತನಿಖೆಯನ್ನು ಸಿಬಿಐ ತನಿಖೆಗೆ ಒಳಪಡಿಸಲು ಹೈಕೋರ್ಟ್ ಆದೇಶಿಸಿರುವುದು ಉದ್ಧವ್ ಸರಕಾರಕ್ಕೆ ಮತ್ತೊಂದು ಹೊಡೆತ ಬಿದ್ದಿದೆ.

ಸಾಮ್ನಾ ಪತ್ರಿಕೆಯಲ್ಲಿ ವಾಝೆ ಬಗ್ಗೆ ಸುದ್ದಿಗಳು ಈಗೀಗ ಬರ್ತಿಲ್ಲ. ಕರೊನಾ ಬಗ್ಗೆ ಸರಕಾರದ ಹೆಜ್ಜೆಗಳನ್ನೇ ಹೇಳುತ್ತಿದೆ. ಮೊನ್ನೆ ಮೊನ್ನೆವರೆಗೆ ಗೃಹಮಂತ್ರಿ ಯಾಗಿದ್ದ ಅನಿಲ್ ದೇಶಮುಖ್‌ರನ್ನು ಸಮರ್ಥಿಸುತ್ತಿದ್ದ ಶರದ್ ಪವಾರ್ ಸೋಮವಾರ ಕೊನೆಗೂ ರಾಜೀನಾಮೆ ನೀಡು ಎಂದರು.

ಭಾರತದಲ್ಲಿ ನಾವು ಮೊದಲ ಬಾರಿ ಪೊಲೀಸರೇ ಬಾಂಬ್ ಪ್ಲಾಂಟ್ ದೃಶ್ಯವನ್ನು ಸೃಷ್ಟಿಸಿರುವುದು, ರಾಜ್ಯದ ಮಂತ್ರಿಯೊಬ್ಬರು ವಸೂಲಿಗಾಗಿ ಪೊಲೀಸ್ ಕಮಿಶನರ್‌ಗೆ ಒತ್ತಡ ಹಾಕಲು ಹೊರಟದ್ದು ಬಹುಷಃ ಅದು ಮಹಾರಾಷ್ಟ್ರದಲ್ಲಿ ಮಾತ್ರ ಇರಬೇಕು. ಇದನ್ನು ವಿಪಕ್ಷ ಮಾತ್ರವಲ್ಲ ಇಲ್ಲಿಯ ಮುಂಬೈಕರ್ ಕೂಡ ಹೇಳುತ್ತಿದ್ದಾರೆ. ಗೃಹ ಮಂತ್ರಿಯಾಗಿದ್ದ ಅನಿಲ್ ದೇಶಮುಖ್ ಅವರಿಗೆ ಸಾಮ್ನಾ ಪತ್ರಿಕೆ ಕಳೆದ ವಾರದ ಸಂಚಿಕೆಯಲ್ಲಿ ಸಂಪಾದಕ, ಶಿವಸೇನೆ ನೇತಾ ಸಂಜಯ್ ರಾವುತ್ ಅವರು ತನ್ನ ಅಂಕಣದಲ್ಲಿ ಇದು ‘ಡ್ಯಾಮೇಜ್ ಕಂಟ್ರೋಲ್’ ನ ದುರ್ಗತಿ. ಎಂದು ಬರೆದಿದ್ದರು.

ಸಚಿನ್ ವಾಝೆ ಹೆಸರಿನ ಸಹಾಯಕ ಪೊಲೀಸ್ ನಿರೀಕ್ಷಕನಿಗೆ ಇಷ್ಟೊಂದು ಮಹತ್ವ ಹೇಗೆ ಬಂತು? ಒಬ್ಬ ಗೃಹಮಂತ್ರಿಗೆ ಪೊಲೀಸ್ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎನ್ನುವುದು ಗೊತ್ತಿಲ್ಲ ಎಂದು ಹೇಳುವುದನ್ನು ನಂಬುವ ಮಾತೇ? ಈ ರೀತಿ ಬರೆದ ನಂತರ ಶಿವಸೇನೆ ಮತ್ತು ಎನ್‌ಸಿಪಿ ನಾಯಕರ ನಡುವೆ ಒಂದಷ್ಟು ವಿವಾದ ನಡೆದದ್ದೂ ಹೌದು.

