Wednesday, 1st February 2023

ಪ್ರಭಾವಶಾಲಿ ಭಾವನಾತ್ಮಕ ಬುದ್ಧಿಶಕ್ತಿ ನಮ್ಮದಾಗಲಿ !

ಶ್ವೇತಪತ್ರ

shwethabc@gmail.com

ಮಾರ್ಕ್ಸ್‌ಕಾರ್ಡ್ ಸಕ್ಸಸ್ ಆಗಬೇಕು ಅಂದ್ರೆ ನಮಗೆ ಬೇಕಿರುವುದು ಬರಿಯೇ ಬುದ್ಧಿಶಕ್ತಿ, ಬದುಕೇ ಸಕ್ಸಸ್ ಆಗಬೇಕು ಅಂದ್ರೆ ಬೇಕಿರುವುದು ಭಾವನಾತ್ಮಕ ಬುದ್ಧಿಶಕ್ತಿ. ಹೌದು, ನಮ್ಮದೇ ಭಾವನೆಗಳನ್ನು ಗುರುತಿಸಿ ಅರ್ಥೈಸಿ ಜತೆಗೆ ಎದುರಿಗಿರುವವರ ಭಾವನೆಯನ್ನು ಗುರುತಿಸಿ ಅರ್ಥೈಸುವುದಿದೆಯಲ್ಲ, ಇಲ್ಲಿ ನಮಗೆ ಅವಶ್ಯವಾಗಿ ಬೇಕಿರುವುದೇ ಭಾವನಾತ್ಮಕ ಬುದ್ಧಿಶಕ್ತಿ ಅರ್ಥಾತ್ ಎಮೋಷನಲ್ ಇಂಟೆಲಿಜೆನ್ಸ್.

ಇದಕ್ಕೆ ಪೂರಕವಾಗಿ ಪಂಚತಂತ್ರ ಕಥೆಯೊಂದನ್ನು ಕೇಳಿ: ಜೀವರ್ಧನ ಎನ್ನುವ ವ್ಯಾಪಾರಿಯೊಬ್ಬನ ಮಗ ಮತ್ತೊಬ್ಬ ವ್ಯಾಪಾರಿಯ ಬಳಿ ತನ್ನ ಕಬ್ಬಿಣದ ಅದಿರನ್ನು ಅಡವಾಗಿಟ್ಟು ಪ್ರತಿಯಾಗಿ ಅವನಿಂದ ಹಣ ಪಡೆದು ದೇಶ ಸುತ್ತಲು ಹೊರಟ. ಕೆಲ ದಿನಗಳ ನಂತರ ಮರಳಿದ ಅವನು ವ್ಯಾಪಾರಿಯಲ್ಲಿಗೆ ಹೋಗಿ ಅವನ ಹಣವನ್ನು ಹಿಂದಿರುಗಿಸಿ ತನ್ನ ಕಬ್ಬಿಣದ ಅದಿರನ್ನು ಮರಳಿಸಬೇಕೆಂದು ವಿನಂತಿಸಿದಾಗ ಆತ ‘ಅದನ್ನು ಇಲಿ ತಿಂದುಹಾಕಿಬಿಟ್ಟಿದೆ’ ಎಂದು ಹೇಳಿ ಜೀವರ್ಧನನನ್ನು ಬರಿಗೈಲಿ ವಾಪಸ್ ಕಳಿಸಿದ.

