Sunday, 25th September 2022

ಸೆಲ್ಫಿ ತೆಗೆಯಲು ಜಲಪಾತಕ್ಕೆ ಬಿದ್ದ ಯುವತಿ ನಾಪತ್ತೆ

ಶಿರಸಿ : ಅಂದು ೬ ಗೆಳೆಯರು ಸೇರಿ ಶಿರಸಿಯ ಪ್ರಸಿದ್ಧ ಶಿವಗಂಗಾ ಜಲಪಾತಕ್ಕೆ ಮಸ್ತಿಗೆ ತೆರಳಿದ್ದರು. ಆದರೆ ಅಲ್ಲಿ ಮಸ್ತಿಗಿಂತ ಮೊದಲು ನಡೆದದ್ದು ಅಪಘಾತ ! ಓರ್ವ ಯುವತಿ ಕಾಣೆಯಾಗಿದ್ದಳು. ಸೆಲ್ಫಿ ತೆಗೆಯಲು ಜಲಪಾತಕ್ಕೆ ಬಿದ್ದಳು ಎಂದರೂ ವಾರ ಕಳೆದರೂ ಯುವತಿ ಪತ್ತೆಯಾಗದಿರುವುದು ಈಗ ಹಲವು ಅನುಮಾನಕ್ಕ ಕಾರಣವಾಗಿದೆ. ಯುವತಿ ಹುಡುಕಲು ಪೊಲೀಸರು ವಿಫಲರಾಗಿದ್ದಾರೆ.

ಹೌದು ..! ಕಳೆದ ಜು.೩೦ ರಂದು ಶಿವಗಂಗಾ ಜಲಪಾತಕ್ಕೆ ತೆರಳಿದ್ದ ಯುವತಿ ತ್ರಿವೇಣಿ ಅಂಬಿಗ (೧೯) ಕಾಣೆಯಾಗಿದ್ದು, ವಾರ ಕಳೆದರೂ ಹುಡುಕಲು ಸಾಧ್ಯವಾಗಿಲ್ಲ. ಕೊಡ್ನಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಶಿವಗಂಗಾ ಜಲಪಾತ ನೋಡಲು ಎಷ್ಟು ಚಂದವೂ ಅಷ್ಟೇ ಡೇಂಜರ್ ಕೂಡ. ಈ ಹಿಂದೆಯೂ ಸಹ ಹಲವಾರು ಜನರು ಜಲತಾಪಕ್ಕೆ ಬಿದ್ದು ಮೃತಪಟ್ಟಿದ್ದರು. ಆದರೆ ಒಂದೆರಡು ದಿನದಲ್ಲಿ ಮೃತದೇಹ ದೊರಕಿತ್ತು.

ವಿಫಲ : ಅನ್ಯ ಧರ್ಮೀಯ ಹುಡುಗನೂ ಸೇರಿ ೩ ಯುವತಿಯವರು, ೩ ಯುವಕರು ಜಲಪಾತಕ್ಕೆ ತೆರಳಿದ್ದರು. ಅಲ್ಲಿ ಅವಘಡ ನಡೆದಿದೆ. ನಂತರ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳೀಯರೊಂದಿಗೆ ಸೇರಿ ಅಗ್ನಿ ಶಾಮಕ, ಕೋತಿರಾಜ್ ತಂಡ ಹೀಗೆ ಹಲವು ರೀತಿಯ ಪ್ರಯೋಗ ಮಾಡಿದರೂ ಸಹ ಯುವತಿ ಹುಡುಕಲು ಸಾಧ್ಯವಾಗಿಲ್ಲ.

