Monday, 30th January 2023

ವೈದ್ಯ ಸಾಹಿತ್ಯ ಸೃಷ್ಟಿಯ ಸವಾಲುಗಳು

ಸ್ವಾಸ್ಥ್ಯ ಸಂಪದ

ಡಾ.ಎಸ್.ಪಿ.ಯೋಗಣ್ಣ

yoganna55@gmail.com

ವೈದ್ಯ ತಾಂತ್ರಿಕ ಪದಗಳ ಸೃಷ್ಟಿ ಮತ್ತು ಭಾಷಾಪ್ರಯೋಗ ಇವು ಕನ್ನಡ ವೈದ್ಯಸಾಹಿತ್ಯದ ಬೆಳವಣಿಗೆಗೆ ಒದಗಿರುವ ಪ್ರಮುಖ ಸವಾಲುಗಳು. ಕನ್ನಡ ಭಾಷೆಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕರಾವಳಿ ಕನ್ನಡ ಹೀಗೆ ವಿವಿಧ ಭಾಗಗಳ ಕನ್ನಡ ಭಾಷಾ ಪದಕೋಶಗಳು ವಿಭಿನ್ನವಾಗಿರುವುದು, ಏಕರೂಪದ ಪದಗಳು ಲಭ್ಯಲ್ಲದಿರುವುದು ಸಮಸ್ಯೆಯಾಗಿದೆ.

ಕನ್ನಡ ವಿಜ್ಞಾನ ಸಾಹಿತ್ಯ ಸೃಷ್ಟಿಯಲ್ಲಿಯೇ ವೈದ್ಯವಿಜ್ಞಾನ ಸಾಹಿತ್ಯ ಸೃಷ್ಟಿ ಅತ್ಯಂತ ಮಹತ್ವವಾದುದು. ಇದು ಮನುಷ್ಯನ ರಚನೆ, ಕ್ರಿಯೆ, ತಗುಲಬಹುದಾದ ರೋಗಗಳು, ರೋಗ ಪತ್ತೆಮಾಡುವ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಲಕರಣೆಗಳು, ನಿವಾರಣೋ ಪಾಯಗಳು, ರೋಗಗಳನ್ನು ತಡೆಗಟ್ಟುವಿಕೆ, ಆರೋಗ್ಯವೃದ್ಧಿ ಮತ್ತಿತರ ವೈಜ್ಞಾನಿಕ ವಿಚಾರಗಳಿಗೆ ಸಂಬಂಧಿಸಿದ, ಮನುಷ್ಯನಿಗೆ ತುಂಬಾ ಹತ್ತಿರವೂ ಅತ್ಯವಶ್ಯವೂ ಆದ ವಿಷಯವಾಗಿದೆ. ವೈದ್ಯ ವಿದ್ಯಾರ್ಥಿಗಳು ಮತ್ತು ವೈದ್ಯರಿಗಲ್ಲದೆ ಜನ ಸಾಮಾನ್ಯರಿಗೂ ಅತ್ಯಗತ್ಯವಾದ ಜ್ಞಾನವಾಗಿದೆ. ಕನ್ನಡದಲ್ಲೇ ವೈದ್ಯವಿಜ್ಞಾನ ಲಭಿಸಿದಲ್ಲಿ ಎಲ್ಲರಿಗೂ ಸರಳವಾಗಿ ಅರ್ಥವಾಗುತ್ತದೆ.

ಏಕೆಂದರೆ, ಮಾತೃಭಾಷೆಯಲ್ಲಿ ಮಾತ್ರ ಜ್ಞಾನಗಳು ಸುಲಭವಾಗಿ ಅರ್ಥವಾಗುತ್ತದೆ ಎಂಬುದು ವೈಜ್ಞಾನಿಕ ಸತ್ಯ. ವೈದ್ಯಕೀಯ ಜ್ಞಾನವನ್ನು ಕನ್ನಡದಲ್ಲಿ ಸೃಷ್ಟಿಮಾಡುವ ಯತ್ನ ಭರದಿಂದ ಸಾಗಿದ್ದು ಇದರಲ್ಲಿ ನೂರಾರು ವೈದ್ಯಸಾಹಿತಿಗಳು ಸಮರ್ಥವಾಗಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಭಾಷೆಗೆ ವೈದ್ಯವಿಜ್ಞಾನವೂ ಸೇರಿದಂತೆ ಎಲ್ಲ ಆಧುನಿಕ ವಿಜ್ಞಾನಗಳನ್ನು ಅರಗಿಸಿಕೊಳ್ಳುವ ಸಾಮರ್ಥ್ಯವಿದೆ.

