Thursday, 3rd December 2020

ಮದುವೆ ಲಗೇಜ್ ಪುರಾಣ

ನಮ್ಮ ಕಡೆಯವರ ಮದುವೆ ಎಂದ ಮೇಲೆ ಹದಿನೈದು ಸೀರೆ, ಅರ್ಜಂಟಿಗೆ ಇರಲಿ ಎಂದು ಇನ್ನೂ ಒಂದೆರಡು ಸೀರೆ ಬೇಕೇ ಬೇಕು. ಎಲ್ಲವನ್ನೂ ತುಂಬಿದ ಆ ಸೂಟ್‌ಕೇಸ್ ಗತಿ ಏನಾಯಿತು?

ನಳಿನಿ ಟಿ ಭೀಮಪ್ಪ ಧಾರವಾಡ

ಹತ್ತಿರ ಸಂಬಂಧಿಕರ ಮದುವೆಗೆ ಹೋಗುವ ಸಮಯ ಹತ್ತಿರವಾಯಿತು ಎಂದರೆ ನಮ್ಮ ಕಬೋರ್ಡ ಮೇಲಿನ ಅಟ್ಟದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ದೊಡ್ಡ ದೊಡ್ಡ ಬ್ಯಾಗುಗಳಿಗೆ ಗ್ರಹಚಾರ ವಕ್ಕರಿಸಿದೆ ಎಂದೇ ಅರ್ಥ.

ಯಜಮಾನರು ಸರಸರ ಏಣಿಯಿಟ್ಟು ಹತ್ತಿ, ಯಾವ್ಯಾವ ಬ್ಯಾಗು, ಸೂಟ್‌ಕೇಸು, ಟ್ರಾಲಿ ಇಳಿಸಲಿ ಎಂದು ಕೇಳುತ್ತಿದ್ದಂತೆ ಅವರ ಮೇಲೆ ಉರಿಗಣ್ಣು ಬಿಡುವ ಮನಸ್ಸಾದರೂ, ಕೇಳಿದ್ದರಲ್ಲಿ ತಪ್ಪಿಲ್ಲ ಎಂದು ಗೊತ್ತಿರುವುದರಿಂದ, ತೆಪ್ಪಗೆ ಲೆಕ್ಕ ಹೇಳಿ ಇಳಿಸಿ ಕೊಳ್ಳುತ್ತೇನೆ.

ಮಕ್ಕಳು ಹಾಗೂ ಯಜಮಾನರು ಇದ್ದುದ್ದರಲ್ಲಿ ಒಂದು ಮೀಡಿಯಮ್ ಬ್ಯಾಗು ಆರಿಸಿಕೊಂಡು, ನಾವು ಮೂರೂ ಜನ ಬಟ್ಟೆ
ಇಟ್ಟುಕೊಳ್ಳುವುದಕ್ಕೆ ಇದೊಂದು ಬ್ಯಾಗು ಸಾಕು, ನೀ ಮಾತ್ರ ನಮ್ಮ ಬ್ಯಾಗಿನ ತಂಟೆಗೆ ಬರಬೇಡ, ಇದರಲ್ಲಿ ನಿನ್ನ ಒಂದು ಸಾಮಾನೂ ಸಹ ಇಡಬೇಡ, ಅದನ್ನು ಹುಡುಕಲು ಹೋಗಿ ನಾವು ನೀಟಾಗಿ ಇಟ್ಟಿದ್ದನ್ನೆಲ್ಲ ಕೆದರಿ ಹಾಕ್ತೀಯಾ ಎಂದು ಕಟ್ಟಪ್ಪಣೆ ಮಾಡಿಯೇ ಹೋಗುತ್ತಾರೆ. ಅವ್ರ ಏನೇ ವಾರ್ನಿಂಗ್ ಕೊಟ್ಟರೂ ಕೊನೆಗೆ ಒಂದು ಕರ್ಚಿಪ್ ಆದರೂ ಅವರ ಬ್ಯಾಗಿನಲ್ಲಿ ಹಾಕುವುದು ಗ್ಯಾರಂಟೀ ಬಿಡಿ. ಊರಿಗೆ ಹೋಗಲು ಒಂದು ತಾಸು ಇರುವಾಗ ಅವರು ಮೂರೂ ಜನ ಬ್ಯಾಗ್ ರೆಡಿ ಮಾಡಿಕೊಳ್ಳುತ್ತಾರೆ.

