Friday, 19th August 2022

ನೋವು ನುಂಗಿದ ವಿಷಕಂಠ ನರೇಂದ್ರ ಮೋದಿ

ಅಭಿಮತ

ಪ್ರಕಾಶ್ ಶೇಷರಾಘವಾಚಾರ್‌

sprakashbjp@gmail.com

ಕಳೆದ ಇಪ್ಪತ್ತು ವರ್ಷದ ನಾನಾ ಭರ್ತ್ಸನೆಗಳು, ಆರೋಪಗಳು, ಅಪಪ್ರಚಾರಗಳು ಅತಿರೇಕವಾದ ‘ಸಾವಿನ ವ್ಯಾಪಾರಿ’ ಎಂಬ ಪಟ್ಟದ ಅವಮಾನಗಳನ್ನು ತಣ್ಣಗೆ ನುಂಗಿಕೊಂಡು ತಮ್ಮ ಗುರಿಯನ್ನು ಮುಟ್ಟಿದ್ದಾರೆ ಮೋದಿಯವರು.

ವಿಷಕಂಠನ ಹಾಗೆ ಈ ಎಲ್ಲ ಕಹಿಯನ್ನು ಒಡಲಲ್ಲಿ ಇಟ್ಟುಕೊಂಡು ಗುಜರಾತಿನ ಮುಖ್ಯ ಮಂತ್ರಿಯಾಗಿ ಮತ್ತು ದೇಶದ ಪ್ರಧಾನಿಯಾಗಿ ಕೇವಲ ತಮ್ಮ ಗಮನವನ್ನು ಜನಪರ ಕೆಲಸಕ್ಕೆ ಮೀಸಲಿಟ್ಟು ಯಾವುದೇ ರಾಜಿ ಇಲ್ಲದೆ ಬದ್ಧತೆಯಿಂದ ಕರ್ತವ್ಯನಿರತರಾಗಿ ದ್ದಾರೆ.

ಮೋದಿಯವರಿಗೆ ಎಸ್ ಐಟಿ ನೀಡಿದ್ದ ಕ್ಲೀನ್ ಚಿಟ್ ಪ್ರಶ್ನಿಸಿ ಝಕೀಯಾ ಜಾಫ್ರಿಯವರು ಸಲ್ಲಿಸಿದ್ದ ಅರ್ಜಿಯನ್ನು ಜೂನ್ ೨೪ರಂದು ವಜಾ ಮಾಡಿದ ಸುಪ್ರೀಂ ಕೋರ್ಟ್ ಈ ಅರ್ಜಿಯಲ್ಲಿ ಯಾವುದೇ ಹುರಳಿಲ್ಲ, ಕೇವಲ ವಿವಾದವನ್ನು ಜೀವಂತವಿಡಲು ಪ್ರಯತ್ನ ವಷ್ಟೆ ಎಂದು ಅಭಿಪ್ರಾಯಪಟ್ಟಿದೆ.

ಮೋದಿ ವಿರೋಧಿಗಳಿಗೆ ಈ ತೀರ್ಪು ಕಪಾಳ ಮೋಕ್ಷ ಎಂದರೆ ತಪ್ಪಾಗಲಾರದು. ಇಪ್ಪತ್ತು ವರ್ಷಗಳ ಮಾನಸಿಕ ಕಿರುಕುಳಕ್ಕೆ ಈ ತೀರ್ಪು ತೆರೆ ಎಳೆದಿದೆ. ಆರ್.ಕೆ. ರಾಘವನ್ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ 2002ರ ಗುಜರಾತ್ ಕೋಮು ಗಲಭೆಯ ತನಿಖೆ ಮಾಡಲು ವಿಶೇಷ ತನಿಖಾ ತಂಡವನ್ನು ನೇಮಕ ಮಾಡುತ್ತದೆ. ಅದು ಹತ್ತು ವರ್ಷಗಳ ಕಾಲ ತನಿಖೆ ನಡೆಸಿತು. ಸ್ವತಃ ಮೋದಿಯವರನ್ನು ಒಂಬತ್ತು ಗಂಟೆಗಳ ಕಾಲ ತನಿಖೆಗೊಳಪಡಿಸಿತ್ತು. ಎಸ್‌ಐಟಿ ಮುಖ್ಯಸ್ಥ ರಾಘವನ್ ಹೇಳುತ್ತಾರೆ; ‘ಅಂದು ಮುಖ್ಯಮಂತ್ರಿಯಾಗಿದ್ದ ಮೋದಿಯವರು ಎಸ್‌ಐಟಿ ಸಮನ್ಸ್‌ಗೆ ಸ್ಪಂದಿಸಿ ಕಚೇರಿಗೆ ಬಂದು ಒಂದು ಟೀಯನ್ನೂ ಕುಡಿಯದೆ ನೂರಕ್ಕೂ ಹೆಚ್ಚು ಪ್ರಶ್ನೆಗಳಿಗೆ ಸಂಯಮದಿಂದ ಉತ್ತರಿಸಿ ದರು’ ಎಂದು.