ಕನ್ನಡದಲ್ಲಿ ವೈದ್ಯಸಾಹಿತ್ಯದ ರಚನೆಗಿರುವ ಸಮಸ್ಯೆಗಳ ನಿವಾರಣಾ ಮಾರ್ಗೋಪಾಯಗಳು ಮತ್ತು ಮಾನದಂಡಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.

ವೈದ್ಯಕೀಯ ಪತ್ರಿಕೋದ್ಯಮ ಮತ್ತು ಪುಸ್ತಕೋದ್ಯಮ

ಬಹುತೇಕ ದೈನಿಕ ಹಾಗೂ ವಾರಪತ್ರಿಕೆಗಳಲ್ಲಿ ಆರೋಗ್ಯ ಸಾಹಿತ್ಯಕ್ಕೆ ಸಂಬಂಧಿಸಿದ ಪ್ರತ್ಯೇಕ ಅಂಕಣಗಳು ಪ್ರಾರಂಭವಾಗಿವೆ. ‘ಆರೋಗ್ಯ ಅಂಕಣ ಸಾಹಿತ್ಯ’ವು ವೈದ್ಯಕೀಯ ಸಾಹಿತ್ಯದ ಪ್ರತ್ಯೇಕ ಪ್ರಕಾರವಾಗಿ ರೂಪುಗೊಂಡು ಜನಸಾಮಾನ್ಯರಿಗೆ ಆರೋಗ್ಯ ಸಂಬಂಧಿತ ಮಾಹಿತಿಗಳನ್ನು ಯಶಸ್ವಿಯಾಗಿ ಮುಟ್ಟಿಸುತ್ತಿದ್ದು, ಇದನ್ನು ಈ ಕ್ಷೇತ್ರದಲ್ಲಿನ ಮಹತ್ತರ ಬೆಳವಣಿಗೆ ಯೆಂದು ಗುರುತಿಸಬಹುದಾಗಿದೆ.

ಸ್ವಪ್ನ ಬುಕ್ ಹೌಸ್, ನವಕರ್ನಾಟಕ ಪಬ್ಲಿಕೇಷನ್ಸ್, ತಾಯಮ್ಮ ಪ್ರಕಾಶನ ಮೊದಲಾದ ಪ್ರಕಾಶನ ಸಂಸ್ಥೆಗಳು ವೈದ್ಯಕೀಯ ಸಾಹಿತ್ಯದ ಕೃತಿಗಳನ್ನು ವ್ಯಾಪಕವಾಗಿ ಪ್ರಕಟಿಸಿ, ವೈದ್ಯ ಬರಹಗಾರರಿಗೆ ಉತ್ತೇಜಿಸಿ ಅಧಿಕ ಸಂಖ್ಯೆಯಲ್ಲಿ ವೈದ್ಯಕೀಯ ಕೃತಿಗಳು ಹೊರ ಬರಲು ನೆರವಾಗಿವೆ. ಪ್ರಾಚೀನ ಮತ್ತು ಆಧುನಿಕ ವೈದ್ಯಕೀಯ ಸಾಹಿತ್ಯಗಳ ಸುಮಾರು 2000 ಪುಸ್ತಕಗಳು ಇದುವರೆಗೆ ಪ್ರಕಟಗೊಂಡಿವೆ ಎಂಬುದು ಒಂದು ಅಂದಾಜು.

ಆರೋಗ್ಯ ಸಾಹಿತ್ಯಕ್ಕೆ ಸೀಮಿತವಾದ ಮಾಸಿಕಗಳ ಬಗ್ಗೆ ಹೇಳುವುದಾದರೆ, ಬೆಂಗಳೂರಿನ ವೆಂಕಟೇಶ್ ದೋಂಡೋ ಅವರ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುತ್ತಿದ್ದ ‘ವೈದ್ಯ ಸಿಂಧು’ (೧೯೦೬-೧೯೧೮) ಈ ಕ್ಷೇತ್ರದ ಪ್ರಥಮ ಆಯುರ್ವೇದ ಮಾಸಪತ್ರಿಕೆ ಯೆಂದು ಗುರುತಿಸಲ್ಪಟ್ಟಿದ್ದು, ತದನಂತರ ಹಲವಾರು ಆರೋಗ್ಯ ಮಾಸಿಕಗಳು ಪ್ರಕಟವಾಗಿವೆ.

