ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಪ್ರತಿಮಾದೇವಿ ಅವರ ನಿಧನಕ್ಕೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಶೋಕ ವ್ಯಕ್ತಪಡಿಸಿದ್ದಾರೆ.
ಪ್ರತಿಮಾ ದೇವಿ ಅವರು ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದರಲ್ಲಿ ಒಬ್ಬರು, 60ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಪ್ರತಿಮಾದೇವಿ ಕನ್ನಡ ಚಿತ್ರರಂಗ ಕಂಡ ಅತ್ಯಂತ ಸುಂದರ ನಾಯಕಿಯರಲ್ಲಿ ಒಬ್ಬರಾಗಿದ್ದರು, ಜಗನ್ಮೋಹಿನಿ ಚಿತ್ರದ ಅವರ ಪಾತ್ರ ಅವಿಸ್ಮರಣೀಯವಾದದ್ದು.
ಅವರು ತಮ್ಮ ಇಡೀ ಕುಟುಂಬವನ್ನೇ ಕಲಾ ಜಗತ್ತಿನ ಸೇವೆಗೆ ಮುಡುಪಿಟ್ಟ ವರು. ಮಹಾತ್ಮ ಪಿಚ್ಚರ್ಸ್ ಮೂಲಕ ಉತ್ತಮ ಹಾಗೂ ಸದಭಿರುಚಿಯ ಅನೇಕ ಚಿತ್ರಗಳನ್ನು ನಿರ್ಮಿಸಿದ್ದರು. ಚಿತ್ರರಂಗದ ಎಲ್ಲ ವಿಭಾಗಗಳಲ್ಲಿಯೂ ಕೆಲಸ ಮಾಡಿದ್ದರು. ಅವರ ಮಗ ರಾಜೇಂದ್ರ ಸಿಂಗ್ ಬಾಬು ಹಾಗೂ ಮಗಳು ವಿಜಯಲಕ್ಷ್ಮಿಸಿಂಗ್ ಆ ಕಲಾ ಪರಂಪರೆಯನ್ನು ಮುಂದುವರೆಸಿದ್ದಾರೆ.
ಪ್ರತಿಮಾದೇವಿ ಅವರ ನಿಧನದಿಂದ ಕನ್ನಡ ಚಿತ್ರರಂಗ ಹಿರಿಯ ತಲೆಮಾರಿನ ಕೊಂಡಿಯೊಂದನ್ನು ಕಳೆದುಕೊಂಡಂತಾಗಿದೆ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.