ಪ್ರಾಯಶಃ ಕಳೆದ 70ವರ್ಷದಲ್ಲಿ ಮೋದಿಯವರು ಅನುಭವಿಸಿದ ಮಾನಸಿಕ ಯಾತನೆಯನ್ನು ಬೇರೆ ಯಾರಾದರು ಅನುಭವಿಸಿದ್ದರೆ ಖಿನ್ನತೆಗೆ ಜಾರಿರುತ್ತಿದ್ದರು ಅಥವಾ ಮಾನಸಿಕವಾಗಿ ಕುಸಿದು ರಾಜಕೀಯದಿಂದಲೇ ನಿವೃತ್ತಿ ಪಡೆದಿದ್ದರೂ ಆಶ್ಚರ್ಯವಿಲ್ಲ. ಆದರೆ ಮೋದಿ ಯವರು ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ಒಬ್ಬ ಅಸಮಾನ್ಯ ವ್ಯಕ್ತಿತ್ವವನ್ನು ಹೊಂದಿದ್ದವರು. ಹೀಗಾಗಿ ತಮ್ಮ ಮೇಲೆ ನಡೆಯುತ್ತಿದ್ದ
ವಾಗ್ದಾಳಿ, ಅವಾಚ್ಯ ಶಬ್ದಗಳ ನಿಂದನೆ ಸಹಿಸಿಯೂ ಹೇಗಾದರು ಮಾಡಿ ಅವರನ್ನು ಜೈಲಿಗೆ ಕಳುಹಿಸಬೇಕು ಎಂದು ಪಣ ತೊಟ್ಟಿದ್ದವರನ್ನು ನಿರಾಶೆ ಮಾಡಲು ಸಾಧ್ಯವಾಗಿದೆ.

ಗುಜರಾತ್ ಚುನಾವಣೆಯ ಪ್ರಚಾರದ ವೇಳೆ ಸೋನಿಯಾ ಗಾಂಧಿಯವರು, ಮೋದಿಯವರನ್ನು ಸಾವಿನ ವ್ಯಾಪಾರಿ ಎಂದು ಟೀಕಿಸಿದಾಗ ಮೋದಿಯವರು ತಮ್ಮ ಸಹನೆಯನ್ನು ಕಳೆದುಕೊಂಡು ಸೋನಿಯಾ ಮೂಲವನ್ನು ಕೆದುಕಿ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾ ದರು. ಅಂದಿನ ಚುನಾವಣಾ ಆಯೋಗದ ಮುಖ್ಯಸ್ಥ ಲಿಂಗ್ಡೊ ಅವರ ಪಕ್ಷಪಾತ ನಿಲುವನ್ನು ಟೀಕಿಸಿದಾಗಲೂ ಮೋದಿ ವಿರೋಧಿಗಳು ಸಂವಿಧಾನದ ಪಾಠ ಹೇಳಿದರು. ಆದರೆ ಅದೇ ಜನ ಇಂದು ತಮ್ಮ ಇಚ್ಛೆಗೆ ವಿರುದ್ಧವಾಗಿ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದಾಗ ಕಟು ಟೀಕೆ ಮಾಡುತ್ತಿರುವುದು ಇವರ ಎಡಬಿಡಂಗಿ ವರ್ತನೆಗೆ ಸಾಕ್ಷಿಯಾಗಿದೆ.

