Sunday, 3rd July 2022

ಮಾಸ್ ಶೂಟಿಂಗ್ಸ್ ಇನ್ ಅಮೆರಿಕ-1

ಶಿಶಿರ ಕಾಲ

ಶಿಶಿರ್‌ ಹೆಗಡೆ

shishirh@gmail.com

೨೦೨೨ರಲ್ಲಿಯೇ ಇಲ್ಲಿಯವರೆಗೆ ಅಮೆರಿಕದಲ್ಲಿ ಇಂತಹ 223 ಮಾಸ್ ಶೂಟಿಂಗ್‌ಗಳು, ಮಾಸ್ ಮರ್ಡರ್‌ಗಳು ನಡೆದಿವೆ. ಈ ವರ್ಷ ಇಲ್ಲಿಯವರೆಗೆ 17,232- ಇದು ಅಮೆರಿಕದಲ್ಲಿ ಗನ್ ಕ್ರೌರ್ಯದಿಂದ ಆದ ಒಟ್ಟೂ ಸಾವಿನ ಸಂಖ್ಯೆ.

ನೋ ಡೌಟ್- ಅಮೆರಿಕ ಬಹಳ ಸುಂದರ ದೇಶ. ಸುಂದರ ಎಂದರೆ ಕೇವಲ ಚಂದಕ್ಕೆ ಕಾಣುವ ರಸ್ತೆ ಪಾರ್ಕುಗಳಷ್ಟೇ ಅಲ್ಲ. ಬಿಜಿಎಲ್ ಸ್ವಾಮಿಯವರ ‘ಅಮೆರಿಕದಲ್ಲಿ ನಾನು’, ಮೂರ್ತಿರಾಯರ ‘ಅಪರ ವಯಸ್ಕನ ಅಮೆರಿಕ ಯಾತ್ರೆ, ‘ನನ್ನ ಗ್ರಹಿಕೆಯ
ಅಮೆರಿಕ’,  ‘ಶಿಕ್ಷಕನ ನೋಟದಲ್ಲಿ ಅಮೆರಿಕ’- ಹೀಗೆ ಹತ್ತಾರು ಕನ್ನಡಿಗರ ಅಮೆರಿಕ ಪ್ರವಾಸ ಕಥನಗಳು ಪ್ರಕಟವಾಗಿವೆ.

ಇವೆಲ್ಲ ಒಳ್ಳೆಯ ಪುಸ್ತಕಗಳೇ, ಆದರೆ ಇಲ್ಲಿ ಬರಹಗಾರನ ದೃಷ್ಟಿಕೋನ ಕೇವಲ ಒಬ್ಬ ಪ್ರವಾಸಿಗನದು. ದೇಶವನ್ನು ಪ್ರವಾಸಿ ನೋಡುವ ರೀತಿಯೇ ಬೇರೆಯದಾಗಿರುತ್ತದೆ. ಈ ಪುಸ್ತಕಗಳು ಅಮೆರಿಕದ ರಸ್ತೆ, ಬಿಲ್ಡಿಂಗುಗಳು, ನಗರಗಳು, ಅಲ್ಲಿನ ಚರಂಡಿ ವ್ಯವಸ್ಥೆಗಳು, ನಯಾಗರಾ, ನ್ಯೂಯಾರ್ಕ್ ನಗರ, ಗ್ರ್ಯಾಂಡ್ ಕಾನ್ಯನ್ ಇವೆಲ್ಲವನ್ನು ಬಹಳ ಚಂದವಾಗಿ ಬಣ್ಣಿಸಿವೆ. ಆದರೆ ಇಂತಹ ಪ್ರವಾಸ ಕಥನಗಳಲ್ಲಿ ಅಮೆರಿಕದ ಒಳ ವ್ಯವಸ್ಥೆಗಳು, ಸಾಮಾನ್ಯನಾಗಿ ಬದುಕುವಾಗ ಆಗುವ ಅನುಭವಗಳ ಬಗ್ಗೆ ವಿವರ ಗಳಿರುವುದಿಲ್ಲ.

