Sunday, 31st May 2020

ಮಲೆನಾಡು ಅಲ್ಲ, ಈಗ ಮಳೆನಾಡು …

ಚಿಕ್ಕಮಗಳೂರು: ಜಿಲ್ಲಾದ್ಯಂತ ಆಶ್ಲೇಷ ಮಳೆಯ ಅಬ್ಬರ ಬುಧವಾರವು ಮುಂದುವರಿದಿದ್ದು, ಜನಜೀವನ ದುಸ್ತರವಾಗಿದೆ. ಜಿಲ್ಲೆಯಲ್ಲಿ ಹರಿಯುವ ಐದು ನದಿಗಳು ಪ್ರವಾಹದ ಮಟ್ಟ ಮೀರಿ ಹರಿಯುತ್ತಿದ್ದು, ಮಲೆನಾಡು ಭಾಗದಲ್ಲಿ ಜಲಪ್ರಳಯವೇ ಉಂಟಾಗಿದೆ.
ಎಡಬಿಡದೆ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಬುಧವಾರ ಸುರಿದ ಮಳೆಯ ಅವಾಂತರಕ್ಕೆ ಒಂದು ಜೀವ ಬಲಿಯಾಗಿದೆ. ನೂರಾರು ಎಕರೆ ಭತ್ತ, ಅಡಿಕೆ ತೋಟ ಜಲಾವೃತಗೊಂಡಿವೆ.
ಜಿಲ್ಲೆಯಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ, ನೇತ್ರಾವತಿ, ವೇದಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹೇಮಾವತಿಯ ಅಬ್ಬರಕ್ಕೆ ನೆರೆಯಲ್ಲಿ ಸಿಲುಕಿದ ಹಂತೂರು ಗ್ರಾಮದ 9 ಜನರನ್ನು ಹಾಗೂ ಮೂರು ಹಸುಗಳನ್ನು ಹರೇ ರಾಮ ಹರೇ ಕೃಷ್ಣ ಆಶ್ರಮದ ಸಿಬ್ಬಂದಿ ಹಾಗೂ ಅಧಿಕಾರಿಗಳು ರಕ್ಷಣೆ ಮಾಡಿ, ಅವರಿಗೆ ಹಂತೂರು ಶಾಲೆಯಲ್ಲಿ ಆಶ್ರಯ ನೀಡಲಾಗಿದೆ.
ಜಿಲ್ಲೆಯ ಕುದುರೆಮುಖ, ಕಳಸ, ಕೆರೆಕಟ್ಟೆ ಭಾಗದಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದ್ದು, ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಬುಧವಾರ ಸಂಪೂರ್ಣ ಜಲಾವೃತವಾಗಿ ವಾಹನ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ.

ಮೊದಲ ಬಲಿ:
ಬುಧವಾರ ಸುರಿದ ಮಳೆಗೆ ವ್ಯಕ್ತಿ ಬಲಿಯಾಗಿದ್ದು, ನರಸಿಂಹರಾಜಪುರ ತಾಲೂಕಿನ ಮಾಳುರುದಿಣ್ಣೆ ಗ್ರಾಮದಲ್ಲಿ ಗದ್ದೆ ಕೆಲಸ ಮಾಡುವ ವೇಳೆ ಗಾಳಿ ಮಳೆಗೆ ಹರಿದು ಬಿದ್ದ ವಿದ್ಯುತ್ ತಂತಿ ತುಳಿದು ಕಾರ್ಮಿಕ ಕುಮಾರ್ ಮೃತಪಟ್ಟಿದ್ದಾನೆ.

ಮೂಡಿಗೆರೆ ತಾಲೂಕಿನ ಹೇಮಾವತಿ ನದಿ ಪ್ರವಾಹದಲ್ಲಿ ಸಿಲುಕಿದ್ದ ಹಂತೂರು ಗ್ರಾಮದ ಜನರನ್ನು ಪ್ರವಾಹದಿಂದ ರಕ್ಷಿಸಿ ಕರೆತರುತ್ತಿರುವುದು.

ಇಟ್ಟಿನಹಟ್ಟಿ ಹಾಗೂ ಕುಳಗೂರು ಗ್ರಾಮಗಳಿಂದ ಶೃಂಗೇರಿಗೆ ಕಲ್ಪಿಸುವ ರಸ್ತೆಯಲ್ಲಿದ್ದ ಕಿರು ಸೇತುವೆ ನೀರಿನಲ್ಲಿ ಮುಳುಗಡೆಯಾದ ಪರಿಣಾಮ ಸೇತುವೆ ದಾಟಲು ಸ್ಥಳೀಯರು ಹರಸಾಹಸ ಪಡುತ್ತಿರುವುದು.

ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಬುಧವಾರ ಸಂಪೂರ್ಣ ಜಲಾವೃತವಾಗಿರುವುದು.

Leave a Reply

Your email address will not be published. Required fields are marked *