ಆಧುನಿಕ ವೈದ್ಯಪದ್ಧತಿಯ ಕುರಿತಾದ ಮಾಸಪತ್ರಿಕೆಗಳ ಪೈಕಿ, ‘ವೈದ್ಯಕೀಯ ಸಾಹಿತ್ಯ’, ‘ಮಹಾ ಆರೋಗ್ಯ ದರ್ಶಿನಿ’, ‘ಸೌಂದರ್ಯ ಮತ್ತು ಆರೋಗ್ಯಭಾಗ್ಯ’ (ಹುಬ್ಬಳ್ಳಿ), ‘ಆರೋಗ್ಯ ಭಾಗ್ಯ’ (ಸವದತ್ತಿ), ‘ಆನಂದ ಆರೋಗ್ಯ’, ‘ಆರೋಗ್ಯ ವಾಣಿ’ (ಪುಣೆ), ‘ಆರೋಗ್ಯ ರಕ್ಷಕ’ (ಧಾರವಾಡ), ‘ಆರೋಗ್ಯ ತರಂಗ’, ‘ಆರೋಗ್ಯ ಅನುರಾಗ’ (ಬೆಂಗಳೂರು), ‘ಜೀವನಾಡಿ’ ಮತ್ತು ‘ವೈದ್ಯಲೋಕ’ (ಬೆಂಗ ಳೂರು), ಡಾ. ರಾಮಲಿಂಗಯ್ಯ ಉಪ್ಪಿನಕೆರೆ ಸಂಪಾದಕತ್ವದ ‘ಆರೋಗ್ಯ ನಿಧಿ’ (ಮೈಸೂರು), ಡಾ. ಎಸ್.ಪಿ. ಯೋಗಣ್ಣ
ಸಂಪಾದಕತ್ವದ ‘ಆರೋಗ್ಯ ಯೋಗ’ ಪತ್ರಿಕೆಗಳನ್ನು ಹೆಸರಿಸಬಹುದು.

ತಜ್ಞ ವೈದ್ಯರ ಲೇಖನಗಳನ್ನು ಒಳಗೊಂಡಿದ್ದರ ಜತೆಗೆ, ಹೊಸ ವೈದ್ಯಕೀಯ ಲೇಖಕರ ಸೃಷ್ಟಿಯಲ್ಲಿ ‘ಆರೋಗ್ಯ ಯೋಗ’ ಪತ್ರಿಕೆ
ಪ್ರಮುಖ ಪಾತ್ರ ವಹಿಸಿತ್ತು ಎಂಬುದಿಲ್ಲಿ ಉಲ್ಲೇಖನೀಯ. ಡಾ. ಅನುಪಮಾ ನಿರಂಜನ, ಡಾ. ಸಿ.ಆರ್. ಚಂದ್ರಶೇಖರ್, ಡಾ. ಕರವೀರ ಪ್ರಭು ಕ್ಯಾಲಕೊಂಡ, ಡಾ. ಎಚ್.ಎಸ್. ಮೋಹನ್, ಡಾ. ಎಸ್.ಪಿ. ಯೋಗಣ್ಣ, ಡಾ. ಎಸ್.ಬಿ. ವಸಂತಕುಮಾರ್ ಅವರು ದಿನಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ನಿರಂತರವಾಗಿ ವೈದ್ಯಕೀಯ ಅಂಕಣಗಳನ್ನು ಬರೆದು ಜನಸಾಮಾನ್ಯರಿಗೆ ಆರೋಗ್ಯ ಜ್ಞಾನವನ್ನು ತಲುಪಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವೈದ್ಯಕೀಯ ಸಾಹಿತ್ಯದ ಸವಾಲುಗಳು