ಮೋದಿಯವರ ಕಡು ವಿರೋಧಿ ಪತ್ರಕರ್ತೆ ರಾಣಾ ಅಯ್ಯೂಬ್ ಅವರು ‘ಸಬ್ ಬಿಕೆ ಹುವೇ ಹೈ’ ಎಂದು ಟ್ವೀಟ್ ಮಾಡುತ್ತಾರೆ. ಉದಾರ ವಾದಿಗಳು ಎಂದು ಹಣೆಪಟ್ಟಿ ಇರುವುದರಿಂದ ಈ ಅತಿರೇಕವು ಅವರ ದೃಷ್ಟಿಯಲ್ಲಿ ನ್ಯಾಯ ಸಮ್ಮತ. ಗುಜರಾತ್ ಗಲಭೆಗೆ ಕಾರಣರು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿಯವರಿಗೆ ಮಸಿ ಬಳಿಯುವುದರಲ್ಲಿಯೂ ಈ ಜನರು ಹೇಸಲಿಲ್ಲ ಮತ್ತು ವ್ಯವಸ್ಥಿತ ಅಪಪ್ರಚಾರದ ಫಲವಾಗಿ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ
ವೀಸಾ ನೀಡುವುದಿಲ್ಲ ಎಂದು ಘೋಷಿಸಿದ್ದವು.

ಇದರಿಂದೇನು ಮೋದಿಯವರು ವಿಚಲಿತರಾಗಲಿಲ್ಲ. ‘ವೈಬ್ರೆಂಟ್ ಗುಜರಾತ್’ ಹೆಸರಲ್ಲಿ ಬಂಡವಾಳ ಹೂಡಿಕೆ ಸಮಾವೇಶವನ್ನು
ಆರಂಭಿಸಿ ಕಿಂದರಜೋಗಿಯ ತರಹ ದೇಶ ವಿದೇಶಗಳ ಉದ್ಯಮಗಳ ಮುಖ್ಯಸ್ಥರೇ ಗುಜರಾತಿಗೆ ಬರುವ ಹಾಗೆ ಮಾಡಿದರು. 1984 ರಲ್ಲಿ ಇಂದಿರಾಗಾಂಧಿಯವರ ಹತ್ಯೆಯಾದಾಗ ದೆಹಲಿ ಮತ್ತು ಉತ್ತರಭಾರತದ ಹಲವು ಭಾಗದಲ್ಲಿ ಸಿಖ್ಖರ ನರಮೇಧವನ್ನೇ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದರು.

೩ ಸಾವಿರಕ್ಕೂ ಹೆಚ್ಚು ಸಿಖ್ಖರನ್ನು ಅಮಾನುಷವಾಗಿ ಹತ್ಯೆ ಮಾಡಲಾಯಿತು. ಈ ಘೋರ ಹತ್ಯಾಕಾಂಡವನ್ನು ಅಂದಿನ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರು ಸಮರ್ಥಿಸಿಕೊಂಡು ‘ಒಂದು ದೊಡ್ಡ ಮರ ಬಿದ್ದಾಗ ಅದರ ಸುತ್ತಮುತ್ತಲ ಭೂಮಿ ಅಲುಗಾಡುವುದು ಸಹಜ’ ಎಂಬ ಆಘಾತಕಾರಿ ಹೇಳಿಕೆ ನೀಡಿದ್ದರು. ಆದರೆ ಕಾಂಗ್ರೆಸ್ ಪೋಷಿತ ಬುದ್ಧಿಜೀವಿಗಳ ಕಣ್ಣಿಗೆ ರಾಜೀವ್ ಗಾಂಧಿ ನರಹಂತಕರಾಗಿ
ಕಾಣುವುದೇ ಇಲ್ಲ. ಪ್ರಾಯಶಃ ಮೋದಿಯವರ ವಿರುದ್ಧ ಬಳಸಿರುವ ಅತ್ಯಂತ ಕೆಟ್ಟ ಬಯ್ಗಳಗಳು ಬೇರಾವ ದೇಶದ, ಇನ್ಯಾವ ರಾಜಕಾರಣಿಯ ವಿರುದ್ಧವೂ ಬಳಕೆಯಾಗಿಲ್ಲ.