ಸ್ಥಳ ಬದಲು : ಅನುಮಾನ !
ಕಾಣೆಯಾದ ತ್ರಿವೇಣಿ ಅಂಬಿಗ ಶಿರಸಿ ತಾಲೂಕಿನ ಕಸಗೆಯ ಮಾದೇವ ಮತ್ತು ಕೇಶಿ ಅಂಬಿಗ ದಂಪತಿ ಪುತ್ರಿ. ಈಕೆ ಸಿದ್ದಾಪುರದಲ್ಲಿ ಡಿಪ್ಲೋಮಾ ಓದುತ್ತಿದ್ದಳು. ಈಕೆಯ ಜೊತೆಯಲ್ಲಿ ಅಂದು ಸುಜಯ್, ಸರ್ಪರಾಜ್ ಶ್ರೀಪಾದ, ಚೈತ್ರಾ ಮತ್ತು ಸುಮಾ ಎಂಬುವರು ಜಲಪಾತಕ್ಕೆ ತೆರಳಿದ್ದರು. ‘ ಇವರು ಮೊದಲು ಉಂಚಳ್ಳಿ ಜಲಪಾತಕ್ಕೆ ಹೋಗುವುದಾಗಿ ತಿಳಿಸಿದ್ದರು. ನಂತರ ಶಿವಗಂಗಾಗೆ ಹೋಗಿದ್ದಾರೆ. ಇದೂ ಸಹ ಅನುಮಾನಕ್ಕೆ ಕಾರಣವಾಗಿದೆ. ಸಿದ್ದಾಪುರದಿಂದ ಬಸ್ಸಿಗೆ ಮೂವರು ಯುವತಿಯವರು ಬಂದಿದ್ದು, ನಂತರ ಶಿರಸಿಯಿಂದ ಬೈಕ್ ಮೇಲೆ ತೆರಳಿದ್ದರು ‘ ಎಂದು ತ್ರಿವೇಣಿ ತಂದೆ ಮಾದೇವ ಅಂಬಿಗ ಹೇಳಿದರು.

ಮಾಹಿತಿ ಇಲ್ಲ !
ಕಾಣೆಯಾದ ಯುವತಿ ಜೊತೆ ಇದ್ದಂತಹ ಯುವಕ, ಯುವತಿಯವರ ಮಾಹಿತಿ ಮಾತ್ರ ಯಾರಿಗೂ ತಿಳಿದಿಲ್ಲ. ಕೆಲವೊಂದು ಪ್ರಕರಣದಲ್ಲಿ ಎಲ್ಲರನ್ನೂ ವಿಚಾರಣೆಗೆ ಒಳಪಡಿ ಸುವ, ಮಾಹಿತಿ ನೀಡುವ ಪೊಲೀಸರು ಈ ವಿಷಯವಾಗಿ ಯಾವ ಮಾಹಿತಿ ನೀಡದಿರು ವುದು ಹಲವು ಅನುಮಾನಕ್ಕೆ ಕಾರಣವಾಗಿದೆ‌. ಕಾರಣ ಪೊಲೀಸರು ಪಕ್ಷಪಾತ ಮಾಡದೇ ಸಮಗ್ರ ತನಿಖೆ ಮಾಡಬೇಕು ಎನ್ನುವುದು ಕುಟುಂಬಸ್ಥರ ಆಗ್ರಹವಾಗಿದೆ.

ಪಂಚಾಯತ ನಿರ್ಲಕ್ಷ್ಯ !
ಶಿವಗಂಗಾ ಜಲಪಾತದ ಅವಘಡಗಳಿಗೆ ಕೊಡ್ನಗದ್ದೆ ಗ್ರಾಮ ಪಂಚಾಯತದ ನಿರ್ಲಕ್ಷ್ಯವೇ ಕಾರಣ. ಕಳೆದ ಹಲವು ವರ್ಷಗಳಿಂದ ಈ ರೀತಿಯ ಅವಘಡಗಳು ಸಂಭವಿಸುತ್ತಿದ್ದರೂ ಯಾವುದೇ ಸುರಕ್ಷಿತ ಕ್ರಮ ಕೈಗೊಂಡಿಲ್ಲ. ಬದಲಾಗಿ ‘ಶೋಕಿ’ಗಾಗಿ ಮೂರ್ನಾಲ್ಕು ಲಕ್ಷ ಖರ್ಚು ಮಾಡಿ ಬೃಹತ್ ಬೋರ್ಡ ಹಾಕಿಸಲಾಗಿದೆ. ಇದರ ಬದಲು ಜನರ ಪ್ರಾಣ ಉಳಿಸುವ ಕೆಲಸ ಮಾಡಲಿ ಎನ್ನುವುದು ಸ್ಥಳೀಯ ಪ್ರಜ್ಞಾವಂತರ ಆಗ್ರಹವಾಗಿದೆ.