ಅಪ್ರಾಮಾಣಿಕ ವ್ಯಾಪಾರಿಯ ಈ ಅಸಂಬದ್ಧ ವಾದಕ್ಕೆ ಜೀವರ್ಧನ ಸ್ಥಿಮಿತ ಕಳೆದುಕೊಳ್ಳದೆ ಅವನೊಂದಿಗೆ ಉತ್ತಮ ಸಂಬಂಧ ವನ್ನೇ ಮುಂದುವರಿಸಿದ. ಒಮ್ಮೆ ಆ ಅಪ್ರಾಮಾಣಿಕ ವ್ಯಾಪಾರಿಯ ಮಗನನ್ನು ಅವನ ಸಮ್ಮತಿಯೊಂದಿಗೆ ಜೀವರ್ಧನ
ತನ್ನೊಂದಿಗೆ ಕಾಡಿಗೆ ಕರೆದೊಯ್ದ. ಎಷ್ಟು ಹೊತ್ತಾದರೂ ಮಗ ಹಿಂದಿರುಗಿ ಬಾರದಿದ್ದಾಗ ಜೀವರ್ಧನನ ಬಳಿ ಬಂದ
ವ್ಯಾಪಾರಿ ತನ್ನ ಮಗನೆಲ್ಲಿ ಎಂದು ಕೇಳಿದ್ದಕ್ಕೆ, ‘ನಿಮ್ಮ ಮಗನನ್ನು ಹಂಸ ಹೊತ್ತೊಯ್ದಿತು’ ಎಂದು ಜೀವರ್ಧನ ಉತ್ತರಿಸಿದ.

ಕುಪಿತ ವ್ಯಾಪಾರಿ, ‘ಹಂಸವೊಂದು ಹುಡುಗನನ್ನು ಹೊತ್ತೊಯ್ಯಲಾದೀತೇ?’ ಎಂದು ಹೂಂಕರಿಸುತ್ತ ಜೀವರ್ಧನನನ್ನು ಪಂಚಾಯಿತಿ ಕಟ್ಟೆಗೆ ಎಳೆತಂದ. ಆಗ ಜೀವರ್ಧನ, ‘ಸ್ವಾಮಿ, ಕಬ್ಬಿಣದ ಅದಿರನ್ನು ಇಲಿ ತಿನ್ನಬಹುದಾದರೆ, ಹಂಸವು ಹುಡುಗನನ್ನು ಹೊತ್ತೊಯ್ಯಲು ಸಾಧ್ಯವಿಲ್ಲವೇಕೆ?’ ಎಂದು ಪ್ರಶ್ನಿಸಿ ಇಡೀ ಪ್ರಕರಣವನ್ನು ಪಂಚಾಯಿತಿಯ ಹಿರಿಯರಿಗೆ ವಿವರಿಸಿ, ಗುಹೆಯಲ್ಲಿ ಬಚ್ಚಿಟ್ಟಿದ್ದ ವ್ಯಾಪಾರಿಯ ಮಗನನ್ನು ಕರೆತಂದ.

ವ್ಯಾಪಾರಿಯು ತಾನು ಮೋಸದಿಂದ ಬಚ್ಚಿಟ್ಟಿದ್ದ ಕಬ್ಬಿಣದ ಅದಿರನ್ನು ಜೀವರ್ಧನನಿಗೆ ಹಿಂದಿರುಗಿಸಿದ! ಬದುಕಿನ ಅಹಿತಕರ ವೇಳೆಯಲ್ಲೂ ಮನುಷ್ಯನಿಗಿರಬೇಕಾದ ಸಮತೋಲಿತ ಚಿತ್ತಸ್ಥಿತಿಯ ಬಗ್ಗೆ ಮಾತಾಡುವ ಈ ಕಥೆ, ವಿಚಾರವೊಂದಕ್ಕೆ ನಾವು ಹೇಗೆ ಸಂಯಮ ಕಳೆದುಕೊಳ್ಳದೆ ಪ್ರತಿಸ್ಪಂದಿಸಬೇಕು ಎಂಬುದನ್ನೂ ಕಟ್ಟಿಕೊಡುತ್ತದೆ. ಕಬ್ಬಿಣದ ಅದಿರನ್ನು ಕಳೆದುಕೊಂಡ
ಜೀವರ್ಧನನಲ್ಲೂ ಕೋಪ-ತಾಪ-ಹತಾಶೆ ಒಡಮೂಡಿದ್ದರೂ, ಆತ ಅವನ್ನೆಲ್ಲ ಆ ಕ್ಷಣಕ್ಕೆ ನಿಯಂತ್ರಿಸಿ ಪರಿಸ್ಥಿತಿ ಕೈಮೀರದಂತೆ ನಡೆದುಕೊಂಡು ಅವನ್ನು ತನ್ನತ್ತ ತಿರುಗಿಸಿಕೊಂಡದ್ದಿದೆಯಲ್ಲ ಅದೇ ಭಾವನಾತ್ಮಕ ಬುದ್ಧಿಶಕ್ತಿ.

