Tuesday, 7th December 2021

ಮಹಾರಾಷ್ಟ್ರದ ಘಟನೆ ಜತೆ ಆಟ ನಿಲ್ಲಿಸಿ

ಸಕಾಲಿಕ

ವಿಜಯ್‌ ದರ್‌ಡ, ರಾಜ್ಯಸಭಾ ಮಾಜಿ ಸದಸ್ಯ ಹಾಗೂ

ಅಧ್ಯಕ್ಷರು, ಲೋಕಮತ್ ದೈನಿಕ

ರಾಷ್ಟ್ರದಲ್ಲಿ ಮಹಾರಾಷ್ಟ್ರ ಎಂಬ ಘೋಷವಾಕ್ಯ ಎಲ್ಲೆಡೆ ಜನಜನಿತ. ಅಭಿವೃದ್ಧಿಯ ದೃಷ್ಟಿಯಿಂದ ಮಹಾರಾಷ್ಟ್ರ ವನ್ನು ಇಡೀ ದೇಶವೇ ಹೊಗಳುತ್ತಿರುವಾಗ, ರಾಜ್ಯದ ಮಾಜಿ ಗೃಹಸಚಿವರನ್ನು ಪತ್ತೆ ಮಾಡುವಲ್ಲಿ ಸಿಬಿಐ ಸೋತಿದೆ, ರಾಜ್ಯ ಪೋಲೀಸರು ತಮ್ಮ ನಿಕಟಪೂರ್ವ ಪೋಲೀಸ್ ಮುಖ್ಯಸ್ಥನನ್ನು ಪತ್ತೆ ಮಾಡುವಲ್ಲಿಯೂ ಸೋತು ತಲೆತಗ್ಗಿಸು ವಂತಾಗಿದೆ.

ಇತ್ತೀಚಿನ ದಿನಗಳಲ್ಲಿ, ಭಾರತದ ಒಳಗಡೆ ಅಥವಾ ಹೊರಗಡೆ ನಾನೆಲ್ಲೇ ಹೋದರೂ ಜನ ಕೇಳುವ ಪ್ರಶ್ನೆ ಒಂದೇ –  ಮಹಾರಾಷ್ಟ್ರ ದಲ್ಲಿ ಏನಾಗುತ್ತಿದೆ? ನಾನು ಏನೆಂದು ಉತ್ತರಿ ಸಲಿ? ಕೆಲ ಜನರ ವರ್ತನೆಗಳ ಕಾರಣದಿಂದ ನನಗೆ ನೋವಾಗುತ್ತಿದೆ, ಜತೆಜತೆಗೆ ಸಿಟ್ಟೂ ಒತ್ತರಿಸಿ ಬರುತ್ತದೆ. ಪುಡಿರಾಜಕೀಯ ಮತ್ತು ಡ್ರಗ್ ಪ್ರಸರಣದ ವಾಸನೆಯ ಕಾರಣಕ್ಕೆ ನಮ್ಮ ರಾಜ್ಯದ ಘನತೆ ಇಡೀ ರಾಷ್ಟ್ರ ದಲ್ಲಿಯೇ ಕೆಟ್ಟದಾಗಿ ಬಿಂಬಿತವಾಗುತ್ತಿದೆ.

ನಮ್ಮ ಆಡಳಿತಾತ್ಮಕ ವ್ಯವಸ್ಥೆ ಕೂಡ ಈ ವಿಷವರ್ತುಲದ ಭಾಗವಾಗಿ ಬಲಿಪಶುವಾಗು ತ್ತಿದೆ ಮತ್ತು ನೇರವಾಗಿ ರಾಜ್ಯದ ಪ್ರಗತಿಗೆ ಅಡ್ಡಗಾಲಾಗಿದೆ. ಈ ರೀತಿ ರಾಜ್ಯದ ಪ್ರಗತಿಗೆ ಅಡ್ಡಗಾಲಾಗಿರುವ ಆ ಎಲ್ಲರಲ್ಲಿ ನನ್ನದೊಂದು ವಿನಂತಿ, ದಯವಿಟ್ಟು ನಮ್ಮ
ರಾಜ್ಯದ ಘನತೆಯನ್ನು ಹರಾಜಿಗಿಡುವುದನ್ನು ನಿಲ್ಲಿಸಿ. ರಾಜ್ಯದ ಘನತೆಗೆ ಕುಂದುಂಟು ಮಾಡುವ ನಿಮ್ಮಗಳ ವರ್ತನೆಯಿಂದ ಜನ ನೊಂದಿದ್ದಾರೆ. ಬೇರೆ ಬೇರೆ ರಾಜ್ಯಗಳ ಆಡಳಿತಾಧಿಕಾರಿಗಳು ಮತ್ತು ರಾಜಕಾರಣಿಗಳು ತಮ್ಮ ರಾಜ್ಯಗಳಲ್ಲಿ ಯಾವುದೇ ಉಪ ಕ್ರಮಕ್ಕೆ ಮುಂದಾಗುವ ಮುನ್ನ, ಮಹಾರಾಷ್ಟ್ರಕ್ಕೆ ಬಂದು ಇಲ್ಲಿನ ಪ್ರಗತಿಯ ಪರಿಶೀಲನೆ, ಅಧ್ಯಯನ ಮಾಡಿ ಹೋಗುವು ದನ್ನು ನಾನು ನೋಡಿದ್ದೇನೆ.