ಆಧುನಿಕ ವೈದ್ಯಕೀಯ ಸಾಹಿತ್ಯದ ಬೆಳವಣಿಗೆಯನ್ನು ಜನಸಾಮಾನ್ಯರಿಗೆ ಅವಶ್ಯವಿರುವ ‘ಜನಪ್ರಿಯ ವೈದ್ಯಸಾಹಿತ್ಯ’ ಹಾಗೂ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಗತ್ಯವಿರುವ ‘ಶಾಸ್ತ್ರೀ ವೈದ್ಯಸಾಹಿತ್ಯ’ ಎಂಬ ಪ್ರಮುಖ ಪ್ರಕಾರಗಳಿಂದ ಗುರುತಿಸಬಹುದು. ಇವೆರಡರ ಬೆಳವಣಿಗೆಯ ಮಾನದಂಡಗಳು ಭಿನ್ನ. ಭಾಷೆ, ವೈದ್ಯತಾಂತ್ರಿಕ ಪದಗಳು ಮತ್ತು ಆಸಕ್ತಿ ಇವು ವೈದ್ಯಕೀಯ ಸಾಹಿತ್ಯದ ಸೃಷ್ಟಿ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಸವಾಲುಗಳಾಗಿದ್ದು, ಇವನ್ನು ನಿವಾರಿಸಿಕೊಳ್ಳುವುದು
ಅತ್ಯಗತ್ಯ. ಜನಪ್ರಿಯ ವೈದ್ಯ ಸಾಹಿತ್ಯಕ್ಕೆ ಮೇಲ್ಮೈ ಜ್ಞಾನ ಸಾಕು.

ಆದರೆ ಶಾಸ್ತ್ರೀಯ ವೈದ್ಯ ವಿಜ್ಞಾನ ಸಾಹಿತ್ಯ ನಿಯಮಬದ್ಧವಾಗಿರಬೇಕಾಗಿದ್ದು, ಆಳವಾದ ಹಾಗೂ ವಿಸ್ತಾರವಾದ ಜ್ಞಾನ ಅತ್ಯವಶ್ಯ. ವೈದ್ಯ ತಾಂತ್ರಿಕ ಪದಗಳ ಸೃಷ್ಟಿ ಮತ್ತು ಭಾಷಾ ಪ್ರಯೋಗ ಇವು ಕನ್ನಡ ವೈದ್ಯಸಾಹಿತ್ಯದ ಬೆಳವಣಿಗೆಗೆ ಒದಗಿರುವ ಪ್ರಮುಖ ಸವಾಲುಗಳು. ಕನ್ನಡ ಭಾಷೆಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕರಾವಳಿ ಕನ್ನಡ ಹೀಗೆ ವಿವಿಧ ಭಾಗಗಳ
ಕನ್ನಡ ಭಾಷಾ ಪದಕೋಶಗಳು ವಿಭಿನ್ನವಾಗಿರುವುದು, ಏಕರೂಪದ ಪದಗಳು ಲಭ್ಯಲ್ಲದಿರುವುದು ಸಮಸ್ಯೆಯಾಗಿದ್ದು, ಆಯಾ ಭಾಗದ ಭಾಷೆಗಳ ಅರಿವು ಅತ್ಯವಶ್ಯಕವಾಗಿದೆ.

ಸರಳ ಆಡುಭಾಷೆ ಯನ್ನು ವೈದ್ಯಸಾಹಿತ್ಯ ಕೃಷಿಯಲ್ಲಿ ಬಳಸಿ ಎಲ್ಲರಿಗೂ ಅರ್ಥವಾಗುವಂತೆ ವಿಷಯ ಮಂಡಿಸಿದರೆ ಮಾತ್ರವೇ ಅದು ಹೆಚ್ಚು ಜನಪ್ರಿಯವಾಗುತ್ತದೆ, ಅನುಕರಣೀಯವಾಗುತ್ತದೆ. ‘ಪಂಡಿತ ಭಾಷೆ’ಯ ವೈದ್ಯ ಸಾಹಿತ್ಯ ಜನಸಾಮಾನ್ಯರಿಗೆ ತಲುಪದೆ ಅರ್ಥವಾಗದೆ ನಿಷ್ಪ್ರಯೋಜಕವಾಗುತ್ತದೆ. ವೈದ್ಯ ತಾಂತ್ರಿಕ ಪದಗಳ ಸಮಸ್ಯೆ ನಿವಾರಣೆಗೆ ಕನ್ನಡ ವೈದ್ಯಕೀಯ ನಿಘಂಟು ಅತ್ಯವಶ್ಯವಿದ್ದು, ಔಷಧ ಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಡಾ. ಡಿ.ಎಸ್. ಶಿವಪ್ಪನವರು ರಚಿಸಿದ ‘ಇಂಗ್ಲಿಷ್-ಕನ್ನಡ
ಪದಕೋಶ’ (1973) ಈ ನಿಟ್ಟಿನಲ್ಲಿ ಪ್ರಥಮ ಮತ್ತು ಅವಿಸ್ಮರಣೀಯ ಪ್ರಯತ್ನವಾಗಿದೆ.