ಇದು ಹಲವು ಗುಣಗಳ ಸಂಕಲಿತ ರೂಪ. ಇದು ನಮ್ಮ ಬದುಕಿನ ಭಾವನಾತ್ಮಕ ಅಂಶಗಳಿಗೆ ಸಂಬಂಧಿಸಿ, ಜತೆಗೆ ನಮ್ಮದೇ ಭಾವನೆಗಳನ್ನು ಗುರುತಿಸಿ ನಿಯಂತ್ರಿಸಿ ಅರ್ಥೈಸಿಕೊಂಡು, ಎದುರಿಗಿರುವವರ ಜತೆಯೂ ಒಳ್ಳೆಯ ಬಾಂಧವ್ಯ ವೃದ್ಧಿಸಿ ಕೊಳ್ಳುವುದೇ ಆಗಿದೆ. ಹಾಗೇ ಒಮ್ಮೆ ನಿಮ್ಮನ್ನು ಕೇಳಿಕೊಳ್ಳಿ- ನಿಮ್ಮ ಭಾವನೆಗಳನ್ನು ನಿಮಗೆ ಗುರುತಿಸಲು ಸಾಧ್ಯವೇ? ಅಂದರೆ ನಿಮಗೆ ಸಿಟ್ಟು ಬರುವುದು ಯಾವಾಗ, ಯಾವ ಕಾರಣಕ್ಕೆ? ಬೇಜಾರಾಗುವುದು ಯಾವಾಗ, ಯಾವ ಕಾರಣಗಳಿಗೆ? ಹೀಗೆ. ಈಗ  ಮತ್ತೆರಡು ಪ್ರಶ್ನೆಗಳು- ಈ ನಿಮ್ಮದೇ ಭಾವನೆಗಳು ನಿಮ್ಮನ್ನು ಮುಳುಗಿಸದಂತೆ ತಡೆಯಬಲ್ಲಿರಾ? ನಿಮಗೆ
ನೀವೇ ಮೋಟಿವೇಟ್ ಮಾಡಿಕೊಂಡು ಮುಂದುವರಿಯಬಲ್ಲಿರಾ? ಇವಕ್ಕುತ್ತರ ‘ಇಲ್ಲ’ ಎಂದಾದಲ್ಲಿ, ನಿಮಗಿಲ್ಲಿ ಅವಶ್ಯ ವಾಗಿರುವುದೇ ನಿಮ್ಮದೇ ಸಂವೇಗಗಳನ್ನು ಹತೋಟಿಯಲ್ಲಿಡುವ ಬುದ್ಧಿಶಕ್ತಿ.

ಬುದ್ಧಿ-ಭಾವ ಸಂಧಿಸುವ ಪರಿಕಲ್ಪನೆಯೇ ಎಮೋಷನಲ್ ಇಂಟೆಲಿಜೆನ್ಸ್. ಎಂಥದೇ ಘರ್ಷಣೆಯ, ದ್ವಂದ್ವದ ಸಂದರ್ಭದಲ್ಲೂ,
ಸಾಮಾಜಿಕವಾಗಿ ಸೋತೆವೆಂದುಕೊಂಡ ಪರಿಸ್ಥಿತಿಯಲ್ಲೂ ಭಾವನಾತ್ಮಕ ಬುದ್ಧಿಶಕ್ತಿ ನಮ್ಮನ್ನು ಪ್ರೇರೇಪಿಸುತ್ತ, ನಮ್ಮಲ್ಲಿನ
ಒತ್ತಡವನ್ನು ನಿಭಾಯಿಸುತ್ತ, ನಮ್ಮೊಳಗಿನ ಪರಿಪೂರ್ಣತೆ ಯನ್ನು ನಮಗೆ ಅರ್ಥೈಸುತ್ತ ನಮ್ಮ ಬದುಕಿಗೆ ಉದ್ದೇಶವನ್ನು
ಖುಷಿಯನ್ನು ತುಂಬುತ್ತದೆ. ನಮ್ಮ ಬದುಕಿಗೊಂದು ಚೌಕಟ್ಟನ್ನು ಅಳವಡಿಸಿಕೊಡುತ್ತದೆ. ಭಾವನೆಗಳನ್ನು ಮುಂದಿಟ್ಟು ಸಂಬಂಧ ವನ್ನು ಹಾಳುಗೆಡಹುವುದರ ಬದಲು ಭಾವನೆಗಳ ಕೈಲಿ ಬುದ್ಧಿ ಕೊಟ್ಟರೆ, ಬದುಕಿನ ಎಷ್ಟೋ ಪ್ರಶ್ನೆಗಳಿಗೆ ತಾತ್ವಿಕವಾಗಿ ಉತ್ತರ ಕಂಡುಕೊಳ್ಳಬಹುದು!