ಪ್ರಿಯಾಂಕ ವಾಧ್ರಾ, ಮೋದಿಯವರನ್ನು‘ದುರ್ಯೊಧನ’ ಎನ್ನುತ್ತಾರೆ, ರಾಬ್ಡಿದೇವಿಯವರು ‘ಚರಂಡಿಯಲ್ಲಿನ ಹುಳ’ ಎನ್ನುತ್ತಾರೆ.
ಮತ್ತೊಬ್ಬ ಕಾಂಗ್ರೆಸ್ ನಾಯಕ ಅವರ ಗಾಣಿಗ ಸಮುದಾಯವನ್ನು ಮುಂದಿಟ್ಟು ಜರಿಯುತ್ತಾರೆ, ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಕಣ್ಣಿಗೆ ‘ನಾಯಿ ಮಧ್ಯದ ದೊಡ್ಡಣ್ಣ ನಾಗಿ’ ಕಾಣುತ್ತಾರೆ. ಜೈರಾಂ ರಮೇಶ್ ಅವರಿಗೆ ಭಸ್ಮಾಸುರ’ ರಾಗುತ್ತಾರೆ. ಸಲ್ಮಾನ್ ಖರ್ಶಿದ್ ‘ಕೋತಿ’ ಎಂದು ಮತ್ತೊಮ್ಮೆ ‘ಕಪ್ಪೆ’ ಎಂದು ಕರೆಯುತ್ತಾರೆ.

ಎನ್‌ಸಿಪಿ ನಾಯಕ ಶರದ್ ಪವಾರ್ ಸಹಿತ ಅನೇಕ ಕಾಂಗ್ರೆಸ್ ಪುಡಿ ನಾಯಕರು ಅವರನ್ನು ‘ಹಿಟ್ಲರ್, ಮುಸಲೊನಿ, ಗಢಾಫಿ’ ಎಂದು
ಜರಿಯುತ್ತಾರೆ. ಗುಜರಾತ್ ಕಾಂಗ್ರೆಸ್ ನಾಯಕ ಅರ್ಜುನ್ ವಾಡಿಯಾ ಮೋದಿಯವರನ್ನು ‘ಮಾನಸಿಕ ಅಸ್ವಸ್ಥ’ ಎನ್ನುತ್ತಾರೆ. ಹಿಂಬಾಗಿಲ ಪ್ರವೇಶದಲ್ಲಿ ನಿಷ್ಣಾತರಾಗಿರುವ ಬಿ.ಕೆ. ಹರಿಪ್ರಸಾದ್, ಮೋದಿಯವರ ತಂದೆತಾಯಿಯವರ ಬಗ್ಗೆಯೂ ಕೆಟ್ಟದಾಗಿ ನಿಂದಿಸುತ್ತಾರೆ. ಈ ಘಟನೆ ನಡೆದು ಹತ್ತು ವರ್ಷದ ತರುವಾಯ ಹರಿಪ್ರಸಾದ್, ರಾಜ್ಯಸಭೆಯಿಂದ ನಿವೃತ್ತಿಯಾದ ದಿನ ಸಂಸತ್ತಿನಲ್ಲಿ ಅವರನ್ನು ಅಭಿನಂದಿ
ಸುವ ವೇಳೆ ‘ಬೀಕೆ ಬೀಕೆ’ ಎಂದು ವ್ಯಂಗ್ಯ ಮಾಡಿ ಹರಿ ಪ್ರಸಾದವರ ಮುಖಕ್ಕೆ ಮಂಗಳಾರತಿ ಮಾಡುತ್ತಾರೆ.

