Sunday, 24th January 2021

ಮೇದಕ್‌ ಚರ್ಚ್‌

ಡಾ. ಉಮಾಮಹೇಶ್ವರಿ ಎನ್.

ತೆಲಂಗಾಣದ ಮೇದಕ್ ಎಂಬಲ್ಲಿರುವ ಚರ್ಚ್ ಭಾರತದ ಸುಂದರ ಚರ್ಚ್ ಗಳಲ್ಲಿ ಒಂದು. ಏಷಿಯಾದ ದೊಡ್ಡ ಚರ್ಚ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದು, ತನ್ನ ವಾಸ್ತುಶೈಲಿಯಿಂದಾಗಿ ಪ್ರವಾಸಿತಾಣವೂ ಆಗಿದೆ. ಈಗ ಚರ್ಚ್ ಆಫ್ ಸೌತ್ ಇಂಡಿಯಾದ ಅಧೀನದಲ್ಲಿದೆ.

ಹೈದರಾಬಾದಿನಿಂದ 97 ಕಿ.ಮೀ. ದೂರದಲ್ಲಿರುವ ಜಾಗಕ್ಕೆ ಚಾಲ್ಸರ್ ವಾಕರ್ ಪೊಸ್ ನೆಟ್ ಎಂಬ ಬ್ರಿಟಿಷ್ ನಾಗರಿಕ ಕುದುರೆ ಸವಾರಿ ಮಾಡಿಕೊಂಡು 1896 ರಲ್ಲಿ ತಲುಪಿದ. ಆಗ ಇಲ್ಲಿನ ಕ್ರಿಶ್ಚಿಯನ್ನರ ಸಂಖ್ಯೆ ಬರೀ ಇನ್ನೂರು. ಪ್ರಾರ್ಥನೆ ಚಿಕ್ಕ ಮನೆಯಂತಹ ಕಟ್ಟಡದಲ್ಲಿ ನಡೆಯುತ್ತಿತ್ತು. ಚೆನ್ನಾಗಿರುವ ಪ್ರಾರ್ಥನಾ ಸ್ಥಳ ನಿರ್ಮಿಸಬೇಕೆಂದು ಒಂದು ಸಾವಿರ ಎಕರೆಗಳ ಜಾಗದಲ್ಲಿ
1914ರಲ್ಲಿ ಕೆಲಸ ಆರಂಭಿಸಿದ. ತೀವ್ರವಾದ ಕ್ಷಾಮ ಆ ಸಮಯದಲ್ಲಿ ಉಂಟಾದುದರಿಂದ ಜನರು ಬಹಳ ಕಷ್ಟದಲ್ಲಿ ಜೀವನ ನಿರ್ವಹಿಸುತ್ತಿದ್ದರು.

ಇಲ್ಲಿನ ಕಾರ್ಮಿಕರಿಗೆ ಚರ್ಚ್ ನಿರ್ಮಾಣದ ಕೆಲಸಗಳು ಸಿಕ್ಕಿದುದರಿಂದ ಬಹಳಷ್ಟು ಉಪಯೋಗವಾಯಿತು. 1924ರಲ್ಲಿ ನಿರ್ಮಾಣ ಪೂರ್ಣಗೊಂಡು ಲೋಕಾರ್ಪಣೆಯಾಯಿತು. ಹಲವಾರು ಕ್ರೈಸ್ತ ಸಂಸ್ಥೆಗಳು ಒಂದಾಗಿ ‘ಚರ್ಚ್ ಆಫ್ ಸೌತ್ ಇಂಡಿಯಾ’ ಎಂದು ನಾಮಾಂಕಿತವಾದಾಗ ಮೇದಕ್ ಚರ್ಚ್ ಅದರ ಅಧೀನಕ್ಕೆ ಒಳಪಟ್ಟಿತು.

ವ್ಯಾಟಿಕನ್‌ನ ನಂತರ ಅನುಯಾಯಿಗಳ ಸಂಖ್ಯೆಯಲ್ಲಿ ಇದು ಅತಿ ದೊಡ್ಡ ಚರ್ಚ್ ಎನ್ನಲಾಗುತ್ತದೆ. ಗೋಥಿಕ್ ಶೈಲಿಯಲ್ಲಿ ನಿರ್ಮಾಣವಾದ ಇದರ ಅಗಲ 100 ಅಡಿಗಳು, ಉದ್ದ 200 ಅಡಿಗಳು. ಒಂದೇ ಬಾರಿಗೆ 5000ಜನರು ಇಲ್ಲಿ ಸೇರಬಹುದಾದಷ್ಟು ಜಾಗವಿದೆ. ನೆಲಕ್ಕೆ ಹಾಸಿದ ಸುಂದರ ಟೈಲ್‌ಗಳನ್ನು ಇಂಗ್ಲೆಂಡ್ ನಿಂದ ಆಮದು ಮಾಡಿಕೊಳ್ಳಲಾಗಿತ್ತು. ಆರು ಬಣ್ಣಗಳ ಟೈಲ್
ಗಳಿಂದ ವಿವಿಧ ವಿನ್ಯಾಸಗಳ ಜೋಡಣೆಯ ಕಾರ್ಯ ಮುಂಬೈಯಿಂದ ಆಗಮಿಸಿದ ಇಟಾಲಿಯನ್ ಕಾರ್ಮಿಕರಿಂದ ನಡೆಯಿತು. ದಪ್ಪಗಿನ ಕಲ್ಲುಗಳಿಂದ ನಿರ್ಮಿಸಿದ ಕಂಬಗಳ ಆಧಾರದಲ್ಲಿ ನಿಂತಿರುವ ಈ ಚರ್ಚಿನ ಸೌಂದರ್ಯ ಶಬ್ದಗಳಲ್ಲಿ ತಿಳಿಸುವುದು
ಕಷ್ಟ. ನೋಡಿಯೇ ತಿಳಿಯಬೇಕು.

