Wednesday, 5th October 2022

ಮೊದಲ ಗೆಲುವಿನ ರುಚಿಯುಂಡ ಮುಂಬೈ ಇಂಡಿಯನ್ಸ್, ರಾಣಾ ಆಟ ವ್ಯರ್ಥ

ಚೆನ್ನೈ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ 14ನೇ ಆವೃತ್ತಿಯ ಐದನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 10 ರನ್ ಗಳ ಅಂತರದಿಂದ ಸಾಧಿಸಿದೆ.

ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಮಾಡಲು ನಿರ್ಧರಿಸಿತು. ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 152 ರನ್ ಕಲೆ ಹಾಕಿತು. ಸೂರ್ಯಕುಮಾರ್ ಯಾದವ್ 56, ರೋಹಿತ್ ಶರ್ಮಾ, 43, ಕೃನಾಲ್ ಪಾಂಡ್ಯ 15 ರನ್ ಗಳಿಸಿದರು. ಕೆಕೆಆರ್ ಪರ ಆಂಡ್ರೆ ರಸೆಲ್ 5, ಪ್ಯಾಟ್ ಕಮ್ಮಿನ್ಸ್ 2, ಶಾಕಿಬ್ ಅಲ್ ಹಸನ್ 1 ವಿಕೆಟ್ ಪಡೆದರು.

153 ರನ್ ಗಳ ಗುರಿ ಬೆನ್ನತ್ತಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಆರಂಭಿಕರಾದ ನಿತೀಶ್ ರಾಣಾ 57 ಹಾಗೂ ಶುಭ್ ಮನ್ ಗಿಲ್ 33 ರನ್ ಕಲೆಹಾಕುವ ಮೂಲಕ ಉತ್ತಮ ಆರಂಭ ನೀಡಿದರು. ಬಿರುಸಿನ ಆಟಕ್ಕೆ ಮುಂದಾದ ಶುಭ್ ಮನ್ ಗಿಲ್ 33 ರನ್ ಗಳಿಸಿದಾಗ ರಾಹುಲ್ ಚಹರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆ ನಿರ್ಗಮಿಸಿದರು. ಇದರ ಬೆನ್ನಲ್ಲೇ ರಾಹುಲ್ ತ್ರಿಪಾಠಿ ಕೂಡಾ ಕೀಪರ್ ಗೆ ಕ್ಯಾಚ್ ನೀಡಿ ಹೊರ ನಡೆದರು.

ತಂಡದ ಮೊತ್ತ 122 ರನ್ ಆಗಿದ್ದ ವೇಳೆ ನಿತೀಶ್ ರಾಣಾ ಸ್ಟಂಪ್ ಔಟ್ ಆದರು. ಬೆನ್ನಲ್ಲೇ ಶಕೀಬ್ ಅಲ್ ಹಸನ್ ಕೂಡಾ ನಿರ್ಗಮಿಸಿದರು. ಕೆಕೆಆರ್ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 142 ರನ್ ಗಳಿಸಲಷ್ಟೇ ಶಕ್ತವಾಯಿತು. ಪರಿಣಾಮ ಮುಂಬೈ ಇಂಡಿಯನ್ಸ್ 10 ರನ್ ಗಳಿಂದ ಗೆಲುವಿನ ನಗೆ ಬೀರಿತು.

ಮುಂಬೈ ಇಂಡಿಯನ್ಸ್ ಪರ ರಾಹುಲ್ ಚಹರ್ 4 ವಿಕೆಟ್ ಕಬಳಿಸಿ ಮಿಂಚಿದರೆ, ಟ್ರೆಂಟ್ ಬೌಲ್ಟ್ 2, ಕೃನಾಲ್ ಪಾಂಡ್ಯ 1 ವಿಕೆಟ್ ಪಡೆದರು. ಚಹರ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.