63 ‘ಕ್ರಿಮಿನಲ’ಗಳನ್ನು ಎನ್‌ಕೌಂಟರ್‌ನಲ್ಲಿ ಕೊಂದಿರುವ ‘ಸ್ಪೆಶಲಿ’ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಉದ್ಯಮಿ ಮುಖೇಶ್ ಅಂಬಾನಿಯ ಎಂಟಿಲಿಯಾ ಸಮೀಪ ಸ್ಕಾರ್ಪಿಯೋದಲ್ಲಿ ಜಿಲೆಟಿನ್ ಕಡ್ಡಿಗಳನ್ನು ಇರಿಸಿದ ಕೇಸ್‌ನಲ್ಲಿ ಮತ್ತು ಮನ್ಸುಖ್ ಹಿರೇನ್
ವ್ಯಾಪಾರಿ ಹತ್ಯೆಯ ಕೇಸ್‌ನಲ್ಲಿ ಸಸ್ಪೆಂಡ್ ಆಗಿದ್ದು, ಎನ್ಐಎ ತಂಡ ಏಪ್ರಿಲ್ 7 ರವರೆಗೆ ತನ್ನ ಕಸ್ಟಡಿಯಲ್ಲಿರಿಸಿದೆ.

ಎನ್‌ಕೌಂಟರ್ ಸ್ಪೆಶಲಿ ಪೊಲೀಸ್ ಅಧಿಕಾರಿ ವಾಝೆಯನ್ನು ಆತನ ’ಸ್ನೇಹಿತ’ ಮನ್ಸುಖ್ ಹಿರೇನ್ ಕೊಲೆಯಾಗುವ ತನಕದ ಎಲ್ಲ ಹಿಸ್ಟರಿಗಳನ್ನು ಎನ್‌ಐಎ ಒಂದೊಂದೇ ಬಿಚ್ಚಿಡುತ್ತಿದೆ. ಹತ್ಯೆಯಾದ ವ್ಯಾಪಾರಿ ಮನ್ಸುಖ್ ಹಿರೇನ್ ಗೆ ಥಾಣೆಯಲ್ಲಿ ಕಾರು ಡೆಕೊರೇಟರ್ ಅಂಗಡಿ ಇದೆ. ಅಂದಿನಿಂದಲೂ ಸಚಿನ್ ವಾಝೆ ಪರಿಚಿತ. 1990ರಲ್ಲಿ ಸಚಿನ್ ವಾಝೆಯ ಮೊದಲ ಪೋಸ್ಟಿಂಗ್ ಥಾಣೆಯ ಆಗಿತ್ತು. ಇದರಲ್ಲಿ ಮುಂಬ್ರಾ ಮತ್ತು ನೌಪಾಡಾ ಪೊಲೀಸ್ ಸ್ಟೇಷನ್ ಬರುತ್ತದೆ.

