Sunday, 17th October 2021

ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ನೀಡಲು ಮೈಕ್ರೋ ಯೋಜನೆ ರೂಪಿಸಿ: ಡಿಸಿ ವಿಕಾಸ್ ಕಿಶೋರ್ ಸೂಚನೆ

– ಸೆ. 17ರಂದು ಬೃಹತ್ ಕೋವಿಡ್-19 ಲಸಿಕಾ ಮೇಳ

ಕೊಪ್ಪಳ: ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸೆ.17ರಂದು ರಾಜ್ಯಾದ್ಯಂತ ಬೃಹತ್ ಕೋವಿಡ್-19 ಲಸಿಕಾ ಮೇಳ ಹಮ್ಮಿಕೊಂಡಿದ್ದು, ಲಸಿಕಾ ಮೇಳವನ್ನು ಯಶಸ್ವಿಗೊಳಿಸಲು ಅಧಿಕಾರಿಗಳು ಮೈಕ್ರೋ ಯೋಜನೆಗಳನ್ನು ರೂಪಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ನೀಡಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿ ಯಿಂದ ಸೆ.17ರಂದು ಹಮ್ಮಿಕೊಂಡಿರುವ ಬೃಹತ್ ಕೋವಿಡ್-19 ಲಸಿಕಾ ಮೇಳದ ಅಂಗವಾಗಿ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯನ್ನು ನೀಡಬೇಕಾಗಿದ್ದು, ಸೆ. 17ರಂದು ಜಿಲ್ಲೆಯಾದ್ಯಂತ 60,000 ಲಸಿಕೆ ನೀಡಲು ಗುರಿಯನ್ನು ನಿಗದಿ ಪಡಿಸಿದ್ದು, ಲಸಿಕೆ ನೀಡಲು ವಾರ್ಡ್ ಹಾಗೂ ಗ್ರಾಮವಾರು ಮೈಕ್ರೋ ಯೋಜನೆಗಳನ್ನು ರೂಪಿಸಿ. ಕೆಲವು ತಾಲ್ಲೂಕುಗಳ ಗ್ರಾಮಗಳಲ್ಲಿ ಲಸಿಕೆ ಪಡೆಯಲು ಗ್ರಾಮಸ್ಥರು ವಿರೋಧಿಸುತ್ತಿದ್ದು, ಅಂತಹ ಗ್ರಾಮಗಳಲ್ಲಿ ತಹಶೀಲ್ದಾರ, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ ಲಸಿಕೆಯನ್ನು ನೀಡಬೇಕು. ಮಾಸ್ಕ್ ಧರಿಸದೆ ಇರುವ ಯಾರೇ ಆದರೂ ಅವರಿಗೆ ಕಡ್ಡಾಯವಾಗಿ ದಂಡವನ್ನು ವಿಧಿಸಬೇಕು ಎಂದು ಅವರು ಹೇಳಿದರು.