ಸಿದ್ದರಾಮಯ್ಯನವರು ಮೋದಿಯವರನ್ನು ‘ನರಹಂತಕ’ ಎಂದಲ್ಲದೇ, ಏಕವಚನದಲ್ಲಿ ಬಾಯಿಗೆ ಬಂದ ಹಾಗೆ ಟೀಕಿಸಿ 2018 ವಿಧಾನ ಸಭಾ ಚುನಾವಣೆಯನ್ನೇ ಸೋತರು. ದಿಗ್ವಿಜಯ ಸಿಂಗ್ ಪಾಲಿಗೆ ಮೋದಿಯವರು ‘ರಾವಣ’ ನಾಗುತ್ತಾರೆ. ಕಾಂಗ್ರೆಸ್ ಮುಖಂಡರು ‘ನಿಮ್ಮ ತಂದೆ ಯಾರು ಪ್ರಶ್ನಿಸಿ’ ಮೋದಿಯವರ ವೃದ್ಧ ತಾಯಿಯವರನ್ನೂ ನಿಂದಿಸುವ ಕೆಳಮಟ್ಟಕ್ಕೂ ಇಳಿಯುತ್ತಾರೆ. ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್, ಮೋದಿಯವರನ್ನು ಟೀ ಮಾರುವುದಕ್ಕೆ ಲಾಯಖ್ ವ್ಯಕ್ತಿ ಎಂದಾಗ 2014 ಚುನಾವಣೆಯಲ್ಲಿ ‘ಛಾಯ್ ಪೇ ಚರ್ಚಾ’ ಆರಂಭಿಸಿ ಅದೇ ಛಾಯ್ ವಾಲಾ ಕಾಂಗ್ರೆಸ್ ಪಾರ್ಟಿಯನ್ನು ಚುನಾವಣೆಯಲ್ಲಿ ಮಣ್ಣುಮುಕ್ಕಿಸುತ್ತಾರೆ.

2019ರ ಲೋಕಸಭಾ ಚುನಾವಣೆಯ ವೇಳೆ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಯವರನ್ನು ‘ಚೌಕೀದಾರ್ ಚೋರ್ ಹೈ’ ಎಂದು ಕರೆದಾಗ ಅದೇ ಚುನಾವಣಾ ಪ್ರಚಾರದ ವಿಚಾರವನ್ನಾಗಿ ಬಳಸಿ ‘ಮೈ ಭೀ ಚೌಕೀದಾರ್‘ ಎಂಬ ಅಭಿಯಾನ ಆರಂಭಿಸಿ ಅವರ ಬಯ್ಗಳ ಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು ಚುನಾವಣೆಯ ದಿಕ್ಕನ್ನೆ ಬದಲಿಸುವ ಚಾಣಾಕ್ಷ ನಡೆ ಮೋದಿಯವರು ತೋರುತ್ತಾರೆ. ಈ ಎಲ್ಲರೂ ಅತ್ಯಂತ ಕೆಟ್ಟ ಶಬ್ದಗಳನ್ನು ತಮ್ಮ ಬಗ್ಗೆ ಬಳಸುವವರ ಬಗ್ಗೆ ಮೋದಿಯವರು ಮಾತನಾಡುತ್ತ ಅವೆಲ್ಲವು ನನ್ನ ಪ್ರೀತಿಯ ನಿಘಂಟು ಎಂದು ವ್ಯಾಖ್ಯಾನಿಸುತ್ತಾರೆ.

ತಮ್ಮ ಜಕೀಯ ವಿರೋಧಿಗಳು ಬಯ್ದರು ಎಂದು ಅದಕ್ಕೆ ಸಿಡಿಮಿಡಿಗೊಳ್ಳುವುದಾಗಲಿ, ಮನಸ್ಸು ಮುದುಡಿಕೊಳ್ಳವುದಾಗಲಿ ಅಥವಾ ಪ್ರತಿಯಾಗಿ ಇನ್ನಷ್ಟು ಕಠಿಣವಾಗಿ ಪ್ರತಿಕ್ರಿಯೆ ಕೊಡುವುದನ್ನು ಅವರು ಇಲ್ಲಿಯತನಕ ಒಮ್ಮೆಯೂ ಮಾಡಿಲ್ಲ. ಬದಲಿಗೆ ಎಲ್ಲವನ್ನು ತಮ್ಮ ಒಡಲಿನಲ್ಲಿ ಅರಗಿಸಿಕೊಳ್ಳುವ ಗಟ್ಟಿತನ ತೋರಿರುವುದು ಅವರ ವ್ಯಕ್ತಿತ್ವದ ವಿಶೇಷ.