***
ಕಾಯುತ್ತಿದ್ದೇವೆ !
ವಾರ ಕಳೆದರೂ ಹುಡುಕುತ್ತಿದ್ದೇವೆ ಎಂಬ ಮಾತು ಪೊಲೀಸರು ಹೇಳುತ್ತಿದ್ದಾರೆ. ತ್ರಿವೇಣಿ ಬಿದ್ದಿರುವುದನ್ನು ಐವರಲ್ಲಿ ಯಾರೂ ನೋಡಿಲ್ಲ ಎನ್ನುತ್ತಾರೆ. ಮಗಳನ್ನು ಉಳಿಸಲೂ ಅವರು ಪ್ರಯತ್ನಿಸಿಲ್ಲ. ಇದೆಲ್ಲಾ ಅನುಮಾನಕ್ಕೀಡು ಮಾಡಿದೆ. ನ್ಯಾಯ ಬೇಕಿದೆ. ನಾವು ಮಗಳಿಗಾಗಿ ಕಾಯುತ್ತಿದ್ದೇವೆ.
ಮಾದೇವ, ಕೇಶಿ ಅಂಬಿಗ, ತ್ರಿವೇಣಿಯ ತಂದೆ-ತಾಯಿ.

ಶ್ರೀಪಾದ, ಸರ್ಪರಾಝ್ ಯಾರು ?
ತ್ರಿವೇಣಿ ಅವರ ಕುಟುಂಬ ಬಡತನದಲ್ಲಿದ್ದು, ದೊಡ್ಡ ವ್ಯಕ್ತಿಗಳ ಸಹಕಾರವಿಲ್ಲ. ಮಾದೇವ ಅಂಬಿಗ ಕೇಶಿ ಅಂಬಿಗ ಮತ್ತು ಮಹೇಂದ್ರ ಹಾಗೂ ಮೇಘಾ ಎನ್ನುವರ ಜೊತೆಯಲ್ಲಿ ತ್ರಿವೇಣಿ ಇದ್ದರು. ಇಂತಹ ತ್ರಿವೇಣಿಯನ್ನು ಶ್ರೀಪಾದ ಎನ್ನುವ ವ್ಯಕ್ತಿ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾನೆ. ಆತನ ಪರಿಚಯ ಕುಟುಂಬಸ್ಥರಿಗೆ ಇರಲಿಲ್ಲ. ಆದರೆ ಸರ್ಪರಾಝ್ ಎನ್ನುವ ಯುವಕನ ಬಗ್ಗೆ ತ್ರಿವೇಣಿ ಮಾತನಾಡುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದು, ಇವರೆಲ್ಲರನ್ನೂ ಒದ್ದು ಒಳಗೆ ಹಾಕಿ ತನಿಖೆ ನಡೆಸಿದಲ್ಲಿ ಮಾತ್ರ ಸತ್ಯಾ ಸತ್ಯತೆ ಹೊರಬವುದು ಎಂಬುದಿ ಅವರ ಅಭಿಪ್ರಾಯವಾಗಿದೆ.

ಅನುಮಾನ !
“ಮಗಳ ಸಾವು ಸಾಕಷ್ಟು ಅನುಮಾನದಿಂದ ಕೂಡಿದೆ. ಸರ್ಪರಾಝ್ ಎನ್ನುವ ಯುವಕ ಪೊಲೀಸರ ಮಗನಾಗಿದ್ದು, ಪ್ರಕರಣದಲ್ಲಿ ಒತ್ತಡವೂ ಕಾಣುತ್ತಿದೆ. ನಮಗೆ ಯಾವುದೇ ಮಾಹಿತಿ ಸರಿಯಾಗಿ ನೀಡಿಲ್ಲ. ಯುವಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ನಮ್ಮ ಎದುರು ಎರಡು ಮಾತು ಆಡಿಸಿ ಪೊಲೀಸರು ಬಿಡುತ್ತಾರೆ. ಹೀಗಾದಲ್ಲಿ ನಮಗೆ ಹೇಗೆ ನ್ಯಾಯ ಸಿಗುತ್ತದೆ ? ನಾವು ಕೇಳಿದರೆ ಹುಡಕುತ್ತೇವೆ ಎಂದಷ್ಟೇ ಹೇಳುತ್ತಾರೆ. ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ. ಮಗಳನ್ನು ಕಿಡ್ನಾಪ್ ಮಾಡಿದ್ದಾರೆ. ಅನುಮಾನ ಈಗ ಹೆಚ್ಚಾಗಿದೆ ” ಎನ್ನುವುದು ತ್ರಿವೇಣಿಯ ತಾಯಿ ಕೇಶಿ ಅಂಬಿಗ ಅವರ ಮಾತಾಗಿದೆ.