ಸೆ.17ರಂದು ಆರೋಗ್ಯ ಇಲಾಖೆ ಮಾತ್ರವಲ್ಲದೆ ಇತರೆ ಇಲಾಖೆಗಳ ಎಫ್‌ಡಿಎ, ಎಸ್‌ಡಿಎ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ, ಲಸಿಕೆಯನ್ನು ನೀಡಲು ಕ್ರಮ ಕೈಗೊಳ್ಳ ಬೇಕು. ಲಸಿಕಾ ತಂಡ ಮನೆ ಮನೆಗೆ ತೆರಳಿ ಲಸಿಕೆ ನೀಡಲು ಹೋದರೆ ಬಹಳಷ್ಟು ಜನ ವಿರೋಧ ವ್ಯಕ್ತಪಡಿಸು ತ್ತಾರೆ. ಆದ್ದರಿಂದ ಹೆಚ್ಚಿನ ಜನದಟ್ಟಣೆ ಸೇರುವ ಮಾರುಕಟ್ಟೆ, ಪ್ರಮುಖ ರಸ್ತೆಗಳು, ಕ್ಲಿನಿಕ್‌ಗಳು ಮುಂತಾದ ಸ್ಥಳಗಳಿಗೆ ಲಸಿಕಾ ತಂಡ ತೆರಳಿ ಅಲ್ಲಿಗೆ ಬರುವ ಜನರಿಗೆ ಲಸಿಕಾ ಪ್ರಮಾಣ ಪತ್ರವನ್ನು ಪರಿಶೀಲಿಸಿ ಲಸಿಕೆ ಪಡೆಯದೇ ಇರುವವರಿಗೆ ಲಸಿಕೆ ನೀಡಬೇಕು. ಲಸಿಕಾ ತಂಡದಲ್ಲಿ ಸ್ಥಳೀಯ ಪೊಲೀಸ್ ಸಿಬ್ಬಂದಿ ಹಾಜರಿರಬೇಕು. ಬಸ್ ನಿಲ್ದಾಣ, ಬಸ್ ಡಿಪೋಗಳಲ್ಲಿಯೂ ಲಸಿಕೆಯನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಜನರಿಗೆ ಲಸಿಕೆ ನೀಡುವುದು ಎಷ್ಟು ಮುಖ್ಯವೋ ಅವರನ್ನು ಲಸಿಕೆ ಪಡೆಯುವಂತೆ ಮನವೊಲಿಸುವುದೂ ಅಷ್ಟೇ ಮುಖ್ಯ. ಆದ್ದರಿಂದ ಸ್ಥಳೀಯ ಪ್ರಮುಖರನ್ನು, ಸಮುದಾಯಗಳ ಮುಖಂಡರನ್ನು ಸಂಪರ್ಕಿಸಿ ಅವರ ಮೂಲಕ ಲಸಿಕೆ ಪಡೆಯುವಂತೆ ಜನರ ಮನವೊಲಿಸಬೇಕು. ವಿವಿಧ ಪಟ್ಟಣ, ನಗರ ಪ್ರದೇಶಗಳಲ್ಲಿನ ಪ್ರಮುಖ ದೇವಾಲಯಗಳಿಗೆ ಆಗಮಿಸುವ ಜನರಿಗೆ ಲಸಿಕೆಯನ್ನು ನೀಡಬಹುದು. ಈ ಬಗ್ಗೆ ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು ಸಭೆ ನಡೆಸಿ ಸೂಕ್ತ ಯೋಜನೆಗಳ ಮೂಲಕ ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಆರ್‌ಸಿಎಚ್ ಅಧಿಕಾರಿ ಡಾ. ಜಂಬಯ್ಯ ಮಾತನಾಡಿ, ಸೆ. 14ರ ವರೆಗೆ, ಗಂಗಾವತಿ ತಾಲ್ಲೂಕಿನಲ್ಲಿ 195210 ಜನರಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಿ ಶೇ. 58ರಷ್ಟು ಸಾಧನೆ ಮಾಡಲಾಗಿದೆ. 62927 ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಿ ಶೇ. 84ರಷ್ಟು ಸಾಧನೆ ಮಾಡಲಾಗಿದೆ. ಕೊಪ್ಪಳ ತಾಲ್ಲೂಕಿನಲ್ಲಿ 211397 ಜನರಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದ್ದು, ಶೇ. 76ರಷ್ಟು ಸಾಧನೆ ಮಾಡಲಾಗಿದೆ. 70685 ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದ್ದು, ಶೇ. 86ರಷ್ಟು ಸಾಧನೆ ಮಾಡಲಾಗಿದೆ. ಕುಷ್ಟಗಿಯಲ್ಲಿ 127223 ಜನರಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದ್ದು, ಶೇ. 62ರಷ್ಟು ಸಾಧನೆ ಮಾಡಲಾಗಿದೆ. 43966 ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದ್ದು, ಶೇ. 91ರಷ್ಟು ಸಾಧನೆ ಮಾಡಲಾಗಿದೆ.

ಯಲಬುರ್ಗಾ ತಾಲ್ಲೂಕಿನಲ್ಲಿ 127773 ಜನರಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದ್ದು, ಶೇ. 66ರಷ್ಟು ಸಾಧನೆ ಮಾಡಲಾಗಿದೆ. 48511 ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದ್ದು, ಶೇ.94 ರಷ್ಟು ಸಾಧನೆ ಮಾಡಲಾಗಿದೆ. ಒಟ್ಟು ಜಿಲ್ಲೆಯಾದ್ಯಂತ 661603 ಜನರಿಗೆ ಮೊದಲ ಡೋಸ್ ಲಸಿಕೆ ಯನ್ನು ನೀಡಲಾಗಿದ್ದು, ಶೇ.65 ರಷ್ಟು ಸಾಧನೆ ಮಾಡಲಾಗಿದೆ. 226089 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದ್ದು, ಶೇ.88 ರಷ್ಟು ಸಾಧನೆ ಮಾಡ ಲಾಗಿದೆ ಎಂದು ಇದುವರೆಗೂ ನೀಡಲಾದ ಲಸಿಕೆ ಕುರಿತು ಮಾಹಿತಿ ನೀಡಿದರು.

ಸೆ.17 ರಂದು ನಡೆಯಲಿರುವ ಬೃಹತ್ ಲಸಿಕಾ ಮೇಳಕ್ಕೆ ಲಸಿಕಾ ತಂಡಗಳನ್ನು ನಿಯೋಜಿಸಲಾಗಿದ್ದು, ಜಿಲ್ಲೆಯಾದ್ಯಂತ ಸರ್ಕಾರ ನಿಗದಿಪಡಿಸಿರುವ ಗುರಿಯನ್ನು ಸಾಧಿಸಲು ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗ ರಾಜ ಟಿ., ಜಿಲ್ಲಾ ಕುಟುಂಬ  ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ ಎಚ್. ಸೇರಿದಂತೆ ಎಲ್ಲ ತಾಲ್ಲೂಕುಗಳ ಆರೋಗ್ಯಾಧಿಕಾರಿಗಳು, ತಹಶೀಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *