Friday, 9th December 2022

ಮೋದಿ ಹುಟ್ಟುಹಬ್ಬಕ್ಕೆ ಸೇವಾ ಪಾಕ್ಷಿಕ: ರಮಾನಂದ ಯಾದವ್

ರಾಯಚೂರು: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂಗವಾಗಿ ಅವರ ಕರೆಯ ಮೇರೆಗೆ ಪಕ್ಷದ ವಿವಿಧ ವಿಭಾಗಗಳಿಂದ ಸೆ.೧೭ ರಿಂದ ಆ.೨ ರವರೆಗೆ ಸೇವಾ ಪಾಕ್ಷಿಕವನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಮಾ ನಂದ ಯಾದವ್ ಹೇಳಿದರು.

ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತ ನಾಡಿ, ಪಕ್ಷದ ವೈದ್ಯಕೀಯ ಪ್ರಕೋಷ್ಠದಿಂದ ಆರೋಗ್ಯ ತಪಾಸಣೆ ಶಿಬಿರ, ಸೆ.೨೦ರಂದು ಬಿಜೆಪಿ ಮೋರ್ಚಾ ದಿಂದ ಮೋದಿ ಜೀವನ ಚರಿತ್ರೆ ಪ್ರದರ್ಶನ, ಸೆ.೨೨ ಹಾಗೂ ೨೩ ರಂದು ನಗರದ ನಾಲ್ಕು ಕಡೆ ರಕ್ತದಾನ ಶಿಬಿರ, ಒಬಿಸಿ ಘಟಕದಿಂದ ಅರಳಿಮರ ನೆಡುವ ಕಾರ್ಯಕ್ರಮ, ರೈತ ಮೋರ್ಚಾದಿಂದ ಕೆರೆಗಳನ್ನು ತುಂಬಿಸುವ ಕಾರ್ಯ, ಫಲಾನುಭವಿ ಪ್ರಕೋಷ್ಠದಿಂದ ಸಮಾಲೋಚನೆ ಸಭೆ, ಎಸ್.ಟಿ. ಮೋರ್ಚಾದಿಂದ ಶಾಲಾಮಕ್ಕಳಿಗೆ ಬ್ಯಾಗ್ ವಿತರಣೆ, ಅದೇ ರೀತಿ ಕ್ಷಯರೋಗಿಗಳನ್ನು ದತ್ತು ಪಡೆದು ಅವರ ಗುಣಮುಖರಾಗುವವರೆಗೂ ಅವರ ಆರೈಕೆ ಉಪಚಾರ ಮಾಡುವುದು.

ಯುವ ಮೋರ್ಚಾದಿಂದ ಸ್ವಚ್ಛತಾ ಕಾರ್ಯ, ಆ. ೨ ರಂದು ಖಾದಿ ಉತ್ಪನ್ನಗಳ ಖರೀದಿ ಜಾಗೃತಿ ಇದರ ಮಧ್ಯೆ ದಿ. ೨೫ ರಂದು ದೀನ ದಯಾಳ್ ಉಪಾಧ್ಯಯ ಅವರ ಜನ್ಮದಿನಾಚರಣೆ ಆಚರಿಸಲಾಗುವುದೆಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ್ ರೆಡ್ಡಿ.ಜಿ, ಜಿಲ್ಲಾ ವಕ್ತಾರ ಕೊಟ್ರೇಶಪ್ಪ ಕೋರಿ, ಜಿಲ್ಲಾ ಮಾಧ್ಯಮ ಸಂಚಾಲಕ ರಾಮಚಂದ್ರ ಕಡಗೋಲು, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ವಿ.ಪಿ.ರೆಡ್ಡಿ ಇದ್ದರು.