ಆಗ ಇವು ಅಮೆರಿಕವನ್ನು ಪೂರ್ಣವಾಗಿ ಕಟ್ಟಿಕೊಡುವಲ್ಲಿ ಸೋಲುತ್ತವೆ. ಇದೆಲ್ಲದರ ಆಚೆ ಒಂದು ಅಮೆರಿಕವಿದೆ. ಅದು ಬದುಕಿನ ಅನುಭವಕ್ಕೆ ಬರುವ ಅಮೆರಿಕ. ಆ ಅಮೆರಿಕದಲ್ಲಿ ಅದ್ಭುತವಾದ ಆಂತರಿಕ ವ್ಯವಸ್ಥೆಗಳ, ಬದುಕಿನ ಅನುಕೂಲಗಳ, ರಗಳೆಗಳಿಲ್ಲದ ಬದುಕಿನ ಅನುಭವವಾಗುತ್ತದೆ. ಉದಾಹರಣೆಗೆ, ಇಲ್ಲಿ ಮನೆ ಸಂಬಂಧ ಪ್ರತಿಯೊಂದು ಬದಲಾವಣೆಗೂ ಸರಕಾರಿ ಅನುಮತಿ ಬೇಕು. ಮನೆಯ ಯಾವುದೇ ಆಂತರಿಕ ರಚನೆ ಬದಲಿಸುತ್ತೀರೆಂದರೆ, ಗಾರ್ಡನ್ನಿಗೆ ನೀರಿನ ಪೈಪ್ ಲೈನ್ ಮಾಡುತ್ತೀ ರೆಂದರೆ, ಸ್ವಂತ ಮನೆಯನ್ನು ಬಾಡಿಗೆಗೆ ಕೊಡುತ್ತೀರೆಂದರೆ ಹೀಗೆ.

ಕೊನೆಯಲ್ಲಿ ಮನೆಯ ಆವರಣದ ಸುತ್ತ ಬೇಲಿ ಹಾಕುತ್ತೀರಿ ಎಂದರೂ ಸರಕಾರಿ ಅನುಮತಿಯನ್ನು ಪಡೆಯಲೇಬೇಕು. ಮಾಡಿಸ ಲಷ್ಟೇ ಅನುಮತಿಯಲ್ಲ- ಅದು ಸರಿಯಾಗಿ, ನಿಯಮದಂತೆ, ಸುರಕ್ಷಿತ ಮಾಡಲಾಗಿದೆಯೇ ಎಂದು ನೋಡಲು ಸರಕಾರಿ ಅಧಿಕಾರಿ ಗಳು ಮನೆಗೆ ಬಂದು ಪರೀಕ್ಷಿಸಿ ಹೋಗುತ್ತಾರೆ. ಎಲ್ಲವಕ್ಕೂ ನಿಯಮಗಳು- ನಿಯಮಗಳು ನಿರ್ಬಂಧಗಳಲ್ಲ, ಕೆಲವು ಕೇರಿಯ ಅಂದ ಚಂದವನ್ನು ಕಾಪಾಡಲು, ಇನ್ನು ಕೆಲವು ಸುರಕ್ಷತೆಗೆ. ಮನೆಯ ಸುತ್ತಲಿನ ಬೇಲಿಗೆ ಹಾಕುವ ಗುಟ್ಟ ಮೂರು ಫೀಟ್ ಹುಗಿದಿ ರಬೇಕು- ಈ ನಿಯಮ ಪಕ್ಕದಲ್ಲಿ ನಡೆಯುವ ದಾರಿಹೋಕನ ಸುರಕ್ಷತೆಗೆ.