ನೌಪಾಡದ ಹಿರೇನ್ ಅವರ ಕಾರು ಡೆಕೊರೇಟರ್ ಅಂಗಡಿ ಇದೆ. ಅಲ್ಲಿಂದ ಇಬ್ಬರಿಗೂ ಪರಿಚಯ. ವಾಝೆಯಂತಹ ಒಬ್ಬ
‘ಎಪಿಐ’ಗೆ ಹಲವಾರು ಭವ್ಯ ವಾಹನಗಳು, ಮೂರು ಕಂಪನಿಗಳು, ಒಂದು ಸ್ಟಾರ್ ಹೊಟೇಲ್‌ನಲ್ಲಿ 19ನೇ ಮಾಳಿಗೆ ರೂಮು ನಂಬರ್ 1964ರಲ್ಲಿ 100ದಿನಕ್ಕೆ ರೂಮ್ ಬುಕ್, ಅದೂ ಒಬ್ಬ ಪೊಲೀಸ್ ಅಧಿಕಾರಿಯಾಗಿ ನಕಲಿ ಐಡಿ ಪ್ರೂಫ್ ತೋರಿಸಿದ್ದು, ರಾಮ ರಾಮ ಇನ್ನೇನೆಲ್ಲ ಈ ’ಕ್ರಿಮಿನಲ್’ ಎನ್‌ಕೌಂಟರ್ ಸ್ಪೆಶಲಿ ಮಾಡಿದ್ದನೋ ಅವೆಲ್ಲ ಇನ್ನಷ್ಟು ತನಿಖೆಯಿಂದ ಹೊರ ಬರಬೇಕಿದೆ. ಮುಂಬೈಯ ಎನ್‌ಕೌಂಟರ್ ಸ್ಪೆಶಲಿ ಎನ್ನುವ ಒಬ್ಬ ಅಧಿಕಾರಿಯೇ ಇಷ್ಟು ಕ್ರಿಮಿನಲ್ ಅಂದ್ರೆ ಈತ ಯಾವ ’ಕ್ರಿಮಿನಲ’ಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದನೋ? ಬಾಂಬ್ ಬ್ಲಾ ಆರೋಪಿ ಖ್ವಾಜಾ ಯೂನಸ್ ಕಸ್ಟಡಿ ಸಾವು ಕೇಸ್‌ನಲ್ಲಿ 2004ರಲ್ಲಿ ಸಚಿನ್ ವಾಝೆಯ ಬಂಧನವೂ ಆಗಿತ್ತು. ಅನಂತರ ಆತ ಅಮಾನತುಗೊಂಡ.

ಆಗ ಥಾಣೆ ಕ್ಷೇತ್ರದಲ್ಲಿ ಆತ ಒಂದು ಲೀಗಲ್ ಕಂಪನಿ ತೆರೆದ. ಇದು ಹಿರೇನ್ ಅಂಗಡಿ ಪಕ್ಕದ ಇತ್ತು. ಹಾಗಾಗಿ ಪೊಲೀಸ್ ಇಲಾಖೆ ಯಲ್ಲಿ ಇಲ್ಲದಿದ್ದರೂ ವಾಝೆ ಹಿರೇನ್‌ರ ಅಂಗಡಿಗೆ ಬರುತ್ತಿದ್ದನಂತೆ. ಇದೀಗ ಸ್ನೇಹಿತನನ್ನೇ ಕೊಲೆ ಮಾಡಿಸಿದ ಆ ಘಟನೆ
ತನಿಖೆ ನಡೆಯುತ್ತಿದೆ. ಅಂಡರ್‌ವಲ್ಡನಲ್ಲಿ ಯಾರಿಗೆ ಯಾರು ಪರಿಚಯ, ಅಥವಾ ಯಾರಿಗೆ ಯಾರು ಶತ್ರು ಎನ್ನುವುದು ಹೇಳುವುದೇ ಕಷ್ಟ . ಮಹಾರಾಷ್ಟ್ರ ಎಟಿಎಸ್ ನಿಂದ ಹಿರೇನ್ ಹತ್ಯೆ ತನಿಖೆಯನ್ನು ಈವಾಗ ಎನ್ ಐಎಗೆ ಹಸ್ತಾಂತರಿಸಿದ್ದರಿಂದ ವಾಝೆ ಸಹಿತ ಮುಂಬೈ ಪೊಲೀಸ್ ಇಲಾಖೆಯ ಕೆಲವಾರು ಅಧಿಕಾರಿಗಳ ಗುಟ್ಟುಗಳು ಹೊರಬೀಳುತ್ತಿವೆ.