ಆದರೆ, ಕನ್ನಡದಲ್ಲಿ ಸಮಾನ ವೈದ್ಯಪದಗಳನ್ನು ಸೃಷ್ಟಿಸುವಾಗ ಅವರು ಸಂಸ್ಕೃತ ಮೂಲಕ್ಕೆ ಮೊರೆಹೋಗಿದ್ದರ ಮತ್ತು
ಆಂಗ್ಲಭಾಷೆಯಲ್ಲಿನ ತಾಂತ್ರಿಕ ಪದಗಳ ಹುಟ್ಟು ಮತ್ತು ರಚನೆಯನ್ನು ಆಧರಿಸಿ ಕನ್ನಡ ಪದಗಳನ್ನು ಸೃಷ್ಟಿಸಿದ್ದರ ಪರಿಣಾಮ, ಅವು ಜನಸಾಮಾನ್ಯರ ಆಡುಭಾಷೆಯಲ್ಲಿಲ್ಲದೆ ದೈನಂದಿನ ತಾಂತ್ರಿಕ ಬರಹಕ್ಕೆ ಅಷ್ಟೊಂದು ಪ್ರಯೋಜನಕಾರಿಯಾಗಿಲ್ಲ. ಅಲ್ಲದೆ ಈ ಪದಕೋಶ ಗಾತ್ರದಲ್ಲಿ ಕಿರಿದಾಗಿದ್ದು ಕೆಲವು ತಾಂತ್ರಿಕ ಪದಗಳಿಗಷ್ಟೇ ಕನ್ನಡ ಸಮಾನ ಪದಗಳನ್ನು ಒಳಗೊಂಡಿದೆ.

ಡಾ. ನಾ. ಸೋಮೇಶ್ವರ ಅವರು ‘ಕನ್ನಡದಲ್ಲಿ ವೈದ್ಯ ತಾಂತ್ರಿಕ ಪದಗಳ ಸಮಸ್ಯೆ ಮತ್ತು ಪರಿಹಾರ’ (2018) ಎಂಬ ಕೃತಿಯಲ್ಲಿ ಕನ್ನಡ ವೈದ್ಯ ತಾಂತ್ರಿಕ ಪದಗಳ ಸೃಷ್ಟಿಯ ಸಮಸ್ಯೆಗೆ ಹಲವಾರು ಉಪಯುಕ್ತ ಮಾನದಂಡಗಳನ್ನು ನೀಡಿದ್ದಾರೆ. ಕನ್ನಡ ವೈದ್ಯ ತಾಂತ್ರಿಕ ಪದಗಳ ಸೃಷ್ಟಿಯಲ್ಲಿ ಅನುಸರಿಸಬೇಕಾದ ಮಾನದಂಡಗಳು:

೧) ತಾಂತ್ರಿಕ ಪದಗಳು ಎಲ್ಲರಿಗೂ ಅರ್ಥವಾಗುವ ಕನ್ನಡದಲ್ಲಿರಬೇಕು. ಆಂಗ್ಲ ವೈದ್ಯತಾಂತ್ರಿಕ ಪದದ ನೈಜ ಅರ್ಥ ಕನ್ನಡ ಪದದಲ್ಲೂ ಪರಿಪೂರ್ಣವಾಗಿ ವ್ಯಕ್ತವಾಗುವಂತಿರಬೇಕು. ಇದು ಸಾಧ್ಯವಾದರೆ ಮಾತ್ರ ಹೊಸ ಕನ್ನಡ ತಾಂತ್ರಿಕ ಪದವನ್ನು
ಸೃಷ್ಟಿಸಬೇಕು. ಇಲ್ಲವಾದಲ್ಲಿ ಹಾಲಿ ಇರುವ ಆಂಗ್ಲ ತಾಂತ್ರಿಕ ಪದಗಳನ್ನೇ ನಾಮಪದಗಳಂತೆ ಕನ್ನಡ ಜಾಯಮಾನಕ್ಕೆ ಹೊಂದಿಸಿಕೊಂಡು ಉಪಯೋಗಿಸುವುದು ಸೂಕ್ತ.