ಸರಕಾರಿ ಕಚೇರಿಯಿರಲಿ, ಪೊಲೀಸ್ ವ್ಯವಸ್ಥೆಯಿರಲಿ- ಎಡೆ ಸಾರ್ವಜನಿಕರ ಸೇವೆಗೆ ಮೊದಲ ಆದ್ಯತೆ. ನನಗಂತೂ ಕಳೆದ ಒಂದು ದಶಕದಲ್ಲಿ ಒಮ್ಮೆಯೂ ಲಂಚವನ್ನು ಕೊಡುವ ಮಾತೇ ಬಂದಿಲ್ಲ. ಈ ಎಲ್ಲ ಕಚೇರಿಯ ಇಂಚು ಇಂಚಿನಲ್ಲೂ ವಿನಯತೆ ಗೋಚ ರಿಸುತ್ತದೆ. ಮೊನ್ನೆ ನಮ್ಮ ಮನೆಯ ಬಾಗಿಲನ್ನು ತೆರೆದೇ ಇಟ್ಟು ಅರ್ಧ ದಿನ ಹೊರಕ್ಕೆ ಹೋಗಿಬಿಟ್ಟಿದ್ದೆವು. ವಾಪಾಸ್ ಬಂದಾಗ ಮನೆಯೊಳಗೆ ಯಾರೋ ಹೊಕ್ಕಿರಬಹುದೇ ಎನ್ನುವ ಅನುಮಾನ ಬಂತು. ಬೇರೆ ಕಡೆಯಾಗಿದ್ದರೆ ದೊಣ್ಣೆ ಹಿಡಿದು ನಾವೇ ಅಧೈರ್ಯದಿಂದ ಒಳಕ್ಕೆ ಹೋಗಬೇಕಿತ್ತು, ನೋಡಬೇಕಿತ್ತು. ಆದರೆ ಇಲ್ಲಿ ಅಂಥದ್ದಕ್ಕೆಲ್ಲ ಪೊಲೀಸರನ್ನು ಬಳಸಿಕೊಳ್ಳ ಬಹುದು. ಪೊಲೀಸಿಗೆ ಕರೆಮಾಡಿದರೆ ಸಾಮಾನ್ಯವಾಗಿ ೫ ನಿಮಿಷದ ಒಳಗೆ ಹಾಜರಾಗುತ್ತಾರೆ.

ಪೊಲೀಸ್ ಬಂದು- ಮನೆಯೊಳಕ್ಕೆ ಎಲ್ಲ ಕೋಣೆಗಳಿಗೆ ಹೋಗಿ, ನೋಡಿ, ಮನೆ ಸೇಫ್ ಆಗಿದೆ ಎಂದು ಹೇಳಿ ಹೊರಟುಹೋದ. ವಾಹನ ರಸ್ತೆ ಮಧ್ಯೆ ಕೆಟ್ಟರೆ, ಪೆಟ್ರೋಲ್ ಖಾಲಿಯಾದರೆ ಹೀಗೆ ಎಲ್ಲದಕ್ಕೂ ಪೊಲೀಸರೇ ಮೊದಲು ಸಹಾಯಕ್ಕೆ ಬರುವುದು. ಕಾನೂನು ಮುರಿದಾಗಲೂ ಅದಷ್ಟೇ ವಿನಯದಲ್ಲಿ ಪೊಲೀಸರು ವ್ಯವಹರಿಸುತ್ತಾರೆ. ಹೀಗೆ ಪ್ರತಿಯೊಂದೂ ವ್ಯವಸ್ಥೆ ಇದು
ಹಾಗಿದ್ದರೆ ಚೆನ್ನಾಗಿತ್ತು ಅನ್ನಿಸದಷ್ಟು ಅಚ್ಚುಕಟ್ಟು. ಕೆಲವೊಮ್ಮೆ ನಮ್ಮ ದೇಶದಲ್ಲಿ ಹೀಗೇಕಿಲ್ಲ ಎಂದು ಹೊಟ್ಟೆಕಿಚ್ಚಾಗುವಷ್ಟು.
ನಾನು ಅಮೆರಿಕದ ಬಗ್ಗೆ, ಇಲ್ಲಿನ ಕೆಲವು ಹುಳುಕುಗಳ ಬಗ್ಗೆ ಬರೆದಾಗ, ‘ನೀನು ಅಮೆರಿಕದ ಬಗ್ಗೆ ಬರೀ ಇಂಥದ್ದೇ ಬರೆಯುತ್ತೀಯ, ಒಳ್ಳೆಯದನ್ನೇ ಬರೆಯಬೇಕಪ್ಪ’ ಎಂದು ಪುಕಾರು ತೆಗೆಯುವ ಕೆಲ ಎನ್‌ಆರ್‌ಐ ಸಹೃದಯರಿದ್ದಾರೆ.