ಆದರೆ ನನ್ನದು ಹಾಗಲ್ಲ. ಹಿಂದಿನ ದಿನದಿಂದಲೇ ರೂಮಿನ ತುಂಬಾ ಬ್ಯಾಗುಗಳು, ಬಟ್ಟೆಗಳನ್ನು ಹರಡಿಕೊಂಡು, ಯಾವುದು ತೆಗೆದುಕೊಂಡು ಹೋಗುವುದು, ಯಾವುದು ಬಿಡುವುದು ಎಂದು ಹುಚ್ಚಿಯ ಹಾಗೆ ತಲೆ ಕೆಡಿಸಿಕೊಂಡು ಕುಳಿತಿರುತ್ತೇನೆ. ನನ್ನ
ಅವತಾರ ನೋಡಿ ರಾತ್ರಿ ಇವಳು ಊಟಕ್ಕೆ ಹಾಕುತ್ತಾಳೋ, ಇಲ್ಲವೋ ಎಂದು ಎಲ್ಲರೂ ಅನುಮಾನದಿಂದ ಬಗ್ಗಿ ಬಗ್ಗಿ ನೋಡುತ್ತಿರುತ್ತಾರೆ.

ನಮ್ಮ ಬಂಧುಗಳ ಮದುವೆ
ನೀವೇ ಹೇಳಿ ನಮ್ಮವರ ಮದುವೆ ಎಂದ ಮೇಲೆ ಸುಮ್ನೆ ಆಗುತ್ತಾ? ದೇವಕಾರ್ಯದ ದಿನದ ಮುಂಚಿನ ದಿನವೇ ಹಾಜರಿರಬೇಕು.
ಕನಿಷ್ಟ ನಾಲ್ಕೈದು ದಿನಕ್ಕಾಗುವಷ್ಟು ರೇಷ್ಮೆ ಸೀರೆಗಳನ್ನು ಇಟ್ಟುಕೊಳ್ಳಬೇಕು. ಮೊದಲೇ ಅಕ್ಕತಂಗಿಯರು, ಓರಗಿತ್ತಿಯರು, ವೈನಿಯರು ಎಲ್ಲರೂ ಸೇರಿ ಇಂತಿಂತ ದಿನ ಇಂತಿಂತಹ ಸೀರೆ, ಒಡವೆ ಹಾಕಿಕೊಳ್ಳುವುದು ಅಂತಾ ಒಂದು ತಿಂಗಳಿನಿಂದಲೂ ದೊಡ್ಡ ಚರ್ಚೆಯೇ ನಡೆಸಿರುತ್ತೇವೆ. ಇನ್ನು ರೇಷ್ಮೆೆ ಸೀರೆ ಉಡುವ ಮುಂಚೆ ಉಡಲು ಸೀರೆ, ಬಿಚ್ಚಿ ಹಾಕಿದ ಮೇಲೆ ಒಂದು ಸೀರೆ ಎಂದು ಲೆಕ್ಕ ಹಾಕಿದರೆ ಹೆಚ್ಚು ಕಡಿಮೆ ಹದಿನೈದು ಸೀರೆಗಳು. ಮತ್ತೆ ಒಂದೆರಡು ಸೀರೆ ಹೆಚ್ಚಿಗೆ ಇರಲಿ ಅಂತ ಮರೆಯುವುದಿಲ್ಲ. ಜೊತೆಯಲ್ಲಿ ಅದಕ್ಕೆ ಬೇಕಾಗುವ ಮ್ಯಾಚಿಂಗ್ ಪೆಟ್ಟಿಕೋಟುಗಳು, ರಾತ್ರಿಯ ಉಡುಪುಗಳು, ಪ್ರಯಾಣಕ್ಕೆ ಬೇಕಾಗುವ ಚೂಡಿದಾರ್ ‌ಗಳು ಹೀಗೆ ಎಲ್ಲ ಬಟ್ಟೆಗಳೂ ಸೇರಿ ದೊಡ್ಡ ರಾಶಿಯೇ ಆಗುತ್ತದೆ. ಕನಿಷ್ಟ ಎರಡು ಬ್ಯಾಗುಗಳಾದರೂ ತುಂಬುತ್ತವೆ.

ಬರೀ ಬಟ್ಟೆ ಜೋಡಿಸಿಕೊಂಡರೆ ಆಯಿತೇ? ಅದಕ್ಕೆ ಮ್ಯಾಚಿಂಗ್ ಬಳೆಗಳು, ಬಿಂದಿ, ನೇಲ್ ಪಾಲೀಶ್, ಕ್ಲಿಪ್ಪು, ಹೇರ್‌ಪಿನ್, ಹೇರ್
ಬ್ಯಾಂಡ್, ಮ್ಯಾಚಿಂಗ್ ಒಡವೆ ಸೆಟ್ಟುಗಳು, ಮೇಕಪ್ಪಿನ ಸಾಮಾನುಗಳು, ಎಲ್ಲದಕ್ಕೂ ಮತ್ತೊಂದು ಬ್ಯಾಗ್ ರೆಡಿ. ಎಲ್ಲಾ ಬ್ಯಾಗು ಗಳೂ ಸಹ ಹೊಟ್ಟೆ ಬಿರಿದುಕೊಂಡು, ಜಿಪ್ಪು ಯಾವಾಗ, ಎಲ್ಲಿ ಫಟ್ ಎನ್ನುತ್ತದೆಯೋ ಎನ್ನುವ ಹಾಗೆ ತುಂಬಿರುತ್ತವೆ.