೨) ಬಹುಪಾಲು ಆಂಗ್ಲ ವೈದ್ಯತಾಂತ್ರಿಕ ಪದಗಳು ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯ ಪದಗಳಾಗಿದ್ದು, ಅವೆಲ್ಲವನ್ನು ಇಂಗ್ಲಿಷರು ಯಥಾವತ್ತಾಗಿ ಎರವಲು ಪಡೆದು ಆಂಗ್ಲಭಾಷೆಯನ್ನು ಬೆಳೆಸಿದ ಹಾಗೆ ನಾವೂ ಇಂಗ್ಲಿಷ್ ಭಾಷೆಯಿಂದ ವೈದ್ಯ ತಾಂತ್ರಿಕ ಪದಗಳನ್ನು ಯಥಾವತ್ತಾಗಿ ಎರವಲು ಪಡೆದು ಅಥವಾ ಕನ್ನಡೀಕರಣಗೊಳಿಸಿ ಕನ್ನಡ ಭಾಷೆಯನ್ನು ವಿಶ್ವಮಾನ್ಯ ಮಾಡ ಬೇಕಿದೆ.

ಅ) ಡಯಾಬಿಟಿಸ್ ಮೆಲಿಟಸ್ ಪದದ ಅರ್ಥ ‘ಸಿಹಿಮೂತ್ರ’ ಎಂದು. ಇದಕ್ಕೆ ‘ಸಿಹಿಮೂತ್ರ ರೋಗ’ ಎಂದು ಸುಲಭವಾಗಿ ಕನ್ನಡ ಪದವನ್ನು ಸೃಷ್ಟಿಮಾಡಬಹುದು.

ಆ) ಆದರೆ ‘ಸಿರ‍್ಹೋಸಿಸ್’ ಪದದ ಅರ್ಥ ಕನ್ನಡದಲ್ಲಿ ‘ಹಕ್ಕಿಗೂಡು’ ಎಂದಾಗಿದ್ದು, ಇದನ್ನು ‘ಹಕ್ಕಿಗೂಡಿನ ಕಾಯಿಲೆ’ ಎಂದು ಕರೆಯುವುದು ಸೂಕ್ತ ವಾಗುವುದಿಲ್ಲ. ಆದ್ದರಿಂದ ಕನ್ನಡದಲ್ಲೂ ಇದನ್ನು ‘ಸಿರ‍್ಹೋಸಿಸ್’ ಅಥವಾ ‘ಸಿರ‍್ಹೋಸಿಸು’ ಎನ್ನುವುದು
ಸೂಕ್ತ. ವೈದ್ಯ ತಾಂತ್ರಿಕ ಪದದ ಕೊನೆಯ ಅಕ್ಷರಕ್ಕೆ ಕೊಂಬು ಸೇರಿಸಿದರೆ ಅದರ ಕನ್ನಡೀಕರಣ ವಾಗುತ್ತದೆ.

ಇ) ‘ಸಿಸ್ಟಮಿಕ್ ಲ್ಯೂಪಸ್ ಏರಿಥೋಮೆಟೋಸಿಸ್’ ಎಂಬ ಕಾಯಿಲೆಯ ಹೆಸರು ಸಿಸ್ಟಮಿಕ್+ಲ್ಯೂಪಸ್+ಏರಿಥೋಮೆಟೋಸಿಸ್
ಎಂಬ ಮೂರು ಪದಗಳಿಂದಾಗಿದ್ದು, ಇದರ ಕನ್ನಡ ಅರ್ಥ- ವ್ಯಾಪಕ+ಲ್ಯೂಪಸ್ ನ್ಯೂನತೆ+ಕೆಂಪೇರಿಕೆ ಸ್ಥಿತಿ ಎಂದಾಗಿದೆ; ಇದನ್ನು ‘ವ್ಯಾಪಕ ಲ್ಯೂಪಸ್‌ನ ಕೆಂಪೇರಿಕೆ ರೋಗ’ ಎಂದು ಹೆಸರಿಸಬಹುದಾದರೂ ‘ಸಿಸ್ಟಮಿಕ್ ಲ್ಯೂಪಸ್ ಏರಿಥೋಮೆ ಟೋಸಿಸ್’ ಎಂದು ಯಥಾವತ್ತಾಗಿ ಕರೆದರೆ ವೈದ್ಯರಿಗೂ ಸುಲಭವಾಗಿ ಅರ್ಥವಾಗುತ್ತದೆ.