ಇಡೀ ರಾಷ್ಟ್ರದಲ್ಲಿಯೇ ಮಹಾರಾಷ್ಟ್ರ ಪೋಲೀಸರು ಅತ್ಯುತ್ತಮ ಎಂಬ ಭಾವನೆ ಇದೆ. ಆದರೆ ಇಂದಿರುವ ಪರಿಸ್ಥಿತಿ ಹಲವು ಪ್ರಶ್ನೆ ಗಳಿಗೆ ದಾರಿಮಾಡಿಕೊಟ್ಟಿದೆ. ಮುಂಬಯಿ ಪೊಲೀಸ್ ಕಮಿಷನರಾಗಿದ್ದ ಪರಮಬೀರ್ ಸಿಂಗ್ ಆಗಿನ ಮಹಾರಾಷ್ಟ್ರದ ಗೃಹ ಮಂತ್ರಿಯ ವಿರುದ್ಧ ತಿಂಗಳಿಗೆ ಒಂದುನೂರು ಕೋಟಿ ಅಕ್ರಮ ಹಣವಸೂಲಿಯ ಆರೋಪ ಇನ್ನೂ ಹಸಿಹಸಿಯಾಗಿದೆ. ಆರೋಪ ಮಾಡಿದ ಪರಮಬೀರ್ ಸಿಂಗ್ ನನ್ನು ಪತ್ತೆ ಮಾಡಲು ಪೋಲೀಸ್ ವ್ಯವಸ್ಥೆಗೆ ಇನ್ನೂ ಸಾಧ್ಯವಾಗಿಲ್ಲ ಎಂಬುದು ಅಚ್ಚರಿಯ ಸಂಗತಿ. ಪೋಲೀಸರು ಆತನನ್ನು ಪತ್ತೆ ಮಾಡಲು ಸೋತಿದ್ದಾರೆ ಮತ್ತು ಪರಮಬೀರ್ ಸಿಂಗ್ ಇದ್ದಕ್ಕಿದ್ದಂತೆ ಅದೃಶ್ಯ ನಾಗಿದ್ದಾನೆ ಎಂಬುದು ಬಹುದೊಡ್ಡ ಒಗಟಿನಂತಿದೆ.

ಆಶ್ಚರ್ಯವಲ್ಲವೇ? ಹಣಸುಲಿಗೆಯ ಆರೋಪ ಎದುರಿಸುತ್ತಿರುವ ಅನಿಲ್ ದೇಶ್‌ಮುಖ್ ಗೃಹಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂಬುದನ್ನು ಹೊರತುಪಡಿಸಿದರೆ, ಸಿಬಿಐ ಈ ಕುರಿತಾಗಿ ಏನು ಮಾಡುತ್ತಿದೆ ಎಂಬುದು ಯಾರಿಗೂ ತಿಳಿದಿಲ್ಲ.
ಸಿಬಿಐಗೂ ಆತನನ್ನು ಹುಡುಕುವುದು ಸಾಧ್ಯವಾಗುತ್ತಿಲ್ಲ. ವಿಚಾರ ಏನೇ ಇರಲಿ, ಈ ಇಬ್ಬರೂ ಮಹಾಶಯರು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದು ಮಹಾರಾಷ್ಟ್ರದ ಘನತೆಗೆ ಬಹುದೊಡ್ಡ ಹೊಡೆತವನ್ನು ಕೊಟ್ಟಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಅನಿಲ್ ದೇಶಮುಖ್ ವಿರುದ್ಧ ಪರಮಬೀರ್ ಸಿಂಗ್ ಮಾಡಿರುವ ದೂರಿನ ಸತ್ಯಾಸತ್ಯತೆಯನ್ನು ಪರಾಮರ್ಶೆ ಮಾಡುವುದು ಈಗ ಕಾನೂನು ವ್ಯವಸ್ಥೆಯೊಂದರಿಂದಲೇ ಸಾಧ್ಯ. ಆದರೆ ಈ ಎಲ್ಲ ದ್ಯಮಾನಗಳು ತೆರೆದುಕೊಂಡಿರುವ ಕ್ರಮವನ್ನು ಗಮನಿಸಿದರೆ ಅಲ್ಲಿ ಪೋಲೀಸ್ ಮತ್ತು ರಾಜಕಾರಣಿಗಳ ವಿರುದ್ಧದ ನೈಚ್ಚಾನುಸಂಧಾನದ ವಾಸನೆ ಮೂಗಿಗೆ ಬಡಿಯುತ್ತದೆ. ಸಿಬಿಐ ತಂಡವು ಇತ್ತೀಚೆಗೆ ರಾಜ್ಯದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಕುಂಟೆ ಮತ್ತು ರಾಜ್ಯದ ಡಿಜಿಪಿ ಸಂಜಯ ಪಾಂಡೆಯವರನ್ನು ದತ್ತಾಂಶ ಸೋರಿಕೆ ವಿಚಾರದಲ್ಲಿ ಕರೆದು ವಿಚಾರಣೆ ಮಾಡಿದೆ.