ಅವರ ಕಂಪ್ಲೇಂಟ್ ಅವರಿಗೆ ಸರಿಯಾದದ್ದೇ. ಆದರೆ ಆ ಕಾರಣಕ್ಕೆ ಬ್ಯಾಲೆನ್ಸ್ ಮಾಡುವ ಜಾಯಮಾನ ನನ್ನದಲ್ಲ. ಇಲ್ಲಿನ ಹುಳು ಕನ್ನು ಹೆಕ್ಕಿ ಹೇಳಲೂ ಒಂದು ಉದ್ದೇಶವಿರುತ್ತದೆ. ಸಾಮಾನ್ಯವಾಗಿ ಅದು ದೇಶದ ಹುಳುಕು ಎನ್ನುವುದಕ್ಕಿಂತ ಆಧುನಿ ಕತೆಯ ಹುಳುಕು ಎನ್ನುವ ರೀತಿಯಲ್ಲಿ ನನ್ನ ಬರಹಗಳಿರುತ್ತವೆ, ನೀವು ಅದನ್ನು ಗಮನಿಸಿರುತ್ತೀರಿ. ಇರಲಿ. ಇಂತಹ ಒಂದು ಅದ್ಭುತ ವ್ಯವಸ್ಥೆಯ ಇನ್ನೊಂದು ಹುಳುಕನ್ನು ನಿಮಗಿವತ್ತು ಹೇಳಬೇಕು. ಅದು ಅಮೆರಿಕದ ಮಾಸ್ ಶೂಟಿಂಗ್ ಬಗ್ಗೆ. ಈ ಹಿಂದೆ ಅಮೆರಿಕದ ಗನ್ ಹಿಂಸೆಗಳ ಬಗ್ಗೆ ಬರೆದಿದ್ದೆ. ಆ ಸಂದರ್ಭದಲ್ಲಿ ಇಲ್ಲಿನ ಮಾಸ್ ಶೂಟಿಂಗ್ ಬಗ್ಗೆ ಒಂದೆರಡು ಸಾಲು ಬರೆದ ನೆನಪು.

ಅಮೆರಿಕದ ವ್ಯವಸ್ಥೆಗೇ ಕಪ್ಪು ಚುಕ್ಕಿಯಿಡುವಂತಿವೆ ಈ ಮಾಸ್ ಶೂಟಿಂಗ್‌ಗಳು. ಏನಿದು ಮಾಸ್ ಶೂಟಿಂಗ್? ಸರಳವಾಗಿ ಹೇಳ ಬೇಕೆಂದರೆ ಇಂಥದ್ದೊಂದು ಉದ್ದೇಶವೇ ಇರದೆ, ಪರಿಚಯವಿಲ್ಲದ, ಸಾರ್ವಜನಿಕರ ಮೇಲೆ ಬಂದೂಕಿನಿಂದ ಗುಂಡು ಹಾರಿಸಿ ದಾಳಿ ಮಾಡುವುದು, ಜನರನ್ನು ಮಾರಣಾಂತಿಕ ಗಾಯಗೊಳಿಸುವುದು, ಕೊಲ್ಲುವುದು. ಟೆರರಿಸ್ಟ್‌ಗಳಿಗೆ ಧರ್ಮ ಅಥವಾ ಇನ್ನೊಂದು ಕಾರಣವಿರುತ್ತದೆ. ಆದರೆ ಈ ಅಮೆರಿಕದ ಮಾಸ್ ಶೂಟಿಂಗ್‌ಗಳ ಹಿಂದೆ ಒಂದು ಇಂತಹ ಪರಮ ಕ್ರೌರ್ಯಕ್ಕೆ ಹೊಂದುವ ಯಾವುದೇ ಉದ್ದೇಶವಿರುವುದಿಲ್ಲ. ಅಥವಾ ಮನೆಯವರ ಜತೆ ಹಾಳಾದ ಸಂಬಂಧ, ವ್ಯಕ್ತಿಗೆ ಇನ್ನೆಲ್ಲಿಯೋ- ಹಿಂದೆ
ಯಾವತ್ತೋ ಆದ ಶೋಷಣೆ ಇತ್ಯಾದಿ ಕಾರಣಗಳು- ನಾಮ್‌ಕೆವಾಸ್ತೆ.