ಈ) ‘ಎಲೆಕ್ಟೋಕಾರ್ಡಿಯೋಗ್ರಾಮ್’ (ಇಸಿಜಿ) ಪದದಲ್ಲಿ ಎಲೆಕ್ಟ್ರೊ= ವಿದ್ಯುಚ್ಛಕ್ತಿ+ಕಾರ್ಡಿಯೋ= ಹೃದಯ+ಗ್ರಾಮ್= ನಕ್ಷೆ ಎಂಬ ಮೂರು ಪದಗಳಿದ್ದು, ಇದಕ್ಕೆ ‘ಹೃತ್‌ವಿದ್ಯುತ್‌ನಕ್ಷೆ’ ಎಂದು ಸರಳವಾಗಿ ಅರ್ಥವಾಗುವ ಕನ್ನಡ ಪದವನ್ನು ಸೃಷ್ಟಿಸಬಹುದು.

೩) ಆಂಗ್ಲಭಾಷೆಯಲ್ಲಿರುವ ಕಾಯಿಲೆಗಳ ಹೆಸರನ್ನು ನಾಮಪದಗಳಂತೆ ಹಾಗೆಯೇ ಕನ್ನಡಕ್ಕೆ ಸ್ವೀಕರಿಸುವುದು ಉಪಯುಕ್ತ.

೪) ಆಂಗ್ಲರು ಆಂಗ್ಲಭಾಷೆಯ ಪದಗಳೊಡನೆ ಗ್ರೀಕ್ ಅಥವಾ ಲ್ಯಾಟಿನ್ ಪದಗಳೆರಡನ್ನೂ ಸಂಯೋಜಿಸಿ ಒಂದು ಹೊಸಪದ ವನ್ನು ಸೃಷ್ಟಿಸಿದಂತೆ ಆಂಗ್ಲ ವೈದ್ಯ ತುಂಡು ತಾಂತ್ರಿಕ ಪದಕ್ಕೆ ಕನ್ನಡದ ಪದವೊಂದನ್ನು ಸೇರಿಸಿ ಕನ್ನಡದಲ್ಲಿ ಹೊಸ
ಪದವೊಂದನ್ನು ಸೃಷ್ಟಿಸಬಹುದು. ಉದಾಹರಣೆಗೆ, ನ್ಯೂರೋಪತಿ- ನ್ಯೂರೋ= ನರ+ಅಪತಿ= ‘ನರಾ ಪತಿ’ ಎಂಬ ಹೊಸ ಪದವೊಂದನ್ನು ಸೃಷ್ಟಿಸಬಹುದು.

ಆಂಗ್ಲರು ಪ್ರಪಂಚದ ಬಹು ಪ್ರದೇಶಗಳನ್ನು ಆಳುವ ಸಂದರ್ಭದಲ್ಲಿ ಆಯಾ ಪ್ರದೇಶದ ಭಾಷೆಗಳಲ್ಲಿರುವ ಪದಗಳೆಲ್ಲವನ್ನು ತಮ್ಮ ಭಾಷೆಗೆ ಸೇರಿಸಿಕೊಂಡ -ಲವಾಗಿ ಇಂದು ಆಂಗ್ಲಭಾಷೆಯಲ್ಲಿ ಪ್ರಪಂಚದ ಬಹುಪಾಲು ಭಾಷೆಗಳ ಪದಗಳನ್ನು
ಗುರುತಿಸಲು ಸಾಧ್ಯವಾಗಿದೆ. ಈ ಕಾರಣಕ್ಕಾಗಿಯೇ ಆಂಗ್ಲಭಾಷೆ ಇಂದು ಜಾಗತಿಕ ಭಾಷೆಯಾಗಿದೆ.

