Tuesday, 7th July 2020

“ಮಹಿಳೆಯರಿಗೆ ಉಚಿತ ಪ್ರಯಾಣ ವಿವೇಚನಾ ಶೂನ್ಯ ನಡೆ”: ಕೇಜ್ರಿವಾಲ್‌ ಸರಕಾರದ ಘೋಷಣೆ ವಿರೋಧಿಸಿ ಪ್ರಧಾನಿಗೆ ಪತ್ರ ಬರೆದ ಮೆಟ್ರೋ ಮಾನವ ಶ್ರೀಧರನ್‌

ದೆಹಲಿ ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವೆಂದಿರುವ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಪ್‌ ಸರಕಾರದ ಇಂಥ ಪ್ರಸ್ತಾಪಗಳಿಗೆ ಒಪ್ಪದಿರಲು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ದೆಹಲಿ ಮೆಟ್ರೋ ಮಾಜಿ ಮುಖ್ಯಸ್ಥ ಇ. ಶ್ರೀಧರನ್‌ ಆಗ್ರಹಿಸಿದ್ದಾರೆ.

ಕೇಂದ್ರ ಹಾಗೂ ದಹಲಿ ಸರಕಾರಗಳ ಸಮಾನ ಪಾಲುದಾರಿಕೆಯ ಯೋಜನೆಯಾದ ದೆಹಲಿ ಮೆಟ್ರೋದ ಪ್ರಧಾನ ಸಲಹೆಗಾರರಾಗಿ ಶ್ರೀಧರನ್‌ ಕಾರ್ಯನಿರ್ವಹಿಸುತ್ತಿದ್ದು, ಈ ವಿಚಾರದಲ್ಲಿ ಪ್ರಧನಿಯ ಮಧ್ಯಸ್ಥಿಕೆಗೆ ಆಗ್ರಹಿಸಿದ್ದಾರೆ.

“ಸಮಾಜದ ಒಂದು ವರ್ಗಕ್ಕೆ ರಿಯಾಯಿತಿ ನೀಡಲು ಯೋಜನೆಯ ಒಬ್ಬರು ಪಾಲುದಾರರು ಮಾತ್ರವೇ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ಹೀಗಾದಲ್ಲಿ ದೆಹಲಿ ಮೆಟ್ರೋ ದಿವಾಳಿಯಾಗಲಿದೆ,” ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಶ್ರೀಧರನ್‌ ಎಚ್ಚರಿಕೆ ನೀಡಿದ್ದಾರೆ.

ದೆಹಲಿ ಮೆಟ್ರೋ ಸೇವೆಯನ್ನು ಪ್ರಾರಂಭಿಸಲು ಮಹತ್ವದ ಪಾತ್ರ ನಿರ್ವಹಿಸಿರುವ ಶ್ರೀಧರನ್‌, 2011ರಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಿಂದ ಕೆಳಗಿಳಿದಿದ್ದರು. ದೆಹಲಿ ಮೆಟ್ರೋ ಕರ್ಯನಿರ್ವಹಣೆಯಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದಿದ್ದ ಶ್ರೀಧರನ್‌ರನ್ನು ದೆಹಲಿ ಸರಕಾರದ ಘೋಷಣೆ ಮುಂದೆ ಬರುವಂತೆ ಮಾಡಿದೆ.

“ಮಾನ್ಯರೇ, ದೆಹಲಿ ಮೆಟ್ರೋದ ಮೊದಲ ಹಂತ ಕಾರ್ಯಾರಂಭ ಮಾಡುವ ಸಂದರ್ಭ, ಯಾವುದೇ ವ್ಯಕ್ತಿಗೂ ಪ್ರಯಾಣದ ದರದಲ್ಲಿ ಮೇಲೆ ರಿಯಾಯಿತಿ ನೀಡಬಾರದೆಂಬ ಪ್ರಜ್ಞಾಪೂರ್ವಕ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೆ. ಮೆಟ್ರೋ ದರಗಳನ್ನು ಕೈಗೆಟುಕುವ ಮಟ್ಟದಲ್ಲಿ ಇಡುವುದರೊಂದಿಗೆ, ಜಪಾನ್ ಬ್ಯಾಂಕ್‌ನಿಂದ ತೆಗೆದುಕೊಂಡ ಸಾಲದ ಮರುಪಾವತಿ ಮಾಡಲು ಸಾಕಾಗುವಷ್ಟು ಆದಾಯ ಸಂಪಾದಿಸಲು ಈ ನಿರ್ಣಯ ತೆಗೆದುಕೊಂಡಿದ್ದೆ,”

“ಖುದ್ದು ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಡಿಸೆಂಬರ್‌ 23, 2002ರಂದು ಉದ್ಘಾಟನಾ ಸವಾರಿಯಲ್ಲಿ ಭಾಗಿಯಾಗಲು ಟಿಕೆಟ್‌ ಖರೀದಿ ಮಾಡಿದ್ದರು,” ಎಂದ ಶ್ರೀಧರನ್‌, “ಇದೀಗ ದೆಹಲಿ ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಪ್ರಾರಂಭಿಸಿದರೆ, ದೇಶದ ಇತರ ಮೆಟ್ರೋಗಳೂ ಸಹ ಇದನ್ನೇ ಮಾಡಲು ನೋಡಬಹುದು. ತನ್ನ ನಿರ್ಧಾರದಿಂದ ದೆಹಲಿ ಮೆಟ್ರೋಗೆ ಆಗುವ ನಷ್ಟವನ್ನು ತಾನೇ ಭರಿಸುವುದಾಗಿ ಹೇಳುತ್ತಿರುದ ದೆಹಲಿ ಸರಕಾರ ಮಾತುಗಳು ಕಣ್ಣೊರೆಸುವ ತಂತ್ರ. ಈ ನಡೆಗೆ ವಾರ್ಷಿಕವಾಗಿ ತಗುಲುವ ವೆಚ್ಚ ಸಾವಿರಾರು ಕೋಟು ರುಗಳಷ್ಟಿರುತ್ತದೆ. ಮೆಟ್ರೋದ ವ್ಯಾಪ್ತಿ ಹೆಚ್ಚುತ್ತಾ ಹೋದಂತೆ ಹಾಗೂ ದರದಲ್ಲಿ ಏರಿಕೆಯಾದಂತೆ ಈ ಹೊರೆಯ ಪ್ರಮಾಣವೂ ಏರುಗತಿಯಲ್ಲಿ ಸಾಗುತ್ತದೆ,” ಎಂದು ಶ್ರೀಧರನ್‌ ವಿವರಿಸಿದ್ದಾರೆ.

ಮೆಟ್ರೋ ರೈಲುಗಳು ಹಾಗೂ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡುವುದಾಗಿ ಕೇಜ್ರಿವಾಲ್‌ ಸರಕಾರ ಇತ್ತೀಚೆಗೆ ಘೋಷಿಸಿತ್ತು.

Leave a Reply

Your email address will not be published. Required fields are marked *