ಮಾನಸಿಕ ಗಿರಾಕಿಗಳೇ ಇವರೆಲ್ಲ. ಒಂದು ದಿನ ಎದ್ದು, ಹೊರಟು, ಬೇಕಾಬಿಟ್ಟಿ ಸಾರ್ವಜನಿಕರ ಮೇಲೆ, ಶಾಲೆಗೆ ನುಗ್ಗಿ ಮಕ್ಕಳ, ಟೀಚರ್ಸ್‌ಗಳ ಮೇಲೆ, ರೈಲ್ವೇ ಸ್ಟೇಷನ್ನಿನಲ್ಲಿ ಜನರ ಮೇಲೆ, ಕಿಕ್ಕಿರಿದು ತುಂಬಿದ ದೊಡ್ಡ ಮ್ಯೂಸಿಕ್ ಕನ್ಸರ್ಟ್‌ನ ಜನರ ಮೇಲೆ. ಹೀಗೆ- ಎಂದರಲ್ಲಿ ಗುಂಡು ಹಾರಿಸುವುದು, ಕೊಲ್ಲುವುದು. ಇದೇನೋ ಒಂದೆರಡು ಘಟನೆಗಳಾಗಿದ್ದರೆ ಇದೊಂದು ಸಮಸ್ಯೆ ಎಂದಾಗುತ್ತಿರಲಿಲ್ಲ. ಲೇಖನ ಬರೆಯುವ ಪ್ರಮೇಯವಿರುತ್ತಿರಲಿಲ್ಲ. ಇದರ ಪ್ರಮಾಣ ಹೇಳಲು ಒಂದಿಷ್ಟು ಸಂಖ್ಯೆಯನ್ನು ಹೇಳಲೇಬೇಕು.

2022ರಲ್ಲಿಯೇ ಇಲ್ಲಿಯವರೆಗೆ ಅಮೆರಿಕದಲ್ಲಿ ಇಂತಹ 223 ಮಾಸ್ ಶೂಟಿಂಗ್‌ಗಳು, ಮಾಸ್ ಮರ್ಡರ್‌ಗಳು ನಡೆದಿವೆ. ಈ ವರ್ಷ ಇಲ್ಲಿಯವರೆಗೆ 17,232- ಇದು ಅಮೆರಿಕದಲ್ಲಿ ಗನ್ ಕ್ರೌರ್ಯದಿಂದ ಆದ ಒಟ್ಟೂ ಸಾವಿನ ಸಂಖ್ಯೆ. ಮೊನ್ನೆ ಮಂಗಳವಾರ ಇನ್ನೊಂದು ಇಂಥದ್ದೇ ಘಟನೆ ನಡೆದಿದೆ. ಹದಿನೆಂಟು ವಯಸ್ಸಿನ ಮೀಸೆ ಬೆಳೆಯದ ಹುಡುಗ ಟೆಕ್ಸಸ್‌ನ ಕಿರಿಯ ಪ್ರಾಥಮಿಕ ಶಾಲೆಯೊಳಕ್ಕೆ ಹೊಕ್ಕು, ಘಟನೆಯ ಹಿಂದಿನ ದಿನ ಖರೀದಿಸಿದ ಆಟೋಮೆಟಿಕ್ ಗನ್‌ನಿಂದ ಬೇಕಾಬಿಟ್ಟಿ ಗುಂಡು ಹಾರಿಸಿ,
ನಾಲ್ಕನೇ ತರಗತಿಯ ಒಳಗಿನ 19 ಮಕ್ಕಳನ್ನು ಮತ್ತು ಇಬ್ಬರು ಟೀಚರ್ಸ್ ಅನ್ನು ಕೊಂದು, ನಂತರದಲ್ಲಿ ಪೊಲೀಸರ ಗುಂಡಿಗೆ ಸತ್ತಿದ್ದಾನೆ.