ಆಂಗ್ಲ ತಾಂತ್ರಿಕ ಪದಗಳ ರಚನೆ

ಕನ್ನಡದಲ್ಲಿ ವೈದ್ಯ ತಾಂತ್ರಿಕ ಪದಗಳನ್ನು ಸೃಷ್ಟಿಸುವಾಗ ಆಂಗ್ಲ ವೈದ್ಯತಾಂತ್ರಿಕ ಪದಗಳ ರಚನೆಯಲ್ಲಿ ಅನುಸರಿಸಲಾಗಿರುವ ಮಾನದಂಡಗಳನ್ನು ಅರಿಯುವುದು ಅತ್ಯವಶ್ಯಕ. ಆ ಮಾನದಂಡಗಳು ಹೀಗಿವೆ:

೧. ಕಂಡುಹಿಡಿದವನ ಹೆಸರು, ಕಾಣಿಸಿಕೊಂಡ ಸ್ಥಳವನ್ನಾಧರಿಸಿ ಹೆಸರಿಸುವುದು (ಉದಾ: ವಿಲ್ಸನ್ಸ್ ಡಿಸೀಸ್, ಪಾರ್ಕಿನ್‌ಸನ್ಸ್ ಡಿಸೀಸ್, ಕಾಯಸ್‌ನೂರ್ ಫಾರೆಸ್ಟ್ ಡಿಸೀಸ್).
೨. ರೋಗ ನ್ಯೂನತೆಯನ್ನಾಧರಿಸಿ ಹೆಸರಿಸುವುದು (ಉದಾ: ಸಿಸ್ಟಮಿಕ್ ಲ್ಯೂಪಸ್ ಏರಿತೋಮೆಟೋಸಿಸ್, ಮಯೋಕಾರ್ಡಿಯಲ್ ಇನ್ ಫಾರ್‌ಕ್ಷನ್). ೩. ಹೋಲಿಕೆಯನ್ನಾಧರಿಸಿ ಹೆಸರಿಸುವುದು (ಉದಾ: ಸಿರ‍್ಹೋಸಿಸ್- ಹಕ್ಕಿಗೂಡಿನ ಹೆಣಿಗೆ ಯಂತೆ).

೪. ಪ್ರಮುಖ ರೋಗ ತೊಂದರೆಯನ್ನಾಧರಿಸಿ ಹೆಸರಿಸುವುದು (ಉದಾ: ಡಯಾಬಿಟಿಸ್ ಮೆಲಿಟಿಸ್= ಸಿಹಿಮೂತ್ರ).

೫. ಪ್ರಮುಖ ರಚನಾನ್ಯೂನತೆಯನ್ನಾಧರಿಸಿ ಹೆಸರಿಸುವುದು (ಬ್ರಾಂಕಿಏಕ್ಟೇಸಿಸ್= ಬ್ರಾಂಕೈ= ಶ್ವಾಸನಾಳ+ ಎಕ್ಟೇಸಿಸ್= ಹಿಗ್ಗಿಕೆ= ಶ್ವಾಸನಾಳ ಹಿಗ್ಗಿಕೆ).

೬. ವಿವಿಧ ತುಂಡುಪದಗಳ ಸೇರ್ಪಡೆಯಿಂದ ಹೆಸರಿಸುವುದು (ಉದಾ; ಎಲೆಕ್ಟ್ರೋ+ ಕಾರ್ಡಿಯೋ+ಗ್ರಾಮ್, ಗ್ಯಾಸ್ಟ್ರೋ+
ಎಂಟಿರಾಲಜಿ).

೭. ರಚನೆಯಿರುವ ಸ್ಥಳವನ್ನಾಧರಿಸಿ ಹೆಸರಿಸುವುದು (ಉದಾ: ಪೆರಿಕಾರ್ಡಿಯಂ, ಮಯೋಕಾರ್ಡಿಯಂ, ಎಂಡೋಕಾರ್ಡಿಯಂ)
೮. ಬಣ್ಣವನ್ನಾಧರಿಸಿ ಹೆಸರಿಸುವುದು (ಉದಾ: ಆರ್ಟರೀಸ್- ಕೆಂಪು, ವೇನ್ಸ್- ನೀಲಿ, ಸಯನೋಸಿಸ್-ನೀಲಿ).

(ಮುಂದುವರಿಯುತ್ತದೆ)

error: Content is protected !!