ಸೂಟ್‌ಕೇಸ್ ಮುಚ್ಚುವುದಕ್ಕೆ ಅದರ ಮೇಲೆ ಕುಳಿತು ಭಾರ ಬಿಟ್ಟು, ಆಕಡೆ ಈಕಡೆ ಹೊರಳಾಡಿ ಸರ್ಕಸ್ ಮಾಡಿದರೆ ಮಾತ್ರ ಲಾಕ್ ಮಾಡಲು ಸಾಧ್ಯ ಬಿಡಿ. ಇನ್ನು ತಂಗಿಯ ಮಕ್ಕಳಿಗೆ ಇಷ್ಟ ಎಂದು ಧಾರವಾಡ ಪೇಢಾ, ಅಪ್ಪನಿಗೆ ಇಷ್ಟ ಎಂದು ಮನೆಯಲ್ಲಿ ಮಾಡಿದ ಬೇಸನ್ ಲಾಡು, ಪ್ರಯಾಣದ ನಡುವೆ ಮಕ್ಕಳಿಗೆಂದು ಕುರುಕಲು ತಿಂಡಿಗಳು, ನೀರು ಎನ್ನುವಷ್ಟರಲ್ಲಿ ಮತ್ತೊಂದು ಬ್ಯಾಗು ತುಂಬಿರುತ್ತದೆ. ಜೊತೆಗೆ ಜಂಭದ ಚೀಲವಂತೂ ಖಾಯಂ ಸಂಗಾತಿ. ಕಾರಿನಲ್ಲಿ ಲಗೇಜ್ ಇಡುವಾಗ ನನ್ನ ಲಗೇಜುಗಳ ನಡುವೆ ಅವರು ಮೂರು ಜನದ ಒಂದು ಬ್ಯಾಗ್, ಪಾಪ, ಇಲಿಮರಿಯಂತೆ ಎಲ್ಲೋ ಸಿಕ್ಕಿಹಾಕಿಕೊಂಡಿರುತ್ತದೆ. ಎಷ್ಟು ಲಗೇಜ್ ಕಡಿಮೆ ಮಾಡು ಎಂದರೂ ಅಷ್ಟೇ ಎಂದು ಗೊಣಗುತ್ತಲೇ ಕಾರು ತುಂಬಿಸುತ್ತಿರುತ್ತಾರೆ.

ಊರಿಗೆ ಹೋಗಿ ಇಳಿಯುತ್ತಿದ್ದಂತೆ ತಮ್ಮ ಓಡಿ ಬಂದು, ನಮ್ಮ ಯಜಮಾನರು ತೆಗೆದು ತೆಗೆದು ಕೊಟ್ಟ ಒಂದೊಂದೇ  ಲಗೇಜು ಗಳನ್ನು ಒಳ ಸಾಗಿಸುತ್ತಾನೆ. ಒಬ್ಬಳೇ ಸಿಕ್ಕಾಗ ,ಅಲ್ವೇ ಅಕ್ಕ, ನೀನು ಮೂರು ದಿನ ಮದುವೆಗೆ ಬಂದರೂ ಇಷ್ಟೇ ಲಗೇಜು, ಮೂವತ್ತು ದಿನ ರಜೆಗೆ ಬಂದರೂ ಇಷ್ಟೇ ಇರುತ್ತದೆ ನೋಡು ಎಂದು ಕಿಚಾಯಿಸುವುದನ್ನು ಮಾತ್ರ ಮರೆಯುವುದಿಲ್ಲ. ಅಮ್ಮ ಅಂತೂ, ನಿನ್ನ ಗಂಡ ನಿನ್ನ ಲಗೇಜುಗಳನ್ನು ಹೊರುವುದಕ್ಕಾಗಿಯೇ ನಿನ್ನ ಜೊತೆಯಲ್ಲಿ ಬರಬೇಕು ನೋಡು ಮಾರಾಯ್ತಿ ಅಂತಾ ಕಾಡಿಸುತ್ತಾಳೆ.

ಯಾರು ಏನಾದರೂ ಅನ್ನಲಿ, ನನಗೆ ಮಾತ್ರ ಒಂದು ಸಾಮಾನು ಕಡಿಮೆಯಾದರೂ ನಡೆಯುವುದಿಲ್ಲ. ಮದುವೆ ಮುಗಿಸಿಕೊಂಡು ಬರುವಾಗ ಮತ್ತೆರಡು ಬ್ಯಾಗುಗಳು ಹೆಚ್ಚೇ ಆಗಿರುತ್ತವೆಯೇ ಹೊರತು ಕಡಿಮೆ ಅಂತೂ ಆಗುವುದಿಲ್ಲ, ಅಲ್ವಾ?

Leave a Reply

Your email address will not be published. Required fields are marked *