ಸಿಬಿಐ ನಿರ್ದೇಶಕ ಸುಬೋಧ್ ಜೈಸ್ವಾಲ್‌ಗೆ ನೋಟೀಸು ನೀಡಿರುವ ಮುಂಬಯಿ ಪೋಲೀಸ್ ಈ ಪ್ರಕರಣದಲ್ಲಿ ಯಾವುದು ಸತ್ಯ ಅಥವಾ ಅಸತ್ಯ ಎಂಬುದನ್ನು ಹೇಳಲಾಗದು ಎಂದಿದೆ. ಈ ರೀತಿ ಎರಡು ಆಡಳಿತಾತ್ಮಕ ಸಂಸ್ಥೆಗಳು ಒಂದಕ್ಕೊಂದು ವಿರೋಧಾ ಭಾಸದ ಹೇಳಿಕೆಗಳನ್ನು ಕೊಡುತ್ತ ಮುಂದುವರಿದರೆ ಮುಂದೇನಾಗುತ್ತದೆ ಎಂಬುದು ಸಾರ್ವಜನಿಕರ ಪ್ರಶ್ನೆ. ಮಹಾರಾಷ್ಟ್ರದಲ್ಲಿ ಇಂದಾಗುತ್ತಿರುವುದು ಇದೇ ತರಹದ ಸನ್ನಿವೇಶ. ನಿಷ್ಠೆಯಿಂದ ಕೆಲಸ ಮಾಡುವ ಮಂದಿ, ಯಾವ ಗಳಿಗೆಯಲ್ಲಿ ತಾವು ಬಲಿಪಶು ಗಳಾಗುತ್ತೇವೋ ಎಂಬ ಆತಂಕ್ಕೆ ಒಳಗಾಗುವಂತಾಗಿದೆ.

ಇಂತಹ ಪ್ರಕರಣಗಳು ಮುನ್ನೆಲೆಗೆ ಬಂದಾಗ ಆಡಳಿತ ಭಾಗದ ಸಿಬ್ಬಂದಿಯ ಮೇಲೆ ಅದರ ದುಷ್ಪ್ರಭಾವ ಬೀರುವುದು ಸಹಜ. ಹಾಗಾದಾಗ ಅದು ಕಾರ್ಯವಿಧಾನದ ಮೇಲೆ ಪರಿಣಾಮ ಬೀರುವುದು ಮತ್ತು ಕೆಲಸ ಸ್ಥಗಿತದ ಹಂತಕ್ಕೆ ತಲುಪುವುದು ಕೂಡ ಸಾಧ್ಯ. ಇದರಿಂದ ಆಡಳಿತ ವ್ಯವಸ್ಥೆ ಸಡಿಲವಾಗುವ ಸಾಧ್ಯತೆ ಇದೆ. ಹೀಗಾದರೆ ಅದಕ್ಕೆ ಹೊಣೆಗಾರರು ಯಾರು? ಅನಿಲ್ ದೇಶಮುಖ್ ವಿರುದ್ಧದ ಆರೋಪಗಳನ್ನು ಸರಿಯಾಗಿ ನಿರ್ವಸುವಲ್ಲಿ ತನಿಖಾಸಂಸ್ಥೆಗಳು ಸೋತಿವೆ ಎಂಬುದನ್ನು ಯಾವ
ಹಿಂಜರಿಕೆಯೂ ಇಲ್ಲದೇ ನಾನು ಹೇಳಬಲ್ಲೆ. ಇದು ಒಟ್ಟಾರೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ನಿರೀಕ್ಷಿತ ಆಡಳಿತಾತ್ಮಕ ಕ್ರಮಗಳು ನಡೆದಿಲ್ಲ. ಮಹಾರಾಷ್ಟ್ರ ರಾಜ್ಯ  ಈ ಅಸಮರ್ಥತೆಯ ಕಾರಣದಿಂದ ಉಂಟಾಗುವ ಹೊಡೆತವನ್ನು ಅನುಭಸಲೇಬೇಕು. ಮಹಾರಾಷ್ಟ್ರದಲ್ಲಿ ಬಹುದೊಡ್ಡ ರಾಜಕೀಯ ಯುದ್ಧವೊಂದು ನಡೆಯುತ್ತಿದೆ ಎಂಬುದನ್ನು ಇಲ್ಲಿ ಹೇಳಲೇಬೇಕಿದೆ.