ಅತ್ತ ಸಿಎಸ್‌ಟಿ ರೈಲ್ವೆ ಸ್ಟೇಷನ್, ಮೀಟಿ ನದಿ, ಮುಂಬ್ರಾ ಖಾಡಿ, ಎಂಟಿಲಿಯಾ ಕಟ್ಟಡದ ಎದುರು….. ಹೀಗೆ ಸಚಿನ್ ವಾಝೆಯನ್ನು ಘಟನೆ ನಡೆದಲ್ಲಿಗೆ ಕರೆದೊಯ್ದು ರೂಪಾಂತರ ದೃಶ್ಯಗಳಿಗೆ ಎನ್ ಐಎ ಸುತ್ತಾಡಿಸಿದ್ದೇ ಸುತ್ತಾಡಿಸಿದ್ದು! ಅಂತೂ ಮಹಾರಾಷ್ಟ್ರ
ಗೃಹಮಂತ್ರಿ ಕೊನೆಗೂ ರಾಜೀನಾಮೆ ನೀಡಿದರು. ಹಾಗೆ ನೋಡಿದರೆ ಗೃಹಮಂತ್ರಿ ವಿರುದ್ಧ ಯಾವ ಪೊಲೀಸ್ ಸ್ಟೇಷನ್‌ನಲ್ಲಿ ಎಫ್ಐಆರ್ ದಾಖಲಿಸುತ್ತಾರೆ? ಇಲ್ಲ.

ಹಾಗಾಗಿ ಸಿಬಿಐ ಈ ಪ್ರಕರಣದಲ್ಲಿ ಯಾವುದೇ ಎಫ್ಐಆರ್ ದಾಖಲಿಸದೇ ತನಿಖೆ ಮಾಡುವಂತೆ ಸೋಮವಾರ ಹೈಕೋರ್ಟ್ ಸೂಚಿಸಿದೆ. ಈ ಘಟನೆ ಬಗ್ಗೆ ಮೂವರು ಕೋರ್ಟಿಗೆ ಹೋಗಿದ್ದರು. ವಕೀಲೆ ಜಯಶ್ರೀ ಪಾಟೀಲ್ ಅವರು ಪೊಲೀಸ್ ಠಾಣೆಯಲ್ಲಿ
ಎಫ್ಐಆರ್ ದಾಖಲಿಸಲು ಹೋದರೆ ಪೊಲೀಸರು ದಾಖಲಿಸಿಲ್ಲ ಎಂದಿದ್ದಾರೆ.