ಕೆಲವರಿರುತ್ತಾರೆ, ಎಲ್ಲವನ್ನೂ ತೂಗಿಸಿಕೊಂಡು ಹೋಗುವ ಸ್ವಭಾವದವರು, ಇನ್ನೂ ಕೆಲವರು ಎಂಥದೇ ವಿಷಮ ಸಂದರ್ಭ ದಲ್ಲೂ ಬ್ಯಾಲೆನ್ಸ್ ಮಾಡಿಬಿಡುತ್ತಾರೆ, ಎಂಥದೇ ವಿಚಾರಗಳನ್ನು ನಾಜೂಕಾಗಿ ಮಾತಾಡಿ ಕೆಲಸವನ್ನು ಸರಿದೂಗಿಸುತ್ತಾರೆ. ಅದೇ ನಮ್ಮಂಥವರು ಹೋದಲ್ಲೆಲ್ಲ ಜಗಳ, ಕಿರಿಕಿರಿ, ಮನಸ್ತಾಪ, ಬಿರುಕು, ಏನೋ ಸರಿಬರದಿರುವಿಕೆ, ಮಾತುಕತೆಯಲ್ಲಿ ವ್ಯತ್ಯಾಸ. ನಮಗೂ ಮೇಲಿನ ಕೆಲವರಿಗೂ ವ್ಯತ್ಯಾಸವಿರುವುದೇ ಭಾವನಾತ್ಮಕ ಬುದ್ಧಿಶಕ್ತಿಯಲ್ಲಿ.

ಅರ್ಥಪೂರ್ಣ ಮಾನವ ಸಂಬಂಧಗಳನ್ನು ಬೆಸೆಯುವಲ್ಲಿ ಇದರ ಪಾತ್ರ ಪ್ರಮುಖವಾದದ್ದು. ಸಹಾನುಭೂತಿ, ಸೌಹಾರ್ದಯುತ ಸಂಬಂಧ, ಸಹಕಾರಿ ಮನೋಭಾವ, ಆತ್ಮೀಯತೆ, ಸಾಮಾಜಿಕ ಕಳಕಳಿ ಇವೆಲ್ಲವುಗಳ ಅರಿವಿನ ಮೂಟೆಯೇ ಭಾವನಾತ್ಮಕ ಬುದ್ಧಿಶಕ್ತಿ. ‘ಸಕ್ಸಸ್ ಫುಲ್ ಹ್ಯಾಪಿ ಲೈಫ್’ ನಮ್ಮೆಲ್ಲರ ಇಷ್ಟ, ನಮ್ಮೆಲ್ಲರ ಕನಸು. ಈ ಕನಸು ನನಸಾಗಬೇಕಾದರೆ ಬುದ್ಧಿ-ಭಾವ ಗಳನ್ನು ಬೆಸೆಯುವ ಕೊಂಡಿಯಾದ ಎಮೋಷನಲ್ ಇಂಟೆಲಿಜೆನ್ಸ್ ನಮ್ಮ ಬದುಕಿನ ಭಾಗವಾಗಬೇಕು, ನಮ್ಮನ್ನು ಪ್ರಭಾವಿಸಬೇಕು. ಹಾಗಾದರೆ, ನಾವೆಲ್ಲ ಬದಲಾಗಬೇಕು, ಹೊಸ ಸಾಧ್ಯತೆಗಳಿಗೆ ಮುಖಮಾಡಬೇಕು. ಇಲ್ಲವಾದಲ್ಲಿ ಒತ್ತಡಗಳ ಮಧ್ಯೆ ಕಳೆದುಹೋಗುತ್ತೇವೆ ಅಥವಾ ಮುಳುಗಿಹೋಗುತ್ತೇವೆ.

ಮತ್ತೊಂದು ಪಂಚತಂತ್ರ ಕಥೆಯನ್ನು ನೋಡೋಣ: ಕೊಳ ವೊಂದರಲ್ಲಿ ವಾಸವಿದ್ದ ಎರಡು ಮೀನುಗಳು ಮತ್ತು ಒಂದು ಕಪ್ಪೆ ಸ್ನೇಹಿತರಾಗಿದ್ದವು. ದಿನಗಳೆದಂತೆ ಕೊಳದಲ್ಲಿ ನೀರು ಕಡಿಮೆಯಾಗತೊಡಗಿದಾಗ ಕಪ್ಪೆಯು, ‘ಬೇರೊಂದು ಕೊಳಕ್ಕೆ ಸ್ಥಳಾಂತರಗೊಳ್ಳೋಣ’ ಎಂದು ಮೀನುಗಳಿಗೆ ಹೇಳಿತು. ಆದರೆ ಕಪ್ಪೆಯ ಮಾತನ್ನು ಕಡೆಗಣಿಸಿದ ಮೀನುಗಳು ಹಾಗೆ ಸ್ಥಳಾಂತರಗೊಳ್ಳಲು ಒಪ್ಪದೆ, ‘ಈ ಜಾಗವನ್ನು ಬಿಟ್ಟು ಕದಲಲಾರೆವು’ ಎಂದು ಹಠ ಹಿಡಿದವು.

ಕಪ್ಪೆ ವಿಧಿಯಿಲ್ಲದೆ ಮತ್ತೊಂದು ಕೊಳವನ್ನರಸಿ ಹೋಯಿತು. ಕೊನೆಗೆ ವಿಪರೀತ ಬರ ಬಂದು ಕೊಳದ ನೀರೆಲ್ಲ ಆವಿಯಾಗಿ ಮೀನುಗಳು ಸತ್ತುಹೋದವು. ಪಂಚತಂತ್ರ ಬರೀ ಕಥೆಯನ್ನಷ್ಟೇ ಹೇಳುವುದಿಲ್ಲ, ಬದುಕಿನ ಪಾಠಗಳನ್ನೂ ನಮ್ಮೆದುರು
ತೆರೆದಿಡುತ್ತದೆ. ಇಲ್ಲಿನ ಕಪ್ಪೆಯ ನಡೆಯಂತೆ ಹೊಸ ವಿಚಾರಗಳಿಗೆ, ಆಲೋಚನೆಗಳಿಗೆ ಮನಸ್ಸನ್ನು ಅಡಾಪ್ಟ್ ಮಾಡಿಕೊಳ್ಳ ಬೇಕು.

ಭಾವನಾತ್ಮಕ ಬುದ್ಧಿಶಕ್ತಿಯು ಅಷ್ಟೇ ಸಂತೋಷಕರ ಮತ್ತು ಉಪಯುಕ್ತ ಜೀವನ ನಡೆಸುವಲ್ಲಿ ಬುದ್ಧಿಶಕ್ತಿಗಿಂತ ಬಹಳ ಮುಖ್ಯ.
ಭಾವನಾತ್ಮಕ ಬುದ್ಧಿಶಕ್ತಿಯಲ್ಲಿ ಪ್ರಮುಖವಾಗಿ ೫ ಅಂಶಗಳನ್ನು ಕಾಣುತ್ತೇವೆ ಮತ್ತು ಜೀವನದಲ್ಲಿ ಏನನ್ನು ಅನುಭವಿಸುತ್ತೇವೆ ಎಂಬುದು ಈ ೫ ಅಂಶಗಳಿಂದ ನಿರ್ಧಾರವಾಗುತ್ತದೆ.

೧) ನಮ್ಮದೇ ಭಾವನೆಗಳನ್ನು ನಾವು ಅರ್ಥಮಾಡಿಕೊಳ್ಳುವುದು: ಭಾವನೆಗಳು ಪ್ರಬಲವಾದ ಪ್ರತಿಕ್ರಿಯೆಗಳು. ಆದ್ದರಿಂದ ನಮ್ಮ ಭಾವನೆಗಳನ್ನು ಮೊದಲಿಗೆ ಅರ್ಥಮಾಡಿಕೊಳ್ಳಬೇಕಿರುವುದು ಬಹಳ ಮುಖ್ಯ. ನಮ್ಮ ಭಾವನೆಗಳು ನಮಗೇ ತಿಳಿಯದಿದ್ದರೆ ಉತ್ತಮ ತೀರ್ಮಾನಗಳನ್ನು ಕೈಗೊಳ್ಳುವುದು ಕಷ್ಟವಾಗುತ್ತದೆ. ಉದಾಹರಣೆಗೆ, ವೃತ್ತಿಯ/ಬಾಳ ಸಂಗಾತಿಯ ಆಯ್ಕೆ, ಮನೆ ಖರೀದಿಸುವಿಕೆ ಇತ್ಯಾದಿ ನಮ್ಮ ಭಾವನೆಗಳು ನಮಗೇ ತಿಳಿಯದಿದ್ದರೆ ಅವನ್ನು ನಮ್ಮ ದೇಹಭಾಷೆಯ ಮೂಲಕ ವ್ಯಕ್ತಪಡಿಸುವುದು ಕಷ್ಟವಾಗುತ್ತದೆ. ಇದು ನಮ್ಮ ಸಾಮಾಜಿಕ ಸಂಬಂಧಗಳ ಮೇಲೂ ದುಷ್ಪರಿಣಾಮವನ್ನು ಉಂಟುಮಾಡುತ್ತ ಹೋಗುತ್ತದೆ.

೨) ನಮ್ಮ ಭಾವನೆಗಳನ್ನು ನಿಯಂತ್ರಿಸುವುದು: ಇದು ಭಾವನೆಗಳ ನಿಯಂತ್ರಣ, ಸ್ವಭಾವ, ತೀವ್ರತೆ ಮತ್ತು ಅಭಿವ್ಯಕ್ತಿಗೆ ಸಂಬಂಧಪಟ್ಟಿದೆ. ಭಾವನೆಗಳ ನಿಯಂತ್ರಣವು ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಸಂಬಂಧಗಳ ದೃಷ್ಟಿಯಿಂದ ಬಹಳ ಮುಖ್ಯವಾದದ್ದು. ನಮ್ಮ ಕೋಪ-ತಾಪಗಳನ್ನು ನಿಯಂತ್ರಿಸಲು ವಿಫಲರಾದರೆ ಜನ ನಮ್ಮಿಂದ ದೂರವಾಗುವರು ಮತ್ತು ಸೂಕ್ತ ವೃತ್ತಿಯ ಆಯ್ಕೆ ಹಾಗೂ ಸ್ನೇಹಬಳಗದ ಜತೆಗಿನ ಹೊಂದಾಣಿಕೆ ಕಷ್ಟವಾಗುವುದು.

೩) ನಮ್ಮನ್ನು ನಾವೇ ಉತ್ತೇಜಿಸಿಕೊಳ್ಳುವುದು: ದೀರ್ಘಕಾಲ ಕೆಲಸದಲ್ಲಿ ತೊಡಗಿಸಿಕೊಳ್ಳಲು ಮತ್ತು ಶ್ರಮದ ಪ್ರತಿ-ಲದ ಬಗ್ಗೆ ಕುತೂಹಲಿಗಳೂ ಆಶಾವಾದಿಗಳೂ ಆಗಿರಲು ನಮ್ಮನ್ನು ನಾವೇ ಉತ್ತೇಜಿಸಿಕೊಳ್ಳಬೇಕು. ಸಣ್ಣಪುಟ್ಟ ಆಸೆಗಳನ್ನು ಬದಿಗೊತ್ತಿ, ಹಗಲು-ರಾತ್ರಿ ದುಡಿದಾಗ ಮಾತ್ರವೇ ಬಯಕೆಗಳು ಕೈಗೂಡುತ್ತವೆ, ಉನ್ನತ ಗುರಿಯ ಸಾಧನೆಯಾಗುತ್ತದೆ.

೪) ಇತರರ ಭಾವನೆಗಳನ್ನು ಗುರುತಿಸುವುದು ಅಥವಾ ಅರ್ಥಮಾಡಿಕೊಳ್ಳುವುದು: ಸಾಮಾಜಿಕ ಸಂಬಂಧಗಳಲ್ಲಿ ಯಾರಿಗಾ ದರೂ ಏನನ್ನಾದರೂ ಹೇಳಬೇಕಾದರೆ ಅಥವಾ ಅವರಿಂದ ಏನನ್ನಾದರೂ ಕೇಳಬೇಕಾದರೆ ಮೊದಲು ಅವರ ಮನಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಕೆಟ್ಟ ಮನಸ್ಥಿತಿ ಇರುವಾಗ ಅದನ್ನು ಅರ್ಥಮಾಡಿಕೊಳ್ಳದೆ ವ್ಯವಹರಿಸಿ ದಾಗ, ಸಂಬಂಧವೂ ಹಾಳು, ವ್ಯವಹಾರವೂ ಹಾಳು. ಎದುರಿಗಿರುವ ವ್ಯಕ್ತಿಯ ಮನಸ್ಥಿತಿಯನ್ನು ಅರ್ಥಮಾಡಿಕೊಂಡರೆ ನಮ್ಮ ಬೇಡಿಕೆಗಳನ್ನು ಸುಲಭವಾಗಿ ಈಡೇರಿಸಿಕೊಳ್ಳಬಹುದು. ಹೀಗೆ ಜನರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ವ್ಯವಹರಿಸಬಲ್ಲಾತ ಬದುಕಿನಲ್ಲಿ ಸಮತೋಲನದಿಂದ ಮುಂದುವರಿಯುತ್ತಾನೆ.

೫) ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಅಥವಾ ನಿಭಾಯಿಸುವುದು: ಸಾಮಾಜಿಕವಾಗಿ ನಾಲ್ಕು ಜನರ ಮಧ್ಯೆ ನಾವು ಬದುಕಬೇಕಾದರೆ, ಒಂದು ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ವಿವಿಧ ಜನರ ಕೆಲಸಗಳನ್ನು ಸಮನ್ವಯಗೊಳಿಸುತ್ತ ಮಾನವ ಸಂಬಂಧಗಳ ಕ್ಲಿಷ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತ, ಇತರರಿಗೆ ಬೇಸರವಾಗದಂತೆ ಅವರ ಕೆಲಸಗಳ ಬಗ್ಗೆ ವಿಮರ್ಶೆಮಾಡಿ ಸೂಕ್ತ ಸಲಹೆ-ಸೂಚನೆ ನೀಡುತ್ತ ಸಾಗಬೇಕಾಗುತ್ತದೆ.

ಇಂಥ ಸಾಮಾಜಿಕ ಸಂಬಂಧಗಳಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುವುದೇ ಭಾವನಾತ್ಮಕ ಬುದ್ಧಿಶಕ್ತಿ. ‘ಒಂದು ಮಾತಾಡಿದರೆ ಹೆಚ್ಚು, ಒಂದು ಮಾತಾಡಿದರೆ ಕಮ್ಮಿ’ ಎನ್ನುವಂತಿರುವ ಇವತ್ತಿನ ಸಂದರ್ಭದಲ್ಲಿ ಭಾವನೆಗಳ ಅಭಿವ್ಯಕ್ತಿ ಹಾಗೂ ಅದರ ಅರ್ಥವಿವರಣೆ ಮಾಡುವಲ್ಲಿ ಭಾವನಾತ್ಮಕ ಬುದ್ಧಿಶಕ್ತಿಯ ಪ್ರಭಾವ ಪ್ರಮುಖವಾಗಿರುತ್ತದೆ. ಇಂಥ ಭಾವನಾತ್ಮಕ ಬುದ್ಧಿಶಕ್ತಿಯ ಮೌಲ್ಯ ಹಾಗೂ ಉಪಯುಕ್ತತೆಗಳನ್ನು ಮುಂದೆ ಎಂದಾದರೂ ವಿವರಿಸುವೆ.

error: Content is protected !!