ಚರ್ಚಿನ ಛಾವಣಿಯು ಶಬ್ದ ಪ್ರತಿಧ್ವನಿಸದಂತೆ ವಿಶಿಷ್ಟವಾಗಿದೆ. ಛಾವಣಿ ಸಹ ಸುಂದರವಾಗಿದೆ. 176 ಅಡಿಗಳ ಎತ್ತರದ ಗಂಟೆ ಗೋಪುರ (ಬೆಲ್ ಟವರ್) ಕೂಡಾ ಆಕರ್ಷಕವಾಗಿದೆ. ಇದರ ಎತ್ತರ ಚಾರ್ ಮಿನಾರ್‌ಗಿಂತ ಹೆಚ್ಚು ಇರಬಾರದೆಂದು ಹೈದರಾ ಬಾದಿನ ನಿಜಾಮ ಇದರ ನಿರ್ಮಾಣ ಕಾಲದಲ್ಲಿ ತಾಕೀತು ಮಾಡಿದ್ದನಂತೆ.

ಪ್ರತಿವರ್ಷ ಕ್ರಿಸ್‌ಮಸ್ ಹಬ್ಬದ ಆಚರಣೆಗೋಸ್ಕರ ಇಲ್ಲಿಗೆ ಕರ್ನಾಟಕ, ಮಹಾರಾಷ್ಟ್ರದಿಂದಲೂ ಜನ ಬರುತ್ತಾರೆ. ಆಕರ್ಷಕ ಬೆಳಕಿನ ಅಲಂಕಾರದ ಜೊತೆಗೆ ಚರ್ಚಿನ ಸುತ್ತಲಿನ ಜಾಗ ಜಾತ್ರೆಯ ಸಂಭ್ರಮದಿಂದ ನಳನಳಿಸುತ್ತದೆ. ಹೈದರಾಬಾದಿನಿಂದ ಇಲ್ಲಿಗೆ ಬಸ್ಸುಗಳ ಸೌಲಭ್ಯವಿದೆ. ಚರ್ಚಿನ ಎದುರಿಗೇ ಬಸ್ ನಿಲ್ದಾಾಣವಿದೆ.

ಗಾಜಿನ ಮೇಲೆ ಕಲಾಕೃತಿ
ಸುಂದರ ಚಿತ್ರಕಲೆಗಳುಳ್ಳ ಮೂರು ಗಾಜಿನ ಕಿಟಕಿಗಳು ಈ ಚರ್ಚಿನ ಪ್ರಮುಖ ಆಕರ್ಷಣೆ. ಕ್ರಿಸ್ತನ ಜೀವನದ ವಿವಿಧ ಹಂತಗಳನ್ನು ಚಿತ್ರಗಳ ರೂಪದಲ್ಲಿ ಬಿಂಬಿಸಲಾಗಿದೆ. ಮೂರೂ ಚಿತ್ರಣಗಳು ವಿವಿಧ ಕಾಲಘಟ್ಟಗಳಲ್ಲಿ ಅಳವಡಿಸಲ್ಪಟ್ಟವು. ಇಂಗ್ಲೆಂಡಿನ ಒ. ಸಾಲಿಸ್‌ಬರಿ ಇವುಗಳ ಚಿತ್ರಕಾರ. ಮುಖ್ಯವೇದಿಕೆಯ ಹಿಂದಿರುವ ‘ಅಸೆನ್ಶನ್’ಗೆ ಸಂಬಂಧಿಸಿದ ಚಿತ್ರವನ್ನು 1927ರಲ್ಲಿ ಅಳವಡಿಸ ಲಾಯಿತು.

ಎಡಬದಿಯ ಬಾಗಿಲ ಮೇಲಿರುವ ‘ನೇಟಿವಿಟಿ’ ಚಿತ್ರ 1947ರಲ್ಲಿ ಮೂಡಿ ಬಂದರೆ ಬಲಬದಿಯ ಬಾಗಿಲ ಮೇಲಿನ ‘ಕ್ರೂಸಿಫಿಕೇಶನ್’ ಚಿತ್ರವು 1958ರಲ್ಲಿ ಈ ಜಾಗವನ್ನು ಅಲಂಕರಿಸಿತು.

Leave a Reply

Your email address will not be published. Required fields are marked *