ಯಾವ ಚೌಕಟ್ಟಿನಲ್ಲಿ ತನಿಖಾಕ್ರಮಗಳು ನಡೆಯಬೇಕು ಮತ್ತು ಜನರು ತಪ್ಪು ಅಭಿಪ್ರಾಯ ತಳೆಯುವುದನ್ನು ಹೇಗೆ ತಪ್ಪಿಸಬೇಕು ಎಂಬುದನ್ನು ಹಿರಿಯ ಅಧಿಕಾರಿಗಳು ಅರಿತುಕೊಳ್ಳಬೇಕಿದೆ. ಆಡಳಿತಾತ್ಮಕ ಸಂಸ್ಥೆಗಳು ತಮ್ಮ ವ್ಯಾಪ್ತಿ ಮತ್ತು ಹಿರಿಮೆಯನ್ನು ಅರಿತು ಯಾರದೇ ಒತ್ತಡಕ್ಕೆ ಒಳಗಾಗದೇ ಕೆಲಸ ಮಾಡಬೇಕಿದೆ. ಆದರೆ ಲಕ್ಷಣ ಸನ್ನಿವೇಶವೊಂದು ಎದುರಾಗಿದೆ. ಇದರ ಜತೆಗೆ ಮಾದಕದ್ರವ್ಯ ಪ್ರಸರಣದ ಕಾರಣಕ್ಕೂ ನಮ್ಮ ರಾಜ್ಯ ಕೆಟ್ಟ ಹೆಸರನ್ನು ಪಡೆದುಕೊಂಡಿದೆ. ಡ್ರಗ್ಸ್ ವಿಚಾರದಲ್ಲಿ ಮುಂಬಯಿ ಒಂದು ಪ್ರಮುಖ ಕೇಂದ್ರವೇ ಆಗಿರುವಂತೆ ಕಾಣುತ್ತಿದೆ. ಎನ್‌ಸಿಬಿಯ ಮುಂಬಯಿ ಭಾಗದ ಮುಖ್ಯಸ್ಥ ಸಮೀರ್ ವಾಂಖೆಡೆ ಡ್ರಗ್ ಪೆಡ್ಲರ್ ಗಳ ವಿರುದ್ಧ ಉಗ್ರಕ್ರಮವನ್ನು ಕೈಗೊಂಡಿದ್ದಾರೆ. ಆದರೆ ಅವರನ್ನು ರಾಜಕೀಯ ಕಾರಣದ ದಾಳಿಗೆ ಗುರಿ ಮಾಡುತ್ತಿದ್ದಾರೆ ಎಂಬುದು ಬೇಸರ ತರುವ ಸಂಗತಿ.

ಆದರೆ ಅವರಾರಿಗೂ ತಲೆಬಾಗಿಸುತ್ತಿಲ್ಲ ಎಂಬುದು ಹೆಮ್ಮೆಯ ಸಂಗತಿ. ಇದುವರೆಗೆ ಸುಮಾರು ೧೭೦೦೦ ಕೋಟಿ ರು. ಮೌಲ್ಯದ ಮಾದಕದ್ರವ್ಯಗಳನ್ನು ಅವರ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂಬುದು ಗಮನಾರ್ಹ ಸಂಗತಿ. ಅವರ ಹೆಸರು ಕೇಳಿದರೆ ಡ್ರಗ್ ಮಾಫಿಯಾ ತತ್ತರಿಸುವಂತಾಗಿದೆ. ದೇಶದ ಯುವ ಸಮೂಹವನ್ನು ಹಾಳುಮಾಡುತ್ತಿರುವ ಮಾದಕದ್ರವ್ಯಗಳ ಪಿಡುಗಿನ ಮೂಲೋತ್ಪಾಟನೆ ಮಾಡಲು ಹೊರಟಿರುವ ಇಂತಹ ದಕ್ಷ ಅಧಿಕಾರಿಗೆ ಎಲ್ಲರೂ ಸಹಕಾರವನ್ನು ಕೊಡಬೇಕಿದೆ.

