Wednesday, 5th October 2022

ಮ್ಯಾಕ್ಸ್ ವೆಲ್ ವಿವಾಹ ನಿಶ್ಚಯ: ಐಪಿಎಲ್ ಕೆಲವು ಪಂದ್ಯಗಳಿಗೆ ಅಲಭ್ಯ

ಸಿಡ್ನಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಐಪಿಎಲ್ ಕೂಟದ ಮೊದಲ ಕೆಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಆಸ್ಟ್ರೇಲಿಯಾದ ಆಲ್ ರೌಂಡರ್ ವಿವಾಹ ನಿಶ್ಚಯವಾಗಿದೆ.

ಮ್ಯಾಕ್ಸ್ ವೆಲ್ ಅವರು ಪಾಕಿಸ್ಥಾನ ಪ್ರವಾಸ ಮತ್ತು ಐಪಿಎಲ್ ನ ಮೊದಲ ಕೆಲವು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ.

ಮ್ಯಾಕ್ಸ್ ವೆಲ್ ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾಗೆ ಮಾಹಿತಿ ನೀಡಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾದ ಸಲಹೆಯ ಹೊರತಾಗಿಯೂ ನಿರಂತರ ವೇಳಾಪಟ್ಟಿ ಬದಲಾವಣೆಗಳಿಂದಾಗಿ ಡೇಟ್ ಕ್ಲ್ಯಾಶ್ ತಪ್ಪಿಸಲು ಸಾಧ್ಯವಾಗಿಲ್ಲ ಎಂದು ಮ್ಯಾಕ್ಸ್ ವೆಲ್ ಹೇಳಿಕೊಂಡಿದ್ದಾರೆ.

ಗ್ಲೆನ್ ಮ್ಯಾಕ್ಸ್ ವೆಲ್ ಅವರು ಭಾರತೀಯ ಮೂಲದ ವಿನಿ ರಾಮನ್ ಅವರನ್ನು ವರಿಸಲಿದ್ದಾರೆ. ಮಾರ್ಚ್ 27ರಂದು ಗ್ಲೆನ್- ವಿನಿ ವಿವಾಹ ಸಮಾರಂಭ ನಡೆಯಲಿದೆ.

ಆಸ್ಟ್ರೇಲಿಯ ತಂಡವು ಪಾಕಿಸ್ತಾನದಲ್ಲಿ ಮೂರು ಟೆಸ್ಟ್‌ಗಳು, ಮೂರು ಏಕದಿನ ಪಂದ್ಯಗಳು ಮತ್ತು ಒಂದು ಟಿ20 ಪಂದ್ಯವನ್ನು ಆಡಲಿದೆ. ಮೊದಲ ಟೆಸ್ಟ್ ಮಾರ್ಚ್ 4 ರಿಂದ ರಾವಲ್ಪಿಂಡಿಯಲ್ಲಿ ನಡೆಯ ಲಿದ್ದು, ಪ್ರವಾಸದ ಕೊನೆಯ ಪಂದ್ಯ ಏಪ್ರಿಲ್ 5 ರಂದು ನಡೆಯಲಿದೆ.

ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್, ಪ್ಯಾಟ್ ಕಮಿನ್ಸ್, ಮಾರ್ಕಸ್ ಸ್ಟೋಯಿನಸ್, ಜೋಶ್ ಹ್ಯಾಜಲ್ ವುಡ್, ಮ್ಯಾಥ್ಯೂ ವೇಡ್ ಮತ್ತು ಡೇನಿಯಲ್ ಸ್ಯಾಮ್ಸ್ ಆರಂಭಿಕ ಐಪಿಎಲ್ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ.