Tuesday, 5th July 2022

ಸಿಕ್ಕ ಖಾತೆಗೆ ಅಸಮಾಧಾನ ವ್ಯಕ್ತಪಡಿಸಿದ ಆನಂದ್ ಸಿಂಗ್, ಶ್ರೀರಾಮುಲು

ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ ಅಸಮಾಧಾನ ಸ್ಫೋಟಗೊಂಡಿದೆ. ಇದರ ಬೆನ್ನಲ್ಲೇ ಆನಂದ್ ಸಿಂಗ್ ಹಾಗೂ ಶ್ರೀರಾಮುಲು ಸಿಕ್ಕ ಖಾತೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಿಸರ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಆನಂದ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ನಿರೀಕ್ಷೆ ಮಾಡಿದ ಖಾತೆ ಸಿಕ್ಕಿಲ್ಲ. ಬೇರೆ ಖಾತೆ ನೀಡುವಂತೆ ಸಿಎಂ ಬಳಿ ಕೇಳಿದ್ದೆ. ಈಗ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ನೀಡಿದ್ದಾರೆ. ಕೇಳಿದ ಖಾತೆ ಕೊಟ್ಟಿಲ್ಲ ಎಂಬ ನೋವಿದೆ. ಸಿಎಂ ಬೊಮ್ಮಾಯಿ ಅವರನ್ನು ನಾಳೆ ಭೇಟಿಯಾಗಿ ಮತ್ತೊಮ್ಮೆ ಮನವಿ ಮಾಡುತ್ತೇನೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಸಾರಿಗೆ ಸಚಿವ ಶ್ರೀರಾಮುಲು ಕೂಡ ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಡಿಸಿಎಂ ಹುದ್ದೆಯೂ ನೀಡಿಲ್ಲ, ಕೇಳಿದ ಖಾತೆಯನ್ನೂ ನೀಡಿಲ್ಲ. ಸಿಎಂ ಜೊತೆ ಮತ್ತೊಮ್ಮೆ ಚರ್ಚಿಸುತ್ತೇನೆ ಎಂದು ಶ್ರೀರಾಮುಲು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಸಚಿವರ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಕೆಲವರಿಗೆ ಖಾತೆ ಹಂಚಿಕೆ ಅಸಮಾಧಾನ ತರುವುದು ಸಹಜ. ಆನಂದ್ ಸಿಂಗ್ ನನ್ನ ಒಳ್ಳೆಯ ಸ್ನೇಹಿತ. ಎಲ್ಲಾ ಸಚಿವರು ತಮ್ಮ ತಮ್ಮ ಖಾತೆಯನ್ನು ಉತ್ತಮವಾಗಿ ನಿಭಾಯಿಸಲಿ ಎಂದು ಹೇಳಿದರು.