ಆರೋಪ-ಪ್ರತ್ಯಾರೋಪಗಳನ್ನು ಗಮನಿಸಿದಾಗ ಅದೆಲ್ಲವೂ ಈ ರಾಜ್ಯದ ರಾಜಕೀಯ ಸಂಸ್ಕೃತಿಯ ಭಾಗ ಎಂಬುದು ತಿಳಿಯು ತ್ತದೆ. ರಾಜಕೀಯಕ್ಷೇತ್ರದಲ್ಲಿ ಯಾರ ವಿರುದ್ಧ ಬೇಕಾದರೂ ದೂರುಗಳ ಕೂರಂಬುಗಳನ್ನು ಎಸೆಯುತ್ತಿರಬಹುದು, ಆದರೆ ಅದೆಲ್ಲದಕ್ಕೂ ಪುರಾವೆ ಬೇಕಲ್ಲ? ತನ್ನ ಮನಸ್ಸಿಗೆ ತೋಚಿದಂತೆ ಇಂದು ಯಾರು ಇನ್ಯಾರದೇ ವಿರುದ್ಧ ತಮಗೆ ತೋಚಿದಂತೆ ಏನು
ಬೇಕಾದರೂ ದೂರುತ್ತ ಕೂರಬಹುದು.

ಪುರಾವೆಗಳಿಲ್ಲದೇ ಇದ್ದರೂ ಒಂದು ಹೊರೆಯಷ್ಟು  ದೂರುಗಳನ್ನು ಇನ್ನೊಬ್ಬರ ಮೇಲೆ ಎಸೆಯುತ್ತ ಕೂರುವುದು ಇಂದು ಸಾಮಾನ್ಯವಾಗಿ ಬಿಟ್ಟಿದೆ. ಇಂತಹ ಅನಗತ್ಯ ದೂರುವ ಸಂಸ್ಕೃತಿ ಕೊನೆಗೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ. ಒಂದೊಮ್ಮೆ ನೀವು ಇನ್ನೊಬ್ಬರ ಮೇಲೆ ಆರೋಪ ಮಾಡುತ್ತೀರಿ ಎಂದಾದರೆ ಅದನ್ನು ಸಾಬೀತು ಪಡೆಸುವ ಹೊಣೆಯೂ ನಿಮ್ಮದೇ
ಆಗಿರಬೇಕು. ಇದಾಗದೇ ಇದ್ದಲ್ಲಿ ಇಂತಹ ವೃಥಾರೋಪಗಳ ಪ್ರಕ್ರಿಯೆಯನ್ನು ಜನ ಹಗುರಾಗಿ ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಇಂದು ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಮತ್ತು ಆಡಳಿತಾತ್ಮಕ ಸನ್ನಿವೇಶಗಳು ರಾಜ್ಯದ ಘನತೆ ಮತ್ತು ಗೌರವಕ್ಕೆ
ಕುಂದುಂಟು ಮಾಡಿವೆ ಎಂಬುದನ್ನು ನೀವು ಒಪ್ಪುತ್ತೀರಿ ಎಂದು ಭಾಸುತ್ತೇನೆ. ಈ ಪ್ರವೃತ್ತಿಯನ್ನು ತೊಡೆಯಲೇ ಬೇಕಿದೆ, ಆದರೆ ಅದಕ್ಕೆ ಸಾಕಷ್ಟು ಸಮಯ ತಗಲಬಹುದು.

ರಾಜ್ಯ ಮುಖ್ಯವೋ, ನಿಮ್ಮ ಕೆಟ್ಟ ರಾಜಕೀಯ ನಡೆಗಳು ಮುಖ್ಯವೋ ಎಂಬುದನ್ನು ರಾಜ್ಯದ ಎಲ್ಲ ರಾಜಕೀಯ ಪಕ್ಷಗಳೂ ಅರಿತು ಮುನ್ನಡೆಯಬೇಕಿದೆ. ಆದರೆ ನನ್ನದೊಂದು ವಿನಂತಿ, ದಯಟ್ಟು ಯಾರೂ ಮಹಾರಾಷ್ಟ್ರ ರಾಜ್ಯದ ಘನತೆಗೆ ಕುಂದುಂಟು ಮಾಡುವ ಕೆಲಸಗಳನ್ನು ಮಾಡಬೇಡಿ.