ಇದಕ್ಕಿಂತ ಮೊದಲು ತನ್ನ ಅಜ್ಜಿಯ ಮೇಲೆ ಗುಂಡಿನಿಂದ ದಾಳಿ ಮಾಡಿಯೇ ಮನೆಯಿಂದ ಹೊರಟಿದ್ದ ಈ ಹುಡುಗ. ಇದು ಬಿಟ್ಟು ಇನ್ನು 32 ಮಕ್ಕಳು ಆಸ್ಪತ್ರೆಯಲ್ಲಿ ಇದ್ದಾರೆ. ಈ ಮಾಸ್ ಶೂಟಿಂಗ್‌ಗಳು ಇದೇ ವರ್ಷ ಶುರುವಾಗಿದ್ದೇನಲ್ಲ. 2014ರಲ್ಲಿ 272, 2015ರಲ್ಲಿ 336, 2016ರಲ್ಲಿ 382, 2017ರಲ್ಲಿ 348, 2018ರಲ್ಲಿ 336, 2019ರಲ್ಲಿ 417, 2020ರಲ್ಲಿ 610, 2021ರಲ್ಲಿ 692, ಮತ್ತು 2022ರಲ್ಲಿ ಅರ್ಧ ವರ್ಷವೂ ಕಳೆದಿಲ್ಲ, ಈಗಾಗಲೇ 223 ಮಾಸ್ ಶೂಟಿಂಗ್ ಅಮೆರಿಕದಲ್ಲಿ ನಡೆದಾಗಿದೆ. ಇದೆಲ್ಲ ಕೇವಲ ಕಳೆದ ಕೆಲ ವರ್ಷಗಳ ಮಾಸ್ ಶೂಟಿಂಗ್ ಸಂಖ್ಯೆ.

ಬಂದೂಕಿನಿಂದ (ಆತ್ಮಹತ್ಯೆಯೂ ಸೇರಿ), 2014ರಿಂದ ಈಚೆಗೆ ಏಳುವರೆ ವರ್ಷದಲ್ಲಿ ಒಂದೂಕಾಲು ಲಕ್ಷ ಮಂದಿ ಸತ್ತಿದ್ದಾರೆ. ಅದರಲ್ಲಿ 5000ದಷ್ಟು ಹನ್ನೊಂದು ವಯಸ್ಸಿನ ಕೆಳಗಿನವರು. ಇನ್ನು ಸುಮಾರು 22000ದಷ್ಟು ಮಂದಿ ಹನ್ನೆರಡರಿಂದ ಹದಿನೇಳು ವಯಸ್ಸಿನವರು. ಈ ಮಾಸ್ ಶೂಟಿಂಗ್‌ಗಳು ನಡೆದದ್ದು ಸಾಮಾನ್ಯವಾಗಿ ಸಾರ್ವಜನಿಕ ಸ್ಥಳವಾಗಿದ್ದರೂ ಶಾಲೆಗೆ ಬಂದು ಮಕ್ಕಳ, ಶಿಕ್ಷಕರ ಮೇಲೆ ಗುಂಡು ಹಾರಿಸಿದ ಘಟನೆ ಆಗೀಗ ಎಂಥವರನ್ನೂ ದಿಗಿಲುಗೆಡಿಸುತ್ತದೆ.