ಇದೊಂದು ಅಭೂತಪೂರ್ವ ಪ್ರಕರಣ. ಅನಿಲ್ ದೇಶ್‌ಮುಖ್ ಪೊಲೀಸ್ ವಿಭಾಗವನ್ನು ಲೀಡ್ ಮಾಡುವ ಕಾರಣ ಪೊಲೀಸರು ಸರಿಯಾದ ತನಿಖೆ ಮಾಡುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಎಫ್ಐಆರ್ ದಾಖಲಿಸದೇ ಪ್ರಕರಣದ ತನಿಖೆ ಮಾಡಿ 15 ದಿನಗಳಲ್ಲಿ
ತನ್ನ ಪ್ರಾಥಮಿಕ ವರದಿ ಸಿಬಿಐ ನೀಡಬೇಕು ಎಂದಿದೆ ಹೈಕೋರ್ಟ್. ಸಿಬಿಐ ಅಧಿಕಾರಿಗಳು ಮುಂಬೈಗೆ ಬಂದಿದ್ದಾರೆ. ಅವರು ಒಮ್ಮೆಲೇ ಗೃಹ ಮಂತ್ರಿ ವಿಚಾರಣೆ ಮಾಡೋದಿಲ್ಲ. ಮೊದಲಿಗೆ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರಿಗೇ ಪ್ರಶ್ನೆಗಳನ್ನುಕೇಳಲಿದ್ದಾರೆ- ಸಚಿನ್ ವಾಝೆ, ಗೃಹಮಂತ್ರಿ ನೂರು ಕೋಟಿ ರೂಪಾಯಿಯ ಕಲೆಕ್ಷನ್ ಮಾಡಿಕೊಡುವ ಕುರಿತಂತೆ
ನಿಮಗೆ ತಿಳಿಸಿದಾಗ ನೀವು ಇರಿಸಿದ ಮೊತ್ತಮೊದಲ ಹೆಜ್ಜೆ ಯಾವುದು? ನೀವು ಈ ವಸೂಲಿ ಪ್ರಕರಣವನ್ನು ನಿಲ್ಲಿಸಲು ಪ್ರಯತ್ನಿಸಿದಿರೇ? ಇಲ್ಲವೇ? ನೀವು ಎಫ್ಐಆರ್ ಅಥವಾ ದೂರು ದಾಖಲಿಸಲು ಯಾಕೆ ಹೋಗಿಲ್ಲ? 16 ವರ್ಷ ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿ ಸಚಿನ್ ವಾಝೆಯನ್ನು ಯಾವ ಆಧಾರದಲ್ಲಿ ಮತ್ತೆ ಪೊಲೀಸ್ ಇಲಾಖೆಗೆ ಸೇರಿಸಿದ್ದೀರಿ? ಇದರಲ್ಲಿ ನಿಮ್ಮ ಪಾತ್ರ ಏನು? ಕ್ರೈಂಬ್ರಾಂಚ್‌ನಲ್ಲಿ ಹಲವು ಸೀನಿಯರ್‌ಗಳು ಇದ್ದ ಹೊರತೂ ವಾಝೆಯನ್ನು ಸಿಐಯು ಮುಖ್ಯಸ್ಥನನ್ನಾಗಿ
ಯಾಕೆ ಮಾಡಿದಿರಿ? ಪ್ರೋಟೋಕಾಲ್ ಕಡೆಗಣಿಸಿ ವಾಝೆ ನೇರ ನಿಮಗೆ ಯಾಕೆ ರಿಪೋರ್ಟ್ ಮಾಡಿದರು? ವಾಝೆ ಜಾಯಿನ್ ಆದ ನಂತರ ಅವರಿಗೆ ಯಾವ ಮಹತ್ವಪೂರ್ಣ ಕೇಸುಗಳನ್ನೆಲ್ಲ ಒಪ್ಪಿಸಿದ್ದೀರಿ? ಓರ್ವ ಅಸಿಸ್ಟೆಂಟ್ ಪೊಲೀಸ್ ಇಪೆಕ್ಟರ್ ಆಗಿರುವ
ಹೊರತಾಗಿಯೂ ಅವರ ಕಾರ್ಯಾಚರಣೆಗಳ ಬಗ್ಗೆ ನಿಮಗೆ ಸಂದೇಹವೇ ಉಂಟಾಗಲಿಲ್ಲ ಯಾಕೆ? ಎಂಟಿಲಿಯಾ ಜಿಲೆಟಿನ್ ಕೇಸಿನ ಮಾಹಿತಿ ಸಿಕ್ಕಿದ ನಂತರವೂ ವಾಝೆಗೆ ಇದರ ತನಿಖೆಯನ್ನು ಯಾಕೆ ಒಪ್ಪಿಸಿದಿರಿ? ಸಚಿನ್ ವಾಝೆಗೆ ಸ್ಪೆಷಲ್ ಪವರ್ ನೀಡುವಲ್ಲಿ
ಯಾವುದಾದರೂ ರಾಜಕಾರಣಿ ನಿಮಗೆ ಒತ್ತಡ ಹಾಕಿದ್ದಾರೆಯೋ? ಇಂತಹ ಪ್ರಶ್ನೆಗಳನ್ನು ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್‌ಗೆ ಸಿಬಿಐ ಕೇಳಲಿದೆ.