ಮೋದಿಯವರನ್ನು ಹೇಗಾದರು ಮಾಡಿ ಜೈಲಿಗೆ ಕಳುಹಿಸಬೇಕು ಎಂಬ ಯುಪಿಎ ನಾಯಕರ ಹಂಬಲ ಗುಜರಾತ್ ಪೊಲೀಸ್ ವ್ಯವಸ್ಥೆಯ ನ್ನೇ ನಾಶಮಾಡಲು ಹಿಂಜರಿಯಲಿಲ್ಲ. ತತ್ಪರಿಣಾಮ ಭಯೋತ್ಪಾದಕ ಐಎಸ್‌ಐ ಏಜೆಂಟ್ ಶೋರಾಬುದ್ದೀನ್ ಮತ್ತು ಭಯೋತ್ಪಾದಕಿ ಇಷ್ರತ್ ಜಹಾನ್ ಎನ್ ಕೌಂಟರ್ ಪ್ರಕರಣಗಳನ್ನು ಬಳಸಿಕೊಂಡು ಮೋದಿಯವರನ್ನು ಹಣಿಯಲು ವಿಫಲ ಯತ್ನ ನಡೆಸುತ್ತಾರೆ. ಎಲ್ಲ ಪ್ರಯತ್ನವು ನೆಲಕಚ್ಚಿದ ಮೇಲೆ ಅವರನ್ನು ಪ್ರಧಾನಿಯಾಗುವುದನ್ನು ತಪ್ಪಿಸಲು ಸ್ನೂಪಿಂಗ್ ಪ್ರಕರಣವನ್ನು ಹುಟ್ಟುಹಾಕಿ ತನಿಖೆ ಮಾಡಲು ಕಪಿಲ್ ಸಿಬಲ್ ಮುಂದಾಗುತ್ತಾರೆ.

ಇವರ ಈ ದುಷ್ಟ ಯೋಜನೆಗೆ ಸಹಕರಿಸಲು ದೇಶದ ಯಾವೊಬ್ಬ ನಿವೃತ್ತ ನ್ಯಾಯಾಧೀಶರು ಒಪ್ಪದೇ ಮುಖಭಂಗಿತರಾಗುತ್ತಾರೆ. ಮೋದಿ ಯವರನ್ನು ಆಗ್ಗಾಗೆ ಟೀಕಿಸಲು ಮತ್ತು ಅವರ ವಿರುದ್ಧ ಪ್ರಚಾರ ನಡೆಸಲು ನಿವೃತ್ತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ದಂಡನ್ನು ಸೃಷ್ಟಿ ಮಾಡಿದ್ದಾರೆ. ಇವರ ಕೆಲಸ ‘ದೇಶದಲ್ಲಿ ಅಸಹಿಷ್ಣುಹಿತೆ ಹೆಚ್ಚಾಗಿದೆ’ ಎಂದು ಒಂದು ನೂರು ಜನ ಬಹಿರಂಗ ಪತ್ರ ಬರೆಯುವುದು.
ಅದನ್ನು ಮಾಧ್ಯಮ ಮತ್ತು ಸಾಮಾಜಿಕ ತಾಣದಲ್ಲಿ ಹರಿ ಬಿಡುವುದು. ಹೀಗೆ ನಾನಾ ವಿಷಯಗಳನ್ನು ಮುಂದಿಟ್ಟುಕೊಂಡು ಆಗಾಗ್ಗೆ ಪತ್ರ ಬರೆಯುವ ಚಟ ಇವರಿಗೆ. ಇವರಲ್ಲಿ ಬಹುತೇಕರು ಕಾಂಗ್ರೆಸ್ ಸರಕಾರದ ಫಲಾನುಭಾವಿಗಳು. ಇಲ್ಲವೇ ಮೋದಿ ಸರಕಾರದಲ್ಲಿ ನಿವೃತ್ತಿ
ನಂತರ ಮತ್ತೆ ಅಽಕಾರ ಗಿಟ್ಟಿಸಲು ವಿಫಲರಾದವರು ಇರುವುದು ಗಮನಾರ್ಹ.