1970ರಿಂದೀಚೆ 2032 ಬಾರಿ ಶಾಲೆಯ ಮಕ್ಕಳ ಮೇಲೆ ಈ ರೀತಿಯ ಮಾಸ್ ಶೂಟಿಂಗ್‌ಗಳಾಗಿವೆ. ಕಳೆದ ಹತ್ತು ವರ್ಷಗಳಲ್ಲಿ 948 ಬಾರಿ ಶಾಲೆಗಳ ಮೇಲೆ ಮಾಸ್ ಶೂಟಿಂಗ್ ದಾಳಿಗಳಾಗಿವೆ. ಇಷ್ಟು ಸಂಖ್ಯೆಗಳು ಇದರ ಪ್ರಮಾಣವನ್ನು ಅಂದಾಜಿಸಲು ಸಾಕೆನ್ನಿ ಸುತ್ತದೆ. ಮೊನ್ನೆ ನನ್ನ ಎಂಟು ವರ್ಷದ ಮಗಳು ಮೈನಾ ಹೋಗುವ ಶಾಲೆಯ ಹತ್ತಿರ, ಅಲ್ಲಿಯೊ ಒಬ್ಬ ವ್ಯಕ್ತಿ ಪಿಸ್ತೂಲ್
ಒಂದನ್ನು ಹಿಡಿದು ಕಾರಿನಲ್ಲಿ ಜನರಿಗೆ ತೋರಿಸುತ್ತ ಹೋಗುತ್ತಿದ್ದನಂತೆ. ಅದರಿಂದ ಇಡೀ ಶಾಲೆ ಲಾಕ್‌ಡೌನ್ ಮಾಡಿದ್ದರು.

ಅಮೆರಿಕ ಕಾನೂನಿನಲ್ಲಿಯೇ ಬಂದೂಕನ್ನು ಹೊಂದುವುದು ಹಕ್ಕಿನ ವಿಚಾರ. ಈ ಹಕ್ಕನ್ನು ಪ್ರತಿಪಾದಿಸುವ, ರೈಫಲ್ ಕಂಪನಿ ಗಳಿಂದ ಪೋಷಿಸಲ್ಪಡುವ ಅತ್ಯಂತ ಶಕ್ತಿಯುತ ಅಸ್ಸೊಸಿಯೆಷನ್‌ನ ಹೆಸರು ನ್ಯಾಷನಲ್ ರೈಫಲ್ ಅಸೋಸಿಯೇಷನ್. ಇದು ಎಷ್ಟು ಬಲಶಾಲಿಯೆಂದರೆ ಖುದ್ದು ಇಲ್ಲಿನ ಅಧ್ಯಕ್ಷರು ಅದೆಷ್ಟೋ ಬಾರಿ ಕಟ್ಟುನಿಟ್ಟಿನ ಗನ್ ಕಾನೂನುಗಳನ್ನು ಜಾರಿಗೆ ತರಬೇ ಕೆಂದುಕೊಂಡರೂ ಸಾಧ್ಯವಾಗಿಲ್ಲ. ಈ ಅಸಹಾಯಕತೆಗೆ ಹಿಂದಿನ ಅಧ್ಯಕ್ಷ ಒಬಾಮ ಸಾರ್ವಜನಿಕ ಸಭೆಯಲ್ಲಿ ಬಿಕ್ಕಿ ಅತ್ತಿದ್ದರು ಎಂದರೆ ನೀವೇ ಅಂದಾಜಿಸಿಕೊಳ್ಳಿ.

ಏಕೆ ಅಮೆರಿಕದಂತಹ ಅಮೆರಿಕದ ಅಧ್ಯಕ್ಷರಿಗೆ, ಜಗತ್ತಿನ ಅತ್ಯಂತ ಪವರ್ ಫುಲ್ ವ್ಯಕ್ತಿಗೆ ತನ್ನ ದೇಶದ ಇದೊಂದು ಅಪಸವ್ಯ ವನ್ನು ಸರಿಮಾಡಲಿಕ್ಕಾಗುವುದಿಲ್ಲ? ಇದೆಲ್ಲದರ ವಿರುದ್ಧ ಜನ ದಂಗೆಯೇಳುವುದಿಲ್ಲವೇ? ಇದೇಕೆ ಅಮೆರಿಕಕ್ಕೆ ಬಗೆಹರಿಸದ ಸಮಸ್ಯೆಯಾಗಿ ಅದೆಷ್ಟೋ ದಶಕದಿಂದ ಕಾಡುತ್ತಿದೆ?

(ಮುಂದುವರಿಯುವುದು)