ಈಗ ಗೃಹಮಂತ್ರಿ ದೇಶ್ ಮುಖ್ ರಾಜೀನಾಮೆಯಿಂದ ಮಹಾವಿಕಾಸ ಆಘಾಡಿ ಸಮಸ್ಯೆ ಸಮಾಪ್ತಿ ಆಗುವ ಬದಲು ಇನ್ನಷ್ಟು ಹೆಚ್ಚಬಹುದು. ಅಂತೂ ಈ ಪೊಲೀಸ್ ಅಧಿಕಾರಿಗಳ ಸ್ನೇಹ ಮಾಡುವುದಕ್ಕೆ ಯಾರೂ ಹೋಗಬಾರದು. ಆದಷ್ಟು ಅವರಿಂದ ದೂರ ಇರಬೇಕು ಎನ್ನವುದಕ್ಕೆ ಎನ್ ಕೌಂಟರ್ ಸ್ಪೆಶಲಿ ಸಚಿನ್ ವಾಝೆ ಮತ್ತು ವ್ಯಾಪಾರಿ ಮನ್ಸುಖ್ ಹಿರೇನ್‌ರ ಕೊಲೆ ಪ್ರಕರಣ ಒಂದು ಪಾಠ. ಈ ಸಮಯ ಎಂಟಿಲಿಯಾ ಕೇಸ್‌ನಲ್ಲಿ ತನಿಖೆ ಸಾಧಾರಣ ಪೂರ್ಣ ಗೊಂಡ ನಂತರ ಎನ್‌ಐಎ ಈಗ ಜಿಲೆಟಿನ್ ತುಂಬಿಸಿದ ಸ್ಕಾರ್ಪಿಯೋದ ಮಾಲೀಕ ಮನ್ಸುಖ್ ಹಿರೇನ್‌ರ ಹತ್ಯೆ ತನಿಖೆ ತೀವ್ರಗೊಳಿಸುತ್ತಿದೆ. ಈ ಘಟನೆಗೆ ಸಂಬಂಧಿಸಿ 8
ಕಾರು, ಒಂದು ಬೈಕ್ ಈಗಾಗಲೇ ಜಪ್ತಿ ಮಾಡಲಾಗಿದೆ.

ಮನ್ಸುಖ್ ಹಿರೇನ್ ಹತ್ಯೆಯ ನಂತರ ಸಚಿನ್ ವಾಝೆಯ ಬಳಿ ಇನೋವಾ, ಮರ್ಸಿಡಿಸ್, ಲ್ಯಾಂಡ್ ಕೂಸರ್,ಆಡಿ, ವೋಲ್ವೋ. ಇಂತಹ ಎಂಟು ಬೆಲೆ ಬಾಳುವ ವಾಹನಗಳು ದೊರೆತಿವೆ. ಇದೆಲ್ಲ ಹೇಗೆ ಸಾಧ್ಯ? ಎಟಿಎಸ್ ವ್ಯಾಪಾರಿ ಹಿರೇನ್ ಹತ್ಯೆ ಕೇಸ್‌ನ
ತನ್ನ ತನಿಖೆಯಲ್ಲಿ ಮಾಜಿ ಕಾನ್ಸ್‌ಟೇಬಲ್ ವಿನಾಯಕ ಶಿಂಧೆ ಮತ್ತು ಬುಕ್ಕಿ ನರೇಶ್ ಗೋರೆಯನ್ನು ಬಂಧಿಸಿದೆ.

ಫೆಬ್ರವರಿ 25 ರಂದು ಎಂಟಿಲಿಯಾ ಹೊರಗಡೆ ಸ್ಕಾರ್ಪಿಯೋದಲ್ಲಿ ಜಿಲೆಟಿನ್ ಸಿಕ್ಕಿದ ನಂತರ ಮುಂಬೈ ದೇಶದ ಗಮನವನ್ನು ತನ್ನತ್ತ ಸೆಳೆದಿದೆ. ಈಗ ಸಿಬಿಐ ಮುಂಬೈ ಪ್ರವೇಶಿಸಿದ್ದು ಸುಶಾಂತ್ ಸಿಂಗ್ ತನಿಖೆ ರೀತಿಯಲ್ಲಿ ಇದರ ಫಲಿತಾಂಶ ಕಾಣದಿರಲಿ. ಹೇಗೂ ಹೈಕೋರ್ಟ್ 15 ದಿನದೊಳಗೆ ವರದಿ ಕೇಳಿದೆ. ನೋಡೋಣ.

Leave a Reply

Your email address will not be published. Required fields are marked *